Tuesday, July 29, 2014

ಖಾಸಗಿತನದ ವಿಚಾರ

ನಮ್ಮ ಸಾಮಾಜಿಕ ಜಾಲತಾಣಗಳ ಮಾಧ್ಯಮದಲ್ಲಿ, ಕೆಲವು  ಕಾದಂಬರಿ  ಸಿನಿಮಾಗಳಲ್ಲಿ ವ್ಯಕ್ತಿಗಳ ಖಾಸಗಿ ಪ್ರಜ್ಞೆಯು ಪ್ರಕಟವಾಗುವ ಬಗೆ ಇತ್ಯಾದಿ ವಿಚಾರಗಳ ಮೇಲೊಂದು ಕಿರುನೋಟ ಈ ಬರಹದ ಉದ್ದೇಶ.

ಸಂಪರ್ಕ ಸಾಧನಗಳ ಕ್ರಾಂತಿಯ ಈ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ  ಮೂಲಕ ವೈಯಕ್ತಿಕ ವಿವರಗಳನ್ನು ನಾವೇ ನಿರ್ಧರಿಸಿದ ಮಿತ್ರ ಬಳಗದಲ್ಲಿ ಹಂಚಿಕೊಳ್ಳುವುದು  ಸುಲಭ.  ಆದರೆ ಅಭಿಪ್ರಾಯಗಳ ಮಂಡನೆ  ಹಾಗೂ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ  ಸಾಧ್ಯ ಎನಿಸುವುದಿಲ್ಲ. ಈಚೆಗೆ ನಡೆದ ಸಾರ್ವತ್ರಿಕ ಚುನಾವಣೆ ಇದಕ್ಕೆ ಒಂದು ಉದಾಹರಣೆ. ಈ ತಾಣಗಳಲ್ಲಿ ಎಲ್ಲರೂ ಸಮೂಹ ಸನ್ನಿಗೆ ಒಳಗಾದಂತೆ ಒಂದು ಸಂಘಟಿತ ಕಾರ್ಯಕ್ರಮದ, ಸಿದ್ಧಾಂತದ ಸತತ ಘೋಷಣೆಯಲ್ಲಿ ತೊಡಗಿ ಯಾವುದೇ ಖಾಸಗಿ ವಾದಕ್ಕೆ ಅವಕಾಶವನ್ನೇ ಇಲ್ಲವಾಗಿಸಿದರು. ಅಂದರೆ ಒಂದು ನಿರ್ದಿಷ್ಟ ದೃಷ್ಟಿಕೋನಕ್ಕೆ ಕಟ್ಟುಬಿದ್ದು ಒಬ್ಬರು ಇನ್ನೊಬ್ಬರನ್ನು ಯಥಾವತ್ತಾಗಿ ಪ್ರತಿಧ್ವನಿಸುತ್ತಾ ಯಾವುದೇ ಅರ್ಥಪೂರ್ಣ ಚರ್ಚೆಯನ್ನು ಅಸಾಧ್ಯವಾಗಿಸಿದರು. ಇದು ಫೇಸ್ಬುಕ್, ಟ್ವಿಟ್ಟರ್ ಗಳಂತಹ ತಾಣಗಳಲ್ಲಿ ಅಭಿವ್ಯಕ್ತಿಯಲ್ಲಿ ಸ್ವಂತಿಕೆ ನಾಶವಾಗುವ  ಒಂದು ಸ್ಥಿತಿ. ಇನ್ನು ಕೆಲವರಂತೂ ವೈಚಾರಿಕವಾಗಿ ಬೇಧ ವ್ಯಕ್ತಪಡಿಸಿದವರನ್ನು ಪ್ರತಿವಾದದಿಂದ ಎದುರಿಸದೆ ವೈಯಕ್ತಿಕ  ನಿಂದೆಗಿಳಿಯುವ ಉದ್ಧಟತನ ತೋರಿಸಿದರು.

ಇನ್ನು ಸಾಹಿತ್ಯ, ಸಿನಿಮಾಗಳಲ್ಲಿ ಖಾಸಗಿ ಅನ್ನುವುದರ ಕಲ್ಪನೆ ನಿರೂಪಿತವಾಗುವ ಬಗೆ ಸಹ ಕುತೂಹಲಕರ.

ಈ ತಿಂಗಳು ಬೆಂಗಳೂರಲ್ಲಿ ಇಸ್ರೇಲಿ ಚಲನ ಚಿತ್ರೋತ್ಸವ ನಡೆಯುತ್ತಿದ್ದು, ಅದರಲ್ಲಿ ಕೆಲವು ಚಿತ್ರಗಳನ್ನು ನಾನು ನೋಡಿದೆ. ಅದರಲ್ಲಿ ಒಂದು ಚಿತ್ರ Five Hours From Paris. ಇದೊಂದು ಸರಳ ಸುಂದರ ಚಿತ್ರ. ಯಿಗಾಲ್ ಎಂಬ ಟ್ಯಾಕ್ಸಿ ಡ್ರೈವರ್. ಈತ ಡೈವೋರ್ಸ್ ಆಗಿರುವವನು. ತನ್ನ ಮಗನ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಪ್ಯಾರಿಸ್ಸಿಗೆ ವಿಮಾನದಲ್ಲಿ ಪ್ರಯಾಣಿಸಬೇಕಾಗಿರುತ್ತದೆ. ವಿಮಾನದಲ್ಲಿ ಪ್ರಯಾಣ ಮಾಡಲು ಭಯ ಇರುವ ಬಗ್ಗೆ ಈತ ಮನೋವೈದ್ಯರನ್ನು ಕಾಣುತ್ತಿರುತ್ತಾನೆ. ಒಮ್ಮೆ ತನ್ನ ಮಗನ ಪಿಯಾನೋ ಶಿಕ್ಷಕಿ ಲೀನಾಳೊಂದಿಗೆ ಯಿಗಾಲ್ ನ ಭೇಟಿಯಾಗುತ್ತದೆ.  ಪರಿಚಯ ಸ್ನೇಹಕ್ಕೆ ತಿರುಗುತ್ತದೆ. ಈಕೆ ಹಿಂದೆ ಸಂಗೀತ ಗೋಷ್ಠಿಗಳಲ್ಲಿ ಪಿಯಾನೋ ನುಡಿಸುತ್ತಿದ್ದ ರಷ್ಯನ್ ಪ್ರಜೆ. ವಿವಾಹಿತಳಾಗಿರುವ ಈಕೆ ತನ್ನ ಪತಿ  ಗ್ರಿಷ ನೊಡನೆ ಇಸ್ರೇಲ್ ತ್ಯಜಿಸಿ ಕೆನಡಕ್ಕೆ ವಲಸೆ ಹೋಗುವ ಸಿದ್ಧತೆಯಲ್ಲಿರುತ್ತಾಳೆ. ವೈದ್ಯನಾಗಿರುವ ಆಕೆಯ ಪತಿ ಗ್ರಿಷ ಇಸ್ರೇಲಿಗೆ ಹಿಂದಿರುಗಿದಾಗ ಲೀನಾಳಿಗೆ ಯಿಗಾಲ್ ಮತ್ತು ಗ್ರಿಷರ ಕುರಿತು ನಿರ್ಧಾರ ತೆಗೆದುಕೊಳ್ಳುವ ಸಮಯ. ಇದಿಷ್ಟು ಕತೆ.

ಚಿತ್ರದ ಮೂರು ಪ್ರಮುಖ ಪಾತ್ರಧಾರಿಗಳು ತಮ್ಮ ಖಾಸಗಿ ಬದುಕಿನಲ್ಲಿ ಹಠಾತ್ತನೆ ಎದುರಾಗುವ ಸೂಕ್ಷ್ಮ ಸನ್ನಿವೇಶವನ್ನು ನಿಭಾಯಿಸುವ ಬಗೆ ಕುತೂಹಲಕಾರಿಯಾಗಿದೆ.  ಇಲ್ಲಿ ಒಬ್ಬೊಬ್ಬರದೂ ಭಿನ್ನವಾದ ಪ್ರೇರಣೆಗಳ ಮನೋಸ್ಥಿತಿ. ಮೂವರಲ್ಲೂ ಪ್ರೀತಿಯ ಹಂಬಲ. ಆಳದಲ್ಲಿ ಪ್ರತಿ ವ್ಯಕ್ತಿಯ ಕತೆಯೂ ಹೇಗೆ ಪ್ರತ್ಯೇಕವಾಗಿರುತ್ತದೆ, ಭಿನ್ನ ಕಾಳಜಿಗಳಿಂದ ರೂಪುಗೊಂಡಿರುತ್ತದೆ ಎನ್ನುವುದು ಚಿತ್ರದಲ್ಲಿ ಸುಂದರವಾಗಿ ವ್ಯಕ್ತವಾಗುತ್ತದೆ. ಈ ಚಿತ್ರದಲ್ಲಿ ತೀರಾ ಖಾಸಗಿಯಾದ ಭಾವನೆ, ದ್ವಂದ್ವಗಳನ್ನು ಹೆಚ್ಚಿನ ಸಂಭಾಷಣೆಯ ನೆರವಿಲ್ಲದೇ ನಿರೂಪಿಸುವುದನ್ನು ಸಾಧ್ಯವಾಗಿಸಿರಿವುದು ನಿರ್ದೇಶನದ ಪ್ರತಿಭೆ.

ತಮ್ಮ ಖಾಸಗಿ ಮನೋಜಗತ್ತಿಗೆ  ಕಟುವಾದ ನಿಷ್ಟೆಯನ್ನು ಪ್ರದರ್ಶಿಸುವ ಪಾತ್ರಗಳು ಸಾಹಿತ್ಯದಲ್ಲಿ  ಬಹಳ ಸಾಮಾನ್ಯ . ಕೆಲವು ಪಾತ್ರಗಳಂತೂ ತಮ್ಮ ವೈಯಕ್ತಿಕ ವಲಯಕ್ಕೆ ಕೋಟೆಯೊಂದನ್ನು ನಿರ್ಮಿಸಿ ವಿಚಿತ್ರ ಸಮ್ಮೋಹವನ್ನು ಸೃಷ್ಟಿಸುವಂತವು. ತಕ್ಷಣಕ್ಕೆ ನೆನಪಾಗುವುದು ಬಹಳ ವರ್ಷಗಳ ಹಿಂದೆ ಓದಿದ The French Lieutenant's Woman ಎಂಬ ಇಂಗ್ಲಿಷ್ ಕಾದಂಬರಿಯ ಸಾರಾ ವುಡ್ರಫ್ ಳ ಪಾತ್ರ.

ಈ ಕಾದಂಬರಿ ಪ್ರಕಟವಾಗಿದ್ದು ೧೯೬೯ ರಲ್ಲಿ. ಆದರೆ ಕತೆಯ ಕಾಲಮಾನ ಅದಕ್ಕೂ ಒಂದು ನೂರು ವರ್ಷಗಳ ಹಿಂದೆ. ವಿಕ್ಟೋರಿಯನ್ ಕಾಲದ ಇಂಗ್ಲಿಷ್ ಸಮಾಜದ ನಡವಳಿಕೆಗಳ ಚಿತ್ರಣ ಕಾದಂಬರಿಯಲ್ಲಿದೆ. ಕಥಾನಾಯಕ ಚಾರ್ಲ್ಸ್ ಸ್ಮಿಥ್ಸನ್. ಇವನಿಗೆ ಅರ್ನೆಸ್ಟಿನ ಫ್ರೀಮನ್ ಎಂಬ ಧನಿಕ ಕುಟುಂಬದ ಹುಡುಗಿಯೊಡನೆ ಮದುವೆ  ನಿಶ್ಚಯವಾಗಿದೆ. ಚಾರ್ಲ್ಸ್ ಒಬ್ಬ ಗೌರವಾನ್ವಿತ ಕುಟುಂಬದ, ಆಧುನಿಕ ದೃಷ್ಟಿಕೋನದ,  ವಿಜ್ಞಾನದ ಅರಿವಿರುವ ಪ್ರತಿಷ್ಟಿತ ವ್ಯಕ್ತಿ. ಒಂದು ದಿನ ಸಮುದ್ರದ ದಡದಲ್ಲಿ ತನ್ನ ಭಾವೀ ವಧು ಅರ್ನೆಸ್ಟಿನ ಳೊಡನೆ ನಡೆದಾಡುತ್ತಿರುವಾಗ ದುಗುಡ ತುಂಬಿದವಳಾಗಿ ದೂರ ದಿಗಂತದಲ್ಲಿ ದೃಷ್ಟಿ ನೆಟ್ಟು ನಿಂತಿರುವ ಯುವತಿಯೊಬ್ಬಳನ್ನು ಕಾಣುತ್ತಾನೆ. ಅವಳಾರೆಂದು ಅರ್ನೆಸ್ಟಿನ ಳಲ್ಲಿ ವಿಚಾರಿಸಿದಾಗ ಆಕೆ ಸಾರಾ ವುಡ್ರಫ್ ಳೆಂದೂ ಆಕೆಯನ್ನು ಫ್ರೆಂಚ್ ನೌಕಾದಳದ  ಅಧಿಕಾರಿಯೊಬ್ಬನ ಪರಿತ್ಯಕ್ತ ಪ್ರೇಮಿಯೆಂದು  ಜನ ಕರೆಯುತ್ತಾರೆಂದೂ ತಿಳಿಯುತ್ತದೆ. ಸಾರಾ ಅಷ್ಟೇನೂ ಸುಂದರಳಲ್ಲದಿದ್ದರೂ ಆಕೆಯ ಕಣ್ಣುಗಳಲ್ಲಿ ಮತ್ತು ಆಕೆಯ ಧಾಟಿಯಲ್ಲಿ ವಿಶಿಷ್ಟವಾದದ್ದೇನೋ ಇರುವಂತೆ ಚಾರ್ಲ್ಸ್ ನಿಗೆ ಅನಿಸುತ್ತದೆ. ಕಾದಂಬರಿಯ ಮೊದಲ ಪುಟದಿಂದಲೇ ಚಾರ್ಲ್ಸ್ ಮತ್ತು ಸಾರಾ ಇವರ ಮಾರ್ಗಗಳು  ಸಂಧಿಸುವ  ಸೂಚನೆ ಸಿಗುತ್ತದೆ. ಕಾದಂಬರಿಕಾರ ಇವರ ಭೇಟಿಯನ್ನು ಮುಂದೂಡುತ್ತಲೇ ಹಲವಾರು ರೋಚಕ ಸಾಧ್ಯತೆಗಳ ಸೂಚನೆಯನ್ನು  ಓದುಗರಲ್ಲಿ ಮೂಡಿಸುತ್ತಾನೆ. ವಿಕ್ಟೋರಿಯನ್ ಕಾಲದ ಸಾಮಾಜಿಕ ಹಾಗೂ ನೈತಿಕ ಕಟ್ಟುಪಾಡುಗಳಿಗೆ ತಣ್ಣನೆಯ ತಿರಸ್ಕಾರ ತೋರಿಸುವ ಸಾರಾ. ಕುತೂಹಲದಿಂದ ಆರಂಭವಾಗಿ, ಆಕರ್ಷಣೆಗೆ ತಿರುಗಿ, ಕಡೆಗೆ ಆಕೆಯ ರಕ್ಷಣೆಗೆ ಸಂಪೂರ್ಣ ತೊಡಗಿಕೊಳ್ಳಲು ನಿರ್ಧರಿಸುವಷ್ಟು ಆಕೆಯ ಕಾಳಜಿಗೆ ತೊಡಗುವ ಚಾರ್ಲ್ಸ್. ಇಲ್ಲಿಂದ ಕತೆ ಸಾಗುವ ಹಾದಿ ನಿರೀಕ್ಷೆಗೂ ಮೀರಿ ಮನಸ್ಸನ್ನು ಕಲಕುವಂತದ್ದು. ತನ್ನ ಖಾಸಗಿ ಕೋಟೆಯೊಳಗೆ ಯಾರನ್ನೂ ಬಿಟ್ಟುಕೊಡದ ಸಾರಾ, ಇದು ಚಾರ್ಲ್ಸ್ ನ ಬಾಳಿನಲ್ಲಿ ಸೃಷ್ಟಿಸುವ ಕೋಲಾಹಲ,  ಇವರಿಬ್ಬರ ಅಂತಿಮ ಮುಖಾಮುಖಿ...

ಈ ಕಾದಂಬರಿಯನ್ನು ಒಂದು ಕಾಲಘಟ್ಟದ ಚಿತ್ರಣವನ್ನಾಗಿ  ನೋಡಬಹುದು. ಹಾಗೆಯೇ ಮಹಿಳಾವಾದದ ದೃಷ್ಟಿಯಿಂದಲೂ. ವಿಶೇಷವೆಂದರೆ ಈ ಕಾದಂಬರಿಗೆ ಎರಡು ಅಂತ್ಯಗಳನ್ನು ಕಾದಂಬರಿಕಾರ ಸೃಷ್ಟಿಸಿರುವುದು. ಅದೆಲ್ಲ ಏನೇ ಇರಲಿ. ನಾನು ಈ ಕಾದಂಬರಿಯ ಪ್ರಸ್ತಾಪ ಮಾಡಲು ಮುಖ್ಯ ಕಾರಣ , ಕಾದಂಬರಿ ಬಿಂಬಿಸುವ  ವ್ಯಕ್ತಿಗಳ ಆಳದ ವಿಚಿತ್ರ ಖಾಸಗಿ ಪ್ರೇರಣೆಗಳ ಬಗ್ಗೆ ಉಲ್ಲೇಖಿಸುವುದಾಗಿದೆ.

ಖಾಸಗಿತನವನ್ನು ಕಾಯ್ದುಕೊಳ್ಳುವ ಮಹತ್ವವನ್ನು ತಮ್ಮ ಕೃತಿಗಳಲ್ಲಿ ತೋರಿಸಿಕೊಟ್ಟ ಮತ್ತೊಬ್ಬ ಲೇಖಕಿ ವರ್ಜಿನಿಯಾ ವೂಲ್ಫ್. ಈ ಲೇಖಕಿಯ ಬಹು ಮುಖ್ಯ ಕೃತಿ Mrs Dalloway. ಈ ಕೃತಿಯ ನಾಯಕಿ ಕ್ಲಾರಿಸ್ಸ ಸಹ ತನ್ನ ಸ್ವಂತಿಕೆಯನ್ನು, ಖಾಸಗಿ ಮನೋಲೋಕವನ್ನು ಜತನದಿಂದ ಕಾಯ್ದುಕೊಳ್ಳುತ್ತ ನಿಗೂಢವಾಗಿ ಉಳಿಯುವ ಮಹಿಳೆ. ವರ್ಜಿನಿಯಾ ವೂಲ್ಫ್ ಸಹ ಯಾರಿಗೂ ಪೂರ್ತಿ ಅರ್ಥವಾಗದೆ ಉಳಿದು, ತನ್ನ ಖಾಸಗಿತನವನ್ನು ಕಡೆಯವರೆಗೂ ಬಿಟ್ಟುಕೊಡದೆ ಬದುಕಿದ ಲೇಖಕಿ.

No comments :