Friday, March 22, 2019

ಸತ್ಯೋತ್ತರ (post-truth) ಕಾಲದ ಸವಾಲುಗಳು

2019 ರ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ಪಕ್ಷಗಳ ಪರಸ್ಪರ ದಾಳಿ ಪ್ರತಿದಾಳಿಗಳು, ಆರೋಪ ಪ್ರತ್ಯಾರೋಪಗಳು ಕಾವೇರುತ್ತಿರುವ ಈ ಹೊತ್ತಿನಲ್ಲಿ ಕನ್ನಡದಲ್ಲಿ ಸಮರ್ಥ ರಾಜಕೀಯ ಸುದ್ದಿ ನಿಯತಕಾಲಿಕೆಯೊಂದರ ಅಭಾವ ಅನುಭವಕ್ಕೆ ಬರುತ್ತಿದೆ. ಎಂಬತ್ತರ ದಶಕದಲ್ಲಿ ಆರಂಭವಾಗಿ ಎರಡು ದಶಕಗಳ ಕಾಲ  ನಾಡಿನ ಜನತೆಯ ಸಾಕ್ಷಿಪ್ರಜ್ಞೆಯಾಗಿ ಅತ್ಯಂತ ಪ್ರಭಾವಿ ಪಾತ್ರ ನಿರ್ವಹಿಸಿದ ಪತ್ರಿಕೆಯೆಂದರೆ 'ಲಂಕೇಶ್ ಪತ್ರಿಕೆ'. ಲಂಕೇಶರ ಸಂಪಾದಕೀಯ ಬರಹಗಳ ಸಂಗ್ರಹವನ್ನು ಓದುತ್ತಿದ್ದಾಗ ಕಣ್ಣಿಗೆ ಬಿದ್ದದ್ದು  ಸರಿಯಾಗಿ ಇಪ್ಪತ್ತೊಂದು ವರ್ಷಗಳ ಹಿಂದೆ ಅವರು 1999ರಲ್ಲಿ ಬರೆದಿದ್ದ 'ನನಗೇಕೆ ಬಿಜೆಪಿ ಹಿಡಿಸುವುದಿಲ್ಲ' ಎಂಬ ಬರಹ.

ಈ ಬರಹವು ಪ್ರಕಟವಾದ ಸಂದರ್ಭದಲ್ಲೂ ಭಾರತೀಯ ರಾಜಕಾರಣದಲ್ಲಿ ಬಲಪಂಥೀಯವಾದ ಮುನ್ನೆಲೆಗೆ ಬರುವುದರಲ್ಲಿತ್ತು. ಇದೀಗ  ಬಲಪಂಥೀಯ  ಪಕ್ಷ ಬಿಜೆಪಿ ಐದು ವರ್ಷಗಳ ಅಧಿಕಾರ ಮುಗಿಸಿ ಮತ್ತೆ ಚುನಾವಣೆ ಎದುರಿಸುತ್ತಿರುವ ಸನ್ನಿವೇಶದಲ್ಲಿ ಏನೀ ಪಕ್ಷದ ಆಕರ್ಷಣೆ ಎಂಬ ಪ್ರಶ್ನೆ ಮೂಡುತ್ತದೆ.

ಸಾಹಿತ್ಯ, ಸಮಾಜ, ರಾಜಕೀಯ, ಕಲೆ, ಸಂಸ್ಕೃತಿ, ಸಿನಿಮಾ ಹೀಗೆ ಹಲವು ವಿಚಾರಗಳಲ್ಲಿ ಆಸಕ್ತಿಯುಳ್ಳವರಾಗಿಯೂ, ತಮ್ಮ ಅಧ್ಯಯನ ಅನುಭವಗಳ ಮೂಲಕ   ಪ್ರಭಾವಶಾಲಿಯಾಗಿ ವಿಚಾರಗಳನ್ನು ಮಂಡಿಸುವುದರ ಮೂಲಕ  ಜನಾಭಿಪ್ರಾಯವನ್ನು ರೂಪಿಸುವಷ್ಟು ಶಕ್ತರಾಗಿದ್ದ ಲಂಕೇಶರು  ಬಲಪಂಥೀಯರ ಬಗ್ಗೆ ನಿಖರವಾದ ವಿರೋಧ ಉಳ್ಳವರಾಗಿದ್ದರು.
ಅವರ ಈ ತೀವ್ರ ವಿರೋಧಕ್ಕೆ ಕಾರಣಗಳನ್ನು ಅವರ ಬರಹದ ಕೆಲವು ಪ್ಯಾರಾಗಳಲ್ಲಿ ನಾವು ಕಾಣಬಹುದು-
---------
"ನಮ್ಮಂಥ ಕೆಲವರಿಗೆ ಬಿಜೆಪಿ ಯಾಕೆ ಅತ್ಯಂತ ದುಷ್ಟ ಪಕ್ಷ ಎನ್ನಿಸುತ್ತದೆ ಎನ್ನುವುದನ್ನು ನೋಡಬೇಕು.

ಈ ದೇಶದ ಎಲ್ಲ ಜಾತಿಯ, ವರ್ಗದ ಜನರೂ ಒಂದಾಗಬೇಕು, ಚಾರಿತ್ರ್ಯ ಬೆಳೆಸಿಕೊಳ್ಳಬೇಕು, ಸ್ವಾತಂತ್ರ್ಯವನ್ನು ಪಡೆಯಲು ಅರ್ಹರಾಗಬೇಕು ಎಂದು ಬಾಪೂ ನಂಬಿದ್ದರು. ಅವರ ಜೀವನಸಂಹಿತೆಯಲ್ಲಿ ಪ್ರೇಮ, ಸತ್ಯ, ಅಹಿಂಸೆ ಈ ಮೂರೂ ಒಂದೇ ಆಗಿದ್ದವು. ಸಹಬಾಳ್ವೆ, ಸ್ವಾವಲಂಬನೆ, ಸ್ವಾಭಿಮಾನ ಸ್ವತಂತ್ರ ನಾಗರಿಕನ ಮುಖ್ಯ ಗುಣಗಳಾಗಿದ್ದವು.

ಆರೆಸೆಸ್ಗಳ ದೇಶಭಕ್ತಿ ಮತ್ತು ಧರ್ಮಶ್ರದ್ಧೆ ಗಾಂಧೀಜಿಯಲ್ಲಿ ಶಂಕೆ ಮೂಡಿಸುತ್ತಿದ್ದವು. ಆರೆಸೆಸ್ಗಳ ಈ ದೇಶಭಕ್ತಿ, ಧರ್ಮಶ್ರದ್ಧೆಯ ಇನ್ನೊಂದು ಮುಖವೇ ಅನ್ಯಧರ್ಮದ ದ್ವೇಷ ಎಂದು ಅವರು ತಿಳಿದಿದ್ದರು. ಬರೀ ದೇವಾಲಯಗಳನ್ನು ಕಟ್ಟಿಸುವವನು ಹೇಗೆ ಕಂದಾಚಾರದ, ಅಸಹನೆಯ ವ್ಯಕ್ತಿಯಾಗುತ್ತಾನೋ ಹಾಗೆಯೇ ಪರಂಪರಾಗತ ಧರ್ಮವನ್ನು ನಂಬಿದವನು ಜಾತಿಪದ್ಧತಿ ಮತ್ತು ಶೋಷಣೆಯನ್ನು ನೆಚ್ಚುತ್ತಾನೆ ಎಂದು ತಿಳಿದಿದ್ದರು.

ಗಾಂಧೀಜಿಯ ಕಣ್ಣೆದುರಿಗೇ ಹಿಂದೂ ಧರ್ಮದ ರಕ್ಷಣೆಗೆಂದು ಹುಟ್ಟಿಕೊಂಡ ಆರೆಸೆಸ್ ಮುಸ್ಲಿಂ ವಿರೋಧಿ ಗುಂಪಾಗಿ, ಸತ್ಯವನ್ನು ತಿರುಚಿ ಸುಳ್ಳುಗಳನ್ನು ನಂಬುವ ಫ್ಯಾಸಿಸ್ಟ್ ಗುಂಪಾಗಿ ಬೆಳೆದದ್ದು ಇತಿಹಾಸ. ಇದಕ್ಕೆ ಗಾಂಧೀಜಿಯ ಹತ್ಯೆಯನ್ನು ಉದಾಹರಣೆಯನ್ನಾಗಿ ನೀಡುವುದು ಸ್ವಾಭಾವಿಕ. ಧರ್ಮ ಎಂಬ ಲಾಂಛನದ ಮರೆಯಲ್ಲಿ ಜಾತಿಪದ್ಧತಿಯನ್ನು ಬಚ್ಚಿಡುವ, ಈ ಅರೆಸೆಸ್ಗಳಿಗೆ ಮಾನವೀಯತೆ, ನ್ಯಾಯವಂತಿಕೆ, ಪ್ರಜಾಪ್ರಭುತ್ವದ ದಾಕ್ಷಿಣ್ಯಗಳು ಅರ್ಥವಾಗುವುದಿಲ್ಲ. ಇದರಿಂದಾಗಿಯೇ ತನ್ನ ಸಂಕೀರ್ಣ, ಸ್ವಾರ್ಥ ಉದ್ದೇಶವನ್ನು ನೆರವೇರಿಸಿಕೊಳ್ಳಲು ಸುಳ್ಳು, ಹಿಂಸೆ, ನಯವಂಚನೆಯನ್ನು ನಂಬಿ 'ಫ್ಯಾಸಿಸ್ಟ್' ಎಂಬ ವರ್ಣನೆಗೆ ಅರ್ಹವಾಗುತ್ತದೆ. ಲಿಂಗಭೇದ (gender discrimination), ಜಾತಿಭೇದ, ವರ್ಣಭೇದಗಳನ್ನು ಸಿದ್ಧಾಂತವಾಗಿಸಿಕೊಂಡು ತನ್ನ ಶ್ರೇಷ್ಠತೆ ಭ್ರಮೆಯಲ್ಲಿ ಬದುಕುವ ಪ್ರತಿಯೊಂದು ಗುಂಪೂ ಫ್ಯಾಸಿಸ್ಟ್.

ಈ ಕಾರಣಕ್ಕಾಗಿ ನನ್ನಂಥವರಿಗೆ ಬಿಜೆಪಿ ರಾಷ್ಟ್ರದ ಚುಕ್ಕಾಣಿ ಹಿಡಿಯಲು ಅನರ್ಹವಾದ ಪಕ್ಷ."
---------
ಎರಡು ದಶಕಗಳ ಹಿಂದೆ ಬಿಜೆಪಿ ಮತ್ತು ಅದರ ಮಾತೃ ಸಂಸ್ಥೆಯಾದ ಆರೆಸೆಸ್ ಕುರಿತು ಲಂಕೇಶರು ವ್ಯಕ್ತಪಡಿಸಿದ್ದ ಈ ವಿಚಾರಗಳನ್ನು ಇವತ್ತು ಅನುಮಾನಿಸಲು ಪ್ರೇರೇಪಿಸುವ ಯಾವುದೇ ಸಾಕ್ಷ್ಯ ಈ ಎರಡು ದಶಕಗಳಲ್ಲಿ ನನಗಂತೂ ಕಂಡಿಲ್ಲ. ಆರಂಭದಲ್ಲಿ ತೀರಾ ಸೀಮಿತ ಬೆಂಬಲ ಪಡೆದಿದ್ದ ಧಾರ್ಮಿಕ ಮೂಲಭೂತವಾದಿ ರಾಜಕಾರಣ ಈಚಿನ ವರ್ಷಗಳಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಬೆಂಬಲ ಪಡೆದು ಅಧಿಕಾರದ ಗದ್ದುಗೆಗೇರಲು ಕಾರಣವೇನೆಂಬುದು  ಯೋಚಿಸಬೇಕಾದ ವಿಚಾರ.

ಮತೀಯವಾದವೇ ಎಲ್ಲೆಡೆಯೂ ಮನ್ನಣೆ ಪಡೆಯುತ್ತಿದ್ದು ಆಧುನಿಕ ಚಿಂತನೆಯ ಮಾತಾಡುವವರು, ಬುದ್ಧಿಜೀವಿಗಳು, ಉದಾರವಾದಿಗಳು ತಾತ್ಸಾರಕ್ಕೆ, ಅವಹೇಳನಕ್ಕೆ, ಕೆಲವೊಮ್ಮೆ ಜೀವಹಾನಿಯ ಬೆದರಿಕೆಗೆ ಒಳಗಾಗುತ್ತಿರುವ ವಿಚಿತ್ರ ಸನ್ನಿವೇಶದಲ್ಲಿ ನಾವಿಂದು ಇದ್ದೇವೆ.ಸಾಮಾಜಿಕ ಮಾಧ್ಯಮಗಳೂ ಎಲ್ಲರಿಗೂ ವೇದಿಕೆ ಒದಗಿಸಿ ಸಂಘರ್ಷಕ್ಕೆ ಇನ್ನೂ ಸ್ಫೂರ್ತಿ ದೊರಕಿಸುತ್ತಿವೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಭಾರತ ಮತ್ತು ಅಮೆರಿಕದಂತಹ ಎರಡು ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರಗಳಲ್ಲಿ ಸಂಪ್ರದಾಯವಾದಿ ಬಲಪಂಥೀಯ ಗುಂಪು ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದಿರುವ ವಿದ್ಯಮಾನವು ಅಧ್ಯಯನಯೋಗ್ಯ ವಿಷಯ.

ಪ್ರಜಾಪ್ರಭುತ್ವದಲ್ಲಿ ಮತೀಯವಾದದ ಜನಪ್ರಿಯತೆಗೆ ಒಂದು ಮುಖ್ಯ ಕಾರಣ ವಿಚ್ಛಿದ್ರಕಾರೀ ಸಂಘಟನೆಗಳ ಅವಿರತ ಸುಳ್ಳು ಪ್ರಚಾರ. ತಮ್ಮ ದೇಶಪ್ರೇಮ, ದೇಶಸೇವೆಗಳ ಸ್ವಗುಣಗಾನದ ಜೊತೆಗೆ ತಮ್ಮ ವಿರೋಧಪಕ್ಷಗಳ ಬಗೆಗೆ ಇವರು ತೇಲಿಬಿಡುವ ಅಪಪ್ರಚಾರದ ಕಂತೆಗಳು. ಕೆಲವು ಟಿವಿ ಚಾನಲ್ ಗಳು, ಅಂತರ್ಜಾಲ ತಾಣಗಳು ತರಾವರಿ ಸುಳ್ಳುಗಳ ಉತ್ಪ್ರೇಕ್ಷೆಗಳ ಕೂಪಗಳಾಗಿರುವ ವಿದ್ಯಮಾನ ಭಾರತದಲ್ಲಿ ಇತ್ತೀಚಿನದು. ಮತೀಯವಾದದ; ಜೀವಸೆಲೆಯೇ ಇಂತಹ ಚಾನೆಲ್ ಗಳು ಮತ್ತು ಸಾಮಾಜಿಕ ಮಾಧ್ಯಮಗಳು. ದಿನವಿಡೀ ಮತೀಯ ದ್ವೇಷ,ಪ್ರಚೋದನೆ, ಮತ್ತಿತರ ಋಣಾತ್ಮಕ ಸಂಗತಿಗಳನ್ನೇ ವೈಭವೀಕರಿಸುವ ಇಂತಹ ಮಾಧ್ಯಮಗಳು ಸಮಾಜದಲ್ಲಿ ಸಾಮರಸ್ಯವನ್ನು ನಾಶಗೊಳಿಸಿವೆ.

ಇಂದಿನ ಕಾಲಘಟ್ಟವನ್ನು ಸತ್ಯೋತ್ತರ (post-truth) ಎಂದು ವರ್ಣಿಸಲಾಗುತ್ತಿದೆ. ಟ್ವಿಟರ್, ಫೇಸ್ಬುಕ್, ವಾಟ್ಸಾಪ್, ಯೂ ಟ್ಯೂಬ್ ಎಲ್ಲೆಡೆ  ಸುಳ್ಳು ಸುದ್ದಿಗಳದ್ದೇ ಅಬ್ಬರ. ಸುದ್ದಿಯ ಸತ್ಯಪರೀಕ್ಷೆಗೆಂದೇ ಆಲ್ಟ್-ನ್ಯೂಸ್, ಬೂಮ್ ನಂತಹ; ಸಂಸ್ಥೆಗಳೂ ಆರಂಭವಾಗಿವೆ. ಇವು ಪತ್ತೆ ಮಾಡುವ ಸುದ್ದಿಗಳನ್ನು ಗಮನಿಸಿದರೆ ಅಂತಹ ಸುದ್ದಿಗಳು ಸುಳ್ಳಾಗಿ ಪಕ್ಷಪಾತಿಯಾಗಿ ಇರುವುದರ ಜೊತೆಗೆ; ಹೆದರಿಸುವ, ಕೆರಳಿಸುವ, ದಾರಿ ತಪ್ಪಿಸುವ ಉದ್ದೇಶದಿಂದ ಕೂಡಿರುತ್ತವೆ.

ಈ ವಿದ್ಯಮಾನ ನಮ್ಮ ದೇಶದಲ್ಲಿ ಮುನ್ನೆಲೆಗೆ ಬಂದಿದ್ದು 2014ರಲ್ಲಿ. ಆ ಚುನಾವಣೆಗಳಲ್ಲಿ ಬಿಜೆಪಿಯ ಗೆಲುವಿಗೆ ಸಾಮಾಜಿಕ ಮಾಧ್ಯಮಗಳ ಕಾಣಿಕೆ ಸಣ್ಣದಲ್ಲ. ಇದರ ಪರಿಣಾಮ ಏನೆಂದರೆ ಇಂದು ಸುದ್ದಿಯಾಗಲಿ, ಮಾಹಿತಿಯಾಗಲಿ ಒಂದು ನಿರ್ದಿಷ್ಟ ಪ್ರಮಾಣೀಕರಣಕ್ಕೆ ಒಳಪಡದೆ ಬಿಡುಗಡೆಯಾಗುವುದರಿಂದ ಅದಕ್ಕೆ ಹೆಚ್ಚಿನ ಬೆಲೆಯೇ ಉಳಿದಿಲ್ಲ. ಹಿಂದೆಲ್ಲ ಸಾಕ್ಷ್ಯಪೂರ್ಣ ಅಂಕಿ ಅಂಶ,ನಿಪುಣರಿಂದ ಚರ್ಚೆಗೊಳಪಟ್ಟ ಮಾಹಿತಿ ಇವೆಲ್ಲವನ್ನು ಅಧರಿಸಿಯೇ ಮುಖ್ಯವಾದ ಸರ್ಕಾರದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈಗಿನ ಸರ್ಕಾರಕ್ಕೆ ಅದರಲ್ಲಿ ನಂಬಿಕೆಯಿದ್ದಂತಿಲ್ಲ. ಈಗ ನಿರ್ಧಾರಗಳು ಮೊದಲು; ನಂತರ ಬೇಕಾದ ಅಂಕಿ ಅಂಶಗಳನ್ನು ಒದಗಿಸುವುದು. ಉದಾಹರಣೆಗೆ, ನೋಟು ರದ್ದತಿ ನಿರ್ಧಾರ, ನಿರುದ್ಯೋಗದ ಏರಿಕೆ ಪ್ರಮಾಣದ ಮಾಹಿತಿ ಪ್ರಕಟಗೊಳಿಸದಿರುವ ನಿರ್ಧಾರ ಇತ್ಯಾದಿ. ಸುಳ್ಳು ಮಾಹಿತಿಗಳು, ಏಕಪಕ್ಷೀಯ ನಿರ್ಧಾರಗಳು, ಸಾಂವಿಧಾನಿಕ ಸಂಸ್ಥೆಗಳ ದುರ್ಬಲೀಕರಣ ಯಾವುದೂ ನಮ್ಮಲ್ಲಿ ಹಲವರಿಗೆ ಮುಖ್ಯ ಅನಿಸುತ್ತಲೇ ಇಲ್ಲ.

ಬಿಜೆಪಿಯವರ ಇನ್ನೊಂದು ಕೆಟ್ಟ ಪ್ರವೃತ್ತಿಯೆಂದರೆ ಸರ್ಕಾರವನ್ನು ಪ್ರಶ್ನಿಸುವವರನ್ನು ದೇಶದ್ರೋಹಿಗಳೆಂದು ಕರೆಯುವುದು. ಆಡಳಿತವನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಮೂಲಭೂತ ಹಕ್ಕು ಮತ್ತು ಕರ್ತವ್ಯ ಎನ್ನುವ ಸತ್ಯ ಇವರ ಅರಿವಿಗೆ ನಿಲುಕುವುದೇ ಇಲ್ಲ. ವ್ಯಕ್ತಿಪೂಜೆ ಈ ಪಕ್ಷದವರ ಮುಖ್ಯ ಗುಣಲಕ್ಷಣ. ನಾನು ಗಮನಿಸಿರುವಂತೆ ಈ ಪಕ್ಷವನ್ನು ಬೆಂಬಲಿಸುವ ಹಲವು ಮಂದಿ ಸುಶಿಕ್ಷಿತರಲ್ಲೇ ಕಾಣಬರುವ ಒಂದು ಸಾಮಾನ್ಯ ಲಕ್ಷಣವೆಂದರೆ ದೇಶದ ಇತಿಹಾಸ ಮತ್ತು ಸಮಾಜ ವಿಜ್ಞಾನದ ಕುರಿತು ಕಂಡುಬರುವ ಅರಿವಿನ ಕೊರತೆ. ಇದಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆಯೂ ಕಾರಣವಿರಬಹುದು.

ಈಚೆಗೆ ಪ್ರತಾಪ್ ಭಾನು ಮೆಹ್ತಾ ಹೇಳಿದಂತೆ ಮತೀಯವಾದಿ, ವಿಚ್ಛಿದ್ರಕ ಶಕ್ತಿಗಳನ್ನು ನಾವು ಬೆಂಬಲಿಸುವುದು ನಮ್ಮ 'ಅಸಮಾಧಾನದ ಹೃದಯ, ಸಣ್ಣ ಮನಸ್ಸು, ಸಂಕುಚಿತ ಆತ್ಮ' ಇವುಗಳ ಸೂಚಕವಿರಬಹುದು.
ಹಲವಾರು ಕ್ಷೇತ್ರಗಳಲ್ಲಿ ಗುರಿಗೂ ಸಾಧನೆಗೂ ಸಾಕಷ್ಟು ವ್ಯತ್ಯಾಸಗಳಿದ್ದರೂ ಅಸೀಮ ವಿಶ್ವಾಸದಿಂದ ಮತ್ತೆ ಜನರಲ್ಲಿಗೆ ಹೋಗಲು ಬಹುಶಃ ಬಿಜೆಪಿ ಪಕ್ಷಕ್ಕೆ ಇರುವ ಒಂದೇ ಭರವಸೆ ಮತದಾರರ ಬಹುಸಂಖ್ಯಾತವಾದೀ ಮತೀಯವಾದಿ ಮನಸ್ಥಿತಿ. ಕಳೆದ ಸಲ ಕಾಂಗ್ರೆಸ್ ಸರ್ಕಾರದ; ಹಗರಣಗಳ ಬಲವೂ; ಬಿಜೆಪಿಗಿತ್ತು. ಈ ಸಲ ಪರಿಸ್ಥಿತಿ ಬದಲಾಗಬಹುದು. ತಮ್ಮ ಹಿಂದಿನ ಭರವಸೆ ಮತ್ತು ಅವುಗಳ ಸಾಧನೆಯ ಬಗೆಗೆ ದನಿಯನ್ನೇ ತೆಗೆಯದೆ, ಇನ್ನೂ ಅದೇ ಹಳೇ ರಾಗವಾದ ವಂಶ ರಾಜಕೀಯ, ಎಪ್ಪತ್ತು ವರ್ಷಗಳ ಆಡಳಿತ ಇತ್ಯಾದಿಯನ್ನೇ ಜಪಿಸುವುದು, ರಾಜಕೀಯೇತರ ಸಂಸ್ಥೆಯಾದ ಸೇನೆಗೆ ಸಂಬಂಧಿಸಿದ ವಿಚಾರಗಳನ್ನು ಪ್ರಸ್ತಾಪಿಸುವುದು; ಪ್ರಪಂಚದಲ್ಲೇ ದೊಡ್ಡ ರಾಜಕೀಯ ಪಕ್ಷ ಎಂದು ಹೇಳಿಕೊಳ್ಳುವವರಿಗೆ ಶೋಭೆ ತರುವುದಿಲ್ಲ.

ಅಮಿತವಾದ ತಮ್ಮ ಹಣಬಲವನ್ನು ಉಪಯೋಗಿಸಿ ಜಾಹೀರಾತುಗಳು, ಮಾಧ್ಯಮಗಳು, ಬೃಹತ್ ಸಭೆಗಳು, ಇತ್ಯಾದಿಗಳ ಮೂಲಕ ಮತದಾರರ ಮನಸ್ಸಿನಲ್ಲಿ ಬೇರೆ ಅಲೋಚನೆಗಳೇ ಸುಳಿಯದಂತೆ ಒಂದು ಬಗೆಯ ಮುಗಿದ ನಿರ್ಧಾರದಂಥ ಭ್ರಮೆಯನ್ನು ಸೃಷ್ಟಿಸುವುದೂ ಬಿಜೆಪಿಯವರ ರಾಜಕೀಯ ತಂತ್ರವಾಗಿರಬಹುದು. ಆದರೆ ಜನರಲ್ಲಿ ಇರಬಹುದಾದ ಮುಚ್ಚಿಟ್ಟ ಅಸಮಾಧಾನ, ಸಂಕಟ, ಆಕ್ರೋಶಗಳು ಚುನಾವಣೆಯಲ್ಲಿ ಪ್ರಕಟವಾಗದೇ ಇರುವ ಗ್ಯಾರಂಟಿಯೇನೂ ಇಲ್ಲ.

ಇದೆಲ್ಲ ಏನೇ ಇರಲಿ, ಕಳೆದ ಐದು ವರ್ಷಗಳಲ್ಲಿ ಬಿಜೆಪಿಯವರು ಎಸಗಿದ ದೊಡ್ಡ ಅಪಚಾರ ಏನೆಂದರೆ ರಾಜಕೀಯ ಸಂವಾದವನ್ನು ಕೀಳು ಮಟ್ಟಕ್ಕಿಳಿಸಿದ್ದು. ಬಿಜೆಪಿಯ ಐಟಿ ಸೆಲ್ ನ ಪಾತ್ರ ಇದರಲ್ಲಿ ಹೆಚ್ಚಿನದ್ದು. ತರ್ಕ, ವಿವೇಚನೆ, ಪ್ರಶ್ನೆ ಯಾವುದಕ್ಕೂ ಅವಕಾಶವಿಲ್ಲದಂತೆ ಅಸಂಬದ್ಧ ಅವಹೇಳನ, ಬೆದರಿಕೆ ಇತ್ಯಾದಿಗಳು ಈ ಗುಂಪಿನ ಮಾಮೂಲಿ ಪ್ರತಿಕ್ರಿಯೆಯಾದದ್ದು ವಿಷಾದಕರ. ಇಂತಹ ಹಲವು ಅನಾಗರಿಕ ಟ್ವಿಟ್ಟಿಗರನ್ನು ಹಿಂಬಾಲಿಸುವ ಮೂಲಕ ದೇಶದ ಪ್ರಧಾನಿಯೇ ಇವರಿಗೆ ಅಧಿಕೃತತೆಯನ್ನು ಒದಗಿಸಿದ್ದು ವಿಪರ್ಯಾಸ ಮತ್ತು ದುರಂತ. ರಾಜಕೀಯ ಸಂವಾದದಲ್ಲಿ ಘನತೆಯ ಪ್ರಾಮುಖ್ಯತೆಯನ್ನು ಮತ್ತೆ ಲಂಕೇಶರ ಮಾತುಗಳಲ್ಲೇ ಹೇಳಬಹುದು. 1998ರಲ್ಲಿ ಪ್ರಕಟವಾಗಿದ್ದ 'ಜನರನ್ನು ಅಲ್ಪರಾಗಿಸುವ ದುಷ್ಟರು' ಎಂಬ ಲೇಖನದಲ್ಲಿ ಅವರು ಹೀಗೆ ಬರೆಯುತ್ತಾರೆ-

-------
"ರಾಜಕೀಯ ಬಹುಮುಖ್ಯವಾದದ್ದು; ಅದು ಒಂದು ಜನತೆಯ ಜೀವನಸೂತ್ರವನ್ನು ನಿಯಂತ್ರಿಸುವ ಕ್ರಿಯೆ; ಜನರನ್ನು ಉದಾರಿಗಳನ್ನಾಗಿಯೂ, ಸುಸಂಸ್ಕೃತರನ್ನಾಗಿಯೂ ಮಾಡುವ ಕೆಲಸ. ಇಷ್ಟು ಗೊತ್ತಿಲ್ಲದ ಅವಿವೇಕಿಗಳ ತಂಡ ಎಲ್ಲೆಲ್ಲೂ ತನ್ನ ಅವಾಂತರದಲ್ಲಿ ಮುಳುಗಿರುವುದನ್ನು ಇವತ್ತು ನೋಡುತ್ತಿದ್ದೇವೆ. ಸಾರ್ವಜನಿಕ ಬದುಕು ಗಾಂಧೀಜಿಯ ಘನತೆ, ಪ್ರೀತಿ, ಮೌಲ್ಯಪ್ರಜ್ಞೆಯಿಂದ ದೂರವಾಗುತ್ತಿರುವುದು ಎಲ್ಲರಲ್ಲಿ ದುಃಖ, ಸಿಟ್ಟು ಮೂಡಿಸಿದೆ."
--------
ಅವರ ಈ ಮಾತುಗಳು ಇಂದಿಗೂ ಎಷ್ಟು ಪ್ರಸ್ತುತ. ಅಲ್ಲವೇ?

No comments :