Monday, July 10, 2023

ನಿಜವಾದ ಶಿಕ್ಷಣ

ಪ್ರಶ್ನಿಸಲು ಕಲಿಸದ್ದು ಶಿಕ್ಷಣವೇ? ಎಂಬ ಪ್ರಜಾವಾಣಿಯ ಲೇಖನದಲ್ಲಿ ಡಾ. ಜ್ಯೋತಿಯವರು ಇಂದಿನ ಒಂದು ದೊಡ್ಡ ಸಮಸ್ಯೆಯತ್ತ ಗಮನ ಸೆಳೆದಿದ್ದಾರೆ. ಅದೇನೆಂದರೆ, ವ್ಯವಸ್ಥೆಯನ್ನು ಅದರೆಲ್ಲಾ ಅಸಮರ್ಪಕತೆಗಳ ಜೊತೆಯೇ  ಒಪ್ಪಿಕೊಂಡು ಪಾಲಿಸುವ ಪ್ರವೃತ್ತಿ. ಇದು ಇಡಿಯ ಸಮಾಜದ ಸಮಸ್ಯೆಯಾಗಿದ್ದರೂ ಈ ಸಮಸ್ಯೆಯ ಹುಟ್ಟಿನಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯ ಪಾತ್ರವನ್ನು ಈ ಲೇಖನದಲ್ಲಿ ಶೋಧಿಸಲಾಗಿದೆ. 

ಕೇವಲ ಉದ್ಯೋಗ ಕಟ್ಟಿಕೊಳ್ಳಲು ಸಹಾಯ ಮಾಡುವ, ಇತರ ಮೌಲ್ಯಗಳನ್ನು ಒಳಗೊಳ್ಳದ ಶಿಕ್ಷಣವು ಸ್ವತಂತ್ರವಾಗಿ ಯೋಚಿಸುವುದನ್ನು ಕಲಿಸದೆ ಹೋಗುವುದರಿಂದ ಅದು ‘ನಿಜವಾದ ಶಿಕ್ಷಣ' ಎನಿಸಿಕೊಳ್ಳಲು ಯೋಗ್ಯವೇ ಎನ್ನುವುದು ಸರಿಯಾದ ಪ್ರಶ್ನೆಯೇ. 

ಕೆಲವು ವರ್ಷಗಳ ಹಿಂದೆ ಕಾರ್ತಿಕ್ ಮುರಳೀಧರನ್ ಅವರು ಬರೆದ  “Reforming the Indian School Education System" (ಭಾರತದಲ್ಲಿ ಶಾಲಾ  ಶಿಕ್ಷಣದ ಸುಧಾರಣೆ ) ಎಂಬ ಲೇಖನವು ಶಿಕ್ಷಣ ಕ್ಷೇತ್ರದ ಕೆಲವು ಮುಖ್ಯ ಸಮಸ್ಯೆಗಳನ್ನು ದಾಖಲಿಸಿತ್ತು. ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳ ಆಯ್ಕೆ ಹೀಗೆ ಎರಡು ಮುಖ್ಯ ಉದ್ದೇಶಗಳು  ಶಾಲಾ ಶಿಕ್ಷಣಕ್ಕೆ ಇದ್ದರೂ ಇದರಲ್ಲಿ ಮೊದಲನೆಯ ಉದ್ದೇಶ ಹೇಗೆ ಅಲಕ್ಷಿಸಲ್ಪಟ್ಟು ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣಕ್ಕೆ  ಆರಿಸುವುದಷ್ಟೇ ಮುಖ್ಯವಾಗುತ್ತಿರುವ ಬಗ್ಗೆ ಲೇಖನದಲ್ಲಿ ವಿವರಿಸಿದೆ. ಹಾಗೆಯೇ, ಸಮಾಜದಲ್ಲಿನ ಅಸಮಾನತೆ, ಪಠ್ಯಕ್ರಮದಲ್ಲಿ ಆಗದ ಅಗತ್ಯ ಬದಲಾವಣೆ, ಪರೀಕ್ಷೆಯಲ್ಲಿ ಪಾಸು ಮಾಡುವುದೇ  ಮುಖ್ಯವಾಗಿ ವಿಷಯ ಅರ್ಥ ಮಾಡಿಕೊಳ್ಳುವುದಕ್ಕಿಂತ ಉರು ಹೊಡೆದಾದರೂ ಪಾಸು ಮಾಡುವುದು ಮುಖ್ಯವಾಗುವುದು, ಹೀಗೇ ಅನೇಕ ಅಂಶಗಳಿರುವುದು ಲೇಖನದಲ್ಲಿ ತಿಳಿಯುತ್ತದೆ. 

ಮಕ್ಕಳ ಬೌದ್ಧಿಕ ಬೆಳವಣಿಗೆಯ ಆರಂಭದ ಹಂತದಲ್ಲಿ ಮಕ್ಕಳ ಮನಸ್ಸಿನ ಮೇಲೆ ಬೋಧಕರ ಪ್ರಭಾವ ಹೆಚ್ಚಾಗಿಯೇ ಇರುತ್ತದೆ. ಈ ಹಂತದಲ್ಲಿ ಮಕ್ಕಳಲ್ಲಿ ಬೇರೆ ಬೇರೆ ವಿಷಯಗಳ ಸಾಧ್ಯವಾದಷ್ಟೂ ಅರಿವು ಮೂಡಿಸುವುದು, ಪಠ್ಯದ  ಆಚೆಗೂ ಪುಸ್ತಕಗಳನ್ನು ಓದಿ ವಿಚಾರಗಳನ್ನು ಅರಿಯುವ ಕುತೂಹಲ ಬೆಳೆಸುವುದೂ ಬೋಧಕರಿಂದ ಸಾಧ್ಯವಾದರೆ  ವಿಚಾರ ಕ್ರಾಂತಿ ಸಾಧ್ಯವಾಗಬಹುದೇನೋ. ಇಲ್ಲದಿದ್ದರೆ ಶಿಕ್ಷಣವು ಬರೀ ಮಾಹಿತಿಯ ಸಂಗ್ರಹಣೆ ಅಷ್ಟೇ ಆಗಿ, ಮುಂದೆ ಆ ವಿದ್ಯಾರ್ಥಿಗಳು ನಿಸಾರರ ಕವಿತೆಯ 'ಮಂದೆಯಲಿ ಒಂದಾಗಿ ಸ್ವಂತತೆಯೇ ಬಂದಾಗಿ' ಸಾಗುವ ಮಂದಿಯಾಗಿ ದೇಶವನ್ನು ವೈಚಾರಿಕವಾಗಿ ಹಿಂದೆ ಹಿಂದೆ ತೆಗೆದುಕೊಂಡು ಹೋಗುವವರ ಸಾಧನಗಳಾಗಿ ಬಿಡುವ ಸಾಧ್ಯತೆ ಹೆಚ್ಚಾಗುತ್ತದೆ. 

ಶಾಲೆಯಲ್ಲಿರುವ ಸಮಯದಲ್ಲಷ್ಟೇ ಅಲ್ಲದೆ ಶಾಲೆಯ ಆಚೆಗೂ ಮಕ್ಕಳು ಮಾಧ್ಯಮಗಳನ್ನು ಉಪಯೋಗಿಸಿಕೊಂಡು ತಮ್ಮ ಅರಿವಿನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುವುದರ ಬಗ್ಗೆ ಅನೇಕ ಶಿಕ್ಷಕರೂ , ಶಿಕ್ಷಣ ತಜ್ಞರೂ  ಗಂಭೀರವಾಗಿ ಯೋಚಿಸುತ್ತಿದ್ದಾರೆ. ಸಂಜನಾ ಸಾಮ್ರಾಜ್ ಎಂಬವರು ನಡೆಸಿಕೊಂಡು ಬರುತ್ತಿರುವ 'The Untextbook Project' (ದಿ ಅನ್ ಟೆಕ್ಸ್ಟ್ ಬುಕ್ ಪ್ರಾಜೆಕ್ಟ್ ) ಎಂಬ ಪಾಡ್ಕಾಸ್ಟ್ನಲ್ಲಿ  ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ವಿಚಾರಗಳ ಬಗೆಗೆ ಆಸಕ್ತಿಕರ ಸಂವಾದಗಳಿರುತ್ತವೆ.   ಏಪ್ರಿಲ್ ನಲ್ಲಿ 'Mastering A Subject Vs Rote Learning' ( ವಿಷಯದಲ್ಲಿ ಪರಿಣತಿ ಪಡೆಯುವುದು Vs ಉರು ಹೊಡೆಯುವುದು) ಮತ್ತು 'The Urgent Need for Media Literacy' (ಮಾಧ್ಯಮ ಸಾಕ್ಷರತೆಯ ತಕ್ಷಣದ ಅಗತ್ಯ ) ಎಂಬ ಎರಡು ಆಸಕ್ತಿಕರ ಕಂತುಗಳಿದ್ದವು. 

ಸ್ವಂತವಾಗಿ ಯೋಚಿಸುವುದನ್ನು ಕಲಿಸುವ ನಿಜವಾದ ಶಿಕ್ಷಣವೊಂದೇ  ಸಿದ್ಧ ಮಾದರಿಯ ವ್ಯವಸ್ಥೆಯನ್ನು ಪ್ರಶ್ನಿಸುವ, ಮತ್ತು ಒಂದು ಮಾನವೀಯ, ನ್ಯಾಯಪರ, ಸುಸ್ಥಿರ ಸಮಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗಬಲ್ಲ ಭವಿಷ್ಯದ ಪ್ರಜೆಗಳನ್ನು ರೂಪಿಸಬಲ್ಲದು. 

No comments :