Wednesday, December 30, 2015

ಆಡುಕಳ - ಶ್ರೀಧರ ಬಳಗಾರ



ಮೊದಲ ಬಾರಿ 'ಆಡುಕಳ' ಎಂಬ ಹೆಸರು ಕೇಳಿದಾಗ ಇದೊಂದು ಕನ್ನಡ ಪದವೇ, ಹಾಗಿದ್ದರೆ ಏನಿದರ ಅರ್ಥ ಎಂದು ಯೋಚಿಸಿದ್ದೆ. ಪುಸ್ತಕವನ್ನು ಓದಲು ಆರಂಭಿಸಿದ ಮೇಲೆ ತಿಳಿದದ್ದು ಇದೊಂದು ಸ್ಥಳದ ಹೆಸರೆಂದು.

ನಾನು ಚಿಕ್ಕಂದಿನಲ್ಲಿ ಕಾಣುತ್ತಲೇ ಬೆಳೆದ ಚಿಕ್ಕಮಗಳೂರು ಜಿಲ್ಲೆಯ ನನ್ನ ಹಳ್ಳಿ ಪಟ್ಟಣಗಳಿಗಿಂತ ಹೆಚ್ಚೇನೂ ಬೇರೆ ಅನಿಸದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪೇಟೆ, ಮಣ್ಮನೆ, ಬಿದ್ರಳ್ಳಿ, ಆಡುಕಳಗಳು ಮತ್ತು ಅಲ್ಲಿನ ಬದುಕಿನ ಕ್ರಮ ಕಾದಂಬರಿಯಲ್ಲಿ ಮೊದಲಿಗೆ ನನ್ನನ್ನು ಸೆಳೆದ ಅಂಶ.

ಕತೆಯ ಆರಂಭದಲ್ಲಿ ಮತ್ತು ಉದ್ದಕ್ಕೂ ಅಂತರ್ಗಾಮಿಯಾಗಿ ಕಾಣಿಸಿಕೊಳ್ಳುವುದು ಆಡುಕಳದ ಭೂಮಿಯ ಒಡೆತನಕ್ಕೆ ಸಂಬಂಧಿಸಿದಂತೆ ನಡೆಯುವ ದಾಯಾದಿ ಕಲಹ.  ಹಳ್ಳಿಯ ಅವಿಭಕ್ತ ಕುಟುಂಬಗಳ ಮೂಲಭೂತ ಹಿನ್ನೆಲೆಯಿಂದ ಬಂದ ಓದುಗರಿಗೆ ಈ ಕಲಹಗಳು ಮನುಷ್ಯ ಸಂಬಂಧಗಳನ್ನು ಹಾಳುಗೆಡವುವ ಬಗೆ, ಅವರ ಆಳದ ವಿವೇಕ, ಸದ್ಭಾವನೆಗಳು ನಾಶವಾಗುವ ಬಗೆ, ಇವುಗಳ ಅನುಭವ ಇದ್ದೇ ಇರುತ್ತದೆ. ಕಾದಂಬರಿಯ ಮುಖ್ಯ ಪಾತ್ರವಾದ ದಶರಥನ ಕುಟುಂಬವನ್ನು ಹಿನ್ನೆಲೆಯಾಗಿಸಿ, ಆಸ್ತಿಗಾಗಿ ಆ ಕುಟುಂಬದಲ್ಲಿ ನಡೆಯುವ ಸೂಕ್ಷ್ಮ ಸಂಚುಗಾರಿಕೆ, ಕುಟಿಲೋಪಾಯಗಳ ಚಿತ್ರಣವಿದೆ.

ದಾಯಾದಿ ಕಲಹ ಕೃತಿಯ ಒಂದು ಆಯಾಮವಾದರೆ, ಸಮುದಾಯವೊಂದರ ಜೀವನ ಕ್ರಮ, ಸಾಂಸ್ಕೃತಿಕ ಆಚರಣೆಯ ಚಿತ್ರಣವೂ ಪರಿಣಾಮಕಾರಿಯಾಗಿದೆ. ಖಾನಾವಳಿಯ ಗಂಗಣ್ಣ, ಮದ್ಗುಣಿ ಡಾಕ್ಟರು, ಜೇನು ಕೀಳುವ ಬಕಾಲ, ಮೈಮೇಲೆ ದೇವರು ಬರುವ ಕಾಮಾಕ್ಷಿ, ಇನ್ನು ಮೊದಲಾದ ಪಾತ್ರಗಳೂ ಉತ್ತಮವಾಗಿ ಮೂಡಿಬಂದಿವೆ.

'ಕಬ್ಬಿನ ಹಬ್ಬ' ಅಧ್ಯಾಯದಲ್ಲಿನ ಆಲೆಮನೆಯ ಚಿತ್ರಣವಂತೂ ನಾನು ಬಾಲ್ಯದಲ್ಲಿ ನೋಡಿದ್ದ ನಮ್ಮ ಕುಟುಂಬದ ಆಲೆಮನೆಯನ್ನು ಯಥಾವತ್ತಾಗಿ ನೆನಪಿಸುವಂತಿತ್ತು. ಶ್ರೀಧರ ಬಳಗಾರರು ದಟ್ಟ ವಿವರಗಳ ಮೂಲಕ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವುದು ಕಾದಂಬರಿಯ ಒಂದು ವೈಶಿಷ್ಟ್ಯ.

ಊರ ಜೀವನದಲ್ಲಿ ಕಾಲದ ಪ್ರಭಾವದಿಂದ ಕಾಣಿಸಿಕೊಳ್ಳುವ ಬದಲಾವಣೆಗಳನ್ನು ಅವರು ವಿವರಿಸುವ ಸ್ವಾರಸ್ಯಕರ ಶೈಲಿಯ ಒಂದು ಉದಾಹರಣೆ ದಶರಥ ಭತ್ತದ ಬೇಸಾಯ ಬಿಟ್ಟು ಅಡಿಕೆ ತೋಟ ಹಾಕದಿರಲು ನಿರ್ಧರಿಸುವ ಸಂದರ್ಭ-
"ಕಡಿಮೆ ಕೆಲಸ, ಲಾಭ ಹೆಚ್ಚು ಎಂದೆನಿಸಿದರೂ ಭತ್ತದ ಬೇಸಾಯದಂತೆ ಋತು ವಿಲಾಸವನ್ನಾಗಿ ಹಬ್ಬದ ಸಂಭ್ರಮಾಚಾರಣೆಯಾಗಿ ಆಚರಿಸಲು ಸಾಧ್ಯವಿಲ್ಲವೆನಿಸಿತು. ..ಕೃಷಿ ಗದ್ದೆಯಲ್ಲಿ ಅಡಿಕೆ ತೋಟ ಹಾಕಿದ ನಂತರ ಜೀವನ ಸಂಭ್ರಮವನ್ನು ಕಳೆದುಕೊಂಡಿದ್ದನ್ನು ಅವನು ನೋಡಿದ್ದಾನೆ. ಪಂಜಿ ಸುತ್ತುತ್ತಿದ್ದವರು ಪ್ಯಾಂಟ್ ಧರಿಸಿ, ನೇಗಿಲು ಹಿಡಿಯುವ ಕೈಗಳು ಬೈಕ್ ನಡೆಸುತ್ತ ಪೇಟೆಗೆ ಹೋಗದೆ ಇರಲು ಸಾಧ್ಯವಿಲ್ಲ.." (ಪು 23-24)

ಸಾಹಿತ್ಯ ಪ್ರತಿನಿಧಿಸುವುದು ಯಾವುದೋ ಒಂದು ವಿಚಾರಧಾರೆಯನ್ನೋ, ಚಾರಿತ್ರಿಕ ವಿವರಗಳನ್ನೋ, ಅಥವಾ ನೀತಿ ವಿಚಾರಗಳನ್ನೋ ಅಲ್ಲ. ಅವೆಲ್ಲವೂ ಇಲ್ಲಿ ಮಿಳಿತಗೊಂಡಿರಬಹುದಾದರೂ ಸಾಹಿತ್ಯ ಒಳಗೊಳ್ಳುವ ಸತ್ಯಗಳು ನಮಗೆ ದಕ್ಕಬೇಕಾದರೆ ಅದನ್ನು ಪಾತ್ರಗಳ ಅನುಭವಗಳ ನೆಲೆಯಲ್ಲಿ ಶೋಧಿಸಬೇಕಾಗುತ್ತದೆ.

ಎಲ್ಲ ಶ್ರೇಷ್ಟ ಪುಸ್ತಕಗಳೂ ಹಾಗೇ. ಅವು ನಮ್ಮೊಂದಿಗೆ ಒಂದು ಬಗೆಯ ಸಾವಯವ ಸಂಬಂಧವನ್ನು ಹೊಂದಿರುತ್ತವೆ. ಕೃತಿಯ ಮೂಲಕ ಅದರ ಲೇಖಕರ ವಿಚಾರ, ಭಾವನೆ, ಕಾಳಜಿಗಳು ನಮ್ಮ ಅರಿವಿಗೆ ಬರುತ್ತವೆ. ಹಾಗೆಯೇ ಕೃತಿಯನ್ನು ಓದುವಾಗ ಅದರೊಡನೆ ನಾವು ಅಂತರಂಗದಲ್ಲಿ ನಡೆಸುವ ಸಂವಾದದಲ್ಲಿ ನಮ್ಮ ವಿಚಾರ, ಭಾವನೆ, ಕಾಳಜಿಗಳು ಸ್ಪಷ್ಟಗೊಳ್ಳುತ್ತ ಹೋಗುತ್ತವೆ.

ಒಂದು ಸಣ್ಣ ಪ್ರದೇಶದ ಸಣ್ಣ ಸಮುದಾಯವೊಂದರ ನಿತ್ಯದ ಬದುಕಿನ ವಿವರಗಳಲ್ಲೇ ಬದಲಾಗುತ್ತಿರುವ ಸಮಾಜದ ಬದಲಾಗುತ್ತಿರುವ ಮೌಲ್ಯಗಳ ಚಿತ್ರಣವನ್ನು ಒದಗಿಸಿ ಓದುಗರನ್ನೂ ಆಲೋಚನೆಗೆ ಹಚ್ಚುವ ಮುಖ್ಯವಾದ ಕೃತಿ ಆಡುಕಳ ಎನ್ನುವುದರಲ್ಲಿ ಅನುಮಾನವೇ ಇಲ್ಲ. 

Sunday, November 22, 2015

ಹುಳಿಮಾವು ಮತ್ತು ನಾನು - ಇಂದಿರಾ ಲಂಕೇಶ್



ಎಂಬತ್ತು ಮತ್ತು ತೊಂಬತ್ತರ ದಶಕಗಳಲ್ಲಿ ತಮ್ಮ 'ಲಂಕೇಶ್ ಪತ್ರಿಕೆ'ಯ ಮೂಲಕ ಒಂದು ಹೊಸ ಓದುಗ ವರ್ಗವನ್ನೆ ಸೃಷ್ಟಿಸಿ, ಭಾಷೆಯ ವಿಶಿಷ್ಟ ಸಾಧ್ಯತೆಗಳ ಅರಿವು ಮಾಡಿಕೊಟ್ಟವರು ಲಂಕೇಶ್. ಅತ್ಯಂತ ಸಂಕೀರ್ಣ ವಿಚಾರಗಳನ್ನೂ ತೀರ ಸರಳ ಆದರೂ ಪರಿಣಾಮಕಾರಿಯಾದ ಶೈಲಿಯಲ್ಲಿ ಬರೆಯುವ ಸಾಧ್ಯತೆಯನ್ನು ಪರಿಚಯಿಸಿದ್ದೇ ಲಂಕೇಶ್. ೨೦೦೦ ದ ಇಸವಿಯಲ್ಲಿ ತಮ್ಮ ೬೬ ನೇ ವಯಸ್ಸಿಗೇ ತೀರಿಕೊಂಡ ಈ ಲೇಖಕನ ಸಾವು ಅನಿರೀಕ್ಷಿತವಾಗಿತ್ತು. ತಮ್ಮ ಅಗಲಿದ ಸಂಪಾದಕನಿಗೆ ಗೌರವ ಸೂಚಿಸುವ ಸಲುವಾಗಿ ಲಂಕೇಶ್ ಪತ್ರಿಕೆಯವರು ಸಿದ್ಧಪಡಿಸಿದ್ದ  "ಇಂತಿ ನಮಸ್ಕಾರಗಳು" ಎಂಬ ಶೀರ್ಷಿಕೆಯನ್ನು ಹೊತ್ತ ಸಂಚಿಕೆ ಇನ್ನೂ ನನ್ನ ಬಳಿಯಿದೆ. ಅಸಾಧಾರಣ ಪ್ರತಿಭೆಯ, ಹಾಗೆಯೇ ಒಂದು ರೀತಿಯ ವಿಕ್ಷಿಪ್ತ ವ್ಯಕ್ತಿತ್ವದ ಲಂಕೇಶರು ಒಬ್ಬೊಬ್ಬರನ್ನೂ ತಟ್ಟಿದ, ಪ್ರಭಾವಿಸಿದ ಬಗೆಯೂ ವಿಶಿಷ್ಟ.  ಇಂತಹ ಒಬ್ಬ ವ್ಯಕ್ತಿಯ ವೈಯಕ್ತಿಕ ಬದುಕಿನ ವಿವರಗಳ ಬಗೆಗಿನ ಕುತೂಹಲ ಸಹಜವೇ. ಲಂಕೇಶರು "ಹುಳಿಮಾವಿನ ಮರ" ಎಂಬ ಹೆಸರಿನಲ್ಲಿ ತಮ್ಮ ಆತ್ಮಕಥೆಯನ್ನು ಪ್ರಕಟಿಸಿದ್ದಾರಾದರೂ ಕೆಲವೊಮ್ಮೆ ಮಹಾನ್ ವ್ಯಕ್ತಿಗಳ ಜೀವನದ ಬಿಡಿ ವಿವರಗಳು ಅವರೇ ಬರೆದ ಆತ್ಮಕಥೆಗಳಿಗಿಂತ ಅವರ ಹತ್ತಿರದವರು ಬರೆವ ಕೃತಿಗಳಲ್ಲೇ ಹೆಚ್ಚಾಗಿ ಸಿಗುತ್ತವೆ. ಕುವೆಂಪು ಅವರ ವಿಚಾರದಲ್ಲೂ ಇದು ಅನುಭವಕ್ಕೆ ಬಂದಿತ್ತು. ಅವರ "ನೆನಪಿನ ದೋಣಿ" ಕೃತಿಯಲ್ಲಿ ಕಾಣದ ಎಷ್ಟೋ ವಿವರಗಳು ಅವರ ಮಗಳು ತಾರಿಣಿಯವರು ಬರೆದ "ಮಗಳು ಕಂಡ ಕುವೆಂಪು" ಪುಸ್ತಕದಲ್ಲಿ ಲಭ್ಯವಿವೆ.

ಈ ಎಲ್ಲ ಹಿನ್ನೆಲೆಯಲ್ಲಿ, ಲಂಕೇಶರ ಪತ್ನಿ ಇಂದಿರಾ ಅವರು ಬರೆದ "ಹುಳಿಮಾವು ಮತ್ತು ನಾನು" ಕೃತಿ ನನ್ನ ಗಮನಕ್ಕೆ ಬಂದಾಗ ಅದನ್ನು ಸಾಕಷ್ಟು ಕುತೂಹಲ, ನಿರೀಕ್ಷೆಯಿಂದಲೇ ಕೈಗೆತ್ತಿಕೊಂಡಿದ್ದೆ. ಪುಸ್ತಕ ಓದಿ ಮುಗಿಸುವಾಗ ಅನಿಸುವುದೇನೆಂದರೆ ಇದು ಓದುವ ಮೊದಲು ನಾನು ಅಂದುಕೊಂಡಿದ್ದಂತೆ ಸಾಮಾನ್ಯವಾಗಿ ಪ್ರಸಿದ್ಧ ವ್ಯಕ್ತಿಗಳ ಕುಟುಂಬದವರು ಆ ವ್ಯಕ್ತಿಯ ಕುರಿತು ಈಗಾಗಲೇ ಸಾರ್ವಜನಿಕವಾಗಿ ಪ್ರಚಲಿತವಿರುವ ಅಭಿಪ್ರಾಯಗಳಿಗೇ ಇಂಬು ಕೊಡುವ ದೈನಂದಿನ ವಿವರಗಳನ್ನು ಹಂಚಿಕೊಳ್ಳುವ ತರಹದ ಕೃತಿ ಅಲ್ಲ. ಇಂದಿರಾ ಲಂಕೇಶ್ ಅವರು ಲಂಕೇಶರ ಸಾಹಿತ್ಯ ಜೀವನದ  ಹೆಚ್ಚಿನ ವಿವರಗಳಿಗೆ ಹೋಗದೇ ತಮ್ಮಿಬ್ಬರ ದಾಂಪತ್ಯದ ವಿವರಗಳಿಗೇ ಕೃತಿಯಲ್ಲಿ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದಾರೆ.  ಪತಿಯಾಗಿ ಅವರಲ್ಲಿ  ತಮಗೆ ಕಂಡು ಬಂದ ಗುಣಾವಗುಣಗಳನ್ನು ನಿರೂಪಿಸುತ್ತಾ ಹೋಗುತ್ತಾರೆ. ಹಾಗೆ ನೋಡಿದರೆ ದಾಂಪತ್ಯದ ಖಾಸಗಿ ವಿಚಾರಗಳು ಕೃತಿಯೊಂದರ ಮೂಲಕ ಈ ರೀತಿ ಸಾರ್ವಜನಿಕವಾಗಿ ಪ್ರಕಟಗೊಳ್ಳುವುದು ಅಪರೂಪವೇ. ಹೆಚ್ಚಿನ ಮಟ್ಟಿಗೆ ಇಂತಹ ಕೃತಿಗಳು ಮುಜುಗರ ಉಂಟು ಮಾಡಬಹುದಾದ ವೈಯಕ್ತಿಕ ವಿವರಗಳಿಗೆ ಹೋಗದೇ ನಿರಪಾಯಕಾರಿ ಚರ್ವಿತ ಚರ್ವಣಗಳಲ್ಲೇ ಸುತ್ತುವುದೇ ಹೆಚ್ಚು. ಈ ಕೃತಿಯಲ್ಲಿ ಲೇಖಕಿ ತಮ್ಮದೇ ಬದುಕಿನ ವಿವರಗಳ ಮೂಲಕ ಬದಲಾಗುತ್ತಿರುವ ಕಾಲಮಾನದ ಬದಲಾಗುತ್ತಿರುವ ಸಂಬಂಧಗಳತ್ತ ಗಮನ ಸೆಳೆಯುವುದು  ಸ್ವಾಗತಾರ್ಹ. ಇಲ್ಲಿ ಚಿತ್ರಣಗೊಂಡಿರುವ ಹಲವು ಸಂಗತಿಗಳು ಘಟಿಸಿ ದಶಕಗಳೇ ಕಳೆದಿದ್ದರೂ ಸಂಬಂಧವೊಂದರ ವ್ಯಾಖ್ಯಾನದ ದೃಷ್ಟಿಯಿಂದ ಅವು ಇಂದಿಗೂ ಪ್ರಸ್ತುತವೇ. 

ಅತ್ಯಂತ ಸರಳವಾದ ಭಾಷೆಯಲ್ಲಿ ದೈನಂದಿನ ಜೀವನದ ಸಾಮಾನ್ಯ ವಿವರಗಳಲ್ಲೇ ತಾವು ಸಾಗಿ ಬಂದ ಘಟ್ಟಗಳನ್ನು ಕಟ್ಟಿಕೊಡುತ್ತಾ  ಆ ಮೂಲಕ  ತಮ್ಮ ವೈವಾಹಿಕ ಜೀವನದ ಏರು ತಗ್ಗುಗಳನ್ನು ಉದ್ವೇಗವಿಲ್ಲದ ದನಿಯಲ್ಲಿ ವಿವರಿಸುತ್ತಾ ಸಾಗುವ ನಿರೂಪಣೆಯಿದೆ. ಆ ಬಗೆಯ ಸಂಯಮ ಬರವಣಿಗೆಯಲ್ಲಿ ಇರದಿದ್ದರೆ ಬರಹ ದೋಷಾರೋಪಣೆಯ ಸ್ವಾನುಕಂಪದ ಮಿತಿಯಲ್ಲೇ ಉಳಿದುಬಿಡಬಹುದಾದ ಸಾಧ್ಯತೆಯಿರುತ್ತಿತ್ತು. ಮಹಿಳೆಯೊಬ್ಬಳ ಸ್ವಾಭಿಮಾನದ, ಸ್ವಾವಲಂಬನೆಯ, ಧೈರ್ಯದ, ಜೀವನ ಪ್ರೀತಿಯ ಕಥನವಾಗಿಯೂ "ಹುಳಿಮಾವು ಮತ್ತು ನಾನು" ಗೆಲ್ಲುತ್ತದೆ. ಇದರ  ಸೋಲು ಅಥವಾ ಗೆಲುವಿಗೆ ಇದೇ  ಇದೇ  ಕಾರಣವೆಂದು ನಿರ್ಧರಿಸಿಬಿಡುವಷ್ಟು ಯಾವ ಸಂಬಂಧವೂ ಸರಳವಾಗಿರುವುದಿಲ್ಲ. ಅಥವಾ ಅದು ವ್ಯಕ್ತಿಗಳ ಪ್ರತಿಭೆ ಪ್ರಸಿದ್ಧಿಗಳ ಮೇಲೂ ಅವಲಂಬಿತವಾಗಿರುವುದಿಲ್ಲ. ಯಾವ ಸಂಬಂಧವೂ ಲೈಫ್ ಟೈಮ್ ವಾರಂಟಿಯನ್ನು ಪಡೆದೇನೂ ಬಂದಿರುವುದಿಲ್ಲ. ಅಡಿಗರು ಬರೆದಂತೆ- 

ಕೂಡಲಾರದೆದೆಗಳಲ್ಲು ಕಂಡೀತು ಏಕ ಸೂತ್ರ
ಕಂಡುದುಂಟು ಬೆಸೆದೆದೆಗಳಲ್ಲು ಭಿನ್ನತೆಯ ವಿಕಟ ಹಾಸ್ಯ

ಯಾವ ಕಾರಣಕ್ಕೋ  ಭಿನ್ನತೆಯು ಮೂಡಿದಾಗ ಪ್ರತಿಕ್ರಯಿಸುವ ಬಗೆ ನಿಜಕ್ಕೂ  ವ್ಯಕ್ತಿಯ ವ್ಯಕ್ತಿತ್ವವನ್ನೇ ನಿರ್ಧರಿಸುವ  ಪ್ರಶ್ನೆಯಾಗಿರುತ್ತದೆ. ಅರವತ್ತು ಎಪ್ಪತ್ತರ ದಶಕದಲ್ಲೇ ಅಂದಿನ ಸಾಮಾಜಿಕ ವಾತಾವರಣಕ್ಕೆ ಸವಾಲೆನ್ನುವಂತೆ  ತಮ್ಮ ಘನತೆಗೆ, ಅಭಿಮಾನಕ್ಕೆ ಯಾವುದೇ ಕುಂದು ತರದಂತೆ ತಮ್ಮದೇ ಸ್ವತಂತ್ರ ಅಸ್ತಿತ್ವದ ಅಸ್ಮಿತೆಯ ಸಾಧನೆಗೆ ಹೋರಾಡುವ  ಇಂದಿರಾ ಅವರ ಆಯ್ಕೆ ಗಮನಿಸಬೇಕಾದದ್ದು .  

ಇಷ್ಟೆಲ್ಲಾ ಆದಾಗಲೂ ತಮ್ಮ ಬರವಣಿಗೆಯುದ್ದಕ್ಕೂ ಎಲ್ಲಿಯೂ ತಮಗೆದುರಾದ ಸನ್ನಿವೇಶಗಳ ಕಾರಣಕ್ಕೆ ಲಂಕೇಶರ ವ್ಯಕ್ತಿತ್ವವನ್ನು ನೇರವಾಗಿ ಹೀಗಳೆಯುವಂತಹ ಪ್ರಸ್ತಾಪಗಳೇ ಇಲ್ಲ. ತಮಗಿಷ್ಟವಾಗದ ಅವರ ಗುಣಗಳ ಬಗೆಗೆ ಬರೆವಾಗಲೂ ಇಂದಿರಾ ಅವರಲ್ಲಿ ಅಂತರ್ಗಾಮಿಯಾದ ಒಂದು ಪ್ರೀತಿ, ಗೌರವ, ಸಹನೆ ಕಾಣಬರುತ್ತದೆ.  ಜೊತೆಗೇ ಉದ್ದಕ್ಕೂ ಜೀವನವನ್ನು ಧೈರ್ಯದಿಂದ ಉತ್ಸಾಹದಿಂದ ಛಲದಿಂದ ಎದುರಿಸಿದ ಒಬ್ಬ ಮಹಿಳೆಯ ಚಿತ್ರಣ ಕಾಣುತ್ತದೆ. ಲಂಕೇಶರಂತಹ ಪ್ರಖರ  ವ್ಯಕ್ತಿತ್ವದ ಮನುಷ್ಯನ ಮಡದಿಯಾಗಿಯೂ ತನ್ನ ವೈಯಕ್ತಿಕತೆಯನ್ನು ಸ್ವಲ್ಪವೂ ಬಿಟ್ಟುಕೊಡದೆ ತಾನೂ ಬಿಸಿನೆಸ್ಸ್ ನಡೆಸಿ, ತೋಟವನ್ನೂ ಮಾಡಿ ತಮ್ಮ ಆತ್ಮ ಗೌರವವನ್ನು ಕಾದುಕೊಳ್ಳುವುದು ಓದುಗರನ್ನು ತಟ್ಟದೆ ಇರದು. ಇವರ ಮೂವರು ಮಕ್ಕಳಾದ ಪತ್ರಕರ್ತೆ ಗೌರಿ, ಚಿತ್ರ ನಿರ್ದೇಶಕ ಇಂದ್ರಜಿತ್, ಹಾಗೂ ಚಿತ್ರ ನಿರ್ದೇಶಕಿ ಕವಿತಾ ರ ಬಗೆಗೂ ಕೃತಿಯುದ್ದಕ್ಕೂ ಕೆಲವು ವಿವರಗಳು ಕಾಣಸಿಗುತ್ತವೆ. 

ಲಂಕೇಶರ ಆತ್ಮಚರಿತ್ರೆ "ಹುಳಿಮಾವಿನ  ಮರ" ದಲ್ಲಿ ಅವರ ಕುಟುಂಬದ ವಿವರಗಳು ಅಷ್ಟಾಗಿ ಇಲ್ಲ. ಇನ್ನು ಅವರು ಸಂಪಾದಕರಾಗಿದ್ದಾಗ ಲಂಕೇಶ್ ಪತ್ರಿಕೆಯಲ್ಲಿ ಅಲ್ಲಲ್ಲಿ ಅವರ ಮಕ್ಕಳ ಬಗೆಗಿನ ಕೆಲ ವಿವರಗಳು ಪ್ರಸ್ತಾಪವಾಗುತ್ತಿದ್ದರೂ ಇಂದಿರಾ ಅವರ ಬಗೆಗೆ ಅವರು ಬರೆದಿದ್ದು ಬಹಳ ವಿರಳ. ಆದರೆ "ಹುಳಿಮಾವು ಮತ್ತು ನಾನು" ಕೃತಿಯಲ್ಲಿ  ಮೊದಲಿಂದ ಕಡೆಯವರೆಗೂ ಲಂಕೇಶರ ಉಪಸ್ಥಿತಿಯಿದೆ. ಹೀಗಾಗಿ ಲಂಕೇಶರ ಅಭಿಮಾನಿಗಳಿಗೆ ಅವರ ಜೀವನದ ವೈಯಕ್ತಿಕ ಮಗ್ಗುಲಿನ ಪರಿಚಯದ ದೃಷ್ಟಿಯಿಂದ ಈ ಕೃತಿ ಉಪಯುಕ್ತ. ಎಲ್ಲ ವಿವರಗಳೂ ಅವರ ವ್ಯಕ್ತಿತ್ವದ ಪ್ರಕಾಶವನ್ನು ಹೆಚ್ಚಿಸುವಂತವೇನೂ ಅಲ್ಲವಾಗಿದ್ದರೂ ಒಬ್ಬ ಅಪ್ರತಿಮ ಪತ್ರಕಾರನಾಗಿ, ಬರಹಗಾರನಾಗಿ ಕನ್ನಡ ಜಾಣ ಜಾಣೆಯರ ಹೃದಯದಲ್ಲಿ ಲಂಕೇಶ್ ಹೊಂದಿರುವ ಸ್ಥಾನಕ್ಕಂತೂ ಈ ಕೃತಿಯಿಂದ ಹಾನಿಯಾಗುವ ಸಾಧ್ಯತೆಗಳು ನನಗೆ ಕಾಣಿಸಲಿಲ್ಲ.  

Wednesday, April 08, 2015

ಒಂದು ಬದಿ ಕಡಲು - ವಿವೇಕ್ ಶಾನಭಾಗ್



ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು
ನಡು ಮಧ್ಯದಲಿ ಅಡಕೆ ತೆಂಗುಗಳ ಮಡಲು

ಹೀಗೆ ಆರಂಭವಾಗುವ ದಿನಕರ ದೇಸಾಯಿಯವರ ಕರಾವಳಿ ಜಿಲ್ಲೆ ಉತ್ತರ ಕನ್ನಡದ ಬಗೆಗಿನ ಪದ್ಯದ ಸಾಲಿನಿಂದ ಪಡೆದ ಹೆಸರಿನ ಈ ಕಾದಂಬರಿಯಲ್ಲಿನ ಮುಖ್ಯ ಕಥನವು ಘಟಿಸುವುದು ಅದೇ ಕರಾವಳಿ ಜಿಲ್ಲೆಯಲ್ಲಿ.  ಯಶವಂತ ಚಿತ್ತಾಲರಿಂದ ಹಿಡಿದು ಈಚೆಗಿನ ಹಲವು ಬರಹಗಾರರ ಕೃತಿಗಳಲ್ಲಿ ಈ ಜಿಲ್ಲೆಯ ಬದುಕಿನ ಚಿತ್ರಣ ಪರಿಣಾಮಕಾರಿಯಾಗಿ ಮೂಡಿಬಂದಿರುವುದು ವಿಶೇಷ.

ಈಚಿನ ವರ್ಷಗಳಲ್ಲಿ ಕನ್ನಡದಲ್ಲಿ ಒಂದು ಪ್ರಜ್ಞಾವಂತ ಓದುಗ ವರ್ಗವನ್ನೆ ಗುರಿಯಾಗಿಸಿಕೊಂಡು ಏಳು ವರ್ಷಗಳ ಕಾಲ ಅತ್ಯುತ್ತಮವಾಗಿ ಹಾಗೂ ಅತ್ಯಂತ ಯಶಸ್ವಿಯಾಗಿ ಪ್ರಕಟಣೆ ಕಂಡ 'ದೇಶ ಕಾಲ' ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿ ಪರಿಚಿತರಾಗಿದ್ದ ವಿವೇಕ್ ಶಾನಭಾಗ್ ಅವರ ಕಾದಂಬರಿ ಎಂದೊಡನೆ ಸಹಜವಾಗಿಯೇ ಕೃತಿಯ ಕುರಿತು ಕುತೂಹಲವಿತ್ತು. ಹೊಸ ಆರ್ಥಿಕ ವ್ಯವಸ್ಥೆ, ಮಾರುಕಟ್ಟೆ, ಜಾಗತೀಕರಣ, ನಗರೀಕರಣ ಇತ್ಯಾದಿಗಳು ದೈನಂದಿನ ಜೀವನದಲ್ಲಿ ತಂದೊಡ್ಡುವ ಸವಾಲುಗಳನ್ನೂ ಬದಲಾವಣೆಗಳನ್ನೂ ಸಮರ್ಥವಾಗಿ ಅಭಿವ್ಯಕ್ತಿಸಲು ದೇಶ ಕಾಲ ಒಂದು ಉತ್ತಮ ವೇದಿಕೆಯಾಗಿ ರೂಪುಗೊಂಡಿತ್ತು. ಹೊಸ ಸಾಹಿತ್ಯದ ಪ್ರಕಾಶನದ ಜೊತೆಗೇ ಈ ಪತ್ರಿಕೆಯು ವರ್ತಮಾನದ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಪ್ರಶ್ನೆಗಳಿಗೆ ಮುಖಾಮುಖಿಯಾಗುತ್ತಿದ್ದ ಬಗೆಯೂ ವಿಶಿಷ್ಟವಾಗಿರುತ್ತಿತ್ತು. ಅಂತಹದ್ದೊಂದು ಪತ್ರಿಕೆಯ ರೂವಾರಿಯಾಗಿದ್ದ ಲೇಖಕರು ತಮ್ಮ  'ಒಂದು ಬದಿ ಕಡಲು' ಕೃತಿಗೆ ನಗರದಿಂದ ದೂರದಲ್ಲಿರುವ ಚಿಕ್ಕದೊಂದು ಊರಿನ ಜೀವನದ  ಹಿನ್ನೆಲೆಯನ್ನು ಆರಿಸಿಕೊಂಡ ಬಗ್ಗೆಯೂ ಕುತೂಹಲವಿತ್ತು.

ಆಧುನಿಕ ತಂತ್ರಜ್ಞಾನ ಸಂಬಂಧದ ವೃತ್ತಿಗಳನ್ನು ಅವಲಂಬಿಸಿ ನಗರವಾಸಿಗಳಾಗಿರುವ  ನಮ್ಮಂತಹವರು ಈ ಸಮಕಾಲೀನ ತಂತ್ರಜ್ಞಾನ ತಂದು ಹೇರುವ ಒಂದು ನಿರ್ದಿಷ್ಟವೂ ಏಕರೂಪಿಯೂ ಆದ ಜೀವನ ಕ್ರಮಕ್ಕೆ ಪಕ್ಕಾಗಿರುತ್ತೇವೆ. ಎಷ್ಟರಮಟ್ಟಿಗೆಂದರೆ, ಕೆಲವೇ ವರುಷಗಳ ಹಿಂದೆ ನಮ್ಮ ಜೀವನದ ಭಾಗವೇ ಆಗಿದ್ದ ಹಳ್ಳಿ ಮತ್ತು ಕಿರುಪಟ್ಟಣಗಳ ಬದುಕು ಇಂದು ನಮಗೆ ಸಂಬಂಧವೇ ಪಡದ ಬೇರೊಂದು ಲೋಕ ಎಂದು ಅನಿಸುವಷ್ಟು.  ಆದರೆ ಸಾಹಿತ್ಯ ಎಂದರೆ ಎಲ್ಲ ಜೀವನ ಕ್ರಮಗಳ, ಎಲ್ಲ ಜನರ ಅನುಭವಗಳ ಅಭಿವ್ಯಕ್ತಿ.

'ಒಂದು ಬದಿ ಕಡಲು' ಪ್ರತಿನಿಧಿಸುವ ಜೀವನ ಕ್ರಮ ಸದ್ಯಕ್ಕೆ ನಮ್ಮದಲ್ಲದೆ ಇರಬಹುದು. ಇಲ್ಲಿನ ಪಾತ್ರಗಳ ಗೋಳುಗಳು, ಗೋಜಲುಗಳು ನಮಗೆ ಸಂಬಂಧವೇ ಪಡದಿರಬಹುದು. ನಾವು ಮುಖ್ಯವಾಗಿ ಗಮನಿಸಬೇಕಾದದ್ದು ಇಲ್ಲಿನ ಪಾತ್ರಗಳು ಜೀವನ ತಂದು ಒಡ್ಡುವ ಸಮಸ್ಯೆಗಳಿಗೆ ಸಂಕಷ್ಟಗಳಿಗೆ ತಾಳ್ಮೆಯಿಂದ ಧೈರ್ಯದಿಂದ ನಿರುದ್ವಿಗ್ನತೆಯಿಂದ ಎದಿರಾಗುವ ಬಗೆ. ಅದರಲ್ಲೊಂದು ಪಾಠವಿದೆ. ಆ ದೃಷ್ಟಿಯಿಂದ ಎಲ್ಲ ಉತ್ತಮ ಕೃತಿಗಳಿಗೂ ಒಂದು ಪ್ರಸ್ತುತತೆಯಿರುತ್ತದೆ.

ಇಪ್ಪತ್ತರ ವಯಸ್ಸಿಗೇ ವಿಧವೆಯರಾದರೂ ಧೈರ್ಯಗೆಡದೆ ಆತ್ಮವಿಶ್ವಾಸದಿಂದ ಜೀವನ ಸಾಗಿಸುವ ಅತ್ತೆ-ಸೊಸೆ ಪಂಢರಿ ಮತ್ತು ಯಮುನಾ, ಅನಾಥೆಯಾದ ತನ್ನ ತಂಗಿಯ ಮಗಳು ಸುನಂದೆಯನ್ನು ಕರೆತಂದು ಸಾಕಿ, ಮುಂದೆ ತನ್ನೆಲ್ಲ ಚಾಣಾಕ್ಷತೆಯನ್ನುಪಯೋಗಿಸಿ ಉತ್ತಮ ವರನಾದ ಪುರಂದರನ ಜತೆ ಅವಳ ವಿವಾಹವನ್ನೂ ಮಾಡುವ 'ಜೀರಿ ಮೆಣಸು' ಗೋದಾವರಿ, ನಾಟಕದ ಖಯಾಲಿಗೆ ಬಿದ್ದ ಯಶವಂತ, ಸಮಾಜದ ಕಟ್ಟುಪಾಡನ್ನು ಮೀರುವ ಧೈರ್ಯ ತೋರುವ ರಮಾಕಾಂತ ಮಾಸ್ತರ, ಹೀಗೇ ಹಲವು ಪಾತ್ರಗಳು ನೆನಪಲ್ಲುಳಿಯುತ್ತವೆ.

ಉತ್ತರ ಕನ್ನಡದ ಜನರು ತಮ್ಮ ಎಂದಿನ ಧಾವಂತವಿಲ್ಲದ ಸಾವಧಾನದ ಬದುಕಿನಲ್ಲಿ ಅನಿವಾರ್ಯವಾಗಿ ಎದುರಾಗುವ ಸನ್ನಿವೇಶಗಳನ್ನು ನಿರ್ವಿಕಾರವಾಗಿ ನಿಭಾಯಿಸುವುದರ ಚಿತ್ರಣ ಕೃತಿಯಲ್ಲಿ ಪರಿಣಾಮಕಾರಿಯಾಗಿ ಮೂಡಿ ಬಂದಿದೆ.

Saturday, February 14, 2015

ಊರು ಭಂಗ - ವಿವೇಕ ಶಾನಭಾಗರ ಹೊಸ ಕಾದಂಬರಿ



ಕಳೆದ ಭಾನುವಾರ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ವಾಡಿಯಾ ಸಭಾಂಗಣದಲ್ಲಿ ನಡೆದ ಸುಂದರ ಸಮಾರಂಭದಲ್ಲಿ ವಿವೇಕ್ ಶಾನಭಾಗರ "ಊರು ಭಂಗ" ಕಾದಂಬರಿ  ಬಿಡುಗಡೆಯಾಯಿತು. ಕತೆಗಾರರಾಗಿ ಕನ್ನಡದಲ್ಲಿ ವಿಶಿಷ್ಟ ಸ್ಥಾನ ಹೊಂದಿರುವ  ಜಯಂತ್ ಕಾಯ್ಕಿಣಿ ಭಾಗವಹಿಸಿದ್ದ ಈ ಕಾರ್ಯಕ್ರಮ ಬಹು ಸಂಖ್ಯೆಯಲ್ಲಿ ಹಾಜರಿದ್ದ ಸಾಹಿತ್ಯದ ಅಭಿಮಾನಿಗಳಿಗೆ ತುಂಬಾ ಖುಷಿ ಕೊಟ್ಟ ಸಭೆಯಾಗಿತ್ತು. ವಿವೇಕ್ ಶಾನಭಾಗರ ಜತೆ ಜಯಂತ್ ನಡೆಸಿಕೊಟ್ಟ ಪ್ರಶ್ನೋತ್ತರವೂ ಬಹಳ ಚೆನ್ನಾಗಿತ್ತು. ಕಾದಂಬರಿ ಪ್ರಕಾರದ ವಿಶೇಷತೆಯ ಬಗೆಗೆ ಜಯಂತರ ಪ್ರಶ್ನೆ ಹಾಗೂ ಅದಕ್ಕೆ ವಿವೇಕರ ಉತ್ತರ ಇವೆರಡೂ ಕುತೂಹಲಕರವಾಗಿದ್ದವು. ಆ ಪ್ರಶ್ನೋತ್ತರದ ವರದಿ ಪ್ರಜಾವಾಣಿ ಯಲ್ಲಿದೆ. ಇದರ ವಿಡಿಯೋ ಸಹ YouTube ನಲ್ಲಿ ಲಭ್ಯವಿದೆ.

ಕಾದಂಬರಿಯೊಂದರ ಓದಿನ ಅನುಭವ ಅದೆಷ್ಟು ಖಾಸಗಿಯಾದದ್ದು, ವೈಯಕ್ತಿಕವಾದದ್ದು ಮತ್ತು ಆಪ್ತವಾದದ್ದು.  ಇತರ ಸಾಹಿತ್ಯ ಪ್ರಕಾರಗಳಿಗೆ ಹೋಲಿಸಿದರೆ  ಕಾದಂಬರಿಯಲ್ಲಿ ಪಾತ್ರಗಳು ಸಂಕೀರ್ಣವಾಗಿ, ದಟ್ಟವಾಗಿ ಇರಲು ಸಾಧ್ಯ.  'ಮದಾಮ್ ಬೋವರಿ'ಯ ಎಮ್ಮಾ, 'ಕ್ರೈಂ ಅಂಡ್ ಪನಿಶ್ಮೆಂಟ್' ನ ರಸ್ಕಾಲ್ನಿಕೊವ್ ಹೀಗೆ ಹಲವಾರು ಕಾದಂಬರಿಗಳ ಪಾತ್ರಗಳು ನೂರ ಐವತ್ತು ವರ್ಷಗಳಷ್ಟು ಹಿಂದಿನ ಕೃತಿಗಳವಾದರೂ ಒಮ್ಮೆ ಓದಿದ ಮೇಲೆ ಬಹುಶಃ ಜೀವನವಿಡೀ ನಮ್ಮೊಡನೆ ಉಳಿದು ಕಾಡುವಂತಹವು. ಹಾಗೆಯೇ ನಮ್ಮ ಕನ್ನಡದ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯ ನಾಯಿ ಗುತ್ತಿ, 'ಶಿಕಾರಿ'ಯ ನಾಗಪ್ಪ - ಈ ಬಗೆಯ ಪಾತ್ರಗಳೂ ಸುಲಭಕ್ಕೆ ಮರೆಯುವಂತಹವಲ್ಲ. ವಿವೇಕ್ ಅವರು ಜಯಂತರೊಂದಿಗೆ ಮಾತನಾಡುತ್ತಾ ಹೇಳಿದಂತೆ "ಮಲೆಗಳಲ್ಲಿ ಮದುಮಗಳು" ಕಾದಂಬರಿಯಲ್ಲಿ ಕಾಡು ಸಹ ಒಂದು ಪಾತ್ರವಾಗಿಬಿಡುವುದು ಸಹ ಕಾದಂಬರಿ ಪ್ರಕಾರದ ವಿಶಿಷ್ಟತೆಗೊಂದು ನಿದರ್ಶನ.

ತಮ್ಮ ಕಾಲ ದೇಶಗಳನ್ನು ಮೀರಿ ನಮ್ಮನ್ನು ತಲುಪುವ, ಪ್ರಭಾವಿಸುವ, "ಕ್ಲಾಸಿಕ್ಸ್" ಎಂದು ಪರಿಗಣಿಸುವ ಕಾದಂಬರಿಗಳು ಮುಖ್ಯವಾಗಿರುವಂತೆಯೇ  ಇಂದಿನ ಕಾಲಘಟ್ಟವನ್ನು ಪ್ರತಿನಿಧಿಸುವ ಕಾದಂಬರಿಗಳೂ ಮುಖ್ಯವೇ. ನಮ್ಮದೇ  ಸುತ್ತಲಿನ ಸಾಮಾಜಿಕ ವಿದ್ಯಮಾನಗಳು ನಮ್ಮರಿವಿನ ಪರಿಧಿಗೆ ಬರುವುದೂ ಇಂಥ ಕಲಾ ಪ್ರಕಾರಗಳ ಮೂಲಕವೇ. ಕಾದಂಬರಿಯೊಂದರಿಂದ  ಓದುಗರಾಗಿ ನಾವು ಮುಖ್ಯವಾಗಿ ನಿರೀಕ್ಷಿಸುವುದು  ಅದು ದೈನಂದಿನ ಜೀವನದ ತೀವ್ರ ಅನುಭವಗಳ  ಚಿತ್ರಗಳನ್ನು ಕಟ್ಟಿ ಕೊಡುತ್ತಲೇ ತಾನು ಪ್ರತಿನಿಧಿಸುವ ಕಾಲಘಟ್ಟದ  ತಲ್ಲಣಗಳನ್ನು  ಪ್ರತಿಬಿಂಬಿಸಬೇಕೆಂಬುದನ್ನು.

ಸುಮಾರು ನಲವತ್ತು ವರ್ಷಗಳ ಹಿಂದೆಯೇ ಚಿತ್ತಾಲರು  "...  ಮಾನವನ ಮೂಲಭೂತವಾದ ಭಾವನೆಗಳು ಕೆಡದಂತೆ, ಸಾಯದಂತೆ ಅವುಗಳನ್ನು ಕಾಪಾಡಿಕೊಳ್ಳುವುದರಲ್ಲಿ ಕಲೆಗಳು,  ಬಹು ಮುಖ್ಯವಾಗಿ ಸಾಹಿತ್ಯ ವಹಿಸಬಹುದಾದ ಪಾತ್ರವನ್ನು ಒತ್ತಿ ಹೇಳಿದಷ್ಟೂ ಕಡಿಮೆಯೆನಿಸುತ್ತದೆ" ಎಂದು ಬರೆದಿದ್ದರು.

 ಒಂದು ಕಾದಂಬರಿಯ ಓದಿಗೆ ತೊಡಗುವುದೆಂದರೆ ಒಂದು ಅಪರಿಚಿತ ಲೋಕವನ್ನು ಪ್ರವೇಶಿಸಿದಂತೆ. ಪರಿಚಯವಾಗುತ್ತಾ ಕ್ರಮೇಣ ಪಾತ್ರಗಳೆಲ್ಲ ನಮ್ಮದೇ ಲೋಕದ ಭಾಗವಾಗುವುದು, ತೀರಾ ಪರಿಚಿತರೆನಿಸುವ ಭಾವ ಮೂಡಿಸುವುದು ಓದಿನ ಅಚ್ಚರಿ ಮತ್ತು ಮಾಂತ್ರಿಕತೆಯ ಪರಿ.

ಸುಮಾರು ಇನ್ನೂರೈವತ್ತು ಪುಟಗಳ "ಊರು ಭಂಗ" ಕಾದಂಬರಿ ಆರಂಭದ ಪುಟಗಳಿಂದಲೇ  ಆವರಿಸಿಕೊಳ್ಳುವ ಧಾಟಿಯದು. ಕಳೆದ ನಾಲ್ಕೈದು ದಿನಗಳು ಬಸ್ಸಿನಲ್ಲಿ ಕುಳಿತು ಆಫೀಸಿಗೆ ಪ್ರಯಾಣಿಸುವ ಅವಧಿಯಲ್ಲಿ ಕಾದಂಬರಿ ಓದಿ ಮುಗಿಸಿದ್ದೇ ಅರಿವಿಗೆ ಬರಲಿಲ್ಲ.

ಭಾನುವಾರದ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಈ ಕಾದಂಬರಿಯ ಮೊದಲ ಎರಡು ಅಧ್ಯಾಯಗಳು ಕಾರ್ಪೊರೇಟ್ ಜಗತ್ತಿನ ಕಿರು ಪರಿಚಯ ಮಾಡುವುದರೊಂದಿಗೆ, ಬರವಣಿಗೆಯ ನಿಖರ, ಆಕರ್ಷಕ ಶೈಲಿಯ ಪರಿಚಯವನ್ನೂ ಮಾಡುತ್ತವೆ. ಕಾದಂಬರಿಯುದ್ದಕ್ಕೂ  ಸಂಭಾಷಣೆಗಳು , ಸನ್ನಿವೇಶಗಳ ವಿವರಣೆಗಳು , ಎಲ್ಲವೂ ತುಂಬಾ ನೈಜವಾಗಿ ಮೂಡಿ ಬಂದಿವೆ. ಅದರಲ್ಲೂ ಕಾರ್ಪೊರೇಟ್ ಜಗತ್ತಿನ ಪರಿಚಯವಿರುವ ನಗರವಾಸಿ ಓದುಗರಿಗೆ  ಆ ಜಗತ್ತಿನ ವಿವರಗಳನ್ನು ಓದುವಾಗ ಅವು ತೀರಾ ಪರಿಚಿತ ವಿಷಯಗಳಂತೆ ಅನಿಸಿದರೆ  ಆಶ್ಚರ್ಯವಿಲ್ಲ.

ಅಭಿವ್ಯಕ್ತಿಗೆ ಕಾದಂಬರಿ ಪ್ರಕಾರವು ನೀಡುವ ಕೊಂಚ ಧಾರಾಳ ಸೌಲಭ್ಯವನ್ನು ಸೂಕ್ತವಾಗಿ ಬಳಸಿಕೊಂಡಿರುವ ಲೇಖಕರು ವರ್ತಮಾನದ ಒಂದು ಕವಲು ಮತ್ತು ಒಂದು  ಹಿಂದಿನ ತಲೆಮಾರಿನ ಇನ್ನೊಂದು ಕವಲು ಹೀಗೆ ಎರಡು ಕವಲುಗಳಲ್ಲಿ "ಊರು ಭಂಗ" ಕೃತಿಯನ್ನು ನಿರೂಪಿಸಿದ್ದಾರೆ.  ಒಂದು  ಕವಲು ಸಧ್ಯದ ನಗರ ಕೇಂದ್ರಿತ ಮತ್ತು ಜಾಗತೀಕರಣದ ಪ್ರಭಾವಕ್ಕೊಳಪಟ್ಟ ಮಧ್ಯಮ ವರ್ಗದ  ಜೀವನ ಚಿತ್ರವಾದರೆ, ಹಿಂದಿನ ತಲೆಮಾರಿಗೆ ಸಂಬಂಧಿಸಿದ ಕವಲು ಎಪ್ಪತ್ತರ ಶತಮಾನದ ಸಣ್ಣದೊಂದು ಪಟ್ಟಣದ ಮಂದಿಯ ಕತೆಯಾಗಿದೆ.

ಐದು ಭಾಗಗಳಿರುವ ಕಾದಂಬರಿಯ ಒಂದು, ಮೂರು ಮತ್ತು ಐದು - ಈ ಮೂರು ಭಾಗಗಳು  ಇಂದಿನ ನಗರ ಕೇಂದ್ರಿತ ಕತೆಯಾಗಿದ್ದು ಉಳಿದೆರಡು ಭಾಗಗಳು ಎಪ್ಪತ್ತರ ದಶಕದ ಕತೆಗೆ ಸೀಮಿತವಾಗಿವೆ. ಹಿಂದಿನ ತಲೆಮಾರಿನ ವೃತ್ತಾಂತವು ನಿರೂಪಕ ತನ್ನ ಗೆಳತಿಗೆ ಹೇಳುವ ಕತೆಯ ರೂಪದಲ್ಲಿ ಬರುವುದೂ ಈ ಕಾದಂಬರಿಯ ಒಂದು ವಿಶೇಷ. ಸರಾಗವಾಗಿ ಓದಿಸಿಕೊಳ್ಳುವ  ಶೈಲಿಯಾದರೂ ಹಲವು ಪದರಗಳನ್ನು ಕುಶಲತೆಯಿಂದ ಹೆಣೆದು ಸಿದ್ಧಪಡಿಸಿರುವ ಕಾದಂಬರಿಯಿದು.

ನನಗೆ ಇಷ್ಟವಾದ ಕೆಲವು ಭಾಗಗಳು-

ಕಾದಂಬರಿಯ ನಿರೂಪಕ ಮನಮೋಹನ ಮತ್ತು ಶಮಿ ಇನ್ನೂ ಹೊಸದಾಗಿ ಪರಸ್ಪರರಿಗೆ ಪರಿಚಯವಾಗುತ್ತಿದ್ದಾಗ ಸಾಹಿತ್ಯದ ಕುರಿತು ಅವರ ಮಾತುಕತೆ-
ಶಮಿ- "ನನಗೂ ಸಾಹಿತ್ಯದಲ್ಲಿ ಆಸಕ್ತಿ. ಆದರೆ ಅಂತ ವಿಶೇಷ ಪರಿಶ್ರಮವಿಲ್ಲ... ಅದೊಂದು ಏರಲಾಗದ  ಪರ್ವತದ ಹಾಗೆ ಅನಿಸುತ್ತದೆ..."
ಮನಮೋಹನ- "ಸಾಹಿತ್ಯವೆಂದರೆ ಪರ್ವತಾರೋಹಣದ ಹಾಗೆ ಮಾಡಿ ಮುಗಿಸುವ ಕೆಲಸವಲ್ಲ. ಜೀವನವಿಡೀ ಮಾಡುತ್ತಲೇ ಇದ್ದು ಸುಖಿಸಬೇಕಾದ ಸಂಗತಿ." (ಪುಟ ೧೯)

ಸ್ವಲ್ಪ ಪರಿಚಯವಾದ ಮೇಲೆ ಶಮಿ ಅವನ ಹಿಂದಿನ ಜೀವನದ ಕುರಿತು ಕೇಳಲು ಇಷ್ಟಪಡುತ್ತಾಳೆ. ಆಗ ಅವನು ಬಾಲ್ಯದಲ್ಲಿ ತನ್ನೂರಿನಲ್ಲಿ ನೋಡಿದ್ದ ಕಿಮಾನಿ ವಕೀಲರ ಕತೆ ಹೇಳಲು ನಿರ್ಧರಿಸುತ್ತಾನೆ. ಆ ಕತೆ "ಆದರ್ಶದ ತಟವಟ, ಸಮಾಜದ ಅಸಹನೆ, ಹೊಸ ತಲೆಮಾರಿನ ವಿರೋಧ, ದುರಂತ ನಾಯಕನ ಹಟಮಾರಿತನ ಇತ್ಯಾದಿಗಳು ತುಂಬಿದ ರೋಚಕ ಕತೆಯಾಗಬಹುದು" (ಪುಟ ೫೫) ಎಂದು ಅವನು ಭಾವಿಸುವುದು ಸುಳ್ಳಾಗುವುದಿಲ್ಲ.  ಇಡೀ  ಒಂದು ಅಧ್ಯಾಯದಲ್ಲಿ  ಕಿಮಾನಿ ವಕೀಲರ ಕತೆ ನಿಜಕ್ಕೂ ರೋಚಕವಾಗಿ ಬಿಚ್ಚಿಕೊಳ್ಳುತ್ತದೆ.  ಅವರಂತೆ "ಆದರ್ಶ ಮತ್ತು ನ್ಯಾಯಕ್ಕಾಗಿ ಹೋರಾಟ" ಕ್ಕಾಗೆ ಜೀವನ ಮುಡಿಪಿಡುವ ಒಬ್ಬಿಬ್ಬರನ್ನಾದರೂ ನಮ್ಮ ಜೀವನದಲ್ಲೂ ನೋಡಿರುತ್ತೇವೆ.  ಅರವಿಂದ ಅಡಿಗರ "ಲಾಸ್ಟ್ ಮ್ಯಾನ್ ಇನ್ ಟವರ್" ಕಾದಂಬರಿಯ ಮಾಸ್ಟರಜಿ ಪಾತ್ರವೂ ಅಂತಹದ್ದೇ.

ಹಾಗೆಯೇ, ನಿತ್ಯವೂ ಅವಳಿಗೆ ಕಂತುಗಳಲ್ಲಿ ಕಿಮಾನಿ ವಕೀಲರ ಕತೆ ಹೇಳುತ್ತಾ ಅವಳನ್ನು ಒಲಿಸಿಕೊಳ್ಳುವ ಮನಮೋಹನನ  ತಂತ್ರವೂ ಇಷ್ಟವಾಯಿತು. "ಅರೇಬಿಯನ್ ನೈಟ್ಸ್" ನಲ್ಲಿ ಶಹಾನಿಗೆ ನಿತ್ಯವೂ ಒಂದು ಕತೆ ಹೇಳುತ್ತಾ ಜೀವ ಉಳಿಸಿಕೊಳ್ಳುವ ಶಹಜಾದೆಯ ಪ್ರಸ್ತಾಪ ಕಾದಂಬರಿಯಲ್ಲಿ  ಬರುತ್ತದೆ.  ಬಹಳ ಹಿಂದೆ ತಮ್ಮ ಒಂದು ಲೇಖನದಲ್ಲಿ  ಲಂಕೇಶರು ಸಹ "ಅರೇಬಿಯನ್ ನೈಟ್ಸ್" ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದ್ದರು. ಅದರಲ್ಲಿ ಹೀಗೆ  ಬರೆದಿದ್ದರು-"ಬರೆಯುವುದು , ಶೂನ್ಯದಿಂದ ಸದ್ದುಗಳನ್ನು ಹೊರಡಿಸುವುದು, ನಿಶ್ಯಬ್ದದಿಂದ ಸದ್ದುಗಳನ್ನು ಏಳಿಸುವುದು ಲೇಖಕನಿಗೆ ಅಂಟಿದ ಶಾಪ...  ಅನುಭವಗಳನ್ನು ಹೇಳುವುದು, ಹೇಳುವ ಮೂಲಕ ಅದನ್ನು ಕಾಣುವುದು,  ಬಿಡುಗಡೆ ಪಡೆಯುವುದು ಇದನ್ನು ತಾನೇ ಶಹಜಾದೆ ಮಾಡಿದ್ದು?"

ಕಿಮಾನಿ ವಕೀಲರ ಕತೆ ಆರಂಭಿಸುವ ಮುನ್ನ ಪೀಠಿಕೆಯಾಗಿ ಮನಮೋಹನ ಹೀಗೆ ಹೇಳುತ್ತಾನೆ-
"ಇಲ್ಲಿ ಒಂದಿಷ್ಟು ವಿವರಗಳು, ಒಂದಿಷ್ಟು ಘಟನೆಗಳು ಇವೆ. ಸುಮ್ಮನೇ ಇವೆ . ಅತಿ ಬುದ್ಧಿವಂತಿಕೆಯ ಹಮ್ಮಿನಿಂದ ಅವುಗಳ ಪ್ರಸ್ತುತತೆಯೇನು, ಅವುಗಳ ಅರ್ಥವೇನು ಎಂದು ತಿಣುಕತೊಡಗಿದೊಡನೆ  ನಮಗೆ ತಿಳಿಯದ್ದನ್ನು ಮನಸು ತೆಗೆದು ಹಾಕುತ್ತದೆ. ಹಾಗಾಗಿ ಅರ್ಥದ ಗೊಡವೆಯೂ ಬೇಡ, ಎಲ್ಲವನ್ನೂ ಒಂದು ಸೂತ್ರಕ್ಕೆ ಕಟ್ಟುವ ಹಟವೂ ಬೇಡ...  ಸಂಬಂಧ ಕಲ್ಪಿಸಿ ನಮಗೆ ತಿಳಿದ ಅರ್ಥ ಹೊರಡಿಸುವುದರಲ್ಲೊಂದು ಬಗೆಯ ಹಿಂಸೆಯಿದೆ, ಅನ್ಯಾಯವಿದೆ..."(ಪುಟ ೫೬).

ಇನ್ನು ಕಾದಂಬರಿಯ ಆರಂಭದ ಪುಟಗಳಿಂದಲೂ ವಿದ್ಯುತ್ತಿನಂತೆ ಪ್ರವಹಿಸುತ್ತಾ ಬರುವ ಮನಮೋಹನ-ಶಮಿಯರ ನಡುವಿನ ಒಡನಾಟ, ಸಂಬಂಧಗಳ ಚಿತ್ರಣದ ಬಗೆಗೆ ಒಂದೆರಡು ಮಾತು. ಸಮಾರಂಭವೊಂದರಲ್ಲಿ ಅಚಾನಕ್ಕಾಗಿ ಆಗುವ ಇವರಿಬ್ಬರ ಪರಿಚಯವ  ಕ್ರಮೇಣ  ಸ್ನೇಹ, ಸರಸ, ಶೃಂಗಾರಗಳ ಹಾದಿಯಲ್ಲಿ ಸಾಗಿ ಕಡೆಗೆ ಇನ್ನೊಂದು ತಿರುವು ಪಡೆಯುವುದು ಕುತೂಹಲಕರವಾಗಿದೆ.  ಇದೆಲ್ಲದರ ಅರ್ಥೈಸುವಿಕೆ 'ಅವರವರ ಭಾವಕ್ಕೆ' ಬಿಟ್ಟಿದ್ದು ಅಂದುಕೊಂಡರೂ ಅಸಾಧ್ಯದ್ದೆಂದು ತೋರುವ  ಸಂಬಂಧವೊಂದನ್ನು ಸೂಕ್ಷ್ಮತೆಯಿಂದ, ಕುಶಲತೆಯಿಂದ, ಒಂದು  ತೀವ್ರತೆಯಿಂದ ಚಿತ್ರಿಸಿರುವ ಬಗೆ ಗಮನ ಸೆಳೆಯುತ್ತದೆ.  ಮನಮೋಹನನ ಮೋಹದ ತೀವ್ರತೆಯ ಅಭಿವ್ಯಕ್ತಿಗೆ ಕಾದಂಬರಿಯಲ್ಲೂ ಕವನಗಳನ್ನು ಬಳಸಿರುವುದೂ ಪರಿಣಾಮಕಾರಿ ತಂತ್ರ. ಅದರಲ್ಲೂ "ದೇವರೇ ಅವಳ ಜೊತೆ ಕತ್ತಲೆಯನ್ನೂ ಕೊಡು" ಎಂದು ಆರಂಭವಾಗುವ "ಹಗಲಲ್ಲಿ ಬರಿದಾಗಿ" ಎಂಬ ಹೆಸರಿನ ಕವಿತೆ ಇಷ್ಟವಾಯಿತು.  (ಪುಟ ೧೬೮)