Wednesday, April 17, 2019

ಮಂದೆಯಲಿ ಒಂದಾಗಿ ಸ್ವಂತತೆಯೇ ಬಂದಾಗಿ


'ಇತಿಹಾಸವನ್ನು ನೆನಪು ಮಾಡಿಕೊಳ್ಳಲಾರದವರು ಅದೇ ಇತಿಹಾಸವನ್ನು ಮರು ಜೀವಿಸಬೇಕಾಗುತ್ತದೆ' ಎಂದ ಹಾರ್ವರ್ಡ್ ಪ್ರೊಫೆಸರ್ ಜಾರ್ಜ್ ಸಾಂಟಯಾನನ ಮಾತು  ಒಂದು ಎಚ್ಚರಿಕೆಯ ಗಂಟೆಯಂತಿದೆ.

ಲಂಕೇಶ್ ಹಿಟ್ಲರನ ಬಗ್ಗೆ ಕೆಲವು ಲೇಖನಗಳನ್ನು ಬರೆದಿದ್ದರು. 'ಟೀಕೆ - ಟಿಪ್ಪಣಿ' ಪುಸ್ತಕವನ್ನು ತಿರುವಿದಾಗ ಇಪ್ಪತ್ತು ವರ್ಷಗಳ ಹಿಂದೆ ಪತ್ರಿಕೆಯಲ್ಲಿ ಪ್ರಕಟವಾಗಿದ್ದ 'ಹಿಟ್ಲರ್' ಮತ್ತು ' ಫ್ಯಾಸಿಸಂ'  ಕುರಿತಾದ ಬರಹ ಕಣ್ಣಿಗೆ ಬಿತ್ತು. ಕೆಲವೇ ಪ್ಯಾರಾಗಳಲ್ಲಿ ಮನಮುಟ್ಟುವಂತೆ ಪ್ರಜಾಪ್ರಭುತ್ವದ ಇನ್ನೊಂದು ಮುಖದ ಬಗ್ಗೆ ಅವರು ಬರೆಯುತ್ತಾರೆ.

ಪ್ರಭುತ್ವವನ್ನು ಪ್ರಶ್ನಿಸುವುದನ್ನೇ ಮರೆತು ವ್ಯಕ್ತಿ ಆರಾಧನೆಯಲ್ಲಿ ತೊಡಗುವುದು ಎಂತಹ ಅಪಾಯಕಾರಿ ಸನ್ನಿವೇಶವನ್ನು ತಂದೊಡ್ಡಬಹುದು ಎಂದು ಅರಿಯುವುದಕ್ಕೆ ಜರ್ಮನಿಯಲ್ಲಿ ಆದದ್ದರ ಬಗೆಗಿನ ಲಂಕೇಶರ ಪುಟ್ಟ ವ್ಯಾಖ್ಯಾನವನ್ನು ಇಂದು ನೆನಪು ಮಾಡಿಕೊಳ್ಳುವುದು ಉಪಯುಕ್ತ.
 --------------------
"ಜರ್ಮನಿಯಲ್ಲಿ ಅಡಾಲ್ಫ್ ಹಿಟ್ಲರ್ ಹುಟ್ಟಿದ. ಈತ ಭಿಕಾರಿಯಾದ ಮನುಷ್ಯ; ಬೀದಿಯ ಪಕ್ಕದಲ್ಲಿ ಮಲಗುತ್ತಿದ್ದವನು. ಇವನು ಭಾಷಣ ಮಾಡುವುದನ್ನು, ತನ್ನ ದೇಶದ ಚರಿತ್ರೆಯ ಬಗ್ಗೆ ಆಕರ್ಷಕ ಸುಳ್ಳುಗಳನ್ನು ಹೇಳುವುದನ್ನು ಕಲಿತಿದ್ದ. ಸ್ವಂತದ ಲಾಭ, ನಾಯಕತ್ವವೇ ಮುಖ್ಯವಾಗಿದ್ದರೂ ಈ ಹಿಟ್ಲರ್ ತಾನಿರುವುದು ರಾಷ್ಟ್ರಕ್ಕಾಗಿ ಎಂದು ಸಾರಿ ಜನರನ್ನು ನಂಬಿಸಿದ. ರಾಷ್ಟ್ರದ ಹೆಸರಲ್ಲಿ ಮಿಲಿಟರಿಯನ್ನು ಕಟ್ಟಬೇಕು ಎಂದು ಘೋಷಿಸಿದ. ಈತನ ಮಾತು ರಾಷ್ಟ್ರದ ಬಗ್ಗೆ, ರಾಷ್ಟ್ರಕ್ಕಾದ ಅನ್ಯಾಯವನ್ನು ಸರಿಪಡಿಸಲು; ಆದರೆ ಇವನ ಏಕಮಾತ್ರ ಗುರಿ ಅಧಿಕಾರ. ಲಕ್ಷಾಂತರ ಜನರನ್ನು ಆಕರ್ಷಿಸಿ ಗಂಟೆಗಟ್ಟಲೆ ಅವರ ತಲೆಯಲ್ಲಿ ಹುಸಿ ಸಂಗತಿಗಳನ್ನು ತುಂಬುವ ಶಕ್ತಿ ಪಡೆದಿದ್ದ ಈತ ಆಧುನಿಕ ಜಗತ್ತಿನ ಹೊಸ್ತಿಲಲ್ಲಿದ್ದ ಆಗತಾನೆ ಬಂದಿದ್ದ ಮೈಕ್ರೋಫೋನ್ ಗಳು, ಭಿತ್ತಿಪತ್ರ, ಸಿನಿಮಾ ಎಲ್ಲವನ್ನೂ ಬಳಸಿಕೊಳ್ಳತೊಡಗಿದ. ಭಾಷಣ ಮತ್ತು ಪ್ರಚಾರ ಈತನ ಮಂತ್ರವಾಗಿದ್ದವು. ಪ್ರಚಾರಕ್ಕೆ ಗೊಬೆಲ್ಸ್ ಎಂಬುವವನನ್ನು ನೇಮಿಸಿಕೊಂಡ. ಜನ ಸುಳ್ಳುಗಳನ್ನು ನಂಬುವಂತೆ ಪ್ರಚಾರ ಮಾಡುವುದರಲ್ಲಿ ಈತ ಎತ್ತಿದ ಕೈ.

ಜರ್ಮನಿ, ಇಟಲಿ, ಜಪಾನಿನ ಗೂಂಡಾಗಳು ಶುರು ಮಾಡಿದ ಯುದ್ಧದಲ್ಲಿ ಮೂರು ಮುಖ್ಯ ಅಂಶಗಳಿದ್ದವು. ರಾಷ್ಟ್ರಮುಖ್ಯ. ವ್ಯಕ್ತಿಗೌಣ. ರಾಷ್ಟ್ರಕ್ಕಾಗಿ ಜನರೆಲ್ಲ ಬಲಿಕೊಡಬಹುದು. ಎರಡನೆಯದಾಗಿ ಸೈನ್ಯದ ಬಲ ಮುಖ್ಯ. ಸೇನೆ ಅಜೇಯವಾಗಿದ್ದರೆ ಮಾತ್ರ ಗೂಂಡಾಗಳ ಕನಸು ನನಸಾಗುತ್ತದೆ. ಮೂರನೆಯದಾಗಿ, ಅನ್ಯ ಜಾತಿ ಬಗ್ಗೆ ಅಸಹನೆ. ಇಪ್ಪತ್ತನೇ ಶತಮಾನ ಶುರುಮಾಡಿದ ಈ ಗೂಂಡಾಗಳ ಹುಚ್ಚು 'ಫ್ಯಾಸಿಸ್ಟ್' ಅನ್ನಿಸಿಕೊಂಡಿದೆ; ಇದು ಸರಳ, ವೈಚಾರಿಕ ವಿಷಯಗಳನ್ನು, ಚರ್ಚೆಯ ಮೂಲಕ ಸರ್ಕಾರ ರೂಪಿಸುವುದನ್ನು ಇಷ್ಟಪಡುವುದಿಲ್ಲ;ಜನತಂತ್ರವನ್ನು ಬಳಸಿಕೊಂಡು ಅಧಿಕಾರಕ್ಕೆ ಬರುತ್ತಲೇ ಜನತಂತ್ರವನ್ನು ಕಸದಬುಟ್ಟಿಗೆ ಎಸೆಯುತ್ತದೆ. ಇದು ಫ್ಯಾಸಿಸಂ."
------------------------

ಹಿಟ್ಲರ್ ಹೇಗೇ ಇದ್ದಿರಲಿ, ನನಗೆ ನಿಜಕ್ಕೂ ಕಾಡುವ ವಿಚಾರವೆಂದರೆ ಅವನ ದೇಶದ ಜನರ ಮೇಲೆ ಅವನಿಗಿದ್ದ ನಿಯಂತ್ರಣ ಮತ್ತು ಪ್ರಭಾವ. ಅವನ ಎಲ್ಲ ಅವಿವೇಕಿ, ಅಮಾನುಷ ತೀರ್ಮಾನಗಳಿಗೂ ಅವರು ಬೆಂಬಲಕ್ಕೆ ನಿಂತದ್ದು. ಅವರೆಲ್ಲ ನಮ್ಮ ನಿಸಾರರ  ಪದ್ಯದ  'ಕುರಿಗಳು' ಆಗಿದ್ದಿರಬೇಕು. 'ಮಂದೆಯಲಿ ಒಂದಾಗಿ, ಸ್ವಂತತೆಯೇ ಬಂದಾಗಿ' ಇದ್ದವರಾಗಿರಬೇಕು!

ಯಾವುದೇ ದೇಶದಲ್ಲಿ ಸರ್ವಾಧಿಕಾರಿಗಳು ಬಂದಾಗ ಅವರು ಮೊದಲು ಮಾಡುವ ಕೆಲಸ ಬುದ್ಧಿಜೀವಿಗಳನ್ನು, ಸಾಹಿತಿಗಳು, ಶಿಕ್ಷಕರು, ಕವಿಗಳು ಇವರನ್ನು ಜೈಲಿಗೆ ಅಟ್ಟುವುದು. ಯಾಕೆಂದರೆ ಸ್ವಂತ ಯೋಚನೆ, ಹೊಸ ವಿಚಾರಗಳು ಇವರಿಂದಲೇ ಬರುವುದು. ಹಾಗೆಯೇ ನಿಜವಾದ ಸ್ವಾತಂತ್ರ್ಯ ನಿರಂಕುಶತೆಯನ್ನು ಬಯಸುವವರಿಗೆಲ್ಲ ದೇಶದ್ರೋಹಿಗಳು ಎಂಬ ಹಣೆಪಟ್ಟಿ ಅಂಟಿಸುವ ಮೂಲಕ ಅವರನ್ನೂ ನಿಯಂತ್ರಿಸುವುದು ಇದು ಎಲ್ಲ ಸರ್ವಾಧಿಕಾರಿಗಳ ಮಾಮೂಲಿ ತಂತ್ರ.

ನಮ್ಮ ದೇಶದಲ್ಲೂ ಎಪ್ಪತ್ತರ ದಶಕದಲ್ಲಿ ಒಮ್ಮೆ ಮತ್ತು ಈಚಿನ ಕೆಲ ವರ್ಷಗಳಲ್ಲಿ ಮತ್ತೊಮ್ಮೆ ಸರ್ವಾಧಿಕಾರಿ ಧೋರಣೆ ಕಂಡು ಬಂದಿದೆ. ಅಸಂಖ್ಯಾತ ಹಿರಿಯರ ನಿರಂತರ ತ್ಯಾಗ, ಹೋರಾಟಗಳಿಂದ ಸಂಪಾದಿಸಿರುವ ಸ್ವಾತಂತ್ರ್ಯದ, ಪ್ರಜಾಪ್ರಭುತ್ವದ, ಸಂವಿಧಾನದ ರಕ್ಷಣೆಯ ಹೊಣೆ ಎಲ್ಲರ ಮೇಲಿದೆ.

No comments :