Saturday, March 16, 2013

ಕರೋಗೆ ಯಾದ್ ತೊ

ಭಾರತೀಯ ಜನ ಮಾನಸದಲ್ಲಿ ಕ್ರಿಕೆಟ್ ಮತ್ತು ಹಿಂದಿ ಸಿನಿಮಾ  ಇವುಗಳಿಗಿರುವ ಮುಖ್ಯ ಸ್ಥಾನ ಎಲ್ಲರಿಗೂ ಗೊತ್ತಿರುವ ವಿಷಯ. ಅದರಲ್ಲೂ ಕಳೆದ ಶತಮಾನದಲ್ಲಿ ಹಿಂದಿ ಸಿನಿಮಾ ರಂಗ ಜನರನ್ನು ಪ್ರಭಾವಿಸಿದ ಬಗೆ ವಿಸ್ಮಯಕರ. ಕಳೆದ ವರ್ಷ ಮಾಜಿ ಮಹಾನ್ ತಾರೆ ರಾಜೇಶ್ ಖನ್ನ ನಿಧನರಾದಾಗ ಮುಂಬೈನಲ್ಲಿ ಜನ ಪ್ರತಿಕ್ರಯಿಸಿದ ರೀತಿ ಇದಕ್ಕೆ ಸಾಕ್ಷಿ.

ಅರವತ್ತು ಎಪ್ಪತ್ತರ ದಶಕದಲ್ಲಿ ತೆರೆ ಕಂಡ ಹಲವಾರು ಹಿಂದಿ ಚಿತ್ರಗಳು ಅದ್ಭುತ ಪ್ರತಿಭೆಯ ನಟ-ನಟಿಯರು, ನಿರ್ದೇಶಕರು, ಗಾಯಕರು, ಸಂಗೀತ ನಿರ್ದೇಶಕರು, ಗೀತ ರಚನಕಾರರನ್ನು ಹೊಂದಿದ್ದು ಇಂದಿಗೂ ಜನಮನದಲ್ಲುಳಿದಿವೆ. ಆ ಕಾಲ ಘಟ್ಟದಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರಿದ ಹಲವಾರು ಪ್ರತಿಭಾವಂತರ ಪಟ್ಟಿಯಲ್ಲಿ ಖಂಡಿತವಾಗಿಯೂ ಸೇರಬೇಕಾದ ಒಂದು ಹೆಸರು ಸಂಗೀತ ನಿರ್ದೇಶಕ ಖಯ್ಯಾಮ್.

ಮೊದಲಿಗೆ, ಹಿಂದಿ ಚಿತ್ರ ಸಂಗೀತದ ಪರಿಚಯ ನನಗಾದದ್ದರ ಬಗ್ಗೆ ಒಂದಿಷ್ಟು ವಿವರಣೆ. ಚಿಕ್ಕಂದಿನಲ್ಲಿ ನಮ್ಮ ಮನೆಯ ರೇಡಿಯೋದಲ್ಲಿ ಆಕಾಶವಾಣಿಯ ವಿವಿಧಭಾರತಿಯಲ್ಲಿ ಕನ್ನಡ ಚಿತ್ರಗೀತೆಗಳನ್ನು ಕೇಳುತ್ತ ಬೆಳೆದ ನನಗೆ ಹಿಂದಿ  ಚಿತ್ರಗೀತೆಗಳ ಸ್ಪಷ್ಟ ಪರಿಚಯ ಆಗಿದ್ದು ಎಂಬತ್ತರ ದಶಕದಲ್ಲಿ  ಕಾಲೇಜು ಸೇರಿದಾಗಲೇ. ಹಾಸ್ಟೆಲಿನಲ್ಲಿ ಸಹವಾಸಿಯಾಗಿದ್ದ ಉತ್ತರ ಭಾರತದ ವಿದ್ಯಾರ್ಥಿಯೊಬ್ಬ ಸದಾ ಹಿಂದಿ ಹಾಡುಗಳನ್ನು ಗುನುಗುನಿಸುತ್ತಿರುತ್ತಿದ್ದ. ಹಳೆಯ ಹಿಂದಿ ಸಿನಿಮಾಗಳ ಹಾಗೂ ಸಿನಿಮಾ ಸಂಗೀತದ ಬಗೆಗೆ ಸಾಕಷ್ಟು ಅಭಿರುಚಿ ಮತ್ತು ಮಾಹಿತಿ ಹೊಂದಿದ್ದ ಈ ಸ್ನೇಹಿತನಿಂದಲೇ ನನಗೂ ಈ ಹಾಡುಗಳ ಬಗೆಗೆ ಆಸಕ್ತಿ ಮೂಡಿದ್ದು. ರಾತ್ರಿ ಹತ್ತು ಗಂಟೆಗೆ ಆಕಾಶವಾಣಿಯ ವಿವಿಧಭಾರತಿಯಲ್ಲಿ ಪ್ರಸಾರವಾಗುವ  ಹಿಂದಿ ಗೀತೆಗಳ ಕಾರ್ಯಕ್ರಮ "ಛಾಯಾ ಗೀತ್ " ನಾನು ಕಾಲೇಜು ದಿನಗಳಿಂದಲೂ ಮೆಚ್ಚಿಕೊಂಡು ಬಂದಿರುವ ಒಂದು ಕಾರ್ಯಕ್ರಮ. ಒಂದೇ ಛಾಯೆಯ ಗೀತೆಗಳನ್ನು ಆಧರಿಸಿ ಆಕಾಶವಾಣಿಯ ನಿರೂಪಕರು ನಡೆಸಿಕೊಡುವ ಈ ಕಾರ್ಯಕ್ರಮ ಬಹಳ ಹಿಂದಿನಿಂದಲೂ ಬಹು ಜನಪ್ರಿಯವಾದ ಕಾರ್ಯಕ್ರಮ. ಈ ಕಾರ್ಯಕ್ರಮದ ಯಶಸ್ಸಿಗೆ ಮುಖ್ಯ ಕಾರಣ ಕಮಲ್ ಶರ್ಮ, ರೇಣು  ಬನ್ಸಲ್, ಮಮತಾ ಸಿಂಗ್, ಯೂನುಸ್ ಖಾನ್ ಮುಂತಾದ ನಿರೂಪಕರ ಭಾವಪೂರ್ಣ ನಿರೂಪಣೆ.

ಕಾಲೇಜು ದಿನಗಳಲ್ಲಿ ನನ್ನ ಹಿಂದಿ ಹಾಡುಗಳ ಆಸಕ್ತಿ  ಮುಂದುವರೆಯಲು  ಕಾರಣವಾದದ್ದು ಅದೇ ಕಾಲಕ್ಕೆ ನಾನು ಮೊದಲ ಬಾರಿಗೆ ಕೇಳಿದ 'ಅಯೆ ದಿಲೇ ನಾದಾನ್' (ಚಿತ್ರ: ರಜಿಯಾ ಸುಲ್ತಾನ್, ರಚನೆ: ಜಾನ್ ನಿಸಾರ್ ಅಖ್ತರ್) ಬಗೆಯ ಹಾಡುಗಳ ವಿಶಿಷ್ಟ ಸಂಗೀತದ ಅನುಭವ. ನನ್ನ ಹಾಸ್ಟೆಲಿನಲ್ಲಿಯೇ ಇದ್ದ ಮುಂಬಯಿಯ ಸಹಪಾಟಿಯೊಬ್ಬ ಈ ಗೀತೆಯ ಬಗ್ಗೆ ವಿವರಿಸುತ್ತ ಹಾಡಿನ ಮಧ್ಯದಲ್ಲಿ ವಾದನಗಳು ಸಂಪೂರ್ಣ ಸ್ತಬ್ಧವಾಗುವುದು, ಕೆಲ ಕ್ಷಣಗಳ ನಂತರ ಮರು ಆರಂಭವಾಗುವುದು, ಮತ್ತು ಇದರ ವಿಶಿಷ್ಟ ಪರಿಣಾಮ ಇವೆಲ್ಲದರ ಬಗ್ಗೆ ಹೇಳಿದ್ದು ಇಂದಿಗೂ ನೆನಪಿದೆ. ಅಲ್ಲಿಂದ ಮುಂದೆ ಇದೇ  ಸಂಗೀತ ನಿರ್ದೇಶಕ ಖಯ್ಯಾಮ್ ಸಂಗೀತ ನೀಡಿದ 'ಹಝಾರ್ ರಾಹೆ ಮುಡ್ಕೆ ದೇಖಿ' (ಚಿತ್ರ: ಥೋಡಿ ಸಿ ಬೆವಫಾಯಿ, ರಚನೆ: ಗುಲ್ಜಾರ್ ) ಬಗೆಯ ಗೀತೆಗಳ ಪರಿಚಯವಾಯಿತು .

ಖಯ್ಯಾಮ್ ಅವರ ನಿರ್ದೇಶನದ ಗೀತೆಗಳಲ್ಲಿ ಸಾಹಿತ್ಯ ಬಹಳ ಉತ್ತಮವಾಗಿರುತ್ತದೆ. ಅವರ ಬಹುತೇಕ ಎಲ್ಲ ಗೀತೆಗಳೂ ಜನಪ್ರಿಯವಾಗಿರುವುದಕ್ಕೆ ಬಹುಶಃ ಇದೂ ಒಂದು ಕಾರಣ ಇರಬಹುದು.  ಎಪ್ಪತ್ತರ ದಶಕದಲ್ಲಿ ತೆರೆಕಂಡ 'ಕಭೀ ಕಭೀ ಮೇರೆ ದಿಲ್ ಮೇ' (ಚಿತ್ರ:  ಕಭೀ  ಕಭೀ, ರಚನೆ: ಸಾಹಿರ್ ಲೂಧಿಯಾನವಿ ) ಆ ಕಾಲದ ಅತ್ಯಂತ ಜನಪ್ರಿಯ ಗೀತೆಗಳಲ್ಲೊಂದು.

ಎಂಬತ್ತರ ದಶಕದ 'ಕರೋಗೆ ಯಾದ್  ತೊ ಹರ್  ಬಾತ್ ಯಾದ್  ಆಯೇಗಿ' (ಚಿತ್ರ:  ಬಾಝಾರ್, ರಚನೆ: ಬಶರ್ ನವಾಝ್ ) ಹಾಡು  ನೆನಪುಗಳಿಗೆ ಸಂಬಂಧಿಸಿದ್ದಾಗಿದ್ದು, ಗಾಯಕ ಭೂಪಿಂದರ್ ಸಿಂಗ್ ಧ್ವನಿಯಲ್ಲಿನ  ಮಡುಗಟ್ಟಿದ ವಿಷಾದ ನೆನಪಿನಲ್ಲುಳಿಯುತ್ತದೆ.  ಇದೇ  ಚಿತ್ರದ   'ಫಿರ್ ಚಿಡಿ ರಾತ್ ಬಾತ್ ಫೂಲೊಂಕಿ' (ರಚನೆ: ಮಖ್ದೂಮ್ ಮೊಹಿಯುದ್ದೀನ್) ಹಾಡಿನಲ್ಲಿ ಹೂಗಳ, ಪ್ರೇಮದ, ಭರವಸೆಯ  ಛಾಯೆಯಿದೆ .  ಇನ್ನು ಇದೇ ದಶಕದಲ್ಲಿ ಬಂದ ಇನ್ನೊಂದು ಪ್ರೇಮ ಗೀತೆ   'ಚಾಂದನಿ ರಾತ್ ಮೇ ಏಕ್ ಬಾರ್ ತುಜೆ ದೇಖಾ ಹೈ' (ಚಿತ್ರ: ದಿಲ್-ಎ -ನಾದಾನ್ , ರಚನೆ: ನಕ್ಷ್ ಲಯಲ್ಪುರಿ).

ಒಂದೊಂದು ಗೀತೆಯೂ ತನ್ನದೇ ಆದ ರೀತಿಯ ಅಭಿವ್ಯಕ್ತಿಯ ಘಟಕದಂತೆ ಇರುತ್ತದೆ. ಒಂದು ಸಣ್ಣ ಕತೆಯಂತೆ. ಕೇವಲ ನಾಲ್ಕು-ಐದು ನಿಮಿಷಗಳಲ್ಲಿ ನಮ್ಮನ್ನು ಬೇರೊಂದೇ ಲೋಕಕ್ಕೆ ಕರೆದೊಯ್ಯುವಷ್ಟು ಶಕ್ತವಾಗಿರುತ್ತದೆ.  ಒಮ್ಮೊಮ್ಮೆ ನಮ್ಮದೇ ತಳಮಳ ನೋವಿಗೆ ಧ್ವನಿಯಾದಂತೆ. ಮತ್ತೊಮ್ಮೆ ಬೇರಾವುದೋ ನಮಗೇ ಪರಕೀಯವಾದ ಭಾವನೆಯೊಂದರಲ್ಲಿ ತೇಲಿಸಿ ಬಿಡುವಂತೆ.

ಇದೆಲ್ಲ ಗೀತೆಯ ಸಾಹಿತ್ಯದ ಪರಿಣಾಮವೋ, ಸಂಗೀತ ನಿರ್ದೇಶಕನ ಸೂಕ್ಷ್ಮ, ಸೃಜನಶೀಲ, ಸಂಗೀತದ ಪ್ರಭಾವವೋ, ಅಥವಾ ಗಾಯಕ/ಗಾಯಕಿಯರ ಮಧುರ ಕಂಠದ ಕಾರಣವೋ ಹೇಳುವುದು ಕಷ್ಟ. ಅಂತೂ ಒಟ್ಟಾರೆಯಾಗಿ ಕೆಲ ಗೀತೆಗಳು ನೀಡುವ ಅನುಭವ ಮಾತ್ರ ವಿಶಿಷ್ಟ  ಹಾಗೂ ಕೇವಲ ಅನುಭವವೇದ್ಯ. ಖಯ್ಯಾಮ್ ಸಂಗೀತ ನೀಡಿರುವ ಬಹಳಷ್ಟು ಹಾಡುಗಳಲ್ಲಿ ಈ ಮೂರೂ ಅಂಶಗಳು ಮಿಳಿತವಾಗಿರುತ್ತವೆ. ಅವರ ಹಾಡುಗಳಲ್ಲಿ ಹೆಚ್ಚಾಗಿ ತಂತಿ ವಾದ್ಯಗಳ ಪರಿಣಾಮಕಾರಿ ಬಳಕೆ ಕಾಣಬರುತ್ತದೆ. ಹಾಗೆಯೇ ಗೀತೆಯ ಸಾಹಿತ್ಯದ ಸಾಲುಗಳಿಗೆ ಜೀವ ತುಂಬುವ ಲಯಬದ್ಧ ಏರಿಳಿತಗಳು. ಜೊತೆಗೇ ಗಾಯಕರ  ಧ್ವನಿ ವಲಯದ ಪೂರ್ಣ ಬಳಕೆ.  ಉದಾಹರಣೆಗೆ, 'ಹಝಾರ್ ರಾಹೆ ಮುಡ್ಕೆ ದೇಖಿ' ಈ ಹಾಡನ್ನು ಗಮನಿಸಿ. ಸಾಹಿತ್ಯ, ಸಂಗೀತ, ಗಾಯನ ಮೂರೂ ಈ ಗೀತೆಯಲ್ಲಿ ಉತ್ಕೃಷ್ಟವಾಗಿರುವುದು ನಿಚ್ಚಳ.

ಕೆಲದಿನಗಳ ಹಿಂದೆ NDTV ಚಾನಲ್ನಲ್ಲಿ Bollywood Roots ಎಂಬ ಸರಣಿಯಲ್ಲಿ ಖಯ್ಯಾಮ್ ಅವರ ಸಂದರ್ಶನ ಪ್ರಸಾರವಾಯಿತು. ತಮ್ಮ ಸುಮಾರು ಮೂರು ದಶಕಗಳ ಸಂಗೀತ ನಿರ್ದೇಶನದ ವೃತ್ತಿಯಲ್ಲಿ  ಸಂಖ್ಯೆಯ ದೃಷ್ಟಿಯಿಂದ  ಬಹಳ ಅಲ್ಲವಾದರೂ ಒಂದಕ್ಕಿಂತ ಒಂದು ಯಶಸ್ವಿ ಗೀತೆಗಳನ್ನೇ ನೀಡಿದ ಖಯ್ಯಾಮ್ ತಮ್ಮ ಅನುಭವಗಳನ್ನು ಹಂಚಿಕೊಂಡ ರೀತಿ ಬಹಳ ಆತ್ಮೀಯವಾಗಿತ್ತು.

ತಮ್ಮ ವೃತ್ತಿಯುದ್ದಕ್ಕೂ ಎಂದೂ ಸಂಗೀತದ ಗುಣಮಟ್ಟದ ಬಗೆಗೆ ರಾಜಿ ಮಾಡಿಕೊಳ್ಳದೆ, ಹೆಚ್ಚಾಗಿ ಸಾಹಿರ್ ಲೂಧಿಯಾನವಿ, ಕೈಫಿ ಆಜ್ಮಿ, ಗುಲ್ಜಾರ್ ಮೊದಲಾದ ಶ್ರೇಷ್ಠ ಮಟ್ಟದ ಕವಿಗಳ ಶ್ರೇಣಿಯ ಗೀತ ರಚನಕಾರರೊಂದಿಗೇ ಕಾರ್ಯ ನಿರ್ವಹಿಸಿ, ಹಿಂದಿ ಚಿತ್ರ ಸಂಗೀತ ಪ್ರೇಮಿಗಳಿಗೆ ಅಮೂಲ್ಯ ಗೀತೆಗಳನ್ನು ನೀಡಿದ ಶ್ರೇಯ ಇವರದ್ದು. ಇದೀಗ ನೂರು ವರುಷಗಳನ್ನು  ಪೂರ್ಣಗೊಳಿಸುತ್ತಿರುವ ಭಾರತೀಯ ಚಿತ್ರೋದ್ಯಮದಲ್ಲಿ ಹಲವಾರು ಕಲಾವಿದರ ಯೋಗದಾನವಿದೆ.   ಖಯ್ಯಾಮ್ ರಂತಹ ಕಲಾವಿದರು ಬಹುಶಃ ತಲೆಮಾರಿಗೊಮ್ಮೆ ಕಾಣಸಿಗುವಂತಹವರು. ಬುದ್ಧಿಶಕ್ತಿ,  ಭಾವನಾತ್ಮಕತೆ, ತಮ್ಮ ಪ್ರತಿಯೊಂದು ಕೃತಿಯಲ್ಲೂ ಪೂರ್ಣವಾಗಿ ತೊಡಗಿಸಿಕೊಳ್ಳುವ ತನ್ಮಯತೆ, ಅತ್ತ್ಯುತ್ತಮವಾದದ್ದನ್ನು ಸಾಧಿಸುವ  ಏಕಾಗ್ರ ಗುರಿ ಇವೆಲ್ಲವೂ ಇವರನ್ನು ಉನ್ನತ ದರ್ಜೆಯ  ಸಂಗೀತ ನಿರ್ದೇಶಕರನ್ನಾಗಿಸುವಲ್ಲಿ ಪಾತ್ರ ವಹಿಸಿವೆ.

ಖಯ್ಯಾಮ್ ರ ಸಂಗೀತ  ನಿರ್ದೇಶನದಲ್ಲಿ 'ತುಮ್  ಅಪ್ನಾ ರಂಜೋ ಗಮ್ ಅಪನೀ ಪರೆಶಾನಿ ಮುಜೆ ದೇ ದೋ' (ಚಿತ್ರ:ಶಗುನ್,  ರಚನೆ: ಸಾಹಿರ್ ಲೂಧಿಯಾನವಿ) ಈ ಮನಮುಟ್ಟುವ ಹಾಡನ್ನು ಹಾಡಿರುವವರು ಖಯ್ಯಾಮ್ ರ ಪತ್ನಿ ರಾಜಿಂದರ್ ಕೌರ್. ಈ ಹಾಡಿನಲ್ಲಿ ಹಾಡಿದಂತೆಯೇ ನಿಜ ಜೀವನದಲ್ಲೂ ತಮ್ಮ ಪತ್ನಿ ತಮ್ಮ ಪರೇಶಾನಿಗಳನ್ನೆಲ್ಲ ನಿಭಾಯಿಸಿದ್ದಾರೆಂದು ಸಂದರ್ಶನದಲ್ಲಿ ಖಯ್ಯಾಮ್ ಹೇಳುತ್ತಾರೆ.

ಇದೇ ಸಂದರ್ಶನದಲ್ಲಿ 'ಉಮ್ರಾವ್ ಜಾನ್' ಚಿತ್ರಕ್ಕೆ ಸಂಗೀತ ನೀಡಿದ ಅನುಭವದ ಬಗ್ಗೆ ಹೇಳುತ್ತಾ ಗಾಯಕಿ ಆಶಾ ಬ್ಹೊಸಲೆಯವರಿಂದ ಆ ಚಿತ್ರಕ್ಕಾಗಿ ಒಂದು ನಿರ್ದಿಷ್ಟ ಕಾಲಘಟ್ಟದ ವಿಶಿಷ್ಟ ಬಗೆಯ ಗಾಯನವನ್ನು ಪಡೆಯಲು ತಾವು ಪಟ್ಟ ಪ್ರಯತ್ನ, 'ದಿಲ್ ಚೀಜ್ ಕ್ಯಾ ಹೈ ಆಪ್ ಮೇರಿ ಜಾನ್ ಲೀಜಿಯೇ' ಹಾಗೂ ರಾಜಿಂದರ್ ಕೌರ್ ಹಾಡಿರುವ 'ಬಾಝಾರ್' ಚಿತ್ರದ
'ದೇಖ್ ಲೋ ಆಜ್ ಹಮ್ ಕೊ ಜೀ ಭರ್  ಕೇ'  ಈ ಹಾಡುಗಳಿಗೆ ದೊರೆತ ಅಭೂತಪೂರ್ವ ಯಶಸ್ಸು ಇವುಗಳನ್ನು ಪ್ರಸ್ತಾಪಿಸುತ್ತಾರೆ.

ಈ ಸಂದರ್ಶನವನ್ನು ವೀಕ್ಷಿಸಲು ಕ್ಲಿಕ್ಕಿಸಬೇಕಾದ ಕೊಂಡಿ-

No comments :