Sunday, September 11, 2016

ಕುವೆಂಪು ಅವರ ಕಾನೂರು ಹೆಗ್ಗಡಿತಿ


ನಾನು ಓದಿದ ಮೊದಲ ಕನ್ನಡ ಕಾದಂಬರಿ ಕುವೆಂಪು ಅವರ ಕಾನೂರು ಹೆಗ್ಗಡಿತಿ. ಮಾಧ್ಯಮಿಕ ಶಾಲೆಯಲ್ಲಿ  ಓದುತ್ತಿದ್ದಾಗ  ಬೇಸಿಗೆ ರಜೆಯಲ್ಲಿ ಸಂಬಂಧಿಕರೊಬ್ಬರ ಮನೆಯಲ್ಲಿ ಕಣ್ಣಿಗೆ ಬಿದ್ದ ಈ ಪುಸ್ತಕವನ್ನು ಓದಲು ಆರಂಭಿಸಿ, ಎರವಲು ಪಡೆದು ಮನೆಗೂ ತಂದು ಓದಿ ಮುಗಿಸಿದ್ದು ನೆನಪಿದೆ. ಸುಮಾರು ಆರು ನೂರು ಪುಟಗಳ ಕಾದಂಬರಿ ಓದಿ ಮುಗಿಸಲು ಬಹುಶಃ ಆ ರಜೆಯ ಬಹುಭಾಗವೇ ಹಿಡಿದಿರಬೇಕು. ಈಗ ಹತ್ತು ವರ್ಷಗಳ ಹಿಂದೆ ಮತ್ತೊಮ್ಮೆ ಓದುವಾಗಲೂ ಕಾದಂಬರಿಯ ಸ್ವಾರಸ್ಯಕಡಿಮೆಯಾದಂತೆ ಅನಿಸಲಿಲ್ಲ.

೧೯೩೬ರಲ್ಲಿ ಪ್ರಕಟವಾದ ಈ ಕಾದಂಬರಿಯು ಒಳಗೊಳ್ಳುವ ಪರಿಸರ ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆಗಳ ಮಲೆನಾಡು ಎಂಬ ಹೆಸರಿನಿಂದ ಗುರುತಿಸಲ್ಪಡುವ ಪ್ರದೇಶ. ನನ್ನ ಊರು ಅದೇ ಪ್ರದೇಶದಲ್ಲಿರುವುದರಿಂದ ಈ ಕಾದಂಬರಿಯಲ್ಲಿ ವರ್ಣನೆಗೊಳ್ಳುವ ಹಲವಾರು ಸ್ಥಳ ಹಾಗೂ ವ್ಯಕ್ತಿಚಿತ್ರಗಳು ನಮಗೆಲ್ಲ ಹೊಸತಾಗಿರಲಿಲ್ಲ. ಆದರೂ ಆ ಕಾರಣಕ್ಕಾಗಿ ಕಾದಂಬರಿಯ ಸ್ವಾರಸ್ಯ ನನಗೇನೂ ಕಡಿಮೆಯಾಗಿರಲಿಲ್ಲ.  ಮಲೆನಾಡಿನವರಲ್ಲದ ಓದುಗರಿಗಂತೂ ಇದೊಂದು ಹೊಸ ಪ್ರಪಂಚ. ಕುವೆಂಪು ಅವರಂತಹ ಕಲ್ಪನೆ, ಒಳನೋಟ, ಜೀವನ ಪ್ರೀತಿ ಎಲ್ಲವೂ ಬೆರೆತ ಕೃತಿಕಾರನ ಲೇಖನಿಯಲ್ಲಿ ಮಲೆನಾಡಿನ ಪ್ರಕೃತಿ ಲೋಕ ಕಣ್ಣೆದುರಿಗೇ ನಿಂತಷ್ಟು ನೈಜತೆಯಲ್ಲಿ ಮೂಡಿ ಬರುತ್ತದೆ.

ಕಾದಂಬರಿಯ 'ಅರಿಕೆ'ಯಲ್ಲಿ ಕುವೆಂಪು ಅವರೇ ಹೇಳಿರುವಂತೆ 'ಕಾದಂಬರಿ ಅಂಗೈ ಮೇಲಣ ನಾಟಕಶಾಲೆ'. ವಿಧ ವಿಧದ ದೃಶ್ಯಗಳ, ವ್ಯಕ್ತಿಗಳ, ಸನ್ನಿವೇಶಗಳ ಪೂರ್ಣ ಸ್ವಾರಸ್ಯ ಸಿಗಲು ಅವುಗಳು ಓದುವವರ ಪ್ರತಿಭೆಯಲ್ಲಿ ಮತ್ತೊಮ್ಮೆ ಸೃಷ್ಟಿಯಾಗಬೇಕಾಗುತ್ತದೆ.

ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ, ಕಳೆದ ಶತಮಾನದ ಆರಂಭದ ಕಾಲಘಟ್ಟದಲ್ಲಿ ಮಲೆನಾಡು ಪ್ರದೇಶದ ಸೂಕ್ಷ್ಮ ಸಾಮಾಜಿಕ, ರಾಜಕೀಯ ಬದಲಾವಣೆಗಳನ್ನು ಅಲ್ಲಿನ ಕೆಲವು ಕುಟುಂಬಗಳ ಜನರ ಬದುಕಿನ ಹಿನ್ನೆಲೆಯಲ್ಲಿ ಈ ಕಾದಂಬರಿಯ ಓದುಗರು ಗ್ರಹಿಸಬಹುದು. ಜಮೀನುದಾರಿಕೆಯ ದರ್ಪ, ಅಧಿಕಾರದ ಪ್ರತಿನಿಧಿಯಂತಿರುವ ಕಾನೂರು ಚಂದ್ರಯ್ಯಗೌಡರ ಕುಟುಂಬವು ಕತೆಯ ಕೇಂದ್ರಬಿಂದು. ಈ ಕುಟುಂಬದ ಒಳಗಿನ ಹಾಗೂ ಹೊರಗಿನ ಸಂಬಂಧಗಳು ಅಂದಿನ ಕಾಲದ ಕೌಟುಂಬಿಕ ಹಾಗೂ ಸಾಮೂಹಿಕ ಜೀವನದ ಪ್ರತಿಮೆಗಳಾಗಿ ಕಾಣಬರುತ್ತವೆ.

ಕಾದಂಬರಿಯ ಕಡೆಯಲ್ಲಿ ಒದಗಿಸಿರುವ ಅನುಬಂಧ-೩ ರಲ್ಲಿ ಕಾದಂಬರಿಯ ಪಾತ್ರಗಳ ಪರಿಚಯ ಇದೆ. ಇದರಲ್ಲಿ ಚಂದ್ರಯ್ಯಗೌಡರ ಪರಿಚಯ  ಹೀಗಿದೆ: ಕಾನೂರು ಮನೆತನದ ಯಜಮಾನ. ಅಣ್ಣ ಸುಬ್ಬಯ್ಯಗೌಡರು ಗತಿಸಿದ ಮೇಲೆ ಈತನೇ ಮನೆಯ ಯಜಮಾನ. ಅಣ್ಣ ಸುಬ್ಬಯ್ಯಗೌಡರು ಸಾಯುವಾಗ ಅವರಿಗೂ ಚಂದ್ರಯ್ಯಗೌಡರಿಗೂ ಮನಸ್ತಾಪವಿತ್ತು. ಹಾಗಾಗಿ ಅಣ್ಣನ ಮಗ ಹೂವಯ್ಯ ಮತ್ತು ಅತ್ತಿಗೆ ನಾಗಮ್ಮನವರ ಬಗ್ಗೆ ಅನಾದರ. ಮೊದಲ ಇಬ್ಬರು ಹೆಂಡತಿಯರು ಗತಿಸಿದ ಮೇಲೆ ನೆಲ್ಲುಹಳ್ಳಿಯ ಸುಬ್ಬಮ್ಮನನ್ನು ಮೂರನೆಯ ಹೆಂಡತಿಯಾಗಿ ತಂದರು.

ಕಾದಂಬರಿಯ ಶೀರ್ಷಿಕೆಯ ಪಾತ್ರ ಇದೇ ಸುಬ್ಬಮ್ಮನದು. ತನ್ನ ಕಾರ್ಯ ಸಾಧನೆಗೆ ಕುಟಿಲ ಮಾರ್ಗವನ್ನು ಹಿಡಿಯಲು ಹಿಂಜರಿಯದ ಹೆಂಗಸು ಸುಬ್ಬಮ್ಮ. ಗಂಡನ ಸಾವಿನ ನಂತರ ಮನೆಯಲ್ಲಿ ತನ್ನ ಅಧಿಕಾರ ಸ್ಥಾಪಿಸಲು ಹೊರಡುವ ಈಕೆ ಒಬ್ಬ ಉದ್ವಿಗ್ನ ವ್ಯಕ್ತಿತ್ವದ ದುಡುಕಿನ ಮಹಿಳೆಯಾಗಿ ಕಾಣಬರುತ್ತಾಳೆ.

೧೯೯೯ರಲ್ಲಿ ಗಿರೀಶ್ ಕಾರ್ನಾಡರು ನಿರ್ದೇಶಕರಾಗಿ ತೆರೆಗೆ ತಂದ  ಇದೇ ಕಾದಂಬರಿ ಆಧಾರಿತ ಚಲನಚಿತ್ರವು ಈ ಬೃಹತ್ ಕಾದಂಬರಿಯ ಸಂಪೂರ್ಣ ಪರಿಚಯ ಮಾಡಿಸದಿದ್ದರೂ ಚಂದ್ರಯ್ಯಗೌಡನಾಗಿ ಕಾರ್ನಾಡರ ಅಭಿನಯ ಉತ್ತಮವಾಗಿ ಮೂಡಿ ಬಂದಿದೆ.  ಉತ್ತರ ಕರ್ನಾಟಕ ಮೂಲದ ಕಾರ್ನಾಡರ ಮಾತಿನ ಶೈಲಿ ಮಲೆನಾಡು ಗೌಡರ ಮಾತಿನ ಶೈಲಿಗೆ  ಹೊಂದಿಕೆಯಾಗದಿದ್ದರೂ ಭಾವಾಭಿನಯವು ನನ್ನ ಕಲ್ಪನೆಯ ಕಾದಂಬರಿಯ ಪಾತ್ರಕ್ಕೆ ತುಂಬಾ ಹೊಂದಿಕೆಯಾಗುತ್ತಿತ್ತೆಂದು ನೆನಪು.

ಈ ಕಾದಂಬರಿಯ ಇನ್ನೊಂದು ಮುಖ್ಯ ಪಾತ್ರವೆಂದರೆ ಹೂವಯ್ಯ. "ತನ್ನ ಸುಶಿಕ್ಷಿತತೆ, ಆಧ್ಯಾತ್ಮಿಕತೆ ಮತ್ತು ಕ್ರಿಯಾಶೀಲತೆಯಿಂದ ಸುತ್ತಲಿನವರ ಬದುಕನ್ನು ಉತ್ತಮಗೊಳಿಸಲು ಪ್ರಯತ್ನಿಸುತ್ತಾನೆ" ಎಂದು ಆತನ ಪಾತ್ರದ ಬಗೆಗೆ ಅನುಬಂಧದಲ್ಲಿ ನಮೂದಾಗಿದೆ.

ಕಾದಂಬರಿಯುದ್ದಕ್ಕೂ ಅಂದಿನ ಮಲೆನಾಡಿನ ಬದುಕಿನ ಸಹಜ ಚಟುವಟಿಕೆಗಳಾದ ಮೀನು ಹಿಡಿಯುವುದು, ಹಂದಿ ಶಿಕಾರಿ, ಕಳ್ಳು ಕಟ್ಟುವುದು, ಮರ ಕುಯ್ಯುವುದು, ದಯ್ಯದ ಹರಕೆ, ಭೂಮಿ ಹುಣ್ಣಿಮೆಯಂತಹ ಹಬ್ಬಗಳು ಇತ್ಯಾದಿಗಳ ವರ್ಣನೆಗಳು ಅತ್ಯಂತ ಪ್ರಭಾವಯುತವಾಗಿವೆ. ಚಿಕ್ಕಪುಟ್ಟ ಸಂಗತಿಗಳೂ ವಿವರಗಳೊಂದಿಗೆ ದಾಖಲಾಗಿವೆ.

ಲಿಯೋ ಟಾಲ್ ಸ್ಟಾಯ್ ಬರೆದ 'ಆನಾ ಕರೆನಿನಾ' ಓದುವಾಗಲೂ ಇದೇ ಬಗೆಯ ಓದಿನ ಅನುಭವವಾದದ್ದು ನೆನಪಾಗುತ್ತದೆ. ತೋಟದಲ್ಲಿ ಹುಲ್ಲು ಕತ್ತರಿಸುವ ವಿವರಣೆಗೇ ಟಾಲ್ ಸ್ಟಾಯ್ ಒಂದೆರಡು ಅಧ್ಯಾಯಗಳನ್ನೇ ಮೀಸಲಿಟ್ಟಿರುವುದು, ಹಾಗೆಯೇ ಅದೇ ಕಾದಂಬರಿಯಲ್ಲಿ ಬರುವ ಬೇಟೆಯ ದೀರ್ಘ ವಿವರಣೆ- ಇವೆಲ್ಲ ಇಂತಹ ಕಾದಂಬರಿಗಳಲ್ಲಿ ಬಾಹ್ಯ ಚಟುವಟಿಕೆಗಳ ವಿವರಣೆಗಳೂ ಭಾವ ಪ್ರಪಂಚದ ವಿವರಣೆಗಳಂತೇ  ಹೇಗೆ ಮುಖ್ಯವಾಗುತ್ತವೆಂಬುದನ್ನು  ತೋರುತ್ತವೆ.

ಇಂತಹ ಕಾದಂಬರಿಗಳಲ್ಲಿ ವೈವಿಧ್ಯಮಯ ಪಾತ್ರಗಳ ಮೂಲಕ ಒಂದು ಸಮೂಹದ ಜೀವನದ ಒಂದೊಂದು ಅನುಭವಗಳನ್ನೂ ಅತ್ಯಂತ ಆಸಕ್ತಿಯಿಂದ, ಸಹಾನುಭೂತಿಯಿಂದ ಗಮನಿಸುವ ಕೃತಿಕಾರರು ಓದುಗರಿಗೆ ಒದಗಿಸುವುದು ಒಂದು ಜೀವನಕ್ರಮದ ಸಮಗ್ರ ಚಿತ್ರವನ್ನು. ವ್ಯಕ್ತಿಗತ ಮನೋಸ್ಥಿತಿ, ಸಾಮಾಜಿಕ ಸ್ಥಿತಿ ಎಲ್ಲವೂ ಕೃತಿಯ ಭಾಗಗಳಾಗುತ್ತವೆ.

ಕಾನೂರು ಹೆಗ್ಗಡತಿ ಕಾದಂಬರಿಯು ಅಂದಿನ ಮಲೆನಾಡಿನ ಜೀವನಕ್ರಮವನ್ನು ಪ್ರತಿಫಲಿಸುತ್ತಾ ಜಡ್ಡು ಹಿಡಿದ ಹಲವು ಆಚರಣೆಗಳು, ನಂಬಿಕೆಗಳನ್ನು ಬದಲಾಯಿಸಿಕೊಳ್ಳುವ ಅಗತ್ಯವನ್ನು ತೋರಿಸುತ್ತದೆ. ಹೂವಯ್ಯನ ಪಾತ್ರ ಹಲವು ಸಂದರ್ಭಗಳಲ್ಲಿ ಸಾಮಾಜಿಕ ಕಟ್ಟುಪಾಡುಗಳಿಗೆ ಸವಾಲು ಹಾಕುವುದು ಈ ಬದಲಾವಣೆಗಳ ಮಾರ್ಗ ಸೂಚನೆಯಂತೇ ತೋರುತ್ತದೆ.

"ಇದನ್ನು ಕಥೆಯ ಕೋಲಾಹಲಕ್ಕಾಗಿ ಓದಬೇಡಿ, ಸಾವಧಾನವಾಗಿ ಸಚಿತ್ರವಾಗಿ ಓದಿ" ಎಂದು ಕುವೆಂಪು ಅವರು 'ಅರಿಕೆ'ಯಲ್ಲಿ ಹೇಳಿದ್ದರೂ 'ಕಾನೂರು ಹೆಗ್ಗಡಿತಿ' ಯ ಕಥೆಯೂ, ಕಥೆಯೊಳಗಿನ ಉಪಕಥೆಗಳೂ ಸಹ ತೀವ್ರವಾದ ಒಂದು ಅನುಭವಕ್ಕೆ ಪೂರಕವಾಗುತ್ತವೆ.

ಹೂವಯ್ಯ-ಸೀತೆಯರ ತಣ್ಣನೆಯ ಹಾಗೂ ಅಂತಿಮವಾಗಿ ದುರಂತಮಯವಾದ ಪ್ರೇಮದ ಕಥೆಯು  ಕಾನೂರು ಹೆಗ್ಗಡಿತಿಯ ನವಿರಾದ ಕಥಾ ಸೆಲೆಗಳಲ್ಲೊಂದು. ಈ ಬೃಹತ್ ಕಾದಂಬರಿಯ ಅನೇಕ ಆಕರ್ಷಣೆಗಳ ಒಂದು ಸಣ್ಣ ಮಾದರಿಯಾಗಿ, ಹೂವಯ್ಯ-ಸೀತೆಯರ ಪ್ರೇಮಕಥೆಯು ಅನಾವರಣಗೊಳ್ಳುವ ಕಾದಂಬರಿಯ ಕೆಲ ಭಾಗಗಳನ್ನು ಇಲ್ಲಿ ಉಲ್ಲೇಖಿಸಬಹುದು-

ಸುಸಂಸ್ಕೃತೆ, ರೂಪವತಿ ಹಾಗೂ ಭಾವಜೀವಿಯಾದ ಸೀತೆ ಹೂವಯ್ಯನನ್ನು ಬಾಲ್ಯದಿಂದಲೂ ಮೆಚ್ಚಿಕೊಳ್ಳುತ್ತಾ, ತನ್ನ ಯೌವ್ವನದಲ್ಲೂ ಅವನನ್ನೇ ಆರಾಧಿಸುವಳು. ಇದು ಅನಾವರಣಗೊಳ್ಳುವ ಕೆಲ ಘಟನಾವಳಿಗಳು ಹೀಗಿವೆ-

ಸೀತೆ (ಅಧ್ಯಾಯ ನಾಲ್ಕು)-
ಹೂವಯ್ಯ ಭಾವ ಬರುವರೆಂದು ಸಡಗರ, ಸಂಭ್ರಮ. ಎಳೆಯ ದಿನಗಳಲ್ಲಿ ಇಬ್ಬರೂ ಆಟ ಪಾಠಗಳಲ್ಲಿ ಬೆರೆತು ಕಾಲ ಕಳೆದದ್ದು , ಸೀತೆ ವಧುವಾಗಿ ಹೂವಯ್ಯ ವರನಾಗಿ ಮದುವೆಯ ಆಟ ಆಡಿದ್ದು ನೂತನ ವಧುವರರು ತೀರ್ಥಹಳ್ಳಿಯ ಎಳ್ಳಮವಾಸ್ಯೆ ಜಾತ್ರೆಗೆ ಮೇಳಿಗೆ ತೇರಿಗೆ ಹೋಗಿಬಂದದ್ದು, ಬಟ್ಟೆ ಸುತ್ತಿ ಮಗುವೆಂದು ನಲಿದದ್ದು, ಗಂಡ ಹೂವಯ್ಯ ಮುನಿದದ್ದು ರಾಮಯ್ಯ ಜಗಳ ಬಿಡಿಸಿದ್ದು ಎಲ್ಲ ನೆನಪಾಗುವುದು. ಸಂಭ್ರಮದಿಂದ ತಾಯಿಗೆ ಹೋಳಿಗೆ ಮಾಡಲು ನೆರವಾಗುವಳು.

ಬರುತ್ತಿರುವ ಹೂವಯ್ಯನನ್ನು ಮೆಚ್ಚಿಸಲು ಅಲಂಕಾರದಲ್ಲಿ ತೊಡಗುವಳು, ಮುಚ್ಚಿರುವ ಬಾಗಿಲ ಆಚಿನಿಂದ ಅವಳ ಪುಟ್ಟ ತಂಗಿ ಲಕ್ಷ್ಮಿ ತಾನೂ ಒಳಗೆ ಬರುವೆನೆಂದು ಗಲಾಟೆ ಮಾಡಿದಾಗ ಅವಳನ್ನು ಮುದ್ದು ಮಾಡಿ ನಿನಗೂ ತಲೆ ಬಾಚಿ ಹೂ ಮುಡಿಸುತ್ತೇನೆಂದು ಹೇಳಿ ಇವತ್ತು ಹೂವಯ್ಯ ಭಾವ ಬರುತ್ತಾರೆ ಎಂದು ಲಕ್ಷ್ಮಿಗೂ ಹೇಳುವಳು.

ಬರುತ್ತಿರುವಾಗ ಗಾಡಿ ಉರುಳಿ ಬಿದ್ದು ಬೆನ್ನು ನೋವು ಮಾಡಿಕೊಂಡಿದ್ದ ಹೂವಯ್ಯನಿಗೆ ನರ್ಸಮ್ಮನಾಗಿ ಶುಶ್ರೂಷೆ ಮಾಡುವಳು.

ಹಲ್ಲಿಯ ಕೃಪೆ (ಅಧ್ಯಾಯ ಹದಿನೈದು)-
ಮುತ್ತಳ್ಳಿಯಲ್ಲಿ ಸುಧಾರಿಸಿಕೊಳ್ಳುತ್ತಿದ್ದ ಹೂವಯ್ಯನನ್ನು ಜಗಲಿಯಲ್ಲಿ ಗದ್ದಲ ಎಂದು ಸೀತೆಯ ಅಲಂಕಾರದ ಕೋಣೆಯಲ್ಲಿ ಮಲಗಿಸಿರುತ್ತಾರೆ. ಇಬ್ಬರೇ ಕೋಣೆಯಲ್ಲಿರುವಾಗ ಸೀತೆಗೆ ಮಾತನಾಡಬೇಕೆಂಬ ಕುತೂಹಲ. ಆದರೆ ಸಂಕೋಚ, ಲಜ್ಜೆ, ಭಯ. ಹೂವಯ್ಯನ ಪರಿಸ್ಥಿತಿಯೂ ಅಂತಹುದೇ. ಈ ನಡುವೆ ಗೋಡೆಯಲ್ಲಿ ಕುಳಿತಿದ್ದ ಹಲ್ಲಿಯೊಂದು ಮುಂದಕ್ಕೆ ಚಲಿಸಿತು. ಆಗ ಅದು ಕುಳಿತಿದ್ದ ಜಾಗ ತೆರವಾಯಿತು. ಅಲ್ಲಿ "ನಾನು ಹೂವಯ್ಯ ಭಾವನನ್ನೇ ಮದುವೆಯಾಗುತ್ತೇನೆ" ಎಂದು ಸೀಸದ ಕಡ್ಡಿಯಲ್ಲಿ ಬರೆದಿದ್ದ ಬರಹ ಹೂವಯ್ಯನ ಕಣ್ಣಿಗೆ ಬಿತ್ತು. ಅದು ಸೀತೆಯದೇ ಅಕ್ಷರ ಎಂಬುದು ಹೂವಯ್ಯನಿಗೆ ತಿಳಿಯಿತು. ಸೀತೆ ತನ್ನನ್ನು ಪ್ರೀತಿಸುತ್ತಿದ್ದಾಳೆ ಎಂಬುದು ಆತನಿಗೆ ಸ್ಪಷ್ಟವಾಯಿತು.

ಸೀತೆ-ಹೂವಯ್ಯ (ಇಪ್ಪತ್ತನೆಯ ಅಧ್ಯಾಯ)-
ಸೀತೆ, ಹೂವಯ್ಯ ಹೇಳಿದಂತೆ ಅವನ ಟ್ರಂಕಿನಿಂದ ಭಾರಭಾರವಾದ ಬಣ್ಣ ಬಣ್ಣದ ಹೊದಿಕೆ ಇರುವ ಇಂಗ್ಲಿಷ್ ಪುಸ್ತಕಗಳನ್ನು ಹೊತ್ತುತಂದು ಹೆತ್ತ ತಾಯಿ ತನ್ನ ಮಗುವನ್ನು ಗಂಡನಿಗೆ ನೀಡುವಂತೆ ಒಂದು ವಿಧದ ಧನ್ಯತಾಭಾವ ಮತ್ತು ಅರ್ಪಣಾಭಾವದಿಂದ ಹೂವಯ್ಯನಿಗೆ ನೀಡಿದಳು. ಹೂವಯ್ಯನು ಒಂದು ಚರಿತ್ರೆಯ ಪುಸ್ತಕವನ್ನು ಸೀತೆಯ ಕೈಗೆ ಕೊಟ್ಟು ಇವುಗಳಲ್ಲಿರುವ ಚಿತ್ರಗಳನ್ನು ನೋಡುತ್ತಿರು ಎಂದು ಹೇಳಿ ತಾನು ಕಾವ್ಯ ಪುಸ್ತಕವೊಂದನ್ನು ಓದಲು ತೊಡಗಿದನು.

ಇನ್ನು ಹೂವಯ್ಯನ ವಿಚಾರಕ್ಕೆ ಬಂದರೆ, ಅದೇಕೋ ಹೂವಯ್ಯ ಪ್ರೇಮದ ಅನುಭವಕ್ಕೆ ತನ್ನನ್ನು  ಸಂಪೂರ್ಣವಾಗಿ ಒಪ್ಪಿಸಿಕೊಳ್ಳುವುದಿಲ್ಲ. ಆರಂಭದಿಂದಲೇ ಅವನಲ್ಲಿ ಮಾನಸಿಕ ಸಮರವೇರ್ಪಡುತ್ತದೆ. ಹೂವಯ್ಯನ ಮನೋಭಾವ ವ್ಯಕ್ತವಾಗುವುದು ಹೀಗೆ-

ಹಲ್ಲಿಯ ಕೃಪೆ (ಅಧ್ಯಾಯ ಹದಿನೈದು)-
ಒಮ್ಮೆ ಆಕೆಗಾಗಿ ಸಂಸಾರದ ಭಾರವನ್ನು ಹೊರುವುದು ಅಷ್ಟೇನೂ ಹೀನವಲ್ಲ, ನಷ್ಟಕರವಲ್ಲ ಎಂದು ಆಲೋಚಿಸಿದನು. ಮತ್ತೊಮ್ಮೆ ತನ್ನ ಮಹದಾಕಾಂಕ್ಷೆಯ ಆದರ್ಶ ಅವನನ್ನು ತನ್ನೆಡೆಗೆ ಸೆಳೆಯುತ್ತಿತ್ತು.

ರುದ್ರವಾದರೂ ಮಧುರ ರಾತ್ರಿ (ಅರವತ್ತೊಂಬತ್ತನೇ ಅಧ್ಯಾಯ)-
ಮೊದಲು ತಾನು ವಿದ್ಯಾವಂತನಾಗಬೇಕು, ಪ್ರತಿಭಾಶಾಲಿಯಾಗಬೇಕು, ಕೀರ್ತಿ ಸಂಪಾದಿಸಬೇಕು, ಲೋಕದ ಮಹಾಪುರುಷರಂತಾಗಬೇಕು, ಸ್ವಾರ್ಥ ತ್ಯಾಗದಿಂದ ಜೀವನವನ್ನು ಪರಮ ಸಾರ್ಥಕತೆಗೆ ಬಲಿದಾನ ಕೊಡಬೇಕು - ಎಂಬ ಹೆಗ್ಗನಸು.

ಮುಂದೆ ಹೂವಯ್ಯ-ಸೀತೆಯರ ಸಂಬಂಧ ಪಡೆಯುವ ತಿರುವೂ ಅನಿರೀಕ್ಷಿತ. ಇವರ ಪ್ರೇಮದ ಕಥೆಯು  ಕಾದಂಬರಿಯ ಒಂದು ಪುಟ್ಟ ಭಾಗ ಮಾತ್ರ.

ಶತಮಾನದಷ್ಟು ಹಳೆಯದಾದರೂ  ತನ್ನದೇ ವಿಶಿಷ್ಟತೆ ವೈವಿಧ್ಯತೆಗಳ 'ಕಾನೂರು ಹೆಗ್ಗಡಿತಿ'ಯ ಮಲೆನಾಡಿನ ಲೋಕಕ್ಕೆ ಪ್ರವೇಶಿಸ ಬಯಸುವವರಿಗೆ ಅಂದಿನ  ಜನರ ಸಹಜತೆಯ, ಸರಳತೆಯ, ಸುಂದರತೆಯ  ಒಂದು ಕಿರುನೋಟವನ್ನು ಒದಗಿಸುವುದು  ಈ ಮೇಲಿನ ಭಾಗಗಳನ್ನು  ಉಲ್ಲೇಖಿಸಿದ  ಉದ್ದೇಶವಾಗಿದೆ. ಇನ್ನು ಕಾದಂಬರಿಯನ್ನು ವಿಮರ್ಶೆಯ ಒರೆಗೆ ಹಚ್ಚಿ, ಇದನ್ನು ಮಹಿಳಾವಾದ, ವರ್ಣ ವಿಚಾರ, ವರ್ಗ ಸಂಘರ್ಷ ಇತ್ಯಾದಿ ಮಜಲುಗಳಿಂದ  ನೋಡುವುದೂ ಸಾಧ್ಯವಿದ್ದರೂ ಅದು ಈ ಬರಹದ ಉದ್ದೇಶವಲ್ಲ.

ಈಚೆಗೆ ನಮ್ಮ ಪತ್ರಿಕೆಗಳು, ಮಾಧ್ಯಮ, ಸಿನಿಮಾ, ಸಾಹಿತ್ಯ ಎಲ್ಲವೂ ನಗರಗಳಿಂದ ದೂರವಿರುವ ಬಹುಸಂಖ್ಯೆಯ ಜನರ ಜೀವನಶೈಲಿ, ಪರಂಪರೆ ಇವುಗಳನ್ನೆಲ್ಲ ಒಳಗೊಳ್ಳುವುದೇ ಇಲ್ಲ. ಮಾರುಕಟ್ಟೆ ಆಧಾರಿತ ಆದ್ಯತೆ ಇದಕ್ಕೆ ಕಾರಣ ಇರಬಹುದು. ಅದೇನೇ ಇರಲಿ ಆಧುನಿಕತೆಯು ನಮ್ಮದೇ ನಾಡಿನ ಒಂದು ಭಾಗದ ಜನಸಮೂಹದಲ್ಲಿ ತಂದ  ಬದಲಾವಣೆಯ ಚಿತ್ರಣವನ್ನು ಒದಗಿಸುವ 'ಕಾನೂರು ಹೆಗ್ಗಡಿತಿ' ಯಂತಹ ಕಾದಂಬರಿಗಳು ಇಂದಿಗೂ ಮುಖ್ಯ ಎಂಬುದು ನನ್ನ ನಂಬಿಕೆ.

1 comment :

MANJUNATH GADAG said...

Wonderful sir if you have outline story in English or Kannada plz let me know