Wednesday, December 26, 2012

ನನ್ನ ತೇಜಸ್ವಿ

ರಾಜೇಶ್ವರಿ ತೇಜಸ್ವಿಯವರು ಬರೆದಿರುವ "ನನ್ನ ತೇಜಸ್ವಿ" ಪುಸ್ತಕ ಓದಿ ಮುಗಿಸುವಾಗ ಕನ್ನಡದ ಹೆಸರಾಂತ ಬರಹಗಾರ ಪೂರ್ಣಚಂದ್ರ ತೇಜಸ್ವಿ(೧೯೩೮-೨೦೦೭) ಯವರ ಬದುಕು ವ್ಯಕ್ತಿತ್ವಗಳ ಒಂದು ಆತ್ಮೀಯ ಪರಿಚಯದ ಅನುಭವವಾಗುತ್ತದೆ. ತೇಜಸ್ವಿಯವರ ಬಗ್ಗೆ, ಅವರ ವಿಶಿಷ್ಟ ಸ್ವಭಾವದ ಬಗ್ಗೆ ಮೊದಲೇ ಸಾಕಷ್ಟು ಕೇಳಿರುವವರಿಗೂ ಈ ಪುಸ್ತಕ ಹಲವು ಹೊಸ ಮಾಹಿತಿ ಸಂಗತಿಗಳನ್ನು ಒದಗಿಸುತ್ತದೆ. ಮೈಸೂರು ಮಾನಸಗಂಗೋತ್ರಿಯಲ್ಲಿ ಸ್ನಾತಕೋತ್ತರ ತರಗತಿಯಲ್ಲಿ ಅವರ ಸಹ ಶಿಕ್ಷಣಾರ್ಥಿಯಾಗಿ, ಸ್ನೇಹಿತೆಯಾಗಿ, ನಂತರದಲ್ಲಿ ಅವರ ಮಡದಿಯಾಗಿ ಅವರೊಂದಿಗಿನ ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ಸಾಂಗತ್ಯದ ಅನುಭವವನ್ನು ರಾಜೇಶ್ವರಿಯವರು ಈ ಪುಸ್ತಕದ ಮೂಲಕ ಕನ್ನಡದ ಓದುಗರೊಂದಿಗೆ ಹಂಚಿಕೊಂಡಿರುವ ಬಗೆ ಅನನ್ಯ.

ನಾನು ಮೊದಲನೇ ಸಲ ತೇಜಸ್ವಿಯವರ ಬಗ್ಗೆ ಕೇಳಿದ್ದು ಎಂಬತ್ತರ ದಶಕದಲ್ಲಿ ಪ್ರಕಟವಾದ ಅವರ ಕಾದಂಬರಿ "ಕರ್ವಾಲೋ" ದ ಲೇಖಕರೆಂದು. ನನ್ನದೇ ಜಿಲ್ಲೆಯ ಮೂಡಿಗೆರೆ ಈ ಕೃತಿಯ ಕೇಂದ್ರಸ್ಥಳ. "ಕರ್ವಾಲೋ" ಬಹಳ ಇಷ್ಟವಾಗಿದ್ದು ತೇಜಸ್ವಿಯವರ ಅತ್ಯಂತ ಸ್ವಾರಸ್ಯಪೂರ್ಣ ಬರವಣಿಗೆಯ ಶೈಲಿಯಿಂದ. ಕಾದಂಬರಿಕಾರನೇ ನಿರೂಪಕನಾಗಿರುವ ಈ ಕಾದಂಬರಿಯ ಒಂದೊಂದು ಪಾತ್ರವೂ ನೆನಪಿನಲ್ಲುಳಿಯುವಂತಹವು. ಪ್ಯಾರ, ಮಂದಣ್ಣ, ಕರ್ವಾಲೋ, ಕರಿಯಪ್ಪ, ಯಂಗ್ಟ, ಇವರೆಲ್ಲ ಇಂದಿಗೂ ನೆನಪಿನಲ್ಲಿದ್ದಾರೆ- ಬಾಲ್ಯಕಾಲದ ಊರ ಮಂದಿಯಂತೆ. ಈ ಕಾದಂಬರಿಯನ್ನು ಮುಂದೆ ಹಲವು ವರುಷಗಳ ನಂತರ ಮತ್ತೆ ಓದುವಾಗ ಮೊದಲನೇ ಓದಿನಲ್ಲಿ ಗ್ರಹಿಕೆಗೆ ಬಂದಿರದ ಇನ್ನೊಂದಿಷ್ಟು ಅರ್ಥವೂ ಹೊಳೆದಿದ್ದು ಸತ್ಯ. ಆದರೆ ಸುಮಾರು ಮೂವತ್ತು ವರುಷಗಳ ಹಿಂದಿನ ಆ ಮೊದಲ ಓದಿನಲ್ಲಿಯೂ, ಅನುಭವಗಳನ್ನು ಪದಗಳಲ್ಲಿ ಅದ್ಭುತವಾಗಿ ಹಿಡಿದಿಡುವ ಕಲೆ ವಿಸ್ಮಯಗೊಳಿಸಿದ್ದು ಇಂದಿಗೂ ನೆನಪಿದೆ. ಪಾತ್ರಗಳೂ ಸುತ್ತಮುತ್ತಲೆಲ್ಲ ಕಾಣಬಲ್ಲಂತಹವರವೇ ಆಗಿದ್ದರೂ ತಮ್ಮ ತಿಳಿಹಾಸ್ಯದ ಶೈಲಿಯಲ್ಲಿ ತೇಜಸ್ವಿ ಅವರನ್ನು ಚಿತ್ರಿಸುವ ರೀತಿ "ಕರ್ವಾಲೋ" ಕಾದಂಬರಿಯನ್ನು ಎಂದೆಂದಿಗೂ ನೆನಪಿನಲ್ಲುಳಿಯುವ ಕೃತಿಯನ್ನಾಗಿಸುತ್ತದೆ. ತೇಜಸ್ವಿಯವರ ಹಲವಾರು ಕೃತಿಗಳಲ್ಲಿ ಕಾಣಬರುವ ಒಂದು ಸಾಮಾನ್ಯ ಎಳೆಯೆಂದರೆ ಪ್ರಕೃತಿ ಮತ್ತು ಮನುಷ್ಯನ ಸಂಬಂಧ. "ನಿಗೂಢ ಮನುಷ್ಯರು", "ಪರಿಸರದ ಕತೆಗಳು", "ಜುಗಾರಿ ಕ್ರಾಸ್", ಹೀಗೇ ಪ್ರಕೃತಿ ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಬರುವ ಒಂದು ಬಹುಮುಖ್ಯ ಪಾತ್ರವೇ ಆಗಿಬಿಡುತ್ತದೆ.

ತೇಜಸ್ವಿಯವರ ವೈಯಕ್ತಿಕ ಜೀವನ, ಸ್ವಭಾವಗಳ ಬಗ್ಗೆ ತಿಳಿಯುವ ಕುತೂಹಲ ಅವರ ಓದುಗರಲ್ಲಿರುವುದು ಸಹಜವೇ. ಕನ್ನಡದ ಇತರ ಹಲವರು ಪ್ರಖ್ಯಾತ ಸಾಹಿತಿಗಳಂತೆ ತೇಜಸ್ವಿಯವರು ಆತ್ಮ ಕಥೆ ಬರೆಯಲಿಲ್ಲವಾದ್ದರಿಂದ ಅವರ ಜೀವನದ ಕೆಲವು ಕಾಲಘಟ್ಟಗಳ ವಿವರಗಳು ಅಸ್ಪಷ್ಟವಾಗಿಯೇ ಉಳಿದಿದ್ದವು. "ಅಣ್ಣನ ನೆನಪು" ಎಂಬ ತೇಜಸ್ವಿಯವರ ಪುಸ್ತಕ ತಮ್ಮ ತಂದೆ ಕುವೆಂಪು ಅವರ ನೆನಪುಗಳ ಕುರಿತದ್ದಾದರೂ ಅದರಲ್ಲಿ ತೇಜಸ್ವಿಯವರ ಬಾಲ್ಯ, ಯೌವನಗಳ ಚಿತ್ರವೂ ಸಾಕಷ್ಟು ಸಿಗುತ್ತದೆ. ಇದೀಗ ಕಳೆದ ವರ್ಷ ಪ್ರಕಟವಾಗಿರುವ "ನನ್ನ ತೇಜಸ್ವಿ" ವಯಸ್ಕ ತೇಜಸ್ವಿ ಜೀವನದ ಹಲವಾರು ವಿವರಗಳನ್ನು ಒದಗಿಸುತ್ತದೆ.

ಪುಸ್ತಕದ ಮೊದಲಾರ್ಧದಲ್ಲಿ, ತೇಜಸ್ವಿಯವರು ತಮ್ಮ ಪ್ರೀತಿಯ "ರಾಜೇಶ್" (ರಾಜೇಶ್ವರಿ)ಗೆ ಬರೆದ ಅನೇಕ ಪತ್ರಗಳನ್ನು ಲೇಖಕಿಯವರು ಯಥಾವತ್ತಾಗಿ, ಕೆಲವೆಡೆ ತೇಜಸ್ವಿಯವರದೇ ಹಸ್ತಾಕ್ಷರದಲ್ಲಿ ಪ್ರಕಟಿಸಿರುವುದು ವಿಶೇಷ, ಹಾಗೆಯೇ ಈ ಪತ್ರಗಳು ಪುಸ್ತಕದ ಸ್ವಾರಸ್ಯವನ್ನು ಹೆಚ್ಚಿಸಿರುವುದರಲ್ಲಿ ಸಂಶಯವಿಲ್ಲ. ಮೈಸೂರಿನಲ್ಲಿ ಪರೀಕ್ಷೆಗಳನ್ನು ಮುಗಿಸಿ ಚಿಕ್ಕಮಗಳೂರಿನ ಭೂತನಕಾಡುವಿನಲ್ಲಿ ಅಣ್ಣನ ಮನೆಯಲ್ಲಿದ್ದ ತಮ್ಮ ಪ್ರಿಯತಮೆ ರಾಜೇಶ್ವರಿಯವರಿಗೆ, ಇನ್ನೂ ಮೈಸೂರಿನಲ್ಲಿಯೇ ಇದ್ದು ಭವಿಷ್ಯದ ಯೋಜನೆಯ ವಿಚಾರದಲ್ಲಿ ತಳಮಳದಲ್ಲಿದ್ದ ತೇಜಸ್ವಿಯವರು ಬರೆದ ಹಲವಾರು ಪತ್ರಗಳು ಕೇವಲ ತೇಜಸ್ವಿ ಬರೆಯಬಹುದಾದ ಶೈಲಿಯವು. ಒರಟೊರಟಾಗಿ ಆದರೂ ಪ್ರಾಮಾಣಿಕವಾಗಿ, ಬಯ್ಯುತ್ತ ಆದರೂ ಪುಟಪುಟದಲ್ಲೂ ಪ್ರೀತಿ ಚಿಮ್ಮಿಸುತ್ತಾ, ಒಮ್ಮೆ ದಾರ್ಶನಿಕನಂತೆ ಇನ್ನೊಮ್ಮೆ ಹುಚ್ಚು ಪ್ರೇಮಿಯಂತೆ, ಹೀಗೆ ಹರಯದ ತೀವ್ರ ಸಂವೇದನೆಗಳನ್ನು ಅತ್ಯಂತ ಪ್ರತಿಭಾವಂತ ಲೇಖಕನೊಬ್ಬ ಅಭಿವ್ಯಕ್ತಿಸಿದ್ದನ್ನು ಓದುವ ಅಪರೂಪದ ಅವಕಾಶ ಓದುಗರಿಗೆ. ಸಹಸ್ರಾರು ಅಭಿಮಾನಿ ಓದುಗರು ರಾಜೇಶ್ವರಿಯವರಿಗೆ thanks ಹೇಳಬೇಕು. ತಮ್ಮ ಮೆಚ್ಚಿನ ಲೇಖಕನ ತುಮುಲ, ತಳಮಳ, ಅಕ್ಕರೆ, ಒಲವು, ಕಾತರ, ಉದ್ವೇಗ, ಉನ್ಮಾದ, ಎಲ್ಲವನ್ನೂ ಒಳಗೊಂಡ ಪ್ರೀತಿಯ ಓಲೆಗಳನ್ನು ಹಂಚಿಕೊಂಡದ್ದಕ್ಕೆ. ಹಾಗೂ ತೇಜಸ್ವಿಯವರಂತಹ ವಿಶಿಷ್ಟ ವ್ಯಕ್ತಿಯ ಪ್ರೀತಿಯ, ಸ್ಫೂರ್ತಿಯ "ರಾಜೇಶ್" ಆಗಿದ್ದಕ್ಕೆ.

ಇದೇ ಪತ್ರಗಳಲ್ಲೇ ತೇಜಸ್ವಿಯವರ ಸ್ವತಂತ್ರ, ನಿರಂಕುಶ ವ್ಯಕ್ತಿತ್ವದ ಚಿತ್ರವೂ ಸಿಗುತ್ತದೆ. ಜೀವನ ವೃತ್ತಿಗಾಗಿ ಯಾರದೇ ಹಣಕಾಸು ಸಹಾಯವನ್ನೂ ಬಯಸದ ತೇಜಸ್ವಿ, ತಾವೇ ಒಂದು ಮುದ್ರಣ ಯಂತ್ರವನ್ನು ಖರೀದಿಸಿ ಕನ್ನಡಕ್ಕಾಗಿ ಒಂದು ಉತ್ತಮ ನಿಯತಕಾಲಿಕವನ್ನು ತರುವ ಪ್ರಯತ್ನ ಮಾಡುತ್ತಾರೆ. ಅದು ಯಶಸ್ವಿಯಾಗದಾಗ ವ್ಯವಸಾಯಗಾರ ಅಥವಾ ತೋಟಗಾರನಾಗಿ ತಮ್ಮ ವಿರಾಮ ಕಾಲವನ್ನು ಓದಲು ಬರೆಯಲು ಬಳಸಲು ನಿರ್ಧರಿಸುತ್ತಾರೆ. ಆದರೆ ತೋಟಗಾರನಾಗಿ ಒಂದು ನೆಲೆ ಕಂಡುಕೊಳ್ಳಲು ತೇಜಸ್ವಿಯವರಿಗೆ ಐದಾರು ವರುಷಗಳೇ ಹಿಡಿಯುತ್ತವೆ. ಈ ಅವಧಿಯಲ್ಲಿ ತೇಜಸ್ವಿ ಹಾಗೂ ರಾಜೇಶ್ವರಿಯವರು ಪರಸ್ಪರರಿಗೆ ಬರೆದುಕೊಳ್ಳುವ ಪತ್ರಗಳು ಈ ಇಬ್ಬರ ಗಟ್ಟಿ ವ್ಯಕ್ತಿತ್ವಗಳಿಗೆ ಸಾಕ್ಷಿ. ಬೇರೆ ಬೇರೆ ಜಾತಿಯವರಾದರೂ ಪ್ರೀತಿಸಿ, ಎದುರಾದ ಸವಾಲುಗಳನ್ನೆದುರಿಸಿ ತಮ್ಮ ಕನಸಿನ ಜೀವನವನ್ನು ಕಟ್ಟಿಕೊಳ್ಳುವಲ್ಲಿ ಇಬ್ಬರೂ ಅನುಭವಿಸಿದ ಮಾನಸಿಕ ಯಾತನೆ, ಅಗಲಿಕೆಯ ವೇದನೆ ಪತ್ರಗಳಲ್ಲಿ ವ್ಯಕ್ತವಾಗುತ್ತವೆ. ಕೊನೆಗೂ ತೇಜಸ್ವಿಯವರು "ಚಿತ್ರಕೂಟ" ವೆಂಬ ತಮ್ಮದೇ ಆದ ತೋಟ, ತೋಟದ ಮಧ್ಯದಲ್ಲೊಂದು ಪುಟ್ಟ ಮನೆ ಇವನ್ನು ಹೊಂದಿಸಿಕೊಂಡ ಮೇಲೆ ವಿವಾಹದ ವಿಚಾರಕ್ಕೆ ಮುಂದಾಗುತ್ತಾರೆ. ಕುವೆಂಪು ಅವರೇ ಬೋಧಿಸಿದ "ಮಂತ್ರ-ಮಾಂಗಲ್ಯ"ದ ದೀಕ್ಷೆಯೊಂದಿಗೆ ಮದುವೆಯಾಗುತ್ತದೆ. ನಂತರದಲ್ಲಿ ಅವರ ಹಲವರು ಗೆಳೆಯರೂ ಮಂತ್ರ-ಮಾಂಗಲ್ಯದ ವಿವಾಹವನ್ನೇ ಆರಿಸಿಕೊಳ್ಳುತ್ತಾರೆ.

ತೇಜಸ್ವಿಯವರ ವೈವಿಧ್ಯಮಯ ಆಸಕ್ತಿ, ಹವ್ಯಾಸಗಳ ಬಗೆಗೂ ಪುಸ್ತಕದಲ್ಲಿ ಪ್ರಸ್ತಾಪವಿದೆ. ಅವರ ಛಾಯಾಚಿತ್ರಗ್ರಹಣ ಹವ್ಯಾಸ, ಪಕ್ಷಿಗಳ ಚಿತ್ರಗಳಿಗಾಗಿ ಅವರು ಗಂಟೆಗಟ್ಟಲೆ ಕಾದು ಕೂರುತ್ತಿದ್ದಿದ್ದು, ಅವರ ಮೀನು ಹಿಡಿಯುವ ಹವ್ಯಾಸ, ಅರಣ್ಯದಲ್ಲಿ ಸುತ್ತಾಟ, ಚಿತ್ರಕಲೆಯಲ್ಲೂ ಅವರು ಹೊಂದಿದ್ದ ಪರಿಣತಿ ಹೀಗೇ.

ರಾಜೇಶ್ವರಿಯವರು ಮೈಸೂರಿನಲ್ಲಿದ್ದ ತಮ್ಮ ಅತ್ತೆ-ಮಾವಂದಿರಾದ ಕುವೆಂಪು ದಂಪತಿಗಳ ಬಗೆಗೂ ಪುಸ್ತಕದಲ್ಲಿ ಪ್ರಸ್ತಾಪಿಸುತ್ತಾರೆ. ಒಟ್ಟಿನಲ್ಲಿ ತಮ್ಮ ಪ್ರಸಿದ್ಧ ಪತಿಯ ಬದುಕಿನ ವಿವರಗಳ ಜೊತೆಜೊತೆಗೇ ತಮ್ಮಿಬ್ಬರ ಜೀವನದಲ್ಲಿ ಪ್ರಮುಖವೆನಿಸಿದ ಇತರ ಘಟನೆಗಳು ಹಾಗೂ ವ್ಯಕ್ತಿಗಳ ಬಗೆಗೂ ವಿವರಗಳಿವೆ. ಸಾಹಿತ್ಯ ಚಳವಳಿ, ಭಾಷಾ ಚಳವಳಿ, ರೈತ ಚಳವಳಿ ಹೀಗೇ ಹಲವಾರು ಘಟನೆಗಳು ಪ್ರಸ್ತಾಪವಾಗುತ್ತವೆ.

ಕಡೆಯವರೆಗೂ, ತಮ್ಮ ಕೃತಿ ರಚನೆಗಳು, ಕಂಪ್ಯೂಟರ್ ತಂತ್ರಾಂಶ, ಹೀಗೆ ಚಟುವಟಿಕೆಯಿಂದಲೇ ಇದ್ದ ತೇಜಸ್ವಿಯವರು ೨೦೦೭ರಲ್ಲಿ ತಮ್ಮ ೬೯ನೇ ವಯಸ್ಸಿನಲ್ಲಿ ತೀರಿಕೊಂಡ ಮೇಲೆ ರಾಜೇಶ್ವರಿಯವರು ಕಾಡಿನ ಮಧ್ಯೆ ಇರುವ ಮನೆಯಲ್ಲಿ ಅನುಭವಿಸಬೇಕಾಗಿರುವ ಒಂಟಿತನದ ಚಿತ್ರ ಕಡೆಯ ಅಧ್ಯಾಯ "Sit-Out ಹೇಳುವ ಕಥೆ-ವ್ಯಥೆ" ಯಲ್ಲಿ ಇದೆ.

ರಾಜೇಶ್ವರಿ ತಮ್ಮ ಸರಳ, ನೇರ ಬರವಣಿಗೆಯಿಂದ ಗಮನ ಸೆಳೆಯುತ್ತಾರೆ. "ಲೋಹಿಯಾರ ತತ್ತ್ವ ಚಿಂತನೆ, ಕುವೆಂಪು ಕಲಾಸೃಷ್ಟಿ, ಕಾರಂತರ ಜೀವನದೃಷ್ಟಿ ಮತ್ತು ಪ್ರಯೋಗಶೀಲತೆ" ಈ ಮೂರರಿಂದ ಪ್ರಭಾವಿತರಾಗಿದ್ದ ಸಾಹಿತಿ ತೇಜಸ್ವಿಯವರೊಂದಿಗೆ ನಗರದ ಸದ್ದು ಗದ್ದಲಗಳಿಂದ ದೂರವಾಗಿ ಕಾಡಿನ ನಿಶ್ಶಬ್ಧದಲ್ಲಿ ತಾವು ಕಳೆದ ದಿನಗಳ ಕಣ್ಣಿಗೆ ಕಟ್ಟುವ ಚಿತ್ರಣ ಈ ಕೃತಿಯಲ್ಲಿದೆ. ಅಪಾರ ಸಂಖ್ಯೆಯ ಓದುಗ ಸಮೂಹವನ್ನು ಹೊಂದಿದ್ದ "ನಿಗೂಢ ಮನುಷ್ಯ"ನ "ಚಿದಂಬರ ರಹಸ್ಯ" ಇದೀಗ ಒಂದಷ್ಟು ಬಯಲಾಗಿದೆ.

ತೇಜಸ್ವಿ ಕಡೆಯ ದಿನದ ಬಗ್ಗೆ ಅವರ ಮಗಳು ಈಶಾನ್ಯೆ ತಮ್ಮ ಬ್ಲಾಗ್ ಜೀವ ಜಾಲ ದಲ್ಲಿ ಬರೆದಿರುವ ಬರಹ ಆತ್ಮಾವಲೋಕನ ತೇಜಸ್ವಿಯವರ ಓದುಗರಿಗೆ ಇಷ್ಟವಾಗಬಹುದು.

Sunday, December 09, 2012

ಆಡಾಡತ ಆಯುಷ್ಯ

ಹೆತ್ತವರಿಗೆ ಹೆಮ್ಮೆ ತಂದ ಮಗ ತಾವಾದ ಮೇಲೆ ತಮ್ಮ ಕುರಿತು "ಮತ್ತು ನಾವು ಇವನು ಬೇಡ ಅಂತ ಅಂದುಕೊಂಡಿದ್ದೆವು!" ಎಂದು ತಂದೆಯವರನ್ನುದ್ದೇಶಿಸಿ ತಮ್ಮ ತಾಯಿ ಒಮ್ಮೆ ಹೇಳಿದ್ದ ಮಾತನ್ನು "ಆಡಾಡತ ಆಯುಷ್ಯ" ಎಂಬ ತಮ್ಮ ಆತ್ಮ-ಕತೆಯ ಆರಂಭದಲ್ಲೇ ಗಿರೀಶ್ ಕಾರ್ನಾಡರು ನೆನೆಯುತ್ತಾರೆ. ತಮ್ಮ ತಾಯಿಯವರ ಯೋಜನೆಯಂತೆ ತಮ್ಮ ಹುಟ್ಟಿಗೇ ಎರವಾಗಬಹುದಾಗಿದ್ದ ಪುಣೆಯ ಡಾ. ಮಧುಮಾಲತಿ ಗುಣೆ ಎಂಬುವರಿಗೇ ಪುಸ್ತಕದ ಅರ್ಪಣೆಯನ್ನೂ ಮಾಡುವುದರ ಮೂಲಕ ಆರಂಭದಲ್ಲೇ ತಮ್ಮ ಆತ್ಮಕತೆಯ ಬರವಣಿಗೆಯಲ್ಲಿ ಉದ್ದಕ್ಕೂ ಕಾಣಬರುವ ಸ್ವಾರಸ್ಯಕರ ಹಾಗೂ ಆತ್ಮೀಯ ಶೈಲಿಯ ಪರಿಚಯ ಮಾಡಿಸುತ್ತಾರೆ. ಅಂದು ತಮ್ಮ ತಾಯಿಯವರು ಹೇಳಿದ ಮಾತಿನಿಂದ ತಾವಿಲ್ಲದೆಯೂ ಈ ಜಗತ್ತು ಇರಬಹುದಾಗಿತ್ತೆಂಬ ಯೋಚನೆಗೆ ಮಂಕಾಗಿ ಕೂತದ್ದನ್ನು ಕಾರ್ನಾಡರು ನೆನೆಯುವಾಗ, ಪ್ರತಿ ಹುಟ್ಟಿನಲ್ಲೂ ಇಂತಹದ್ದೊಂದು ಅಸಂಭಾವ್ಯತೆಯ ಅಂಶ ಇರಬಹುದೆಂಬ ವಿಚಾರ ನಮಗೂ ಬರುವುದು. ಅಡಿಗರ "ಇದು ಬಾಳು" ಪದ್ಯದ "ಯಾರ ಲೀಲೆಗೋ ಯಾರೋ ಏನೋ ಗುರಿ ಇರದೆ ಬಿಟ್ಟ ಬಾಣ" ಸಾಲು ಸಹ ಇದೇ ಭಾವನೆಯದ್ದು.


ಆರಂಭದಲ್ಲಿ ಡಾ. ಮಧುಮಾಲತಿ ಗುಣೆಯವರಿಗೆ ಪುಸ್ತಕದ ಅರ್ಪಣೆ ಮಾಡುವಲ್ಲಿ ಬಾಳಿನ ಆಕಸ್ಮಿಕತೆ, ಅಸಂಭಾವ್ಯತೆಗಳ ವಿಚಾರ ಕ್ಷಣ ಪ್ರಸ್ತಾಪಿಸುವ ಲೇಖಕರು ಮುಂದೆಲ್ಲೂ ಅಂತಹ ಅಮೂರ್ತ, ದಾರ್ಶನಿಕ ವಿಚಾರಗಳ ಪ್ರಸ್ತಾಪಕ್ಕೆ ಹೋಗದೆ ವ್ಯಾವಹಾರಿಕ ಜಗತ್ತಿನ ನೆಲೆಯಲ್ಲೇ ಉಳಿಯುತ್ತಾರೆ. ಯಾವುದೇ ಸೃಜನಶೀಲ ಸಾಹಿತಿ ತನ್ನ ಅಧ್ಯಯನ, ಅನುಭವ, ಸ್ಮೃತಿ ಇವುಗಳನ್ನಾಧರಿಸಿ ರಚಿಸುವ ಯಾವುದೇ ಕೃತಿಯೂ ಒಂದು ಅರ್ಥದಲ್ಲಿ ಬಾಳು ಎಂದರೇನೆಂದು ಅರಿಯುವ ಪ್ರಯತ್ನವೇ ಆಗಿದ್ದರೂ ಅಡಿಗರ ಪದ್ಯದ ಅಲೌಕಿಕ ಅನ್ವೇಷಣೆಯ ತೀವ್ರತೆ ಕಾಣುವುದು ಅಪರೂಪ.


"ಆಡಾಡ್ತ ಆಯುಷ್ಯ" ಎಂದು ಕರೆದರೂ ಆತ್ಮಕತೆಯ ಆರಂಭದಿಂದಲೂ ಕಾಣಸಿಗುವುದು ಒಂದು ಶಿಸ್ತುಬದ್ಧ ಹಾಗೂ ಎಲ್ಲ ಘಟ್ಟಗಳಲ್ಲೂ ಉತ್ಕೃಷ್ಟತೆಗಾಗಿ ತುಡಿವ ಜೀವನದ ಚಿತ್ರವೇ. ವಿಚಾರ ಆಚರಣೆಗಳಲ್ಲಿ ಯಾವುದೇ ಡಾoಬಿಕತೆಗೆ ಆಸ್ಪದವಿಲ್ಲದ ನೇರ ನಡವಳಿಕೆಗಳು ಕಾರ್ನಾಡರ ವೈಶಿಷ್ಟ್ಯ. ಈ ಕಾರಣಕ್ಕಾಗೆ ಕೆಲವು ಸಂದರ್ಭಗಳಲ್ಲಿ ಅವರು ವಿವಾದಗಳಲ್ಲಿ ಸಿಲುಕಿಕೊಳ್ಳುವುದೂ ಉಂಟು. ಇತ್ತೀಚೆಗೆ ಕಾದಂಬರಿಕಾರ ನಾಯ್ ಪಾಲ್ ಅವರ ಬಗೆಗೆ ಕಾರ್ನಾಡರು ವ್ಯಕ್ತಪಡಿಸಿದ ಅಭಿಪ್ರಾಯ ಚರ್ಚೆಗೆ ಗ್ರಾಸವಾಯಿತು. ಆತ್ಮ-ಕತೆಯಲ್ಲೂ ವ್ಯಕ್ತಿ ವಿಷಯಗಳ ಬಗೆಗೂ ಅವರ ಪ್ರತಿಕ್ರಿಯೆ ಪ್ರತಿಸ್ಪಂದನಗಳೆಲ್ಲ ನೇರವೂ , ನಿರ್ಭಿಡೆಯವೂ ಆಗಿವೆ.


ಗಣಿತ ಶಾಸ್ತ್ರ ವಿಷಯದಲ್ಲಿ ಪದವಿ ಪರೀಕ್ಷೆಯಲ್ಲಿ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದು, ರೋಹ್ಡ್ಸ್ ಸ್ಕಾಲರ್ಷಿಪ್ ಮೂಲಕ ಆಕ್ಸ್ ಫರ್ಡ್ನಲ್ಲಿ ಸ್ನಾತಕೋತ್ತರ ಪದವಿ, ಆಕ್ಸ್ ಫರ್ಡ್ನಲ್ಲಿ ಯೂನಿಯನ್ ಸೊಸೈಟಿಯ ಅಧ್ಯಕ್ಷ ಪದವಿ ಹೀಗೇ ಗಿರೀಶರ ಸಾಧನೆಗಳು ಹಲವಾರು. ಇದೆಲ್ಲದರ ನಡುವೆ ಸುಪ್ತವಾಗಿ ಹರಿದು, ದೀಪ್ತವಾಗಿ ಪ್ರಕಟಗೊಂಡ ಕನ್ನಡ ಸಾಹಿತ್ಯ ಪ್ರೀತಿ, ಪ್ರತಿಭೆ. ಕನ್ನಡದಲ್ಲಿ ಶ್ರೇಷ್ಟ ಕೃತಿಗಳು ಪ್ರಕಟವಾದಾಗೆಲ್ಲ ಸಂಭ್ರಮಿಸಿ, ಕೆಲವನ್ನು ಚಲನಚಿತ್ರವಾಗಿಸುವ ದಿಸೆಯಲ್ಲಿ ಬಿವಿ ಕಾರಂತರಂತಹವರೊಡನೆ ಕಾರ್ಯ ಪ್ರವೃತ್ತರಾಗುತ್ತಿದ್ದ ಬಗೆ ಅವರ ಕನ್ನಡ ಅಭಿಮಾನದ ಸ್ಪಷ್ಟ ಗುರುತು.
ತಮ್ಮ ಇಪ್ಪತ್ತಮೂರನೆ ವಯಸ್ಸಿಗೇ "ಯಯಾತಿ" ಎಂಬ ಮುಖ್ಯವಾದ ನಾಟಕವನ್ನು ರಚಿಸಿದ ಪ್ರತಿಭೆ ಗಿರೀಶ್ ಕಾರ್ನಾಡ್. ಅಲ್ಲಿಂದ ಮುಂದೆ ಈವರೆಗೆ ಅವರು ರಚಿಸಿರುವ
ನಾಟಕಗಳ ಸಂಖ್ಯೆ ಹದಿಮೂರು. ೨೦೦೬ ರಲ್ಲಿ ಪ್ರಕಟವಾದ ಅವರ "ಮದುವೆಯ ಆಲ್ಬಮ್" ಎಂಬ ನಾಟಕವನ್ನು ಓದುವಾಗ ಕನ್ನಡದಲ್ಲಿಯೂ ಜಾರ್ಜ್ ಬರ್ನಾರ್ಡ್ ಷಾ ನ  ಮಾದರಿಯ ನಾಟಕವೊಂದನ್ನು ಓದಿದಂತಹ ಅನುಭವ ಆದದ್ದರ ನೆನಪಾಗುತ್ತಿದೆ. ಪ್ರಸ್ತುತ ಸಮಾಜದ ಒಂದು  ಸ್ತರದ ಜನರ  ವ್ಯವಹಾರಗಳ ನಡವಳಿಕೆಗಳ ಸೂಕ್ಷ್ಮ ಗ್ರಹಿಕೆ, ಹಾಗೆಯೇ ವೈವಿಧ್ಯಮಯ ಪಾತ್ರಗಳ ಸೂಕ್ತ ಅಭಿವ್ಯಕ್ತಿ ಶೈಲಿ, ಸಮರ್ಪಕ ನುಡಿಕಟ್ಟುಗಳ ಬಳಕೆ ಇವೆಲ್ಲವುಗಳಲ್ಲೂ ನಾಟಕಕಾರನ ಪ್ರತಿಭೆ, ಬುದ್ಧಿ ಶಕ್ತಿಗಳು ಹೊರಹೊಮ್ಮುವುದನ್ನು ಕಾಣಬಹುದು.

ಕಾರ್ನಾಡರ ಚಿತ್ರ ಜಗತ್ತಿನ ಹಲವಾರು ಸಾಹಸಗಳು ಸಾಧನೆಗಳ ಬಗೆಗೆ "ಆಡಾಡತ  ಆಯುಷ್ಯ" ದಲ್ಲಿ ಸಾಕಷ್ಟು ಮಾಹಿತಿ ಇದೆ. ಕನ್ನಡದ  ಹೆಸರಾಂತ  ಚಿತ್ರಗಳಾದ ಸಂಸ್ಕಾರ, ವಂಶವೃಕ್ಷ, ಕಾಡು, ಒಂದಾನೊಂದು ಕಾಲದಲ್ಲಿ, ಕಾನೂರು ಹೆಗ್ಗಡಿತಿ ಮುಂತಾದವುಗಳ ಬಗೆಗೆ ಕುತೂಹಲಕರವಾದ ಹಾಗೂ ಖಾಸಗಿಯಾದ ವಿವರಗಳು ಸಿಗುತ್ತವೆ. ದೂರದರ್ಶನದಲ್ಲಿ ಒಮ್ಮೆ "ಒಂದಾನೊಂದು ಕಾಲದಲ್ಲಿ" ಚಿತ್ರ ನೋಡುವಾಗ ಆ ಚಿತ್ರಕ್ಕೆ  ಕಥೆ, ಚಿತ್ರಕಥೆ ನಿರ್ದೇಶನ ನೀಡಿದ್ದ ಗಿರೀಶ್ ಕಾರ್ನಾಡರು ಹಾಗೂ ಅಭಿನಯ ನೀಡಿದ್ದ ಶಂಕರ ನಾಗ್, ಸುಂದರಕೃಷ್ಣ  ಅರಸ್ ರ ಪ್ರತಿಭೆ ಅಚ್ಚರಿ ಮೂಡಿಸಿದ್ದು ನೆನಪಾಗುತ್ತಿದೆ.  ಅದಕ್ಕೂ  ಹಿಂದೆ ಡಿವಿಡಿ ಮೂಲಕ ನೋಡಿದ್ದ ಜಗತ್ಪ್ರಸಿದ್ಧ ನಿರ್ದೇಶಕ ಅಕಿರಾ ಕುರಸಾವನ "ರಾಶೋಮೊನ್" ಚಿತ್ರದ ಮಟ್ಟಕ್ಕೆ ಏರುವ ಚಿತ್ರ ಇದೆಂದು ಅನಿಸಿತ್ತು . 

"ಆಡಾಡತ ಆಯುಷ್ಯ" ದಲ್ಲಿ ಕಾರ್ನಾಡರ ಬರವಣಿಗೆಯ ಶೈಲಿಯಂತೂ ಅತ್ಯಂತ ಆಪ್ಯಾಯಮಾನ. ಅವರ ಆಯೀ, ಬಾಪ್ಪಾರ ಸಂಬಂಧ  ಸಂಸಾರದ ವಿವರಗಳಿಂದ ಆರಂಭಿಸಿ,  ತಮ್ಮ ಬಾಲ್ಯ  ಕಾಲವನ್ನು ಕಳೆದ ಶಿರಸಿ, ಧಾರವಾಡಗಳ ಚಿತ್ರಣ, ಮುಂದೆ  ಶಿಕ್ಷಣಕ್ಕಾಗಿ ತಾವು ಸಂದರ್ಶಿಸಿದ  ಮುಂಬೈ, ಆಕ್ಸ್ ಫರ್ಡ್, ನಂತರ ವೃತ್ತಿಗಾಗಿ ಕಾಲ ಕಳೆದ ಮದ್ರಾಸು ಪುಣೆ ಇವುಗಳ ವಿವರ. ಪುಣೆಯ ಫಿಲಂ ಹಾಗೂ ಟೆಲಿವಿಜನ್  ಸಂಸ್ಥೆಯ ನಿರ್ದೇಶಕನ ವೃತ್ತಿಯ ಅನುಭವಗಳು  ಹೀಗೇ ವೈವಿಧ್ಯಮಯ ವಿವರಗಳು.  ಅನಗತ್ಯ ಸಂಭಾವಿತತನ,  ಸೋಗು ತೋರದ ನಿತ್ಯ ಜೀವನದ ವರ್ಣನೆಗಳು.

 ಧಾರವಾಡದ ಅದರಲ್ಲೂ  ಸಾರಸ್ವತಪುರದ ವರ್ಣನೆಯಂತೂ ಆ ಬಡಾವಣೆಯ ಪರಿಚಯ ಇರುವವರಿಗೆ ಅತ್ಯಂತ ಸ್ವಾರಸ್ಯಕರವೆನಿಸಬಹುದು. ಹುಬ್ಬಳ್ಳಿಯಲ್ಲಿ  ಇಂಜಿನೀರಿಂಗ್ ಓದುವಾಗ ಆಗೀಗ ಹೋಗಿ ಬಂದಷ್ಟೇ ಧಾರವಾಡದ ಪರಿಚಯ ಇರುವ ನನಗೂ ಗಿರೀಶರು ನೀಡುವ ವಿವರಗಳು ಧಾರವಾಡದ ಒಂದು ಹೊಸ ನೋಟವನ್ನೇ ನೀಡಿದವು.

ಇದೀಗ ಎಪ್ಪತ್ತ ನಾಲ್ಕು ವರುಷಗಳು ತುಂಬಿರುವ ಗಿರೀಶರ ಮೊದಲ ಮೂವತ್ತೇಳು  ವರುಷಗಳ ಆತ್ಮ-ಕತೆಗಳಷ್ಟೇ "ಆಡಾಡತ  ಆಯುಷ್ಯ"ದ ಭಾಗವಾಗಿವೆ. ಇದರ ಉತ್ತರಾರ್ಧದ ಸೂಚನೆಯನ್ನು ಲೇಖಕರು ಪುಸ್ತಕದ ಕಡೆಯಲ್ಲಿ ನೀಡಿದ್ದು, ಅಂತಹದ್ದೊಂದು ಭಾಗ ಪ್ರಕಟವಾದರೆ ಅದನ್ನು "ನೋಡ ನೋಡ್ತಾ ದಿನಮಾನ" ಎಂದು ಕರೆಯಬಹುದಾದ ಸಾಧ್ಯತೆಯ ಸೂಚನೆ ನೀಡಿದ್ದಾರೆ. ತಾವು ಮೆಚ್ಚಿದ ಬೇಂದ್ರೆ ಕವಿತೆ "ನನ್ನ ಕಿನ್ನರಿ" ಯ ಮೊದಲನೆ ಸಾಲು ("ನೋಡ ನೋಡ್ತಾ ದಿನಮಾನ ಆಡಾಡ್ತ  ಆಯುಷ್ಯಾ") ಈ ಆತ್ಮ-ಕತೆಯ ಶೀರ್ಷಿಕೆಯಾಗಿರುವುದು ವಿಶೇಷ.

ಅಂತೂ ತುಂಬಾ ಆಸಕ್ತಿಯಿಂದ ಓದಿಸಿಕೊಳ್ಳುವ ಈ ಪುಸ್ತಕ ನನಗಂತೂ "ಓದ್ ಓದ್ತಾ ಅಂತ್ಯ" ಆದದ್ದೇ ತಿಳಿಯಲಿಲ್ಲ. ಇನ್ನು "ನೋಡ್ ನೋಡ್ತಾ ದಿನಮಾನ" ದ ಇದಿರು ನೋಡ್ತಾ ಇರುವುದೊಂದೇ ಸಾಧ್ಯತೆ.

Monday, November 05, 2012

ಕನ್ನಡ ಕಾಮನಬಿಲ್ಲು

ನವೆಂಬರಿನಲ್ಲಿ ಬೆಂಗಳೂರಿನಲ್ಲಿ ನಾವು ಕನ್ನಡಿಗರಲ್ಲಿ ಕನ್ನಡ ಭಾಷಾಭಿಮಾನ ಮತ್ತದರ ಪ್ರದರ್ಶನ  ಮಂಜಿನಂತೆ ಎಲ್ಲೆಡೆ ಆವರಿಸಿಬಿಡುತ್ತದೆ. ಮತ್ತೆ ದಿನಗಳು ಕಳೆಯುತ್ತ ಹೋದಂತೆ ಬೆಳಕಿಗೆ ಮಂಜು ಕರಗುವಂತೆ ಕ್ರಮೇಣ ಕರಗುತ್ತಾ ಮತ್ತೆ ಸುಪ್ತವಾಗಿಬಿಡುತ್ತದೆ. 

ನಮ್ಮಂತಹ ಐಟಿ ಬಿಟಿ ಕನ್ನಡಿಗರಿಗೆ ಕಚೇರಿಯಲ್ಲಂತೂ ಮಧ್ಯಾಹ್ನ ಊಟದ ಸಮಯದಲ್ಲಷ್ಟೇ ಅದೂ ಕನ್ನಡಿಗ ಸಹೋದ್ಯೋಗಿಗಳಾರಾದರೂ  ಜೊತೆಯಾದರಷ್ಟೇ ಕನ್ನಡದಲ್ಲಿ ಮಾತಾಡುವ ಅವಕಾಶ. ಇಲ್ಲದಿದ್ದರೆ ಅದೂ ಇಲ್ಲ. ಇನ್ನು ಮನೆಯ ಹೊರಗೆ ಲಭ್ಯವಿರುವ ಕನ್ನಡದ ಕೊಂಡಿ FM ಚಾನಲ್ ಗಳು. ವಾಹನಗಳಲ್ಲಿ ಸಂಚರಿಸುತ್ತಿರುವಾಗ  ಅಥವಾ ಅಂಗಡಿ ಮತ್ತಿತರೆಡೆ ರೇಡಿಯೋದಲ್ಲಿ ಕೇಳಸಿಗುವ ಕನ್ನಡ "ಸಕತ್ ಹಾಟ್ ಮಗಾ", "ಹಿಟ್ ಮೇಲೆ ಹಿಟ್", "ಕೇಳಿ ಕೇಳಿಸಿ ಲೈಫ್ ನಿಮ್ಮದಾಗಿಸಿ" ಈ ಮಾದರಿಯದು :-)

ಆದರೆ ಕಳೆದ ವಾರ ರಾಜ್ಯೋತ್ಸವದ ರಜಾ ದಿನ 'ನೀಲಂ' ಚಂಡಮಾರುತದ  ದೆಸೆಯಿಂದ  ಮನೆಯಲ್ಲೇ  ದಿನವಿಡೀ  ಕಳೆಯಬೇಕಾಗಿ,  ಆಕಾಶವಾಣಿಯ "ರೈನ್ ಬೊ  101.3 - ಕನ್ನಡ ಕಾಮನಬಿಲ್ಲು" ಚಾನಲನ್ನು ಬೆಳಗಿನಿಂದ ಸಂಜೆವರೆಗೂ ಕೇಳುವಾಗ ನಿಜಕ್ಕೂ ಕನ್ನಡದ ಗಾಳಿಯನ್ನೇ ಉಸಿರಾಡಿದ ಅನುಭವ.  ಈ ವಾಹಿನಿಯ ನಿರೂಪಕರು ಬಳಸುವ ನವಿರಾದ ಗಂಭೀರವಾದ  ಕನ್ನಡವೂ ಇಷ್ಟವಾಯಿತು.  ಅಂದು ಪ್ರಸಾರವಾದ ಬಹುಪಾಲು ಚಲನಚಿತ್ರ ಗೀತೆಗಳೂ ಕನ್ನಡ ಚಲನಚಿತ್ರ ಸಂಗೀತದ ಸುವರ್ಣ ಯುಗ ಎನ್ನಬಹುದಾದ 1965-85 ರ ಕಾಲದವು.

ಬೆಳಗ್ಗೆ 11 ರ ಸುಮಾರಿಗೆ ರೇಡಿಯೋ ಕೇಳಲು ಆರಂಭಿಸಿದರೆ ರಾತ್ರಿ 11 ರ ವರೆಗೂ ಅವ್ಯಾಹತವಾಗಿ ಹಿನ್ನೆಲೆಯಲ್ಲಿ ಮೂಡಿ ಬರುತ್ತಿದ್ದ ಗೀತೆಗಳು ಒಂದು ದಿನದ ಮಟ್ಟಿಗಾದರೂ ಕನ್ನಡದ ಜೇನಿನ ಹೊಳೆಯಲ್ಲಿ ಮೀಯಿಸಿ ತೇಲಿಸಿದವು. ಕೆಲವು ಭಾಗಗಳ  ಹಾಡುಗಳು ಶ್ರೋತೃಗಳ ಕೋರಿಕೆಯವಾದರೆ ಇನ್ನು ಕೆಲವು ಕಾರ್ಯಕ್ರಮ ನಿರೂಪಕರ ಆಯ್ಕೆಯವಾಗಿದ್ದವು. ಮಧ್ಯೆ ಒಂದೆರಡು ಸಂದರ್ಶನಗಳನ್ನಾಧರಿಸಿದ ಕಾರ್ಯಕ್ರಮಗಳೂ ಇದ್ದವು.

ಅಂದು ನಾನು ಕೇಳಿದ ಮೊದಲನೇ ಹಾಡು 'ಕಲ್ಲಾದರೆ ನಾನು ಬೇಲೂರಿನ ಗುಡಿಯಲ್ಲಿ ಇರುವೆ'.  ಅಲ್ಲಿಂದ ಮುಂದೆ ಪ್ರಸಾರವಾಗಿದ್ದು ಇನ್ನೂ ಹಿಂದಿನ ಕನ್ನಡ ಚಿತ್ರ ಸಂಗೀತದ ಪರಿಮಳ ಸೂಸಿದ 'ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ' . ಜಮಾನದ ಹಾಡುಗಳೇ ಆದರೂ ನಮ್ಮ ಎಷ್ಟೋ  ಹಿಂದಿನ ಹಾಡುಗಳ ಸಂಗೀತ, ಸಾಹಿತ್ಯ ಇಂದಿನ ಹಲವು ಹಾಡುಗಳಿಗೆ ಹೋಲಿಸಿದರೆ ನಿಜಕ್ಕೂ ಉತ್ಕೃಷ್ಟ.

ಮುಂದೆ ಪ್ರಸಾರವಾಗಿದ್ದು  'ಕನ್ನಡ ನಾಡಿನ ಜೀವನದಿ ಕಾವೇರಿ '. ಅಲ್ಲಿಂದ ಮುಂದೆ 'ಅಪಾರ  ಕೀರ್ತಿ ಗಳಿಸಿ ಮೆರೆವ ನಮ್ಮ ಭವ್ಯ ನಾಡಿ'ಗೊಂದು ಗೀತ ಪ್ರದಕ್ಷಿಣೆ.  ಕನ್ನಡ ದ ಕುರಿತಾದ ಹಾಡುಗಳದೇ  ಅಂದು ಪೈಪೋಟಿ. 'ಕನ್ನಡಕ್ಕಿಲ್ಲ ಸಾಟಿ ಚಂದನಕ್ಕಿಲ್ಲ  ಪೋಟಿ', 'ಕನ್ನಡವೇ ನಮ್ಮಮ್ಮ', ಕನ್ನಡವೆನೆ ಕುಣಿದಾಡುವುದೆನ್ನೆದೆಯು', 'ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ' ಹೀಗೇ...ಕನ್ನಡದ ಗುಣಗಾನದ ಮಹಾಪೂರ.

ಮಹಾನ್ ಗಾಯಕ ಪಿ ಬಿ ಶ್ರೀನಿವಾಸ್ ಅವರೊಂದಿಗೆ ಆಕಾಶವಾಣಿ ಹಾಸನದವರು ಈ ಹಿಂದೆ ನಡೆಸಿದ ಸಂದರ್ಶನ 'ಭಾವ ಭೃಂಗ' ಕಾರ್ಯಕ್ರಮ ಅಂದು ಮಧ್ಯಾಹ್ನ ರೈನ್ ಬೊ ನಲ್ಲಿ ಮರುಪ್ರಸಾರವಾಯಿತು.  ಪಿ ಬಿ ಯವರ ಕಂಠ ನಿಜಕ್ಕೂ ಅದ್ಭುತ. ತಮ್ಮ ವೃತ್ತಿ ಜೀವನದ ಹಲವು ನೆನಪುಗಳನ್ನು ಅವರು ಹಂಚಿಕೊಂಡರು. ರಾಜ್ ರಿಂದ ಪಿ ಬಿ ಯವರ ಹಿನ್ನೆಲೆ ಗಾಯನದ ವೃತ್ತಿಗೆ ಧಕ್ಕೆಯಾಯಿತು ಎಂದು ಕೆಲವರು ಮಾತಾಡುವುದನ್ನು  ಅದು ಬರಿ ಊಹಾಪೋಹ ಎಂದು ಬಣ್ಣಿಸಿದ ಪಿ ಬಿ ಯವರು, ರಾಜ್ ನಿಜಕ್ಕೂ ಅದ್ಭುತ ಹಾಡುಗಾರರೆಂದೂ ಅವರ ಚಿತ್ರಗಳಲ್ಲಿ ಸಿಕ್ಕ ಅವಕಾಶಕ್ಕಾಗಿ ತಾನು ನಿಜಕ್ಕೂ ಋಣಿಯಾಗಿರುವುದಾಗಿಯೂ ಹೇಳಿದರು. ಹಾಗೆಯೇ ಪಿ ಬಿ ಯವರು ಹಾಡಿದ ಹಲವಾರು ಸುಂದರ ಹಾಡುಗಳನ್ನೂ ಕೇಳಿಸಲಾಯಿತು. 'ಕನ್ನಡವೇ ತಾಯ್ನುಡಿಯು  ಕರುನಾಡು ತಾಯ್ನಾಡು', 'ದಿವ್ಯಗಗನ ವನವಾಸಿನಿ', 'ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ', 'ಧನಲಕ್ಷ್ಮಿ ದಯೆತೋರು ಅಮ್ಮಾ' ...ಹೀಗೇ ಹಲವಾರು.

ಸಂಜೆಯ ಕಾರ್ಯಕ್ರಮದಲ್ಲಿ ಸ್ಪರ್ಧೆಯೂ ಇತ್ತು.  ಶ್ರೋತೃಗಳು ದೂರವಾಣಿಯ ಮೂಲಕ ಭಾಗವಹಿಸಿ ಪ್ರಶಸ್ತಿ ಗೆಲ್ಲುವ ಅವಕಾಶ. ಅನೇಕರು ಅನೇಕ  ಕಡೆಗಳಿಂದ ಕರೆಮಾಡಿ ಉತ್ಸಾಹದಿಂದ ಪಾಲ್ಗೊಂಡರು. ನಿರೂಪಕಿಯೂ ತುಂಬಾ ಚೆನ್ನಾಗಿ ಕಾರ್ಯಕ್ರಮ ನಡೆಸಿದರು. ನಿರೂಪಕಿ ಕೇಳುವ ಮೂರು ಪ್ರಶ್ನೆಗಳಿಗೆ ಸರಿ ಉತ್ತರ ಹೇಳಿದವರಿಗೆ ಬಹುಮಾನವಿತ್ತು. ಉದಾಹರಣೆಗೆ ಈ ಗಾದೆ "ಅಣ್ಣ ಅತ್ತರೆ ತಮ್ಮನೂ ಅಳ್ತಾನೆ"... ಹೀಗೇ. ಸ್ಪರ್ಧಿ-ನಿರೂಪಕಿ ನಡುವಿನ ಸಂಭಾಷಣೆಗಳು ಕೇಳಲು ಮುದವಾಗಿದ್ದವು. ಇದೇ ಕಾರ್ಯಕ್ರಮದಲ್ಲಿ  ಕೆಲ ಪ್ರೇಮ ಗೀತೆಗಳೂ ಪ್ರಸಾರವಾದವು. 'ಏನೋ ಮೋಹ..ಏನೋ ದಾಹ', 'ಜಿನು ಜಿನುಗೋ ಜೇನಾ ಹನಿ ಮಿನು ಮಿನುಗೋ ತುಟಿಗೇ ಇಬ್ಬನಿ', 'ಮುಸ್ಸಂಜೆ ವೇಳೇಲಿ ಮುತ್ತಿಟ್ಟ ಉಸಿರಾ ಆಣೆ ಬಿಟ್ಟೋದ ದಾರೀಲಿ ಖುಷಿಯೇ ಇಲ್ಲಾ' ಹೀಗೇ ...

ರೈನ್ ಬೊ ದಲ್ಲಿ ರಾಜ್ಯೋತ್ಸವದಂದು ಪ್ರಸಾರವಾದ ಕಾರ್ಯಕ್ರಮಗಳೆಲ್ಲ ಚೆನ್ನಾಗಿದ್ದವು. ಅವುಗಳಿಗೆಲ್ಲ ಮಕುಟಪ್ರಾಯ ಎನ್ನುವಂತಹ ಕಾರ್ಯಕ್ರಮವೆಂದರೆ ಶ್ರೀಧರ ಮೂರ್ತಿಯವರು ರಾತ್ರಿ 10 ರಿಂದ 11 ರವರೆಗೆ ನಡೆಸಿಕೊಟ್ಟ ಶಾಸ್ತ್ರೀಯ ಸಂಗೀತವನ್ನಾಧರಿಸಿದ ಕನ್ನಡ ಚಿತ್ರಗೀತೆಗಳ ಕಾರ್ಯಕ್ರಮ. 'ಅಭೇರಿ' ರಾಗದಲ್ಲಿ ಸಂಯೋಜನೆಗೊಂಡ ಹಲವಾರು ಅನುಪಮ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು.  ಇಂತಹ  ಹಾಡುಗಳನ್ನು ಕೇಳುವಾಗ ಭಾರತೀಯ ಶಾಸ್ತ್ರೀಯ ಸಂಗೀತದ ಶಕ್ತಿ ಕೇಳುಗರಿಗೆ ಮನವರಿಕೆಯಾಗದೆ ಇರಲಾರದು. ಹಾಗೆಯೇ ನಮ್ಮ ಕನ್ನಡದ ಪ್ರತಿಭಾವಂತ ಸಂಗೀತ ನಿರ್ದೇಶಕರುಗಳು  ಕೇವಲ ಒಂದು ರಾಗವನ್ನಾಧರಿಸಿ ಸಂಯೋಜಿಸಿದ ಈ ಗೀತೆಗಳನ್ನು ಕೇಳುತ್ತಿದ್ದರೆ   ಕನ್ನಡ ಚಲನಚಿತ್ರ ಇತಿಹಾಸದ ಗಣಿಯಲ್ಲಿ ಅಡಗಿರುವ ಇನ್ನುಳಿದ ವಿಶಿಷ್ಟ ಸಾಹಿತ್ಯ ಹಾಗೂ ಸಂಗೀತವುಳ್ಳ  ಗೀತೆಗಳ ಬಂಗಾರದ  ಭಂಡಾರದ  ಬಗೆಗೆ ವಿಸ್ಮಯವಾಗುತ್ತದೆ.

ಅಂದು ಪ್ರಸಾರವಾದ ಅಭೇರಿ ರಾಗವನ್ನಾಧರಿಸಿದ ಗೀತೆಗಳ ಪಟ್ಟಿ (ಲಭ್ಯವಿರುವ YouTube ಕೊಂಡಿಗಳೊಂದಿಗೆ)-

ಪಂಚಮ ವೇದ ಪ್ರೇಮದ ನಾದ (ಗೆಜ್ಜೆಪೂಜೆ - ವಿಜಯ ಭಾಸ್ಕರ್),
ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ (ದಾರಿ ತಪ್ಪಿದ ಮಗ - ಜಿ ಕೆ ವೆಂಕಟೇಶ್),
ನಗು ನಗುತಾ ನಲಿ ನಲಿ (ಬಂಗಾರದ ಮನುಷ್ಯ - ಜಿ ಕೆ ವೆಂಕಟೇಶ್),
ಜಗದೀಶನಾಡುವಾ ಜಗವೇ ನಾಟಕ ರಂಗ (ಶ್ರೀ ರಾಮಾಂಜನೇಯ ಯುದ್ಧ - ಜಿ ಕೆ ವೆಂಕಟೇಶ್),
ಬಾರೇ ಬಾರೇ ಚಂದದ ಚೆಲುವಿನ ತಾರೆ (ನಾಗರ  ಹಾವು - ವಿಜಯ ಭಾಸ್ಕರ್),
ವಿರಹ ನೂರು ನೂರು ತರಹ (ಎಡಕಲ್ಲು ಗುಡ್ಡದ ಮೇಲೆ - ಎಂ. ರಂಗರಾವ್),
ಹೂವು ಚೆಲುವೆಲ್ಲಾ ನಂದೆಂದಿತು (ಹಣ್ಣೆಲೆ ಚಿಗುರಿದಾಗ),
ನಮ್ಮ ಸಂಸಾರ ಆನಂದ ಸಾಗರ (ನಮ್ಮ ಸಂಸಾರ - ಎಂ. ರಂಗರಾವ್),
ಇವಳೇ ವೀಣಾ ಪಾಣಿ (ಎಂ. ರಂಗರಾವ್),
ಆಸೆಯ ಭಾವ ಒಲವಿನ ಜೀವ (ಮಾಂಗಲ್ಯ ಭಾಗ್ಯ - ರಾಜನ್ ನಾಗೇಂದ್ರ),
ನೀ ನಡೆದರೇ ಸೊಗಸು (ಅನುರಾಗ ಅರಳಿತು - ಉಪೇಂದ್ರ ಕುಮಾರ್),
ತೆರೆದಿದೆ ಮನೆ ಓ ಬಾ ಅತಿಥಿ (ಹೊಸ ಬೆಳಕು -  ಎಂ. ರಂಗರಾವ್).

Sunday, September 30, 2012

ಜೀಮೂತವಾಹನನ ಕಥೆ

ನನಗೆ ನೆನಪಿರುವಂತೆ ನಾನು ಓದಿದ ಮೊಟ್ಟ  ಮೊದಲ ಪುಸ್ತಕ "ಜೀಮೂತವಾಹನನ ಕಥೆ". ಅದೊಂದು ಅನನ್ಯ  ಅನುಭವ. ಇಷ್ಟು ವರ್ಷಗಳ ನಂತರವೂ ಆ  ಅನುಭವ ಕಣ್ಣಿಗೆ ಕಟ್ಟಿದಂತೆ ಉಳಿದಿದೆ.

ಆಗ ನಾನಿನ್ನೂ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿಯಲ್ಲಿದ್ದೆ. ನಮ್ಮ ಹಳ್ಳಿಯ ಪಕ್ಕದ ಹಳ್ಳಿಯಲ್ಲಿದ್ದ ಏಕ ಶಿಕ್ಷಕ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿದ್ದ ವಿದ್ಯಾರ್ಥಿಗಳು ಬರೀ ಆರು ಮಂದಿ. ಅಷ್ಟೇನೂ ಸೌಕರ್ಯಗಳಿರದಿದ್ದ ಆ ಶಾಲೆಯಲ್ಲಿ ಒಂದು ಕಬ್ಬಿಣದ ಪೆಟ್ಟಿಗೆಯಲ್ಲಿ ತುಂಬಿಸಿಟ್ಟಿದ್ದ ಅಮರಚಿತ್ರಕಥಾ  ಮಾಲಿಕೆಯ ಕೆಲವು ಕಾಮಿಕ್ಸ್ ಪುಸ್ತಕಗಳು ಮತ್ತು ಕೆಲವು ಮಕ್ಕಳ ಪುಸ್ತಕಗಳು ನನಗಂತೂ ಅಮೂಲ್ಯ ವಸ್ತುಗಳಾಗಿದ್ದವು.

ಮನೆಯಲ್ಲಿ ಮೊದಲಿನಿಂದಲೂ ದಿನ  ಪತ್ರಿಕೆ, ವಾರ ಪತ್ರಿಕೆ , ಕಾದಂಬರಿ ಮೊದಲಾದ ಓದಿನ ಪರಿಕರಗಳು ಕೈಗೆಟುಕುವಂತಿರುತ್ತಿದ್ದರಿಂದ ಸಹಜವಾಗಿಯೇ ಒಂದು ಬಗೆಯ ಕುತೂಹಲ ನನ್ನಲ್ಲಿತ್ತು. ನಾನು ನನ್ನ ಶಾಲೆಯಿದ್ದ ಹಳ್ಳಿಯಲ್ಲಿದ್ದ ನನ್ನ ಅಜ್ಜಿಯ ಮನೆಯಿಂದಲೇ ಶಾಲೆಗೆ  ಹೋಗುತ್ತಿದ್ದೆ. ಅದೊಂದು ದಿನ ಶಾಲೆಯಿಂದ "ಜೀಮೂತವಾಹನನ ಕಥೆ" ಪುಸ್ತಕ ಓದಲು ತಂದಿದ್ದೆ. ಅಂದು ಶುಕ್ರವಾರವಾಗಿದ್ದರಿಂದ ನಾನು ನಮ್ಮೂರಿಗೆ ಹೋಗಬೇಕಿತ್ತು. ಅದೇ ದಿನ ಭತ್ತ ತೆಗೆದುಕೊಂಡು ಹೋಗಲು ನಮ್ಮೂರಿಂದ ನಮ್ಮ ಮನೆಯ ಎತ್ತಿನ ಗಾಡಿ  ಬಂದಿದ್ದರಿಂದ ನಾನೂ ಅದೇ ಗಾಡಿಯಲ್ಲಿ ಹೋಗುವುದೆಂದು ನಿರ್ಧಾರವಾಯಿತು.

ಎತ್ತಿನ ಗಾಡಿಯಲ್ಲಿ ಕುಳಿತು ಪ್ರಯಾಣ ಮಾಡುತ್ತಾ ಹಳ್ಳಿಯ ಆ ಪ್ರಶಾಂತ ವಾತಾವರಣದಲ್ಲಿ ತನ್ಮಯತೆಯಿಂದ ಓದುತ್ತಾ ಹೋದಂತೆ "ಜೀಮೂತವಾಹನನ ಕಥೆ" ನನ್ನನ್ನು ಆವರಿಸಿದ ಪರಿ ನಿಜಕ್ಕೂ ಅದ್ಭುತ. ನಾನು ಎಂದೂ ಮರೆಯಲಾರದಂತಹುದು. ಮುಂದೆ ಬಾಳಿನುದ್ದಕ್ಕೂ ವಿವಿಧ ಪುಸ್ತಕಗಳು ವಿವಿಧ ರೀತಿ ಜೊತೆಯಾದದ್ದು, ಬೋಧಿಸಿದ್ದು, ರಂಜಿಸಿದ್ದು, ಪ್ರಚೋದಿಸಿದ್ದು - ಒಂದು ರೀತಿಯಲ್ಲಿ ಈ ಎಲ್ಲದರ ಉಗಮ ಬಹುಶಃ  ಅಂದು ಆ ಪುಸ್ತಕ ತಂದ ಅನಿರ್ವಚನೀಯ ಆನಂದ.

ಮೊನ್ನೆ ಕುತೂಹಲಕ್ಕೆ ಈ ಕಥೆಯ  ಕುರಿತು ಗೂಗಲ್ ಹುಡುಕಾಟ ನಡೆಸಿದಾಗ ತಿಳಿದುಬಂದದ್ದು -  ಇದೊಂದು ಬೌದ್ಧ  ಧರ್ಮದ ಐತಿಹ್ಯ ). ಬೌದ್ಧ ಧರ್ಮದ ಹಿನ್ನೆಲೆಯಿರುವ ಜಾತಕ, ಅವದಾನ ಕತೆಗಳ ಮೂಲವಿರುವಂತಹುದು. ಕ್ರಿ.ಶ. ಏಳನೇ ಶತಮಾನದಲ್ಲಿ ರಾಜ ಹರ್ಷದೇವ  ರಚಿಸಿದ "ನಾಗಾನಂದ" ನಾಟಕ ಹಾಗೂ  ಕ್ರಿ.ಶ. ಹನ್ನೊಂದರಲ್ಲಿ ಸೋಮಭಟ್ಟ ಎಂಬುವನು ಸಂಪಾದಿಸಿದ "ಕಥಾ ಸರಿತ್ಸಾಗರ" ಇವೆರಡೂ ಕೃತಿಗಳಲ್ಲಿಯೂ "ಜೀಮೂತವಾಹನನ ಕಥೆ" ಯ ಉಲ್ಲೇಖ ಇದೆ. ಇದಕ್ಕೂ ಮೊದಲೇ ಕ್ರಿ.ಪೂ. ಐದನೇ ಶತಮಾನದ ಉರಗ ಜಾತಕದ ಸಮಯದಿಂದ ಕ್ರಿ. ಶ. ಒಂದನೇ ಶತಮಾನದಲ್ಲಿ ಗುಣಾಡ್ಯ ಎಂಬುವನು ಸಂಪಾದಿಸಿದ  ಬೃಹತ್ಕಥ ದವರೆಗಿನ ಅವಧಿಯಲ್ಲಿ  ಜೀಮೂತವಾಹನನ ಕಥೆ ರೂಪುಗೊಂಡಿರಬೇಕೆಂದು ಹೇಳಲಾಗುತ್ತದೆ.

ಅಂತೂ, ಬುದ್ಧನ ಕಾಲದ ಒಂದು ಕಥೆ ಪಾಳಿ  ಭಾಷೆಯಿಂದ ಸಂಸ್ಕೃತಕ್ಕೆ ಬಂದು ಅಲ್ಲಿಂದ ಕನ್ನಡವನ್ನು ತಲುಪಿ ಮಲೆನಾಡಿನ ಮೂಲೆಯೊಂದರಲ್ಲಿನ ಹಳ್ಳಿ ಶಾಲೆಯ ಹುಡುಗನನ್ನು ಕಾಡಿದ್ದು ಹೀಗೆ. ಇಂದಿನ ಅಂತರ್ಜಾಲದ ಯುಗದಲ್ಲಿ ಎಲ್ಲ ಸಾಹಿತ್ಯ ಕೃತಿಗಳ, ಹಾಗೆಯೇ ವಿಮರ್ಶೆಗಳ ಸಂವಹನ ಸುಲಭ ಸಾಧ್ಯವಾಗಿದ್ದರೂ, ಮಕ್ಕಳ ಸಾಹಿತ್ಯದ ದೃಷ್ಟಿಯಿಂದ ನೋಡಿದರೆ  ಪೋಗೋ, ಕಾರ್ಟೂನ್ ನೆಟ್ ವರ್ಕ್ ಗಳ ಆರ್ಭಟ ದಲ್ಲಿ ಜೀಮೂತವಾಹನ ಕಣ್ಮರೆಯಾಗುವ ಸಾಧ್ಯತೆ ಇದೆ. ನನ್ನ ಮಗಳನ್ನು "ಜೀಮೂತವಾಹನನ" ಬಗ್ಗೆ ಕೇಳಿದೆ. ಈಗ ಐದನೇ ತರಗತಿಯಲ್ಲಿರುವ ಅವಳು "ಜಾತಕ ಕತೆಗಳು" ಪುಸ್ತಕ ತನ್ನಲ್ಲಿರುವುದಾಗಿಯೂ ಅದರಲ್ಲಿ ಬೋಧಿಸತ್ತ್ವನ ಕತೆಗಳನ್ನು ತಾನು ಓದಿರುವುದಾಗಿಯೂ ಹೇಳಿದಳು. ಆದರೆ ಜೀಮೂತವಾಹನನ ಬಗ್ಗೆ ಅವಳು ತಿಳಿದಿರಲಿಲ್ಲ. ಆದರೂ, ಇಪ್ಪತ್ತೈದು  ಶತಮಾನಗಳನ್ನು ದಾಟಿ ಬಂದಿರುವ ಜೀಮೂತವಾಹನ ಸುಲಭವಾಗಿ ಮರೆಯಾಗುವುದಿಲ್ಲ ಎಂಬ ನಂಬಿಕೆ ನನ್ನದು.

 ಇಷ್ಟೆಲ್ಲಾ ಹೇಳಿದ ಮೇಲೆ ಸಂಕ್ಷೇಪವಾಗಿ ಜೀಮೂತವಾಹನನ ಕಥೆಯನ್ನೂ ಹೇಳಬಹುದೇನೋ- 

ವಿದ್ಯಾಧರ ಎಂಬ ರಾಜ್ಯದ ಅರಸು ಜೀಮೂತಕೇತು ಎಂಬುವನು ತನಗೆ ವಯಸ್ಸಾದ ಮೇಲೆ ತನ್ನ ರಾಜ್ಯದ ರಾಜ್ಯಭಾರವನ್ನು ತನ್ನ ಮಗ ಜೀಮೂತವಾಹನನಿಗೆ ವಹಿಸಿ ವಾನಪ್ರಸ್ಥಾಶ್ರಮಕ್ಕೆ ತೆರಳುತ್ತಾನೆ. ಆದರೆ ತನ್ನ ತಂದೆ ಕಾಡಿನಲ್ಲಿ ಕಷ್ಟಪಡಬಾರದೆಂದು ಅವನಿಗೆ ಸೂಕ್ತವಾದ ವ್ಯವಸ್ಥೆ ಮಾಡುವ ಸಲುವಾಗಿ ಜೀ.ವಾ. ಸಹ ಕಾಡಿಗೆ ಹೋಗುತ್ತಾನೆ. ಸ್ಥಳವನ್ನು ಹುಡುಕುತ್ತಾ ಮಲಯ ಪರ್ವತ ಎಂಬಲ್ಲಿಗೆ ಬರುತ್ತಾನೆ. ಸಿದ್ಧ ರಾಜ್ಯದ ರಾಜ ವಿಶ್ವವಸು ಎಂಬುವನ ಮಗಳು ಮಲಯವತಿ ಅಲ್ಲಿ ದೇವಸ್ಥಾನವೊಂದರಲ್ಲಿ ದೇವತೆ ಗೌರಿಯ ತಪಸ್ಸಿನಲ್ಲಿ ನಿರತಳಾಗಿರುತ್ತಾಳೆ.

ಗೌರಿಯು ಅವಳಿಗೆ ವಿದ್ಯಾಧರ ರಾಜ್ಯದ ರಾಜಕುಮಾರನೊಂದಿಗೆ ನಿನ್ನ ಮದುವೆಯಾಗುತ್ತದೆಂದು ವರ ಕೊಡುವುದನ್ನು ಜೀ. ವಾ. ಕೇಳಿಸಿಕೊಳ್ಳುತ್ತಾನೆ.  ನಂತರ ಜೀ.ವಾ. ಮತ್ತು ಮಲಯವತಿ ಪರಸ್ಪರ ಪ್ರೀತಿಸುತ್ತಾರೆ. ಅವರಿಬ್ಬರೂ ಮಾತನಾಡುತ್ತಿರುವಾಗ ಋಷಿಯೊಬ್ಬರು ಅಲ್ಲಿಗೆ ಬರುವುದರಿಂದ ಪ್ರೇಮಿಗಳು ಪರಸ್ಪರ ದೂರವಾಗಬೇಕಾಗುತ್ತದೆ. ಮುಂದೆ ಮಲಯವತಿಯ ಸಹೋದರ ಮಿತ್ರವಸುವಿಗೆ ಜೀ. ವಾ. ನ ಪರಿಚಯವಾಗುತ್ತದೆ. ತನ್ನ ಸಹೋದರಿ ಜೀ.ವಾ.ನನ್ನು ಇಷ್ಟಪಟ್ಟಿರುವುದು ತಿಳಿದು ಮಿತ್ರವಸು ಜೀ.ವಾ. ನೊಂದಿಗೆ ಅವಳ ವಿವಾಹದ ಪ್ರಸ್ತಾಪವನ್ನು ಮಾಡುತ್ತಾನೆ. ಆದರೆ ಮಲಯವತಿ ಮಿತ್ರವಸುವಿನ ಸಹೋದರಿ ಎಂದು ಅರಿಯದ ಜೀ. ವಾ. ಪ್ರಸ್ತಾಪವನ್ನು ತಿರಸ್ಕರಿಸುತ್ತಾನೆ. ಇದರಿಂದ ಬಹಳ ನೊಂದ ಮಲಯವತಿ ಆತ್ಮಹತ್ಯೆಗೆ ನಿರ್ಧರಿಸುತ್ತಾಳೆ. ಇದನ್ನು ಜೀ. ವಾ. ತಡೆಯುತ್ತಾನೆ ಹಾಗೂ ಅವಳಿಗೆ ತನ್ನ ಅಚಲ ಪ್ರೇಮದ ಭರವಸೆ ನೀಡುತ್ತಾನೆ. ಕಡೆಗೆ ಗೊಂದಲಗಳು ಪರಿಹಾರವಾಗಿ ಇಬ್ಬರೂ ವಿವಾಹವಾಗುತ್ತಾರೆ.

ಮುಂದೆ ಜೀ.ವಾ. ಮತ್ತು ಮಿತ್ರವಸು ಸಮುದ್ರ ತೀರದಲ್ಲ್ಲಿ ಸಂಚರಿಸುತ್ತಿರುವಾಗ ಅನೇಕ ಸರ್ಪಗಳ ಮೂಳೆಗಳನ್ನು ಕಾಣುತ್ತಾರೆ. ಏನೆಂದು ವಿಚಾರಿಸುವಾಗ ಪ್ರತಿ ದಿನವೂ ಗರುಡನಿಗೆ ಒಂದು ನಾಗನ ಬಲಿ ಕೊಡಬೇಕಾಗಿರುತ್ತದೆ. ಅಂದು ಬಲಿಯಾಗಬೇಕಾಗಿದ್ದ ನಾಗ ಶಂಖಚೂಡನ ತಾಯಿ ರೋಧಿಸುತ್ತಿರುತ್ತಾಳೆ. ಇದನ್ನು ಕಂಡ ಜೀ. ವಾ.ನು ಶಂಖಚೂಡನ ಜಾಗದಲ್ಲಿ ತಾನೇ ಹೋಗಿ ಕುಳಿತುಕೊಳ್ಳುತ್ತಾನೆ. ಗರುಡನು ತನ್ನ ಕೊಕ್ಕಿನಿಂದ ಜೀ. ವಾ. ನನ್ನು ಮಲಯ ಪರ್ವತಕ್ಕೆ ಎತ್ತೊಯ್ದು ತಿನ್ನಲು ಆರಂಭಿಸುತ್ತಾನೆ. ಜೀ. ವಾ. ತಿರುಗಿ ಬರದಾಗ ತೀವ್ರ ಕಳವಳಕ್ಕೊಳಗಾಗುವ ಜೀಮೂತಕೇತು ಹಾಗೂ ವಿಶ್ವವಸು,  ಜೀ. ವಾ. ನ ರಕ್ತಸಿಕ್ತ  ಚೂಡಾಮಣಿ ಸಿಕ್ಕಾಗ ಅವನನ್ನು ಹುಡುಕಲು ಹೊರಡುತ್ತಾರೆ.  ಅಷ್ಟರಲ್ಲೇ ನಾಗ ಶಂಖಚೂಡನಿಂದ  ವಿಷಯ ತಿಳಿದು ಮಲಯ ಪರ್ವತಕ್ಕೆ ಹೋಗುತ್ತಾರೆ. ಶಂಖಚೂಡನು ಗರುಡನಿಗೆ ಓರ್ವ ಮುಗ್ಧ ದಯಾಳುವಾದ ವ್ಯಕ್ತಿಯನ್ನು ನೀನು ಬಲಿ ತೆಗೆದುಕೊಂಡಿರುವೆ ಎಂದು ಹೇಳುತ್ತಾನೆ. ಇದರಿಂದ ಗರುಡನಿಗೂ ಪಶ್ಚಾತ್ತಾಪವಾಗುತ್ತದೆ. ಇದೇ ವೇಳೆ ಜೀಮೂತಕೇತು ಹಾಗೂ ವಿಶ್ವವಸು ಇತ್ಯಾದಿ ಜೀ. ವಾ. ನ ಹತ್ತಿರದವರು ಆತ್ಮಹತ್ಯೆಗೆ  ನಿರ್ಧರಿಸುತ್ತಾರೆ.

ಇಷ್ಟೆಲ್ಲಾ ಆಗುವಷ್ಟರಲ್ಲಿ ಗೌರಿ ಪ್ರತ್ಯಕ್ಷಳಾಗಿ ತನ್ನ ದೈವಶಕ್ತಿಯಿಂದ ಜೀ.ವಾ.ನನ್ನು ಮತ್ತೆ ಬದುಕಿಸುತ್ತಾಳೆ. ಗರುಡನಿಂದ ಹತವಾದ ನಾಗಗಳನ್ನೂ ಸಹ ಬದುಕಿಸುತ್ತಾಳೆ. ಗರುಡನು ತಾನು ಇನ್ನು ಮುಂದೆ ನಾಗಗಳನ್ನು ಬಲಿ  ತೆಗೆದುಕೊಳ್ಳುವುದಿಲ್ಲವೆಂದು ಪ್ರತಿಜ್ಞೆ ಮಾಡುತ್ತಾನೆ. ಗೌರಿಯು ಜೀ.ವಾ. ನನ್ನು ವಿದ್ಯಾಧರ ರಾಜ್ಯದ ದೊರೆಯೆಂದು ಘೋಷಿಸುತ್ತಾಳೆ.

ಬೌದ್ಧ ಧರ್ಮದ ಹಿನ್ನೆಲೆ ಈ ಕಥೆಗೆ ಇರುವ ವಿಚಾರ ನನಗೆ ತಿಳಿದಿರಲಿಲ್ಲ. ಬೋಧಿಸತ್ತ್ವ ಎಂದರೆ ಬುದ್ಧನಾಗುವ ಮೊದಲು ತಾಳಬೇಕಾದ ಕಡೆಯ ಜನ್ಮವೆಂದೂ, ಬೋಧಿಸತ್ತ್ವನು ಅನೇಕ ಜನ್ಮಗಳಲ್ಲಿ ನಡೆಸುವ ಕರ್ಮಗಳು  ಬುದ್ಧನಾಗುವ ಮಾರ್ಗದಲ್ಲಿ ಇಡುವ ಒಂದೊಂದೇ ಹೆಜ್ಜೆಗಳೆಂದೂ, ಇಂತಹ ಹೆಜ್ಜೆಗಳನ್ನು  ಪರಿಚಯಿಸುವುದೇ ಜಾತಕ ಕತೆಗಳ ಉದ್ದೇಶವೆಂದೂ  ನನಗಾಗ ಅಂದರೆ ಜೀ.ವಾ. ನ ಕಥೆ ಓದುವ ಸಮಯದಲ್ಲಿ ತಿಳಿದಿರಲಿಲ್ಲ. ಹಾಗೆಯೇ ಅವದಾನವೆಂದರೆ ಯಾವುದೇ ವ್ಯಕ್ತಿ ಬುದ್ಧನ ಹೆಸರಿನಲ್ಲಿ ತನ್ನ ಜೀವನದಲ್ಲಿ ಕೈಗೊಳ್ಳುವ ಧಾರ್ಮಿಕ /ನೈತಿಕ ಘನಕಾರ್ಯ.  ಅಂತಹ ಕಾರ್ಯವು ಯಾವುದೋ ತ್ಯಾಗವೋ , ಇಲ್ಲವೇ ಯಾವುದೋ ಸ್ಥೂಪ ಇತ್ಯಾದಿಗಳ ನಿರ್ಮಾಣವೋ, ಪೂಜಾ ಕಾರ್ಯಗಳೋ  ಇರಬಹುದು. ಇಂತಹವುಗಳ ಅಭಿವ್ಯಕ್ತಿ ಅವದಾನ ಕಥೆಗಳಲ್ಲಿರುತ್ತದೆ. ಕಪ್ಪು ಕೃತ್ಯಗಳ ಫಲ ಕಪ್ಪೆಂದೂ ಶ್ವೇತ ಕೃತ್ಯಗಳ ಫಲ ಶ್ವೇತವೆಂದೂ ಸಾರುವುದು ಈ ಅವದಾನ ಕಥೆಗಳ ಉದ್ದೇಶ. ಅದಕ್ಕೆಂದೇ ಈ ಕಥೆಗಳನ್ನು ಬೌದ್ಧ ಧರ್ಮದಲ್ಲಿ  ಕರ್ಮ ("ಕಮ್ಮ") ಕಥೆಗಳೆಂದು  ಕರೆಯುತ್ತಾರೆ.

ಬಾಲ್ಯದಲ್ಲಿ ಮೆಚ್ಚಿದ ಕಥೆಯೊಂದರ ಬೆನ್ನು ಹತ್ತಿದಾಗ ಇಷ್ಟೆಲ್ಲಾ ವಿಷಯ ತಿಳಿದು ಬಂತು. ಹಾಗೆ ಭಾರತೀಯ ಸಂಸ್ಕೃತಿಯಲ್ಲಿ ನೀತಿ ಕತೆಗಳ ದೊಡ್ಡ ಭಂಡಾರವೇ ಇದೆ. ನಮ್ಮ ಬಾಲ್ಯಕಾಲದಲ್ಲಂತೂ ಇಂತಹ ಕತೆಗಳು ನಿತ್ಯ ಜೀವನದ ಅಂಗವೇ ಆಗಿದ್ದವು. ಈ ಕತೆಗಳ ಧಾರ್ಮಿಕ ಆಯಾಮ ಏನೇ ಇರಲಿ, ಕಲ್ಪನೆಯ ದೃಷ್ಟಿಯಿಂದ, ಹಾಗೂ ಅವುಗಳು ಒಳಗೊಳ್ಳುವ ಸರಳ ಸಾರ್ವಕಾಲಿಕ  ಸತ್ಯಗಳ ದೃಷ್ಟಿಯಿಂದ ಇಂತಹ ಕತೆಗಳು ಇಂದಿಗೂ ಪ್ರಸ್ತುತವೇ.

"ಜೀಮೂತವಾಹನನ ಕಥೆ" ಯ ಬಗ್ಗೆ ಇನ್ನಷ್ಟು ತಿಳಿಯುವ ಕುತೂಹಲ ಇದ್ದರೆ, ಕೆಳಕಂಡ ಕೊಂಡಿಯನ್ನು ಕ್ಲಿಕ್ಕಿಸಿ-
http://goo.gl/0Rhah





Saturday, July 28, 2012

ಶಿಕಾರಿ - ಸಂಕೀರ್ಣ ಕನ್ನಡ ಕಾದಂಬರಿ

ಸುಮಾರು ಮುವ್ವತ್ತು  ವರುಷಗಳ ಹಿಂದೆ ಒಮ್ಮೆ ಓದಿದ್ದ ಯಶವಂತ ಚಿತ್ತಾಲರ 'ಶಿಕಾರಿ' ಕಾದಂಬರಿಯನ್ನು ಇದೀಗ ಮತ್ತೆ ಓದಿ ಮುಗಿಸಿದೆ. ಮೊದಲ ಸಲ ಈ ಕಾದಂಬರಿ ಓದುವಾಗ ಬಹುಶಃ ಹೈಸ್ಕೂಲಿನಲ್ಲಿ ಇದ್ದಿರಬೇಕು. ನನಗೆ ನೆನಪಿರುವಂತೆ ಓದಿ ಆದ ಮೇಲೆ ಹಲವಾರು ದಿನ ವಾರಗಳವರೆಗೆ ಕಥಾನಾಯಕ ನಾಗಪ್ಪನೇ  ಆವಾಹನೆಯಾದಂತೆ ಕನಿಷ್ಟ ನಿಷ್ಟುರಗಳಿಗೂ  ಅವಮಾನಗಳಿಗೂ ಮನೋವೈಜ್ಞಾನಿಕ ಕಾರಣಗಳನ್ನೇ ಆರೋಪಿಸುತ್ತ, ಅದಕ್ಕೆ ಕಾರಣವಾದವರನ್ನೆಲ್ಲ ನಾಗಪ್ಪನದೇ ವಿಶಿಷ್ಟ ಶೈಲಿಯಲ್ಲಿ ಮನದಲ್ಲೇ ಬೈದುಕೊಂಡು ಓಡಾಡಿದ್ದೂ ಉಂಟು.

ಈಗನಿಸುವುದೆಂದರೆ, ಇಂಥದೊಂದು ಅಪರೂಪದ ಅದ್ಭುತವಾದ ಕಾದಂಬರಿಯ ಸಂಪೂರ್ಣ ರುಚಿ ಸಿಗಬೇಕಂದರೆ ಸ್ವಲ್ಪ ಮಟ್ಟಿನ  ಅನುಭವ, ಅಧ್ಯಯನ, ಅಭಿರುಚಿ ಬೇಕು. ಈ ಕಾದಂಬರಿ ಅಂತಲೇ ಅಲ್ಲ, ಯಾವುದೇ ಉತ್ತಮ ಕೃತಿಯ ಓದಿಗೆ ಆಸ್ವಾದನೆಗೆ ಸ್ವಲ್ಪ ಮಟ್ಟಿನ ಶ್ರಮ ಬೇಕಾಗುತ್ತದೆ. ಇಲ್ಲವಾದಲ್ಲಿ ಕೃತಿಯ ಸಂಕೀರ್ಣತೆಗಳು ಸೂಕ್ಷ್ಮಗಳು ದಕ್ಕದೇ ಹೋಗಬಹುದು. ಅದೇ ಸಮಯದಲ್ಲಿ ಇದೇ ಶ್ರಮದ ಕಾರಣಕ್ಕಾಗಿಯೇ ಇಂಥ ಕೃತಿಗಳು ತರುವ ಅನುಭವ, ತಾಕುವ ಬಗೆಯೇ ಭಿನ್ನ. ವಿಷಾದದ ಸಂಗತಿಯೆಂದರೆ ಕನ್ನಡದ ಇಂತಹ ಉತ್ತಮ ಕೃತಿಗಳು ಬಹಳ ಮಟ್ಟಿಗೆ ನಮ್ಮ ಸಾಹಿತ್ಯ ವಲಯದಲ್ಲಿ ಎಲೆ ಮರೆಯ ಕಾಯಿಗಳಾಗಿಯೇ ಉಳಿದುಬಿಟ್ಟಿರುವುದು.

ಪಾಶ್ಚಾತ್ಯರಲ್ಲಿ ಜನಪ್ರಿಯವಾದ ಮನೋವಿಶ್ಲೇಷಣೆಯ ಒಂದು ನಮೂನೆ ಶಿಕಾರಿಯ ಕಥಾ ಹಂದರದಲ್ಲಿ ಕಾಣಸಿಗುತ್ತದೆ. ಅದೇನೆಂದರೆ ವ್ಯಕ್ತಿಯ ಸದ್ಯದ ಪ್ರವೃತ್ತಿಗಳ ಕಾರಣವನ್ನು ಅವರ ಬಾಲ್ಯದ ಅನುಭವಗಳು ಮತ್ತು ತನ್ಮೂಲಕ ರೂಪಿತವಾದ ಅವರ ವ್ಯಕ್ತಿತ್ವದಲ್ಲಿ ಹುಡುಕುವುದು. ನಾಗಪ್ಪನೂ ತನ್ನ ಬಾಲ್ಯ ಕಾಲದ ಅನುಭವಗಳಿಂದ ರೂಪಿತವಾದ ವ್ಯಕ್ತಿತ್ವದಲ್ಲಿ ಸಿಲುಕಿಕೊಂಡು ಆ ಕಾರಣಕ್ಕಾಗಿಯೇ ಹತಾಶೆ ನೋವಿಗೆ ತುತ್ತಾದವನು ತನ್ನ ವೃತ್ತಿ ಜೀವನದಲ್ಲಿ ಆಕಸ್ಮಿಕವಾಗಿ ಬಂದೊದಗುವ ಸವಾಲಿನಿಂದ ಎಚ್ಚರಗೊಂಡು  ತನ್ನ ಆಳದ ವ್ಯಕ್ತಿತ್ವವನ್ನು ಸ್ವಯಂ ಪರೀಕ್ಷೆಗೆ ಒಡ್ಡಿ ಹೊಸದೊಂದು  ವ್ಯಕ್ತಿತ್ವವನ್ನು ಪಡೆಯಲು ನಿರ್ಧರಿಸಿ ಅದರಲ್ಲಿ ಯಶಸ್ವಿಯಾಗುವುದೇ ಕಥೆಯ ಮುಖ್ಯ ಸಾರ.

ಎಲ್ಲ ಶ್ರೇಷ್ಟ ಕೃತಿಗಳಂತೆಯೇ ಶಿಕಾರಿ ಸಹ ಹಲವು ಮೂಲಭೂತ ಪ್ರಶ್ನೆಗಳನ್ನೆತ್ತಿ ಉತ್ತರಗಳನ್ನೂ ಒದಗಿಸುತ್ತದೆ. ಎಲ್ಲಿಯೂ ನೇರ ತತ್ತ್ವ ಬೋಧನೆಯ ಛಾಪು  ಕಾಣದಿದ್ದರೂ ನಾಗಪ್ಪನು ಆಗಿಂದಾಗ ತನ್ನದೇ ವಿಶಿಷ್ಟ ಶೈಲಿಯಲ್ಲಿ ಬರೆದುಕೊಳ್ಳುವ ಟಿಪ್ಪಣಿಗಳಲ್ಲಿ ವೈಚಾರಿಕ  ದೃಷ್ಟಿಕೋನಗಳು ಕಾಣಸಿಗುತ್ತವೆ.  ಅಧ್ಯಾಯ ಹನ್ನೆರಡರಲ್ಲಿ ಬರುವ ಟಿಪ್ಪಣಿ ಹದಿನಾಲ್ಕು ಹೀಗಿದೆ:  "ಮನುಷ್ಯನಿಗೆ, ತನ್ನ ಮನಸ್ಸಿನ ಆರೋಗ್ಯಕ್ಕೆ, ತನ್ಮೂಲಕ ಹುಟ್ಟುವ ಅವನ ಕ್ರಿಯೆಯ ಆರೋಗ್ಯಕ್ಕೆ ಈ ಕೇಂದ್ರದ ಸಂಪರ್ಕ ಅತ್ಯವಶ್ಯಕ. ಈ ಕೇಂದ್ರಕ್ಕೆ ಜೀವವಿಕಾಸದ ದೀರ್ಘಕಾಲದ ಇತಿಹಾಸದಲ್ಲಿ ಹುಟ್ಟಿಕೊಂಡ ಪ್ರವೃತ್ತಿ ಬಲವಿದೆ. ಹಗೆಯ ವಿರುದ್ಧ ಹೋರಾಡುವ, ಜೀವನ ರಕ್ಷಿಸಿಕೊಳ್ಳುವ ಪ್ರಾಣಿಗಳ ನೈಸರ್ಗಿಕ ಜಾಣತನದಂತೆಯೇ ಮನುಷ್ಯನಿಗೇ ವಿಶಿಷ್ಟವಾದ ಸೃಜನಶೀಲತೆ, ನೈತಿಕತೆ ಇವು ಕೂಡ ಈ ಕೆಂದ್ರದಲ್ಲೇ ಜನಿಸಿದವುಗಳು. ಮನುಷ್ಯನ ಸಾಮಾಜಿಕ ಜೀವನದಲ್ಲಿಯ ಇಂದಿನ ಅಧೋಗತಿಗೆ ಮುಖ್ಯ ಕಾರಣ ಇದೇ ಎಂದು ನನ್ನ ನಂಬಿಕೆ: ಈ ಸೃಷ್ಟಿಗೆ ಮೂಲವಾದ, ನೀತಿಗೆ ಮೂಲವಾದ ಈ ಪ್ರವೃತ್ತಿ ಬಲವಿದ್ದ ಮನಸ್ಸಿನ ಕೇಂದ್ರದ ಸಂಪರ್ಕ ಕಳೆದುಕೊಂಡದ್ದು. ಇಂದಿನ ರಾಜಕಾರಣ ಈ ದುರಂತಕ್ಕೆ ಒಳ್ಳೆಯ ದೃಷ್ಟಾಂತ: ರಾಜಕಾರಣದ ಭ್ರಷ್ಟಾಚಾರದ ಮೂಲ ಹುಡುಕಬೇಕಾದರೆ ಆಧುನಿಕ ಔದ್ಯೋಗೀಕರಣದಿಂದಾಗಿ  ಒದಗಿದ ಸೃಜನಶೀಲತೆಯ, ಆದ್ದರಿಂದಲೇ ನೈತಿಕತೆಯ ನಷ್ಟಕ್ಕೇ ಬರಬೇಕು."

ನನ್ನ ಮಟ್ಟಿಗಂತೂ ಶಿಕಾರಿ ಕನ್ನಡದ ಅತ್ಯುತ್ತಮ ಕಾದಂಬರಿಗಳಲ್ಲೊಂದು.