Sunday, September 30, 2012

ಜೀಮೂತವಾಹನನ ಕಥೆ

ನನಗೆ ನೆನಪಿರುವಂತೆ ನಾನು ಓದಿದ ಮೊಟ್ಟ  ಮೊದಲ ಪುಸ್ತಕ "ಜೀಮೂತವಾಹನನ ಕಥೆ". ಅದೊಂದು ಅನನ್ಯ  ಅನುಭವ. ಇಷ್ಟು ವರ್ಷಗಳ ನಂತರವೂ ಆ  ಅನುಭವ ಕಣ್ಣಿಗೆ ಕಟ್ಟಿದಂತೆ ಉಳಿದಿದೆ.

ಆಗ ನಾನಿನ್ನೂ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿಯಲ್ಲಿದ್ದೆ. ನಮ್ಮ ಹಳ್ಳಿಯ ಪಕ್ಕದ ಹಳ್ಳಿಯಲ್ಲಿದ್ದ ಏಕ ಶಿಕ್ಷಕ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿದ್ದ ವಿದ್ಯಾರ್ಥಿಗಳು ಬರೀ ಆರು ಮಂದಿ. ಅಷ್ಟೇನೂ ಸೌಕರ್ಯಗಳಿರದಿದ್ದ ಆ ಶಾಲೆಯಲ್ಲಿ ಒಂದು ಕಬ್ಬಿಣದ ಪೆಟ್ಟಿಗೆಯಲ್ಲಿ ತುಂಬಿಸಿಟ್ಟಿದ್ದ ಅಮರಚಿತ್ರಕಥಾ  ಮಾಲಿಕೆಯ ಕೆಲವು ಕಾಮಿಕ್ಸ್ ಪುಸ್ತಕಗಳು ಮತ್ತು ಕೆಲವು ಮಕ್ಕಳ ಪುಸ್ತಕಗಳು ನನಗಂತೂ ಅಮೂಲ್ಯ ವಸ್ತುಗಳಾಗಿದ್ದವು.

ಮನೆಯಲ್ಲಿ ಮೊದಲಿನಿಂದಲೂ ದಿನ  ಪತ್ರಿಕೆ, ವಾರ ಪತ್ರಿಕೆ , ಕಾದಂಬರಿ ಮೊದಲಾದ ಓದಿನ ಪರಿಕರಗಳು ಕೈಗೆಟುಕುವಂತಿರುತ್ತಿದ್ದರಿಂದ ಸಹಜವಾಗಿಯೇ ಒಂದು ಬಗೆಯ ಕುತೂಹಲ ನನ್ನಲ್ಲಿತ್ತು. ನಾನು ನನ್ನ ಶಾಲೆಯಿದ್ದ ಹಳ್ಳಿಯಲ್ಲಿದ್ದ ನನ್ನ ಅಜ್ಜಿಯ ಮನೆಯಿಂದಲೇ ಶಾಲೆಗೆ  ಹೋಗುತ್ತಿದ್ದೆ. ಅದೊಂದು ದಿನ ಶಾಲೆಯಿಂದ "ಜೀಮೂತವಾಹನನ ಕಥೆ" ಪುಸ್ತಕ ಓದಲು ತಂದಿದ್ದೆ. ಅಂದು ಶುಕ್ರವಾರವಾಗಿದ್ದರಿಂದ ನಾನು ನಮ್ಮೂರಿಗೆ ಹೋಗಬೇಕಿತ್ತು. ಅದೇ ದಿನ ಭತ್ತ ತೆಗೆದುಕೊಂಡು ಹೋಗಲು ನಮ್ಮೂರಿಂದ ನಮ್ಮ ಮನೆಯ ಎತ್ತಿನ ಗಾಡಿ  ಬಂದಿದ್ದರಿಂದ ನಾನೂ ಅದೇ ಗಾಡಿಯಲ್ಲಿ ಹೋಗುವುದೆಂದು ನಿರ್ಧಾರವಾಯಿತು.

ಎತ್ತಿನ ಗಾಡಿಯಲ್ಲಿ ಕುಳಿತು ಪ್ರಯಾಣ ಮಾಡುತ್ತಾ ಹಳ್ಳಿಯ ಆ ಪ್ರಶಾಂತ ವಾತಾವರಣದಲ್ಲಿ ತನ್ಮಯತೆಯಿಂದ ಓದುತ್ತಾ ಹೋದಂತೆ "ಜೀಮೂತವಾಹನನ ಕಥೆ" ನನ್ನನ್ನು ಆವರಿಸಿದ ಪರಿ ನಿಜಕ್ಕೂ ಅದ್ಭುತ. ನಾನು ಎಂದೂ ಮರೆಯಲಾರದಂತಹುದು. ಮುಂದೆ ಬಾಳಿನುದ್ದಕ್ಕೂ ವಿವಿಧ ಪುಸ್ತಕಗಳು ವಿವಿಧ ರೀತಿ ಜೊತೆಯಾದದ್ದು, ಬೋಧಿಸಿದ್ದು, ರಂಜಿಸಿದ್ದು, ಪ್ರಚೋದಿಸಿದ್ದು - ಒಂದು ರೀತಿಯಲ್ಲಿ ಈ ಎಲ್ಲದರ ಉಗಮ ಬಹುಶಃ  ಅಂದು ಆ ಪುಸ್ತಕ ತಂದ ಅನಿರ್ವಚನೀಯ ಆನಂದ.

ಮೊನ್ನೆ ಕುತೂಹಲಕ್ಕೆ ಈ ಕಥೆಯ  ಕುರಿತು ಗೂಗಲ್ ಹುಡುಕಾಟ ನಡೆಸಿದಾಗ ತಿಳಿದುಬಂದದ್ದು -  ಇದೊಂದು ಬೌದ್ಧ  ಧರ್ಮದ ಐತಿಹ್ಯ ). ಬೌದ್ಧ ಧರ್ಮದ ಹಿನ್ನೆಲೆಯಿರುವ ಜಾತಕ, ಅವದಾನ ಕತೆಗಳ ಮೂಲವಿರುವಂತಹುದು. ಕ್ರಿ.ಶ. ಏಳನೇ ಶತಮಾನದಲ್ಲಿ ರಾಜ ಹರ್ಷದೇವ  ರಚಿಸಿದ "ನಾಗಾನಂದ" ನಾಟಕ ಹಾಗೂ  ಕ್ರಿ.ಶ. ಹನ್ನೊಂದರಲ್ಲಿ ಸೋಮಭಟ್ಟ ಎಂಬುವನು ಸಂಪಾದಿಸಿದ "ಕಥಾ ಸರಿತ್ಸಾಗರ" ಇವೆರಡೂ ಕೃತಿಗಳಲ್ಲಿಯೂ "ಜೀಮೂತವಾಹನನ ಕಥೆ" ಯ ಉಲ್ಲೇಖ ಇದೆ. ಇದಕ್ಕೂ ಮೊದಲೇ ಕ್ರಿ.ಪೂ. ಐದನೇ ಶತಮಾನದ ಉರಗ ಜಾತಕದ ಸಮಯದಿಂದ ಕ್ರಿ. ಶ. ಒಂದನೇ ಶತಮಾನದಲ್ಲಿ ಗುಣಾಡ್ಯ ಎಂಬುವನು ಸಂಪಾದಿಸಿದ  ಬೃಹತ್ಕಥ ದವರೆಗಿನ ಅವಧಿಯಲ್ಲಿ  ಜೀಮೂತವಾಹನನ ಕಥೆ ರೂಪುಗೊಂಡಿರಬೇಕೆಂದು ಹೇಳಲಾಗುತ್ತದೆ.

ಅಂತೂ, ಬುದ್ಧನ ಕಾಲದ ಒಂದು ಕಥೆ ಪಾಳಿ  ಭಾಷೆಯಿಂದ ಸಂಸ್ಕೃತಕ್ಕೆ ಬಂದು ಅಲ್ಲಿಂದ ಕನ್ನಡವನ್ನು ತಲುಪಿ ಮಲೆನಾಡಿನ ಮೂಲೆಯೊಂದರಲ್ಲಿನ ಹಳ್ಳಿ ಶಾಲೆಯ ಹುಡುಗನನ್ನು ಕಾಡಿದ್ದು ಹೀಗೆ. ಇಂದಿನ ಅಂತರ್ಜಾಲದ ಯುಗದಲ್ಲಿ ಎಲ್ಲ ಸಾಹಿತ್ಯ ಕೃತಿಗಳ, ಹಾಗೆಯೇ ವಿಮರ್ಶೆಗಳ ಸಂವಹನ ಸುಲಭ ಸಾಧ್ಯವಾಗಿದ್ದರೂ, ಮಕ್ಕಳ ಸಾಹಿತ್ಯದ ದೃಷ್ಟಿಯಿಂದ ನೋಡಿದರೆ  ಪೋಗೋ, ಕಾರ್ಟೂನ್ ನೆಟ್ ವರ್ಕ್ ಗಳ ಆರ್ಭಟ ದಲ್ಲಿ ಜೀಮೂತವಾಹನ ಕಣ್ಮರೆಯಾಗುವ ಸಾಧ್ಯತೆ ಇದೆ. ನನ್ನ ಮಗಳನ್ನು "ಜೀಮೂತವಾಹನನ" ಬಗ್ಗೆ ಕೇಳಿದೆ. ಈಗ ಐದನೇ ತರಗತಿಯಲ್ಲಿರುವ ಅವಳು "ಜಾತಕ ಕತೆಗಳು" ಪುಸ್ತಕ ತನ್ನಲ್ಲಿರುವುದಾಗಿಯೂ ಅದರಲ್ಲಿ ಬೋಧಿಸತ್ತ್ವನ ಕತೆಗಳನ್ನು ತಾನು ಓದಿರುವುದಾಗಿಯೂ ಹೇಳಿದಳು. ಆದರೆ ಜೀಮೂತವಾಹನನ ಬಗ್ಗೆ ಅವಳು ತಿಳಿದಿರಲಿಲ್ಲ. ಆದರೂ, ಇಪ್ಪತ್ತೈದು  ಶತಮಾನಗಳನ್ನು ದಾಟಿ ಬಂದಿರುವ ಜೀಮೂತವಾಹನ ಸುಲಭವಾಗಿ ಮರೆಯಾಗುವುದಿಲ್ಲ ಎಂಬ ನಂಬಿಕೆ ನನ್ನದು.

 ಇಷ್ಟೆಲ್ಲಾ ಹೇಳಿದ ಮೇಲೆ ಸಂಕ್ಷೇಪವಾಗಿ ಜೀಮೂತವಾಹನನ ಕಥೆಯನ್ನೂ ಹೇಳಬಹುದೇನೋ- 

ವಿದ್ಯಾಧರ ಎಂಬ ರಾಜ್ಯದ ಅರಸು ಜೀಮೂತಕೇತು ಎಂಬುವನು ತನಗೆ ವಯಸ್ಸಾದ ಮೇಲೆ ತನ್ನ ರಾಜ್ಯದ ರಾಜ್ಯಭಾರವನ್ನು ತನ್ನ ಮಗ ಜೀಮೂತವಾಹನನಿಗೆ ವಹಿಸಿ ವಾನಪ್ರಸ್ಥಾಶ್ರಮಕ್ಕೆ ತೆರಳುತ್ತಾನೆ. ಆದರೆ ತನ್ನ ತಂದೆ ಕಾಡಿನಲ್ಲಿ ಕಷ್ಟಪಡಬಾರದೆಂದು ಅವನಿಗೆ ಸೂಕ್ತವಾದ ವ್ಯವಸ್ಥೆ ಮಾಡುವ ಸಲುವಾಗಿ ಜೀ.ವಾ. ಸಹ ಕಾಡಿಗೆ ಹೋಗುತ್ತಾನೆ. ಸ್ಥಳವನ್ನು ಹುಡುಕುತ್ತಾ ಮಲಯ ಪರ್ವತ ಎಂಬಲ್ಲಿಗೆ ಬರುತ್ತಾನೆ. ಸಿದ್ಧ ರಾಜ್ಯದ ರಾಜ ವಿಶ್ವವಸು ಎಂಬುವನ ಮಗಳು ಮಲಯವತಿ ಅಲ್ಲಿ ದೇವಸ್ಥಾನವೊಂದರಲ್ಲಿ ದೇವತೆ ಗೌರಿಯ ತಪಸ್ಸಿನಲ್ಲಿ ನಿರತಳಾಗಿರುತ್ತಾಳೆ.

ಗೌರಿಯು ಅವಳಿಗೆ ವಿದ್ಯಾಧರ ರಾಜ್ಯದ ರಾಜಕುಮಾರನೊಂದಿಗೆ ನಿನ್ನ ಮದುವೆಯಾಗುತ್ತದೆಂದು ವರ ಕೊಡುವುದನ್ನು ಜೀ. ವಾ. ಕೇಳಿಸಿಕೊಳ್ಳುತ್ತಾನೆ.  ನಂತರ ಜೀ.ವಾ. ಮತ್ತು ಮಲಯವತಿ ಪರಸ್ಪರ ಪ್ರೀತಿಸುತ್ತಾರೆ. ಅವರಿಬ್ಬರೂ ಮಾತನಾಡುತ್ತಿರುವಾಗ ಋಷಿಯೊಬ್ಬರು ಅಲ್ಲಿಗೆ ಬರುವುದರಿಂದ ಪ್ರೇಮಿಗಳು ಪರಸ್ಪರ ದೂರವಾಗಬೇಕಾಗುತ್ತದೆ. ಮುಂದೆ ಮಲಯವತಿಯ ಸಹೋದರ ಮಿತ್ರವಸುವಿಗೆ ಜೀ. ವಾ. ನ ಪರಿಚಯವಾಗುತ್ತದೆ. ತನ್ನ ಸಹೋದರಿ ಜೀ.ವಾ.ನನ್ನು ಇಷ್ಟಪಟ್ಟಿರುವುದು ತಿಳಿದು ಮಿತ್ರವಸು ಜೀ.ವಾ. ನೊಂದಿಗೆ ಅವಳ ವಿವಾಹದ ಪ್ರಸ್ತಾಪವನ್ನು ಮಾಡುತ್ತಾನೆ. ಆದರೆ ಮಲಯವತಿ ಮಿತ್ರವಸುವಿನ ಸಹೋದರಿ ಎಂದು ಅರಿಯದ ಜೀ. ವಾ. ಪ್ರಸ್ತಾಪವನ್ನು ತಿರಸ್ಕರಿಸುತ್ತಾನೆ. ಇದರಿಂದ ಬಹಳ ನೊಂದ ಮಲಯವತಿ ಆತ್ಮಹತ್ಯೆಗೆ ನಿರ್ಧರಿಸುತ್ತಾಳೆ. ಇದನ್ನು ಜೀ. ವಾ. ತಡೆಯುತ್ತಾನೆ ಹಾಗೂ ಅವಳಿಗೆ ತನ್ನ ಅಚಲ ಪ್ರೇಮದ ಭರವಸೆ ನೀಡುತ್ತಾನೆ. ಕಡೆಗೆ ಗೊಂದಲಗಳು ಪರಿಹಾರವಾಗಿ ಇಬ್ಬರೂ ವಿವಾಹವಾಗುತ್ತಾರೆ.

ಮುಂದೆ ಜೀ.ವಾ. ಮತ್ತು ಮಿತ್ರವಸು ಸಮುದ್ರ ತೀರದಲ್ಲ್ಲಿ ಸಂಚರಿಸುತ್ತಿರುವಾಗ ಅನೇಕ ಸರ್ಪಗಳ ಮೂಳೆಗಳನ್ನು ಕಾಣುತ್ತಾರೆ. ಏನೆಂದು ವಿಚಾರಿಸುವಾಗ ಪ್ರತಿ ದಿನವೂ ಗರುಡನಿಗೆ ಒಂದು ನಾಗನ ಬಲಿ ಕೊಡಬೇಕಾಗಿರುತ್ತದೆ. ಅಂದು ಬಲಿಯಾಗಬೇಕಾಗಿದ್ದ ನಾಗ ಶಂಖಚೂಡನ ತಾಯಿ ರೋಧಿಸುತ್ತಿರುತ್ತಾಳೆ. ಇದನ್ನು ಕಂಡ ಜೀ. ವಾ.ನು ಶಂಖಚೂಡನ ಜಾಗದಲ್ಲಿ ತಾನೇ ಹೋಗಿ ಕುಳಿತುಕೊಳ್ಳುತ್ತಾನೆ. ಗರುಡನು ತನ್ನ ಕೊಕ್ಕಿನಿಂದ ಜೀ. ವಾ. ನನ್ನು ಮಲಯ ಪರ್ವತಕ್ಕೆ ಎತ್ತೊಯ್ದು ತಿನ್ನಲು ಆರಂಭಿಸುತ್ತಾನೆ. ಜೀ. ವಾ. ತಿರುಗಿ ಬರದಾಗ ತೀವ್ರ ಕಳವಳಕ್ಕೊಳಗಾಗುವ ಜೀಮೂತಕೇತು ಹಾಗೂ ವಿಶ್ವವಸು,  ಜೀ. ವಾ. ನ ರಕ್ತಸಿಕ್ತ  ಚೂಡಾಮಣಿ ಸಿಕ್ಕಾಗ ಅವನನ್ನು ಹುಡುಕಲು ಹೊರಡುತ್ತಾರೆ.  ಅಷ್ಟರಲ್ಲೇ ನಾಗ ಶಂಖಚೂಡನಿಂದ  ವಿಷಯ ತಿಳಿದು ಮಲಯ ಪರ್ವತಕ್ಕೆ ಹೋಗುತ್ತಾರೆ. ಶಂಖಚೂಡನು ಗರುಡನಿಗೆ ಓರ್ವ ಮುಗ್ಧ ದಯಾಳುವಾದ ವ್ಯಕ್ತಿಯನ್ನು ನೀನು ಬಲಿ ತೆಗೆದುಕೊಂಡಿರುವೆ ಎಂದು ಹೇಳುತ್ತಾನೆ. ಇದರಿಂದ ಗರುಡನಿಗೂ ಪಶ್ಚಾತ್ತಾಪವಾಗುತ್ತದೆ. ಇದೇ ವೇಳೆ ಜೀಮೂತಕೇತು ಹಾಗೂ ವಿಶ್ವವಸು ಇತ್ಯಾದಿ ಜೀ. ವಾ. ನ ಹತ್ತಿರದವರು ಆತ್ಮಹತ್ಯೆಗೆ  ನಿರ್ಧರಿಸುತ್ತಾರೆ.

ಇಷ್ಟೆಲ್ಲಾ ಆಗುವಷ್ಟರಲ್ಲಿ ಗೌರಿ ಪ್ರತ್ಯಕ್ಷಳಾಗಿ ತನ್ನ ದೈವಶಕ್ತಿಯಿಂದ ಜೀ.ವಾ.ನನ್ನು ಮತ್ತೆ ಬದುಕಿಸುತ್ತಾಳೆ. ಗರುಡನಿಂದ ಹತವಾದ ನಾಗಗಳನ್ನೂ ಸಹ ಬದುಕಿಸುತ್ತಾಳೆ. ಗರುಡನು ತಾನು ಇನ್ನು ಮುಂದೆ ನಾಗಗಳನ್ನು ಬಲಿ  ತೆಗೆದುಕೊಳ್ಳುವುದಿಲ್ಲವೆಂದು ಪ್ರತಿಜ್ಞೆ ಮಾಡುತ್ತಾನೆ. ಗೌರಿಯು ಜೀ.ವಾ. ನನ್ನು ವಿದ್ಯಾಧರ ರಾಜ್ಯದ ದೊರೆಯೆಂದು ಘೋಷಿಸುತ್ತಾಳೆ.

ಬೌದ್ಧ ಧರ್ಮದ ಹಿನ್ನೆಲೆ ಈ ಕಥೆಗೆ ಇರುವ ವಿಚಾರ ನನಗೆ ತಿಳಿದಿರಲಿಲ್ಲ. ಬೋಧಿಸತ್ತ್ವ ಎಂದರೆ ಬುದ್ಧನಾಗುವ ಮೊದಲು ತಾಳಬೇಕಾದ ಕಡೆಯ ಜನ್ಮವೆಂದೂ, ಬೋಧಿಸತ್ತ್ವನು ಅನೇಕ ಜನ್ಮಗಳಲ್ಲಿ ನಡೆಸುವ ಕರ್ಮಗಳು  ಬುದ್ಧನಾಗುವ ಮಾರ್ಗದಲ್ಲಿ ಇಡುವ ಒಂದೊಂದೇ ಹೆಜ್ಜೆಗಳೆಂದೂ, ಇಂತಹ ಹೆಜ್ಜೆಗಳನ್ನು  ಪರಿಚಯಿಸುವುದೇ ಜಾತಕ ಕತೆಗಳ ಉದ್ದೇಶವೆಂದೂ  ನನಗಾಗ ಅಂದರೆ ಜೀ.ವಾ. ನ ಕಥೆ ಓದುವ ಸಮಯದಲ್ಲಿ ತಿಳಿದಿರಲಿಲ್ಲ. ಹಾಗೆಯೇ ಅವದಾನವೆಂದರೆ ಯಾವುದೇ ವ್ಯಕ್ತಿ ಬುದ್ಧನ ಹೆಸರಿನಲ್ಲಿ ತನ್ನ ಜೀವನದಲ್ಲಿ ಕೈಗೊಳ್ಳುವ ಧಾರ್ಮಿಕ /ನೈತಿಕ ಘನಕಾರ್ಯ.  ಅಂತಹ ಕಾರ್ಯವು ಯಾವುದೋ ತ್ಯಾಗವೋ , ಇಲ್ಲವೇ ಯಾವುದೋ ಸ್ಥೂಪ ಇತ್ಯಾದಿಗಳ ನಿರ್ಮಾಣವೋ, ಪೂಜಾ ಕಾರ್ಯಗಳೋ  ಇರಬಹುದು. ಇಂತಹವುಗಳ ಅಭಿವ್ಯಕ್ತಿ ಅವದಾನ ಕಥೆಗಳಲ್ಲಿರುತ್ತದೆ. ಕಪ್ಪು ಕೃತ್ಯಗಳ ಫಲ ಕಪ್ಪೆಂದೂ ಶ್ವೇತ ಕೃತ್ಯಗಳ ಫಲ ಶ್ವೇತವೆಂದೂ ಸಾರುವುದು ಈ ಅವದಾನ ಕಥೆಗಳ ಉದ್ದೇಶ. ಅದಕ್ಕೆಂದೇ ಈ ಕಥೆಗಳನ್ನು ಬೌದ್ಧ ಧರ್ಮದಲ್ಲಿ  ಕರ್ಮ ("ಕಮ್ಮ") ಕಥೆಗಳೆಂದು  ಕರೆಯುತ್ತಾರೆ.

ಬಾಲ್ಯದಲ್ಲಿ ಮೆಚ್ಚಿದ ಕಥೆಯೊಂದರ ಬೆನ್ನು ಹತ್ತಿದಾಗ ಇಷ್ಟೆಲ್ಲಾ ವಿಷಯ ತಿಳಿದು ಬಂತು. ಹಾಗೆ ಭಾರತೀಯ ಸಂಸ್ಕೃತಿಯಲ್ಲಿ ನೀತಿ ಕತೆಗಳ ದೊಡ್ಡ ಭಂಡಾರವೇ ಇದೆ. ನಮ್ಮ ಬಾಲ್ಯಕಾಲದಲ್ಲಂತೂ ಇಂತಹ ಕತೆಗಳು ನಿತ್ಯ ಜೀವನದ ಅಂಗವೇ ಆಗಿದ್ದವು. ಈ ಕತೆಗಳ ಧಾರ್ಮಿಕ ಆಯಾಮ ಏನೇ ಇರಲಿ, ಕಲ್ಪನೆಯ ದೃಷ್ಟಿಯಿಂದ, ಹಾಗೂ ಅವುಗಳು ಒಳಗೊಳ್ಳುವ ಸರಳ ಸಾರ್ವಕಾಲಿಕ  ಸತ್ಯಗಳ ದೃಷ್ಟಿಯಿಂದ ಇಂತಹ ಕತೆಗಳು ಇಂದಿಗೂ ಪ್ರಸ್ತುತವೇ.

"ಜೀಮೂತವಾಹನನ ಕಥೆ" ಯ ಬಗ್ಗೆ ಇನ್ನಷ್ಟು ತಿಳಿಯುವ ಕುತೂಹಲ ಇದ್ದರೆ, ಕೆಳಕಂಡ ಕೊಂಡಿಯನ್ನು ಕ್ಲಿಕ್ಕಿಸಿ-
http://goo.gl/0Rhah

5 comments :

Vijaya said...
This comment has been removed by the author.
Vijaya said...

srinath , ನೀವು ಬರೆಯುವ ಶೈಲಿ ನಿರರ್ಗಳ ವಾದುದು .
ಓದುಗರನ್ನು ಸೆಳೆಯುತ್ತದೆ !!

Unknown said...
This comment has been removed by the author.
Manu M P said...

ನಿಜವಾಗಿಯೂ ಬಹಳ ಅದ್ಭುತ ಬರವಣಿಗೆ,..
ಪ್ರತಿಯೊಬ್ಬರಿಗೂ ಬಾಲ್ಯದ ಜೀವನವನ್ನುನೆನಪಿಸುತ್ತದೆ. ನನಗೆ ನಿಮ್ಮ ಪರಿಚಯ ಕೇವಲ ಒಂದು ಗಂಟೆ ಅಷ್ಟೇ.ಬರವಣಿಗೆಯಲ್ಲಿ ಮಾತ್ರವಲ್ಲದೆ ನಿಮ್ಮಲ್ಲಿ ಇರುವಂತಹ ಒಂದು ಉತ್ತಮ ಪ್ರತಿಭೆ ಮತ್ತು ನಿಮ್ಮಿಂದ ಕಲಿಯುವಂಥದ್ದುತುಂಬಾ ಇದೆ..
ನಿಜವಾಗಿಯೂ ನಮ್ಮ ನರಸಿಂಹರಾಜಪುರದ ಹೆಮ್ಮೆಯ ಪುತ್ರ ಎಂದು ಅಭಿಮಾನದಿಂದ ಹೇಳಿಕೊಳ್ಳಲು ತುಂಬಾ ಹೆಮ್ಮೆ ಎನಿಸುತ್ತದೆ.
ಧನ್ಯವಾದಗಳು ಸರ್..

ನಿನಾದ said...

ಸರಳವಾದ ಸ್ಪಷ್ಟವಾದ ವಸ್ತುನಿಷ್ಠ ಬರಹ. ಜಿಮೂತವಾಹನನ ಬಗ್ಗೆ ಉತ್ತಮ ವಿಚಾರಗಳನ್ನು ತಿಳಿಸಿರುವಿರಿ ಸರ್. ಧನ್ಯವಾದಗಳು