Sunday, November 10, 2013

ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಮಸೂದೆ

ಇತ್ತೀಚೆಗೆ ಮಹಾರಾಷ್ಟ್ರದ ಮೂಢನಂಬಿಕೆ ವಿರೋಧಿ ಕಾರ್ಯಕರ್ತ ನರೇಂದ್ರ ದಾಬ್ಹೊಲ್ಕರ್  ಅವರ ಹತ್ಯೆ ಹಾಗೂ ಅದಾಗಿ ನಾಲ್ಕೇ ದಿನಗಳಲ್ಲಿ ಮಹಾರಾಷ್ಟ್ರ ಸರ್ಕಾರವು "ಮೂಢನಂಬಿಕೆಗಳು ಹಾಗೂ ಬ್ಲ್ಯಾಕ್ ಮ್ಯಾಜಿಕ್ ನಿಷೇಧ" ಕ್ಕಾಗಿ ಜಾರಿಗೊಳಿಸಿದ ಸುಗ್ರೀವಾಜ್ಞೆಯ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಸಹ ಈ ದಿಸೆಯಲ್ಲಿ ಕ್ರಮ ತೆಗೆದುಕೊಳ್ಳುವಲ್ಲಿ ಮುಂದಾಯಿತು.

‘ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಮಸೂದೆ’ ಗೆ ಸಂಬಂಧಪಟ್ಟಂತೆ ಸಲಹಾಪಟ್ಟಿಯನ್ನು ಸಿದ್ಧಪಡಿಸಿ ಕೊಡುವಂತೆ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ಮತ್ತು ಹುಬ್ಬಳ್ಳಿಯ ರಾಜ್ಯ ಕಾನೂನು ವಿಶ್ವವಿದ್ಯಾಲ­ಯಗಳಿಗೆ ರಾಜ್ಯ ಸರ್ಕಾರ ಕೋರಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಈಗಾಗಲೇ ರಾಷ್ಟ್ರೀಯ ಕಾನೂನು ಶಾಲೆ ಸಲ್ಲಿಸಿರುವ  ಕರಡು ಭಾರೀ ಚರ್ಚೆಗೆ ವಿರೋಧಕ್ಕೆ ಒಳಗಾಗಿದೆ.

ರಾಷ್ಟ್ರೀಯ ಕಾನೂನು ಶಾಲೆ ಇನ್ನೂ ಹಲವು ಪ್ರಜ್ಞಾವಂತರೊಡನೆ ಸಮಾಲೋಚಿಸಿ ಸಿದ್ಧಪಡಿಸಿದ ಈ ಸಲಹಾಪಟ್ಟಿಯು  ಮೂಢನಂಬಿಕೆಗಳನ್ನಷ್ಟೇ ನಿಷೇಧಿಸುವ ಸಲಹೆ ಸೂಚನೆಗಳನ್ನು ನೀಡಿದೆಯಾದರೂ ವ್ಯಕ್ತವಾಗುತ್ತಿರುವ ವಿರೋಧ ಅದರಲ್ಲೂ ವಿಶೇಷವಾಗಿ ಈ ಹಿಂದೆ ಅಧಿಕಾರದಲ್ಲಿದ್ದ ವಿರೋಧ ಪಕ್ಷದ ನಾಯಕರ ಆಕ್ರೋಶಭರಿತ ಪ್ರತಿಕ್ರಿಯೆಗಳು ಅಚ್ಚರಿ ಮೂಡಿಸುತ್ತವೆ.

ಇಲ್ಲಿ ನಂಬಿಕೆ - ಮೂಢನಂಬಿಕೆಗಳ ನಡುವೆ ವ್ಯತ್ಯಾಸವೇ ಇಲ್ಲವೇ ಎಂಬ ಪ್ರಶ್ನೆ ಏಳುತ್ತದೆ. ಮೂಢನಂಬಿಕೆಗಳ ಹಕ್ಕಿಗಾಗಿ ಇಷ್ಟೊಂದು ಜನ ಆವೇಶದ ದನಿ ತೆಗೆಯುತ್ತಿರುವುದು ಆಶ್ಚರ್ಯ ತರುತ್ತದೆ.  ಈ ಕರಡು ಮಸೂದೆಯ ವಿಚಾರವಾಗಿ ಪ್ರತಿಕ್ರಯಿಸಿರುವ ನಾಡಿನ ಹಲವು ಗಣ್ಯರ ಅಭಿಪ್ರಾಯಗಳು ಇಂದಿನ ಪ್ರಜಾವಾಣಿಯ ಲೇಖನದಲ್ಲಿವೆ.

ನಾಡಿನಲ್ಲಿ ಇಂತಹ ಸನ್ನಿವೇಶಗಳು ಏರ್ಪಟ್ಟ ಸಂದರ್ಭಗಳಲ್ಲೆಲ್ಲ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಪ್ರತಿಕ್ರಯಿಸುತ್ತ ವೈಚಾರಿಕ ಪ್ರಜ್ಞೆಯನ್ನು ಸದಾ ಜಾಗೃತಗೊಳಿಸುತ್ತಿದ್ದ ಒಬ್ಬ ಸಂವೇದನಾಶೀಲ ಲೇಖಕ - ಸಂಪಾದಕ ನೆನಪಿಗೆ ಬರುತ್ತಾರೆ. ಅಲ್ಲಿಯವರೆಗೆ ಅಥವಾ ಅಲ್ಲಿಂದೀಚೆಗೆ ಬೇರೆ ಇನ್ನಾವುದೇ ಪತ್ರಕರ್ತನಲ್ಲಿ ಕಂಡುಬರದ ತೀರ ವೈಯಕ್ತಿಕವೆನಿಸುವ ನುಡಿ ಕಟ್ಟಿನಲ್ಲಿ ಬರೆದ ಲಂಕೇಶರು ತಮ್ಮ ವ್ಯಂಗ್ಯ ತಮಾಶೆಗಳೊಂದಿಗೇ ನೀಡುತ್ತಿದ್ದ ಶಾಕ್  ನಮ್ಮ ಎಷ್ಟೋ ಮಂದಿ ಸಾರ್ವಜನಿಕ ವ್ಯಕ್ತಿಗಳನ್ನು ಒಂದಷ್ಟು ಹದ್ದುಬಸ್ತಿನಲ್ಲಿ ಇಡುವಷ್ಟು ಶಕ್ತವಾಗಿರುತ್ತಿತ್ತು.

ದೇವರು ಧರ್ಮ ಜಾತಿಗಳಿಂದ ಆಚೆಯೇ ಸದಾ ಉಳಿದ ಲಂಕೇಶರು ಜಾತ್ಯಾತೀತ ನಿಲುವಿನಿಂದ ಪ್ರಜಾ ಪ್ರಭುತ್ವದ ಆಶಯಗಳಿಂದ ಎಂದೂ ಹೊರಗುಳಿದವರಲ್ಲ. ಅವರು ವ್ಯಕ್ತಪಡಿಸುತ್ತಿದ್ದ ವಿಚಾರಗಳು ಲಕ್ಷಾಂತರ ಓದುಗರು ತಮ್ಮ ಆಲೋಚನೆಯ ದಿಕ್ಕನ್ನು ವಿಮರ್ಶೆಗೆ ಒಡ್ಡಿಕೊಳ್ಳುವಂತೆ ಇರುತ್ತಿದ್ದವು.

ಲಂಕೇಶ್ ಕಣ್ಮರೆಯಾಗಿ ಹದಿಮೂರು ವರುಶಗಳು ಕಳೆದಿವೆ. ಮೂಢನಂಬಿಕೆ ಪವಾಡ ಜ್ಯೋತಿಷ್ಯ ಇಂತವೇ ಎಲ್ಲೆಡೆ ರಾರಾಜಿಸುತ್ತಿರುವ  ಸಂದರ್ಭದಲ್ಲಿ ಲಂಕೇಶರ ಟೀಕೆ-ಟಿಪ್ಪಣಿ ಪುಸ್ತಕ ತೆರೆದು ಅವರು ಅದೆಷ್ಟೋ ವರುಶಗಳ ಹಿಂದೆ ಬರೆದ ಲೇಖನಗಳನ್ನು ಓದುತ್ತಿದ್ದರೆ ಅವರ ಅಭಿಪ್ರಾಯಗಳು ಇಂದಿಗೂ ಎಷ್ಟು ಪ್ರಸ್ತುತ ಎನಿಸುತ್ತದೆ.  ನಮ್ಮ ಸಮಾಜ ಬದಲಾಗಲೇ ಇಲ್ಲವೇ. ಅಥವಾ ಎಲ್ಲ ಉತ್ತಮ ಸಾಹಿತ್ಯದಂತೆ ಲಂಕೇಶರು ಬರೆದದ್ದೂ ಓದುಗರಾದ ನಮ್ಮಲ್ಲಿ ಬೆಳೆಯುತ್ತಲೇ ಹೋಯಿತೇ? ಎರಡೂ ನಿಜವಿರಬಹುದು.

ಮೂವತ್ತು ವರುಷಗಳ ಹಿಂದೆ "ದೇವರನ್ನು ಕುರಿತು" ಎಂಬ ಲೇಖನದಲ್ಲಿ ಹೀಗೆ ಬರೆಯುತ್ತಾರೆ-

"ದೇವರಿದ್ದಾನೆ ಅಥವಾ ಇಲ್ಲ ಎಂಬ ಪ್ರಶ್ನೆಗೆ ಹೋಗದೆ ಮನುಷ್ಯನಾದವನು ಈ ಜೀವನ ನಡೆಸಲು ಪಡೆಯಬೇಕಾದ ಸ್ಪಷ್ಟತೆಯ ಬಗ್ಗೆ  ಹೇಳುತ್ತೇನೆ.

ನಮ್ಮ ಹಳ್ಳಿ, ನಗರಗಳ ತಾಯಂದಿರು, ಮುದ್ದು ಮಗುವಿನ ಕಾಯಿಲೆಗೆ ಗುಳಿಗೆ ಕೊಡಲು ಹಣವಿಲ್ಲದ ಬಡವರು ಈ ದೇವರುಗಳ ಬಗ್ಗೆ ತಪ್ಪು ತಿಳಿದಿದ್ದಾರೆ. ಗೇಣು ಬಟ್ಟೆಗೆ ಗತಿ ಇಲ್ಲದ ಜನ ಈ ಸುಡುಗಾಡು ದೇವರುಗಳಿಗೆ ಕಾಣಿಕೆ ಕೊಟ್ಟು ಬಸವಳಿದು ಹೋಗಿದ್ದಾರೆ. "

ಇದೇ ಲೇಖನದಲ್ಲಿ ತಮ್ಮ ಮೆಚ್ಚಿನ (ನಾನೂ ಮೆಚ್ಚುವ) ಅಲ್ಬರ್ಟ್ ಕಾಮುವಿನ ಕಾದಂಬರಿ 'ಪ್ಲೇಗ್'ನ ಬಗ್ಗೆ ಬರೆಯುತ್ತ ಅದರಲ್ಲಿ ಬರುವ ಡಾಕ್ಟರ್ ಪಾತ್ರದ ಕುರಿತು ಹೀಗೆ ಬರೆಯುತ್ತಾರೆ-

"ದೇವರ ಬಗ್ಗೆ ಅತೀ ಗೌರವವಿಲ್ಲದ, ಮನುಷ್ಯ ಬದುಕಿನಿಂದ ಅತೀ ಅಪೇಕ್ಷೆ ಇಲ್ಲದ, ಸಾವಿನ ಬಗ್ಗೆ ಅತೀ ಆತುರವಿಲ್ಲದ, ಕರುಣೆ, ಪ್ರೀತಿ ತುಂಬಿದ ಈ ಡಾಕ್ಟರ ಪಾತ್ರವನ್ನು ಸೃಷ್ಟಿಸುವ ಮೂಲಕ, ಅಲ್ಜೀರಿಯದ ಆ ಪ್ಲೇಗ್ ಬಡಿದ ನಗರದ ನರನಾಡಿಗಳನ್ನು ಬಿಡದೆ ವರ್ಣಿಸುವ ಮೂಲಕ ಸಾಹಿತಿ ಕಾಮು ನಾವು ಜೀವನ ನಡೆಸಬೇಕಾದ ಶೈಲಿಯನ್ನು ದಾಖಲಿಸಿದ್ದಾನೆ."

ಇನ್ನು ಅದೇ ಸುಮಾರಿಗೆ ಲಂಕೇಶರು ಬರೆದ "ಧರ್ಮದ ಗಂಧವಿಲ್ಲದವರು" ಲೇಖನದಲ್ಲಿ ಗಾಂಧೀಜಿಯವರ ಧರ್ಮ ಕಲ್ಪನೆಯ ವಿಚಾರ ಬರುತ್ತದೆ.

"ಗಾಂಧೀಜಿ ಮೊದಲು ಈ ಜನಕ್ಕೆ ದುಡಿದುಣ್ಣುವ ರೀತಿಯ ಬಗ್ಗೆ, ಆತ್ಮ ಗೌರವದ ಮೂಲ ಪಾಠಗಳ ಬಗ್ಗೆ, ಬೇರೆ ಬೇರೆ ಧರ್ಮಗಳನ್ನು ಸಹಿಸುವ ಬಗ್ಗೆ, ಎಲ್ಲ ಧರ್ಮಗಳ ಮೂಲಕ್ಕಿರುವ ದಯೆ, ಕುತೂಹಲ, ಹೊಣೆಗಾರಿಕೆಯ ಬಗ್ಗೆ ಕಲಿಸತೊಡಗಿದರು. ಗಾಂಧೀಜಿ ಕಟ್ಟಬೇಕೆಂದಿದ್ದ  ಸುಖೀ ರಾಜ್ಯದಲ್ಲಿ ಧರ್ಮ ಖಾಸಗಿಯಾಗಬೇಕು, ಆಡಳಿತದ ಜವಾಬ್ದಾರಿ ಎಲ ಹೊಣೆಯರಿತ ಮಾನವರ ಮೇಲೆ ಬೀಳಬೇಕು, ಅಲ್ಲಿ ಜಾತೀಯತೆ ಕಂದಾಚಾರ, ಮೂಢನಂಬಿಕೆಗೆ  ಜಾಗವಿರಬಾರದು; ಈ ರಾಷ್ಟ್ರದ ಪ್ರತಿಯೊಬ್ಬನೂ ತನ್ನ ಕ್ರಿಯಾಶೀಲತೆಯಿಂದ ನಾಡಿನ ಮುನ್ನಡೆಗೆ ಕಾಣಿಕೆ ಸಲ್ಲಿಸುವಂತಾಗಬೇಕು. "

ಆದರೆ ಈಗಾಗುತ್ತಿರುವುದೇನು? ‘ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಮಸೂದೆ’ಯ ಕರಡಿನ ಪ್ರತಿ ಪ್ರಕಟವಾಗುತ್ತಿದ್ದಂತೆ ನಮ್ಮ ಮಾಜಿ ಮುಖ್ಯಮಂತ್ರಿಗಳೂ ಸದಾ ಹಸನ್ಮುಖಿಯೂ ಆದ   ರಾಜಕಾರಣಿಯೊಬ್ಬರು "ಈ ಮಸೂದೆಯು ಜನಗಳ ನಂಬಿಕೆಗಳಿಗೆ ವಿರೋಧವಾಗಿದೆ, ಯಾವ ಕಾರಣಕ್ಕೂ ಇದನ್ನು ವಿಧಾನ ಸಭೆಯ ಅಧಿವೇಶನದಲ್ಲಿ ಮಂಡನೆಯಾಗಲು ಬಿಡುವುದಿಲ್ಲ" ಎಂದು ಘರ್ಜಿಸಿದ್ದು ಸೋಜಿಗವಾಗಿತ್ತು. ದೇಶವನ್ನು "ಬೌಧ್ಧಿಕ ದಿವಾಳಿತನದಲ್ಲಿ, ವಿಜ್ಞಾನ ಹೀನ ದೈನೇಸಿ ಸ್ಥಿತಿಯಲ್ಲಿ, ಅವೈಚಾರಿಕ ಮೌಢ್ಯದಲ್ಲಿ ಇಡುವ" (ಲಂಕೇಶರ ನುಡಿಗಟ್ಟುಗಳು) ಕೆಲಸ ಇದಾಗುವುದಿಲ್ಲವೆ. ಮಸೂದೆಯನ್ನು ಮಂಡಿಸಿ ಆ ನಂತರ ಅದು ಏಕೆ ಬೇಡ ಎಂದು ವಿವರಿಸಬಹುದಲ್ಲವೆ.

ಕೊನೆಯದಾಗಿ, ಲಂಕೇಶರ ಇನ್ನೊಂದು ಲೇಖನವನ್ನು ಪ್ರಸ್ತಾಪಿಸಲೇಬೇಕು. ಇದು ತೊಂಬತ್ತರ ದಶಕದಲ್ಲಿ ಪ್ರಕಟವಾಗಿದ್ದ ಲೇಖನ. "ಹಾಲು ಮತ್ತು ಗಣಪತಿ' ಎನ್ನುವ ಶೀರ್ಷಿಕೆಯಲ್ಲಿ ಪ್ರಕಟವಾದ ಈ ಲೇಖನವೂ  ಮೂಢನಂಬಿಕೆಗೆ ಸಂಬಂಧಿಸಿದ್ದು. ೧೯೯೫ ರಲ್ಲಿ ಗಣಪತಿ ಹಾಲು ಕುಡಿದ ವಿಚಾರ ಎಲ್ಲೆಡೆ ಚರ್ಚಿತವಾದದ್ದು ಬಹಳ ಮಂದಿಗೆ ನೆನಪಿರಬಹುದು. ಇಂತದ್ದೊಂದು ಸನ್ನಿವೇಶ ಸೃಷ್ಟಿಯಾದದ್ದರ ಬಗ್ಗೆ ಲಂಕೇಶರ ಸಿಟ್ಟು, ದುಗುಡ ಪ್ರಕಟವಾಗಿದ್ದು ಹೀಗೆ-

"...ಮೊನ್ನೆ ಗುರುವಾರ ಹಾಲು ಭಾರತದ ದಿವಾಳಿತನಕ್ಕೆ, ಅಸಹಾಯತೆಗೆ ಸಂಕೇತವಾಯಿತು. ಕಳೆದ ಅರ್ಧ ಶತಮಾನದಷ್ಟು ಕಾಲ ಆರ್ಥಿಕ ನೆಮ್ಮದಿಗಾಗಿ ಕಾದು ಕುಳಿತ ಜನ ನಿರಾಶರಾಗಿದ್ದಾರೆ; ದೊಡ್ಡ ನಾಯಕನೊಬ್ಬ ಬರೀ ಕತೆ ಕಟ್ಟದೆ ಊಟ, ವಸತಿ, ಶಿಕ್ಷಣ, ತರಬೇತಿ ಎಲ್ಲವನ್ನು ಒದಗಿಸಿ ಈ ದೇಶವನ್ನು ಆಧುನಿಕಗೊಳಿಸಬಹುದೇ ಎಂದು ನಿರೀಕ್ಷಿಸಿದ್ದವರು ಕುಸಿದು ಕುಳಿತಿದ್ದಾರೆ... ಇಲ್ಲದಿದ್ದರೆ ಈ ಮರುಳತನವನ್ನು ಹೇಗೆ ವಿವರಿಸುವುದು? ... ಇಲ್ಲಿ ದುಡಿಯುವ ಕುಶಲತೆ ಮತ್ತು ಹೆಮ್ಮೆ, ನಮಗೆ ಬರಬೇಕಾದ್ದನ್ನು ಮಾತ್ರ ಆಶಿಸುವ ವಿನಯ, ನಮ್ಮ ಬದುಕನ್ನು ನಾವೇ ರೂಪಿಸಿಕೊಂಡ ಆತ್ಮ ಗೌರವ- ಯಾವುದಾದರೂ ಸಾಧ್ಯವೆ?"

ಇದೇ ಲೇಖನದಲ್ಲಿ ಜೀವನದ ನಿಜವಾದ ಪವಾಡ ಏನು ಎಂದು ಬೇರೆಯೇ ಒಂದು ದೃಷ್ಟಿಕೋನದಿಂದ ವಿವರಿಸುತ್ತ ನಮ್ಮನ್ನು ಚಕಿತಗೊಳಿಸುವುದು ಹೀಗೆ  -

"ನಿಜವಾದ ಪವಾಡ ವಿಜ್ಞಾನದ್ದು, ಈ ವಿಶ್ವದ್ದು. ನಾವು ಉಡಾಯಿಸಿದ ಕ್ಷಿಪಣಿ ಗ್ರಹವೊಂದು ನಮಗಾಗಿ ಕೆಲಸ ಮಾಡುತ್ತದೆ, ಲಕ್ಷಾಂತರ ಮೈಲಿಯಾಚೆಯ ಮುಖ ಇಲ್ಲಿ ಕಾಣುತ್ತೆ, ಧ್ವನಿ ಇಲ್ಲಿ ಕೇಳುತ್ತೆ ಎಂಬುದು ವಿಸ್ಮಯಕರ; ಹಾಗೆಯೇ ಮಾನವ ಇನ್ನೂ ಕಂಡುಕೊಳ್ಳದ ಅನೂಹ್ಯ ಸಂಗತಿಗಳು ಮನುಷ್ಯನ ವಿಧ್ಯುಕ್ತ ಕ್ರಿಯೆಗಳಲ್ಲಿ, ಅಂಧವೆನ್ನುವಂತೆ  ಕಾಣುವ ಆಚರಣೆಗಳಲ್ಲಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮನುಷ್ಯನ ವ್ಯಕ್ತಿತ್ವದಲ್ಲಿ ಇವೆ. ಭೂಮಿ, ಅದನ್ನೊಳಗೊಂಡ ವಿಶ್ವವನ್ನು ಶೋಧಿಸುತ್ತಿರುವ ಮಾನವ ತನ್ನ ವ್ಯಕ್ತಿತ್ವದ ಆಳಕ್ಕೆ ಹೋಗಿ ಹುಡುಕಿಲ್ಲ. ಶಾಪ, ಆಶೀರ್ವಾದ, ಚಟ, ಸೋಲು, ಗೆಲುವು, ಹೀಗೆ ನೂರಾರು ಸಂಕೇತಗಳ ಬೇರುಗಳನ್ನು ಪರೀಕ್ಷಿಸಿಲ್ಲ. ಈ ಸಂದರ್ಭದಲ್ಲಿ ಗಣಪತಿ ಹಾಲು ಕುಡಿಯುವುದು ಅಥವಾ ಕುಡಿಯದಿರುವುದು ನನಗಂತೂ ಹಾಸ್ಯಾಸ್ಪದ ಕ್ರಿಯೆ."

ಈ ನಿಜ ಪವಾಡಗಳ ಬಗೆಗೆ ಬೆರಗುಗೊಳ್ಳುವುದು ಸಾಧ್ಯವಾದಂದು  ಜನ ಸುಡುಗಾಡು ಸಿದ್ಧರ, ಬುಡುಬುಡಿಕೆಯವರ ಪವಾಡಗಳಿಗೆ ಮರುಳಾಗುವುದು ನಿಲ್ಲಬಹುದೇನೋ.

ಮೂಢನಂಬಿಕೆಗಳ ಗೂಡೇ ಆಗಿರುವ ನಮ್ಮ ದೇಶದಲ್ಲಿ ಸದ್ಯಕ್ಕಂತೂ ಪರಿಸ್ಥಿತಿ ಬದಲಾಗುವ ಯಾವುದೇ ಸೂಚನೆಗಳು ಕಾಣುತ್ತಿಲ್ಲ. ರಾಜಕಾರಣಿಗಳ ಸಾಮಾನ್ಯ ಗುಣವೆಂಬಂತೆ ತೋರುವ ಮೂಢನಂಬಿಕೆಗೆ ಹೊರತಾದವರೆಂಬ ಭಾವನೆಯನ್ನು ಆರಂಭದಲ್ಲೇ ಮೂಡಿಸಿದ ಸಿದ್ಧರಾಮಯ್ಯನವರು ಇಚ್ಛಾಶಕ್ತಿಯನ್ನು ಮೆರೆದು  ‘ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಮಸೂದೆ’ಯ ಬಗೆಗೆ ಆಸಕ್ತಿವಹಿಸಿ  ಇದಕ್ಕೊಂದು  ಕಾನೂನಿನ ರೂಪ ತರುವಲ್ಲಿ ಯಶಸ್ವಿಯಾಗುತ್ತಾರೆಂದು ಆಶಿಸೋಣ. ಯಾವುದೇ ಬದಲಾವಣೆಗೂ ಪ್ರತಿರೋಧ ಇದ್ದದ್ದೇ. ಅದರಲ್ಲೂ ಇಂತದ್ದೊಂದು ಬದಲಾವಣೆ ಖಂಡಿತಾ ಸುಲಭವಲ್ಲ. ಅವರ ಈ ಪ್ರಯತ್ನದಲ್ಲಿ ಎಲ್ಲ ವಿಚಾರವಂತರ ಬೆಂಬಲ ಇರಲಿ.


Sunday, October 20, 2013

ನೆನಪಿನ ಸರಕುಗಳು

ಮುಂದೆಂದೋ ಒಂದು ದಿನ ಉಪಯೋಗಕ್ಕೆ ಬಂದೀತು ಎಂದೋ ಅಥವಾ ಯಾವುದೋ ಸಂದರ್ಭ ಅಥವಾ ವ್ಯಕ್ತಿಯ ನೆನಪಿಗೆಂದೋ ಕಾಗದಗಳು ಹಾಗೂ ಚಿಕ್ಕ ಪುಟ್ಟ  ವಸ್ತುಗಳನ್ನು ಸಂಗ್ರಹಿಸಿಡುವ ಅಭ್ಯಾಸ ಎಷ್ಟು ಮಂದಿಗಿದೆಯೋ ಗೊತ್ತಿಲ್ಲ. ನನಗಂತೂ ಇಂತಹ ಅಭ್ಯಾಸ ಬಹಳ ಹಳೆಯದು. ವರ್ಷಗಳು ಕಳೆದಂತೆ ಸಂಗ್ರಹವೂ ಬೆಳೆಯುತ್ತ ಹೋಗುತ್ತಿದ್ದರೂ ಧಾವಂತದ ಬದುಕಿನಲ್ಲಿ ನೆನಪಿನ ಈ ಸರಕುಗಳತ್ತ ಕಣ್ಣು ಹಾಯುವುದೂ ಅಪರೂಪ.

ಹಳ್ಳಿಯ ಮನೆಯಲ್ಲಿರುವ  ಒಂದು ಬೀರು , ನಗರದ  ಮನೆಯಲ್ಲಿನ   ಪುಸ್ತಕದ ಬೀರು, ಮಲಗುವ ಕೋಣೆಯ  ಅಟ್ಟದಲ್ಲಿರುವ ರಟ್ಟಿನ ಪೆಟ್ಟಿಗೆಗಳು  ಹೀಗೇ ನೆನಪುಗಳ ಸರಕುಗಳ ಅಕ್ಷಯ ಪಾತ್ರೆಗಳು ಅನೇಕ. ಆದರೆ ಈ ಪೆಟ್ಟಿಗೆಗಳಲ್ಲೆಲ್ಲ  ಏನೇನು ಇದೆ ಎಂದು ನೆನೆದರೆ ನನಗೇ  ಸ್ಪಷ್ಟವಿಲ್ಲ. "ನೀವು ನೆನಪಿಗಾಗಿ ಯಾವ ಹಳೆಯ ವಸ್ತು/ಪುಸ್ತಕ ಇತ್ಯಾದಿ ಸಂಗ್ರಹಿಸಿದ್ದೀರಿ" ಎಂದು ಫೇಸ್ಬುಕ್ ನಲ್ಲಿ ಸಹಪಾಟಿಯೊಬ್ಬರು ನಮ್ಮ ಗೆಳೆಯರ ಗುಂಪಿಗೆ ಕಳಿಸಿದ ಸರಳ ಪ್ರಶ್ನೆನನ್ನನ್ನು ನನ್ನ ನೆನಪಿನ ಸರಕುಗಳ ಸಂಗ್ರಹದತ್ತ ಇಣುಕು ನೋಟ ಬೀರುವಂತೆ ಮಾಡಿತು.

ಹೈಸ್ಕೂಲ್ ದಿನಗಳಲ್ಲಿ ನಾನು ಓದಿ ಮುಗಿಸಿದ ಪುಸ್ತಕಗಳ ಪಟ್ಟಿ, ವೃತ್ತ ಪತ್ರಿಕೆಗಳಲ್ಲಿ ಬರುತ್ತಿದ್ದ ರಸ ಪ್ರಶ್ನೆಗಳ ಸಂಗ್ರಹ, ದಿನ ಪತ್ರಿಕೆಯಲ್ಲಿ ಬರುತ್ತಿದ್ದ ಸುಭಾಷಿತಗಳ ಸಂಗ್ರಹ, ಪ್ರತಿಯೊಂದು ಫುಟ್ ಬಾಲ್ ಹಾಗೂ ಕ್ರಿಕೆಟ್ ವಿಶ್ವ ಕಪ್ ಪಂದ್ಯಾವಳಿಗಳ ಹಿಂದಿನ ಏಳೆಂಟು ವಾರಗಳು 'ಸ್ಪೋರ್ಟ್ಸ್ ಸ್ಟಾರ್ ' ಎಂಬ ವೃತ್ತ ಪತ್ರಿಕೆಯಲ್ಲಿ ವಾರ  ವಾರವೂ ಪ್ರಕಟವಾಗುತ್ತಿದ್ದ 'ವಿಶ್ವ ಕಪ್ ವಿಶೇಷ' ಭಾಗಗಳ  ಸಂಗ್ರಹ, ಒಲಂಪಿಕ್ಸ್ ವಿಶೇಷ ಸಂಚಿಕೆಗಳು, ಹೈಸ್ಕೂಲ್ ದಿನಗಳಲ್ಲಿ ನಾನು ಓದುತ್ತಿದ್ದ ವಸತಿ ಶಾಲೆಯಲ್ಲಿ ಕಡ್ಡಾಯವಾಗಿ ಬರೆಯಬೇಕಿದ್ದ ದಿನಚರಿ ಪುಸ್ತಕಗಳು, ಎಸೆಸೆಲ್ಸಿ ಹಾಗೂ ಪಿಯುಸಿಯ ಸಮೂಹ ಚಿತ್ರಗಳು, ಶಾಲಾ ದಿನಗಳ ಭೂಪಟಗಳ  ಪುಸ್ತಕ, ಪಠ್ಯ ಪುಸ್ತಕಗಳು, ಬಹುಮಾನವಾಗಿ ಬಂದ ಕಥೆ ಪುಸ್ತಕಗಳು, ಹಾಡುಗಳನ್ನು  ಸಂಗ್ರಹಿಸಿರುವ ನೋಟ್ ಪುಸ್ತಕಗಳು, ಶಾಲಾ ದಿನಗಳ ಪ್ರವಾಸದ ನೋಟ್ ಪುಸ್ತಕಗಳು, ಶಾಲಾ ಕಾಲೇಜು ದಿನಗಳ ಹಸ್ತಾಕ್ಷರ ಪುಸ್ತಕಗಳು, ನಾನು ವಸತಿ ಶಾಲೆಯಲ್ಲಿದ್ದಾಗ  ಅಮ್ಮ ಬರೆಯುತ್ತಿದ್ದ ಕಾಗದಗಳು, ಕಾಲೇಜು ದಿನಗಳಲ್ಲಿ ರಜೆಯಲ್ಲಿ ಗೆಳೆಯರು ಬರೆದ ಕಾಗದಗಳು, ನಾನು ಮಾಧ್ಯಮಿಕ  ಶಾಲೆಯಲ್ಲಿದ್ದಾಗ ಬಹುಮಾನವಾಗಿ ಪಡೆದಿದ್ದ ಕನ್ನಡ ನಿಘಂಟು, ಆ ದಿನಗಳಲ್ಲಿ ನಾನು ಬಹುವಾಗಿ ಮೆಚ್ಚುತ್ತಿದ್ದ ಕ್ರಿಕೆಟ್, ಫುಟ್ ಬಾಲ್ ಹಾಗೂ ಟೆನಿಸ್ ತಾರೆಯರ ಪೋಸ್ಟರ್ ಗಳು, ಅಮೆರಿಕನ್ನರು ಇರಾಕಿನ ಮೇಲೆ ಮೊದಲ ಸಲ ದಾಳಿ ಮಾಡಿದಾಗ ಆಗಿನ ವೃತ್ತ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಚಿತ್ರಗಳ ಕಟಿಂಗ್ ಗಳನ್ನು ಸೇರಿಸಿ ನಾನು ತಯಾರಿಸಿದ್ದ ಒಂದು ಕೊಲಾಜ್, ಹೀಗೇ ಸರಕುಗಳ ಪಟ್ಟಿ ಮುಗಿಯುವುದೇ ಇಲ್ಲ -ಇವೆಲ್ಲ ಇರುವುದು ಹಳ್ಳಿ ಮನೆಯ ನನ್ನ ಕೋಣೆಯ, ನನ್ನ ಮಂಚಕ್ಕೆ ಹೊಂದಿಸಿರುವ ಬೀರುವಿನಲ್ಲಿ. ಒಮ್ಮೊಮ್ಮೆ ಇವನ್ನೆಲ್ಲ ನೋಡುತ್ತಾ ನನ್ನಷ್ಟಕ್ಕೇ ತಲೆಯಾಡಿಸುತ್ತೇನೆ ಮತ್ತು ಅದರಲ್ಲಿರುವಷ್ಟೂ ವಸ್ತುಗಳೇನೂ  ಅಗತ್ಯದ ಅನಿವಾರ್ಯದವುಗಳಲ್ಲ ಎಂದು ನಂಬುವಾಗಲೇ ಯಾವನ್ನು ಎಸೆಯಬಹುದು ಎಂದು ನಿರ್ಧರಿಸುವಲ್ಲಿ ಕಷ್ಟಪಡುತ್ತೇನೆ.

ಕ್ಷಮಿಸಿ, ಹಳ್ಳಿ ಮನೆಯಲ್ಲಿರುವ  ಸರಕುಗಳದ್ದೇ ಇಷ್ಟು ದೊಡ್ಡ ಪಟ್ಟಿ ಕೊಟ್ಟ ಮೇಲೂ ನಗರದ ಮನೆಯಲ್ಲಿ  ಈಚಿನ ವರ್ಷಗಳಲ್ಲಿ ಸಂಗ್ರಹಿಸಿರುವ  ಸರಕುಗಳ ಬಗ್ಗೆಯೂ ಒಂದಿಷ್ಟು ಹೇಳುವುದಿದೆ.  ಈ ಮನೆಯಲ್ಲಿ ಬೀರುವಿನ ತುಂಬಾ ಆಗೀಗ ಕೊಂಡ, ಓದಿದ ಓದದಿರುವ ಪುಸ್ತಕಗಳು, ತೊಂಬತ್ತರ ದಶಕದಲ್ಲಿ ಬರುತ್ತಿದ್ದ ಇಲ್ಲಸ್ಟ್ರೆಟೆಡ್  ವೀಕ್ಲಿ,  ಜಂಟಲ್ಮನ್  ಮೊದಲಾದ ವೃತ್ತ ಪತ್ರಿಕೆಗಳ ಆಯ್ದ ಕೆಲ ಸಂಚಿಕೆಗಳು, ಕನ್ನಡದ ಶ್ರೇಷ್ಟ ಪತ್ರಕರ್ತ, ಸಾಹಿತಿ ಲಂಕೇಶರು ಮೃತರಾದಾಗ ಅವರ ಪತ್ರಿಕೆಯ ಬಳಗ ಅವರ ನೆನಪಿಗಾಗಿ ಅದ್ಭುತವಾಗಿ ರೂಪಿಸಿದ್ದ ಸಂಚಿಕೆ "ಇಂತಿ ನಮಸ್ಕಾರಗಳು!", ಕೆಲ ವೈಯಕ್ತಿಕ ಪತ್ರಗಳು, ಕೆಲ ವರ್ಷಗಳ ಹಿಂದೆ ಮಗಳು ವಿವಾಹ ವಾರ್ಷಿಕೋತ್ಸವದಂದು ತಾನೇ ತಯಾರಿಸಿ ನೀಡಿದ ಕ್ರಿಯೇಟಿವ್ ಆಗಿರುವ ಗ್ರೀಟಿಂಗ್ ಕಾರ್ಡ್, ಮಗಳ ಬಾಲ್ಯದ ಕಲಾ ಸೃಷ್ಟಿ ಪ್ರಯತ್ನಗಳು, ಕಚೇರಿಯಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಸಹೋದ್ಯೋಗಿಗಳು ನೀಡಿರುವ ಕಿರು ಕಾಣಿಕೆಗಳು, ಕಚೇರಿಯವರು ನೀಡಿರುವ ಸಣ್ಣ ಪುಟ್ಟ ಉಡುಗೊರೆಗಳು, ಸೇವಾ ಶ್ಲಾಘನೆಯ ಫಲಕ, ಉಡುಗೊರೆಯಾಗಿ ಬಂದ  ಪುಸ್ತಕಗಳು, ಹೀಗೇ. ದುಬಾರಿ ಯಾವುದೂ  ಅಲ್ಲ. ಬೆಲೆಯೇನಿದ್ದರೂ ನೆನಪುಗಳ ದೃಷ್ಟಿಯಿಂದ.

ನನ್ನ ಬಳಿಯಿರುವ ಪುಸ್ತಕಗಳಲ್ಲಿ ಹಲವನ್ನಾದರೂ  ಈ  ಪುಸ್ತಕಗಳ ಉಪಯೋಗವಾಗಬಹುದಾದವರು ಯಾರಿಗಾದರೂ ಕೊಡುವ ಯೋಚನೆ ಇದೆ. ಇನ್ನುಳಿದ ವಸ್ತುಗಳು, ಕಾಗದಗಳು ಬಹುಶಃ ನನ್ನೊಂದಿಗೇ ಉಳಿದಾವು. ಇನ್ನಷ್ಟು ಸಮಯವಾದರೂ.

ಹೌದು, ಇವೆಲ್ಲಾ  ಸರಕುಗಳು  ಅಗತ್ಯವೇ ಎಂಬ ಪ್ರಶ್ನೆ ಇಂದಿನ ದಿನಗಳಲ್ಲಿ ಸಹಜವೇ. ಈಗೆಲ್ಲ Clutterfree, Lean Systems, Minimalism ಹೀಗೆ ಸರಳೀಕರಣದ ಭರಾಟೆ. ಆದರೂ ನೆನಪಿನ ಕಿರು ಸರಕುಗಳು (keepsakes, bits and pieces of paper, artifacts etc) ಒಂದು ರೀತಿಯಲ್ಲಿ ನಾವು ಸಾಗಿ ಬಂದ ಹಾದಿ, ಆಯ್ದುಕೊಂಡ ಆಯ್ಕೆಗಳು, ಮೆಚ್ಚುವ ಲೇಖನಗಳು, ಮೆಚ್ಚುವ ಸಂಗೀತ ಇವೆಲ್ಲದರ ಪ್ರತೀಕಗಳು. ಆದರಿಂದಲೇ ಅವನ್ನು ನಿರ್ದಾಕ್ಷಿಣ್ಯವಾಗಿ ಹೊರ ಹಾಕುವುದು ಕಠಿಣ. ನಿಜ, ಇಂತಹ ವಸ್ತುಗಳೇ ಇರದಾಗ ಮನೆ ಅಥವಾ ಅಪಾರ್ಟ್ಮೆಂಟ್ ಇನ್ನಷ್ಟು ಚೆನ್ನಾಗಿ ಕಾಣಬಹುದು.  ಆದರೆ ಅಲ್ಲಿ ಮೂಲಭೂತವಾಗಿ ನಮ್ಮನ್ನು ಬಿಂಬಿಸುವ, ಪ್ರತಿನಿಧಿಸುವ, ಒಳಗೊಳ್ಳುವ ಏನೂ ಇರುವುದಿಲ್ಲ.  ಯಾವುದೂ ನಿಶ್ಚಿತವಲ್ಲದ ಬದುಕಿನ ಯಾನದಲ್ಲಿ ನೆನಪಿನ ಸಣ್ಣ ಪುಟ್ಟ ಸರಕುಗಳ ಮೇಲಿನ ಮೋಹ ವಿಚಿತ್ರವೇ ಅನಿಸಿದರೂ ತರ್ಕವೊಂದೇ ಅಲ್ಲ ಎಲ್ಲವೂ, ಅಲ್ಲವೇ ?

ನನ್ನ ಸಂಗ್ರಹದಲ್ಲಿ ನಾನು ವಿಶೇಷವಾಗಿ ಪರಿಗಣಿಸುವ ವಸ್ತುಗಳಲ್ಲಿ ೧೯೯೯ರಲ್ಲಿ ಜಂಟಲ್ಮನ್ ಮ್ಯಾಗಜಿನ್ ಪ್ರಕಟಿಸಿದ ಎರಡು 'ಮ್ಯೂಸಿಕ್ ಸ್ಪೆಶಲ್ ' ಸಂಚಿಕೆಗಳು ಸಹ ಸೇರಿವೆ. ನನಗೆ ಪಾಶ್ಚಾತ್ಯ ಸಂಗೀತದ ಹಲವು ಪ್ರಕಾರಗಳಾದ ಪಾಪ್, ರಾಕ್, ಜಾಜ್ , ಕ್ಲಾಸಿಕಲ್ ಇತ್ಯಾದಿಗಳ  ಬಗೆಗೆ ಅರಿವು ಆಸಕ್ತಿ ಮೂಡಿಸಲು ಇವೇ ಸಂಚಿಕೆಗಳು ಮುಖ್ಯ ಕಾರಣವಾದವು. ಅಲ್ಲಿಂದೀಚೆಗೆ ನಾನು ಈ ಎಲ್ಲ ಸಂಗೀತ ಪ್ರಕಾರಗಳಲ್ಲಿ  ಸಂಗ್ರಹಿಸಿರುವ, ಮತ್ತು ಮೆಚ್ಚುವ  ಸಂಗೀತದ ಅಲ್ಬಮ್ ಗಳ ಬಗೆಗೆ ತಿಳಿಯುವ ಆಸಕ್ತಿಯಿದ್ದರೆ, ಈ ಕೊಂಡಿಯನ್ನು ಕ್ಲಿಕ್ಕಿಸಿ: My Music Lists.

Tuesday, May 07, 2013

ಅವಸ್ಥೆ - ಒಂದು ರಾಜಕೀಯ ಕಾದಂಬರಿ

ಮೂವತ್ತೈದು ವರ್ಷಗಳ ಹಿಂದೆ ಪ್ರಕಟವಾದ ಯು. ಆರ್. ಅನಂತಮೂರ್ತಿಯವರ 'ಅವಸ್ಥೆ' ಕಾದಂಬರಿ ಇಂದಿಗೂ ಪ್ರಸ್ತುತವಾಗಿಯೇ ಉಳಿದಿರುವುದು ಲೇಖಕರ ಪ್ರತಿಭೆಗೆ ಸಾಕ್ಷಿಯಾಗಿರುವಂತೆಯೇ ಮನುಷ್ಯನ ಮೂಲಭೂತ ಕಾಳಜಿ ಕಾತರಗಳ ಸ್ವರೂಪ ಕಾಲದಿಂದ ಕಾಲಕ್ಕೂ ಬದಲಾಗದೆ ಉಳಿಯುವ ವಾಸ್ತವಕ್ಕೂ ಸಾಕ್ಷಿಯಾಗುತ್ತದೆ. ಒಂದು ದೃಷ್ಟಿಯಿಂದ ಈ ಕಾದಂಬರಿ ಸ್ವಾತಂತ್ರ್ಯೋತ್ತರ ಭಾರತದ ರಾಜಕಾರಣದ ಚಿತ್ರವಾಗಿರುವಂತೆಯೇ ಇನ್ನೊಂದು ದೃಷ್ಟಿಯಿಂದ ನೋಡಿದರೆ ಕಾದಂಬರಿಯ ನಾಯಕ ಕೃಷ್ಣಪ್ಪ ಗೌಡ ತನಗೆ ಹುಟ್ಟಿನಿಂದ ಬಂದ ತನ್ನ ಜಾತಿ, ಆರ್ಥಿಕ ಸ್ಥಿತಿಗಳ ಮಿತಿಗಳನ್ನು ಮೀರುತ್ತ, ಆದರ್ಶಗಳ ಬೆನ್ನತ್ತಿ ಜೀವನದ ಸಂಕೀರ್ಣತೆಗಳಿಗೆ ಮುಖಾಮುಖಿಯಾಗುವ ಚಿತ್ರ ಕಾಣುತ್ತದೆ ಕಲಾತ್ಮಕತೆ ಮತ್ತು ವಿಚಾರವಂತಿಕೆಗಳ ತಾದಾತ್ಮ್ಯ ಸಾಧ್ಯವಾಗಿರುವ ಕಾರಣದಿಂದಲೇ 'ಅವಸ್ಥೆ' ಅಷ್ಟೇನೂ ಜನಪ್ರಿಯವಾಗದಿದ್ದರೂ ಒಂದು ಮುಖ್ಯ ಕಾದಂಬರಿಯಾಗಿದೆ.

ಕೆಲ ತಿಂಗಳ ಹಿಂದೆ ಯು. ಆರ್. ಅನಂತಮೂರ್ತಿಯವರು ಪ್ರತಿಷ್ಟಿತ 'ಅಂತರರಾಷ್ಟ್ರೀಯ ಬೂಕರ್' ಪ್ರಶಸ್ತಿಗೆ ನಾಮಕರಣಗೊಂಡ ಸಂದರ್ಭದಲ್ಲಿ 'ಅವಸ್ಥೆ' ಕಾದಂಬರಿಯ ಬಗ್ಗೆ 'ಬೂಕರ್' ಪ್ರಶಸ್ತಿ ವಿಜೇತ ಪ್ರತಿಭಾವಂತ ಕಾದಂಬರಿಕಾರ ಅರವಿಂದ ಅಡಿಗ ಅವರು ಬರೆದ ಲೇಖನ Reading India's soul 'ಅವಸ್ಥೆ' ಕಾದಂಬರಿಯ ಕಥಾ ಹಂದರದ ಸೂಕ್ಷ್ಮ ಪರಿಚಯ ಮಾಡಿಕೊಡುತ್ತದೆ. ಕಥೆಯ ವಿವರಣೆಗೆ ಹೋಗದೆ, ಕಾದಂಬರಿಯಲ್ಲಿ ಉದ್ದಕ್ಕೂ ಪ್ರಮುಖವಾಗಿ ಪ್ರಕಟಗೊಳ್ಳುವ ರಾಜಕೀಯದ ಆಯಾಮವನ್ನು ಉಲ್ಲೇಖಿಸುವುದು ನನ್ನ ಈ ಬರಹದ ಉದ್ದೇಶ.

ಕ್ರಾಂತಿಯಲ್ಲಲ್ಲದೆ ಜೀವನ ಸಫಲವಾಗುವ ಬೇರೆ ಮಾರ್ಗಗಳಿಲ್ಲ ಎಂದು ನಂಬುವ, ಮಾರ್ಕ್ಸಿಸ್ಟ್ ಆಗಿದ್ದೂ ಕಮ್ಯುನಿಸ್ಟ್ ಪಕ್ಷದ ರಷ್ಯಾ ಪರ ನೀತಿಗೆ ವಿರೋಧಿಯಾಗಿ ಬೇರೆ ಮಾರ್ಗ ಕಾಣದೆ  ಸೋಷಲಿಸ್ಟ್ ಬಣ ಸೇರಿದ್ದ ನಾಗರಾಜನ ವರ್ಣನೆಯನ್ನು ಗಮನಿಸಿ- "ಸುಖ, ಸವಲತ್ತು, ದಾಕ್ಷಿಣ್ಯಗಳಿಂದ ಸಂಪೂರ್ಣ ವಿಮುಖನಾಗಿ ಈವರೆಗೆ ನಾಗರಾಜ್ ಬದುಕಿದ್ದ, ಒಂಟಿ ಪಿಶಾಚಿಯಂತೆ. ತನ್ನ ತತ್ತ್ವಗಳಿಗೆ ಆತುಕೊಂಡು, ತನ್ನ ವ್ಯಕ್ತಿತ್ವವನ್ನು ತೀವ್ರವಾಗಿ ಒಂದೇ ಗುರಿಗೆ ಮಿತಗೊಳಿಸಿ, ಕೆಂಪಗೆ ಕಾದ ಕಬ್ಬಿಣದ ಸಲಾಕೆಯಂತೆ."

ಪಾರ್ಲಿಮೆಂಟರಿ ವ್ಯವಸ್ಥೆಯ ಬಗ್ಗೆ ನಂಬಿಕೆಯಿರದ ನಾಗರಾಜ ಮತ್ತು ಅಂತಹ ವ್ಯವಸ್ಥೆಯಲ್ಲಿ ನಂಬಿಕೆಯಿರುವ ಜನಾನುರಾಗಿ ನಾಯಕ ಕೃಷ್ಣಪ್ಪನ ನಡುವಿನ ಸಂಭಾಷಣೆಯ ಆಯ್ದ ಭಾಗಗಳನ್ನುನೋಡಿ-

ನಾಗರಾಜ - "ಪಾರ್ಲಿಮೆಂಟರಿ ರಾಜಕೀಯದ ಗತಿಯೇ ಇದು. ಯಾವ ಗುಂಪಿಗೆ ಸೇರಿ ನಾವು ಸರ್ಕಾರ ರಚಿಸಿದರೂ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಈ ಸ್ಟೇಟ್ ಆಳುವ ವರ್ಗಗಳ ಸಾಧನ. ಬೇರೆ ಥರ ಅದನ್ನ ಬಳಸೋದು ಪಾರ್ಲಿಮೆಂಟ್ ರಾಜಕೀಯದಲ್ಲಿ ಸಾಧ್ಯವಿಲ್ಲ".

ಕೃಷ್ಣಪ್ಪ - "...ನಾವು ಮಿನಿಮಮ್ ಟೈಮ್ ಬೌಂಡ್ ಕಾರ್ಯಕ್ರಮ ಹಾಕ್ಕೊಂಡು ಸರ್ಕಾರ ರಚಿಸಿದರೆ ಅಲ್ಪ ಸ್ವಲ್ಪವಾದರೂ ಸಾಧಿಸಬಹುದು ಅನ್ನೋದರಲ್ಲಿ ತಿರುಳೇ ಇಲ್ಲವೇನು ಹಾಗಾದ್ರೆ..."

ನಾಗರಾಜ - "ಇಲ್ಲ. ದೇಶದ ಸ್ಥಿತಿ ಇನ್ನಷ್ಟು ಹದಗೆಟ್ಟಾಗಲೇ ಪಾರ್ಲಿಮೆಂಟರಿ ಸಿಸ್ಟಂ ಬಗ್ಗೆ ಇರೋ ಭ್ರಾಂತಿ ಜನರಲ್ಲಿ ನಾಶವಾಗತ್ತೆ..."

ಕೃಷ್ಣಪ್ಪ -"ನಿಮ್ಮ ವಿಚಾರ ನಾನು ಒಪ್ಪಲ್ಲ. ಇರೋ ಮನೆಗೆ ಬೆಂಕಿ ಇಕ್ಕಿ ಮೈಕಾಯಿಸಿಕೊಳ್ಳೋ ಅಪಕ್ವ ಧೋರಣೆ ನಿಮ್ಮದು..."

ಊರಿನಲ್ಲಿ ತನ್ನ ಸನ್ಮಾನದ ಕಾರ್ಯಕ್ರಮ ವ್ಯವಸ್ಥೆಗೊಳ್ಳುತ್ತಿರುವ ಸಂದರ್ಭದಲ್ಲಿ ರೈತ ನಾಯಕ ಕೃಷ್ಣಪ್ಪನ ಮನದಲ್ಲಿ ಮೂಡುವ ವಿಚಾರಗಳು ಸೂಚಿಸುವಂತೆ, ಒಂದೆಡೆ ಬದಲಾವಣೆಯ ಆದರ್ಶ ಹಾಗೂ ಇನ್ನೊಂದೆಡೆ ತನ್ನ ವರ್ಗದ ಹಿತ, ಈ ತಾಕಲಾಟದಲ್ಲಿ ರಾಜಕೀಯ ನಾಯಕ ತನ್ನ ರಾಜಕೀಯದ ಮೂಲಕ ಮೂಲಭೂತ  ಬದಲಾವಣೆಗಳನ್ನು ತರುವಲ್ಲಿ ಸೋಲುವ ಅಂಶ ಸ್ಪಷ್ಟವಾಗುತ್ತದೆ. ಕೃಷ್ಣಪ್ಪನ ಭಾವನಾ ಲಹರಿ ಹೀಗೆ ಸಾಗುತ್ತದೆ -


"... ಇದು ವೈಯಕ್ತಿಕ ನೈತಿಕ ಪ್ರಶ್ನೆ ಮಾತ್ರವಲ್ಲ . ಆದರೆ ತನ್ನ ಮನಸ್ಸು ಅಳ್ಳಕವಾಗಿ ಭೂತದಲ್ಲಿ ಚಲಿಸುತ್ತ ಸುಖಪಡಲು ಹವಣಿಸುತ್ತಿದೆ. ತನ್ನನ್ನು ಸುತ್ತಿಕೊಳ್ಳುತ್ತಿರುವ ಬಲೆಗಳಿಂದ ಹೊರಬರಲಾರೆ ಎನ್ನಿಸುತ್ತದೆ. ಸನ್ಮಾನದ ಸಿಧ್ಧತೆ ನಡೆಯುತ್ತಿದೆ- ಈ ಮಸಲತ್ತನ್ನೂ ಐತಿಹಾಸಿಕ ಅಗತ್ಯವೆಂದು ಕಾಣಬಹುದಲ್ಲ? ಸಮುದಾಯದ ಹಿತವೇ ನನ್ನ ಹಿತವೆನ್ನುತ್ತಲೇ ನನ್ನ ಹಿತ ಸಾಧಿಸಿಕೊಂಡಾಗ ನಾಗರಾಜ್ ಏನನ್ನುತ್ತಾನೆ? ಅಥವಾ ನೀವು ಪ್ರತಿನಿಧಿಸುವ ವರ್ಗದ ಹಿತ ಇಷ್ಟು ಮಾತ್ರ ಸಮಾಜವನ್ನು ಮುಂದಕ್ಕೆ ಒಯ್ಯುತ್ತದೆ - ಹೆಚ್ಚಲ್ಲ ಎನ್ನುತ್ತಾನೆ. ನಿನ್ನ ಹಿತ ಸಾಧನೆಗೆ ನೀನಿದನ್ನು ಮಾಡುವುದು ಕೂಡ ಆಶ್ಚರ್ಯವಲ್ಲವೆನ್ನುತ್ತಾನೆ. ಶುದ್ಧ-ಅಶುದ್ಧದ ಮಾತು ಅಸಂಬದ್ಧವೆನ್ನುತ್ತಾನೆ..."

ಕಾದಂಬರಿಯು ಮೂಲಭೂತವಾಗಿ ಅಂದಿನ ರಾಜಕೀಯಕ್ಕೆ ಸಂಬಂಧಿಸಿದ್ದಾದರೂ ಇಲ್ಲಿ ರಾಜಕೀಯ ಕೇವಲ ಭಾಷಣವಾಗದೇ ಕಥೆಯ ಹಂದರದಲ್ಲಿ ಮಿಳಿತಗೊಂಡಿದೆ. ಕೃಷ್ಣಪ್ಪನ ಕಾಲೇಜು ಗೆಳತಿ ಗೌರಿ, ಕೃಷ್ಣಪ್ಪನ ತಾಯಿ ಶಾರದಮ್ಮ ಇವರ ಪಾತ್ರಗಳು ಜೀವಂತಿಕೆಯಿಂದ ಸೆಳೆಯುತ್ತವೆ. ಕೃಷ್ಣಪ್ಪ ವಾರಂಗಲ್ ನಲ್ಲಿ ಪೊಲೀಸರ ದೌರ್ಜನ್ಯಕ್ಕೆ ಒಳಗಾಗುವ ಸನ್ನಿವೇಶದ ಚಿತ್ರಣ ಬಹಳ ಪರಿಣಾಮಕಾರಿಯಾಗಿ ರಚಿತವಾಗಿದೆ.

ಸಾಮಾಜಿಕ ವ್ಯವಸ್ಥೆಯಲ್ಲಿ ರಾಜಕೀಯದ ಪ್ರಭಾವಕ್ಕೆ ಒಂದಲ್ಲ ಒಂದುರೀತಿ ಎಲ್ಲರೂ ಒಳಗಾಗುವುದು ಅನಿವಾರ್ಯವಾಗಿರುವುದರಿಂದ ಸುತ್ತಲೂ ಅದೃಶ್ಯವಾಗಿ ಪ್ರವಹಿಸುವ ರಾಜಕೀಯ ಒಳಸುಳಿಗಳ ಅರಿವು ಎಲ್ಲರಿಗೂ ಅಗತ್ಯವಾದದ್ದೇ. ಈ ಕಾರಣದಿಂದ 'ಅವಸ್ಥೆ' ಇಂದಿಗೂ ಪ್ರಸ್ತುತ.

Sunday, March 17, 2013

ಕರೋಗೆ ಯಾದ್ ತೊ

ಭಾರತೀಯ ಜನ ಮಾನಸದಲ್ಲಿ ಕ್ರಿಕೆಟ್ ಮತ್ತು ಹಿಂದಿ ಸಿನಿಮಾ ಇವುಗಳಿಗಿರುವ ಮುಖ್ಯ ಸ್ಥಾನಎಲ್ಲರಿಗೂ ಗೊತ್ತಿರುವ ವಿಷಯ. ಅದರಲ್ಲೂ ಕಳೆದ ಶತಮಾನದಲ್ಲಿ ಹಿಂದಿ ಸಿನಿಮಾ ರಂಗ ಜನರನ್ನು ಪ್ರಭಾವಿಸಿದ ಬಗೆ ವಿಸ್ಮಯಕರ. ಕಳೆದ ವರ್ಷ ಮಾಜಿ ಮಹಾನ್ ತಾರೆ ರಾಜೇಶ್ ಖನ್ನ ನಿಧನರಾದಾಗ ಮುಂಬೈನಲ್ಲಿ ಜನ ಪ್ರತಿಕ್ರಯಿಸಿದ ರೀತಿ ಇದಕ್ಕೆ ಸಾಕ್ಷಿ.

ಅರವತ್ತು ಎಪ್ಪತ್ತರ ದಶಕದಲ್ಲಿ ತೆರೆ ಕಂಡ ಹಲವಾರು ಹಿಂದಿ ಚಿತ್ರಗಳು ಅದ್ಭುತ ಪ್ರತಿಭೆಯ ನಟ-ನಟಿಯರು, ನಿರ್ದೇಶಕರು, ಗಾಯಕರು, ಸಂಗೀತ ನಿರ್ದೇಶಕರು, ಗೀತ ರಚನಕಾರರನ್ನು ಹೊಂದಿದ್ದು ಇಂದಿಗೂ ಜನಮನದಲ್ಲುಳಿದಿವೆ. ಆ ಕಾಲ ಘಟ್ಟದಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರಿದ ಹಲವಾರು ಪ್ರತಿಭಾವಂತರ ಪಟ್ಟಿಯಲ್ಲಿ ಖಂಡಿತವಾಗಿಯೂ ಸೇರಬೇಕಾದ ಒಂದು ಹೆಸರು ಸಂಗೀತ ನಿರ್ದೇಶಕ ಖಯ್ಯಾಮ್.

ಮೊದಲಿಗೆ, ಹಿಂದಿ ಚಿತ್ರ ಸಂಗೀತದ ಪರಿಚಯ ನನಗಾದದ್ದರ ಬಗ್ಗೆ ಒಂದಿಷ್ಟು ವಿವರಣೆ. ಚಿಕ್ಕಂದಿನಲ್ಲಿ ನಮ್ಮ ಮನೆಯ ರೇಡಿಯೋದಲ್ಲಿ ಆಕಾಶವಾಣಿಯ ವಿವಿಧಭಾರತಿಯಲ್ಲಿ ಕನ್ನಡ ಚಿತ್ರಗೀತೆಗಳನ್ನು ಕೇಳುತ್ತ ಬೆಳೆದ ನನಗೆ ಹಿಂದಿ ಚಿತ್ರಗೀತೆಗಳ ಸ್ಪಷ್ಟ ಪರಿಚಯ ಆಗಿದ್ದು ಎಂಬತ್ತರ ದಶಕದಲ್ಲಿ ಕಾಲೇಜು ಸೇರಿದಾಗಲೇ. ಹಾಸ್ಟೆಲಿನಲ್ಲಿ ಸಹವಾಸಿಯಾಗಿದ್ದ ಉತ್ತರ ಭಾರತದ ವಿದ್ಯಾರ್ಥಿಯೊಬ್ಬ ಸದಾ ಹಿಂದಿ ಹಾಡುಗಳನ್ನು ಗುನುಗುನಿಸುತ್ತಿರುತ್ತಿದ್ದ. ಹಳೆಯ ಹಿಂದಿ ಸಿನಿಮಾಗಳ ಹಾಗೂ ಸಿನಿಮಾ ಸಂಗೀತದ ಬಗೆಗೆ ಸಾಕಷ್ಟು ಅಭಿರುಚಿ ಮತ್ತು ಮಾಹಿತಿ ಹೊಂದಿದ್ದ ಈ ಸ್ನೇಹಿತನಿಂದಲೇ ನನಗೂ ಈ ಹಾಡುಗಳ ಬಗೆಗೆ ಆಸಕ್ತಿ ಮೂಡಿದ್ದು. ರಾತ್ರಿ ಹತ್ತು ಗಂಟೆಗೆ ಆಕಾಶವಾಣಿಯ ವಿವಿಧಭಾರತಿಯಲ್ಲಿ ಪ್ರಸಾರವಾಗುವ ಹಿಂದಿ ಗೀತೆಗಳ ಕಾರ್ಯಕ್ರಮ "ಛಾಯಾ ಗೀತ್ " ನಾನು ಕಾಲೇಜು ದಿನಗಳಿಂದಲೂ ಮೆಚ್ಚಿಕೊಂಡು ಬಂದಿರುವ ಒಂದು ಕಾರ್ಯಕ್ರಮ. ಒಂದೇ ಛಾಯೆಯ ಗೀತೆಗಳನ್ನು ಆಧರಿಸಿ ಆಕಾಶವಾಣಿಯ ನಿರೂಪಕರು ನಡೆಸಿಕೊಡುವ ಈ ಕಾರ್ಯಕ್ರಮ ಬಹಳ ಹಿಂದಿನಿಂದಲೂ ಬಹು ಜನಪ್ರಿಯವಾದ ಕಾರ್ಯಕ್ರಮ. ಈ ಕಾರ್ಯಕ್ರಮದ ಯಶಸ್ಸಿಗೆ ಮುಖ್ಯ ಕಾರಣ ಕಮಲ್ ಶರ್ಮ, ರೇಣು  ಬನ್ಸಲ್, ಮಮತಾ ಸಿಂಗ್, ಯೂನುಸ್ ಖಾನ್ ಮುಂತಾದ ನಿರೂಪಕರ ಭಾವಪೂರ್ಣ ನಿರೂಪಣೆ.

ಕಾಲೇಜು ದಿನಗಳಲ್ಲಿ ನನ್ನ ಹಿಂದಿ ಹಾಡುಗಳ ಆಸಕ್ತಿ ಮುಂದುವರೆಯಲು ಕಾರಣವಾದದ್ದು ಅದೇ ಕಾಲಕ್ಕೆ ನಾನು ಮೊದಲ ಬಾರಿಗೆ ಕೇಳಿದ 'ಅಯೆ ದಿಲೇ ನಾದಾನ್'(ಚಿತ್ರ: ರಜಿಯಾ ಸುಲ್ತಾನ್, ರಚನೆ: ಜಾನ್ ನಿಸಾರ್ ಅಖ್ತರ್)ಬಗೆಯ ಹಾಡುಗಳ ವಿಶಿಷ್ಟ ಸಂಗೀತದ ಅನುಭವ. ನನ್ನ ಹಾಸ್ಟೆಲಿನಲ್ಲಿಯೇ ಇದ್ದ ಮುಂಬಯಿಯ ಸಹಪಾಟಿಯೊಬ್ಬ ಈ ಗೀತೆಯ ಬಗ್ಗೆ ವಿವರಿಸುತ್ತ ಹಾಡಿನ ಮಧ್ಯದಲ್ಲಿ ವಾದನಗಳು ಸಂಪೂರ್ಣ ಸ್ತಬ್ಧವಾಗುವುದು, ಕೆಲ ಕ್ಷಣಗಳ ನಂತರ ಮರು ಆರಂಭವಾಗುವುದು, ಮತ್ತು ಇದರ ವಿಶಿಷ್ಟ ಪರಿಣಾಮ ಇವೆಲ್ಲದರ ಬಗ್ಗೆ ಹೇಳಿದ್ದು ಇಂದಿಗೂ ನೆನಪಿದೆ. ಅಲ್ಲಿಂದ ಮುಂದೆ ಇದೇ ಸಂಗೀತ ನಿರ್ದೇಶಕ ಖಯ್ಯಾಮ್ ಸಂಗೀತ ನೀಡಿದ 'ಹಝಾರ್ ರಾಹೆ ಮುಡ್ಕೆ ದೇಖಿ' (ಚಿತ್ರ: ಥೋಡಿ ಸಿ ಬೆವಫಾಯಿ, ರಚನೆ: ಗುಲ್ಜಾರ್ )ಬಗೆಯ ಗೀತೆಗಳ ಪರಿಚಯವಾಯಿತು.

ಖಯ್ಯಾಮ್ ಅವರ ನಿರ್ದೇಶನದ ಗೀತೆಗಳಲ್ಲಿ ಸಾಹಿತ್ಯ ಬಹಳ ಉತ್ತಮವಾಗಿರುತ್ತದೆ. ಅವರ ಬಹುತೇಕ ಎಲ್ಲ ಗೀತೆಗಳೂ ಜನಪ್ರಿಯವಾಗಿರುವುದಕ್ಕೆ ಬಹುಶಃ&nbsp ಇದೂ ಒಂದು ಕಾರಣ ಇರಬಹುದು.ಎಪ್ಪತ್ತರ ದಶಕದಲ್ಲಿ ತೆರೆಕಂಡ 'ಕಭೀ ಕಭೀ ಮೇರೆ ದಿಲ್ ಮೇ' (ಚಿತ್ರ: ಕಭೀ ಕಭೀ, ರಚನೆ: ಸಾಹಿರ್ ಲೂಧಿಯಾನವಿ ) ಆ ಕಾಲದ ಅತ್ಯಂತ ಜನಪ್ರಿಯ ಗೀತೆಗಳಲ್ಲೊಂದು.

ಎಂಬತ್ತರ ದಶಕದ 'ಕರೋಗೆ ಯಾದ್ ತೊ ಹರ್ ಬಾತ್ ಯಾದ್ ಆಯೇಗಿ' (ಚಿತ್ರ: ಬಾಝಾರ್,ರಚನೆ: ಬಶರ್ ನವಾಝ್) ಹಾಡು ನೆನಪುಗಳಿಗೆ ಸಂಬಂಧಿಸಿದ್ದಾಗಿದ್ದು, ಗಾಯಕ ಭೂಪಿಂದರ್ ಸಿಂಗ್ ಧ್ವನಿಯಲ್ಲಿನ ಮಡುಗಟ್ಟಿದ ವಿಷಾದ ನೆನಪಿನಲ್ಲುಳಿಯುತ್ತದೆ.ಇದೇ ಚಿತ್ರದ 'ಫಿರ್ ಚಿಡಿ ರಾತ್ ಬಾತ್ ಫೂಲೊಂಕಿ' (ರಚನೆ: ಮಖ್ದೂಮ್ ಮೊಹಿಯುದ್ದೀನ್) ಹಾಡಿನಲ್ಲಿ ಹೂಗಳ,ಪ್ರೇಮದ, ಭರವಸೆಯ ಛಾಯೆಯಿದೆ. ಇನ್ನು ಇದೇ ದಶಕದಲ್ಲಿ ಬಂದ ಇನ್ನೊಂದು ಪ್ರೇಮ ಗೀತೆ 'ಚಾಂದನಿ ರಾತ್ ಮೇ ಏಕ್ ಬಾರ್ ತುಜೆ ದೇಖಾ ಹೈ' (ಚಿತ್ರ: ದಿಲ್-ಎ -ನಾದಾನ್, ರಚನೆ: ನಕ್ಷ್ ಲಯಲ್ಪುರಿ).

ಒಂದೊಂದು ಗೀತೆಯೂ ತನ್ನದೇ ಆದ ರೀತಿಯ ಅಭಿವ್ಯಕ್ತಿಯ ಘಟಕದಂತೆ ಇರುತ್ತದೆ. ಒಂದು ಸಣ್ಣ ಕತೆಯಂತೆ. ಕೇವಲ ನಾಲ್ಕು-ಐದು ನಿಮಿಷಗಳಲ್ಲಿ ನಮ್ಮನ್ನು ಬೇರೊಂದೇ ಲೋಕಕ್ಕೆ ಕರೆದೊಯ್ಯುವಷ್ಟು ಶಕ್ತವಾಗಿರುತ್ತದೆ. ಒಮ್ಮೊಮ್ಮೆ ನಮ್ಮದೇ ತಳಮಳ ನೋವಿಗೆ ಧ್ವನಿಯಾದಂತೆ. ಮತ್ತೊಮ್ಮೆ ಬೇರಾವುದೋ ನಮಗೇ ಪರಕೀಯವಾದ ಭಾವನೆಯೊಂದರಲ್ಲಿ ತೇಲಿಸಿ ಬಿಡುವಂತೆ.

ಇದೆಲ್ಲ ಗೀತೆಯ ಸಾಹಿತ್ಯದ ಪರಿಣಾಮವೋ, ಸಂಗೀತ ನಿರ್ದೇಶಕನ ಸೂಕ್ಷ್ಮ, ಸೃಜನಶೀಲ, ಸಂಗೀತದ ಪ್ರಭಾವವೋ, ಅಥವಾ ಗಾಯಕ/ಗಾಯಕಿಯರ ಮಧುರ ಕಂಠದ ಕಾರಣವೋ ಹೇಳುವುದು ಕಷ್ಟ. ಅಂತೂ ಒಟ್ಟಾರೆಯಾಗಿ ಕೆಲ ಗೀತೆಗಳು ನೀಡುವ ಅನುಭವ ಮಾತ್ರ ವಿಶಿಷ್ಟ ಹಾಗೂ ಕೇವಲ ಅನುಭವವೇದ್ಯ. ಖಯ್ಯಾಮ್ ಸಂಗೀತ ನೀಡಿರುವ ಬಹಳಷ್ಟು ಹಾಡುಗಳಲ್ಲಿ ಈ ಮೂರೂ ಅಂಶಗಳು ಮಿಳಿತವಾಗಿರುತ್ತವೆ. ಅವರ ಹಾಡುಗಳಲ್ಲಿ ಹೆಚ್ಚಾಗಿ ತಂತಿ ವಾದ್ಯಗಳ ಪರಿಣಾಮಕಾರಿ ಬಳಕೆ ಕಾಣಬರುತ್ತದೆ. ಹಾಗೆಯೇ ಗೀತೆಯ ಸಾಹಿತ್ಯದ ಸಾಲುಗಳಿಗೆ ಜೀವ ತುಂಬುವ ಲಯಬದ್ಧ ಏರಿಳಿತಗಳು. ಜೊತೆಗೇ ಗಾಯಕರ ಧ್ವನಿ ವಲಯದ ಪೂರ್ಣ ಬಳಕೆ. ಉದಾಹರಣೆಗೆ, 'ಹಝಾರ್ ರಾಹೆ ಮುಡ್ಕೆ ದೇಖಿ' ಈ ಹಾಡನ್ನು ಗಮನಿಸಿ. ಸಾಹಿತ್ಯ, ಸಂಗೀತ, ಗಾಯನ ಮೂರೂ ಈ ಗೀತೆಯಲ್ಲಿ ಉತ್ಕೃಷ್ಟವಾಗಿರುವುದು ನಿಚ್ಚಳ.

ಕೆಲದಿನಗಳ ಹಿಂದೆ NDTV ಚಾನಲ್ನಲ್ಲಿ 'Bollywood Roots' ಎಂಬ ಸರಣಿಯಲ್ಲಿ ಖಯ್ಯಾಮ್ ಅವರ ಸಂದರ್ಶನ ಪ್ರಸಾರವಾಯಿತು. ತಮ್ಮ ಸುಮಾರು ಮೂರು ದಶಕಗಳ ಸಂಗೀತ ನಿರ್ದೇಶನದ ವೃತ್ತಿಯಲ್ಲಿ ಸಂಖ್ಯೆಯ ದೃಷ್ಟಿಯಿಂದ ಬಹಳ ಅಲ್ಲವಾದರೂ ಒಂದಕ್ಕಿಂತ ಒಂದು ಯಶಸ್ವಿ ಗೀತೆಗಳನ್ನೇ ನೀಡಿದ ಖಯ್ಯಾಮ್ ತಮ್ಮ ಅನುಭವಗಳನ್ನು ಹಂಚಿಕೊಂಡ ರೀತಿ ಬಹಳ ಆತ್ಮೀಯವಾಗಿತ್ತು.

ತಮ್ಮ ವೃತ್ತಿಯುದ್ದಕ್ಕೂ ಎಂದೂ ಸಂಗೀತದ ಗುಣಮಟ್ಟದ ಬಗೆಗೆ ರಾಜಿ ಮಾಡಿಕೊಳ್ಳದೆ, ಹೆಚ್ಚಾಗಿ ಸಾಹಿರ್ ಲೂಧಿಯಾನವಿ, ಕೈಫಿ ಆಜ್ಮಿ, ಗುಲ್ಜಾರ್ ಮೊದಲಾದ ಶ್ರೇಷ್ಠ ಮಟ್ಟದ ಕವಿಗಳ ಶ್ರೇಣಿಯ ಗೀತ ರಚನಕಾರರೊಂದಿಗೇ ಕಾರ್ಯ ನಿರ್ವಹಿಸಿ, ಹಿಂದಿ ಚಿತ್ರ ಸಂಗೀತ ಪ್ರೇಮಿಗಳಿಗೆ ಅಮೂಲ್ಯ ಗೀತೆಗಳನ್ನು ನೀಡಿದ ಶ್ರೇಯ ಇವರದ್ದು. ಇದೀಗ ನೂರು ವರುಷಗಳನ್ನು ಪೂರ್ಣಗೊಳಿಸುತ್ತಿರುವ ಭಾರತೀಯ ಚಿತ್ರೋದ್ಯಮದಲ್ಲಿ ಹಲವಾರು ಕಲಾವಿದರ ಯೋಗದಾನವಿದೆ. ಖಯ್ಯಾಮ್ ರಂತಹ ಕಲಾವಿದರು ಬಹುಶಃ ತಲೆಮಾರಿಗೊಮ್ಮೆ ಕಾಣಸಿಗುವಂತಹವರು.ಬುದ್ಧಿಶಕ್ತಿ, ಭಾವನಾತ್ಮಕತೆ, ತಮ್ಮ ಪ್ರತಿಯೊಂದು ಕೃತಿಯಲ್ಲೂ ಪೂರ್ಣವಾಗಿ ತೊಡಗಿಸಿಕೊಳ್ಳುವ ತನ್ಮಯತೆ, ಅತ್ತ್ಯುತ್ತಮವಾದದ್ದನ್ನು ಸಾಧಿಸುವ ಏಕಾಗ್ರ ಗುರಿ ಇವೆಲ್ಲವೂ ಇವರನ್ನು ಉನ್ನತ ದರ್ಜೆಯ ಸಂಗೀತ ನಿರ್ದೇಶಕರನ್ನಾಗಿಸುವಲ್ಲಿ ಪಾತ್ರ ವಹಿಸಿವೆ.

ಖಯ್ಯಾಮ್ ರ ಸಂಗೀತ ನಿರ್ದೇಶನದಲ್ಲಿ 'ತುಮ್ ಅಪ್ನಾ ರಂಜೋ ಗಮ್ ಅಪನೀ ಪರೆಶಾನಿ ಮುಜೆ ದೇ ದೋ' (ಚಿತ್ರ:ಶಗುನ್,  ರಚನೆ: ಸಾಹಿರ್ ಲೂಧಿಯಾನವಿ) ಈ ಮನಮುಟ್ಟುವ ಹಾಡನ್ನು ಹಾಡಿರುವವರು ಖಯ್ಯಾಮ್ ರ ಪತ್ನಿ ರಾಜಿಂದರ್ ಕೌರ್. ಈ ಹಾಡಿನಲ್ಲಿ ಹಾಡಿದಂತೆಯೇ ನಿಜ ಜೀವನದಲ್ಲೂ ತಮ್ಮ ಪತ್ನಿ ತಮ್ಮ ಪರೇಶಾನಿಗಳನ್ನೆಲ್ಲ ನಿಭಾಯಿಸಿದ್ದಾರೆಂದು ಸಂದರ್ಶನದಲ್ಲಿ ಖಯ್ಯಾಮ್ ಹೇಳುತ್ತಾರೆ.

ಇದೇ ಸಂದರ್ಶನದಲ್ಲಿ 'ಉಮ್ರಾವ್ ಜಾನ್' ಚಿತ್ರಕ್ಕೆ ಸಂಗೀತ ನೀಡಿದ ಅನುಭವದ ಬಗ್ಗೆ ಹೇಳುತ್ತಾ ಗಾಯಕಿ ಆಶಾ ಬ್ಹೊಸಲೆಯವರಿಂದ ಆ ಚಿತ್ರಕ್ಕಾಗಿ ಒಂದು ನಿರ್ದಿಷ್ಟ ಕಾಲಘಟ್ಟದ ವಿಶಿಷ್ಟ ಬಗೆಯ ಗಾಯನವನ್ನು ಪಡೆಯಲು ತಾವು ಪಟ್ಟ ಪ್ರಯತ್ನ, 'ದಿಲ್ ಚೀಜ್ ಕ್ಯಾ ಹೈ ಆಪ್ ಮೇರಿ ಜಾನ್ ಲೀಜಿಯೇ' ಹಾಗೂ ರಾಜಿಂದರ್ ಕೌರ್ ಹಾಡಿರುವ 'ಬಾಝಾರ್' ಚಿತ್ರದ 'ದೇಖ್ ಲೋ ಆಜ್ ಹಮ್ ಕೊ ಜೀ ಭರ್ ಕೇ' ಈ ಹಾಡುಗಳಿಗೆ ದೊರೆತ ಅಭೂತಪೂರ್ವ ಯಶಸ್ಸು ಇವುಗಳನ್ನು ಸಹ ಪ್ರಸ್ತಾಪಿಸಿದರು .