Saturday, March 11, 2017

ಘಾಚರ್ ಘೋಚರ್ - ವಿವೇಕ್ ಶಾನಭಾಗ್

ಈ ಕಾದಂಬರಿಯ ನಿರೂಪಕ ಒಬ್ಬ ನಗರವಾಸಿ ಮಧ್ಯಮ ವರ್ಗದ ಯುವಕ. ಕೂಡು ಕುಟುಂಬದವನಾದ ಇವನ ಕುಟುಂಬದವರು ಒಂದು ಕಾಲದಲ್ಲಿ ತೀರಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ನಂತರ ಇವನ ಚಿಕ್ಕಪ್ಪ ಆರಂಭಿಸಿದ ಮಸಾಲೆ ಪದಾರ್ಥಗಳ ವ್ಯವಹಾರದಿಂದ ಒಮ್ಮಿಂದೊಮ್ಮೆಲೆ ಹಣವಂತರಾದವರು. ಇಕ್ಕಟ್ಟಾದ, ರೈಲ್ವೆ ಬೋಗಿಗಳಂತಹ ಕೋಣೆಗಳ ಮನೆಯಿಂದ, ಪ್ರತಿಷ್ಟಿತ ಬಡಾವಣೆಯ ವಿಶಾಲವಾದ ಮನೆಗೆ ಕುಟುಂಬವು ಸ್ಥಳಾಂತರವಾದಾಗ ಹೊಸ ಜೀವನ ಶೈಲಿಗೆ ಹೊಂದಿಕೊಳ್ಳುವ ಸನ್ನಾಹದಲ್ಲಿ  ಪರಸ್ಪರ ಸಂಬಂಧಗಳು, ಮನೋಭಾವಗಳು, ನಿಷ್ಟೆ ಗಳು ಬದಲಾಗುತ್ತವೆ. ಅದ್ಧೂರಿಯಿಂದ ನಡೆಸುವ ಮದುವೆಗಳು ಮುರಿದು ಬೀಳುತ್ತ ವೆ. ಒಳಗೊಳಗೇ ಮೌನ ಯುದ್ಧಗಳು ಆರಂಭವಾಗುತ್ತವೆ. ಎಲ್ಲವೂ ಘಾಚರ್ ಘೋಚರ್ ಆಗಿಬಿಡುತ್ತದೆ.  ಸಂಕ್ಷೇಪವಾಗಿ ಹೇಳುವುದಾದರೆ ಇದಿಷ್ಟು ಇಲ್ಲಿ ನಡೆಯುವ ಕತೆ.

ಕಳೆದ ಎರಡು ಮೂರು ದಶಕಗಳಲ್ಲಿ, ಮುಖ್ಯವಾಗಿ ಜಾಗತೀಕರಣ ಮತ್ತು ನವೋದ್ಯಮಗಳು ದೇಶದಲ್ಲಿ ತಂದಿರುವ ಆರ್ಥಿಕ ಪ್ರಗತಿ ಮತ್ತದರ  ಸಾಮಾಜಿಕ ಹಾಗೂ ಕೌಟುಂಬಿಕ ಪರಿಣಾಮಗಳು ಇವು ಎಲ್ಲರ ಅನುಭವವೇನೋ ನಿಜ. ಆದರೆ ಈ ಬದಲಾವಣೆಗಳು ಗಮನಕ್ಕೇ ಬಂದಿರುವುದಿಲ್ಲ. ಸೂಕ್ಷ್ಮ ಸಂವೇದನೆಯುಳ್ಳ ಸಾಹಿತಿ ಕನ್ನಡಿ ಹಿಡಿದು ತೋರಿಸಿದಾಗಲೇ ದೈನಂದಿನ ಜೀವನದಲ್ಲಿ ನಡೆಯುವ  ಅನೇಕ ವಿಪರೀತಗಳು, ಸೂಕ್ಷ್ಮ ಕ್ರೌರ್ಯಗಳು ನಮಗೆ ಹೊಳೆಯುವುದು. 

ಇಂದಿನ ಬದಲಾಗುತ್ತಿರುವ ಮೌಲ್ಯಗಳು , ಮರೆಯಾಗುತ್ತಿರುವ ಸಣ್ಣ ಪುಟ್ಟ ಸೌಜನ್ಯಗಳು , ಸ್ವಕೇಂದ್ರಿತ ಮನೋಭಾವಗಳು, ಅಂತಸ್ತಿನ ಅಹಂಕಾರಗಳು, ಎಲ್ಲವೂ  ಕತೆಯಲ್ಲಿ ತಣ್ಣನೆಯ ದನಿಯಲ್ಲಿ, ನವಿರಾದ ನಿರೂಪಣೆಯ ಮೂಲಕ ಅನಾವರಣಗೊಳ್ಳುವ ಬಗೆ  ಅಂತಃಕರಣವಿರುವ ಯಾರನ್ನೂ ಪ್ರಕ್ಷುಬ್ಧಗೊಳಿಸದೇ ಇರಲಾರದು.

ಒಂದೆಡೆ ನಿರೂಪಕ ಹಣದ ಪರಿಣಾಮದ ಬಗೆಗೆ ಹೀಗೆ ಹೇಳುತ್ತಾನೆ- "ದುಡ್ಡು ನಮ್ಮನ್ನೇ ಅಡಿಸುತ್ತದೆ ಅನ್ನುವ ಮಾತು ಸುಳ್ಳಲ್ಲ. ಅದಕ್ಕೂ ಒಂದು ಸ್ವಭಾವ, ಶಕ್ತಿ ಇರುತ್ತದೆಯೋ ಏನೋ." ಕನ್ನಡದ ಅನೇಕ ಗಾದೆಗಳೂ ಅತ್ಯಂತ ಪರಿಣಾಮಕಾರಿಯಾಗಿ ಈ ಕೃತಿಯಲ್ಲಿ ಬಳಕೆಯಾಗಿವೆ. ಉದಾಹರಣೆಗೆ- ಎಲ್ಲರ ಮನೆಯ ದೋಸೆಯೂ ತೂತೇ, ದುಡ್ಡು ಬಂತೂ ಅಂತ ಬೆಳದಿಂಗಳಲ್ಲೂ ಕೊಡೆ ಹಿಡಿದರಂತೆ, ಸಿರಿ ಗರದ ಹಾಗೆ ಬಡಿಯಬಾರದು ಮರದ ಹಾಗೆ ನಿಧಾನ ಬೆಳೆಯಬೇಕು,...ಇತ್ಯಾದಿ.

'ಘಾಚರ್ ಘೋಚರ್' ಮೊದಲಿಗೆ, 2013 ರಲ್ಲಿ ಪ್ರಕಟವಾಗಿದ್ದು ಅದೇ ಹೆಸರಿನ ಕತಾ ಸಂಗ್ರಹದ ಒಂದು ಕತೆಯಾಗಿ. 2015 ರಲ್ಲಿ ಇದು ಕಾದಂಬರಿ ರೂಪದಲ್ಲಿ ಇಂಗ್ಲಿಷಿಗೆ ಅನುವಾದವಾದ ನಂತರ ಪಡೆದಿರುವ ಪ್ರಸಿದ್ಧಿ ಅದ್ಭುತ. ಈ ವರ್ಷ ಅಮೆರಿಕದಲ್ಲೂ ಪೆಂಗ್ವಿನ್ ಪ್ರಕಾಶನದಡಿ ಇದು ಪ್ರಕಟವಾಗಿ ಸಾಕಷ್ಟು ಚರ್ಚೆ ಹಾಗೂ ಪ್ರಶಂಸೆ ಗಳಿಸಿದೆ.

ಅನುವಾದದ ಮೂಲಕ BBC, Publisher's Weekly, New Yorker, ಇತ್ಯಾದಿ ಪ್ರತಿಷ್ಟಿತ ವಿದೇಶಿ ಮಾಧ್ಯಮ ಸಮೂಹಗಳ ಮನ್ನಣೆ ಗಳಿಸಿರುವ ಘಾಚರ್ ಘೋಚರ್ ಕೃತಿಯು ಮೂಲ ಭಾಷೆಯಾದ ಕನ್ನಡದಲ್ಲೇ ಅದೇಕೋ ಅಷ್ಟೊಂದು ಚರ್ಚೆಯಾಗಲಿಲ್ಲ. ಕನ್ನಡದಲ್ಲಿ ಸಹೃದಯ ಓದುಗರ ಕೊರತೆ ಇದಕ್ಕೆ ಕಾರಣವೋ ಅಥವಾ 'ಹಿತ್ತಲ ಗಿಡ ಮದ್ದಲ್ಲ' ಎನ್ನುವಂತೆ ಕನ್ನಡಿಗರಿಗೂ ಇಂಗ್ಲಿಷ್ ಆವೃತ್ತಿಯೇ ಪ್ರಿಯವೋ ಗೊತ್ತಿಲ್ಲ.

ವಿಶ್ವದಾದ್ಯಂತ ಪುಸ್ತಕ ಪ್ರೇಮಿಗಳ ನೆಚ್ಚಿನ ಅಂತರ್ಜಾಲ ತಾಣವಾದ goodreads.com ನಲ್ಲೂ ಘಾಚರ್ ಘೋಚರ್ ನ್ನು ಮೆಚ್ಚಿರುವ, ಕೃತಿಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವವರ ಸಂಖ್ಯೆ 700 ಕ್ಕೂ ಹೆಚ್ಚು. ವಿವೇಕರ ಉಳಿದ  ಕಾದಂಬರಿಗಳಿಗಿಂತ ಘಾಚರ್ ಘೋಚರ್ ಹೆಚ್ಚು ಆಕರ್ಷಣೆಗೆ ಒಳಗಾಗಿರುವುದಕ್ಕೆ ಬಹುಶಃ ಈ ಕೃತಿಯು ಸಂಪೂರ್ಣ ನಗರ ಕೇಂದ್ರಿತ ಕತೆಯನ್ನು ಹೊಂದಿರುವುದು ಕಾರಣವಾಗಿರಬಹುದು.

ಘಾಚರ್ ಘೋಚರ್ ನ ಪ್ರಖ್ಯಾತಿಯು  ಅವರ ಇತರ ಕಾದಂಬರಿಗಳನ್ನೂ ಮತ್ತು ಕನ್ನಡದ ಇತರ ಲೇಖಕರ ಕಾದಂಬರಿಗಳನ್ನೂ ಮುಂಚೂಣಿಗೆ ತಂದು ಅವುಗಳ ಓದು, ವಿಮರ್ಶೆ, ಚರ್ಚೆಗಳಿಗೆ ಕಾರಣವಾದರೆ ಒಳ್ಳೆಯದು.  ಧಾವಂತದ ಇಂದಿನ ಬದುಕಿನಲ್ಲೂ ಕತೆ, ಕಾದಂಬರಿಗಳ ಓದಿನ ಅಗತ್ಯ ಇದೆ. 

ಸಾಹಿತ್ಯದ ಅಗತ್ಯತೆಯ ಕುರಿತು ಚಿತ್ತಾಲರು ತಮ್ಮ ಒಂದು ಲೇಖನದಲ್ಲಿ ಹೀಗೆ ಬರೆದಿದ್ದರು-
"ನಾವು ವಿಚಾರ ಮಾಡುವ, ಭಾವಿಸುವ, ಹಾಗೂ ನೋಡುವ ಮಟ್ಟಗಳು (standards of thinking, standards of feeling, standards of seeing) ಎತ್ತರಗೊಂಡು ನಾವು ಮಾನವರಾಗಿ ಅರಳುವ ಸಾಧ್ಯತೆಯೇ ಸಾಹಿತ್ಯ ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆಯೆಂದು ನಾನು ನಂಬುತ್ತೇನೆ. ಬದುಕಿನ ಬಗ್ಗೆ ನಾವು ಬೆಳೆಯಿಸಿಕೊಂಡ ತಪ್ಪು ಅಪೇಕ್ಷೆಗಳಿಂದಾಗಿ ಮನುಷ್ಯ-ಜೀವನಕ್ಕೆ ಅರ್ಥ ತಂದುಕೊಡಬಹುದಾದಂಥ ಗಂಭೀರ ಭಾವನೆಗಳೇ ಭ್ರಷ್ಟವಾಗುತ್ತ, ನಮ್ಮ ಸಾಮಾಜಿಕ ಜೀವನದ ಮೇಲೆ, ರಾಜಕೀಯ ನಡವಳಿಕೆಯ ಮೇಲೆ ಅತ್ಯಂತ ದುಷ್ಟವಾದ, ಅನಾರೋಗ್ಯಕರವಾದ ಪರಿಣಾಮ ಉಂಟಾಗುತ್ತಿರುವ ಇಂದಿನ ಕಾಲದಲ್ಲಿ, ಮಾನವನ ಮೂಲಭೂತವಾದ ಭಾವನೆಗಳು ಕೆಡದಂತೆ, ಸಾಯದಂತೆ ಅವುಗಳನ್ನು ಕಾಪಾಡಿಕೊಳ್ಳುವುದರಲ್ಲಿ ಕಲೆಗಳು, ಬಹು ಮುಖ್ಯವಾಗಿ ಸಾಹಿತ್ಯ ವಹಿಸಬಹುದಾದ ಪಾತ್ರವನ್ನು ಒತ್ತಿ ಹೇಳಿದಷ್ಟೂ ಕಡಿಮೆಯೆನಿಸುತ್ತದೆ." 

ಚಿತ್ತಾಲರು  ನಲವತ್ತು ವರ್ಷಗಳ ಹಿಂದೆ ಬರೆದ ಈ ಸಾಲುಗಳು ಇಂದಿಗೂ ಖಂಡಿತವಾಗಿಯೂ ಪ್ರಸ್ತುತವೇ. ಘಾಚರ್ ಘೋಚರ್ ನಂತಹ ಕೃತಿಯು ಚಿತ್ತಾಲರ ಆಶಯದ ಅಂತಹದ್ದೇ ಸಾಹಿತ್ಯದ ಮಾದರಿ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಕೃತಿಯು ಚಿತ್ತಾಲರಿಗೇ ಅರ್ಪಣೆಯಾಗಿರುವುದು ಅತ್ಯಂತ ಔಚಿತ್ಯಪೂರ್ಣ. 

No comments :