Monday, March 23, 2020

ಏನೋ ಹೇಳುತ್ತಿದ್ದಾರೆ

“Lock up your libraries if you like; but there is no gate, no lock, no bolt that you can set upon the freedom of my mind.”
― Virginia Woolf, A Room of One's Own

ಈಚೆಗೆ ಮಾರ್ಚ್ ೮ ರ ಮಹಿಳಾ ದಿನದ ಹಿನ್ನೆಲೆಯಲ್ಲಿ ಸಾವಣ್ಣ ಪ್ರಕಾಶನ ಸಂಸ್ಥೆಯವರು ಒಂದು ಲೇಖನ ಸಂಗ್ರಹ ಬಿಡುಗಡೆ ಮಾಡಿದ್ದಾರೆ . ಅದರ ಹೆಸರು 'ಏನೋ ಹೇಳುತ್ತಿದ್ದಾರೆ'. ಹದಿನಾರು ಮಹಿಳಾ ಬರಹಗಾರ್ತಿಯರ ಬರಹಗಳ ಸಂಗ್ರಹ ಇದು . ಈ ಎಲ್ಲ ಬರಹಗಾರ್ತಿಯರು ತಮಗೆ ಸ್ಪೂರ್ತಿ ನೀಡಿದ ಮತ್ತು ಇತರರಿಗೂ ಸ್ಪೂರ್ತಿ ನೀಡಬಹುದಾದ ವಿಷಯಗಳ ಬಗ್ಗೆ ಬರೆದ ಬರಹಗಳು ಇವು . ಈ ಪುಸ್ತಕದ ಇ -ಬುಕ್ ಅನ್ನು MyLang Books ನಲ್ಲಿ ಖರೀದಿಸಬಹುದು.

ಮುನ್ನುಡಿಯಲ್ಲಿ ಈ ಸಂಗ್ರಹದ ಬರಹಗಳ ಬಗ್ಗೆ ಬರೆಯುತ್ತಾ ಲೇಖಕಿ ಎಚ್ ಎಸ್ ಶ್ರೀಮತಿ ಯವರು, ಮೇಲ್ನೋಟಕ್ಕೆ ಈ ಬರಹಗಳಲ್ಲಿ ತಾವು ಕಂಡದ್ದರ ಬಗ್ಗೆ ಬರೆಯುತ್ತಾರೆ. ಮಹಿಳೆಯರು ಶಿಕ್ಷಣ,ಆರ್ಥಿಕ ಸ್ವಾವಲಂಬನೆಗಳಂಥವನ್ನು ಎಟುಕಿಸಿಕೊಂಡಾಗ ಎಲ್ಲ ಪ್ರಶ್ನೆಗಳನ್ನೂ ಎದುರಿಸಬಹುದು ಮತ್ತು ಸ್ವಂತದ ನಿರ್ಧಾರ, ಪ್ರಯತ್ನಗಳಿದ್ದರೆ ಸೋಲು ಇರದು ಎಂಬ ಭರವಸೆ ಎಲ್ಲ ಬರಹಗಳಲ್ಲಿ ಕಂಡದ್ದಾಗಿ ಬರೆಯುತ್ತಾರೆ.

ಹೆಣ್ಣು ಅಭಿವ್ಯಕ್ತಿಗಾಗಿ ತಾನು ಬಳಸುತ್ತಿರುವ ಸಾಹಿತ್ಯ ಅಥವಾ ಇನ್ನಾವುದೇ ಕಲಾಪ್ರಕಾರಗಳು ಮತ್ತು ಅವುಗಳ ಮಾಧ್ಯಮವಾಗಿ ಬಳಸುತ್ತಿರುವ ಭಾಷೆಯಂತಹ ಸಾಧನಗಳು ತನ್ನವಲ್ಲ ಎಂಬ ಜಾಗೃತಿಯೂ ಸಾಧ್ಯವಾಗದ ಸಾಮಾಜಿಕ ಸಂದರ್ಭದಲ್ಲಿ ಇದ್ದಾಳೆ ಎನ್ನುವುದನ್ನು ವಿವರಿಸಲು ಸಿಮೋನ್ ದ ಬೋವ ಬರೆದಿರುವ 'ದ ಸೆಕೆಂಡ್ ಸೆಕ್ಸ್ ' ಕೃತಿಯನ್ನು ಪ್ರಸ್ತಾಪಿಸುತ್ತಾರೆ. ಹೆಣ್ಣೊಬ್ಬಳು ತನ್ನ ಬಾಲ್ಯದಿಂದ ತೊಡಗಿ, ಹದಿಹರೆಯ, ತಾರುಣ್ಯ , ಮಧ್ಯ ವಯಸ್ಸು, ವೃದ್ಧಾಪ್ಯ ದವರೆಗೆ ಹೇಗೆ ಕಾಣಿಸಿಕೊಳ್ಳುತ್ತಾ ತನ್ನ ಆಯಸ್ಸು ಕಳೆಯುತ್ತಾಳೆ ಎಂಬುದನ್ನು ಬಾಹ್ಯ ವಿವರಗಳಿಂದಲೇ ಹಿಡಿದಿಡುವುದರ ಬಗ್ಗೆ ಹೇಳುತ್ತಾರೆ .ಹದಿ ಹರಯಕ್ಕೆ ಕಾಲಿಡುತ್ತಿದ್ದಂತೆ ಹೆಣ್ಣು ಸ್ವಮೋಹಿಯಾಗುವದನ್ನೂ ಮತ್ತು ಅದೇ ಕಾರಣವಾಗಿ ತಾನು ಯಾರು ಎಂಬುದನ್ನೇ ಗುರುತಿಸಿಕೊಳ್ಳದೇ ಕಳೆದುಹೋಗುವುದನ್ನು ಆ ಕೃತಿಯಲ್ಲಿ ಚಿತ್ರವತ್ತಾಗಿ ವಿವರಿಸಿರುವುದನ್ನು ಪ್ರಸ್ತಾಪಿಸುತ್ತಾರೆ. ಅವಳು ಏನೇ ಮಾತನಾಡಲು ಹೊರಟರೂ ಅದು ಬೋವಾ ಳು ಹೇಳಿದ ಕನ್ನಡಿಯ ಎದುರು ನಿಂತ ಸ್ವಮೋಹಿ ಹೆಣ್ಣಿನ ರೀತಿಯದೇ ಆಗಿಬಿಡುವುದರ ಅನುಮಾನ ವ್ಯಕ್ತಪಡಿಸುತ್ತಾರೆ . ನಮ್ಮ ಶಿಕ್ಷಣ, ಉದ್ಯೋಗಗಳಂಥವು ನಮಗೆ ನೀಡಿವೆ ಎನ್ನಲಾದ ಬುದ್ಧಿ, ಆರ್ಥಿಕ ಸ್ವಾವಲಂಬನೆ ಎಂಬ ಪ್ರಗತಿಯ ನಡೆಗಳು ನಿಜಕ್ಕೂ ನಮ್ಮನ್ನು ಜಾಗೃತಗೊಳಿಸಿವೆಯೇ, ಬಲಗೊಳಿಸಿವೆಯೇ ಎಂಬ ಪ್ರಶ್ನೆಗಳನ್ನು ನಾವು ಹಾಕಿಕೊಳ್ಳಲು ಸಿದ್ಧರಿದ್ದೇವೆಯೇ ಎಂಬ ಅನುಮಾನ ವ್ಯಕ್ತಪಡಿಸುತ್ತಾರೆ.

ಬಹುಶಃ ಸ್ತ್ರೀವಾದಕ್ಕೆ ಸಂಬಂಧಿಸಿ ಅವರು ನಡೆಸಿರುವ ಆಳವಾದ ಅಧ್ಯಯನದ ಆಧಾರದಲ್ಲಿ ಕಂಡುಕೊಂಡಿರುವ ಸತ್ಯಗಳು ವ್ಯವಸ್ಥೆಯಲ್ಲಿ ಬದಲಾವಣೆ ತರುವುದರ ಕಷ್ಟಗಳನ್ನು ಅವರಿಗೆ ಪರಿಚಯಿಸಿರಬಹುದು.ಮಹಿಳೆಯರ ಅಭಿವ್ಯಕ್ತಿಯು, ದಿನ ನಿತ್ಯದ ಮಾತಿನಲ್ಲೇ ಇರಲಿ, ಅಥವಾ ಯಾವುದೇ ಕಲಾ ಪ್ರಕಾರದ ಮಾತಿನಲ್ಲೇ ಆಗಲಿ ಬದುಕಿನ ಎಲ್ಲ ಪ್ರಸಂಗಗಳಲ್ಲೂ ಎದುರಾಳಿಯಾಗಿ ಕಾಣುವುದು ಗಂಡಸರೇ ಆಗಿರುವುದರಿಂದ ಅಭಿವ್ಯಕ್ತಿಯು ಕ್ರಿಯಾಶೀಲತೆಗೆ ಅವಕಾಶವಿಲ್ಲದೇ ಭಾವುಕ ಕ್ರಿಯೆ ಮಾತ್ರವೇ ಆಗಿ ಉಳಿದು ಹೋಗುವ ಎಚ್ಚರಿಕೆಯನ್ನುಅವರು ನೀಡುತ್ತಾರೆ.

ಮಹಿಳೆಯರೇ ಬರೆದ 'ಏನೋ ಹೇಳುತ್ತಿದ್ದಾರೆ' ಸಂಗ್ರಹದ ಬರಹಗಳನ್ನು ಓದುವಾಗ ಮಹಿಳಾ ಸಾಹಿತ್ಯಕ್ಕೆ ಸಂಬಂಧಿಸಿದಂತೆ ನಾನು ಹಿಂದೊಮ್ಮೆ ಓದಿದ್ದ 'ಎ ರೂಮ್ ಆಫ್ ಒನ್ಸ್ ಓನ್' ಕೃತಿಯು ನೆನಪಾಯಿತು . ಅತ್ಯುತ್ತಮ ಕಾದಂಬರಿಗಾರ್ತಿಯಾಗಿದ್ದ ವರ್ಜೀನಿಯಾ ವುಲ್ಫ್ ಳು ಮಹಿಳೆ ಮತ್ತು ಸಾಹಿತ್ಯದ ವಿಚಾರವಾಗಿ ಸಾಕಷ್ಟು ಚಿಂತನೆ ಮಾಡಿದವಳು . ಆಕೆ ಕೇಂಬ್ರಿಜ್ ವಿಶ್ವವಿದ್ಯಾನಿಲಯ ದಲ್ಲಿ ನೀಡಿದ ಒಂದು ಉಪನ್ಯಾಸವು 'ಎ ರೂಮ್ ಆಫ್ ಒನ್ಸ್ ಓನ್' ಕೃತಿಯ ಮೂಲವಸ್ತು. ಹಿಂದಿನ ಶತಮಾನಗಳಲ್ಲೆಲ್ಲ ಮಹಿಳಾ ಕಾದಂಬರಿಗಾರ್ತಿಯರು ಪುರುಷ ಕಾದಂಬರಿಗಾರರಿಗೆ ಹೋಲಿಸಿದರೆ ಅಲ್ಪವೇ ಯಶಸ್ಸನ್ನು ಕಾಣಲು ಕಾರಣವನ್ನು ವುಲ್ಫ್ ಈ ಕೃತಿಯಲ್ಲಿಪಟ್ಟಿ ಮಾಡುತ್ತಾಳೆ. ಆರ್ಥಿಕ ಪರಾವಲಂಬನೆ, ಬೌದ್ಧಿಕ ಅಸ್ವಾತಂತ್ರ್ಯ, ಪ್ರಾಪಂಚಿಕ ಅನುಭವದ ಮಿತಿ ಇತ್ಯಾದಿಗಳು ಆಕೆ ಪಟ್ಟಿ ಮಾಡುವ ಕಾರಣಗಳು. ಖ್ಯಾತ ಲೇಖಕ ಟಾಲ್ಸ್ಟಾಯ್ ಮತ್ತು ಲೇಖಕಿ ಜಾರ್ಜ್ ಎಲಿಯಟ್ ಈ ಇಬ್ಬರ ಜೀವನ ಸಂದರ್ಭಗಳ ಹೋಲಿಕೆ ಮಾಡುತ್ತಾ ಟಾಲ್ ಸ್ಟಾಯ್ ಗಿದ್ದ ಜಗತ್ತನ್ನು ಸುತ್ತುವ ಸ್ವಾತಂತ್ರ್ಯ ಎಲಿಯಟ್ಟಳಿಗೆ ಇರದಿದ್ದನ್ನು ಪ್ರಸ್ತಾಪಿಸುತ್ತಾಳೆ. ಅದೂ ಅಲ್ಲದೆ ತಮ್ಮ ಬರವಣಿಗೆಗೆ ಇತರ ಮಿತಿಗಳ ಜೊತೆಯೇ ಈ ಕಾದಂಬರಿಗಾರ್ತಿಯರು ತಮ್ಮ ಬರವಣಿಗೆಯಲ್ಲಿ ತಮ್ಮ ಸ್ವಂತ ಅಭಿವ್ಯಕ್ತಿಯ ಬದಲು ಪುರುಷ ಮಾನದಂಡಕ್ಕೆ ಅನುಗುಣವಾಗಿಯೋ ಅಥವಾ ಪುರುಷ ವಿರೋಧಿ ಧೋರಣೆಯಿಂದಲೋ ಬರೆದದ್ದೂ ಅವರ ಕಾದಂಬರಿಗಳ ಯಶಸ್ಸಿಗೆ ಮುಳುವಾದದ್ದನ್ನು ಪ್ರಸ್ತಾಪಿಸುತ್ತಾಳೆ. ಮಹಿಳಾ ಕಾದಂಬರಿಗಾರ್ತಿಯು ತನ್ನ ಲಿಂಗಪ್ರಜ್ಞೆಯಿಂದ ಬರೆಯಬಾರದು, ಯಾವುದೇ ಸೃಜನಾತ್ಮಕ ಮನಸ್ಸು ಗಂಡು-ಹೆಣ್ಣು ಪ್ರಜ್ಞೆಗಳ ಸಮನ್ವಯ ಹೊಂದಿರಬೇಕು ಎಂಬುದು ವುಲ್ಫ್ ಳ ವಾದವಾಗಿತ್ತು.

'ಏನೋ ಹೇಳುತ್ತಿದ್ದಾರೆ' ಸಂಗ್ರಹದ ಮೊದಲನೇ ಬರಹವಾದ ತೇಜಸ್ವಿನಿ ಹೆಗಡೆ ಅವರ 'ದಾರಿ ನೂರಾರಿವೆ ಬೆಳಕಿನರಮನೆಗೆ..' ಬರಹದಲ್ಲಿ ಖ್ಯಾತ ಹಾಲಿವುಡ್ ನಟಿ ಎಮ್ಮಾ ವಾಟ್ಸನ್ ಳ ಒಂದು ಹೇಳಿಕೆಯಿದೆ - "It is time that we all see gender as a spectrum instead of two sets of opposing ideals. We should stop defining each other by what we are and start defining ourselves by who we are".

ಎಮ್ಮಾ ವಾಟ್ಸನ್ ಳ ಈ ಹೇಳಿಕೆ ಬಹಳ ಅರ್ಥಪೂರ್ಣವಾಗಿದೆ. 'What we are' ದೇಹಕ್ಕೆ ಸಂಬಂಧಿಸಿದ್ದು ಮತ್ತು 'who we are' ಪ್ರಜ್ಞೆಗೆ ಸಂಬಂಧಿಸಿದ್ದು. 'What we are' ನಿಂದ ನಿರ್ಧಾರವಾಗುವ ಶ್ರೇಣೀಕರಣವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕ್ರಿಶತಶತಮಾನಗಳಿಂದ ಆಳವಾಗಿ ಬೇರೂರಿರುವ ಗಂಡು ಹೆಣ್ಣುಗಳ ಸಂಬಂಧಗಳ ಶ್ರೇಣೀಕರಣದ ನಿರಾಕರಣ ಮತ್ತು ನಿರ್ಮೂಲನವು ಬಹಳ ಅಗತ್ಯವಾದ ಆದರೆ ಸುಲಭವಲ್ಲದ ಕೆಲಸ. ಜನರ ನಂಬಿಕೆಗಳು ದೃಷ್ಟಿಕೋನಗಳು ಸುಲಭದಲ್ಲಿ ಬದಲಾಗುವುದಿಲ್ಲ. ನಿಯಂತ್ರಿಸುವವರು ಮತ್ತು ನಿಯಂತ್ರಿಸಲ್ಪಡುವವರು ಇಬ್ಬರೂ ಸುಲಭಕ್ಕೆ ಬದಲಾಗುವುದಿಲ್ಲ. ಇದೊಂದು ದೀರ್ಘವಾದ ಮತ್ತು ಸೂಕ್ಷ್ಮವಾದ ಹೋರಾಟ. ಶ್ರೀಮತಿಯವರು ಮುನ್ನುಡಿಯಲ್ಲಿ ಇದನ್ನೇ ಒತ್ತಿ ಹೇಳಲು ಪ್ರಯತ್ನಿಸಿದ್ದಾರೆ ಎಂದು ನನಗನಿಸಿತು.

ಸ್ವಾತಂತ್ರ್ಯವು ಮಹಿಳೆಯ ಅಭಿವ್ಯಕ್ತಿ ಅರಳಲು ಅಗತ್ಯವಾದದ್ದು. ತನ್ನದೇ ಕೋಣೆ, ತನ್ನದೇ ವರಮಾನ ಇರದೇ ಇದ್ದಾಗ ಕಲಾ ಅಭಿವ್ಯಕ್ತಿ ಅಸಾಧ್ಯ ಎಂದು ವರ್ಜೀನಿಯಾ ವುಲ್ಫ್ 'ಎ ರೂಮ್ ಆಫ್ ಒನ್ಸ್ ಓನ್ ' ಕೃತಿಯಲ್ಲಿ ಬರೆಯುತ್ತಾಳೆ .'ಏನೋ ಹೇಳುತ್ತಿದ್ದಾರೆ' ಸಂಗ್ರಹದ ' ಅಗ್ನಿದಿವ್ಯದಲ್ಲಿ ಹುಟ್ಟುವ ನಗುವಿನ ನತ್ತು' ಬರಹದಲ್ಲಿ ಸಂಧ್ಯಾರಾಣಿಯವರೂ ಇದೇ ಭಾವನೆ ವ್ಯಕ್ತಪಡಿಸುತ್ತ- 'ಯಾವುದೇ ವ್ಯಕ್ತಿಯ ಆತ್ಮ ಗೌರವ ಮತ್ತು ಆತ್ಮ ಸಮ್ಮಾನಕ್ಕೆ ಬೇಕಾದ ಟಿಕೆಟ್ ಎಂದರೆ ಅದು ಆರ್ಥಿಕ ಸ್ವಾವಲಂಬನೆ' ಎಂದು ಬರೆಯುತ್ತಾರೆ. ಇದೇ ಬರಹದಲ್ಲಿ ಅವರು ಮಹಿಳೆಯರ ವೈಯಕ್ತಿಕ ಅನುಭವಗಳು ಬದುಕಿನ ಅಪಾರ ಸಾಧ್ಯತೆಗಳ ಬಗ್ಗೆ ಧನಾತ್ಮಕ ಭಾವನೆಯನ್ನು ಕಟ್ಟಿಕೊಡಬಹುದಾದದ್ದರ ಬಗ್ಗೆ ಬರೆಯುತ್ತ ಈ ಕುರಿತು 'ಸ್ತ್ರೀವಾದ - ಚಿಂತನೆ ಮತ್ತು ಹೋರಾಟ' ಕೃತಿಯಲ್ಲಿ ಶ್ರೀಮತಿಯವರ ಕೆಲವು ಯೋಚನೆಗಳನ್ನು(ದಿ ಪಾಲಿಟಿಕ್ಸ್ ಆಫ್ ಇಂಡಿವಿಜುವಲಿಂ) ಉಲ್ಲೇಖಿಸುತ್ತಾರೆ- 'ಸಾಧಾರಣವಾಗಿ ಗಂಭೀರ ಚಿಂತನೆಗಳು ಎಂದರೆ ಅದರಲ್ಲಿ ವೈಯಕ್ತಿಕ ಅಂಶಗಳು ಬೆರೆಯುವಂತಿಲ್ಲ ಎಂಬುದು ಪುರುಷಜ್ಞಾನವಲಯದ ಹೇಳಿಕೆ...ಆದರೆ ಸ್ತ್ರೀ ವಾದಿ ಜ್ಞಾನಮೀಮಾಂಸೆ ಮಹಿಳಾ ಬದುಕನ್ನು ವೈಯಕ್ತಿಕತೆಯಿಂದ ಹೊರತಾಗಿ ಚಿಂತಿಸುವುದು ಅರ್ಥಹೀನವಾಗುತ್ತದೆ ಎನ್ನುವುದನ್ನು ಸ್ಪಷ್ಟವಾಗಿಯೇ ಕಂಡುಕೊಂಡಿದೆ. ಅಂದರೆ ಮಹಿಳಾ ಬದುಕಿನ ದಿನನಿತ್ಯದ ವಿವರಗಳಿಗೆ ಆಪ್ತವಾಗಿ ಸಂಬಂಧಿಸಿಕೊಂಡಲ್ಲದೆ ಸ್ತ್ರೀವಾದಿ ಚಿಂತನೆಗಳು ಮುನ್ನಡೆಯಲಾರವು ಎಂಬ ಖಚಿತ ನಿಲುವು ಇಲ್ಲಿದೆ'. ಹೀಗೆ ಶ್ರೀಮತಿಯವರ ಆಲೋಚನೆಗಳು ಈ ಪುಸ್ತಕದಲ್ಲಿ ಮುನ್ನುಡಿಯಿಂದಲೇ ಓದುಗರನ್ನು ಆವರಿಸುತ್ತವೆ. ಎಲ್ಲರಿಗೂ ನಾವು ನಾವಾಗಿ ಬದುಕುವ ಅವಕಾಶವಿರುವ ವ್ಯವಸ್ಥೆಯೊಂದನ್ನುಹಾಗೂ ಅಂಥದೊಂದು ವ್ಯವಸ್ಥೆಯಲ್ಲಿ ಗಂಡು ಹೆಣ್ಣುಗಳ ಆರೋಗ್ಯಕರ ಸಂಬಂಧವನ್ನು ಸ್ಥಾಪಿಸುವುದೂ ಒಂದು ಉದ್ದೇಶವಾಗಿರುವ ಸ್ತ್ರೀವಾದದ ಇತಿಹಾಸ, ಪರಿಕಲ್ಪನೆ, ಮತ್ತು ಪ್ರಸ್ತುತತೆಯನ್ನು ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಶ್ರೀಮತಿ ಅವರು ವಿವರಿಸಿರುವ ವಿಡಿಯೋಗಳು ಋತುಮಾನ ದಲ್ಲಿ ಲಭ್ಯವಿವೆ.

ಈ ಸಂಗ್ರಹದ ಇನ್ನು ಕೆಲವು ಬರಹಗಳು ಇಂದಿನ ಸಾಮಾಜಿಕ ಸಂದರ್ಭದ ಬಗೆಗೆ ಬಹಳಷ್ಟು ಭರವಸೆಯನ್ನೂ ಹೊಂದಿವೆ. ಮಹಿಳೆಯಿಂದಲೇ ಮುಂದೊಂದು ದಿನ ಸ್ವಸ್ಥ ಸಮಾಜದ ನಿರ್ಮಾಣ ಆಗಲಿದೆ ಎಂಬ ಆಶಯವೂ ಒಂದು ಬರಹದಲ್ಲಿ ಕಂಡು ಬಂತು. ಹಾಗೆ ಆಗಲಿ ಎಂಬ ಹಾರೈಕೆ ನನ್ನದು. ಜೆ ಕೆ ರೌಲಿಂಗ್, ಮೇರಿ ಕ್ಯೂರಿ, ಛಾಯಾ ನಂಜಪ್ಪ, ಬೆಂಗಳೂರು ನಾಗರತ್ನಮ್ಮ ಮುಂತಾದ ಸಾಧಕಿಯರ ಸ್ಪೂರ್ತಿದಾಯಕ ಜೀವನ ಚಿತ್ರಗಳೂ ಈ ಬರಹಗಳಲ್ಲಿವೆ.

ಧಾವಂತದ ಬದುಕಿನಲ್ಲಿ ಮುಳುಗಿರುವ ಕನ್ನಡಿಗರನ್ನು ಒಮ್ಮೆ ನಿಲ್ಲಿಸಿ, ನೋಡಿ ಈ ಮಹಿಳಾ ದಿನದಂದು 'ಏನೋ ಹೇಳುತ್ತಿದ್ದಾರೆ' ಕೇಳಿಸಿಕೊಳ್ಳಿ ಎಂದು ಈ ಪುಸ್ತಕ ಕೈಗಿಟ್ಟಿರುವ ಸಾವಣ್ಣ ಪ್ರಕಾಶನದ್ದು ಮೆಚ್ಚಬೇಕಾದ ಕೆಲಸ.

ಸಾಹಿತ್ಯ ಮತ್ತು ಇತರ ಕಲಾ ಪ್ರಕಾರಗಳಲ್ಲಿ ಮಹಿಳೆಯರ ವಿಚಾರಗಳ ಅಭಿವ್ಯಕ್ತಿಯು ಒಂದು ಸಮ ಸಮಾಜದಲ್ಲಿ ಸಹಜವಾದ ಪ್ರಕ್ರಿಯೆಯಾಗಿರಬೇಕಾಗುವುದರ ಜೊತೆಗೆ ರೂಢಿಗತ ಮೌಲ್ಯಗಳ ಪ್ರಶ್ನೆಗೂ ಒದಗಿ ಬರುವುದೆಂದು ನನ್ನ ನಂಬಿಕೆ.


No comments :