Wednesday, December 30, 2015

ಆಡುಕಳ - ಶ್ರೀಧರ ಬಳಗಾರ



ಮೊದಲ ಬಾರಿ 'ಆಡುಕಳ' ಎಂಬ ಹೆಸರು ಕೇಳಿದಾಗ ಇದೊಂದು ಕನ್ನಡ ಪದವೇ, ಹಾಗಿದ್ದರೆ ಏನಿದರ ಅರ್ಥ ಎಂದು ಯೋಚಿಸಿದ್ದೆ. ಪುಸ್ತಕವನ್ನು ಓದಲು ಆರಂಭಿಸಿದ ಮೇಲೆ ತಿಳಿದದ್ದು ಇದೊಂದು ಸ್ಥಳದ ಹೆಸರೆಂದು.

ನಾನು ಚಿಕ್ಕಂದಿನಲ್ಲಿ ಕಾಣುತ್ತಲೇ ಬೆಳೆದ ಚಿಕ್ಕಮಗಳೂರು ಜಿಲ್ಲೆಯ ನನ್ನ ಹಳ್ಳಿ ಪಟ್ಟಣಗಳಿಗಿಂತ ಹೆಚ್ಚೇನೂ ಬೇರೆ ಅನಿಸದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪೇಟೆ, ಮಣ್ಮನೆ, ಬಿದ್ರಳ್ಳಿ, ಆಡುಕಳಗಳು ಮತ್ತು ಅಲ್ಲಿನ ಬದುಕಿನ ಕ್ರಮ ಕಾದಂಬರಿಯಲ್ಲಿ ಮೊದಲಿಗೆ ನನ್ನನ್ನು ಸೆಳೆದ ಅಂಶ.

ಕತೆಯ ಆರಂಭದಲ್ಲಿ ಮತ್ತು ಉದ್ದಕ್ಕೂ ಅಂತರ್ಗಾಮಿಯಾಗಿ ಕಾಣಿಸಿಕೊಳ್ಳುವುದು ಆಡುಕಳದ ಭೂಮಿಯ ಒಡೆತನಕ್ಕೆ ಸಂಬಂಧಿಸಿದಂತೆ ನಡೆಯುವ ದಾಯಾದಿ ಕಲಹ.  ಹಳ್ಳಿಯ ಅವಿಭಕ್ತ ಕುಟುಂಬಗಳ ಮೂಲಭೂತ ಹಿನ್ನೆಲೆಯಿಂದ ಬಂದ ಓದುಗರಿಗೆ ಈ ಕಲಹಗಳು ಮನುಷ್ಯ ಸಂಬಂಧಗಳನ್ನು ಹಾಳುಗೆಡವುವ ಬಗೆ, ಅವರ ಆಳದ ವಿವೇಕ, ಸದ್ಭಾವನೆಗಳು ನಾಶವಾಗುವ ಬಗೆ, ಇವುಗಳ ಅನುಭವ ಇದ್ದೇ ಇರುತ್ತದೆ. ಕಾದಂಬರಿಯ ಮುಖ್ಯ ಪಾತ್ರವಾದ ದಶರಥನ ಕುಟುಂಬವನ್ನು ಹಿನ್ನೆಲೆಯಾಗಿಸಿ, ಆಸ್ತಿಗಾಗಿ ಆ ಕುಟುಂಬದಲ್ಲಿ ನಡೆಯುವ ಸೂಕ್ಷ್ಮ ಸಂಚುಗಾರಿಕೆ, ಕುಟಿಲೋಪಾಯಗಳ ಚಿತ್ರಣವಿದೆ.

ದಾಯಾದಿ ಕಲಹ ಕೃತಿಯ ಒಂದು ಆಯಾಮವಾದರೆ, ಸಮುದಾಯವೊಂದರ ಜೀವನ ಕ್ರಮ, ಸಾಂಸ್ಕೃತಿಕ ಆಚರಣೆಯ ಚಿತ್ರಣವೂ ಪರಿಣಾಮಕಾರಿಯಾಗಿದೆ. ಖಾನಾವಳಿಯ ಗಂಗಣ್ಣ, ಮದ್ಗುಣಿ ಡಾಕ್ಟರು, ಜೇನು ಕೀಳುವ ಬಕಾಲ, ಮೈಮೇಲೆ ದೇವರು ಬರುವ ಕಾಮಾಕ್ಷಿ, ಇನ್ನು ಮೊದಲಾದ ಪಾತ್ರಗಳೂ ಉತ್ತಮವಾಗಿ ಮೂಡಿಬಂದಿವೆ.

'ಕಬ್ಬಿನ ಹಬ್ಬ' ಅಧ್ಯಾಯದಲ್ಲಿನ ಆಲೆಮನೆಯ ಚಿತ್ರಣವಂತೂ ನಾನು ಬಾಲ್ಯದಲ್ಲಿ ನೋಡಿದ್ದ ನಮ್ಮ ಕುಟುಂಬದ ಆಲೆಮನೆಯನ್ನು ಯಥಾವತ್ತಾಗಿ ನೆನಪಿಸುವಂತಿತ್ತು. ಶ್ರೀಧರ ಬಳಗಾರರು ದಟ್ಟ ವಿವರಗಳ ಮೂಲಕ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವುದು ಕಾದಂಬರಿಯ ಒಂದು ವೈಶಿಷ್ಟ್ಯ.

ಊರ ಜೀವನದಲ್ಲಿ ಕಾಲದ ಪ್ರಭಾವದಿಂದ ಕಾಣಿಸಿಕೊಳ್ಳುವ ಬದಲಾವಣೆಗಳನ್ನು ಅವರು ವಿವರಿಸುವ ಸ್ವಾರಸ್ಯಕರ ಶೈಲಿಯ ಒಂದು ಉದಾಹರಣೆ ದಶರಥ ಭತ್ತದ ಬೇಸಾಯ ಬಿಟ್ಟು ಅಡಿಕೆ ತೋಟ ಹಾಕದಿರಲು ನಿರ್ಧರಿಸುವ ಸಂದರ್ಭ-
"ಕಡಿಮೆ ಕೆಲಸ, ಲಾಭ ಹೆಚ್ಚು ಎಂದೆನಿಸಿದರೂ ಭತ್ತದ ಬೇಸಾಯದಂತೆ ಋತು ವಿಲಾಸವನ್ನಾಗಿ ಹಬ್ಬದ ಸಂಭ್ರಮಾಚಾರಣೆಯಾಗಿ ಆಚರಿಸಲು ಸಾಧ್ಯವಿಲ್ಲವೆನಿಸಿತು. ..ಕೃಷಿ ಗದ್ದೆಯಲ್ಲಿ ಅಡಿಕೆ ತೋಟ ಹಾಕಿದ ನಂತರ ಜೀವನ ಸಂಭ್ರಮವನ್ನು ಕಳೆದುಕೊಂಡಿದ್ದನ್ನು ಅವನು ನೋಡಿದ್ದಾನೆ. ಪಂಜಿ ಸುತ್ತುತ್ತಿದ್ದವರು ಪ್ಯಾಂಟ್ ಧರಿಸಿ, ನೇಗಿಲು ಹಿಡಿಯುವ ಕೈಗಳು ಬೈಕ್ ನಡೆಸುತ್ತ ಪೇಟೆಗೆ ಹೋಗದೆ ಇರಲು ಸಾಧ್ಯವಿಲ್ಲ.." (ಪು 23-24)

ಸಾಹಿತ್ಯ ಪ್ರತಿನಿಧಿಸುವುದು ಯಾವುದೋ ಒಂದು ವಿಚಾರಧಾರೆಯನ್ನೋ, ಚಾರಿತ್ರಿಕ ವಿವರಗಳನ್ನೋ, ಅಥವಾ ನೀತಿ ವಿಚಾರಗಳನ್ನೋ ಅಲ್ಲ. ಅವೆಲ್ಲವೂ ಇಲ್ಲಿ ಮಿಳಿತಗೊಂಡಿರಬಹುದಾದರೂ ಸಾಹಿತ್ಯ ಒಳಗೊಳ್ಳುವ ಸತ್ಯಗಳು ನಮಗೆ ದಕ್ಕಬೇಕಾದರೆ ಅದನ್ನು ಪಾತ್ರಗಳ ಅನುಭವಗಳ ನೆಲೆಯಲ್ಲಿ ಶೋಧಿಸಬೇಕಾಗುತ್ತದೆ.

ಎಲ್ಲ ಶ್ರೇಷ್ಟ ಪುಸ್ತಕಗಳೂ ಹಾಗೇ. ಅವು ನಮ್ಮೊಂದಿಗೆ ಒಂದು ಬಗೆಯ ಸಾವಯವ ಸಂಬಂಧವನ್ನು ಹೊಂದಿರುತ್ತವೆ. ಕೃತಿಯ ಮೂಲಕ ಅದರ ಲೇಖಕರ ವಿಚಾರ, ಭಾವನೆ, ಕಾಳಜಿಗಳು ನಮ್ಮ ಅರಿವಿಗೆ ಬರುತ್ತವೆ. ಹಾಗೆಯೇ ಕೃತಿಯನ್ನು ಓದುವಾಗ ಅದರೊಡನೆ ನಾವು ಅಂತರಂಗದಲ್ಲಿ ನಡೆಸುವ ಸಂವಾದದಲ್ಲಿ ನಮ್ಮ ವಿಚಾರ, ಭಾವನೆ, ಕಾಳಜಿಗಳು ಸ್ಪಷ್ಟಗೊಳ್ಳುತ್ತ ಹೋಗುತ್ತವೆ.

ಒಂದು ಸಣ್ಣ ಪ್ರದೇಶದ ಸಣ್ಣ ಸಮುದಾಯವೊಂದರ ನಿತ್ಯದ ಬದುಕಿನ ವಿವರಗಳಲ್ಲೇ ಬದಲಾಗುತ್ತಿರುವ ಸಮಾಜದ ಬದಲಾಗುತ್ತಿರುವ ಮೌಲ್ಯಗಳ ಚಿತ್ರಣವನ್ನು ಒದಗಿಸಿ ಓದುಗರನ್ನೂ ಆಲೋಚನೆಗೆ ಹಚ್ಚುವ ಮುಖ್ಯವಾದ ಕೃತಿ ಆಡುಕಳ ಎನ್ನುವುದರಲ್ಲಿ ಅನುಮಾನವೇ ಇಲ್ಲ. 

2 comments :

Vijaya said...

Good review!

Vijaya said...
This comment has been removed by the author.