Saturday, August 25, 2018

ಮುಕ್ಕು ಚಿಕ್ಕಿಯ ಕಾಳು





ಬಿತ್ತುವುದು ಮುಕ್ಕು ಚಿಕ್ಕಿಯ ಕಾಳು
ಮುತ್ತುರತುನವ ಬಿತ್ತಿ ಮಾಡದಿರು ಹೊಲ ಹಾಳು
ಜೀವನವು ಚಾಚಿ ಮುಗಿಲಂಗಳಕೆ ಹಚ್ಚಿ 
ದೇವನುಡಿ ನುಡಿವಂತೆ ಮಾಡು ಮೆಚ್ಚಿ 
- ದ ರಾ ಬೇಂದ್ರೆ 



ಬೇಂದ್ರೆಯವರ ಕವನದ ಸಾಲೊಂದರಿಂದ ಶೀರ್ಷಿಕೆಯನ್ನು ಪಡೆದಿರುವ ಜಯಲಕ್ಷ್ಮಿ ಪಾಟೀಲರ ಮೊದಲ ಕಾದಂಬರಿ ಆ ಕವನದ ಸಾಲು ಪ್ರತಿನಿಧಿಸುವ  ಅದೇ ಜೀವನ್ಮುಖತೆಯ  ಸಂದೇಶವನ್ನೇ ಪುಟಪುಟದಲ್ಲೂ  ಪ್ರತಿಬಿಂಬಿಸುತ್ತದೆ. ಉತ್ತರ ಕರ್ನಾಟಕದ ಕನ್ನಡ ಭಾಷೆಯ ಸೊಗಡು ಕಾದಂಬರಿಯ ಬಹು ಮುಖ್ಯ ಆಕರ್ಷಣೆ.  ಇದನ್ನು ಓದುವಾಗ  'ಗಂಗವ್ವ ಗಂಗಾಮಾಯಿ' ಕಾದಂಬರಿ ನೆನಪಿಗೆ ಬಂತು. ಗಂಗವ್ವ -ಕಿಟ್ಟಪ್ಪರ ತಾಯಿ ಮಗನ ಸಂಬಂಧದ ಚಿತ್ರ ನೆನಪಿಗೆ ತರುವಂತೆ ಈ ಕೃತಿಯಲ್ಲೂ ತಾಯಿ-ಮಗನ ಭಾವನಾತ್ಮಕ ಸಂಬಂಧದ ಚಿತ್ರಣವಿದೆ. 
 .
'ಮುಕ್ಕು ಚಿಕ್ಕಿಯ ಕಾಳು' ಕಾದಂಬರಿಯ ಮುನ್ನುಡಿಯಲ್ಲಿ ಬರೆಯುತ್ತಾ ಹಿರಿಯ ವಿಮರ್ಶಕ ಸಿ ಎನ್ ರಾಮಚಂದ್ರನ್ ಅವರು ಕಲಾಮಾಧ್ಯಮವೊಂದು ಕಲಾವಿದನಿಗೆ ಆತ್ಮತೃಪ್ತಿಯನ್ನು ಕೊಡುವುದರೊಡನೆ ತನ್ನ ಮಿತಿಗಳನ್ನು ಮೀರುವ ಪರಿಹಾರ 'ಮಾರ್ಗ'ವೂ (compensatory means) ಆಗಬಹುದು ಎಂಬುದನ್ನು ಈ ಕಾದಂಬರಿಯ ನಾಯಕ ಮೌನೇಶ ಪತ್ತಾರನ ಪಾತ್ರದಲ್ಲಿ ಕಾಣಬಹುದು ಎಂದು ವಿವರಿಸುತ್ತಾರೆ.

ತನ್ನ ಸೀಳು ತುಟಿಯ ಕಾರಣದಿಂದ ಎಲ್ಲರಂತೆ ಮಾತನಾಡಲು ಸಾಧ್ಯವಾಗದೇ ಆ ಕಾರಣಕ್ಕಾಗೇ ಮೌನೇಶ ತನ್ನ ಸಹಪಾಠಿಗಳ ಅಪಹಾಸ್ಯಕ್ಕೆ ಗುರಿಯಾಗಿ ಕೀಳರಿಮೆ ಅನುಭವಿಸುವುದು. ಮತ್ತು ನಂತರದಲ್ಲಿ ತನ್ನಲ್ಲಿರುವ ಚಿತ್ರಕಲೆಯ ಪ್ರತಿಭೆಯಿಂದ ಆ ಕೀಳರಿಮೆಯನ್ನು ಮೀರಲು ಪ್ರಯತ್ನಿಸುವುದು ಈ ಕಥನದ ಒಂದು ಭಾಗವಾದರೆ ಅದಕ್ಕೆ ಪೂರಕವಾಗಿ ಗ್ರಾಮೀಣ ಬದುಕಿನ ಚಿತ್ರಣವೂ ಅವನ ತಂದೆ ಶಂಕರಪ್ಪ ಮತ್ತು ತಾಯಿ ಕಾಮಾಕ್ಷಿಯವರ ಪಾತ್ರಗಳ ಮೂಲಕ ಮೂಡಿಬರುತ್ತದೆ.

ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ನನ್ನ ನೆಚ್ಚಿನ ಸಾಹಿತ್ಯ ಪ್ರಕಾರ ಕಾದಂಬರಿ. ನಮ್ಮ ಕನ್ನಡದಲ್ಲಿ  ಕಾದಂಬರಿಗೊಂದು ಶ್ರೇಷ್ಟ ಪರಂಪರೆಯೇ ಇದೆ. ಹಿರಿಯ ವಿಮರ್ಶಕ ಜಿ ಎಸ್ ಅಮೂರ ಅವರ "ಕನ್ನಡ ಕಥನ ಸಾಹಿತ್ಯ: ಕಾದಂಬರಿ" ಎಂಬ ಕೃತಿಯು ಈ ನಮ್ಮ ಕಾದಂಬರಿಯ ಪರಂಪರೆಯನ್ನು ಸುಂದರವಾಗಿ ಕಟ್ಟಿ ಕೊಡುತ್ತದೆ. ಹತ್ತೊಂಬತ್ತನೇ ಶತಮಾನದ ಆರಂಭಿಕ ಕಾದಂಬರಿಗಳಿಂದ  ಇಪ್ಪತ್ತನೇ ಶತಮಾನದ ಕಡೆಯ ಭಾಗದ ಕಾದಂಬರಿಗಳವರೆಗೆ ಸಮಗ್ರವಾದ  ವಿವರಗಳ ಉಲ್ಲೇಖವಿದೆ. ಅಮೂರರ ಪುಸ್ತಕದಲ್ಲಿ ಕನ್ನಡದ ಕಾದಂಬರಿಗಳ ವರ್ಗಿಕರಣ ಇದೆ. ವಾಸ್ತವ ಮಾರ್ಗ, ನವೋದಯ ಮತ್ತು ಪ್ರಗತಿಶೀಲ, ನವ್ಯ, ನವ್ಯೋತ್ತರ ಹೀಗೆ ವಿವಿಧ ಕಾಲಘಟ್ಟಗಳಲ್ಲಿ ರಚಿತವಾದ ಕಾದಂಬರಿಗಳನ್ನು ವಸ್ತು, ಶಿಲ್ಪ, ಪಾತ್ರ, ಶೈಲಿ ಎಂಬಿತ್ಯಾದಿ  ಸಾಹಿತ್ಯಕ ಮಾನದಂಡಗಳಷ್ಟೇ ಅಲ್ಲದೆ ಈ ವಿವಿಧ ವರ್ಗಗಳ ಕೃತಿಗಳ ತಾತ್ತ್ವಿಕ ಆಯಾಮಗಳನ್ನೂ ಶೋಧಿಸುತ್ತಾರೆ. 

ಯಾವ ವರ್ಗಕ್ಕೇ ಸೇರಿರಲಿ ಕಾದಂಬರಿ ಮುಖ್ಯವಾಗಿ ಒಂದು ಕತೆ ಹೇಳುವ ಸಾಧನ. ಮತ್ತು ಆ ಕತೆಯ ಮೂಲಕ ಜಗತ್ತನ್ನು ಅರಿಯುವ ಪ್ರಯತ್ನ. ಅಕಾಡೆಮಿಕ್ ದೃಷ್ಟಿಯಿಂದ ಕೃತಿಯ ಆಳಕ್ಕಿಳಿದು ನೋಡುವುದು ಒಂದು ಬಗೆಯಾದರೆ ಅದೆಲ್ಲದರ ಹಂಗೇ ಇಲ್ಲದೆ ಸಿಕ್ಕ ಪುಸ್ತಕವನ್ನು ಸುಮ್ಮನೇ ಓದುವುದು ಇನ್ನೊಂದು ಬಗೆ. ಅಲ್ಲಿಯೂ ಕತೆಯ ಕುತೂಹಲಕ್ಕಾಗಿ ಓದುವುದು, ಓದುತ್ತ ಕಥಾಹಂದರವನ್ನು ಸೂಕ್ಷ್ಮವಾಗಿ ಅವಲೋಕಿಸುವುದು,  ಅಥವಾ ಕುವೆಂಪು ಅವರು ತಮ್ಮ ಓದುಗರಲ್ಲಿ ವಿನಂತಿಸಿಕೊಂಡಂತೆ ಸಚಿತ್ರವಾಗಿ, ಕಲ್ಪನೆಯೊಂದಿಗೆ, ಓದುತ್ತಿರುವ ಪಠ್ಯದ ಆಧಾರದಲ್ಲಿ ಮನಸಲ್ಲೇ ಒಂದು ಕಾಲ್ಪನಿಕ ಲೋಕವನ್ನು ಕಾಣುತ್ತ ಓದುವುದು ಹೀಗೇ ಹಲವು ಬಗೆಯ ಓದು ಸಾಧ್ಯ.

ನನಗೆ ಒಂದು ಕಾದಂಬರಿಯಲ್ಲಿನ  ಕತೆಯ ಕುತೂಹಲ ಕೋಲಾಹಲಗಳಿಗಿಂತ  ಅದು ಕಟ್ಟಿ ಕೊಡುವ ಒಂದು ಪರಿಸರದ, ಜೀವನ ಶೈಲಿಯ  ಚಿತ್ರಣ  ಬಹಳ ಇಷ್ಟ. ಆ ದೃಷ್ಟಿಯಿಂದ "ಮುಕ್ಕು ಚಿಕ್ಕಿಯ ಕಾಳು" ಹಿಡಿಸಿತು. ಬಿಜಾಪುರದ ಗ್ರಾಮೀಣ ರೈತ ಕುಟುಂಬದ ಬದುಕು, ಬಡತನ, ಸಹಿಷ್ಣುತೆ, ಹೋರಾಟ, ಉತ್ಸಾಹ ಎಲ್ಲವೂ ಕಣ್ಣೆದುರಿಗೆ ಮೂಡಿದಂತಾಯಿತು. ಕಾದಂಬರಿಗಳು ಮುಖ್ಯವಾಗುವುದೇ ಇಲ್ಲಿ. ಯಾವುದೇ ಸೃಜನಶೀಲ ಕೃತಿ ಮುಖ್ಯವಾಗಿ ಶೋಧಿಸಹೊರಡುವುದು  ಜೀವನದ ವ್ಯಕ್ತಿಗತ ಮತ್ತು ಸಾಮಾಜಿಕ ಆಯಾಮಗಳ ತಾಕಲಾಟವನ್ನೇ. ವ್ಯಕ್ತಿಯ ವೈಯಕ್ತಿಕ ನಿರೀಕ್ಷೆಗಳು  ಮತ್ತು ಅವಕ್ಕೆ ಎದುರಾಗುವ ವಾಸ್ತವದ ಗೋಡೆಗಳು. ಪರಿಸ್ಥಿತಿಯ ವಿರುದ್ಧ ಹೋರಾಡುವ ಅಥವಾ ಬಂದದ್ದನ್ನು ಬಂದ  ಹಾಗೇ ಸ್ವೀಕರಿಸಬೇಕಾದ ಅನಿವಾರ್ಯತೆ.  ಬಹುಪಾಲು ಕೃತಿಗಳು ಬಿಂಬಿಸುವುದು ಇದನ್ನೇ. ಬದುಕಿನ ವಾಸ್ತವವೇ ಸಾಹಿತ್ಯದಲ್ಲೂ ಇದ್ದರೂ ಸಾಹಿತ್ಯದ ಅಗತ್ಯ ಇದೆ. ಅದರಲ್ಲೂ ಇಂದಿನ ತೀವ್ರ ಅಸಹನೆಯ ದಿನಗಳಲ್ಲಿ  ಖಂಡಿತವಾಗಿಯೂ ಇದೆ.  ಯಾಕೆಂದರೆ ಸಾಹಿತ್ಯ ಅದರಲ್ಲೂ ಉತ್ತಮವಾದ ಕಾದಂಬರಿಗಳು ನಮ್ಮದೇ ಜೀವನವನ್ನು, ನಮ್ಮ ನಂಬಿಕೆಗಳು ಮೌಲ್ಯಗಳನ್ನು ಪರಿಶೀಲನೆಗೆ ಹಚ್ಚುವಂತೆ ಮಾಡುತ್ತವೆ. ಒಟ್ಟಿನಲ್ಲಿ ನಮ್ಮ ಅರಿವು ಗ್ರಹಿಕೆಗಳನ್ನು ವಿಸ್ತರಿಸುತ್ತವೆ.   

ಸಂಭಾಷಣೆ ಈ ಕಾದಂಬರಿಗಾರ್ತಿಯ ಶಕ್ತಿ ಅನಿಸಿತು. ಅಧ್ಯಾಯ ನಾಲ್ಕರಲ್ಲಿ, ಸೀಳು ತುಟಿಯ ಮಗುವಿನ ಜನನವಾದ ಮನೆಯಲ್ಲಿನ ವಿದ್ಯಮಾನಗಳು,  ಹೆಂಗಳೆಯರ ಚಟುವಟಿಕೆ, ಲವಲವಿಕೆ, ಅನಿರೀಕ್ಷಿತದ ಆಘಾತದಲ್ಲೂ ಕಳೆದುಕೊಳ್ಳದ ಮನೋಬಲ, ಆಗಷ್ಟೇ ಕಣ್ಣು ಬಿಡುತ್ತಿರುವ ಕೂಸಿನ ಬಗೆಗಿನ ಅವರ ಅಚ್ಚರಿ, ವಾತ್ಸಲ್ಯ, ಹಳ್ಳಿ ನುಡಿಗಟ್ಟಿನ ಒರಟಾದ  ನೇರವಾದ  ಆದರೂ ಕಾಳಜಿ ತುಂಬಿದ  ಮಾತುಗಳು ತುಂಬ  ಸಹಜವಾಗಿದ್ದು  ಕೃತಿಯನ್ನು ಆಪ್ತವಾಗಿಸುತ್ತವೆ.

ನನಗೆ ಇಷ್ಟವಾದ ಇತರ  ಕೆಲವು ಕನ್ನಡ ಪುಸ್ತಕಗಳ ಪಟ್ಟಿ ಇಲ್ಲಿದೆ.