Wednesday, December 26, 2012

ನನ್ನ ತೇಜಸ್ವಿ

ರಾಜೇಶ್ವರಿ ತೇಜಸ್ವಿಯವರು ಬರೆದಿರುವ "ನನ್ನ ತೇಜಸ್ವಿ" ಪುಸ್ತಕ ಓದಿ ಮುಗಿಸುವಾಗ ಕನ್ನಡದ ಹೆಸರಾಂತ ಬರಹಗಾರ ಪೂರ್ಣಚಂದ್ರ ತೇಜಸ್ವಿ(೧೯೩೮-೨೦೦೭) ಯವರ ಬದುಕು ವ್ಯಕ್ತಿತ್ವಗಳ ಒಂದು ಆತ್ಮೀಯ ಪರಿಚಯದ ಅನುಭವವಾಗುತ್ತದೆ. ತೇಜಸ್ವಿಯವರ ಬಗ್ಗೆ, ಅವರ ವಿಶಿಷ್ಟ ಸ್ವಭಾವದ ಬಗ್ಗೆ ಮೊದಲೇ ಸಾಕಷ್ಟು ಕೇಳಿರುವವರಿಗೂ ಈ ಪುಸ್ತಕ ಹಲವು ಹೊಸ ಮಾಹಿತಿ ಸಂಗತಿಗಳನ್ನು ಒದಗಿಸುತ್ತದೆ. ಮೈಸೂರು ಮಾನಸಗಂಗೋತ್ರಿಯಲ್ಲಿ ಸ್ನಾತಕೋತ್ತರ ತರಗತಿಯಲ್ಲಿ ಅವರ ಸಹ ಶಿಕ್ಷಣಾರ್ಥಿಯಾಗಿ, ಸ್ನೇಹಿತೆಯಾಗಿ, ನಂತರದಲ್ಲಿ ಅವರ ಮಡದಿಯಾಗಿ ಅವರೊಂದಿಗಿನ ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ಸಾಂಗತ್ಯದ ಅನುಭವವನ್ನು ರಾಜೇಶ್ವರಿಯವರು ಈ ಪುಸ್ತಕದ ಮೂಲಕ ಕನ್ನಡದ ಓದುಗರೊಂದಿಗೆ ಹಂಚಿಕೊಂಡಿರುವ ಬಗೆ ಅನನ್ಯ.

ನಾನು ಮೊದಲನೇ ಸಲ ತೇಜಸ್ವಿಯವರ ಬಗ್ಗೆ ಕೇಳಿದ್ದು ಎಂಬತ್ತರ ದಶಕದಲ್ಲಿ ಪ್ರಕಟವಾದ ಅವರ ಕಾದಂಬರಿ "ಕರ್ವಾಲೋ" ದ ಲೇಖಕರೆಂದು. ನನ್ನದೇ ಜಿಲ್ಲೆಯ ಮೂಡಿಗೆರೆ ಈ ಕೃತಿಯ ಕೇಂದ್ರಸ್ಥಳ. "ಕರ್ವಾಲೋ" ಬಹಳ ಇಷ್ಟವಾಗಿದ್ದು ತೇಜಸ್ವಿಯವರ ಅತ್ಯಂತ ಸ್ವಾರಸ್ಯಪೂರ್ಣ ಬರವಣಿಗೆಯ ಶೈಲಿಯಿಂದ. ಕಾದಂಬರಿಕಾರನೇ ನಿರೂಪಕನಾಗಿರುವ ಈ ಕಾದಂಬರಿಯ ಒಂದೊಂದು ಪಾತ್ರವೂ ನೆನಪಿನಲ್ಲುಳಿಯುವಂತಹವು. ಪ್ಯಾರ, ಮಂದಣ್ಣ, ಕರ್ವಾಲೋ, ಕರಿಯಪ್ಪ, ಯಂಗ್ಟ, ಇವರೆಲ್ಲ ಇಂದಿಗೂ ನೆನಪಿನಲ್ಲಿದ್ದಾರೆ- ಬಾಲ್ಯಕಾಲದ ಊರ ಮಂದಿಯಂತೆ. ಈ ಕಾದಂಬರಿಯನ್ನು ಮುಂದೆ ಹಲವು ವರುಷಗಳ ನಂತರ ಮತ್ತೆ ಓದುವಾಗ ಮೊದಲನೇ ಓದಿನಲ್ಲಿ ಗ್ರಹಿಕೆಗೆ ಬಂದಿರದ ಇನ್ನೊಂದಿಷ್ಟು ಅರ್ಥವೂ ಹೊಳೆದಿದ್ದು ಸತ್ಯ. ಆದರೆ ಸುಮಾರು ಮೂವತ್ತು ವರುಷಗಳ ಹಿಂದಿನ ಆ ಮೊದಲ ಓದಿನಲ್ಲಿಯೂ, ಅನುಭವಗಳನ್ನು ಪದಗಳಲ್ಲಿ ಅದ್ಭುತವಾಗಿ ಹಿಡಿದಿಡುವ ಕಲೆ ವಿಸ್ಮಯಗೊಳಿಸಿದ್ದು ಇಂದಿಗೂ ನೆನಪಿದೆ. ಪಾತ್ರಗಳೂ ಸುತ್ತಮುತ್ತಲೆಲ್ಲ ಕಾಣಬಲ್ಲಂತಹವರವೇ ಆಗಿದ್ದರೂ ತಮ್ಮ ತಿಳಿಹಾಸ್ಯದ ಶೈಲಿಯಲ್ಲಿ ತೇಜಸ್ವಿ ಅವರನ್ನು ಚಿತ್ರಿಸುವ ರೀತಿ "ಕರ್ವಾಲೋ" ಕಾದಂಬರಿಯನ್ನು ಎಂದೆಂದಿಗೂ ನೆನಪಿನಲ್ಲುಳಿಯುವ ಕೃತಿಯನ್ನಾಗಿಸುತ್ತದೆ. ತೇಜಸ್ವಿಯವರ ಹಲವಾರು ಕೃತಿಗಳಲ್ಲಿ ಕಾಣಬರುವ ಒಂದು ಸಾಮಾನ್ಯ ಎಳೆಯೆಂದರೆ ಪ್ರಕೃತಿ ಮತ್ತು ಮನುಷ್ಯನ ಸಂಬಂಧ. "ನಿಗೂಢ ಮನುಷ್ಯರು", "ಪರಿಸರದ ಕತೆಗಳು", "ಜುಗಾರಿ ಕ್ರಾಸ್", ಹೀಗೇ ಪ್ರಕೃತಿ ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಬರುವ ಒಂದು ಬಹುಮುಖ್ಯ ಪಾತ್ರವೇ ಆಗಿಬಿಡುತ್ತದೆ.

ತೇಜಸ್ವಿಯವರ ವೈಯಕ್ತಿಕ ಜೀವನ, ಸ್ವಭಾವಗಳ ಬಗ್ಗೆ ತಿಳಿಯುವ ಕುತೂಹಲ ಅವರ ಓದುಗರಲ್ಲಿರುವುದು ಸಹಜವೇ. ಕನ್ನಡದ ಇತರ ಹಲವರು ಪ್ರಖ್ಯಾತ ಸಾಹಿತಿಗಳಂತೆ ತೇಜಸ್ವಿಯವರು ಆತ್ಮ ಕಥೆ ಬರೆಯಲಿಲ್ಲವಾದ್ದರಿಂದ ಅವರ ಜೀವನದ ಕೆಲವು ಕಾಲಘಟ್ಟಗಳ ವಿವರಗಳು ಅಸ್ಪಷ್ಟವಾಗಿಯೇ ಉಳಿದಿದ್ದವು. "ಅಣ್ಣನ ನೆನಪು" ಎಂಬ ತೇಜಸ್ವಿಯವರ ಪುಸ್ತಕ ತಮ್ಮ ತಂದೆ ಕುವೆಂಪು ಅವರ ನೆನಪುಗಳ ಕುರಿತದ್ದಾದರೂ ಅದರಲ್ಲಿ ತೇಜಸ್ವಿಯವರ ಬಾಲ್ಯ, ಯೌವನಗಳ ಚಿತ್ರವೂ ಸಾಕಷ್ಟು ಸಿಗುತ್ತದೆ. ಇದೀಗ ಕಳೆದ ವರ್ಷ ಪ್ರಕಟವಾಗಿರುವ "ನನ್ನ ತೇಜಸ್ವಿ" ವಯಸ್ಕ ತೇಜಸ್ವಿ ಜೀವನದ ಹಲವಾರು ವಿವರಗಳನ್ನು ಒದಗಿಸುತ್ತದೆ.

ಪುಸ್ತಕದ ಮೊದಲಾರ್ಧದಲ್ಲಿ, ತೇಜಸ್ವಿಯವರು ತಮ್ಮ ಪ್ರೀತಿಯ "ರಾಜೇಶ್" (ರಾಜೇಶ್ವರಿ)ಗೆ ಬರೆದ ಅನೇಕ ಪತ್ರಗಳನ್ನು ಲೇಖಕಿಯವರು ಯಥಾವತ್ತಾಗಿ, ಕೆಲವೆಡೆ ತೇಜಸ್ವಿಯವರದೇ ಹಸ್ತಾಕ್ಷರದಲ್ಲಿ ಪ್ರಕಟಿಸಿರುವುದು ವಿಶೇಷ, ಹಾಗೆಯೇ ಈ ಪತ್ರಗಳು ಪುಸ್ತಕದ ಸ್ವಾರಸ್ಯವನ್ನು ಹೆಚ್ಚಿಸಿರುವುದರಲ್ಲಿ ಸಂಶಯವಿಲ್ಲ. ಮೈಸೂರಿನಲ್ಲಿ ಪರೀಕ್ಷೆಗಳನ್ನು ಮುಗಿಸಿ ಚಿಕ್ಕಮಗಳೂರಿನ ಭೂತನಕಾಡುವಿನಲ್ಲಿ ಅಣ್ಣನ ಮನೆಯಲ್ಲಿದ್ದ ತಮ್ಮ ಪ್ರಿಯತಮೆ ರಾಜೇಶ್ವರಿಯವರಿಗೆ, ಇನ್ನೂ ಮೈಸೂರಿನಲ್ಲಿಯೇ ಇದ್ದು ಭವಿಷ್ಯದ ಯೋಜನೆಯ ವಿಚಾರದಲ್ಲಿ ತಳಮಳದಲ್ಲಿದ್ದ ತೇಜಸ್ವಿಯವರು ಬರೆದ ಹಲವಾರು ಪತ್ರಗಳು ಕೇವಲ ತೇಜಸ್ವಿ ಬರೆಯಬಹುದಾದ ಶೈಲಿಯವು. ಒರಟೊರಟಾಗಿ ಆದರೂ ಪ್ರಾಮಾಣಿಕವಾಗಿ, ಬಯ್ಯುತ್ತ ಆದರೂ ಪುಟಪುಟದಲ್ಲೂ ಪ್ರೀತಿ ಚಿಮ್ಮಿಸುತ್ತಾ, ಒಮ್ಮೆ ದಾರ್ಶನಿಕನಂತೆ ಇನ್ನೊಮ್ಮೆ ಹುಚ್ಚು ಪ್ರೇಮಿಯಂತೆ, ಹೀಗೆ ಹರಯದ ತೀವ್ರ ಸಂವೇದನೆಗಳನ್ನು ಅತ್ಯಂತ ಪ್ರತಿಭಾವಂತ ಲೇಖಕನೊಬ್ಬ ಅಭಿವ್ಯಕ್ತಿಸಿದ್ದನ್ನು ಓದುವ ಅಪರೂಪದ ಅವಕಾಶ ಓದುಗರಿಗೆ. ಸಹಸ್ರಾರು ಅಭಿಮಾನಿ ಓದುಗರು ರಾಜೇಶ್ವರಿಯವರಿಗೆ thanks ಹೇಳಬೇಕು. ತಮ್ಮ ಮೆಚ್ಚಿನ ಲೇಖಕನ ತುಮುಲ, ತಳಮಳ, ಅಕ್ಕರೆ, ಒಲವು, ಕಾತರ, ಉದ್ವೇಗ, ಉನ್ಮಾದ, ಎಲ್ಲವನ್ನೂ ಒಳಗೊಂಡ ಪ್ರೀತಿಯ ಓಲೆಗಳನ್ನು ಹಂಚಿಕೊಂಡದ್ದಕ್ಕೆ. ಹಾಗೂ ತೇಜಸ್ವಿಯವರಂತಹ ವಿಶಿಷ್ಟ ವ್ಯಕ್ತಿಯ ಪ್ರೀತಿಯ, ಸ್ಫೂರ್ತಿಯ "ರಾಜೇಶ್" ಆಗಿದ್ದಕ್ಕೆ.

ಇದೇ ಪತ್ರಗಳಲ್ಲೇ ತೇಜಸ್ವಿಯವರ ಸ್ವತಂತ್ರ, ನಿರಂಕುಶ ವ್ಯಕ್ತಿತ್ವದ ಚಿತ್ರವೂ ಸಿಗುತ್ತದೆ. ಜೀವನ ವೃತ್ತಿಗಾಗಿ ಯಾರದೇ ಹಣಕಾಸು ಸಹಾಯವನ್ನೂ ಬಯಸದ ತೇಜಸ್ವಿ, ತಾವೇ ಒಂದು ಮುದ್ರಣ ಯಂತ್ರವನ್ನು ಖರೀದಿಸಿ ಕನ್ನಡಕ್ಕಾಗಿ ಒಂದು ಉತ್ತಮ ನಿಯತಕಾಲಿಕವನ್ನು ತರುವ ಪ್ರಯತ್ನ ಮಾಡುತ್ತಾರೆ. ಅದು ಯಶಸ್ವಿಯಾಗದಾಗ ವ್ಯವಸಾಯಗಾರ ಅಥವಾ ತೋಟಗಾರನಾಗಿ ತಮ್ಮ ವಿರಾಮ ಕಾಲವನ್ನು ಓದಲು ಬರೆಯಲು ಬಳಸಲು ನಿರ್ಧರಿಸುತ್ತಾರೆ. ಆದರೆ ತೋಟಗಾರನಾಗಿ ಒಂದು ನೆಲೆ ಕಂಡುಕೊಳ್ಳಲು ತೇಜಸ್ವಿಯವರಿಗೆ ಐದಾರು ವರುಷಗಳೇ ಹಿಡಿಯುತ್ತವೆ. ಈ ಅವಧಿಯಲ್ಲಿ ತೇಜಸ್ವಿ ಹಾಗೂ ರಾಜೇಶ್ವರಿಯವರು ಪರಸ್ಪರರಿಗೆ ಬರೆದುಕೊಳ್ಳುವ ಪತ್ರಗಳು ಈ ಇಬ್ಬರ ಗಟ್ಟಿ ವ್ಯಕ್ತಿತ್ವಗಳಿಗೆ ಸಾಕ್ಷಿ. ಬೇರೆ ಬೇರೆ ಜಾತಿಯವರಾದರೂ ಪ್ರೀತಿಸಿ, ಎದುರಾದ ಸವಾಲುಗಳನ್ನೆದುರಿಸಿ ತಮ್ಮ ಕನಸಿನ ಜೀವನವನ್ನು ಕಟ್ಟಿಕೊಳ್ಳುವಲ್ಲಿ ಇಬ್ಬರೂ ಅನುಭವಿಸಿದ ಮಾನಸಿಕ ಯಾತನೆ, ಅಗಲಿಕೆಯ ವೇದನೆ ಪತ್ರಗಳಲ್ಲಿ ವ್ಯಕ್ತವಾಗುತ್ತವೆ. ಕೊನೆಗೂ ತೇಜಸ್ವಿಯವರು "ಚಿತ್ರಕೂಟ" ವೆಂಬ ತಮ್ಮದೇ ಆದ ತೋಟ, ತೋಟದ ಮಧ್ಯದಲ್ಲೊಂದು ಪುಟ್ಟ ಮನೆ ಇವನ್ನು ಹೊಂದಿಸಿಕೊಂಡ ಮೇಲೆ ವಿವಾಹದ ವಿಚಾರಕ್ಕೆ ಮುಂದಾಗುತ್ತಾರೆ. ಕುವೆಂಪು ಅವರೇ ಬೋಧಿಸಿದ "ಮಂತ್ರ-ಮಾಂಗಲ್ಯ"ದ ದೀಕ್ಷೆಯೊಂದಿಗೆ ಮದುವೆಯಾಗುತ್ತದೆ. ನಂತರದಲ್ಲಿ ಅವರ ಹಲವರು ಗೆಳೆಯರೂ ಮಂತ್ರ-ಮಾಂಗಲ್ಯದ ವಿವಾಹವನ್ನೇ ಆರಿಸಿಕೊಳ್ಳುತ್ತಾರೆ.

ತೇಜಸ್ವಿಯವರ ವೈವಿಧ್ಯಮಯ ಆಸಕ್ತಿ, ಹವ್ಯಾಸಗಳ ಬಗೆಗೂ ಪುಸ್ತಕದಲ್ಲಿ ಪ್ರಸ್ತಾಪವಿದೆ. ಅವರ ಛಾಯಾಚಿತ್ರಗ್ರಹಣ ಹವ್ಯಾಸ, ಪಕ್ಷಿಗಳ ಚಿತ್ರಗಳಿಗಾಗಿ ಅವರು ಗಂಟೆಗಟ್ಟಲೆ ಕಾದು ಕೂರುತ್ತಿದ್ದಿದ್ದು, ಅವರ ಮೀನು ಹಿಡಿಯುವ ಹವ್ಯಾಸ, ಅರಣ್ಯದಲ್ಲಿ ಸುತ್ತಾಟ, ಚಿತ್ರಕಲೆಯಲ್ಲೂ ಅವರು ಹೊಂದಿದ್ದ ಪರಿಣತಿ ಹೀಗೇ.

ರಾಜೇಶ್ವರಿಯವರು ಮೈಸೂರಿನಲ್ಲಿದ್ದ ತಮ್ಮ ಅತ್ತೆ-ಮಾವಂದಿರಾದ ಕುವೆಂಪು ದಂಪತಿಗಳ ಬಗೆಗೂ ಪುಸ್ತಕದಲ್ಲಿ ಪ್ರಸ್ತಾಪಿಸುತ್ತಾರೆ. ಒಟ್ಟಿನಲ್ಲಿ ತಮ್ಮ ಪ್ರಸಿದ್ಧ ಪತಿಯ ಬದುಕಿನ ವಿವರಗಳ ಜೊತೆಜೊತೆಗೇ ತಮ್ಮಿಬ್ಬರ ಜೀವನದಲ್ಲಿ ಪ್ರಮುಖವೆನಿಸಿದ ಇತರ ಘಟನೆಗಳು ಹಾಗೂ ವ್ಯಕ್ತಿಗಳ ಬಗೆಗೂ ವಿವರಗಳಿವೆ. ಸಾಹಿತ್ಯ ಚಳವಳಿ, ಭಾಷಾ ಚಳವಳಿ, ರೈತ ಚಳವಳಿ ಹೀಗೇ ಹಲವಾರು ಘಟನೆಗಳು ಪ್ರಸ್ತಾಪವಾಗುತ್ತವೆ.

ಕಡೆಯವರೆಗೂ, ತಮ್ಮ ಕೃತಿ ರಚನೆಗಳು, ಕಂಪ್ಯೂಟರ್ ತಂತ್ರಾಂಶ, ಹೀಗೆ ಚಟುವಟಿಕೆಯಿಂದಲೇ ಇದ್ದ ತೇಜಸ್ವಿಯವರು ೨೦೦೭ರಲ್ಲಿ ತಮ್ಮ ೬೯ನೇ ವಯಸ್ಸಿನಲ್ಲಿ ತೀರಿಕೊಂಡ ಮೇಲೆ ರಾಜೇಶ್ವರಿಯವರು ಕಾಡಿನ ಮಧ್ಯೆ ಇರುವ ಮನೆಯಲ್ಲಿ ಅನುಭವಿಸಬೇಕಾಗಿರುವ ಒಂಟಿತನದ ಚಿತ್ರ ಕಡೆಯ ಅಧ್ಯಾಯ "Sit-Out ಹೇಳುವ ಕಥೆ-ವ್ಯಥೆ" ಯಲ್ಲಿ ಇದೆ.

ರಾಜೇಶ್ವರಿ ತಮ್ಮ ಸರಳ, ನೇರ ಬರವಣಿಗೆಯಿಂದ ಗಮನ ಸೆಳೆಯುತ್ತಾರೆ. "ಲೋಹಿಯಾರ ತತ್ತ್ವ ಚಿಂತನೆ, ಕುವೆಂಪು ಕಲಾಸೃಷ್ಟಿ, ಕಾರಂತರ ಜೀವನದೃಷ್ಟಿ ಮತ್ತು ಪ್ರಯೋಗಶೀಲತೆ" ಈ ಮೂರರಿಂದ ಪ್ರಭಾವಿತರಾಗಿದ್ದ ಸಾಹಿತಿ ತೇಜಸ್ವಿಯವರೊಂದಿಗೆ ನಗರದ ಸದ್ದು ಗದ್ದಲಗಳಿಂದ ದೂರವಾಗಿ ಕಾಡಿನ ನಿಶ್ಶಬ್ಧದಲ್ಲಿ ತಾವು ಕಳೆದ ದಿನಗಳ ಕಣ್ಣಿಗೆ ಕಟ್ಟುವ ಚಿತ್ರಣ ಈ ಕೃತಿಯಲ್ಲಿದೆ. ಅಪಾರ ಸಂಖ್ಯೆಯ ಓದುಗ ಸಮೂಹವನ್ನು ಹೊಂದಿದ್ದ "ನಿಗೂಢ ಮನುಷ್ಯ"ನ "ಚಿದಂಬರ ರಹಸ್ಯ" ಇದೀಗ ಒಂದಷ್ಟು ಬಯಲಾಗಿದೆ.

ತೇಜಸ್ವಿ ಕಡೆಯ ದಿನದ ಬಗ್ಗೆ ಅವರ ಮಗಳು ಈಶಾನ್ಯೆ ತಮ್ಮ ಬ್ಲಾಗ್ ಜೀವ ಜಾಲ ದಲ್ಲಿ ಬರೆದಿರುವ ಬರಹ ಆತ್ಮಾವಲೋಕನ ತೇಜಸ್ವಿಯವರ ಓದುಗರಿಗೆ ಇಷ್ಟವಾಗಬಹುದು.

5 comments :

Vijaya said...

very good review, srinath

Shree said...

vishleshane tumba chennagide. kadeyavaregu oodisikondu hogiddallade ee pustakavannu saha odabekamba hambala moodiside. Nimma hattira ee pustaka iddare share maadi.

Dhanyavadagalu
Roopashree

Anonymous said...

ನಮಸ್ತೆ, ನೀವು ಇಷ್ಟು ವಿಶ್ಲೇಷಣಾತ್ಮಕವಾಗಿ ಬರೀತೀರಿ ಅಂತ ಇವತ್ತೇ ಗೊತ್ತಾಗಿದ್ದು! ಇವತ್ತು ಬ್ಲಾಗ್ ನೋಡಿದೆ. ಚಂದದ ಲೇಖನ.

ಸಂಧ್ಯಾರಾಣಿ

ವಿನಯ್ ಮಾಧವ said...

ತೇಜಸ್ವಿಯವರ ಪುಸ್ತಕ ಓದಿದವರ್ಯಾರೂ ಅವರ ಗುಂಗಿನಿಂದ ಹೊರಗೆ ಬರೋದು ಕಷ್ಟ. ಅವರ ಜೊತೆ ಜೀವನ ಸವೆಸಿದ ರಾಜೇಶ್ ಅವರ ಪಾಡೇನಾಗಿರಬೇಕು?
ತುಂಬಾ ಚೆನ್ನಾಗಿದೆ ಶ್ರೀನಾಥ್.

ವಿನಯ್ ಮಾಧವ said...

ತೇಜಸ್ವಿಯವರ ಪುಸ್ತಕ ಓದಿದವರಿಗೆ ಅವರ ಗುಂಗಿನಿಂದ ಹೊರಗೆ ಬರೋದು ಕಷ್ಟ. ಇನ್ನು, ಇಡೀ ಜೀವನ ಸವೆಸಿದ ರಾಜೇಶ್ವರಿಯವರ ಪರಿಸ್ಥಿತಿಏನಾಗಿರಬೇಡ.
ನಿನ್ನ ವಿಶ್ಲೇಷಣೆ ತುಂಬಾ ಚೆನ್ನಾಗಿದೆ ಶ್ರೀನಾಥ್. ಮತ್ತೆ ಬರೆದಾಗ ಟ್ಯಾಗ್ ಮಾಡು