Sunday, June 29, 2014

ಅಮೃತ ಬಳ್ಳಿಯ ಕಷಾಯ

"ಅನಿಸುತಿದೆ ಯಾಕೋ ಇಂದು ... "

ಜನಪ್ರಿಯ ಕನ್ನಡ ಚಲನ ಚಿತ್ರ "ಮುಂಗಾರು ಮಳೆ" ಯ ಗೀತೆಯ ಈ ಸಾಲಿನ ಪರಿಚಯವಿರದವರು ಯಾರಿದ್ದಾರೆ. ಈ ಗೀತೆಯ ರಚನಕಾರರಾಗಿ ಒಮ್ಮೆಗೇ ಎಲ್ಲರ ಮನ್ನಣೆಗೆ ಪಾತ್ರರಾದವರು  ಜಯಂತ ಕಾಯ್ಕಿಣಿಯವರು. ಅದಕ್ಕೂ ಮೊದಲು ಎರಡು ದಶಕಗಳಿಗೂ ಹೆಚ್ಚಿನ ಕಾಲದಿಂದಲೂ  ಕವಿಯಾಗಿ, ಕತೆಗಾರರಾಗಿ ಅವರು ಉತ್ಕೃಷ್ಟ ಸಾಹಿತ್ಯದ ಕೊಡುಗೆಯನ್ನು ನೀಡುತ್ತಲೇ ಬಂದಿದ್ದರೂ ಯಾಕೋ ಹೆಚ್ಚು ಚರ್ಚೆಗೆ  ಒಳಗಾಗಿರಲಿಲ್ಲ. ನನಗಂತೂ ಅವರು ಮೊದಲು ಪರಿಚಯವಾದದ್ದು, ಇಷ್ಟವಾದದ್ದು ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಕತೆಗಾರರಾಗಿಯೇ. ಜಯಂತರದ್ದೊಂದು ಸಣ್ಣ ಕತೆಗಳ ಸಂಕಲನ "ಅಮೃತ ಬಳ್ಳಿಯ ಕಷಾಯ"  ಕೃತಿಯನ್ನು ಮೊನ್ನೆ ಓದಿದೆ. ಅದು ಅವರು ತೊಂಬತ್ತರ ದಶಕದಲ್ಲಿ ಬರೆದ ಕತೆಗಳ ಸಂಗ್ರಹ. ಓದಿ ಮುಗಿಸಿದಾಗ ಈ ವಿಶಿಷ್ಟ ಕತೆಗಾರನ ಪ್ರತಿಭೆಯ ಬಗ್ಗೆ ಅಚ್ಚರಿಯೆನಿಸಿತು. ಅವರ ಕತೆಗಳ  ಪ್ರಪಂಚ ಮೊದಲಿಗೆ ಪರಿಚಯವಾದದ್ದರ ನೆನಪು ಮರುಕಳಿಸಿತು.

ಇದು ನನ್ನಂತಹ ಬಹಳ ಮಂದಿ ಕನ್ನಡಿಗರ ಅನುಭವವೂ  ಇರಬಹುದು. ಬಹಳ ವರ್ಷಗಳ ಹಿಂದೆ, ಆಗಿನ್ನೂ ಪುಸ್ತಕ, ಪತ್ರಿಕೆಗಳನ್ನು ಓದುವುದನ್ನು ಆರಂಭಿಸಿದ ದಿನಗಳು. ಮನೆಯಲ್ಲಿ ನಿಯಮಿತವಾಗಿ ತರಿಸುತ್ತಿದ್ದ ವಾರಪತ್ರಿಕೆಗಳೆಂದರೆ ಸುಧಾ ಮತ್ತು ಪ್ರಜಾಮತ. ಸುಧಾದಲ್ಲಿ ಸರಣಿಯ ರೂಪದಲ್ಲಿ ಪ್ರಕಟವಾಗುತ್ತಿದ್ದ ಮಕ್ಕಳ  ಕಾರ್ಟೂನ್ ಸರಣಿಗಳು ನಮಗೆಲ್ಲ ಮುದ್ರಣ ಲೋಕದೊಂದಿಗಿನ ಮೊದಲ ಕೊಂಡಿಗಳು. ಅಲ್ಲಿಂದ ಆರಂಭಿಸಿ ನಂತರ ಮಕ್ಕಳ ಕತೆಗಳು, ಪದಬಂಧ, ಹೀಗೇ ಒಂದೊಂದಾಗಿ ನಮ್ಮ ಆಸಕ್ತಿಯ ವಸ್ತುಗಳು ವಿಸ್ತಾರವಾಗುತ್ತಿದ್ದವು. ಅಲ್ಲಿಂದ ಮುಂದೆ ಸಣ್ಣ ಕತೆಗಳು, ಧಾರಾವಾಹಿಗಳು ಪತ್ರಿಕೆಗಳಲ್ಲಿ ನಮ್ಮ ಓದಿನ ಭಾಗವಾದವು. ಪ್ರಕಟವಾಗುತ್ತಿದ್ದ ಸಣ್ಣ ಕತೆಗಳು, ಕಾದಂಬರಿ ಸರಣಿಗಳು ಜನಪ್ರಿಯ ಸಾಹಿತ್ಯದ ಮಾದರಿಯವು. ಇಂದಿನ ಟಿವಿ ಸೀರಿಯಲ್ಲುಗಳಂತೆ ಹೆಚ್ಚಾಗಿ ಕೌಟುಂಬಿಕ ವಸ್ತುಗಳನ್ನು ಆಧರಿಸಿದಂತವು ಮತ್ತು ಕೆಲವೊಮ್ಮೆ ಈ  ಕಾದಂಬರಿ ಸರಣಿಗಳು ರಸವೆಲ್ಲ ಮುಗಿದ ಮೇಲೂ ಜಗಿಯುತ್ತಲೇ ಹೋಗುವ ಚೂಯಿಂಗ್ ಗಮ್ಮಿನಂತೆ ನಿರಂತರ ಸಶೇಷವಾಗಿ ಇರುತ್ತಿದ್ದವು. 

ಇದೇ ಕಾಲಘಟ್ಟದಲ್ಲಿ ಉದಯವಾಣಿ ಸಮೂಹದಿಂದ ತುಷಾರ ಮಾಸ ಪತ್ರಿಕೆ ಪ್ರಕಟವಾಗಲು ಶುರುವಾಯಿತು. ತುಷಾರದ ಬರಹಗಳು ಪ್ರಾಥಮಿಕ ಮಾಧ್ಯಮಿಕ ಶಾಲೆಗಳಲ್ಲಿದ್ದ ನಮ್ಮ ಅರಿವಿಗೆ ನಿಲುಕುತ್ತಿದ್ದದ್ದು ಅಷ್ಟಕ್ಕಷ್ಟೇ. ಆದರೂ ಗಂಭೀರವಾದದ್ದೇನೋ ಇದರಲ್ಲಿದೆಯೆಂಬ ಕುತೂಹಲ ತುಷಾರ ಪತ್ರಿಕೆಯತ್ತ ಆಕರ್ಷಿಸುತ್ತಿತ್ತು. ತುಷಾರದಲ್ಲಿ ಪ್ರಕಟವಾಗುತ್ತಿದ್ದ ಸಣ್ಣಕತೆಗಳು ನಿಜಕ್ಕೂ ವಿಶಿಷ್ಟವಾಗಿರುತ್ತಿದ್ದವು. ಈ ಕತೆಗಳು ರಮ್ಯ ರಮಣೀಯವಾಗೇನೂ ಇರದಿರುತ್ತಿದ್ದರೂ ಅದೇಕೋ ಮನಸ್ಸಿಗೆ ತಟ್ಟುತ್ತಿದ್ದವು. ಆ ಕಾಲದಲ್ಲಿ ಓದಿದ ಈಶ್ವರಯ್ಯ ಅವರು ಬರೆದಿದ್ದ "ಓಡಿ ಹೋದವನು" ಎಂಬ ಕತೆ ಇಂದಿಗೂ ಅಸ್ಪಷ್ಟವಾಗಿ ನೆನಪಿದೆ. ಇಷ್ಟವಾಗುತ್ತಿದ್ದ ತುಷಾರದ ಇನ್ನೊಬ್ಬ ಲೇಖಕರೆಂದರೆ ಎಮ್. ವ್ಯಾಸ ಅವರು. ಅವರ ಕತೆಗಳ ಶೀರ್ಷಿಕೆಗಳು ಯಾವಾಗಲೂ ಎರಡಕ್ಷರದಲ್ಲಿರುತ್ತಿದ್ದದ್ದು ವಿಶೇಷ. ಅವರ ಬರವಣಿಗೆಯ ಶೈಲಿಯೂ ಬಹಳ ವಿಶಿಷ್ಟ.

ಇದೇ ಕಾಲಘಟ್ಟದಲ್ಲಿ ತುಷಾರ ಪತ್ರಿಕೆಯಲ್ಲಿ ಯುವ ಕತೆಗಾರರಾಗಿ  ಜಯಂತ ಕಾಯ್ಕಿಣಿಯವರೂ ಪರಿಚಯಗೊಂಡರು. ಅವರ ಮೊದಲ ಕತೆಗಳು ಅಷ್ಟಾಗಿ ನೆನಪಿಲ್ಲವಾದರೂ ನೆನಪಿರುವ ಒಂದು ವಿಚಾರವೆಂದರೆ ಅವರ ಕತೆಗಳು ಯಾವಾಗಲೂ  ಸಾಮಾನ್ಯ ವ್ಯಕ್ತಿಗಳ ಸಾಮಾನ್ಯ ಜೀವನ ವಿವರಗಳ ಕುರಿತೇ ಇರುತ್ತಿದ್ದವು. ಅಂದಿನ ದಿನಗಳಲ್ಲಿ ಸುಧಾ, ಪ್ರಜಾಮತದಂತಹ ಪತ್ರಿಕೆಗಳ ಕತೆಗಳ ಕಾದಂಬರಿಗಳ ನಾಯಕ ನಾಯಕಿಯರು ಸಮಾಜದ ಉಚ್ಛ ಸ್ತರದವರೇ ಆಗಿರುತ್ತಿದ್ದರು. ಈ ತುಷಾರದ ಕತೆಗಳ ಅದರಲ್ಲೂ ಜಯಂತರ ಕತೆಗಳ ಪಾತ್ರಗಳು ಮಾತ್ರ ಎಲ್ಲ ತಳುಕು ಬಳುಕು, ಹಣ ಅಂತಸ್ತಿನ ಹೊರಗೇ ಇರುತ್ತಿದ್ದವು. ನನ್ನ ಬಹಳ ಹಿಂದಿನ ಓದಿನ ಅಸ್ಪಷ್ಟ ನೆನಪುಗಳ ಆಧಾರದಲ್ಲೇ ಹೇಳಬಹುದಾದರೆ ವ್ಯಾಸರ ಕತೆಗಳಲ್ಲಿ ವ್ಯಕ್ತಿಯ ಆಳದ ಮನೋ ಪ್ರಪಂಚದ ಶೋಧ ಹೆಚ್ಚಾಗಿ ಇರುತ್ತಿತ್ತು. ಅದರಿಂದಲೇ ಶೀರ್ಷಿಕೆಗಳೂ ಹೆಚ್ಚಾಗಿ ವ್ಯಕ್ತಿ ವಿಶೇಷಣಗಳಾಗಿ ಇರುತ್ತಿದ್ದವು. ಕರ್ತ, ಗ್ರಸ್ತ, ವ್ಯಸ್ತ ಹೀಗೇ. ವ್ಯಾಸರ ಕತೆಗಳಲ್ಲಿ ದಕ್ಷಿಣ ಕನ್ನಡ ಪ್ರಾಂತ್ಯದ ಹಿನ್ನೆಲೆಯಿದ್ದರೆ  ಜಯಂತರ ಮೊದಲ ಕತೆಗಳೆಲ್ಲ ಉತ್ತರ ಕನ್ನಡ ಪ್ರಾಂತ್ಯದ ಹಿನ್ನೆಲೆಯವು.

ತುಷಾರದ ಓದಿನಿಂದ ಆರಂಭಿಸಿ ನಂತರದ ವರ್ಷಗಳಲ್ಲಿ ಹಲವು ಪತ್ರಿಕೆಗಳು, ವಿಶೇಷಾಂಕಗಳಲ್ಲಿ ಪ್ರಕಟವಾಗುತ್ತಿದ್ದ ಜಯಂತರ ಹಲವಾರು ಕತೆಗಳನ್ನು ಓದಿದ್ದೇನೆ. ಕಡೆಯಲ್ಲಿ ಯಾವುದೋ ಅನಿರೀಕ್ಷಿತ ತಿರುವೋ ಅಥವಾ ಚಕಿತಗೊಳಿಸುವ  ಘಟನೆಯೋ ಇನ್ನೇನನ್ನೋ ಬಳಸಿ ಆಕರ್ಷಿಸುವಂತಹ ಕತೆಗಳ ಮಾದರಿ ಜಯಂತರದ್ದು ಮೊದಲಿಂದ ಆಗಿರುತ್ತಿರಲಿಲ್ಲ. ಆದರೂ ಈ ಕತೆಗಳನ್ನು ಓದಬೇಕೆಂದು ನನಗೆ ಅನಿಸುತ್ತಿದ್ದದ್ದು ಯಾಕೆ ಎಂದು ಇಷ್ಟೊಂದು ವರ್ಷಗಳ ನಂತರ ಯೋಚಿಸಿದರೆ ಮುಖ್ಯವಾಗಿ ನೆನಪಾಗುವುದು ಅವರು ತಮ್ಮ ಎಲ್ಲ ಕತೆಗಳಲ್ಲೂ ಅತ್ಯಂತ ಸೂಕ್ಷ್ಮ ದೃಷ್ಟಿಯಿಂದ ನಮ್ಮದೇ ಸುತ್ತಲಿನ ಜೀವನದ ತುಣುಕು ಚಿತ್ರಗಳನ್ನು ಕಟ್ಟಿ ಕೊಡುವ ವಿಶಿಷ್ಟ ಶೈಲಿ.

ಇದೀಗ "ಅಮೃತ ಬಳ್ಳಿಯ ಕಷಾಯ" ಸಂಕಲನವನ್ನು ಓದುವಾಗ ಮತ್ತೊಮ್ಮೆ ಈ ಕತೆಗಾರನ ಮಾಂತ್ರಿಕ ಸ್ಪರ್ಶದ ಬಗೆಗೆ ಅಚ್ಚರಿಗೊಂಡಿದ್ದೇನೆ. ಸರಳವಾದ ಗದ್ಯದಲ್ಲಿ, ಆಡುಭಾಷೆಯ ನುಡಿಕಟ್ಟುಗಳಲ್ಲಿ, ಬೆರಗುಗೊಳಿಸುವಷ್ಟು ಸಮಂಜಸವಾದ ರೂಪಕಗಳಲ್ಲಿ ಅವರ ಕತೆಗಳು ಸೃಷ್ಟಿಯಾಗುತ್ತವೆ. ಏರಿಳಿತ, ತಿರುವು ಕಂದರಗಳಿಲ್ಲದೆ ಸಾಮಾನ್ಯ ಸನ್ನಿವೇಶಗಳ ಮೂಲಕ ಪಾತ್ರಗಳು ಶಕ್ತವಾಗಿ ರೂಪುಗೊಳ್ಳುತ್ತವೆ. ಈ ಸಂಕಲನದ ಮೊದಲ ಕತೆ "ಹಾಲಿನ ಮೀಸೆ"ಯಲ್ಲಿ ಬರುವ ಮನೆಗೆಲಸದ ಹುಡುಗ ಪುಂಡು (ಪುಂಡಲೀಕ ) ನಿಂದ ಹಿಡಿದು ಕೊನೆಯ ಕತೆ "ಅಮೃತ ಬಳ್ಳಿಯ ಕಷಾಯ"ದ ಫೋಟೋ ಫ್ರೇಮ್ ಅಂಗಡಿ ಗಂಗಾಧರನವರೆಗೂ ಪ್ರತಿ ಕತೆಯ ಪಾತ್ರಗಳೂ ನೆನಪಿನಲ್ಲುಳಿಯುವಂತವು. ಹಾಗೆಯೇ ಮೊದಲ ಕತೆಯಿಂದಲೇ ಗಮನಕ್ಕೆ ಬರುವ ಇನ್ನೊಂದು ಅಂಶವೆಂದರೆ ಚಿಕ್ಕ ಚಿಕ್ಕ ವಿವರಗಳ ಮೂಲಕ ಕತೆಯ ವಸ್ತು, ಆವರಣಗಳನ್ನು ಸಮರ್ಥವಾಗಿ ಕಟ್ಟುವ ಪರಿ. ಹೌದಲ್ಲ, ಇಂತಹದ್ದೆಲ್ಲ ನಾವು ಗಮನಿಸುವುದೇ ಇಲ್ಲವಲ್ಲ ಎಂದನಿಸುವಂತೆ ವಾಸ್ತವವನ್ನು ಬಿಡಿಸಿಡುವ ಅವರ ಕಲೆಗಾರಿಕೆ.

"ಮಿಥುನ್ ನಂಬರ್ ಟೂ", "ಚಂದಿರನೇತಕೆ ಓಡುವನಮ್ಮ" ಮುಂತಾದ ಕತೆಗಳು  ಬಡತನ, ಬವಣೆ, ಹತಾಶೆಗಳಿಗೆ  ತೆರೆದುಕೊಂಡರೂ, ಅಂತಹ ಸನ್ನಿವೇಶಗಳಲ್ಲೂ, ಅಂತಹವರ ಬದುಕಿನಲ್ಲೂ ಕಾಣಬಹುದಾದ ಜೀವನ್ಮುಖಿ ಧೋರಣೆ, ಉತ್ಸಾಹ, ಆಶಾವಾದ ಇವುಗಳನ್ನು  ಬಿಂಬಿಸುತ್ತವೆ.

"ತನ್ಮಯಿಯ ಸೂಟಿ" ಕತೆಯಲ್ಲಿ ಸ್ನಾತಕೋತ್ತರ ಪದವೀಧರೆಯಾಗಿದ್ದೂ ಮದುವೆಯಾಗಿ ಗಂಡನ ಮನೆಗೆ ಬಂದ ಮೇಲೆ ಅಡಿಗೆ, ಮಗುವಿನ ಪಾಲನೆ ಹೀಗೆ ಒಂದು ರೂಢಿಗತ ಜೀವನ ಶೈಲಿಯನ್ನು ಅನಿವಾರ್ಯವಾಗಿ ಒಪ್ಪಿಕೊಂಡಿರುವ ಕುಶೀಕಾಕಿಯ ಪಾತ್ರವಿದೆ. ಸೂಟಿಗೆ ಮುಂಬಯಿಯಿಂದ ಧಾರವಾಡಕ್ಕೆ ಬರುವ ತನ್ಮಯಿಯ ಕಾರಣದಿಂದ ತನ್ನ ಯೌವನದ ದಿನಗಳ ಉಲ್ಲಾಸವನ್ನು ನೆನಪು ಮಾಡಿಕೊಳ್ಳುವ ಕುಶೀಕಾಕಿ ತನ್ಮಯಿಗೆ ಬೈಸಿಕಲ್ ಕಲಿಸಿಕೊಡಲು ಮುಂದಾಗುವ ಸನ್ನಿವೇಶವಿದೆ. ಇದರ ನಡುವೆ ಸ್ವಲ್ಪ ಬಿಗು ಸ್ವಭಾವದ, ಗಂಡಿನ ದರ್ಪದ ಕಾಕಾನ ಪಾತ್ರ.

ಇನ್ನು "ಸಂತೆಯ ದಿನ" ಕತೆಯ ಪ್ಯಾರೇಲಾಲ, "ಅಮೃತ ಬಳ್ಳಿಯ ಕಷಾಯ"ದ ಮಾಯಿ ಇವರು ತಮ್ಮ ಅಂತಃಕರಣದಿಂದ ಸೆಳೆಯುತ್ತಾರೆ. ಯಾರೋ ಸಂಬಂಧವೇ ಪಡದವರು ಆಸ್ಪತ್ರೆ ಸೇರಿದಾಗ ಅವರ ಶುಶ್ರೂಷೆಗಾಗಿ ಓಡಾಡುತ್ತಾ, ಜೀವನದ ಇನ್ನೊಂದು ಮಾದರಿಯನ್ನು  ತೆರೆದಿಡುತ್ತಾರೆ. ಕೇಕೂ ಶುಕ್ಲಾ ತನ್ನ ಜರಾಕ್ಸ್ ಅಂಗಡಿಯ ಒಂದು ಮೂಲೆಯಲ್ಲಿ ಹಣ್ಣಿನಂಗಡಿ ನಡೆಸುವ ಸ್ನೇಹಿತ ಪ್ಯಾರೆಲಾಲನಿಗೆ ಸ್ವಂತದ ಖೋಲಿ ಮಾಡಿಕೊಳ್ಳುವಂತೆ ನೀಡುವ ಸಲಹೆಗೆ ಪ್ಯಾರೆಲಾಲನ ಉತ್ತರ ಅವನ ಬದುಕಿನ ಫಿಲಾಸಫಿಯನ್ನು ಹೇಗೆ ತೋರಿಸುತ್ತದೆ ನೋಡಿ- "ಈ ಜಗತ್ತೇ ನನ್ನದು ಅನ್ನುವ ಅಲೆಮಾರಿಗೆ ಹತ್ತಾರು ಸ್ಕ್ವೇರು ಫೂಟು ನೆಲವನ್ನು ಮಾತ್ರ ತನ್ನ ಮಾಲಕೀ ಹಕ್ಕು ಅನ್ನುವದು ಹೇಗೆ ಶಕ್ಯವಾದೀತು. ಈ ಜಗತ್ತಿಗೇ ಬಾಡಿಗೆಗೆ ಬಂದ ಜೀವ ಜಗತ್ತಿನ ತುಣುಕೊಂದನ್ನು ಕುತ್ತಿಗೆಗೆ ಕಟ್ಟಿಕೊಂಡು ಕಾಗದ ಪತ್ರ ಮಾಡಿ ಕುಣಿಯುವುದು ಎಂಥ ತಮಾಷೆ. ಛೇ , ಬಾಡಿಗೆ ಮನೆ, ಬಾಡಿಗೆ ವಿಳಾಸಗಳಲ್ಲಿ ಒಂದು ಬಗೆಯ ಹಾಯೆನಿಸುವ ಗುಣ ಇದೆ, ಈ ರೇಡಿಯೋದಂತೆ. ಎಷ್ಟೊಂದು ಹಾಡುಗಳು ಆಕಾಶದಿಂದ ಹಾರಿ ಬಂದು ಇದರ ಬಾಡಿಗೆ ರೆಂಬೆಯಲ್ಲಿ ಕೂತು ಹೋಗುತ್ತವೆ"

"ಈ ಜಗತ್ತೇ ನನ್ನದು" ಎಂಬ ಭಾವನೆ ಈ ಕತೆಗಾರರದ್ದೂ ಇರಬೇಕು. ಆದ್ದರಿಂದಲೇ ಒಂದು  ಸೂಕ್ಷ್ಮ ವಿನೋದದ, ಆಪ್ತವಾದ ದನಿಯಲ್ಲಿ ಎಲ್ಲ ರೀತಿಯ ಜನರ ನಿತ್ಯದ ಗೋಳುಗಳ ಹೋರಾಟದ ಚಿತ್ರಣವನ್ನು ನೀಡಲೂ, ನಾವು ಕಂಡೂ ಕಾಣದಂತೆ ಉಳಿಯುವ  ಇನ್ನೊಂದು ಮಗ್ಗುಲಿನ ಪರಿಚಯ ಮಾಡಿಸಲೂ ಅವರಿಂದ ಸಾಧ್ಯವಾಗುತ್ತದೆ.

ಮನುಷ್ಯರಾಗಿ ಇರುವುದು ಎಂದರೆ ಏನು ಎಂಬ ಪ್ರಶ್ನೆ ಬೇರೆ ಬೇರೆ ಉತ್ತರಗಳನ್ನು ಪಡೆಯುವ ಸಾಧ್ಯತೆಯಿರುತ್ತದೆ. ಕೆಲವೇ  ಪುಟಗಳ ಕತೆಯಲ್ಲಿ ಜಯಂತ ಕಾಯ್ಕಿಣಿಯವರು ಒಂದು ಪುಟ್ಟ ಲೋಕವನ್ನೇ ಅಥವಾ ಲೋಕದ ಒಂದು ಪುಟ್ಟ ಚಿತ್ರವನ್ನೇ ತೆರೆದಿಡುತ್ತಾ ಅದರಲ್ಲಿ ಪಾತ್ರಗಳ ಭಾವನೆಗಳ, ಪ್ರೇರಣೆಗಳ, ಕಾತರಗಳ ಪರಿಚಯ ಮಾಡಿಸುವ ರೀತಿ ಇಷ್ಟವಾಗುತ್ತದೆ. ಜಯಂತರ ಪ್ಯಾರೆಲಾಲನಂತೆಯೇ ಈ ಹಿಂದೆ ಲಂಕೇಶರ ನೀಲು ಸಹ ಕೋಟ್ಯಂತರ ಜನರ ಆಳದ ಅಪೇಕ್ಷೆಗಳ ಬಗ್ಗೆ ಹೇಳಿದ್ದು ನೆನಪಿಗೆ ಬರುತ್ತಿದೆ-

ಸುಖಕ್ಕಾಗಿ ಕಾತರಿಸುವ ಕೋಟ್ಯಂತರ ಜನಕ್ಕೆ
ಹಣ ಬೇಕು, ನೆಲ ಬೇಕು
ಕೆಲವರಿಗೆ ಪ್ರೀತಿ
ಎಲ್ಲೋ ಕೆಲವರಿಗೆ ಕುಗ್ರಾಮದ
ಹಿತ್ತಿಲೊಂದರ ಹೂವು,
ಬಡಜೋಗಿಯ ಹಾಡು.
-ನೀಲು

Saturday, June 14, 2014

ಮುದ ನೀಡುವ 'ಒಗ್ಗರಣೆ'

ಕಳೆದೊಂದು ವಾರದಿಂದ ಕನ್ನಡದ ಮಾಧ್ಯಮ ಲೋಕದಲ್ಲಿ ಚಟಪಟ ಸದ್ದು ಮಾಡುತ್ತಿರುವ ಪ್ರಕಾಶ್ ರೈಯವರ ಕನ್ನಡ ಸಿನಿಮಾ 'ಒಗ್ಗರಣೆ' ಮಾಮೂಲಿ ಸೂತ್ರಕ್ಕೆ ಕಟ್ಟು ಬೀಳದೆ ಕಣ್ಣು ಕಿವಿ ಮನಸು (ಮೂಗೂ?) ಎಲ್ಲವನ್ನೂ ಹಿತಮಿತವಾಗಿ ಆಹ್ಲಾದಗೊಳಿಸುವ ಚಿತ್ರ. ಇಂತಹ ಚಿತ್ರಗಳೂ ಬರುತ್ತಿರುವುದು ತುಂಬಾ ಒಳ್ಳೆಯ ಸೂಚನೆ. ಹಿಂದೆ ಪ್ರಕಾಶ್ ರೈ ನಿರ್ದೇಶಿಸಿ ನಟಿಸಿದ್ದ 'ನಾನೂ ನನ್ನ ಕನಸು' ಚಿತ್ರವನ್ನು ನೋಡಿ, ಅದರಲ್ಲಿನ ಕೌಟುಂಬಿಕ ಸಂಬಂಧಗಳ ನವಿರಾದ ನಿರೂಪಣೆಯನ್ನು ಮೆಚ್ಚಿಕೊಂಡಿದ್ದರಿಂದಲೇ ನಾನು  'ಒಗ್ಗರಣೆ' ಚಿತ್ರವನ್ನು ಅದು ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲೇ ನೋಡಲು ನಿರ್ಧರಿಸಿದ್ದು.

ಸ್ವಾದವನ್ನು ಹೆಚ್ಚಿಸಲು ಸಾರಿಗೊಂದು ಒಗ್ಗರಣೆ ಇರುವಂತೆ ಜೀವನದಲ್ಲಿ ಪ್ರೀತಿ ಸಹ ಅನಿವಾರ್ಯವಲ್ಲದಿದ್ದರೂ ಅಪೇಕ್ಷಿತ ಅನ್ನುವುದನ್ನು ಬಿಂಬಿಸುವುದು  ಸ್ವಲ್ಪ ವಿಚಿತ್ರವೆನಿಸುವ ಶೀರ್ಷಿಕೆಯ ಉದ್ದೇಶ ಇರಬಹುದು. ಅದೇನೇ ಇರಲಿ, ಈ ಚಿತ್ರದ ಬಗೆಗೆ ಬರೆಯುತ್ತಿರುವ ಬಹುಪಾಲು ಎಲ್ಲರೂ ಕತೆಯೊಂದಿಗೆ ತಳಕುಗೊಂಡಿರುವ ಅಡಿಗೆಯ ಎಳೆಯನ್ನುವಿಶೇಷವಾಗಿ ಪ್ರಸ್ತಾಪ ಮಾಡುತ್ತಾ ಇರುವುದರಿಂದ ಮತ್ತೆ ಅದೇ ಸಂಕೇತದ ಸುತ್ತು ಬರದೆ ಚಿತ್ರದ ಬಗ್ಗೆ ಮತ್ತೆ ಒಂದಿಷ್ಟು ನೋಟ ಹರಿಸಬಹುದೇನೋ.

ಚಿತ್ರದ ನಾಯಕ ಕಾರಣಾಂತರದಿಂದ ಮಧ್ಯ ವಯಸ್ಸಿನವರೆಗೂ ಮದುವೆಯಾಗದೇ ಉಳಿದ ಪುರಾತತ್ತ್ವ ಇಲಾಖೆಯ ಅಧಿಕಾರಿ . ನಾಯಕಿ ಕಂಠದಾನ ಕಲಾವಿದೆಯಾಗಿ ಕೆಲಸ ಮಾಡುತ್ತಾ ಮದುವೆಯ ವಯಸ್ಸು ದಾಟಿದ್ದರೂ ಮದುವೆಯಾಗದೇ ಉಳಿದಿರುವವಳು . ಬೇರೆ ಯಾರಿಗೋ ದೂರವಾಣಿ ಕರೆ ಮಾಡಹೊರಡುವ ನಾಯಕಿಯ ಕರೆ ನಾಯಕನಿಗೆ ಹೋಗಿ, ಇದರಿಂದ ಮೊದಲು ಸ್ವಲ್ಪ ಜಗಳ, ನಂತರ ಸ್ವಲ್ಪ ಸ್ನೇಹ, ಮುಂದೆ ಒಂದು ರೀತಿಯ  ಆಕರ್ಷಣೆ ಹೀಗೆ ಸಾಗುವ ಕತೆ. ತುಂಬಾ ಸರಳವೆನ್ನಬಹುದಾದ ಕತೆ  ಇದಾದರೂ, ಪ್ರತಿಭಾವಂತ ನಟ-ನಿರ್ದೇಶಕ ಪ್ರಕಾಶ್ ರೈಯವರ ಕೈಯಲ್ಲಿ  ನೈಜವಾದ, ನಂಬಬಹುದಾದ, ತಮಾಶೆಯಾದ ಚಿತ್ರವಾಗಿ ಮೂಡಿಬಂದಿದೆ.   ದೂರವಾಣಿಯಲ್ಲಿ ಆರಂಭವಾಗುವ ನಾಯಕ-ನಾಯಕಿಯರ ಗೆಳೆತನ  ಮುಂದುವರೆದಂತೆ ಇಬ್ಬರೂ ಭೇಟಿಯಾಗುವ ಯೋಚನೆ ಮಾಡುತ್ತಾರಾದರೂ ತಮ್ಮ ಏರುತ್ತಿರುವ ವಯಸ್ಸಿನ ಕಾರಣಕ್ಕೋ  ಏನೋ ಹಿಂಜರಿಕೆಯಾಗಿ ಇಬ್ಬರೂ ತಾವು ಹೋಗದೇ, ತಮ್ಮ ಹೆಸರಿನಲ್ಲಿ  ತಮ್ಮ ಕಿರಿಯ ಸಂಬಂಧಿಗಳನ್ನು ಮುಖಾಮುಖಿ ಭೇಟಿಗೆ ಕಳಿಸುತ್ತಾರೆ. ಇದು ಮೊದಲಿಗೆ ತಮಾಶೆಯ ಸನ್ನಿವೇಶ ಹುಟ್ಟು ಹಾಕಿದರೂ ಮುಂದೆ ಎರಡೂ ಜೋಡಿಗಳಿಗೂ  ಇರುಸು ಮುರುಸು ಉಂಟು ಮಾಡುವಲ್ಲಿಗೆ ತಲುಪುತ್ತದೆ.  ವಯಸ್ಕ ಜೋಡಿಯಾಗಿ ಪ್ರಕಾಶ್ ರೈ -ಸ್ನೇಹಾ , ಯುವ ಜೋಡಿಯಾಗಿ ತೇಜಸ್-ಸಂಯುಕ್ತಾ ತಮ್ಮ ತಮ್ಮ ಪಾತ್ರಗಳಿಗೆ ಪೂರ್ಣ ನ್ಯಾಯ ಒದಗಿಸಿದ್ದಾರೆ. 

ಎಪ್ಪತ್ತರ ದಶಕದಲ್ಲಿ ಹಿಂದಿ ಚಿತ್ರರಂಗದ ಬಸು ಚಟರ್ಜಿ, ಹೃಷಿಕೇಶ್ ಮುಖರ್ಜಿ ಇವರು ನಿರ್ದೇಶಿಸುತ್ತಿದ್ದ ಲಘು ಹಾಸ್ಯದ ಮಧ್ಯಮ ವರ್ಗದ ಕತೆಗಳಾಗಿರುತ್ತಿದ್ದ ರೋಮಾಂಟಿಕ್ ಕಾಮೆಡಿ ಚಿತ್ರಗಳನ್ನು ಹೋಲುವ ಚಿತ್ರವಿದು. ಆ ಕಾಲ ಘಟ್ಟದ ಹಲವಾರು ಚಿತ್ರಗಳಲ್ಲಿ  ಅಮೋಲ್ ಪಾಲೇಕರ ಅಭಿನಯಿಸುತ್ತಿದ್ದರು.  'ಒಗ್ಗರಣೆ' ನೋಡುವಾಗ ಸಹ ಅಂದಿನ  ಚಿತ್ರಗಳಲ್ಲಿರುತ್ತಿದ್ದ ಲವಲವಿಕೆ, ಜೀವನೋತ್ಸಾಹ, ಸಂಭ್ರಮದ ಅನುಭವ ಆಗುತ್ತದೆ. ನವಿರು ಭಾವನೆಗಳ ಮೃದು ಸ್ನೇಹ ಸಂಬಂಧಗಳ ಅಭಿವ್ಯಕ್ತಿಗೆ ಬೇಕಾದ ಸೂಕ್ಷ್ಮತೆ, ಲಘು ಸ್ಪರ್ಶಗಳನ್ನು ಕನ್ನಡದ  ಚಿತ್ರ ನಿರ್ದೇಶಕರು ತೋರುವುದು ಸಂತಸದ ಹೆಮ್ಮೆಯ ವಿಷಯ. 


ಒಂಟಿಗಳಾಗಿದ್ದೂ ತಮ್ಮ ತಮ್ಮ ದೈನಂದಿನ  ಜೀವನದಲ್ಲಿ ನೆಮ್ಮದಿಯಾಗಿಯೇ ಇದ್ದವರು ಅಚಾನಕ್ಕಾಗಿ ಒಂದು ರಾಂಗ್ ನಂಬರ್ ಕರೆಯ ಕಾರಣದಿಂದ ಪರಿಚಿತರಾಗಿ, ಪರಸ್ಪರರ  ದನಿಗೆ ಮಾತಿಗೆ ಕಾಯುವಷ್ಟು ಆಪ್ತರಾಗುವುದು, ಹೊಸ ಉಲ್ಲಾಸ ಪಡೆಯುವುದು ಎಲ್ಲವೂ ಸಹಜವಾಗಿ ಸುಂದರವಾಗಿ ಮೂಡಿ ಬರುತ್ತದೆ. 


'ಛೊಟೀ ಸಿ ಬಾತ್' ಚಿತ್ರದ ಒಂದು ಹಾಡಿನ ಈ ಸಾಲುಗಳನ್ನು ನೋಡಿ-


ನ ಜಾನೆ ಕ್ಯು, ಹೋತಾ ಹೈ ಎ ಝಿಂದಗಿ ಕೆ ಸಾಥ್  

ಅಚಾನಕ್ ಎ ಮನ್ ಕಿಸಿ ಕೆ ಜಾನೆ ಕೆ ಬಾದ್ 
ಕರೆ ಫಿರ್ ಉಸ್ಕಿ ಯಾದ್, ಛೊಟೀ ಛೊಟೀ ಸಿ ಬಾತ್ 
ನ ಜಾನೆ ಕ್ಯು 

ನನಗನ್ನಿಸಿದ್ದು ಎಲ್ಲಕ್ಕಿಂತ ಮುಖ್ಯವಾಗಿ 'ಒಗ್ಗರಣೆ' ಪ್ರತಿಬಿಂಬಿಸುವುದು ಇದನ್ನೇ.  ನಮ್ಮ ಮನಸ್ಸುಗಳ ಸಖ್ಯ, ಸಾಂಗತ್ಯಗಳ ಹಂಬಲ  ತುಡಿತಗಳನ್ನೇ.  ಛೊಟೀ ಛೊಟೀ ಬಾತ್ ಗಳನ್ನು  ನೆನೆಯುವ, ನೆನೆದು ಖುಷಿ ಪಡುವ, ಒಂದು ಮೆಚ್ಚುಗೆ ಒಂದು ಆತ್ಮೀಯ ನುಡಿಗೂ ಅರಳುವ ಎಲ್ಲರ ಆಳದ ಮನೋಸ್ಥಿತಿಯನ್ನೇ . 

ಹೊರರಾಜ್ಯದ ಕಲಾವಿದೆ ಸ್ನೇಹ ಅವರ ಅಭಿನಯ ಗಮನ ಸೆಳೆಯುತ್ತದೆ. ಮಧ್ಯ ವಯಸ್ಸಿನಲ್ಲಿ ಆಕಸ್ಮಿಕವಾಗಿ ಬಂದೊದಗುವ ಪ್ರೀತಿಯನ್ನು  ಸ್ವೀಕರಿಸುವುದಕ್ಕೆ ಮತ್ತು  ಮರಳಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕೆ ಆಕೆಯ ಪಾತ್ರ ಅನುಭವಿಸುವ ಹಿಂಜರಿಕೆ, ಮುಜುಗರಗಳು ಪರಿಣಾಮಕಾರಿಯಾಗಿ ಮೂಡಿಬಂದಿವೆ.  ಹಾಗೆಯೇ ಪ್ರಕಾಶ್ ರೈ ಅಭಿನಯ. ಸಂಪೂರ್ಣ ಆತ್ಮ ವಿಶ್ವಾಸದ, ಧೈರ್ಯಶಾಲಿ ವ್ಯಕ್ತಿತ್ವದ ಮನುಷ್ಯನಾಗಿದ್ದರೂ ಪ್ರೀತಿ ನಿವೇದನೆಯ ವಿಷಯದಲ್ಲಿ ಮನಸ್ಸಿನಲ್ಲಿದ್ದದ್ದನ್ನು ಹೇಳಲಾರದೆ ತೊಳಲಾಡುವ ವಯಸ್ಕ ಪ್ರೇಮಿಯ ಪಾತ್ರ ನೆನಪಿನಲ್ಲುಳಿಯುತ್ತದೆ.

ಕಲಾತ್ಮಕ ಚಿತ್ರಗಳನ್ನುಳಿದಂತೆ ಉಳಿದ ಬಹುಪಾಲು ಎಲ್ಲ ಸಿನಿಮಾಗಳಲ್ಲೂ  ಸುಂದರ ಆಕಸ್ಮಿಕಗಳು, ಅಸಾಧ್ಯ ತಿರುವುಗಳು ಸಾಮಾನ್ಯವೇ ಆದರೂ 'ಒಗ್ಗರಣೆ'ಯಂತಹ ಚಿತ್ರಗಳಲ್ಲಿ  ಸನ್ನಿವೇಶಗಳು ಪ್ರಯತ್ನಪೂರ್ವಕವಾಗಿ ನಿರ್ಮಾಣವಾದಂತೆ ತೋರಬರದೇ ಕತೆಗೆ , ಪಾತ್ರಕ್ಕೆ ಪೂರಕವಾಗಿ ಒದಗಿ ಬರುತ್ತವೆ.  ಸಂಭಾಷಣೆ, ಹಾಸ್ಯ, ಹಿನ್ನೆಲೆ ಸಂಗೀತ, ಹಾಡುಗಳು, ಛಾಯಾಗ್ರಹಣ ಹೀಗೆ ಎಲ್ಲ ವಿಭಾಗಗಳಲ್ಲೂ ಒಂದು ಪಕ್ವತೆ ಇದೆ.  ಕನ್ನಡದ ಹತ್ತು ಹಲವು ಚಿತ್ರಗಳಲ್ಲಿ  ಮುಖ್ಯ ಸಮಸ್ಯೆ ಅನಿಸುವ ಅಬ್ಬರ, ಅತಿರಂಜನೆ, ಅತಿರೇಕಗಳು  ಈ ಚಿತ್ರದಲ್ಲಿ ಇಲ್ಲ.  

ನಾನು ನೋಡಿರುವ, ಮೆಚ್ಚಿರುವ ಇತರ ಕನ್ನಡ ಚಲನಚಿತ್ರಗಳನ್ನು ನೆನೆದು ಪಟ್ಟಿ ಮಾಡಿದ್ದೇನೆ.  'ಒಗ್ಗರಣೆ' ಯಂತಹ ಸದಭಿರುಚಿಯ ಕನ್ನಡ ಚಿತ್ರಗಳು ಹೆಚ್ಚು ಹೆಚ್ಚು ಬರಲಿ. 

ನನ್ನ ಮೆಚ್ಚಿನ ಕನ್ನಡ ಚಲನ ಚಿತ್ರಗಳು 

Sunday, May 18, 2014

ಕರ್ಮ: ಕನ್ನಡದಲ್ಲೊಂದು ಹೊಸ ಕಾದಂಬರಿ



ಮೊನ್ನೆ ಆಫೀಸಿನಲ್ಲಿ ಗೆಳೆಯರೊಬ್ಬರು ಇತ್ತೀಚೆಗೆ ಪ್ರಕಟವಾಗಿರುವ ಕನ್ನಡದ ಕಾದಂಬರಿಯೊಂದನ್ನು ಉಡುಗೊರೆಯಾಗಿ ಕೊಟ್ಟರು. ಕರಣಂ ಪವನ್ ಪ್ರಸಾದ್ ಎಂಬುವವರು ಬರೆದಿರುವ 'ಕರ್ಮ' ಎಂಬ ಹೆಸರಿನ ಕಾದಂಬರಿ. ಹಾಗೇ ಕಣ್ಣಾಡಿಸಿದಾಗ ಬರವಣಿಗೆಯ ಶೈಲಿ ಸ್ವಾರಸ್ಯಕರ ಎನಿಸಿತು. ಆರಂಭಿಸಿದ ಮೇಲೆ ಪುಸ್ತಕ ಕುತೂಹಲದಿಂದ ಓದಿಸಿಕೊಂಡುಹೋಯಿತು.

ಪುಸ್ತಕದ ಹೆಸರು ಮತ್ತು ಮುಖಪುಟ ಅನಂತಮೂರ್ತಿಯವರ ಬಹುಮುಖ್ಯ ಕಾದಂಬರಿ 'ಸಂಸ್ಕಾರ'ವನ್ನು ನೆನಪಿಗೆ ತರುತ್ತವೆ. ಪುಸ್ತಕದ ಪ್ರಥಮ ಪ್ರತಿಯನ್ನು ಎಸ್. ಎಲ್. ಭೈರಪ್ಪನವರು ಓದಿ ಮೆಚ್ಚಿರುವ ವಿಷಯವನ್ನು ಲೇಖಕರು ಮುನ್ನುಡಿಯಲ್ಲಿ ಪ್ರಸ್ತಾಪಿಸುತ್ತಾರೆಮುನ್ನುಡಿಯಲ್ಲಿ ಲೇಖಕರು ಕಥೆಯ ಸಂಕ್ಷಿಪ್ತ ಪರಿಚಯವನ್ನು ಹೀಗೆ ಕಾಣಿಸುತ್ತಾರೆ: ತಂದೆಯ ಸಾವಿನ ನಂತರದಲ್ಲಿ ಪ್ರಸ್ತುತ ನಗರ ಸಮಾಜದ ವ್ಯಕ್ತಿ ಹದಿನೈದು ದಿನಗಳ ಸಮಯದಲ್ಲಿ ಹಲವಾರು ಹೊಳಹುಗಳನ್ನು ಕಂಡು ನಂಬಿಕೆ ಮತ್ತು ಶ್ರದ್ಧೆಯ ತೊಳಲಾಟದಲ್ಲಿ ಸಿಲುಕುತ್ತಾನೆ. ಹೊಳಹುಗಳಿಂದ ಪ್ರಾರಂಭವಾಗಿ ಕೊನೆಯವರೆಗೆ ಆತನಲ್ಲಿ ಆಗುವ ಸ್ಥಿತ್ಯಂತರದ ಯಾನವೇ 'ಕರ್ಮ'.

'ಪ್ರಸ್ತುತ ಕನ್ನಡ ಕಾದಂಬರಿ ಲೋಕ ನಿಂತ ನೀರಾಗಿದೆ ಎಂದು ಒಬ್ಬರು ಹಲುಬಿದ್ದನ್ನು ಕಂಡು ಕಾದಂಬರಿಯಲ್ಲಿ ತೊಡಗಲು ಮನಸ್ಸಾಯಿತು' ಎಂದೂ ಲೇಖಕರು ಮುನ್ನುಡಿಯಲ್ಲಿ ಬರೆಯುತ್ತಾರೆ. ಇದೆಲ್ಲವೂ ಆರಂಭದಲ್ಲಿಯೇ ಕೃತಿಯಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದವು.

ಕಾದಂಬರಿ ಪ್ರಕಾರ ನನ್ನ ಮೆಚ್ಚಿನ ಸಾಹಿತ್ಯ ಪ್ರಕಾರ. ಯಾವುದೇ ಉತ್ತಮ ಕಾದಂಬರಿ ಓದುವಾಗಲೂ ಇನ್ನೊಂದೇ ಪ್ರಪಂಚದ ಪ್ರವೇಶ ಮಾಡುವ ಅನುಭವ ಆಗುತ್ತದೆ. ಇಂತಹದೊಂದು ಪ್ರಪಂಚದಲ್ಲಿ ಪ್ರತಿಭಾವಂತ ಲೇಖಕ ಅಥವಾ ಲೇಖಕಿ ಜೀವನದಲ್ಲಿ ಹೊರನೋಟಕ್ಕೆ ಕಾಣುವ ಸತ್ಯಕ್ಕೂ ಹಾಗೂ ನಿಜಕ್ಕೂ ಇರುವ ದ್ವಂದ್ವಗಳನ್ನು ಶೋಧಿಸುವುದು ಸಾಧ್ಯವಿರುತ್ತದೆ.  'ಕರ್ಮ'ದ ಕೇಂದ್ರ ಪಾತ್ರವಾಗಿರುವವರು ನಗರದವರಾದ್ದರಿಂದ ಆರಂಭದಿಂದಲೇ ಬಹಳಷ್ಟು ವಿವರಗಳು ಪರಿಚಿತವಾದ ಸಂಗತಿಗಳೆನಿಸುತ್ತವೆ. ಏಕರೂಪಿ ನಾಗರಿಕತೆಯು ಸಾಂಸ್ಕೃತಿಕ ವಿಶಿಷ್ಟತೆಗಳನ್ನೆಲ್ಲ ಬುಡಮೇಲು ಮಾಡುತ್ತಾ ತಂದು ಹೇರುತ್ತಿರುವ ಒಂದು ನಿರ್ದಿಷ್ಟ ಜೀವನಕ್ರಮ ನಗರದ  ಬಹುಪಾಲು ಜನರ ಜೀವನ ಕ್ರಮ ಆಗಿರುವುದರಿಂದ ವಿವರಗಳು  ಬಹುಶಃ ಬಹಳ ಮಂದಿ ಓದುಗರಿಗೆ ಅರಿವಿರುವ ಸಂಗತಿಗಳಾಗುತ್ತವೆ. ಸುರೇಂದ್ರ ಹಾಗೂ ಆತನ ಅಂತರ್ಜಾತೀಯ ವಧು ನೇಹಾ ಇವರ ದೈನಿಕ ಜೀವನದ ವಿವರಗಳು ಸಹ ಸಹಜವಾಗಿ ಮೂಡಿಬರುತ್ತವೆ. ಎಸ್. ಎಲ್. ಭೈರಪ್ಪನವರಂತಹ ನುರಿತ ಲೇಖಕರಿಂದ "ನಿಮ್ಮ ಕಾದಂಬರಿಯಲ್ಲಿ ಬೆಂಗಳೂರು ವಲಯದ ಮುಂದುವರೆದ ಜೀವನ ಪಧ್ಧತಿ ನೈಜವಾಗಿ ಮೂಡಿಬಂದಿದೆ. ನಿಮ್ಮ ಗ್ರಹಿಕೆಯಿಂದ ಕಥನ ಉತ್ಪ್ರೇಕ್ಷೆಯಿಂದ ಹೊರತಾಗಿದೆ" ಎಂದು ಹೊಗಳಿಸಿಕೊಂಡ ಹೆಗ್ಗಳಿಕೆಯೂ ಲೇಖಕರಿಗಿದೆ.

ಇಂತಹ ನಗರಸಮಾಜದ ಜೀವನಕ್ರಮದವರು ತಾವು ಹಿಂದೆ ಬಿಟ್ಟು ಬಂದಿರುವ ತಮ್ಮ ಮೂಲದ ದೇಸೀ ಸಂಸ್ಕೃತಿಯೊಡನೆ ಮತ್ತೆ ಮುಖಾಮುಖಿಯಾಗುವಾಗ ಉಂಟಾಗುವ ತಾಕಲಾಟವೆ ಕಾದಂಬರಿಯ ಕೇಂದ್ರ ವಸ್ತು. ತನ್ನ ತಂದೆಯ ಸಾವಿನ ಹಿನ್ನೆಲೆಯಲ್ಲಿ ಹುಟ್ಟೂರಿಗೆ ಹಿಂದಿರುಗುವ ಸುರೇಂದ್ರ ಅನುಭವಿಸುವ ಪರಕೀಯತೆ, ಗೊಂದಲ, ತೊಳಲಾಟ, ಸ್ಥಿತ್ಯಂತರ ಇವೆಲ್ಲವುಗಳ ವಿವರ ಸಾವಿನ ನಂತರದ ಶ್ರಾಧ್ಧ ಕಾರ್ಯಗಳ ವಿವರಗಳ ಹಿನ್ನೆಲೆಯಲ್ಲಿ ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿವೆ.

'ಕರ್ಮ'ವನ್ನು ಓದುವಾಗ ನನಗೆ ಈ ಹಿಂದೆ ಓದಿದ್ದ ಎರಡು ಪ್ರಮುಖ ಕಾದಂಬರಿಗಳು ನೆನಪಿಗೆ ಬಂದವು. ಒಂದು, ಯು. ಆರ್. ಅನಂತಮೂರ್ತಿಯವರು ಬರೆದ 'ಸಂಸ್ಕಾರ'. ಇನ್ನೊಂದು, ಎಸ್. ಎಲ್. ಭೈರಪ್ಪನವರು ಬರೆದ 'ತಬ್ಬಲಿಯು ನೀನಾದೆ ಮಗನೆ'. ಕಥಾ ವಸ್ತುವಿನಲ್ಲಿ ಒಂದು ಬಗೆಯ ಸಾಮ್ಯತೆ ಇರುವುದರಿಂದ ಈ ಎರಡು ಕಾದಂಬರಿಗಳ ಹಿನ್ನೆಲೆಯೊಂದಿಗೆ  'ಕರ್ಮ' ಕಾದಂಬರಿಯ  ಮೂಲದ್ರವ್ಯದ ಪರಿಗಣನೆ ಮಾಡುವುದು ಸಹಕಾರಿಯಾಗಬಹುದು.

'ಸಂಸ್ಕಾರ' ಕಾದಂಬರಿಯನ್ನು ಓದಿ ಬಹಳ ವರ್ಷಗಳೇ ಆಗಿದ್ದರೂ (ಗಿರೀಶ್ ಕಾರ್ನಾಡ ಅದ್ಭುತವಾಗಿ ಅಭಿನಯಿಸಿರುವ ಇದೇ ಕಾದಂಬರಿಯ ಆಧಾರಿತ ಚಲನ ಚಿತ್ರವನ್ನು ಇತ್ತೀಚೆಗೆ ನೋಡಿದೆ) ನನಗೆ ಇಂದಿಗೂ ನೆನಪಿರುವುದೆಂದರೆ ಕಾದಂಬರಿಯ ಕೇಂದ್ರ ಪಾತ್ರಧಾರಿ ಪ್ರಾಣೇಶಾಚಾರ್ಯರು ಧರ್ಮ ಸೂಕ್ಷ್ಮಗಳಿಂದಾಗಿ ವೈಯಕ್ತಿಕ ಜೀವನದಲ್ಲಿ ಅನುಭವಿಸಬೇಕಾಗಿ ಬರುವ ತಲ್ಲಣದ ಚಿತ್ರಣಇಲ್ಲಿ ಪ್ರಾಣೇಶಾಚಾರ್ಯರಿಗೆ ತಾವು ನಂಬುವ ಧರ್ಮಕ್ಕೂ ಮತ್ತು ತಮಗೂ ಇರುವ ಸಂಬಂಧವು  ಸಮಾಜದ ನಿರೀಕ್ಷೆಗಳಿಗನುಗುಣವಾಗಿ ನಿರ್ಧಾರವಾಗುವುದು. ಹಾಗೆಯೇ ವ್ಯಕ್ತಿ ಸ್ವಾತಂತ್ರ್ಯದ ಪರಿವೆಯೇ ಇಲ್ಲದ ಇತರರು ಅವರಲ್ಲಿ ಸೃಷ್ಟಿಸುವ ಅಸಹಾಯಕತೆಯ ಚಿತ್ರಣವೂ  ಧರ್ಮದ ಇನ್ನೊಂದು ಮುಖದ ಪರಿಚಯ ಮಾಡಿಸುತ್ತದೆ.

ಇನ್ನು ಎಸ್. ಎಲ್. ಭೈರಪ್ಪನವರ 'ತಬ್ಬಲಿಯು ನೀನಾದೆ ಮಗನೆ' ಕಾದಂಬರಿಯಲ್ಲಿ ವಿದೇಶಿ ಮಹಿಳೆ ಹಿಲ್ಡ ಮತ್ತು ದೇವಾಲಯದ ಅರ್ಚಕ ವೆಂಕಟರಮಣ ಇವರಲ್ಲಿ ಗೋವಿನ ಬಗೆಗೆ ಪರಸ್ಪರರಲ್ಲಿರುವ ವಿರುದ್ಧದ ದೃಷ್ಟಿಕೋನದ ಕಾರಣದಿಂದ ವಾಗ್ಯುದ್ಧವೇ  ನಡೆಯುತ್ತದೆ. ಆಗ ವೆಂಕಟರಮಣ ಪಾಶ್ಚಾತ್ಯ ಜೀವನಕ್ರಮ, ನಂಬಿಕೆ, ಶ್ರದ್ಧೆ, ಜೀವನಧ್ಯೇಯ ಇವೆಲ್ಲದರ ಪ್ರಶ್ನೆ ಮಾಡುತ್ತಾನೆ. ಕಾದಂಬರಿಯ ಅಂತ್ಯದಲ್ಲಿ ಶ್ರಧ್ಧೆ, ನಂಬಿಕೆಗಳ ಮಹತ್ವವನ್ನು ಎತ್ತಿ ಹಿಡಿಯುವಂತೆ ಹಿಂದೆ ಗೋಹತ್ಯೆಗೆ ಮುಂದಾಗಿದ್ದ ಹಿಲ್ಡಳಿಗೆ ಆವಳ ತಪ್ಪಿಗೆ ಶಿಕ್ಷೆಯೇನೋ  ಎಂಬಂತೆ ಆಕೆಯ ಪುಟ್ಟ ಮಗುವಿಗೆ ಹಸುವಿನ ಕೆಚ್ಚಲಿನ ಹಾಲೇ ಬೇಕಾಗುವ ಸನ್ನಿವೇಶ ಸೃಷ್ಟಿಯಾಗುತ್ತದೆ.

'ಸಂಸ್ಕಾರ' ಕಾದಂಬರಿಯು ರೂಢಿಗತ ಪಧ್ಧತಿಯ ಕಠೋರತೆ, ಧರ್ಮದ ಹೆಸರಿನಲ್ಲಿ ನಡೆಯುವ ಗೋಸುಂಬೆತನದ ವರ್ತನೆಗಳು ಇತ್ಯಾದಿಗಳ ಪ್ರಶ್ನೆ ಮಾಡುತ್ತಾ ಹೊಸದೊಂದು ಪ್ರಜ್ಞೆಯ ಸಾಧ್ಯತೆಯತ್ತ ಬೆರಳು ಮಾಡಿದರೆ, 'ತಬ್ಬಲಿಯು ನೀನಾದೆ ಮಗನೆ' ಕಾದಂಬರಿಯು ಪೂರ್ವ-ಪಶ್ಚಿಮಗಳ ವಿಭಿನ್ನ ಜೀವನ ಕ್ರಮ, ನಂಬಿಕೆಗಳ ಮುಖಾಮುಖಿಯನ್ನು ತುಂಬಾ ಸ್ವಾರಸ್ಯವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾದರೂ ಭಿನ್ನವಾದೊಂದು ಚಿಂತನೆಯ ಸಾಧ್ಯತೆಯನ್ನೇ ಅಸಾಧುವೆನ್ನುವಂತೆ ಭಾರತೀಯ ಶ್ರದ್ಧೆಯ ಶ್ರೇಷ್ಟತೆಯನ್ನು  ಪ್ರಶ್ನಾತೀತಗೊಳಿಸುವ ಪ್ರಯತ್ನ ಮಾಡುತ್ತದೆ.

'ಕರ್ಮ' ಸಹ ಭೈರಪ್ಪನವರ ಮಾರ್ಗದಲ್ಲಿ ಸಾಗುತ್ತದೆ. ಸಮಾಜದ ಆಧುನಿಕ ಕಾಲಘಟ್ಟದಲ್ಲಿ ರೂಢಿಗತ ಆಚರಣೆಗಳ, ನಂಬಿಕೆಗಳ ಪ್ರಸ್ತುತತೆಯನ್ನು ಪ್ರಶ್ನಿಸುವ, ಹೊಸತು-ಹಳತರ ಘರ್ಷಣೆಯ ಸಾಧ್ಯತೆಯನ್ನು ತೋರುತ್ತಲೇ ಕಾದಂಬರಿಯು ಕಡೆಯಲ್ಲಿ "ನಂಬಿಕೆ ಚಂಚಲ, ಶ್ರದ್ಧೆ ಅಚಲ" ಎಂಬ ಯಥಾಸ್ಥಿತಿ ವಾದಕ್ಕೆ ಶರಣಾಗುತ್ತದೆ. ಕಾದಂಬರಿಯ ಉದ್ದಕ್ಕೂ ಒಬ್ಬ ದುರ್ಬಲ ವ್ಯಕ್ತಿತ್ವದ, ಕೇವಲ ಹಣಗಳಿಕೆಯಷ್ಟೇ ಗುರಿಯಾಗಿರುವ, ಸಂಪ್ರದಾಯ ವಿರೋಧಿಯಾದ ವ್ಯಕ್ತಿಯಾಗಿ ವರ್ಣಿಸಲ್ಪಡುವ ಸುರೇಂದ್ರನನ್ನು ಕಾದಂಬರಿಯ ಕಡೆಯಲ್ಲಿ ಬರುವ ಒಂದು ವಿಚಿತ್ರ ತಿರುವಿನ ಮೂಲಕ ಒಬ್ಬ ಅಬ್ರಾಹ್ಮಣ ತಂದೆಯ ಪಾಪದ ಸಂತಾನವೆಂದು ಸಿಧ್ಧಪಡಿಸುವುದಂತೂ ತೀರಾ ಅನಿರೀಕ್ಷಿತ. ಆಧುನಿಕ ನಗರವಾಸಿ ಯುವಜನರು ಮತ್ತವರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಪಲ್ಲಟಗಳನ್ನು ದಟ್ಟ ವಿವರಗಳ ಮೂಲಕ ಆಕರ್ಷಕವಾಗಿ, ಕುತೂಹಲಕರವಾಗಿ ನಿರೂಪಿಸುವಲ್ಲಿ ಯಶಸ್ವಿಯಾಗುವ ಕೃತಿಯು ಕಡೆಯಲ್ಲಿ ಪ್ರಸ್ತುತ ಕಾಲಘಟ್ಟದ ವೈದೃಶ್ಯಗಳ ಮುಖಾಮುಖಿಯ ಪ್ರಶ್ನೆಯನ್ನು ವೈಚಾರಿಕವಾಗಿ ಎದುರಿಸದೆ ಜಾತಿ, ಸಂಸ್ಕಾರ ಎಂಬ ಅವೇ ಹಳೇ ಸವಕಲು ವಿವರಣೆಗಳ ಮೊರೆ ಹೋಗಿರುವುದು ನಿರಾಸೆ ಮೂಡಿಸಿತು.

ಈಚೆಗೆ ಓದಿದ ದೇವನೂರು ಮಹಾದೇವರ 'ಎದೆಗೆ ಬಿದ್ದ ಅಕ್ಷರ' ಕೃತಿಯಲ್ಲಿ 'ಮಾನವೀಯತೆ ಅಂತಾರಲ್ಲ - ಅದರ ಬಗ್ಯೆ' ಎಂಬ ಲೇಖನದಲ್ಲಿ ಓದಿದ ಸಾಲು ನೆನಪಾಗುತ್ತಿದೆ- "...ಜನ್ಮ, ಕರ್ಮ, ವರ್ಣ, ಜಾತಿಕಟ್ಟುಪಾಡು, ಸತ್ಯಕ್ಕೆ ಬಂದರೂ ಅದರೊಳಗೂ ಪಾರಮಾರ್ಥಿಕ ಸತ್ಯ, ಲೌಕಿಕ ಸತ್ಯ ಎಂದು ಸತ್ಯವನ್ನೂ ಇಬ್ಬಂದಿ ಮಾಡಿ ಒಡಲು ಪಡೆದ ಕೃತಿಗಳೇ ಇಲ್ಲಿ ಹೆಚ್ಚಾಗಿ ಸಮಾಜದ ಛಿದ್ರತೆಗೆ ಇವುಗಳ ಕಾಣಿಕೆಯೂ ಇದೆ."

'ಕರ್ಮ' ಕಾದಂಬರಿ ಇದಕ್ಕೆ ಹೊರತಾಗಬಹುದಿತ್ತು. ಅದರಲ್ಲೂ 'ಕನ್ನಡ ಕಾದಂಬರಿ ಲೋಕ ನಿಂತ ನೀರಾಗಿದೆ' ಎಂಬ ಟೀಕೆಗೆ ಉತ್ತರ ರೂಪದಲ್ಲಿ ಕಾದಂಬರಿಯ ರಚನೆಗೆ ತೊಡಗಿದ ಈ ಪ್ರತಿಭಾವಂತ ಬರಹಗಾರ ಶ್ರಧ್ಧೆ, ಸಂಸ್ಕೃತಿಗಳ ವಿಚಾರವನ್ನು ಕಾದಂಬರಿಯ ಬಂಧದಲ್ಲೇ ಇನ್ನಷ್ಟು ವಿಚಾರಕ್ಕೆ ಹಚ್ಚಬಹುದಿತ್ತೇನೋ. "ಶ್ರದ್ಧಾ ಭಂಗವಾದರೆ ಸಂಸ್ಕೃತಿ ಉಳಿಯಲ್ಲ" ಎಂಬ ವೆಂಕಟೇಶ ಭಟ್ಟರ ಮಾತು ಮತ್ತು ಅದಕ್ಕೆ ಉತ್ತರವಾಗಿ "ಆಯಿತು, ಸಂಸ್ಕೃತಿ ಎಂದರೆ ಏನು ಎಂಬುದರ ಅಧ್ಯಯನ ಆಗಬೇಕು" ಎಂಬ ಅವರ ಮೊಮ್ಮಗ ಪುರುಷೋತ್ತಮನ ಮಾತು (ಪು. ೧೦೬-೧೦೭) ಇಂತಹದೊಂದು ಪ್ರಶ್ನೆಯ ವಿಶ್ಲೇಷಣೆಯ ಸುಳಿವು ಕಾಣಿಸುತ್ತದೆ. "ವೈದಿಕದ ಜತೆಗೇ ಜಾತ್ಯತೀತತೆ, ಸಮಾನತೆ, ಪ್ರಗತಿಪರತೆಗಳೂ ಶ್ರದ್ಧೆಯ ಭಾಗಗಳಾಗಬೇಕೆಂದು" ಪುರುಷೋತ್ತಮ ಹೇಳಬಹುದಿತ್ತೇನೋ. ಆತ ಹಾಗೇನಾದರೂ ಹೇಳಿದ್ದಲ್ಲಿ 'ಕರ್ಮ'ದಲ್ಲಿ 'ಸಂಸ್ಕೃತಿ' ಯ ವ್ಯಾಖ್ಯಾನ ಅರ್ಥಪೂರ್ಣವಾಗಿರುತ್ತಿತ್ತು.

Sunday, May 11, 2014

ಕನ್ನಡ, ಕಲಿಕಾ ಮಾಧ್ಯಮ, ಭಾಷಾಭಿಮಾನ: ಕೆಲವು ಟಿಪ್ಪಣಿಗಳು

ಕಲಿಕಾ ಮಾಧ್ಯಮ ಪೋಷಕರ ಹಕ್ಕು ಎಂದು ಸುಪ್ರೀಮ್  ಕೋರ್ಟಿನ ಸಂವಿಧಾನ ಪೀಠ ನೀಡಿದ ಮಹತ್ವದ ತೀರ್ಪಿನ ಕುರಿತಾದ ಸುದ್ದಿ ಪ್ರಕಟವಾದ ಮೇಲೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ನಮ್ಮ ಹಲವಾರು ಸಾಹಿತಿಗಳ, ಶಿಕ್ಷಣ ತಜ್ಞರ, ಭಾಷಾ ಸಂಘಟನೆಗಳ ಸದಸ್ಯರ ವಲಯದಲ್ಲಿ ಸಾಕಷ್ಟು ಸಂಚಲನೆಯನ್ನೇ ಉಂಟುಮಾಡಿದೆ. 

ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಕಲಿಕಾ ಮಾಧ್ಯಮವನ್ನಾಗಿ ಮಾತೃಭಾಷೆಯನ್ನು ಕಡ್ಡಾಯಗೊಳಿಸುವ ಕುರಿತು ಕರ್ನಾಟಕ ಸರ್ಕಾರ ಇಪ್ಪತ್ತು ವರುಷಗಳಷ್ಟು ಹಿಂದೆ ಆದೇಶ ಹೊರಡಿಸಿದ್ದು, ಆ ಆದೇಶವನ್ನು ಪ್ರಶ್ನಿಸಿ ಕೆಲವು  ಖಾಸಗಿ ಶಾಲೆಗಳು ಮತ್ತು ಪೋಷಕರ ಸಂಘಟನೆಗಳು ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದವು. ಅಲ್ಲಿಂದ ಈ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ, ನಂತರದಲ್ಲಿ ಸಂವಿಧಾನ ಪೀಠಕ್ಕೆ ವರ್ಗವಾಗಿ, ಇದೀಗ ಸಂವಿಧಾನ ಪೀಠದ ತೀರ್ಪು ಹೊರಬಿದ್ದಿದೆ. ಈ ತೀರ್ಪಿನ ಹಿನ್ನೆಲೆಯಲ್ಲಿ ಈ ವಿಚಾರ ಸದ್ಯಕ್ಕೆ ಒಂದು ರೀತಿಯ ಅಂತ್ಯ ಕಂಡಿದೆ ಎನ್ನಬಹುದೇನೋ.

ಈ ಸುದ್ದಿಗೆ ಜನರ ಪ್ರತಿಕ್ರಿಯೆ ಹೇಗಿರಬಹುದೆಂಬ ಕುತೂಹಲ ಇತ್ತು. ಮೊದಲು ಎದುರಾದ ನನ್ನ ಹೆಂಡತಿಗೆ ಕೋರ್ಟಿನ ತೀರ್ಪಿನ ವಿಷಯ ತಿಳಿಸಿ, ಅವಳ ಅಭಿಪ್ರಾಯವೇನೆಂದು ಕೇಳಿದೆ. 'ತೀರ್ಪು ಸರಿಯಾಗಿಯೇ ಇದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಭಿಮಾನಕ್ಕಾಗಿ ಭಾಷೆಯನ್ನು ಆರಿಸಿಕೊಂಡು ಆ ಕಾರಣದಿಂದಲೇ ಉಳಿದವರಿಗಿಂತ ಹಿಂದಾಗಬೇಕಿಲ್ಲ. ಹೀಗಾಗಿ ಆಯ್ಕೆಯ ಸ್ವಾತಂತ್ರ್ಯ ಪೋಷಕರಿಗೇ ಬಿಡುವುದು ಸರಿ' ಎನ್ನುವುದು ಅವಳ ಅಭಿಪ್ರಾಯವಾಗಿತ್ತು.

ಮೇಲುನೋಟಕ್ಕೆ ಬಹುಶಃ ಇದು ಬಹಳ ಜನರ, ಮುಖ್ಯವಾಗಿ ಪೋಷಕರುಗಳ, ಅಭಿಪ್ರಾಯವೂ ಆಗಿರಬಹುದು. ಆದರೂ ಈ ವಿಚಾರ ಮತ್ತೆ ಮತ್ತೆ ಮನಸ್ಸಿನಲ್ಲಿ ಸುಳಿಯುತ್ತಿತ್ತು. ಕಲಿಕಾ ಮಾಧ್ಯಮದ ಪ್ರಶ್ನೆ ಸರಳವಾದ ಪ್ರಶ್ನೆಯಲ್ಲವೆಂಬುದೇನೋ ಈ ಹಿಂದೆಯೂ ನನ್ನ ಅರಿವಿಗೆ ಬಂದಿತ್ತು. ಇದರಲ್ಲಿರುವ ವಿವಿಧ ಆಯಾಮಗಳೇನು ಎನ್ನುವುದರ ಬಗೆಗೆ ನಾನು ಇನ್ನಷ್ಟು ಸ್ಪಷ್ಟತೆ ಪಡೆಯಬೇಕಾಗಿತ್ತು.

ಯೋಚಿಸುತ್ತಾ ಹೋದಂತೆ ಸಮಸ್ಯೆಯ ಜಟಿಲತೆ ಅರಿವಿಗೆ ಬರತೊಡಗಿತು. ನಾಡಿಗೆ ಸಮಾಜಕ್ಕೆಸಂಬಂಧಪಡುವ ಯಾವ ಸಮಸ್ಯೆಯೂ ಸರಳವಾಗಿರುವುದಿಲ್ಲ ಎನ್ನುವ ಸತ್ಯ ನಾವು ಮೊದಲು ನೆನಪಿನಲ್ಲಿಟ್ಟುಕೊಳ್ಳಬೇಕಾದ  ಸಂಗತಿ. ಸುಪ್ರೀಂ ಕೋರ್ಟ್ ಆದೇಶದ ನಂತರದ ಈ ಕೆಲದಿನಗಳಲ್ಲಿ ಪತ್ರಿಕೆಗಳಲ್ಲಿ ಕಂಡು ಬರುತ್ತಿರುವ ಪ್ರತಿರೋಧ ನೋಡಿದರೆ ಕಲಿಕಾ ಮಾಧ್ಯಮದ ವಿಚಾರ ಒಂದು ನೇರ ಪರಿಹಾರವುಳ್ಳ ಸರಳ ಸಮಸ್ಯೆಯೇನೋ ಎಂಬ ಧಾಟಿಯಲ್ಲಿ ಪ್ರತಿಕ್ರಿಯೆಗಳು ಇರುವಂತೆ ತೋರುತ್ತದೆ.

ಕಲಿಕಾ ಮಾಧ್ಯಮದ ವಿಚಾರಕ್ಕೆ ತಳಕು ಹಾಕಿಕೊಂಡಂತೆ ಇತರ ಅನೇಕ ವಿಚಾರಗಳೂ ಇವೆ. ಒಂದೊಂದಾಗಿ ಪರಿಗಣಿಸಿದರೆ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲು ಅನುಕೂಲವಾಗಬಹುದು. ಇಂತಹ ವಿಚಾರಗಳು ಪ್ರತಿಯೊಬ್ಬರಿಗೂ ತಮ್ಮದೇ ವೈಯಕ್ತಿಕ ದೃಷ್ಟಿಕೋನಕ್ಕೆ ಅನುಸಾರವಾಗಿ ಗೋಚರವಾಗುವಂತಹವು. ನಮ್ಮ ನಿರ್ದಿಷ್ಟ ಹಿನ್ನೆಲೆ, ಸನ್ನಿವೇಶ, ಉದ್ದೇಶ ಇವುಗಳಿಗೆ ಅನುಸಾರವಾಗಿಯೇ ನಮ್ಮ ಅಭಿಪ್ರಾಯಗಳು ಇರುವುದೂ ಸಹಜ.

೧. ಕಲಿಕಾ ಮಾಧ್ಯಮವಾಗಿ ಮಾತೃಭಾಷೆ
ನಾನು ನನ್ನ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಪಡೆದದ್ದು ನನ್ನ ಮಾತೃಭಾಷೆಯಾದ  ಕನ್ನಡದ ಮಾಧ್ಯಮದಲ್ಲಿ. ಆ ಕಾಲಕ್ಕೆ ಕಲಿಕಾ ಮಾಧ್ಯಮ ಈಗಿನಂತೆ ಚರ್ಚೆಯ ವಿಷಯವೇ ಆಗಿರಲಿಲ್ಲ. ಪುಟ್ಟ ಹಳ್ಳಿಯ ಏಕ ಶಿಕ್ಷಕ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ 'ಒಂದು ಎರಡು ಬಾಳೆಲೆ ಹರಡು ಮೂರು ನಾಕು ಅನ್ನ ಹಾಕು' ಎಂದು ಗುಂಪಿನಲ್ಲಿ ಹಾಡುತ್ತಾ ಹತ್ತರವರೆಗೆ ಎಣಿಸಲು ಕಲಿತದ್ದು 'ಶಿಕ್ಷೆ' ಎನಿಸುವುದು ಸಾಧ್ಯವೇ ಇರಲಿಲ್ಲ. ಏಳನೇ ತರಗತಿಯವರೆಗೂ ವಿಜ್ಞಾನ, ಗಣಿತ, ಸಮಾಜ  ಶಾಸ್ತ್ರ  ಈ ಎಲ್ಲ ವಿಷಯಗಳ ಪರಿಚಯವಾದದ್ದೂ ಕನ್ನಡದಲ್ಲೇ.  ನಮಗೆ ಆಗಲೇ ತಿಳಿದಿರುವಂತಹದರ ಬಗ್ಗೆ ಇನ್ನಷ್ಟು ಅರಿವನ್ನು ಪೇರಿಸುತ್ತ ಹೋಗುವುದೇ ನಾವು ಯಾವುದೇ ವಿಷಯವನ್ನು ಕಲಿಯುವ ಮಾರ್ಗ ಆಗಿರುವುದರಿಂದ ಇದು ನಮ್ಮದೇ  ಭಾಷೆಯಲ್ಲಿ ಹೆಚ್ಚು ಸರಾಗ. ಕಿರಿಯ ತರಗತಿಗಳಲ್ಲಿ ನಮ್ಮ ನಿತ್ಯದ ಭಾಷೆಯಲ್ಲದ ಇಂಗ್ಲಿಷ್ ನಂತಹ ಭಾಷೆಯಲ್ಲಿ ಬೋಧಿಸುವ ವಿಷಯಗಳು ಬಹುಪಾಲು ಗ್ರಹಿಕೆಯ ಹೊರಗೇ ಉಳಿದು ಪರೀಕ್ಷಾ ದೃಷ್ಟಿಯಿಂದ ಕೇವಲ ನೆನಪಿನ ಶಕ್ತಿಯಿಂದ ಪುನರುಚ್ಛರಿಸುವ 'ಗಿಳಿಪಾಠ' ಗಳಾಗುವ ಸಾಧ್ಯತೆಯಿರುತ್ತದೆ.

ಅಲ್ಲದೆ, ನಮ್ಮ ಆಲೋಚನೆ, ಅಭಿವ್ಯಕ್ತಿ ಗಳು ಸಾಧ್ಯವಾಗುವುದೇ ಒಂದು ಭಾಷೆಯ ಆಧಾರದಿಂದ. ನಮ್ಮದಲ್ಲದ ಭಾಷೆಯಲ್ಲಿ ಬೋಧಿಸುವುದರಿಂದ ಅಲ್ಲಿ ಭಾಷೆ ಕೇವಲ ಮಾಹಿತಿ ವರ್ಗಾವಣೆಯ ಸಾಧನವಾಗುತ್ತದೆ. ಹೀಗೆ ಮಾಡುವುದರಿಂದ ಭಾಷೆಯ ಮೂಲಭೂತ ಸತ್ತ್ವದಿಂದಲೇ ನಾವು ವಂಚಿತರಾದಂತೆ. ಭಾಷೆಯೊಂದರ ಅಪರಿಮಿತ ಸಾಧ್ಯತೆಗಳು, ಅದು ತೆರೆದು ತೋರಬಹುದಾದ ದೊಡ್ಡದೊಂದು ಒಳ ಪ್ರಪಂಚ ಇವೆಲ್ಲವೂ ನಮಗೆ ಮುಖ್ಯವಾಗಲೇಬೇಕಾಗುತ್ತದೆ.  ಕೇವಲ ಮಾಹಿತಿ ಸಂವಹನೆಯ ಮಾಧ್ಯಮವಾಗಿ ಭಾಷೆಯೊಂದಿಗೆ ನಮ್ಮ ಸಂಬಂಧವಾಗುವುದಾದರೆ ಜರ್ಮನ್ ತತ್ತ್ವಜ್ಞಾನಿ ಹೇಡೆಗರ್ ಹೇಳಿದಂತೆ "ಭಾಷೆಯೇ ಮನುಷ್ಯನನ್ನು ಮಾತಾಡಿದಂತೆ" ಆಗುತ್ತದೆ.

ಹೀಗೆ ನಮ್ಮದೇ ಭಾಷೆಯೊಡನೆ ನೋಡುವ, ಆಲೋಚಿಸುವ, ಅರ್ಥ ಮಾಡಿಕೊಳ್ಳುವ ಸಂಬಂಧ ನಮಗೆ ಸಾಧ್ಯವಾದರೆ ಮುಂದೆ ಇಂಗ್ಲಿಷ್ನಂತಹ ಬೇರೊಂದು ಭಾಷೆಯಲ್ಲೂ  ಉತ್ತಮವಾದದ್ದರ ಪ್ರಯೋಜನ ಪಡೆಯುವುದೂ ಸಾಧ್ಯವಾಗುತ್ತದೆ.

ಯಾವುದೇ ಕಾರಣದಿಂದ ಕನ್ನಡ ಕಲಿಕಾ ಮಾಧ್ಯಮದ ಶಾಲೆಗೆ ಮಕ್ಕಳನ್ನು ಸೇರಿಸಲು ಇಷ್ಟವಿಲ್ಲದ ಪೋಷಕರೂ ಆ ಮಕ್ಕಳಿಗೆ ಕನಿಷ್ಟ ಹತ್ತನೇ ತರಗತಿಯವರೆಗಾದರೂ ಪ್ರಥಮ ಭಾಷೆಯಾಗಿ ಕನ್ನಡವನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಗತ್ಯ.

೨. ಇಂಗ್ಲಿಷ್ ಮೀಡಿಯಮ್ ಬೇಡಿಕೆ ಏಕೆ?
ಮುಖ್ಯವಾದ ಕಾರಣ ಉದ್ಯೋಗದ ದೃಷ್ಟಿ ಎನ್ನುವುದು ಎಲ್ಲರಿಗೂ ಗೊತ್ತಿರುವಂತದ್ದೇ. ಕಳೆದ ಕೆಲ ದಶಕಗಳಲ್ಲಿ ಬಂಡವಾಳಶಾಹಿ, ಜಾಗತೀಕರಣ, ನಗರೀಕರಣ, ತಂತ್ರಜ್ಞಾನ ಮತ್ತು ಅದಕ್ಕೆ ಪೂರಕವಾದ  ಉದ್ಯೋಗಗಳ  ಸೃಷ್ಟಿ   ಹೆಚ್ಚಿದಂತೆಲ್ಲ  ಸಹಜವಾಗಿಯೇ ಎಲ್ಲರೂ  ಈ ಬಗೆಯ ಉದ್ಯೋಗಗಳನ್ನು ತಮ್ಮ ಮಕ್ಕಳೂ ಪಡೆಯಲೆಂಬ ಹಂಬಲವನ್ನು ಹೊಂದಲು ತೊಡಗಿದರು. ಹೀಗಾಗಿ  ಇಂಗ್ಲಿಷ್ ಮಾಧ್ಯಮದ ಬೇಡಿಕೆಯೂ ಇನ್ನಷ್ಟು ಅಧಿಕವಾಗತೊಡಗಿತು. ಪ್ರಾಥಮಿಕ  ಹಂತದಿಂದಲೇ ಇಂಗ್ಲಿಷ್ ಮೀಡಿಯಂ ಶಾಲೆಗಳಿಗೆ ಸೇರಿಸುವ ಪ್ರವೃತ್ತಿಯೂ ಹೆಚ್ಚಾಗತೊಡಗಿತು.

ವೈಯಕ್ತಿಕವಾಗಿ ಹೇಳುವುದಾದರೆ, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಪಡೆದದ್ದು ಐಟಿ ಕ್ಷೇತ್ರದಲ್ಲಿ ಉದ್ಯೋಗ ಗಳಿಸಲು ಅಥವಾ ನಿರ್ವಹಿಸಲು ನನಗೆ  ತೊಡಕಾಗಲಿಲ್ಲ. ತೊಂಬತ್ತರ ದಶಕದಿಂದ ಬೆಂಗಳೂರಿನಲ್ಲಿ ವೇಗವಾಗಿ ಬೆಳೆಯತೊಡಗಿದ ಐಟಿ ಕ್ಷೇತ್ರದಲ್ಲಿನ ಉದ್ಯೋಗಾವಕಾಶದ ಫಲಾನುಭವಿಗಳಾಗಿರುವ ನನ್ನಂತಹ ಇತರ ಹಲವಾರು ಕನ್ನಡಿಗರ ಅನುಭವವೂ ಬಹುಶಃ ಇದಕ್ಕಿಂತ ಭಿನ್ನವಾದದ್ದೇನೂ ಅಲ್ಲ. ಆರಂಭದ ಶಿಕ್ಷಣ ಮಾತೃಭಾಷೆಯಲ್ಲಿ ಪಡೆದದ್ದರಿಂದ  ಖಂಡಿತವಾಗಿ ಅನುಕೂಲವೇ ಆಗಿದೆ. ಏಕೆಂದರೆ ನನ್ನ ಮಟ್ಟಿಗೆ ಇಂಗ್ಲಿಷ್ ಭಾಷೆ ಕೇವಲ ಮಾರುಕಟ್ಟೆಯ ಭಾಷೆಯೂ , ತಂತ್ರಜ್ಞಾನದ ಸಾಧನ ರೂಪವೂ ಆಗದೇ ಉಳಿದಿದ್ದರೆ ಅದಕ್ಕೆ ಕಾರಣ ನನ್ನ ಆರಂಭದ ಶಿಕ್ಷಣ ನನ್ನದೇ ಭಾಷೆಯಲ್ಲಿದ್ದು  ನನ್ನ ಮನಸ್ಸನ್ನು ತೊಡಗಿಸಿಕೊಳ್ಳುವಂತಹದ್ದು ಆಗಿದ್ದದ್ದು ಹಾಗೂ ಭಾಷೆಯ ಸಾಧ್ಯತೆಗಳ ಅರಿವು ಚಿಕ್ಕಂದಿನಲ್ಲೇ ಲಭಿಸಿದ್ದು.

೩. ಭಾಷಾಭಿಮಾನ
 ಐಟಿ-ಬಿಟಿ ಯವರಿಂದ ಕನ್ನಡದ ಅವನತಿಯಾಗುತ್ತಿದೆ, ಇಂತಹ ಕ್ಷೇತ್ರಗಳ ಆಕಾಂಕ್ಷಿಗಳಿಗಾಗಿಯೇ ಆಂಗ್ಲ ಮಾಧ್ಯಮದ ಶಾಲೆ­­ಗಳನ್ನು ತೆರೆದಿರುವ ಶಿಕ್ಷಣದ ವ್ಯಾಪಾರಸ್ಥರಿಂದ ಹಾನಿಯಾಗುತ್ತಿದೆ ಎಂದು ಭಾವೋದ್ವೇಗದಿಂದ ಮಾತನಾಡುವುದರಿಂದ ಕನ್ನಡಕ್ಕೆ ಲಾಭವಾಗುವ ಸಾಧ್ಯತೆಗಳು ಕಡಿಮೆ. ಇನ್ನೂ ಮೂಲಭೂತವಾಗಿ ಯೋಚಿಸುತ್ತ ಜಾಗತೀಕರಣ, ಬಂಡವಾಳಶಾಹಿಯಂತಹ ಬೆಳವಣಿಗೆಗಳನ್ನು ಟೀಕಿಸುತ್ತಾ ಕೂರುವುದರಿಂದಲೂ ಉಪಯೋಗವಿಲ್ಲ. ಟೀಕೆಗಳನ್ನು ಮಾಡುವ ಮೊದಲು ಇಂತಹ ಬೆಳವಣಿಗೆಗಳ ಹಿಂದಿನ ರಾಜಕೀಯ, ಆರ್ಥಿಕ ಸತ್ಯಗಳನ್ನು ನೆನಪು ಮಾಡಿಕೊಳ್ಳುವುದು ಒಳ್ಳೆಯದು.

ಯಾವುದೇ ಸಾಮಾಜಿಕ ಅಥವಾ ಆರ್ಥಿಕ ವ್ಯವಸ್ಥೆ ಸರ್ವರಿಗೂ ಸಲ್ಲುವುದು ಸಾಧ್ಯವಾಗದ ಮಾತು. ವ್ಯವಸ್ಥೆಯಲ್ಲಿರುವ ಉತ್ತಮ ಅಂಶಗಳ ಲಾಭ ಪಡೆಯುತ್ತಾ, ಉತ್ತಮವಲ್ಲದ ಅಂಶಗಳನ್ನು ಆಡಳಿತಾತ್ಮಕವಾಗಿ ನಿಭಾಯಿಸುವುದಷ್ಟೇ ನಾವು ಮಾಡಬಹುದಾದದ್ದು. ಐಟಿ-ಬಿಟಿ ಕ್ಷೇತ್ರವನ್ನು ಹಾಗೂ ಅದರಲ್ಲಿರುವವರನ್ನೂ ಸಾರಾಸಗಟಾಗಿ ಸಂಸ್ಕೃತಿ ಭ್ರಷ್ಟರೆಂದೂ ಭಾಷಾ ವಿರೋಧಿಗಳೆಂದೂ ಜರೆಯುವುದು ನ್ಯಾಯವಲ್ಲ.

ವಸಾಹತುಶಾಹಿಗೆ ಸಾಧನವಾಗಿ ಇಂಗ್ಲಿಷ್ ನಮ್ಮ ದೇಶಕ್ಕೆ ಕಾಲಿಟ್ಟು ದೇಶೀಯ ಸಂಸ್ಕೃತಿ ನಾಶಪಡಿಸಿತು ಎಂದು ಹೇಳುವಂತೆ ಐಟಿ-ಬಿಟಿ ಬಂದು ಕನ್ನಡವನ್ನು ನಾಶ ಮಾಡಿತೆಂದು ಹೇಳಲಾಗದು. ಐಟಿ-ಬಿಟಿ ಬಂದಿರುವುದು ನಮ್ಮ ಮತ್ತು ನಮ್ಮ ಸರ್ಕಾರಗಳ ಆಹ್ವಾನದಿಂದಲೇ. ಅದು ಹೇಗೆಯೇ ಪ್ರವೇಶಿಸಿದ್ದರೂ ಇಂಗ್ಲಿಷ್ ಭಾಷೆಯ ಸಂಪರ್ಕದಿಂದ ಕನ್ನಡ ಭಾಷೆಗೂ ಲಾಭವಾಗಿಲ್ಲ ಎಂದೂ  ಹೇಳಲಾಗದು. ಹಾಗೆಯೇ ಐಟಿ-ಬಿಟಿ ಕ್ಷೇತ್ರದಿಂದ ನಾಡಿಗೇನೂ ಲಾಭವೇ ಆಗಿಲ್ಲ ಎನ್ನುವುದೂ ಸತ್ಯವಲ್ಲ. ಆರ್ಥಿಕವಾಗಿ ಲಾಭದಾಯಕವಾದ ಈ ಉದ್ಯಮದಿಂದ ಭಾಷೆಯ ಮೇಲಾಗಬಹುದಾದ ವ್ಯತಿರಿಕ್ತ ಪರಿಣಾಮಗಳನ್ನು ನಿಯಂತ್ರಿಸುವುದರತ್ತ ನಾವು ಗಮನ ಹರಿಸುವುದು ಒಳಿತು.

ಆಧುನಿಕ ಕಾಲದ ಅಗತ್ಯಗಳಿಗೆ ಹೊಂದುವಂತೆ ಪಠ್ಯಕ್ರಮದಲ್ಲಿ, ಬೋಧನಾ ಕ್ರಮದಲ್ಲಿ ಬದಲಾವಣೆಗಳನ್ನು ತರುವುದು, ಇಂಗ್ಲಿಷ್ ಬಗ್ಗೆ ಅನಗತ್ಯ ಹೆಮ್ಮೆ, ಕನ್ನಡದ ಬಗ್ಗೆ ನಿರಾಧಾರದ ಅಗೌರವ ಎರಡನ್ನೂ  ಹೋಗಲಾಡಿಸುವಂತೆ ಕನ್ನಡವನ್ನು, ಕನ್ನಡ ಶಾಲೆಗಳನ್ನು ಆಕರ್ಷಕವಾಗಿಸುವುದು  ಇವು ನಮ್ಮ ಸರ್ಕಾರ ಮಾಡಬಹುದಾದ ಹಾಗೂ ಕನ್ನಡವನ್ನು ಪ್ರೀತಿಸುವ ಎಲ್ಲರೂ ಮಾಡಬಹುದಾದ ಕೆಲಸಗಳು.

ಮತ್ತೆ ಸುಪ್ರೀಂ ಕೋರ್ಟಿನ ತೀರ್ಪಿನ ವಿಷಯಕ್ಕೆ ಬರುವುದಾದರೆ,- ಭಾಷೆಯ ಆಯ್ಕೆ, ಕಲಿಕಾ ಮಾಧ್ಯಮದ ಆಯ್ಕೆ ಇಂತಹ ವಿಚಾರಗಳಲ್ಲಿ ಕಾನೂನು, ಕಟ್ಟಳೆಯ ಮಾರ್ಗಕ್ಕಿಂತ ಜನರಲ್ಲಿ ಈ ವಿಚಾರದ ಸಾಧಕ-ಬಾಧಕಗಳ ಪರಿಚಯ ಮಾಡಿಕೊಡುವ ಮಾರ್ಗ ಒಳ್ಳೆಯದು.


Tuesday, March 25, 2014

ಮರೆಯಾದ ಮೇಧಾವಿ - ಯಶವಂತ ಚಿತ್ತಾಲ

 "ಹೇಳದೇ ಕೇಳದೇ ಎಂಬಂತೆ ಉದ್ಭವಿಸಿ, ಧುತ್ ಎಂದು ಕಣ್ಣೆದುರಿಗೆ ಹಾಜರಾದ ಪರಿಸ್ಥಿತಿಯ ಅರ್ಥ ನಿಚ್ಚಳವಾಗುತ್ತ ಹೋದ ಹಾಗೆ..."  ಚಿತ್ತಾಲರ 'ಶಿಕಾರಿ' ಕಾದಂಬರಿಯ ಆರಂಭದ ಸಾಲು ಇದು.

ಮೊನ್ನೆ ಭಾನುವಾರ, ಬೆಳಗಿನ ದಿನಪತ್ರಿಕೆಯಲ್ಲಿ 'ಹಿರಿಯ ಸಾಹಿತಿ ಚಿತ್ತಾಲ ಇನ್ನಿಲ್ಲ' ಎಂಬ ತಲೆಬರಹದ ವರದಿಯನ್ನು ಓದಿದಾಗಿನಿಂದ ನನ್ನ ಮನಸ್ಸಿನ ಸ್ಥಿತಿಯೂ ಮೇಲಿನ ಸಾಲಿನಂತೆ ಇದೆ.

ಸಾಹಿತಿಯಾಗಿ, ಅದರಲ್ಲೂ ಕಾದಂಬರಿಕಾರರಾಗಿ ನಾನು ಬಹಳವಾಗಿ ಮೆಚ್ಚಿಕೊಂಡವರು ಯಶವಂತ ಚಿತ್ತಾಲ. ಹಿಂದೊಮ್ಮೆ 'ನಾನೇಕೆ ಬರೆಯುತ್ತೇನೆ?' ಎಂಬ ತಮ್ಮದೊಂದು  ಲೇಖನದಲ್ಲಿ 'ನೀವೇಕೆ ಬರೆಯುತ್ತೀರಾ?' ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ- "ನನ್ನ ಹುಟ್ಟನ್ನು, ಅಸ್ತಿತ್ವವನ್ನು ಅಲ್ಲಗಳೆಯುವಷ್ಟರ ಮಟ್ಟಿಗೆ ಅವುಗಳಿಗೆ ನಿರಾಸಕ್ತವಾದ ಈ ವಿಶಾಲ ವಿಶ್ವಕ್ರಮದಲ್ಲಿ, ಅಮೂರ್ತವಾದ ಸಮಾಜದಲ್ಲಿ ನನ್ನ ವೈಯಕ್ತಿಕ ಇರವಿನ ಪ್ರಸ್ತುತತೆಯನ್ನು ಕಂಡುಕೊಳ್ಳುವ ಹಾಗೂ ಆ ಮೂಲಕ ನನ್ನ ಸಮಾಜವನ್ನು, ಈ ವಿಶ್ವವನ್ನು ನನಗೆ ಜೀವಂತವಾಗಿಸುವ, ಅರ್ಥಪೂರ್ಣವಾಗಿಸುವ ಕ್ರಿಯೆಯಲ್ಲಿ ನನ್ನ ಸೃಷ್ಟಿ ಕಾರ್ಯ ಮಹತ್ವಪೂರ್ಣವಾದ ಭಾಗವಹಿಸಿದೆ."

ತಮ್ಮದೇ ಆದ ಭಾವ ಪ್ರಪಂಚ, ವೈಚಾರಿಕ ಪ್ರಪಂಚಗಳನ್ನು ಹೊಂದಿದ್ದ ಚಿತ್ತಾಲರು ತಮ್ಮ ಪ್ರತಿಯೊಂದು ಕೃತಿಯಲ್ಲೂ ಪಾತ್ರಗಳ ಮೂಲಕ ತಮ್ಮ ವೈಯಕ್ತಿಕ ಪ್ರಸ್ತುತತೆಯ ಹುಡುಕಾಟವನ್ನು ನಡೆಸಿದರು. ಬೌದ್ಧಿಕ ಹಾಗೂ ತಾತ್ತ್ವಿಕ ಒಳನೋಟಗಳನ್ನು ತಮ್ಮ ಕೃತಿಗಳಲ್ಲಿ ಕತೆಯ ಚೌಕಟ್ಟಿನಲ್ಲೇ ಮೂಡಿಸುವ ಅದ್ಭುತ ಕಲೆಗಾರಿಕೆ ಅವರ ಬರವಣಿಗೆಯಲ್ಲಿತ್ತು.

ಶಿಕಾರಿ ನನಗೆ ಬಹಳ ಇಷ್ಟವಾದ ಕಾದಂಬರಿ. ಕಾರ್ಪೊರೇಟ್ ಜಗತ್ತಿನ ವ್ಯಕ್ತಿಯೊಬ್ಬ ತನ್ನ ವೃತ್ತಿ ಸಂಬಂಧಿತ ವಿಚಾರವಾಗಿ ಒಂದು ಆಘಾತ ಎದುರಾದಾಗ, ತನ್ನ ಅಂತರಂಗದ, ತನ್ನ ಅನುಭವಗಳ, ತನ್ನ ಇಡೀ ವ್ಯಕ್ತಿತ್ವದ ಸ್ವಯಂಪರೀಕ್ಷೆಗೆ ಇಳಿಯುತ್ತಾನೆ. ಹೀಗೆ ಮಾಡಿದ ಮೇಲೆ ಹೊಸದೇ ಒಂದು ವ್ಯಕ್ತಿತ್ವನ್ನು ಪಡೆದುಕೊಳ್ಳುವ ತೀರ್ಮಾನಕ್ಕೆ ಬರುತ್ತಾನೆ. ಇದಿಷ್ಟು ಕತೆಯ ಮೂಲ ಸಾರ. ಆದರೆ ಈ ಕೃತಿಯ ಕುರಿತು ಅಷ್ಟೇ ಹೇಳಿದರೆ ಬಹುಶಃ ಸಾಲದು.

ಎಲ್ಲ ಮುಖ್ಯ ಸಾಹಿತಿಗಳ ಕೃತಿಗಳಲ್ಲಿ ಸ್ವಾರಸ್ಯ ಕೇವಲ ಕತೆಯ ಕುತೂಹಲದಲ್ಲಿ ಇರುವುದಿಲ್ಲ. ದೊಸ್ತೋವಸ್ಕಿಯ 'ಕ್ರೈಮ್ ಅಂಡ್ ಪನಿಶ್ಮೆಂಟ್' ಕೃತಿ ಓದುವಾಗಲೂ ಇದೇ ಭಾವನೆ ಬಂದದ್ದು ನೆನಪಾಗುತ್ತಿದೆ. ಶ್ರೇಷ್ಠ ಕೃತಿಗಳಲ್ಲಿ ಕೆಲವೊಮ್ಮೆ ಕತೆಯೇ ನಿಮಿತ್ತ ಮಾತ್ರವಾಗಿಬಿಡುತ್ತದೆ. ಲೇಖಕರ ಅನುಭವ, ಜೀವನದೃಷ್ಟಿ, ವಿನೋದಶೀಲತೆ, ವೈಚಾರಿಕತೆ, ವ್ಯಕ್ತಿ ಮತ್ತು ಸಮಾಜದ ಸಂಬಂಧದ ವಿಶ್ಲೇಷಣೆ, ಕ್ರಿಯೆಗಳ ಹಿಂದಿನ ಪ್ರೇರಣೆಗಳ ಹುಡುಕಾಟ, ಹೀಗೇ ಎಲ್ಲವೂ ಕೃತಿಯ ಶಿಲ್ಪದಲ್ಲೇ ಮಿಳಿತಗೊಂಡಿರುತ್ತವಾದ್ದರಿಂದ ಕೃತಿಯೊಂದು ಮೊಗೆದಷ್ಟೂ ಬತ್ತದ ಜೀವ ಸೆಲೆಯಾಗಿಬಿಡುತ್ತದೆ.

ಚಿತ್ತಾಲರು ೧೯೬೪ ರಷ್ಟು ಹಿಂದೆಯೇ, ತಮ್ಮಮೂವತ್ತಾರನೇ ವಯಸ್ಸಿಗೇ ಬರೆದ ಮೊದಲ ಕಾದಂಬರಿ 'ಮೂರು ದಾರಿಗಳು'. ಇದು ಸಹ ನನ್ನನ್ನು ಬಹುವಾಗಿ ಕಾಡಿದ ಕಾದಂಬರಿ. ಮುನ್ನುಡಿಯಲ್ಲಿ ಲೇಖಕರೇ  ಈ ಕಾದಂಬರಿಯನ್ನು ಪರಿಚಯಿಸುವುದು ಹೀಗೆ- "ಉದ್ಭವಿಸಿದ ಒಂದು ಪ್ರಶ್ನೆಯನ್ನು ಬಿಡಿಸಲು ಮೂರು  ವ್ಯಕ್ತಿಗಳು ಕಂಡುಕೊಂಡ ದಾರಿಗಳು: ಇವು ಇವರು ಬದುಕನ್ನು ಇದಿರಿಸುವ ರೀತಿಗಳೂ ಹೌದು. ಭೀತಿ, ಪ್ರೀತಿ, ಬಂಡಾಯ (ಆತ್ಮ ನಾಶ) ಇವುಗಳ ಸೆಲೆ ಇವರ ವ್ಯಕ್ತಿತ್ವದಲ್ಲಿ. ಇವರು ಬೆಳೆದ ಪರಿಸರದ ಮಹತ್ವ  ಇವರ ವ್ಯಕ್ತಿತ್ವ ರೂಪುಗೊಂಡ ರೀತಿಯನ್ನು ತಿಳಿಯುವಷ್ಟರ ಮಟ್ಟಿಗೆ ಮಾತ್ರ..."

ಹಳ್ಳಿಯಲ್ಲಿದ್ದ ತಂದೆ ಹತ್ತಿರದ ನಗರವೊಂದರಲ್ಲಿ ಸಂಬಂಧಿಕರ ಮನೆಯಲ್ಲಿ ಮಗಳನ್ನು ಓದುವ ಸಲುವಾಗಿ ಬಿಟ್ಟಿರುತ್ತಾರೆ. ಅದೇ ಊರಿನಲ್ಲಿ ಫೋಟೋ ಸ್ಟುಡಿಯೋ ಒಂದರ ಯುವಕನೊಬ್ಬನ ಬಗ್ಗೆ ಲಫಂಗನೆಂಬ ಅಭಿಪ್ರಾಯ ಜನರಲ್ಲಿರುತ್ತದೆ. ಈ ಯುವಕನೊಡನೆ ಒಂದು ಸಂಜೆ ಈ ಹುಡುಗಿ ಒಬ್ಬಳೇ ಇದ್ದಳೆಂಬ ಸುದ್ದಿಯಿಂದ ಗಾಬರಿಗೊಂಡ ಅವಳ ತಂದೆ ಅವಸರದಲ್ಲಿ ಮೊದಲೇ ಪರಿಚಯವಿರುವ ಸಭ್ಯ ಹುಡುಗನೊಬ್ಬನೊಡನೆ ಅವಳ ಮದುವೆಯ  ಏರ್ಪಾಡಿಗೆ ಮುಂದಾಗುತ್ತಾರೆ. ಇದರಿಂದ ಕನಲಿದ ಹುಡುಗಿ ಬಂಡಾಯವೇಳುತ್ತಾಳೆ. ಅವಳ ಆತ್ಮಹತ್ಯೆಯ ದುರಂತದಲ್ಲಿ ಕತೆ ಮುಗಿಯುತ್ತದೆ. ಇದಿಷ್ಟು ಕತೆ.

ಈ ಮೊದಲೇ ನಾನು ಹೇಳಿದಂತೆ ಚಿತ್ತಾಲರಂತಹ ಕೃತಿಕಾರರ ಲೇಖನಿಯಲ್ಲಿ ಕೃತಿಯು ಸರಳವಾದ ಮೂಲ ಕತೆಯನ್ನು ಅನಾಯಾಸವಾಗಿ ಮೀರುತ್ತ  ಓದುಗರ ಮನದ ಆವರಣದಲ್ಲಿ ವಿಸ್ತೃತಗೊಳ್ಳುತ್ತಾ ಹೋಗುತ್ತದೆ. 'ಮೂರು ದಾರಿಗಳು' ಕೃತಿಯಲ್ಲಿ ನನ್ನನ್ನು ಎಲ್ಲಕ್ಕಿಂತ ಪ್ರಕ್ಷುಬ್ಧಗೊಳಿಸಿದ್ದೆಂದರೆ ರೂಢಿಗತ ಶಿಷ್ಟತೆಯ ಹೆಸರಲ್ಲಿ ಮುಗ್ಧ ನಿಷ್ಪಾಪ ಜೀವಗಳ ಜೀವನದ ಮೇಲೆ ಅನಪೇಕ್ಷಿತ, ಅಸಹ್ಯಕರ ಆಕ್ರಮಣ ಮಾಡುವ  ಸುತ್ತಲಿನ ಜನ. ಬೇಡದ ಉಸಾಬರಿಯಲ್ಲೇ ಜೀವನವಿಡೀ ಕಳೆಯುವ ಇಂತಹವರು ಎಲ್ಲೆಲ್ಲೂ ಕಾಣುತ್ತಾರೆ.  ಇಲ್ಲಿ ನಡೆಯುವುದೂ ಅಂತಹುದೇ. ಹರಯದ ವಯಸ್ಸಲ್ಲಿ ಕಾಮ ಅನಾವರಣಗೊಳ್ಳುವ ರೀತಿ, ಅದಕ್ಕೆ 'ಮರ್ಯಾದಸ್ತ' ಸಂಬಂಧಿಗಳು, ಅನಗತ್ಯ ಕುತೂಹಲ ಕುಹಕಗಳ ನೆರೆಹೊರೆಯವರು ಪ್ರತಿಕ್ರಯಿಸುವ ರೀತಿ, ಅದರಿಂದಾಗುವ ಸಮಸ್ಯೆ, ದುರಂತ... ನಿರ್ಮಲೆಯ ಕುರಿತು ತಡೆಯಿಲ್ಲದಂತೆ ಸುದ್ದಿಯನ್ನು ಹರಡಿ ಅವಘಡಕ್ಕೆ ಹಲವು ಮಂದಿ ಕಾರಣರಾಗುತ್ತಾರಾದರೂ, ಅಂತಹದ್ದೊಂದು ಸನ್ನಿವೇಶ ಏರ್ಪಡಲು ಅಂದಿನ ಅಲ್ಲಿನ ರೂಢಿಗತ ಸಾಂಸ್ಕೃತಿಕ ಸಾಮಾಜಿಕ ಸನ್ನಿವೇಶ ಹೇಗೆ ಕಾರಣವಾಗುತ್ತದೆ ಎನ್ನುವುದೂ ನಮ್ಮನ್ನು ಯೋಚನೆಗೆ ಹಚ್ಚಬೇಕಾದ ವಿಚಾರವಾಗುತ್ತದೆ.

ಇಂತಹ ಪ್ರಶ್ನೆಗಳನ್ನು ಓದುಗರಲ್ಲಿ ಎತ್ತುತ್ತಾ, ವ್ಯಕ್ತಿ ಹಾಗೂ ಸಮಾಜದ ಘರ್ಷಣೆಯನ್ನು ಚಿತ್ರಿಸುವುದರೊಂದಿಗೇ, ಕೃತಿಯ ಮುಖ್ಯ ಪಾತ್ರಗಳು ಅನುಭವಿಸುವ ವೈಯಕ್ತಿಕ ಮಾನಸಿಕ ಸಂಘರ್ಷವನ್ನೂ ಚಿತ್ತಾಲರು ಚಿತ್ರಿಸುತ್ತಿದ್ದ ಬಗೆ ಅನನ್ಯ.

ಛೇದ, ಪುರುಷೋತ್ತಮ, ಕೇಂದ್ರ ವೃತ್ತಾಂತ ಇವು ಇವರ ಇನ್ನುಳಿದ ಕಾದಂಬರಿಗಳು. ಪುರುಷೋತ್ತಮ  ನಾನಿನ್ನೂ ಓದದೇ ಇರುವ ಕೃತಿ. ೧೯೯೫ ರಲ್ಲಿ 'ಕೇಂದ್ರ ವೃತ್ತಾಂತ ' ಪ್ರಕಟಗೊಂಡ ಮೇಲೆ ಚಿತ್ತಾಲರ ಮತ್ತಾವುದೇ ಕಾದಂಬರಿ ಪ್ರಕಟವಾಗಲಿಲ್ಲ. 'ದಿಗಂಬರ' ಎಂಬ ಹೆಸರಿನ ಹೊಸ ಕಾದಂಬರಿಯ ರಚನೆಯಲ್ಲಿ ತೊಡಗಿದ್ದರೆಂಬ ಸುದ್ದಿಯೇನೋ ಇತ್ತು. ಆ ಕಾದಂಬರಿಯ ಪ್ರಕಟಣೆಗೆ ಎದಿರು ನೋಡುತ್ತಿದ್ದವರಲ್ಲಿ ನಾನೂ ಒಬ್ಬ. ಆ ಕಾದಂಬರಿ ಪ್ರಕಟವಾಗುವುದರೊಳಗೇ ಸೂಕ್ಷ್ಮ ಸಂವೇದನೆಯ ಈ ಲೇಖಕ ಲೋಕದ ವ್ಯವಹಾರ ಮುಗಿಸಿ ನಡೆದದ್ದು ವಿಷಾದದ ಸಂಗತಿ.

ನನಗೆ ಆಶ್ಚರ್ಯವಾಗುವುದೇನೆಂದರೆ ಚಿತ್ತದಾಳದ ಶೋಧನೆಯ ಈ 'ಯಶವಂತ' ಕನ್ನಡ ಓದುಗ ಬಳಗದಲ್ಲೇಕೋ ಹೆಚ್ಚಿನ ಯಶವನ್ನು ಕಾಣದೆ ಹೋದದ್ದು. ದೂರದ ಮುಂಬಯಿಯಲ್ಲಿದ್ದು ಭೌತಿಕವಾಗಿ ಕನ್ನಡಿಗರಿಂದ ಸದಾ ದೂರವಿದ್ದದ್ದಕ್ಕೋ, ಸ್ವಲ್ಪ ಬೇರೆಯದಾದ ಉತ್ತರ ಕನ್ನಡದ ನುಡಿಕಟ್ಟಿನ ಬಳಕೆಯ ಕಾರಣಕ್ಕೋ, ಅಥವಾ ಗಿರೀಶ್ ಕಾರ್ನಾಡರು ಇತ್ತೀಚಿಗೆ ವಿಶೇಷಾಂಕವೊಂದರಲ್ಲಿ ನಮ್ಮ ಇತರ ಮುಖ್ಯ ಸಾಹಿತಿಗಳೊಡನೆ ಸಂವಾದದಲ್ಲಿ ಹೇಳಿದಂತೆ 'ಜ್ಞಾನಪೀಠ' ಪ್ರಶಸ್ತಿ ಬಂದವರಷ್ಟೇ ಶ್ರೇಷ್ಟರು ಎಂಬ ಭಾವನೆ ಹಲವು ಕನ್ನಡಿಗರಲ್ಲಿ ಇರಬಹುದಾದ ಕಾರಣಕ್ಕೋ ತಿಳಿಯುವುದಿಲ್ಲ.

ವಿಜ್ಞಾನ ವಿದ್ಯಾರ್ಥಿಯಾಗಿದ್ದೂ ಕನ್ನಡ ಸಾಹಿತ್ಯ ರಚನೆಯಲ್ಲಿ ತೊಡಗಿದ್ದ ಈ  ಮೇಧಾವಿ, ಮಾನವತಾವಾದಿ, ಚಿಕಿತ್ಸಕ ದೃಷ್ಟಿಯ ಚಿಂತಕ, ಕುಶಲ ಕಲೆಗಾರಿಕೆಯ ಕತೆಗಾರ ಕನ್ನಡ ಸಾಹಿತ್ಯದ ಸಾಧ್ಯತೆಗಳನ್ನು ವಿಸ್ತರಿಸಿದ್ದಂತೂ ಎಲ್ಲರೂ ಒಪ್ಪಬೇಕಾದ ವಿಚಾರ.  ನಮ್ಮ ಸಾಹಿತ್ಯದಲ್ಲಿ ಅಷ್ಟೇನೂ ಹೆಚ್ಚಾಗಿ ಕಂಡುಬರದ ನಗರ ಜೀವನದ ತಲ್ಲಣಗಳ  ಚಿತ್ರಣವನ್ನು ತಮ್ಮ ಕೃತಿಗಳಲ್ಲಿ ನೀಡುತ್ತ ಬಂದ, ಹೊಸ ವಿಚಾರಗಳಿಗೆ ಸದಾ ತೆರೆದುಕೊಂಡಿದ್ದ, ಯಾಂತ್ರೀಕರಣಗೊಳ್ಳುತ್ತಲೇ ಸಾಗಿರುವ ಆಧುನಿಕ ಯುಗದಲ್ಲಿ ಸಂಬಂಧಗಳ ಪ್ರಸ್ತುತತೆಯ ಹುಡುಕಾಟ ನಡೆಸಿದ ಪ್ರೀತಿಯ ಜೀವವೊಂದು ಕಣ್ಮರೆಯಾಗಿದೆ.

೧೯೭೬ ರಲ್ಲಿ ತಮ್ಮ 'ನಾನೇಕೆ ಬರೆಯುತ್ತೇನೆ?' ಲೇಖನದಲ್ಲಿ ಚಿತ್ತಾಲರು ತಮ್ಮ ಸಾಹಿತ್ಯಿಕ ನಂಬಿಕೆಗಳ ಬಗ್ಗೆ  ಹೀಗೆ ಬರೆದಿದ್ದರು- "ಇತಿಹಾಸದಲ್ಲಿ ಹೆಸರನ್ನು ಬಿಟ್ಟು ಹೋಗುವ ದುಷ್ಟ ಅವಸರದಲ್ಲಿ ಬರಿಯೆ ಸತ್ತೆಯ ಬಲವೊಂದರ ಮೇಲಿಂದಲೇ ತಮ್ಮ ಕನಸುಗಳನ್ನು ಉಳಿದವರ ಮೇಲೆ ಹೇರಬೇಕೆನ್ನುವ; ಸಾವಿಗೆ ಹೆದರಿ ಸಾವನ್ನೇ ಬಿತ್ತುವ ರಾಜಕಾರಣಿಯ ಅಹಂಕಾರಕ್ಕಿಂತ, ಸೃಷ್ಟಿಸುವುದರ ಮೂಲಕವೇ  ಭೌತಿಕ, ಐತಿಹಾಸಿಕ, ಸಾಮಾಜಿಕ ನಿರ್ಬಂಧನೆಗಳಿಂದ ಅನಿರ್ಬಂಧನಾಗುತ್ತ; ತನ್ನ ಪ್ರೀತಿಯಿಂದ ಸಾವನ್ನು ಗೆಲ್ಲುತ್ತ ನಿರಹಂಕಾರಿಯಾದ ಸಾಹಿತಿಯ ಸತ್ಯದ ಹುಡುಕಾಟ ನನಗೆ ತುಂಬ ಪ್ರಿಯವಾದದ್ದು." ಇದೇ ಲೇಖನದಲ್ಲಿ ಇನ್ನೊಂದೆಡೆ ಹೇಳುತ್ತಾರೆ- "...ನಾನು ಬರೆಯುತ್ತಿದ್ದದ್ದು ನಾನು ನಾನೇ  ಆಗಲು. ನಾನು ನಾನಾಗಿಯೇ ಉಳಿದು ಉಳಿದವರೊಂದಿಗೆ ಬೆರೆಯಲು, ಪ್ರೀತಿಸಲು, ಪ್ರೀತಿಸುವುದನ್ನು ಕಲಿಯಲು. ಪ್ರೀತಿಸುವುದರ ಮೂಲಕ ಜೀವಂತ ಸಂಬಂಧಗಳನ್ನು ಹುಟ್ಟಿಸಿಕೊಳ್ಳಲು. ಉಳಿದವರನ್ನು ತಿದ್ದುವುದಕ್ಕಲ್ಲ - ಆ ಯೋಗ್ಯತೆಯಾಗಲೀ ಅಧಿಕಾರವಾಗಲೀ ನನಗಿಲ್ಲ."

ಯಶವಂತರ ಸೋದರ, ಪ್ರತಿಭಾವಂತ ಕವಿ  ಗಂಗಾಧರ  ಚಿತ್ತಾಲರ 'ಹರಿವ ನೀರಿದು' ಕವನದ  ಸಾಲುಗಳು "ನಶ್ವರತೆಯನ್ನೇ ಫಲಿಸುತ್ತ ಶಾಶ್ವತವನ್ನು ನಿಲ್ಲಿಸುವ" ಮನುಷ್ಯನ ಪ್ರಯತ್ನ, ಅಂತಹದ್ದೊಂದು ಕ್ರಿಯೆಯಲ್ಲೇ ಅಡಗಿರುವ ದ್ವಂದ್ವದ ಬಗೆಗೆ  ಸೂಚಿಸುತ್ತವೆ. ಹಾಗೆಯೇ "ಎಚ್ಚತ್ತು ನಿಲ್ಲುವ"  ಸುಖವನ್ನೂ ನೆನಪಿಸುತ್ತವೆ.  ತಾವು "ಎಚ್ಚತ್ತುಕೊಳ್ಳಲು" ಹಾಗೆಯೇ ನಮ್ಮನ್ನೂ ಎಚ್ಚರಿಸಲು ತಮ್ಮ ಬರವಣಿಗೆಯನ್ನು ಬಳಸಿದ ಯಶವಂತರನ್ನೊಮ್ಮೆ  ನೆನೆಯುತ್ತ ಕವನದ ಸಾಲುಗಳನ್ನು ನೋಡೋಣ-

"ಇಲ್ಲಿ
ಕಾಲಾತೀತದಲ್ಲಿ
ಕಾಲಾಧೀನರಾಗಿ ಚರಿಸುವುದೊಂದೆ
ಬೆರಗಿನರ್ಭಕ ದೃಷ್ಟಿ ಬಾಚಿ ಅಭ್ಯಾಗತರ ತೆರದಿ ನೆಲಸುವುದೊಂದೆ
ನಶ್ವರತೆಯನೆ ಫಲಿಸಿ ಕುಡಿಯೊಡೆಯ  ಬಿಟ್ಟು
ಶಾಶ್ವತಿಯ ನಿಲಿಸುವುದೊಂದೆ.
ಈ ಮಹಾದ್ಭುತದಿ ಉದ್ಭವಿಸಿ ಬಂದಿಹೆವಲ್ಲ
ಅದೆ ಒಂದು ಹಿಗ್ಗು, ಎಚ್ಚತ್ತು ನಿಂತಿಹೆವಲ್ಲ
ಅದೆ ಒಂದು ನೆತ್ತರಲಿ ದಿನ ರಾತ್ರಿ ಹರಿವ ಸುಖ."

Tuesday, February 04, 2014

ಮುಸ್ಸಂಜೆಯ ಕಥಾ ಪ್ರಸಂಗ

ಬಾಲ್ಯದ ದಿನಗಳು ಮನಸ್ಸಿನಲ್ಲಿ ಮೂಡಿಸುವ ಪರಿಣಾಮ ಯಾವಾಗಲೂ  ತೀಕ್ಷ್ಣವಾಗಿರುತ್ತದೆ . ಮುಂದೊಮ್ಮೆ ನೆನೆವಾಗ ಹಳೆಯ ಘಟನಾವಳಿಗಳು ಹೊಸದೇ ಒಂದು ರೂಪದಲ್ಲಿ ಕಾಣಿಸಬಹುದು.  ಬಾಲ್ಯಕಾಲದ ಅನುಭವಗಳನ್ನು ಕತೆಯಾಗಿಸುವ ಗುಟ್ಟಾದ  ಆಸೆ ಹಲವರಲ್ಲಿರುವುದೂ ಸಹಜ. ಆದರೆ ಅಂತಹದೊಂದು  ಪ್ರಯತ್ನಕ್ಕೆ ಸೂಕ್ಷ್ಮ ಸಂವೇದನೆಯ ಬರವಣಿಗೆ ಅತ್ಯಗತ್ಯ.  

ಇಂತಹದ್ದೊಂದು ಕೃತಿ ಲಂಕೇಶರ "ಮುಸ್ಸಂಜೆಯ ಕಥಾ ಪ್ರಸಂಗ". ಅವರೇ ಮುನ್ನುಡಿಯಲ್ಲಿ  ಹೇಳಿರುವಂತೆ ತಮ್ಮ ಮೊದಲ ಇಪ್ಪತ್ತು ವರುಷಗಳ ಬಹುಪಾಲನ್ನು ತಮ್ಮ ಹಳ್ಳಿಯಲ್ಲಿ ಕಳೆದದ್ದರಿಂದ ಅಲ್ಲಿ ತಮಗಾದ ಅನುಭವಗಳ ಹಿನ್ನೆಲೆಯಲ್ಲಿ  ಈ ಕೃತಿ ರಚಿತವಾಗಿದೆ.

ಮೂವತ್ತೈದು ವರುಷಗಳ ಹಿಂದೆ ಪ್ರಕಟವಾಗಿರುವ ಈ ಕೃತಿಯಲ್ಲಿ ಬರುವ ಪ್ರಸಂಗಗಳು ನಡೆಯುವುದು ಅದಕ್ಕೂ ಮೂವತ್ತೈದು ವರುಷಗಳ ಹಿಂದೆ ಎನ್ನುವುದನ್ನು ನಾವು ಗಮನಿಸಬೇಕು. ಹೀಗಿದ್ದರೂ ಇಂದಿಗೂ ಆಸಕ್ತಿಯಿಂದ ಓದಿಸಿಕೊಂಡು ಹೋಗುವ  ಕೃತಿಯಿದು.    

ಹಳ್ಳಿಯಲ್ಲಿ ನಡೆವ ತಮಾಷೆಯ ಘಟನೆಗಳ ಆಳದ ಜಾತೀಯತೆ, ಹುಂಬತನ ಮತ್ತು ವಿಷಾದಕರ ವಂಚನೆಯಿಂದ ಹಳ್ಳಿಯೇ ವಿನಾಶದ ಅಂಚಿಗೆ ಸಾಗುವ ಕತೆಯಿದೆಂದು ಸರಳವಾಗಿ ಹೇಳುವಾಗಲೇ, ಕತೆಯು ಕಟ್ಟಿಕೊಡುವ ರಂಗವ್ವ, ಸಾವಂತ್ರಿ, ಮಂಜ ಮೊದಲಾದ ಕೆಲವು ಅತ್ಯಂತ ಜೀವಂತಿಕೆಯ ಪಾತ್ರಗಳನ್ನೂ ಪ್ರಸ್ತಾಪಿಸಲೇಬೇಕು .   

ಜಗತ್ತನ್ನು, ಬದುಕನ್ನು ಒಬ್ಬ ಪ್ರತಿಭಾವಂತ ಸಾಹಿತಿಯ ಕಣ್ಣುಗಳಿಂದ ನೋಡುವ ಖುಷಿಯೇ ಸಾಹಿತ್ಯದ ಓದಿನ ಮುಖ್ಯ ಆಕರ್ಷಣೆ.  ಅಸಾಮಾನ್ಯ ಸೂಕ್ಷ್ಮತೆ, ಚಾಣಾಕ್ಷತೆ, ಜೀವಂತಿಕೆ, ಸಂವಹನ ಕುಶಲತೆ, ಎಲ್ಲವೂ ಇರುವ ಸಾಹಿತಿಗಳು ಜಗತ್ತನ್ನು ನೋಡುವ ರೀತಿಯೇ ವಿಶಿಷ್ಟ.   

ಲಂಕೇಶರೇ  ಹೇಳಿಕೊಂಡಿರುವಂತೆ "ಒಂದು ಬಗೆಯ ಲಹರಿಯಲ್ಲಿ ಲಂಗುಲಗಾಮಿಲ್ಲದೇ ಓಡುವ ವೃತ್ತಾಂತ" ಇದಾಗಿದ್ದರೂ, ಅಂದಿನ ಬಹಳಷ್ಟು ಹಳ್ಳಿಗಳಲ್ಲಿ ಪ್ರಾಯಶಃ ಕಾಣಬಹುದಾಗಿದ್ದ  ಜಾತೀಯತೆ, ಸಣ್ಣತನ, ಗುರಿರಾಹಿತ್ಯ,  ಅಸಂಸ್ಕೃತಿ, ಕ್ರೌರ್ಯ, ಬೋಳೇತನ  ಇವೆಲ್ಲದರ ಚಿತ್ರಣ ಕೃತಿಯಲ್ಲಿದೆ.  ಶಿವಮೊಗ್ಗೆಯ ಕಡೆಯ ಆಗಿನ ಹಳ್ಳಿಯ ನುಡಿಕಟ್ಟಿನಲ್ಲಿ ಸಾಗುವ ಕತೆ ಎಲ್ಲ ಜೀವಂತಿಕೆಯ ಆಳದಲ್ಲಿ, ಎಲ್ಲ ಮೌಲ್ಯಗಳ ಆಳದಲ್ಲಿ  ಮುಖ್ಯ ಯಾವುವೆಂಬುದನ್ನು ಸೂಕ್ಷ್ಮವಾಗಿ ಮನಗಾಣಿಸುತ್ತದೆ.  

ಕತೆಯ ಕುತೂಹಲದ ಜತೆಗೇ ಅಲ್ಲಲ್ಲಿ ನಮಗೆ ಮೊದಲೇ ಅಸ್ಪಷ್ಟವಾಗಿ ಅರಿವಿರಬಹುದಾದ ಜೀವನದ  ವಾಸ್ತವಗಳ ಅಭಿವ್ಯಕ್ತಿ ಪರಿಣಾಮಕಾರಿಯಾಗಿ ಬರುತ್ತದೆ.   

ದುರಂತದ ನೆರಳಿನಲ್ಲಿರುವ ಊರಿನ ಶ್ರೀಮಂತ ಶ್ರೇಷ್ಠಿಗೆ ಶಾಸ್ತ್ರಿ ಹೇಳುವ ಮಾತು  ನೋಡಿ (ಪು.೫೪) - "... ಸುಖ, ಸಂಪತ್ತು ನಮ್ಮ ಬೇರನ್ನ ಅಲುಗಿಸಿ ಅನಾಥರನ್ನಾಗಿ ಮಾಡೋ ಹಾಗೆ ಯಾವುದೂ ಮಾಡೋಲ್ಲ, ಜನರನ್ನು ತೊರೆದ ಮನುಷ್ಯ ಉಳಿಯೋಲ್ಲ; ಅವನ ಸಂಪತ್ತು ಅವನನ್ನು ಉಳಿಸೋಲ್ಲ" 

ಪಕ್ಕದ ಮನೆಯ ನಂದ್ಯಪ್ಪನ ಸಂಸಾರ ಇದ್ದುದರಲ್ಲಿಯೇ ಸಂತೃಪ್ತರಾಗಿ ಇರುವುದನ್ನು ಕಂಡು, ಅದಾಗಲೇ ತನಗಿಂತ ಕೆಳ ಜಾತಿಯ ಮಂಜನ ಪ್ರೇಮದಲ್ಲಿ ಬಿದ್ದಿದ್ದ ಸಾವಂತ್ರಿ ಹೀಗೆ ಅಂದುಕೊಳ್ಳುತ್ತಾಳೆ (ಪು. ೧೧೮-೧೧೯) - "... ದಕ್ಕಿದ್ದನ್ನು ಅನುಭವಿಸುವುದು ಕೆಲವರ ಪಾಲಿಗಾದರೆ, ಇನ್ನು ಕೆಲವರು ಈ ಬದುಕಿನಿಂದ ದಕ್ಕಿಸಿಕೊಂಡು ಜೀವ ಉಳಿಸಿಕೊಳ್ಳಬೇಕಾಗುತ್ತದೆ". 

ತನ್ನ ನೆರೆಮನೆಯ ಹುಡುಗಿ ಶಿವಿಯ ಅಕಾಲಿಕ ಮರಣದಿಂದ ಸಾವಂತ್ರಿ  ತೀವ್ರ ಆಘಾತಕ್ಕೊಳಗಾಗುವ ಸನ್ನಿವೇಶ (ಪು. ೨೬೦) - "ನಾವು ಬಲ್ಲ ಯಾವುದೇ ವ್ಯಕ್ತಿ ಸತ್ತಾಗ ಜೀವಿಸುವ ನಮ್ಮನ್ನು ಪಾಪ ಪ್ರಜ್ಞೆ ಬೆನ್ನು ಹತ್ತುತ್ತದೆ; ನಮ್ಮ ಸಂತೋಷ, ತುಂಟತನ, ಸಣ್ಣ ಪುಟ್ಟ ತಪ್ಪುಗಳು ಎಲ್ಲದರೊಂದಿಗೆ ಬದುಕುವುದೇ ಸಣ್ಣತನವೆನ್ನಿಸುತ್ತದೆ; ಸಾವಿನ ಅಂಚಿನಲ್ಲಿಯೇ ಸಾಗುವ ಬದುಕಿನಲ್ಲಿ ಸುಖವೆನ್ನುವುದು ಎಂಥ ನಂಬಲಸಾಧ್ಯವಾದ ಸಾಧನ ಅನ್ನಿಸುತ್ತದೆ; ಸತ್ತ ವ್ಯಕ್ತಿಯ ಬದುಕಿಗೆ ಹಿತ ತರಲು ಸಾಧ್ಯವಿದ್ದೂ ನಮ್ಮ ಕರ್ತವ್ಯದಲ್ಲಿ ಚ್ಯುತಿಯಾಯಿತೋ ಅನ್ನಿಸುತ್ತದೆ". 

ಕತೆಯ ಹರಿವನ್ನನುಸರಿಸಿ ಪ್ರೇಮದ ಬಗ್ಗೆ ಲೇಖಕರು ತಮಾಷೆಯಾಗಿ ನೀಡುವ ಕೆಲವು ವ್ಯಾಖ್ಯಾನಗಳು ಹೀಗಿವೆ-
(ಪು. ೩೧೦) - "ಪ್ರೇಮವೆನ್ನುವುದು ಈ ಜಗತ್ತಿನಲ್ಲಿ ಮಹತ್ತರ ತ್ಯಾಗಗಳಿಗೆ ಕಾರಣವಾಗಿರುವಂತೆಯೇ ಹಾಸ್ಯಾಸ್ಪದ ತಪ್ಪುಗಳಿಗೂ ದಡ್ಡತನಗಳಿಗೂ ಕಾರಣವಾಗಿದೆ; ಈ ಲೋಕಕ್ಕೆ ಬೇಡವಾದ ಆದರ್ಶವಾದಿಗಳಿಗೂ ಕಾರಣವಾಗಿದೆ."
(ಪು. ೩೨೬) - "ರಾವಣನಿಂದ ಹಿಡಿದು ಇಕ್ಬಾಲ್ ಸಾಹೇಬನವರೆಗೆ ಎಲ್ಲ ಪ್ರೇಮಿಗಳೂ ಪೆದ್ದರೇ- ಹೆತ್ತವರ ಹಾಗೆ, ಋಷಿಗಳ ಹಾಗೆ, ಪ್ರಕೃತಿಯ ಹಾಗೆ."
(ಪು. ೩೭೩) - "ಪ್ರೇಮ ಕೆಲವರಿಗೆ ಮಾತ್ರ ಬದಲಾಗದ, ಚಲಿಸದ ನಕ್ಷತ್ರವಾಗಿಯೂ ದಾರಿಕಾರರಿಗೆ ಮಾರ್ಗದರ್ಶಿಯಾಗಿಯೂ ಕಾಣಿಸಿದರೆ ಮತ್ತೆ ಕೆಲವರಿಗೆ ಅನ್ನ  ಬಟ್ಟೆಯಂತೆ ಕೇವಲ ಬೇಕಾದ ವಸ್ತುವಾಗಿ ಕಾಣುತ್ತದೆ; ಬದಲಾಗುವುದು ಮಾತ್ರವಲ್ಲ, ಪ್ರೇಮಿಸಿದ ವ್ಯಕ್ತಿಯ ಬಗ್ಗೆ ತಾತ್ಸಾರವನ್ನೂ ಹುಟ್ಟಿಸುತ್ತದೆ". 

ಒಟ್ಟಾರೆ, ಹಲವಾರು ಸಾಮಾನ್ಯ ಮನುಷ್ಯರ ಕ್ರಿಯೆಗಳು, ಅನಿಸಿಕೆಗಳನ್ನು ದಾಖಲಿಸುತ್ತಾ ಒಂದು ಹಳ್ಳಿಯ ಅತಿಸಾಮಾನ್ಯವೆನಿಸುವ ವಿದ್ಯಮಾನಗಳನ್ನು ತಮಾಷೆಯಾಗಿ ಹೇಳುತ್ತಲೇ ಸಮಾಜದ ಕೆಲ ಮೂಲಭೂತ ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ "ಮುಸ್ಸಂಜೆಯ ಕಥಾ ಪ್ರಸಂಗ" ಕೆಲವೆಡೆ ಪಾತ್ರಗಳು ತೆಗೆದುಕೊಳ್ಳುವ  ಅನಿರೀಕ್ಷಿತ ತೀರ್ಮಾನಗಳ ಮೂಲಕ ಬದಲಾವಣೆಯತ್ತಲೂ ಬೆರಳು ಮಾಡುತ್ತದೆ. ಉದಾಹರಣೆಗೆ, ರಂಗವ್ವ ತನ್ನ ಮಗಳು ಸಾವಂತ್ರಿ  ಬೇರೆ ಜಾತಿಯವನಾದ ಮಂಜನ ಜೊತೆ ಹೋದಾಗ ಊರವರ ಒತ್ತಡಕ್ಕೆ ಸಿಕ್ಕರೂ ಮಗಳ ನೆರವಿಗೆ ಬರುವ ತೀರ್ಮಾನ ತೆಗೆದುಕೊಳ್ಳುವುದು. 

ಮೂವತ್ತೈದು ವರುಷಗಳ ನಂತರದಲ್ಲಿ ಈ ಕತೆಯು ನಮಗೆ ಅಂದಿನ ಜನ ಬದುಕನ್ನು ಭಾವಿಸಿದ, ಜೀವಿಸಿದ ಬಗೆಯನ್ನು ಅರಿಯುವುದನ್ನು ಸಾಧ್ಯವಾಗಿಸುತ್ತದೆ. ಹಾಗೆಯೇ ಮನುಷ್ಯ ಜೀವಿಯ ಬದುಕಿನ ಸಣ್ಣತನ, ದೊಡ್ಡತನ, ದುಷ್ಟತನ, ಹುಂಬತನ, ಶ್ರೇಷ್ಟತನ  ಈ ಎಲ್ಲ ಸಾಧ್ಯತೆಗಳ ವಲಯವನ್ನೇ ತೆರೆದಿಡುತ್ತದೆ.    

ನಾನು ಮೆಚ್ಚುವ ಲೇಖಕರ ಒಂದೊಂದೇ ಪುಸ್ತಕವನ್ನು ಓದಿ ಮುಗಿಸುವಾಗಲೂ ಇನ್ನೂ ಓದಬೇಕಿರುವ ಪುಸ್ತಕಗಳ ಬಗೆಗೆ ಅವು ನೀಡಬಹುದಾದ ಹೊಸ ಕೌತುಕ, ನಿರಾಳತೆ, ಮುದ ಇವುಗಳ ಬಗೆಗೆ ನೆನೆದು ಕುತೂಹಲಭರಿತ ನಿರೀಕ್ಷೆಯ ಭಾವ ಮೂಡುತ್ತದೆ.  ನನ್ನದೇ ಕಪಾಟಿನಲ್ಲಿ, ಹಾಗೆಯೇ ಪುಸ್ತಕದ ಮಳಿಗೆಗಳಲ್ಲಿ ಕಾದಿರುವ ಕನ್ನಡದ ಹಾಗೂ ಇಂಗ್ಲಿಷಿನ ಹೊಸ ಹಾಗೂ ಹಳೆಯ ಪುಸ್ತಕಗಳ ಸಂಖ್ಯೆ ದೊಡ್ಡದಿದೆ.

ನಾನು ಈವರೆಗೆ ಓದಿರುವ, ಮೆಚ್ಚಿರುವ ಕೆಲವು ಕನ್ನಡ ಪುಸ್ತಕಗಳ ಪಟ್ಟಿ ಇಲ್ಲಿದೆ.