Monday, July 17, 2023

ಪಟ್ಟದ ಮಹಿಳೆಗೀ ವಿಧಿಯೇ !

ಸವಿತಾ ಬನ್ನಾಡಿಯವರು ಬರೆದ ಆಟದಂಗಳದ ಆಚೆಗಿನ ಮುಳ್ಳುಗಳು ಎಂಬ ಲೇಖನವು ನಾಗರೀಕರೆಂದು ಅನಿಸಿಕೊಳ್ಳುವ ಎಲ್ಲರೂ ಯೋಚಿಸಲೇಬೇಕಾದ ವಿಚಾರವನ್ನು ಹೇಳುತ್ತದೆ.

ಕುಮಾರವ್ಯಾಸ ಭಾರತದಿಂದ ಉಲ್ಲೇಖಿಸಿದ ಸಾಲುಗಳು ಅತ್ಯಂತ ಮಾರ್ಮಿಕವಾಗಿವೆ. ನ್ಯಾಯದ ಪ್ರಶ್ನೆಯನ್ನು ಎತ್ತಿರುವ ಮಹಿಳಾ ಕುಸ್ತಿಪಟುಗಳ ಸ್ಥಿತಿಯ ಆಧಾರದಲ್ಲಿ ಲೇಖಕಿ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯಗಳ ಮುಖ್ಯ ಪ್ರಶ್ನೆಗಳನ್ನು ಎತ್ತುತ್ತಾರೆ.

ಕುಮಾರವ್ಯಾಸ ಭಾರತದ ಕಾಲದಿಂದ ಇಂದಿನವರೆಗೂ ಸಮಾಜ ಬದಲಾಗದ ಅಚ್ಚರಿ ಮತ್ತು ವ್ಯಂಗ್ಯ ಲೇಖನದಲ್ಲಿ ಬಲವಾಗಿ ಪ್ರಸ್ತಾಪವಾಗಿದೆ. ದ್ರೌಪದಿಗೆ ಸಂಬಂಧಿಸಿದಂತೆ ಹೆಣ್ಣನ್ನು 'ವಸ್ತು'ವಾಗಿ ಕಾಣುವ ಮನಸ್ಥಿತಿಯೇ ಇಂದು ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ದೌರ್ಜನ್ಯದ ಮೂಲದಲ್ಲಿರುವುದನ್ನು ಊಹಿಸಬಹುದು.

ಶಿಕಾಗೋ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ, ಪ್ರಖ್ಯಾತ ಸ್ತ್ರೀವಾದಿ ಚಿಂತಕಿ ಮಾರ್ಥಾ ನಸ್ಬಾಮ್ ಬರೆದಿರುವ 'ಸಿಟಡೆಲ್ಸ್ ಆಫ್ ಪ್ರೈಡ್' (Citadels of Pride) ಎಂಬ ಪುಸ್ತಕವು ಅಧಿಕಾರಯುತ ಸ್ಥಾನದಲ್ಲಿರುವ ವ್ಯಕ್ತಿಗಳಿಂದ ನಡೆಯುವ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಗಳ ವಿದ್ಯಮಾನಗಳನ್ನು ಗಂಭೀರವಾಗಿ ಶೋಧಿಸುವ ಒಂದು ಪ್ರಯತ್ನವಾಗಿದೆ.

ಪ್ರತಿಷ್ಟೆ ಹೆಚ್ಚಾದಾಗ ಬೇರೆಯವರನ್ನು ತಮ್ಮ ಉಪಯೋಗದ ವಸ್ತುಗಳನ್ನಾಗಿ ಭಾವಿಸುವುದೇ ಲೈಂಗಿಕ ಕಿರುಕುಳಕ್ಕೆ ಕಾರಣ. ಪ್ರತಿಷ್ಟೆಯು ಹೇಗೆ ಕೆಲವರನ್ನು ಸಾಮಾನ್ಯರಿಗಿರುವ ಕಟ್ಟುಪಾಡುಗಳಿಂದ ಮುಕ್ತಗೊಳಿಸಿ ಸ್ವೇಚ್ಛೆಯ ವರ್ತನೆಗೆ ಹಚ್ಚುತ್ತದೆಂಬುದನ್ನು ಕೆಲವು ನಿಜಘಟನೆಗಳು ಮತ್ತು ವ್ಯಕ್ತಿಗಳ ಉದಾಹರಣೆಯೊಂದಿಗೆ ಈ ಪುಸ್ತಕದಲ್ಲಿ ವಿಶ್ಲೇಷಿಸಲಾಗಿದೆ. ನಮ್ಮ ದೇಶದಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ನಂತಹವರು ಯಾರ ಅಳವಿಗೂ ಸಿಗದ ಸ್ವೇಚ್ಛೆಯ ಶಕ್ತಿಯನ್ನು ಪಡೆಯುವುದು ಸಹ ಹೀಗೆಯೇ.

ಇಂತಹ ಲೈಂಗಿಕ ಹಿಂಸೆಗೆ ನ್ಯಾಯ ವ್ಯವಸ್ಥೆಯ ಮತ್ತು ಸಾಮಾಜಿಕ ವ್ಯವಸ್ಥೆಯು ಪ್ರತಿಕ್ರಿಯಿಸುವ ಬಗೆಯನ್ನೂ ಲೇಖಕಿ ಶೋಧಿಸುತ್ತಾರೆ. ಅಪರಾಧ ಕಾನೂನು, ಪೌರ ಕಾನೂನು, ಸಾಮಾಜಿಕ ನೀತಿ, ನೈತಿಕ ಶಿಕ್ಷಣ ಇವೆಲ್ಲದರ ಸಂಯೋಜನೆಯಿಂದ ಇಂತಹ ಅಹಿತಕರ ವಿದ್ಯಮಾನಗಳನ್ನು ತಡೆಯಬಹುದೆಂದು ಮಾರ್ಥಾ ಅವರು ಅಭಿಪ್ರಾಯಪಡುತ್ತಾರೆ.

'ಯತ್ರ ನಾರೀ ಪೂಜ್ಯಂತೇ...' ಎಂದೆಲ್ಲ ಮಹಿಳೆಯನ್ನು ದೇವಿ ಪಟ್ಟಕ್ಕೆ ಏರಿಸುತ್ತಲೇ ಆಕೆಯ ಸ್ವಾಭಾವಿಕ ಹಕ್ಕಾದ ಸಮಾನತೆ ಮತ್ತು ಗೌರವವನ್ನು ನಿರಾಕರಣೆ ಮಾಡುವುದು ಯಾವುದೇ ನಾಗರೀಕ ಸಮಾಜವು ತಲೆ ತಗ್ಗಿಸುವಂತಹ ಸಂಗತಿ. ಕುಸ್ತಿಪಟುಗಳಿಗಾದ ಅನುಭವದ ಹಿನ್ನೆಲೆಯಲ್ಲಿ ಲಿಂಗ ಸಮಾನತೆಯ ಬಗೆಗಿನ ತಮ್ಮ ಧೋರಣೆಗಳನ್ನು ಎಲ್ಲರೂ ಆತ್ಮವಿಮರ್ಶೆ ಮಾಡಿಕೊಳ್ಳುವ ಕಾಲ ಇದಾಗಿದೆ. ಕಾನೂನಿಗಿಂತ ಹೆಚ್ಚಾಗಿ ಮನಸ್ಸುಗಳ ಬದಲಾವಣೆ ಹೆಚ್ಚು ಪರಿಣಾಮಕಾರಿಯಾಗಬಲ್ಲದು.

ಇಂತಹ ವಿಚಾರಗಳ ಬಗೆಗೆ ಹೆಚ್ಚು ಹೆಚ್ಚು ಜಾಗೃತಿಯ ಅಗತ್ಯ ಇದೆ. ಮಹಿಳಾವಾದ ಎಲ್ಲರಿಗೂ ಸಂಬಂಧಿಸಿದ್ದಾಗಿದೆ. ಎಲ್ಲರಲ್ಲೂ ಆರೋಗ್ಯಕರವಾದ ಮನಸ್ಥಿತಿಯಿದ್ದರಷ್ಟೇ ಅನಾಹುತಕಾರಿ ಘಟನೆಗಳನ್ನು ತಪ್ಪಿಸುವುದು ಸಾಧ್ಯ.

ಮಹಿಳಾವಾದವು ಒಂದು ಹೋರಾಟವಾಗಿ ಹದಿನೆಂಟನೇ ಶತಮಾನದ ಕೊನೆಯಿಂದಲೇ ನಡೆದುಬಂದಿದ್ದರೂ ಬದಲಾವಣೆ ಮಾತ್ರ ಇಂದಿಗೂ ಪೂರ್ಣವಾಗಿ ಸಾಧ್ಯವಾಗಿಲ್ಲ.

ಎರಡು ವರ್ಷಗಳ ಹಿಂದೆ ಸಾವಣ್ಣ ಪ್ರಕಾಶನ ಸಂಸ್ಥೆಯವರು ಮಹಿಳಾದಿನದ ಹಿನ್ನೆಲೆಯಲ್ಲಿ ಲೇಖನ ಸಂಗ್ರಹವೊಂದನ್ನು ಹೊರತಂದಿದ್ದರು. ಹದಿನಾರು ಮಹಿಳಾ ಲೇಖಕಿಯರ ಲೇಖನಗಳನ್ನು ಒಳಗೊಂಡಿದ್ದ ಈ ಪುಸ್ತಕವು ಏನೋ ಹೇಳುತ್ತಿದ್ದಾರೆ ಎಂಬ ಹೆಸರಿನಲ್ಲಿ ಪ್ರಕಟವಾಗಿತ್ತು. ಲಿಂಗ ಸಮಾನತೆಗೆ ಸಂಬಂಧಿಸಿದಂತೆ ಆಸಕ್ತಿಕರ ಉಲ್ಲೇಖಗಳು ಆ ಪುಸ್ತಕದಲ್ಲಿದ್ದವು.

'ಒಲಿಂಪಿಕ್ ಪದಕ ಗೆದ್ದ ಮಹಿಳೆಯರಿಗೆ ಈ ವಿಧಿಯೇ' ಎನ್ನುವ ಉದ್ಗಾರದ ಆಚೆಗೂ ಮೀರಿದ ಬೆಂಬಲ ನಮ್ಮ ಕುಸ್ತಿಪಟುಗಳಿಗೆ ಸಿಗಬೇಕಾದರೆ ಜನರ ಮನಸ್ಥಿತಿಯಲ್ಲಿ ಗಂಭೀರ ಬದಲಾವಣೆ ಆಗಬೇಕು.

No comments :