Monday, October 30, 2023

ಜಾತಿಗಣತಿ ಸಮೀಕ್ಷಾ ವರದಿ: ರಾಜಕೀಯ ಸಂಚಲನ

ಈ ತಿಂಗಳ ಆರಂಭದಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಹಾರದಲ್ಲಿ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿದಾಗಿನಿಂದ ಈ ವಿಷಯಕ್ಕೆ ಸಂಬಂಧಪಟ್ಟಂತೆ ಕೆಲವು ಸ್ವತಂತ್ರ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.  ಈ ವಿಷಯಕ್ಕೆ ಸಂಬಂಧಪಟ್ಟಂತೆ ಲೇಖನಗಳು ಪ್ರಕಟವಾಗಿವೆ. ಪ್ರಜಾವಾಣಿಯಲ್ಲಿ "ಶ್ರೇಷ್ಠತೆಯ ವ್ಯಸನಕ್ಕೆ ಜಾತಿಗಣನೆ ಮದ್ದು" ಎಂಬ ಲೇಖನ ಪ್ರಕಟವಾಗಿತ್ತು. ಶ್ರೇಷ್ಠತೆಯ ವ್ಯಸನಕ್ಕೆ ಜಾತಿ "ಗಣನೆ" ಹೇಗೆ ಮದ್ದಾಗುತ್ತದೋ ಗೊತ್ತಿಲ್ಲ. ಆದರೆ ಅದರಲ್ಲಿ ಲೇಖಕರು ಬರೆದಿರುವಂತೆ "ಅಲಕ್ಷಿತ ಸಮುದಾಯಗಳ ಜನರನ್ನು ಕಾಲಾಳುಗಳನ್ನಾಗಿ ಬಳಸಿಕೊಂಡು ರಾಜಕಾರಣ ಮಾಡುತ್ತಿರುವ ಪ್ರಬಲ ಜಾತಿಗಳ ಹಿತಾಸಕ್ತಿಗೆ ಹೊಡೆತ ಬೀಳಲಿದೆ" ಎಂಬುದನ್ನು ಒಪ್ಪಬಹುದು. 

ಬಿಹಾರದ ಜಾತಿಗಣತಿ ವರದಿಯಲ್ಲಿ OBC ವರ್ಗಕ್ಕೆ ಸೇರಿದವರ ಸಂಖ್ಯೆ ಶೇ ೬೩ ರಷ್ಟು ಎಂದು ತಿಳಿದು ಬಂದಿದೆ. ಈ ವರ್ಗದ ಮೀಸಲಾತಿ ಶೇ ೨೭ ಇರುವುದರಿಂದ ಈಗಿರುವ ಮೀಸಲಾತಿಯಲ್ಲಿ ಪರಿಮಾಣದ ನಿರ್ಧಾರ ಅಸಮಂಜಸವಾಗಿ ಇದೆ ಎಂಬ  ಭಾವನೆ ಬರುವುದು ಸಹಜ. ಅಲ್ಲದೆ ಜಾತಿಗಣತಿಯ ಜೊತೆಗೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಜಾತಿವಾರು ಅಂಕಿ ಅಂಶದ ವರದಿಯ ಬಿಡುಗಡೆಗೆ ಒತ್ತಾಯ ಕೇಳಿ ಬರುತ್ತಿದೆ. ಅದಕ್ಕೆ ವಿರೋಧ ಪಕ್ಷಗಳ ಬೆಂಬಲವೂ ವ್ಯಾಪಕವಾಗಿ ವ್ಯಕ್ತವಾಗುತ್ತಲಿದೆ. ಈ ಬಗೆಯ ವಿಸ್ತೃತ ಸಮೀಕ್ಷೆಗಳಿಗೆ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಯಿಂದ ಪ್ರೋತ್ಸಾಹ ಕಂಡು ಬಂದಿಲ್ಲ. ಪ್ರಜಾವಾಣಿಯ ಲೇಖನದಲ್ಲಿ "ಪ್ರಧಾನಿಯವರು ಜಾತಿಗಣತಿ ವರದಿ ಬಿಡುಗಡೆಯಾದ ಬಳಿಕ, ಅದನ್ನು ಉಲ್ಲೇಖಿಸದೆ, ವಿರೋಧ ಪಕ್ಷಗಳು ದೇಶವನ್ನು ಜಾತಿ ಆಧಾರದ ಮೇಲೆ ವಿಭಜಿಸಿವೆ" ಎಂದು  ಹೇಳಿರುವ ಬಗ್ಗೆ ಪ್ರಸ್ತಾಪ ಇದೆ. ಈ ಹಿಂದೆ ಬಿಹಾರ ಸರ್ಕಾರದ  ಜಾತಿಗಣತಿ ಕುರಿತು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಲ್ಲಿ ಅಫಿಡವಿಟ್ ಸಲ್ಲಿಸಿದ್ದನ್ನೂ ನೆನಪಿಸಿಕೊಳ್ಳಬಹುದು.  

ಕೆಲವು ವರ್ಷಗಳ ಹಿಂದೆ How the BJP Wins ಎಂಬ ಪುಸ್ತಕ ಬಂದಿತ್ತು. ಅದರಲ್ಲಿ Social Engineering ಎಂಬ ಒಂದು ಅಧ್ಯಾಯದಲ್ಲಿ ೨೦೧೭ ರ ಉತ್ತರ ಪ್ರದೇಶ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಅಳವಡಿಸಿಕೊಂಡಿದ್ದ ತಂತ್ರಗಾರಿಕೆಯ ಬಗ್ಗೆ ಬರೆದಿದ್ದರು. ಜಾತಿಯಾಧಾರಿತ ರಾಜಕೀಯದ ವಿವರಣೆ ಅಂಕಿ ಅಂಶಗಳೊಂದಿಗೆ ವಿವರಿಸಿದ್ದರು. ಬಿಜೆಪಿಯ ಭೂಪಿಂದರ್ ಯಾದವ್ ಅವರು ಈ ಪುಸ್ತಕದ ಲೇಖಕರಿಗೆ ವಿವರಿಸಿದಂತೆ ಅಮಿತ್ ಷಾ ರೂಪಿಸಿದ '೬೦ ಪರ್ಸೆಂಟ್' ಫಾರ್ಮುಲವು ಪಕ್ಷದ ಯಶಸ್ಸಿಗೆ ಕಾರಣವಾಗಿತ್ತು. ೨೦ ಪರ್ಸೆಂಟ್ ಮುಸ್ಲಿಮರು, ೧೦ ಪರ್ಸೆಂಟ್ ಯಾದವರು ಮತ್ತು ೧೦ ಪರ್ಸೆಂಟ್ ಜಾಟವ(ದಲಿತ)ರು ಈ ಮೂರು ಗುಂಪಿನವರನ್ನು ಹೊರಗಿಟ್ಟು ಉಳಿದ ೬೦ ಪರ್ಸೆಂಟ್ ಜನರನ್ನು ತಮ್ಮ ಮತ ಬೇಟೆಗೆ ಗುರಿಯಾಗಿಸುವುದು ಅವರ ತಂತ್ರವಾಗಿತ್ತು. 

ಸುನಿಲ್ ಬನ್ಸಲ್ ೨೦೧೪ ರಲ್ಲಿ ಉತ್ತರ ಪ್ರದೇಶ ಬಿಜೆಪಿಯ  ಸಾಂಸ್ಥಿಕ ಪ್ರಧಾನ ಕಾಯದರ್ಶಿಯಾಗಿ ಆಯೋಜನೆಗೊಂಡಾಗ ಇಡೀ ಬಿಜೆಪಿ ರಾಜ್ಯ ಘಟಕದ ಸರ್ವೇಕ್ಷಣೆ ಮಾಡಿಸುತ್ತಾರೆ. ಅದರಲ್ಲಿ ತಿಳಿದು ಬರುವುದೇನೆಂದರೆ ಇಡೀ ರಾಜ್ಯದಲ್ಲಿ ಎಲ್ಲ ಮಟ್ಟದಲ್ಲಿ ಪಕ್ಷದ ಹುದ್ದೆಗಳಲ್ಲಿದ್ದವರಲ್ಲಿ OBC ವರ್ಗದವರು ಶೇ ೭ ಮತ್ತು ದಲಿತರು ಶೇ ೩ ಮಾತ್ರ. ಅಲ್ಲಿಂದ ಆರಂಭಿಸಿ ಮುಂದಿನ ಎರಡು ವರ್ಷಗಳಲ್ಲಿ ಈ ಎರಡು ವರ್ಗಗಳ ಪ್ರಾತಿನಿಧ್ಯವನ್ನು ಶೇ ೩೦ಕ್ಕೆ ಏರಿಸಲಾಗುತ್ತದೆ. ರಾಜ್ಯದಲ್ಲಿ ಪಕ್ಷದ ಅಧ್ಯಕ್ಷ ಹುದ್ದೆಗೂ OBC ಗುಂಪಿಗೆ ಸೇರಿದ ಕೇಶವ ಪ್ರಸಾದ್ ಮೌರ್ಯ ಅವರನ್ನು ಆಯ್ಕೆ ಮಾಡಲಾಗುತ್ತದೆ. 

ಮುಂದೆ ೨೦೧೭ರ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ  ಪಕ್ಷ ಪ್ರಚಂಡ ಬಹುಮತದಿಂದ ಆರಿಸಿ ಬರುತ್ತದೆ. ಪ್ರಬಲ ಜಾತಿಗಳ ಪಕ್ಷವೆಂದು ಗುರುತಿಸಿಕೊಂಡಿದ್ದರೂ ಅಲಕ್ಷಿತ ಸಮುದಾಯಗಳ ಜನರ ಮತಗಳನ್ನು ಸೆಳೆಯಲು ಪಕ್ಷಕ್ಕೆ ನೆರವಾಗಿದ್ದು ಜಾತಿ ಸಮೀಕರಣವೇ ಆಗಿತ್ತು.  

ಬಿಹಾರದ ಜಾತಿ ಗಣತಿ ವರದಿಯು "ಅಂಚಿನಲ್ಲಿರುವ ಅತಿ ಸಣ್ಣ ಸಮೂಹಗಳ ಮೇಲೆ ಬೆಳಕು ಚೆಲ್ಲುವ" ಜೊತೆಗೆ "ಮೀಸಲಾತಿಯಲ್ಲಿ ಶೇ ೫೦ ರ ಮೇಲ್ಮಿತಿ" ಯಂತಹ ವಿಚಾರಗಳನ್ನು ಚರ್ಚೆಗೆ ತಂದಿದೆ. ಹಿಂದಿನ ಚುನಾವಣೆಗಳಲ್ಲಿ OBC ಮತಗಳನ್ನು  ಗಣನೀಯವಾಗಿ ಗಳಿಸಿರುವ ಬಿಜೆಪಿ ಗೆ ಜಾತಿ ಗಣತಿಯ ಕುರಿತು ಏಕೆ ಭಯ ಎಂಬ ಪ್ರಶ್ನೆಗಳು ಏಳುತ್ತಿವೆ.  ಜಾತಿ ಗಣತಿಯ ವರದಿಯು ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಲು ಕಾರಣಗಳಿವೆ.  ಮುಖ್ಯವಾಗಿ, ಸಾಮಾಜಿಕ ನ್ಯಾಯ ದ ದೃಷ್ಟಿಯಿಂದ ಅಪ್ರಿಯ ಸತ್ಯಗಳನ್ನು ಎಲ್ಲ ವರ್ಗಗಳವರೂ ಮನಗಾಣಲೇಬೇಕಾದ ಕಾಲ ಬಂದಿದೆ. ಅದರಲ್ಲೇ ಎಲ್ಲರ ಹಿತವೂ ಇದೆ. ಇದನ್ನು ಕೋಮುವಾದದ ವಿರುದ್ಧ ವಿರೋಧ ಪಕ್ಷದವರು ಹುಟ್ಟು ಹಾಕುತ್ತಿರುವ ಜಾತಿವಾದ ಎಂದು ಕಾಣುವುದು ಸಿನಿಕತನವಾಗುತ್ತದೆ. ಇವೆರಡೂ ವಾದಿಗಳಿಗೂ ಅವರ ನಂಬಿಕೆ ಅಭಿಪ್ರಾಯಗಳಿಗೆ ಅವರದೇ ಸಮರ್ಥನೆಗಳಿರಬಹುದು. ನಮ್ಮದೇ ಸಿದ್ಧಾಂತಗಳಿಗೆ ಗಟ್ಟಿಯಾಗಿ ಜೋತು ಬೀಳುವುದರಿಂದ ಯಾವ ಸಮಸ್ಯೆಗೂ ಪರಿಹಾರ ಸಿಗಲಾರದು. ಹಾಗೆಯೇ ಯಾವುದೇ ಐತಿಹಾಸಿಕ ಸಮಸ್ಯೆಗೆ ಇಂದಿನ ತಲೆಮಾರಿನವರನ್ನು ಸಂಪೂರ್ಣ ಹೊಣೆಗಾರರನ್ನಾಗಿಸಿ ಪರಿಹಾರ ಹುಡುಕುವುದೂ ಅರ್ಥಹೀನ. ಇಲ್ಲೇ ನಮಗೆ ಪ್ರೌಢ ಮತ್ತು ವಿವೇಕವಂತ ರಾಜಕೀಯ ನಾಯಕರ ಅಗತ್ಯ ಅತ್ಯಂತ ಜರೂರಿನ ವಿಚಾರವಾಗಿರುವುದು.

ಕರ್ನಾಟಕದಲ್ಲೂ ಜಾತಿ ಗಣತಿಯ ವರದಿಯನ್ನು ಬಿಡುಗಡೆ ಮಾಡಲೆಂಬ ಅಭಿಪ್ರಾಯ, ಹಾಗೆಯೇ  ಇಂತಹ ಗಣತಿಗೆ ಸ್ವಾಗತ ಸೂಚಿಸುವ ಲೇಖನಗಳು ಪತ್ರಿಕೆಗಳಲ್ಲಿ ಬರುತ್ತಿವೆ. ಶಿವಸುಂದರ್ ಅವರು ವಾರ್ತಾ ಭಾರತಿಯಲ್ಲಿ ಭಾಗ ೧ಭಾಗ ೨, ಮತ್ತು ಭಾಗ ೩ ವಿಸ್ತೃತವಾಗಿ ಬರೆದಿದ್ದಾರೆ.

Monday, October 16, 2023

ಇಸ್ರೇಲ್‌-ಪ್ಯಾಲೆಸ್ಟೈನ್: ನಿಲ್ಲದ ಹಿಂಸೆ

ಕಳೆದ ವಾರವಿಡೀ ಸುದ್ದಿಯಲ್ಲಿದ್ದು ಇನ್ನೂ ಸಹ ಯಾವುದೇ ತಾರ್ಕಿಕ ಅಂತ್ಯದ ಸಾಧ್ಯತೆ ಕಾಣಿಸುತ್ತಿಲ್ಲದ ಇಸ್ರೇಲ್‌-ಪ್ಯಾಲೆಸ್ಟೈನ್ ಬಿಕ್ಕಟ್ಟು ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದೆ. ಸುಧೀಂದ್ರ ಬುಧ್ಯ ಅವರು ಪ್ರಜಾವಾಣಿಯಲ್ಲಿ ಬರೆದ “ಇಸ್ರೇಲ್ ಯುದ್ಧ ಅನಿರೀಕ್ಷಿತವೇ?” ಎಂಬ ಲೇಖನವು ಸಧ್ಯದ ಈ ಘರ್ಷಣೆಯ ಹಿನ್ನೆಲೆಯ ಹಲವು ವಿವರಗಳನ್ನು ಒದಗಿಸುತ್ತದೆ.

ಜಗತ್ತಿನ ಹಲವು ರಾಜಕೀಯ ಸಮಸ್ಯೆಗಳಂತೆಯೇ ಇಸ್ರೇಲ್‌-ಪ್ಯಾಲೆಸ್ಟೈನ್ ಸಮಸ್ಯೆಗೂ ಒಂದು ಐತಿಹಾಸಿಕ ಹಿನ್ನೆಲೆಯಿದ್ದು, ಎಲ್ಲ ಸಮಸ್ಯೆಗಳಿಗಿರುವಂತೇ ಈ ಸಮಸ್ಯೆಗೂ ಹಲವು ಮುಖಗಳಿವೆ. ಇದನ್ನು ಕೇವಲ ಒಂದು ಭಯೋತ್ಪಾದನೆಯ ಘಟನೆಯಾಗಿ ಮತ್ತದರ ವಿರುದ್ಧದ ಸಮರವಾಗಿ ನೋಡಲು ಸಾಧ್ಯವಿಲ್ಲ.

ಬಹಳಷ್ಟು ಸಮಯ ನಾವು ಒಂದು ಗುಂಪಿನ ದೃಷ್ಟಿಕೋನದಿಂದಲೇ ಐತಿಹಾಸಿಕವಾದ, ದಶಕಗಳ, ಶತಮಾನಗಳ ಕಾಲದಿಂದ ಪರಿಹಾರವಾಗದೇ ಉಳಿದಿರುವ ಸಮಸ್ಯೆಗಳನ್ನು ನೋಡುತ್ತಿರುತ್ತೇವೆ. ಮತ್ತು ಶಕ್ತಿವಂತ ಗುಂಪುಗಳ ಹಿಡಿತದಲ್ಲಿರುವ ಮಾಧ್ಯಮಗಳು ಸಹ ಒಂದು ವಸ್ತುನಿಷ್ಟ ಅಭಿಪ್ರಾಯವನ್ನು ರೂಪಿಸಿಕೊಳ್ಳಲು ನೆರವಾಗುವುದಿಲ್ಲ. ಹೀಗಾಗೆ ಸಮಸ್ಯೆಯ ವಿವಿಧ ಮುಖಗಳನ್ನು ಗ್ರಹಿಸಲು ನಮ್ಮ ಆಕರಗಳೂ ಭಿನ್ನವಾಗಿರಬೇಕಾಗುತ್ತದೆ. ಕೇವಲ ಪತ್ರಾಗಾರಗಳೂ, ಪತ್ರಿಕಾವರದಿಗಳೂ ಸಹ ಸಮಸ್ಯೆಯ ಎಲ್ಲ ಮಗ್ಗಲುಗಳನ್ನು ಎಲ್ಲ ಕಾಲದಲ್ಲೂ ನೀಡಲು ಸಾಧ್ಯವಾಗದೆ ಇರಬಹುದು. ಬಹಳಷ್ಟು ಸಮಯ ಸಾಹಿತ್ಯ ಸಹ ನಮ್ಮ ಸುತ್ತಲ ಪ್ರಪಂಚವನ್ನು ನೋಡಲು ಮತ್ತು ಗ್ರಹಿಸಲು ಅತ್ಯಂತ ಸಹಕಾರಿ.

ಇಸ್ರೇಲ್ ವಿಷಯದಲ್ಲೂ ಅಷ್ಟೇ. ವಿಲಿಯಂ ಶೈರರ್ ಬರೆದ “ದಿ ರೈಸ್ ಅಂಡ್ ಫಾಲ್ ಆಫ್ ದಿ ಥರ್ಡ್ ರೈಕ್” ಕೃತಿಯು ಜರ್ಮನ್ ನಾಝಿಗಳಿಂದ ಯಹೂದಿಗಳು ಅನುಭವಿಸುವ ಸಂಕಟವನ್ನು ತೆರೆದಿಡುತ್ತದೆ. ಹಾಗೆಯೇ “ಸೋಫಿ’ಸ್ ಚಾಯ್ಸ್”ನಂತಹ ಜನಪ್ರಿಯ ಕಾದಂಬರಿಗಳು ಸಹ. ಇಂತಹ ಯಹೂದಿಗಳಿಗೆ ತಮ್ಮದೇ ಆದ ಒಂದು ತಾಯ್ನಾಡನ್ನು ಸೃಷ್ಟಿಸಿ ಕೊಡಲು ವಿಶ್ವದ ಶಕ್ತಿಯುತ ರಾಷ್ಟ್ರಗಳು ಪ್ರಯತ್ನಿಸಿದ್ದು ಆ ನಂತರದಲ್ಲಿ ಇಸ್ರೇಲಿಗರು ಅಲ್ಲಿನ ಮೂಲ ನಿವಾಸಿಗಳಾಗಿದ್ದ ಪ್ಯಾಲೆಸ್ಟೈನಿಯರನ್ನು ಮೂಲೆಗುಂಪಾಗಿಸಿ ತಮ್ಮ ನೆಲೆಗಟ್ಟನ್ನು ವಿಸ್ತರಿಸಿದ್ದು ಸಾಹಿತ್ಯ ಕೃತಿಗಳಲ್ಲಿ ಓದುವಾಗ ಹಲವು ಮಾನವಿಕ ಅಂಶಗಳನ್ನು ತೆರೆದಿಡುತ್ತದೆ. ತಿರಸ್ಕಾರ, ಅಪಮಾನ, ಪೂರ್ವಾಗ್ರಹಗಳನ್ನು ಖುದ್ದಾಗೆ ಅನುಭವಿಸಿದ್ದ ಇಸ್ರೇಲಿಯರು ನಂತರದಲ್ಲಿ ಪ್ಯಾಲೆಸ್ಟೈನಿಯರ ಕುರಿತು ಅಷ್ಟೇ ಅಸಹಿಷ್ಣುಗಳಾಗುವುದನ್ನು ಇತಿಹಾಸದ ವ್ಯಂಗ್ಯ ಎನ್ನಬೇಕೋ ವಿಪರ್ಯಾಸ ಎನ್ನಬೇಕೋ.

ಇಸ್ರೇಲ್ ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗೆ ಪಶ್ಚಿಮ ಏಶಿಯಾದಲ್ಲಿ ಘಟಿಸಿರುವ ವಿದ್ಯಮಾನಗಳ ಹಿನ್ನೆಲೆಯಲ್ಲೂ ಹಲವು ಕೃತಿಗಳು ಬಂದಿವೆ. “ಮೈನರ್ ಡೀಟೇಲ್” ಎಂಬ ಕಾದಂಬರಿಯು 1948 ರ ಯುದ್ಧದಲ್ಲಿ ಸುಮಾರು ಏಳು ಲಕ್ಷ ಪ್ಯಾಲೆಸ್ಟೈನಿಯನ್ನರು ತಮ್ಮ ಮನೆಗಳನ್ನು ತೊರೆಯಬೇಕಾದ ಸಂದರ್ಭದ ಹಿನ್ನೆಲೆ ಹೊಂದಿದೆ. ಹಾಗೆ್ಯೇ, ಅರಬ್ ರಾಷ್ಟ್ರೀಯತೆ, ಇಸ್ಲಾಮಿಕ್ ಭಯೋತ್ಪಾದನೆ, ಇಸ್ರೇಲ್-ಪ್ಯಾಲೆಸ್ಟೈನ್ ಮಧ್ಯದ ದ್ವೇಷ ಉಲ್ಬಣಿಸಲು ಮೂಲವಾದ 1967ರ ಯುದ್ಧದ ಬಗ್ಗೆ “ದಿ ಸಿಕ್ಸ್ ಡೇ ವಾರ್” ಎಂಬ ಕಾದಂಬರಿಯಲ್ಲಿ ಓದಬಹುದು.

ಮತ್ತೊಂದು ಮುಖ್ಯವಾಗಿ ಗಮನಿಸಬೇಕಾದ ವಿಚಾರವೆಂದರೆ, ವಿಷಮ ಪರಿಸ್ಥಿತಿಗಳು ತಲೆದೋರಿದಾಗ ಸಮಾಧಾನದ ಪರಿಹಾರಗಳಿಗೆ ಪ್ರಯತ್ನಿಸದೆ ಜನರಲ್ಲಿ ಇನ್ನಷ್ಟು ದ್ವೇಷವನ್ನು ಬಿತ್ತಿ ಹಿಂಸೆಗೆ ಪ್ರಚೋದಿಸುವ ನಾಯಕರುಗಳು. ಇಂತಹವರು ಸೃಷ್ಟಿಸುವ ಅವಾಂತರಗಳಿಗೆ ಇತಿಹಾಸವೇ ಸಾಕ್ಷಿ. ತಮ್ಮ ಅಧಿಕಾರದ ಆಕಾಂಕ್ಷೆಗಾಗಿ ಸಾರ್ವಜನಿಕ ಸಂಸ್ಥೆಗಳನ್ನು ಹಾಳುಗೆಡವಿ, ಬಹುತ್ವ, ಸಾರ್ವಜನಿಕ ಸಂವಾದ, ಆಳವಾದ ವಿಚಾರ, ಇತರರ ಹಕ್ಕುಗಳ ಗೌರವ ಎಲ್ಲವನ್ನೂ ಬದಿಗೊತ್ತಿ ಸಮಸ್ಯೆಗಳನ್ನು ಉಲ್ಬಣಿಸುವ ಇಂತಹವರ ಬಗ್ಗೆ ಎಚ್ಚರ ಅಗತ್ಯ. ಈಗ ಇಸ್ರೇಲ್ನಲ್ಲಿ ಸಹ. ಇದಕ್ಕಾಗಿ ವಿಶ್ವದ ಪ್ರಭಾವಿ ದೇಶಗಳ ಮಧ್ಯಪ್ರವೇಶ ಅಗತ್ಯವಾಗುತ್ತದೆ. ಇಂತಹ ಮಧ್ಯಪ್ರವೇಶ ಸಹ ಅಗತ್ಯ ಸಂದರ್ಭಗಳಲ್ಲಿ, ಅಗತ್ಯವಿದ್ದಷ್ಟು ಮಾತ್ರ ಇರಬೇಕಾಗುತ್ತದೆ.

Monday, September 18, 2023

ಸ್ಟ್ರೇನ್ಜ್ ಬರ್ಡನ್ಸ್ - ರಾಹುಲ್ ಗಾಂಧಿಯವರ ಪರಿಸ್ಥಿತಿ ಮತ್ತು ಅವರ ರಾಜಕೀಯ

ರಾಹುಲ್ ಗಾಂಧಿ ಕುರಿತಾದ 'Strange Burdens' (ಸ್ಟ್ರೇನ್ಜ್ ಬರ್ಡನ್ಸ್)  ಕೃತಿಯ ಬೆಂಗಳೂರು ಬಿಡುಗಡೆ ಕಾರ್ಯಕ್ರಮ ನಿನ್ನೆ ನಡೆಯಿತು. ಈ ಕಾರ್ಯಕ್ರಮದ ವರದಿ ಇಂದಿನ ಪ್ರಜಾವಾಣಿಯಲ್ಲಿದೆ. 

ಈ ಕಾರ್ಯಕ್ರಮಕ್ಕೆ ನಾನೂ ಹೋಗಿದ್ದೆ. ಮೊದಲಿಗೆ ಲೇಖಕ ಶ್ರೀನಿವಾಸರಾಜು ಅವರು ಪುಸ್ತಕದ ಕುರಿತು ತಮ್ಮ ಸಿದ್ಧಪಡಿಸಿದ್ದ ಟಿಪ್ಪಣಿಯನ್ನು ಓದಿದರು.  ನಂತರ ಸಭೆಯ ವೇದಿಕೆಯಲ್ಲಿದ್ದ ಅತಿಥಿಗಳು ಪುಸ್ತಕದ ಬಗ್ಗೆ ಮಾತನಾಡಿದರು. ಚಿಂತಕ ಪ್ರೊ ಜಿ ಎನ್ ದೇವಿ, ಮನೋಶಾಸ್ತ್ರದ ಇತಿಹಾಸ ತಜ್ಞ ಸಂಜೀವ್ ಜೈನ್, ನಟಿ ಪದ್ಮಾವತಿ ರಾವ್ ಎಲ್ಲರೂ ಪುಸ್ತಕದಲ್ಲಿ ರಾಹುಲ್ ಗಾಂಧಿಯ ಬಗೆಗೆ ಪ್ರಸ್ತಾಪವಾಗಿರುವ ಗುಣಾತ್ಮಕ ಅಂಶಗಳ ಬಗೆಗೇ ಹೆಚ್ಚು ಮಾತನಾಡಿದರು.  ಲೇಖಕರೇ ಪುಸ್ತಕದ ಪರಿಚಯದ ಅಧ್ಯಾಯದಲ್ಲಿ ಹೇಳಿರುವಂತೆ ಇದು ಮೂಲಭೂತವಾಗಿ ರಾಹುಲ್ ಗಾಂಧಿಯವರ ಸಧ್ಯದ ಪರಿಸ್ಥಿತಿ ಮತ್ತು ರಾಜಕೀಯವಾಗಿ ಅವರ ಪ್ರಸ್ತುತತೆಯ ಕುರಿತ ಒಂದು ಶೋಧನೆ. ಒಂದು ಒಳನೋಟ.

ಆಂಗ್ಲಪ್ರೇಮಿ ಉದಾರವಾದಿಗಳು ಕಾಂಗ್ರೆಸ್ಸಿನ ಹೊಸ ಸಮರ್ಥಕರಾಗಿದ್ದು, ಇವರಾಗಲಿ ರಾಹುಲ್ ಗಾಂಧಿಯವರಾಗಲಿ ಸಾಂಸ್ಕೃತಿಕ ರಾಷ್ಟ್ರವಾದವನ್ನು ಅರ್ಥ ಮಾಡಿಕೊಳ್ಳಲು ಸೋಲುವುದರ ಬಗ್ಗೆ, ಹಾಗೂ ಜನರ ಭಾಷೆಯಲ್ಲಿ ಸಂವಾದಿಸದೆ ಪಶ್ಚಿಮದ ಪ್ರಜಾಪ್ರಭುತ್ವದ ಭಾಷೆಯನ್ನು ಬಳಸುವುದು ಭಾರತಕ್ಕೆ ಹೊಂದಾಣಿಕೆಯಾಗದಿರುವ ಬಗ್ಗೆ ಪ್ರಸ್ತಾಪವಿದೆ.

ರಾಜಕೀಯದಲ್ಲಿ ಆದರ್ಶವಾದ ಮತ್ತು ಸರಳತನ ಸಾಕಾಗುವುದಿಲ್ಲವೆನ್ನುವುದನ್ನು ಹೀಗೆ ವಿವರಿಸುತ್ತಾರೆ - "ವಿನಯವಂತ, ಕರುಣಾಳು, ಉದಾರಿ, ಕ್ಷಮಾಶೀಲ, ವಿಧೇಯ, ಅಪ್ಪಟ, ಪ್ರೀತಿವಂತ, ಕಾಳಜಿವಂತ, ನೈತಿಕವಾದ ವ್ಯಕ್ತಿಯಾಗಿ ಕಾಣಿಸಿಕೊಳ್ಳಲು ರಾಹುಲ್ ಬಯಸುತ್ತಾರೆ. ಬಹುಶಃ ಅವರು ಈ ಎಲ್ಲವೂ ಆಗಿರಬಹುದು, ಆದರೆ ಈ ಯಾವ ಗುಣವೂ ಅಧಿಕಾರ ಮತ್ತು ರಾಜಕೀಯದಲ್ಲಿ ಅನ್ವಯ ಆಗುವಂತಹವಲ್ಲ"

ದೇವಿಯವರು ಮಾತನಾಡುತ್ತಾ "ರಾಹುಲ್ ಅವರಲ್ಲಿನ ಮಾನವ ಪ್ರೀತಿ, ಬಡವರ ಬಗೆಗಿನ ಕಾಳಜಿ, ಕೋಮುವಾದಕ್ಕೆ ವಿರುದ್ಧವಾದ ಜಾತ್ಯತೀತ ನಿಲುವು, ಧರ್ಮಗಳ ಮಧ್ಯೆ ಸಾಮರಸ್ಯ ಮೂಡಿಸುವ ಪ್ರಯತ್ನ, ಅಧ್ಯಾತ್ಮ, ಮಾನವೀಯತೆ, ಭಕ್ತಿಯ ನಿಲುವು, ಧಾರ್ಮಿಕ ಆಚರಣೆ" ಇವೆಲ್ಲವನ್ನೂ ಪುಸ್ತಕದಲ್ಲಿ ಚಿತ್ರಿಸಲಾಗಿದೆಯೆಂದು ಹೇಳಿದರು. 

ಪುಸ್ತಕದಲ್ಲಿ ರಾಹುಲ್ ಗಾಂಧಿಯ ರಾಜಕೀಯ ಮತ್ತು ಇಂದಿನ ಭಾರತದ ಸನ್ನಿವೇಶದಲ್ಲಿ ಅಂತಹ ರಾಜಕೀಯದ ಅತಾರ್ಕಿಕತೆ ಮತ್ತು ವಿಫಲತೆಯನ್ನು ಲೇಖಕರು ವಿವರವಾಗಿ ಚಿತ್ರಿಸಿರುವಂತೆ ನನಗೆ ಅನಿಸಿತ್ತಾದ್ದರಿಂದ ರಾಹುಲ್ ರ ಒಳ್ಳೆಯತನ ಮತ್ತು ವ್ಯಕ್ತಿಗತ ಗುಣಗಳನ್ನೇ ಕುರಿತಾದ ಭಾಷಣಗಳು ಸ್ವಲ್ಪ ಆಶ್ಚರ್ಯ ಉಂಟು ಮಾಡಿದವು. 

'ಪರಿಚಯ' ಅಧ್ಯಾಯದ ಕಡೆಯಲ್ಲಿ ಲೇಖಕರು ಕೇವಿಯಟ್ಟೊಂದನ್ನು ದಾಖಲಿಸುತ್ತಾರೆ-  “ಪುಸ್ತಕದ ಪಾತ್ರಧಾರಿಯಾಗಿ ರಾಹುಲ್ ಗಾಂಧಿಯನ್ನು ಆರಿಸಿಕೊಳ್ಳುತ್ತಿರುವುದು  ಒಂದು ರಿಸ್ಕ್. ಆದರೆ ಬರಹಗಾರರು ಮತ್ತು ಲೇಖಕರು ಅಂತಹ ರಿಸ್ಕ್ ತೆಗೆದುಕೊಳ್ಳಬೇಕು. ಕೃತಿಯ ಪ್ರಧಾನ ಪಾತ್ರಧಾರಿ ರಾಹುಲ್ ಗಾಂಧಿಯವರು ವರ್ತಮಾನದ ಮತ್ತು ಸಕ್ರಿಯವಾದ ರಾಜಕಾರಣಿಯಾಗಿದ್ದಾರೆ  ಮತ್ತು ಇನ್ನೂ ಸಂಪೂರ್ಣವಾಗಿ ಸಿದ್ಧವಾಗಿರದ ಶಿಲ್ಪವಾಗಿದ್ದು ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತಾರೆ.  ಅವರು  ಸಕ್ರಿಯವಾಗಿರುವ ಇಂದಿನ ಕಾಲಘಟ್ಟವೂ ನಿಮಿಷ ನಿಮಿಷವೂ ಬಣ್ಣ ಬದಲಾಯಿಸುವಂತಹದ್ದಾಗಿರುವುದರಿಂದ ಒಂದು ನಿರ್ದಿಷ್ಟವಾದ ವ್ಯಾಖ್ಯಾನ ಅಥವಾ ಟಿಪ್ಪಣಿಯನ್ನು ಮುಂದಿಡುವುದು ಕಷ್ಟ. ಹೀಗಿದ್ದೂ ಲೇಖಕನಾದವನು ತನ್ನ ವರ್ತಮಾನ ಕಾಲಕ್ಕೆ ಸ್ಪಂದಿಸುವುದನ್ನು ಮತ್ತು ತನ್ನ ಅನುಭವದ ಮೂಸೆಯಲ್ಲಿ ತನಗೆ ಕಾಣಿಸುವುದನ್ನು ನಮೂದಿಸುತ್ತ ಹೋಗಬೇಕೆನ್ನುವುದನ್ನು ನಿರೀಕ್ಷಿಸಲಾಗುತ್ತದೆ. ಲೇಖಕ ಭವಿಷ್ಯಕಾರನಲ್ಲವಾದ್ದರಿಂದ ರಾಹುಲ್ ಗಾಂಧಿಯ ಬಗ್ಗೆ ಅಧಿಕೃತ ಭವಿಷ್ಯವನ್ನೇನೂ ನುಡಿಯಲಾಗುವುದಿಲ್ಲ. ಮುಂದೆ ಬರಬಹುದಾದ ಕೃತಿಯೊಂದರ ಭಾಗವಾಗಿ ಅಥವಾ ಸಿದ್ಧತೆಯಾಗಿ ಇದನ್ನು ಪರಿಗಣಿಸಬಹುದು.” 

ಇಂದಿನ ಭಾರತದ ರಾಜಕೀಯ ಸಂದರ್ಭದಲ್ಲಿ ಓದಬೇಕಾದ ಪುಸ್ತಕ.  

Monday, September 11, 2023

ಉದ್ದೀಪನ ಮದ್ದು ಸೇವನೆ - ಕ್ರೀಡಾ ಸ್ಫೂರ್ತಿಗೆ ಅಪಚಾರ

ಏಷ್ಯನ್ ಕ್ರೀಡಾಕೂಟಕ್ಕೆ ಆಯ್ಕೆಯಾದ ಈಜುಪಟು ಉದ್ದೀಪನ ಮದ್ದು ಸೇವನೆ ಮಾಡಿ ಸಿಕ್ಕಿ ಬಿದ್ದಿರುವ ವರದಿ "ಡೋಪಿಂಗ್ ಪಿಡುಗಿಗೆ ಮದ್ದು ಅರೆಯುವ ಕಾಲ" ಎಂಬ ಹೆಸರಿನಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದು ಓದಿದೆ. ಈಚಿನ ವರ್ಷಗಳಲ್ಲಿ ಕ್ರೀಡಾ ಲೋಕದಲ್ಲಿ ತಲೆದೋರಿರುವ ಅಸಮ್ಮತ ಬೆಳವಣಿಗೆಯಿದು. 

೧೯೮೮ರಲ್ಲಿ ಸಿಯೋಲ್ ಒಲಂಪಿಕ್ಸ್ ನಲ್ಲಿ ಅಮೇರಿಕಾದ  ಕಾರ್ಲ್ ಲೂಯಿಸ್ ನನ್ನ ಸೋಲಿಸಿ ಕೆನಡಾ ದ ಬೆನ್ ಜಾನ್ಸನ್ ಜಯಶಾಲಿಯಾಗಿದ್ದು, ಮತ್ತು ಮರುದಿನವೇ ಆತ ಉದ್ದೀಪನ ಮದ್ದು ಸೇವಿಸಿದ್ದನೆಂದು ಅವನನ್ನು ಅನರ್ಹಗೊಳಿಸಿದ್ದು ದೊಡ್ಡ  ಸುದ್ದಿಯಾಗಿತ್ತು. ೨೦೦೪ ರ ಅಥೆನ್ಸ್ ಒಲಂಪಿಕ್ಸ್ ಸಮಯದಲ್ಲಿ ಮದ್ದು ಸೇವನೆಗಾಗಿ  ಸುದ್ದಿಯಾಗಿದ್ದು ಅಮೇರಿಕಾದ ಅಥ್ಲೆಟ್ ಮಾರಿಯನ್ ಜೋನ್ಸ್. ಈಕೆ ೨೦೦೦ ದ ಸಿಡ್ನಿ ಒಲಂಪಿಕ್ಸ್ ನಲ್ಲಿ ಅಥ್ಲೆಟಿಕ್ಸ್ ನಲ್ಲಿ ಐದು ಪದಕ ಪಡೆದಿದ್ದವಳು. ನಂತರದಲ್ಲಿ ಈಕೆ ಮದ್ದು ಸೇವನೆಯ ತಪ್ಪೊಪ್ಪಿಕೊಂಡು ಅವಮಾನ ಅನುಭವಿಸಬೇಕಾಯಿತು.  

ಹೀಗೆ ಕ್ರೀಡೆಗಳಲ್ಲಿ ಜಯಿಸಲು ವಾಮಮಾರ್ಗ ಹಿಡಿಯುವ ಪ್ರವೃತ್ತಿ ಮುಂದುವರಿದುಕೊಂಡೇ ಬಂದಿದೆ. ವಿಶ್ವ ಉದ್ದೀಪನ ಸೇವನೆ ತಡೆ ಘಟಕ (ವಾಡಾ) ಪ್ರಕಟಿಸುವ ಉದ್ದೀಪನ ಮದ್ದು ಸೇವನೆ ಪ್ರಕರಣಗಳು ಹೆಚ್ಚು ವರದಿಯಾಗುವ  ದೇಶಗಳ ಪಟ್ಟಿಯಲ್ಲಿ ರಷ್ಯಾದ ನಂತರ ಭಾರತವೇ ಇರುವುದು ನಿಜಕ್ಕೂ ನಾಚಿಕೆಗೇಡು. ಕ್ರೀಡಾಸ್ಫೂರ್ತಿಯಿಲ್ಲದೇ ಗಳಿಸುವ ಜಯಕ್ಕೆ ಯಾವ ಬೆಲೆಯೂ ಇಲ್ಲ ಎನ್ನುವುದನ್ನು ಎಲ್ಲ ಕ್ರೀಡಾಪಟುಗಳೂ ಚಿಕ್ಕಂದಿನಲ್ಲೇ ಅರಿಯಬೇಕು.  ಜೀವನದ ಒಳ್ಳೆಯ ಮೌಲ್ಯಗಳನ್ನು ಕಲಿಯಲು ಕ್ರೀಡೆ ಒಂದು ಮಾರ್ಗ. ಅಲ್ಲಿಯೂ ಕಳ್ಳದಾರಿ ಹಿಡಿಯುವುದು ಆತ್ಮವಂಚನೆಯೇ ಸರಿ. ಕೆಲವೊಮ್ಮೆ ಅರಿವಿನ ಕೊರತೆಯಿಂದ ಅಥವಾ ಕಣ್ತಪ್ಪಿನಿಂದ ನಿಷೇಧಿತ ಔಷಧೀಯ ಸೇವನೆ ಸಂಭವಿಸಬಹುದಾದರೂ ಅಂತಹ ಸಾಧ್ಯತೆ ಅಪರೂಪ ಎಂದೇ ಹೇಳಬೇಕು.

Monday, September 04, 2023

ವಿದ್ಯಾರ್ಥಿ ಆತ್ಮಹತ್ಯೆಗಳು

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರಗಳನ್ನು ನಡೆಸುವ ರಾಜಸ್ಥಾನದ ಕೋಟಾ ಎಂಬ ನಗರದಲ್ಲಿ ಪದೇ ಪದೇ ವಿದ್ಯಾರ್ಥಿಗಳ ಆತ್ಮಹತ್ಯೆ ವರದಿಗಳು ಬರುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿ. ಇದೇ ವಾರ "ಕೋಟಾ: ಕೊನೆಗಾಣದ ಆತ್ಮಹತ್ಯೆ" ಎಂಬ ಹೆಸರಿನಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ ಕೋಟಾ ನಗರದಲ್ಲಿ ನಡೆದಿರುವ ಆತ್ಮಹತ್ಯೆಗಳಿಗೆ ಸಂಬಂಧಿಸಿದ ಹಲವು ಅಂಕಿ-ಅಂಶ ಮತ್ತು ಮಾಹಿತಿಯನ್ನು ಒದಗಿಸುತ್ತದೆ. ಮುಖ್ಯವಾಗಿ ಯೋಚಿಸಬೇಕಾಗಿರುವುದು ವಿದ್ಯಾರ್ಥಿಗಳನ್ನು ಇಂತಹ ತೀವ್ರ ತೀರ್ಮಾನಕ್ಕೆ ದೂಡಲು ಹಿನ್ನೆಲೆಯಲ್ಲಿ ಇರುವ ವಿಚಾರಗಳ ಬಗ್ಗೆ. 

ಶೈಕ್ಷಣಿಕ ಒತ್ತಡ ದಂತೆಯೇ ಮಾನಸಿಕ ದಣಿವು, ಸಂಬಂಧಗಳಲ್ಲಿರುವ ಸಮಸ್ಯೆ, ಕುಟುಂಬದಲ್ಲಿ ಮಾನಸಿಕ ಸಮಸ್ಯೆಗಳ ಇತಿಹಾಸ ಇರುವುದು ಇವೆಲ್ಲಾ ಸಹ ಆತ್ಮಹತ್ಯೆಯಂತಹ ಕಠೋರ ನಿರ್ಧಾರಕ್ಕೆ ಕಾರಣವಾಗಿರಬಹುದು. ವಿಜ್ಞಾನಕ್ಕೆ ಸಂಬಂಧಿಸದ ಶೈಕ್ಷಣಿಕ ಕೋರ್ಸುಗಳಲ್ಲಿ ಉದ್ಯೋಗದ ಅವಕಾಶಗಳು ಕಡಿಮೆ ಎಂಬ ಕಾರಣಕ್ಕೆ ಪೋಷಕರ ಒತ್ತಡವಿಲ್ಲದಿದ್ದರೂ ಕೆಲವೊಮ್ಮೆ ವಿದ್ಯಾರ್ಥಿಗಳೇ ತಮಗೆ ಕಲಿಯುವಿಕೆ ಕಷ್ಟವಾದರೂ ಸೇರಿಕೊಂಡು ಮುಂದೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗುವುದೂ ಇದೆ. ಫಲಿತಾಂಶವೊಂದೇ ಗುರಿಯಾಗಿರುವ ತರಬೇತಿ ಕೇಂದ್ರಗಳು ಅತ್ಯಂತ ಕಠಿಣ ತರಬೇತಿ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುವುದರಿಂದ ಕೆಲ ವಿದ್ಯಾರ್ಥಿಗಳು ಹೊಂದಿಕೊಳ್ಳಲೂ ಆಗದ, ಹೊರಬರಲೂ ಆಗದ ಸ್ಥಿತಿಗೆ ಸಿಲುಕಿಕೊಳ್ಳುತ್ತಾರೆ. ಆಗ ಅವರ ಪೋಷಕರು ಅವರ  ಸಹಾಯಕ್ಕೆ ನಿಲ್ಲಬೇಕಾದದ್ದು ಅತ್ಯಗತ್ಯ . ನಿಜ, ಆದರೆ ಕೆಲವೊಮ್ಮೆ ಪೋಷಕರನ್ನು ನಿರಾಸೆಗೊಳಿಸಬಾರದೆಂಬ ಹಿಂಜರಿಕೆಯೋ , ಅಥವಾ ಇನ್ನಷ್ಟು ಪ್ರಯತ್ನದಿಂದ ಮುಂದಿನ ಸಲ ಯಶಸ್ವಿಯಾಗುವೆನೆಂಬ ಆಶಾಭಾವನೆಯಿಂದಲೋ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯಕ್ಕೆ ಮೀರಿದ ಚಕ್ರವ್ಯೂಹದಲ್ಲಿ ಸಿಲುಕುತ್ತಾರೆ. ಪರೀಕ್ಷೆಯಲ್ಲಿನ ಅಂಕಗಳಷ್ಟೇ ಸಾಮರ್ಥ್ಯದ ಮಾನದಂಡವಾದಾಗ  ಅಭ್ಯರ್ಥಿಯಲ್ಲಿರಬಹುದಾದ ಇತರ ಸಾಮರ್ಥ್ಯಗಳೆಲ್ಲ ಗೌಣವಾಗಿ ವಿಫಲತೆಯ ಹಣೆಪಟ್ಟಿ ಅಂಟಿಕೊಳ್ಳುತ್ತದೆ. ಭಾವನೆಗಳು ತೀವ್ರವಾಗಿರುವ ಹದಿಹರಯದ ವಯಸ್ಸೂ ತಕ್ಷಣದ ತೀರ್ಮಾನಗಳಿಗೆ ಅನಾಹುತಗಳಿಗೆ ಕಾರಣವಾಗುತ್ತದೆ. 

ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿದ್ಯಾರ್ಥಿಗಳನ್ನು ತಯಾರು ಮಾಡುವ ತರಬೇತಿ ಸಂಸ್ಥೆಗಳ ಬಗ್ಗೆ "ಖೋಟಾ ಕಾರ್ಖಾನೆಗಳಿಗೆ ಬಲಿಯಾಗುತ್ತಿರುವ ವಿದ್ಯಾರ್ಥಿಗಳು" ಎಂಬ ಹೆಸರಿನ ಲೇಖನವನ್ನು ವಾರ್ತಾಭಾರತಿ ಯಲ್ಲಿ ನೋಡಿದೆ. ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಜೀವನದ ಬಗ್ಗೆ, ಅನೇಕ ರೀತಿಯ ಉದ್ಯೋಗಗಳ ಬಗ್ಗೆ, ಪರಿಶ್ರಮ ಮತ್ತು ಸಾಧನೆಗಳ ಬಗ್ಗೆ, ಸೋಲು-ಗೆಲುವುಗಳ ಅನಿವಾರ್ಯತೆಯ ಬಗ್ಗೆ,  ಆರೋಗ್ಯಕರ ಹವ್ಯಾಸಗಳ ಬಗ್ಗೆ ಚಿಕ್ಕಂದಿನಿಂದಲೇ ಅರಿವು ಮೂಡಿಸುವುದು ಹೆಚ್ಚು ಪ್ರಯೋಜನವಾಗಬಹುದು. ಟ್ಯೂಷನ್ ಸೆಂಟರ್ ಗಳನ್ನೇ ಮುಚ್ಚಿಸಿಬಿಡಬೇಕು ಎನ್ನುವುದು 'ಎತ್ತು ಈಯಿತು ಎಂದರೆ ಕೊಟ್ಟಿಗೆಯಲ್ಲಿ ಕಟ್ಟು' ಎಂದಂತೆ ಆಗಬಹುದು. 

Monday, August 28, 2023

ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಲು ಅಸ್ತ್ರವಾಗುವುದೇ ಹೊಸ ಶಿಕ್ಷಣ ನೀತಿ

"ಚಂದ್ರಯಾನದ ಸಂಭ್ರಮದಲ್ಲಿ ಮುಳುಗಿದ್ದರೂ ನಮ್ಮ ಸುತ್ತಲಿನ ನೆಲದ ವಾಸ್ತವಗಳನ್ನು ಗಮನಿಸಿದಾಗ, ನಮ್ಮ ಸಮಾಜ ಈ ಹೊತ್ತಿನಲ್ಲೂ ವೈಜ್ಞಾನಿಕ ಚಿಂತನೆ ಮತ್ತು ವೈಚಾರಿಕ ಪ್ರಜ್ಞೆಯಿಂದ ಬಹುದೂರ ಇರುವುದು ಢಾಳಾಗಿ ಗೋಚರಿಸುತ್ತದೆ." ಪ್ರಜಾವಾಣಿಯಲ್ಲಿ 'ಶಿಕ್ಷಣ ನೀತಿ– ವೈಚಾರಿಕತೆಯೇ ಬುನಾದಿಯಾಗಲಿ' ಎಂಬ ಲೇಖನದಲ್ಲಿ  ಈ ಸಾಲುಗಳನ್ನು ಓದುವಾಗ ವಿಷಾದ, ನಿರಾಶೆ, ಹತಾಶೆ ಎಲ್ಲ ಏಕ ಕಾಲಕ್ಕೆ ಅವರಿಸಿದವು.  ಈ ಪುಟ್ಟ ಲೇಖನದಲ್ಲಿರುವ ತುರ್ತು ಸಂದೇಶ ಅಧಿಕಾರದಲ್ಲಿರುವವರಿಗೆ ತಲುಪಲಿ ಎಂದು ಆಶಿಸೋಣ. ನಮ್ಮ ಸಮಾಜದಲ್ಲಿರುವ ಅದೆಷ್ಟೋ ಅನಿಷ್ಟಗಳಿಗೆ ಮೂಲ ವೈಚಾರಿಕ-ವೈಜ್ಞಾನಿಕ ಚಿಂತನೆಯ ಕೊರತೆಯೇ ಆಗಿದೆ. 

"ವಿಜ್ಞಾನ ಜಗತ್ತು ತನ್ನ ಮೇರು ಶಿಖರವನ್ನು ತಲುಪಿರುವ ಹೊತ್ತಿನಲ್ಲಿ, ನಮ್ಮ ಶಾಲೆಯ ಅಂಗಳದಲ್ಲೇ ಯಾವುದೋ ಕಾಲದ ಮೌಡ್ಯ ಮತ್ತು ಅಂಧ ಅನುಸರಣೆಯ ಮಾದರಿಗಳನ್ನು ಅನುಸರಿಸುವ ಮೂಲಕ ಮಕ್ಕಳನ್ನು ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವದಿಂದ ವಂಚಿತರನ್ನಾಗಿ ಮಾಡುವ ಅಪಾಯ ನಮ್ಮೆದುರಿನಲ್ಲಿದೆ." ಇದನ್ನು ಓದುವಾಗ ಹತ್ತು ವರ್ಷಗಳ ಹಿಂದೆ ನಡೆದ ಘಟನೆಗಳು ನೆನಪಾದವು. 

ನರೇಂದ್ರ ಧಾಬೋಲ್ಕರ್ ಎಂಬ ಮೂಢನಂಬಿಕೆ ವಿರೋಧಿ ಕಾರ್ಯಕರ್ತರು ಮಹಾರಾಷ್ಟ್ರದಲ್ಲಿ ಹತ್ಯೆಗೀಡಾಗಿದ್ದರು.  ಅದಾಗಿ ನಾಲ್ಕೇ ದಿನಗಳಲ್ಲಿ ಮಹಾರಾಷ್ಟ್ರ ಸರ್ಕಾರವು "ಮೂಢನಂಬಿಕೆಗಳು ಹಾಗೂ ಬ್ಲ್ಯಾಕ್ ಮ್ಯಾಜಿಕ್ ನಿಷೇಧ" ಕ್ಕಾಗಿ ಸುಗ್ರೀವಾಜ್ಞೆಯೊಂದನ್ನು ಜಾರಿಗೊಳಿಸಿತ್ತು. ಆ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಸಹ 'ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಮಸೂದೆ' ಯೊಂದರ ಬಗ್ಗೆ ಯೋಚಿಸಿತ್ತು. ಮಸೂದೆಯ ಕರಡಿನ ಪ್ರತಿ ಪ್ರಕಟವಾಗುತ್ತಿದ್ದಂತೆ ಒಂದು ರಾಜಕೀಯ ಪಕ್ಷದಿಂದ ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ರಾಜಕಾರಣಿಗಳಲ್ಲಿ ಸಾಮಾನ್ಯ ಗುಣ ಎಂಬಂತೆ ತೋರುವ ಮೂಢನಂಬಿಕೆಗೆ ಹೊರತಾದವರಂತೆ ಕಂಡುಬರುತ್ತಿದ್ದ ಸಿದ್ದರಾಮಯ್ಯನವರಿಗೂ  ಮಸೂದೆಯನ್ನು ಕಾನೂನಾಗಿ ಪರಿವರ್ತಿಸಲು ಸಾಧ್ಯವಾಗಿರಲಿಲ್ಲ ಎಂದು ನನ್ನ ನೆನಪು. 

ಇದೀಗ ಮತ್ತೆ ಕರ್ನಾಟಕದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು ಕಾರ್ಯಕ್ರಮವೊಂದರಲ್ಲಿ 'ಮಕ್ಕಳು ವಿಜ್ಞಾನ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಬೆಳೆಯಬೇಕು' ಎಂದು ಹೇಳಿರುವುದು ಹೊಸದಾದ 'ರಾಜ್ಯ ಶಿಕ್ಷಣ ನೀತಿ'ಯೊಂದರ ಮೂಲಕ ಮೌಢ್ಯದ ವಿರುದ್ಧ ಒಂದಿಷ್ಟು ಹೋರಾಟವನ್ನು ಸಾಧ್ಯವಾಗಿಸಬಹುದೆಂಬ ಭರವಸೆಯನ್ನು  ಮೂಡಿಸುತ್ತದೆ. 

Monday, August 21, 2023

'ವೇದ ಸುಳ್ಳಾದರೂ...?'

'ಗಾದೆಗೆ ಬೇಕಲ್ಲವೇ ಕಾಲನ ತಗಾದೆ' ಎಂಬ ಹೆಸರಿನಲ್ಲಿ ಯೋಗಾನಂದ ಅವರು ಬರೆದ ಲೇಖನ ವಿಚಾರಕ್ಕೆ ಹಚ್ಚುವಂತಿದೆ. ಇದನ್ನು ಓದುವಾಗ ಕೆಲ ವಾರಗಳ ಹಿಂದೆ ವಾಣಿ ಪೆರಿಯೋಡಿಯವರು 'ಪುರುಷ ಪ್ರಧಾನ ವ್ಯವಸ್ಥೆಯ ಸಮರ್ಥನೆಯ ಗಾದೆಗಳ ಬಗ್ಗೆ' ಬರೆದಿದ್ದು ನೆನಪಾಯಿತು. 

ಯಾವುದೇ ಒಂದು ಭಾಷೆಯಾಗಲಿ ಅಥವಾ ಭಾಷೆಯಲ್ಲಿ ಇರುವ ಗಾದೆಗಳಾಗಲಿ ಬರೀ ಪದಗಳಲ್ಲ. ಅದಕ್ಕೊಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ ಇರುತ್ತದೆ. ಪ್ರತಿಯೊಬ್ಬರೂ  ಪದಗಳಿಂದಲೇ ಅವರವರ ಪ್ರಪಂಚವನ್ನು ಪರಿಭಾವಿಸುವುದರಿಂದ ಭಾಷೆಯ ಮತ್ತು ಅದರ ಸಾಧ್ಯತೆಗಳ ಬಗ್ಗೆ ಸೂಕ್ಷ್ಮವಾಗಿ ಯೋಚಿಸಬೇಕಾದ ಅಗತ್ಯ ಇದೆ. 

ಬಹಳ ವರ್ಷಗಳ ಹಿಂದೆ ಲಂಕೇಶ್ ಅವರು 'ಸಾಕ್ಷಿ' ಪತ್ರಿಕೆಯಲ್ಲಿ 'ಅಸ್ವಸ್ಥತೆ - ಸಾಹಿತ್ಯ' ಎಂಬ  ತಮ್ಮ ಲೇಖನದಲ್ಲಿ ಭಾಷೆಯ ಶಕ್ತಿಯ ಬಗ್ಗೆ ಬರೆಯುತ್ತ 'ಯಾವ ಭಾಷೆಯೂ ಬಾಗಿಲಿಗೆ ಹೊಡೆದ ಮೊಳೆಯಂತೆ ಸ್ಥಿರವಲ್ಲ' ಎಂದು ಬರೆದಿದ್ದರು. ಯಾವುದೇ ಭಾಷೆಗೆ ಭೂತದ ಆಧಾರವಿರುವಂತೇ ವರ್ತಮಾನದಲ್ಲಿ ಕಾವ್ಯದ ಮತ್ತು ಕ್ರಿಯಾತ್ಮಕ ಕೆಲಸಗಳ ಅಭಿಷೇಕವಾಗದಿದ್ದರೆ ಭಾಷೆ ಸಾಯುತ್ತದೆ ಎಂದೂ ಬರೆದಿದ್ದರು. 

ಯೋಗಾನಂದ ಅವರು ಬರೆದಿರುವಂತೆ ಗಾದೆಗಳನ್ನು 'ಆಧಾರಯುಕ್ತವೂ ಸಂಕ್ಷಿಪ್ತವೂ ಆದ  ವಿವೇಕದ ಗುಳಿಗೆಗಳು' ಎಂದು ಪರಿಗಣಿಸುತ್ತಲೇ ಕೆಲವು ಗಾದೆಗಳಲ್ಲಿ ಇರುವ ಸಮಸ್ಯಾತ್ಮಕ ಅಂಶಗಳ ಪರಿಷ್ಕರಣೆ ಅಗತ್ಯವಿದೆ.  ಅವರು ಹೇಳುವಂತೆ ಇಂದು ಬಳಕೆಯಲ್ಲಿಲ್ಲದ, ವಿನಾಕಾರಣ ಒಂದು ಜಾತಿ, ಧರ್ಮ, ಪಂಥ, ಪಂಗಡ, ವರ್ಗವನ್ನು ಕೀಳಾಗಿ ಕಾಣುವಂತಹ ಪದಗಳಿದ್ದರೆ ಅವನ್ನು ನಿಘಂಟಿನಿಂದ, ಗಾದೆಗಳಿಂದ ತೆಗೆಯುವ, ಮತ್ತು ಬಳಕೆಯಿಂದ ಕೈಬಿಡುವ  ಅಗತ್ಯ ಇದೆ. ಹಾಗೆಯೇ ವಾಣಿಯವರು ಬರೆದಿರುವಂತೆ ಪುರುಷ  ಪ್ರಾಧಾನ್ಯತೆಯ ಸಮರ್ಥನೆಯ ಗಾದೆಗಳೂ ಬಳಕೆಗೆ ಯೋಗ್ಯವಾದವಲ್ಲ ಎನ್ನುವುದನ್ನು ನೆನಪಿಡಬೇಕು.