Thursday, April 09, 2020

ದಿ ಪೇಂಟೆಡ್ ವೈಲ್ - ಕಾಲೆರಾ ಕಾಲದ ಅಗ್ನಿಪರೀಕ್ಷೆ

ಕೊರೊನ ವೈರಸ್ ಜಗತ್ತಿನಾದ್ಯಂತ ಸೃಷ್ಟಿಸುತ್ತಿರುವ ತಲ್ಲಣದ ಈ ಸಮಯದಲ್ಲಿ ಬಹಳ ಹಿಂದೆ ಓದಿದ್ದ ಸಾಮರ್ಸೆಟ್ ಮೌಮ್ ನ 'ದಿ ಪೇಂಟೆಡ್ ವೈಲ್' ಕಾದಂಬರಿ ನೆನಪಾಗುತ್ತಿದೆ. ಅದಕ್ಕೊಂದು ಕಾರಣ ಇದೆ. ಈ ಕಾದಂಬರಿಯಲ್ಲೂ ಒಂದು ಮಾರಣಾಂತಿಕ ರೋಗವು ತುಂಬಾ ಮಹತ್ವದ್ದಾದ ಘಟನೆಯಾಗಿ ಬರುತ್ತದೆ. ಅಲ್ಲಿ ಅದು ವೈರಸ್ ಅಲ್ಲ ಕಾಲೆರಾ ಆಗಿ ಬರುತ್ತದೆ.

ಸಾಮರ್ಸೆಟ್ ಮೌಮ್ ತುಂಬಾ ಸರಳವಾದ ಆದರೆ ಅಷ್ಟೇ ಪರಿಣಾಮಕಾರಿ ಶೈಲಿಯಲ್ಲಿ ಕತೆ ಹೇಳುವ ಕಾದಂಬರಿಕಾರ. 'ದಿ ಪೇಂಟೆಡ್ ವೈಲ್' ಪ್ರಕಟವಾಗಿದ್ದು 1925 ರಲ್ಲಿ. ಬ್ರಿಟಿಷ್ ವಸಾಹತು ಶಾಹಿಯು ತನ್ನ ಉಚ್ಛ್ರಾಯ ಸ್ಥಿತಿಯನ್ನುಆಗಷ್ಟೇ  ದಾಟಿಯಾಗಿದ್ದ ಕಾಲ.

ಕಾದಂಬರಿಯ ಮುಖ್ಯ ಭೂಮಿಕೆ ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಹಾಂಗ್ ಕಾಂಗ್. ಮೌಮ್ ನ ಕಾದಂಬರಿಗಳಲ್ಲಿ ಪಾತ್ರ ಚಿತ್ರಣ ಯಾವಾಗಲೂ ತುಂಬ ನಿಖರವಾಗಿರುತ್ತದೆ. ಇಲ್ಲೂ ಅಷ್ಟೇ. ಮೊದಲ ಪುಟಗಳಲ್ಲೇ ಮುಖ್ಯ ಪಾತ್ರಗಳ ಮುಖ್ಯ ಗುಣ ದೋಷಗಳೆಲ್ಲ ನಮ್ಮ ಅಳವಿಗೆ ಬಂದು ಬಿಡುತ್ತವೆ. ಈ ಕೃತಿಯ ಪುಟಗಳಲ್ಲಿ ಕಾಣಿಸುವ ಕೆಲವು ಬ್ರಿಟಿಷ್ ಪಾತ್ರಗಳು ಸ್ವಾರ್ಥದ, ಒಂದು ಬಗೆಯ ಕ್ರೌರ್ಯದ ಪ್ರಕೃತಿಯವರಾಗಿ ಈ  ಕೃತಿಯಲ್ಲಿ ಚಿತ್ರಿತವಾಗಿವೆ.

'ದಿ ಪೇಂಟೆಡ್ ವೈಲ್' ಕೃತಿಯಲ್ಲಿ ವಸಾಹತುಶಾಹಿಯ ರಾಜಕೀಯ ಪರಿಣಾಮಗಳಿಗಿಂತ ಅದರ ಸಾಮಾಜಿಕ ಆಯಾಮ ಹೆಚ್ಚು ಮುಖ್ಯವಾಗಿ ಪ್ರಕಟವಾಗುತ್ತದೆ. ಕಾದಂಬರಿಯ ನಾಯಕಿ ಕಿಟ್ಟಿ  ಲಂಡನ್ನಿನ ಬ್ರಿಟಿಷ್ ಮೇಲ್ಮಧ್ಯಮ ವರ್ಗದ ಪ್ರತಿನಿಧಿಯಾಗಿ ಕಂಡು ಬರುತ್ತಾಳೆ. ತೋರಿಕೆಯ  ವ್ಯಕ್ತಿತ್ವದ ತಾಯಿ ಮಿಸೆಸ್ ಗರ್ಸ್ಟಿನ್, ಕುಟುಂಬದವರಿಂದ ಮಾನಸಿಕವಾಗಿ ದೂರವೇ ಉಳಿಯುವ ವಕೀಲ  ತಂದೆ. ಮಾನಸಿಕವಾಗಿ ಅಷ್ಟೇನೂ ದೃಢ ವ್ಯಕ್ತಿತ್ವ  ಹೊಂದಿರದ ಕಿಟ್ಟಿ ತನ್ನ ತಂಗಿಗೆ ಮದುವೆ ಗೊತ್ತಾಗುತ್ತಿದ್ದಂತೆ ತನ್ನ ಏರುತ್ತಿರುವ ವಯಸ್ಸಿನ ಕಾರಣಕ್ಕೆ ಒತ್ತಡಕ್ಕೆ ಸಿಲುಕುತ್ತಾಳೆ. ಹಾಂಗ್ ಕಾಂಗ್ ನಲ್ಲಿ ಬ್ಯಾಕ್ಟೀರಿಯಾಲಜಿಸ್ಟ್ ಕೆಲಸದಲ್ಲಿರುವ ವಾಲ್ಟರ್ ಫೇನ್ ನನ್ನು ಮದುವೆಯಾಗಲು ನಿರ್ಧರಿಸುತ್ತಾಳೆ.

ಹಾಂಗ್ ಕಾಂಗ್ ನಲ್ಲೂ ಬ್ರಿಟಿಷ್ ಮಧ್ಯಮ ವರ್ಗದ ಸಮಾಜ ಅಷ್ಟೇನೂ ಭಿನ್ನವಾಗಿರುವುದಿಲ್ಲ. ಲಂಡನ್ನಿನ  ರೀತಿಯಲ್ಲೇ  ಪಾರ್ಟಿ ಗಳು, ಭೇಟಿಗಳು ಮುಂದುವರೆಯುತ್ತವೆ. ಸಾಮಾಜಿಕ ಶ್ರೇಣೀಕರಣದಲ್ಲಿ ಬ್ಯಾಕ್ಟಿರಿಯಾಲಜಿಸ್ಟರುಗಳ ಸ್ಥಾನ ತೀರಾ ಸಣ್ಣದೆಂದು ಕಿಟ್ಟಿಗೆ  ಅರಿವಾಗಲು ಹೆಚ್ಚು ಸಮಯ ಹಿಡಿಯುವುದಿಲ್ಲ. ವಾಲ್ಟರ್ ತನ್ನ ವೃತ್ತಿ ಬದುಕಿನಲ್ಲಿ ಮುಳುಗಿ  ಆಕೆಗೆ ಹೆಚ್ಚು ಸಮಯ ನೀಡದೇ ಹೋಗುವುದೂ ಕಿಟ್ಟಿಗೆ ಬೇಸರ, ಏಕತಾನತೆ, ಅವಮಾನ ಎಲ್ಲ ಶುರುವಾಗಲು ಕಾರಣವಾಗುತ್ತದೆ. ಇಲ್ಲಿ ನನಗೆ ನೆನಪಾದದ್ದು ಗಸ್ತಾವ್ ಫ್ಲ್ಯಾಬೆ ಯ ಅದ್ಭುತ ಕಾದಂಬರಿ  'ಮದಾಮ್ ಬೋವರಿ' ಯ ಎಮ್ಮಾ. ಡಾಕ್ಟರ್ ಪತಿ
ಚಾರ್ಲ್ಸ್ ತನ್ನ ಕಡೆ ಗಮನ ಕೊಡುತ್ತಿಲ್ಲವೆಂದು ಪ್ರೀತಿಯ ಹುಡುಕಾಟದಲ್ಲಿ ಸಂಕಟವನ್ನು ತಂದುಕೊಳ್ಳುವ ಎಮ್ಮಾ ಇಂಗ್ಲಿಷ್ ಸಾಹಿತ್ಯದ ಮರೆಯಲಾಗದ ಒಂದು ಪಾತ್ರ.

ಎಮ್ಮಾಳಂತೆ ಕಿಟ್ಟಿ ಸಹ ವಿವಾಹದ ಆಚೆ ಖುಷಿಯನ್ನು ಹುಡುಕುತ್ತಾಳೆ. ಆಗ ಕಿಟ್ಟಿಗೆ ಪರಿಚಯವಾಗುವುದು ಚಾರ್ಲ್ಸ್ ಟೌನ್ಸೆಂಡ್. ಅಸಿಸ್ಟಂಟ್ ಕಲೋನಿಯಲ್ ಸೆಕ್ರೆಟರಿ ಹುದ್ದೆಯಲ್ಲಿರುವ ಚಾರ್ಲ್ಸ್ ನೋಡಲೂ ಸುಂದರನಾಗಿರುತ್ತಾನೆ. ಕಿಟ್ಟಿ ಅವನೊಂದಿಗೆ ಗೆಳೆತನ ಬೆಳೆಸುತ್ತಾಳೆ .  ಅವರಿಬ್ಬರೂ ಪ್ರೇಮಿಗಳಾಗುತ್ತಾರೆ. ಕೆಲವು ವಾರಗಳಾಗುತ್ತವೆ. ಇಷ್ಟರಲ್ಲಿ ಕಿಟ್ಟಿಗೆ ವಾಲ್ಟರ್ ಜೊತೆಯಿರುವುದು ಅಸಹನೀಯವಾಗತೊಡಗುತ್ತದೆ. ಚಾರ್ಲ್ಸ್ ನ ಉನ್ನತ ಹುದ್ದೆ ಹಾಗೆಯೇ ವಾಲ್ಟರ್ ನ ಸಾಮಾನ್ಯ ಬ್ಯಾಕ್ಟಿರಿಯಾಲಜಿಸ್ಟ್ ಹುದ್ದೆ ಆಕೆಯಲ್ಲಿ ವಾಲ್ಟರ್ ಬಗೆಯ ಉದಾಸೀನಕ್ಕೆ ಕಾರಣವಾಗುತ್ತದೆ. ಅವನಿಗೆ ಗೊತ್ತಾದರೂ ಗೊತ್ತಾಗಲಿ ಎಂಬ ಭಾವನೆ ಬರುತ್ತದೆ. ವಾಲ್ಟರ್ ಗೆ ಗೊತ್ತಾದರೆ ಅವನು ಡೈವೋರ್ಸ್ ಕೊಡುತ್ತಾನೆ. ಚಾರ್ಲ್ಸ್  ಸಹ ತನ್ನ ಹೆಂಡತಿಗೆ ಡೈವೋರ್ಸ್ ಕೊಟ್ಟು ತನ್ನನ್ನು ಮದುವೆಯಾಗುತ್ತಾನೆ ಎನ್ನುವುದು ಅವಳ ಲೆಕ್ಕಾಚಾರವಾಗಿರುತ್ತದೆ.

ಆದರೆ ಆಗುವುದೇ ಇನ್ನೊಂದು.  ಚಾರ್ಲ್ಸ್ ತನ್ನ ಹೆಂಡತಿಗೆ ಡೈವೋರ್ಸ್ ಕೊಟ್ಟು ಅವಳನ್ನು ಮದುವೆಯಾಗಲು ಒಪ್ಪುವುದಾದರೆ ಮಾತ್ರ ತಾನು ಅವಳಿಗೆ ಡೈವೋರ್ಸ್ ಕೊಡಲು ಸಿದ್ಧವೆಂದು ವಾಲ್ಟರ್  ಕಿಟ್ಟಿಗೆ    ಹೇಳುತ್ತಾನೆ. ಆದರೆ ಚಾರ್ಲ್ಸ್ ಕಿಟ್ಟಿಗಾಗಿ ತಾನು ಗಾಸಿಪ್ ಗೆ ಒಳಗಾಗಿ ತನಗೆ ಲಭಿಸಲಿರುವ ಕಲೋನಿಯಲ್ ಸೆಕ್ರೆಟರಿ ಹುದ್ದೆಯನ್ನು ಕಳೆದುಕೊಳ್ಳಲು ಸಿದ್ದನಿರುವುದಿಲ್ಲ.

ಈ ನಡುವೆ ವಾಲ್ಟರ್ ಕಿಟ್ಟಿಯನ್ನು ಒಂದು ಅಗ್ನಿ ಪರೀಕ್ಷೆಗೆ ಒಡ್ಡುತ್ತಾನೆ. ಮೀ-ಟಾನ್ -ಫು ಎಂಬ ಚೀನಿ ಪ್ರಾಂತ್ಯ ವೊಂದರಲ್ಲಿ ಭಯಾನಕ ಕಾಲೆರಾ ಕಾಣಿಸಿಕೊಂಡಿರುತ್ತದೆ ಮತ್ತು ವಾಲ್ಟರ್ ಅಲ್ಲಿ ಕೆಲಸ ಮಾಡಲು ಒಪ್ಪಿಕೊಂಡಿರುತ್ತಾನೆ. ಚಾರ್ಲ್ಸ್ ಅವಳನ್ನು ಮದುವೆಯಾಗಲು ಒಪ್ಪದೇ ಹೋದಾಗ ವಾಲ್ಟರ್  ಸಹ ಡೈವೋರ್ಸ್ ನೀಡದೆ  ಕಿಟ್ಟಿ ಸಹ ಅವನ ಜೊತೆ ಕಾಲೆರಾ ಪೀಡಿತ  ಪ್ರಾಂತ್ಯಕ್ಕೆ ಬರುವಂತೆ ಮಾಡುತ್ತಾನೆ.

ಸಾವಿನ ಕರಿ ನೆರಳಿನಲ್ಲಿ ಮುರಿದು ಹೋದ ಸಂಬಂಧದ ಅಸಹನೀಯತೆಯಲ್ಲಿ ದಿನಗಳು ಸಾಗುತ್ತವೆ. ವಾಲ್ಟರ್ ತನ್ನ ಕೆಲಸದಲ್ಲಿ ಹಗಲೂ ರಾತ್ರಿ ತೊಡಗಿಕೊಳ್ಳುತ್ತಾನೆ. ಕಿಟ್ಟಿ ಬೇಸರದಲ್ಲಿ ದಿನ ಕಳೆಯುತ್ತಾಳೆ.  ಅವನೊಡನೆ ಸಹಜವಾಗಿರಲು ಪ್ರಯತ್ನಿಸುತ್ತಾಳೆ . ಆದರೆ ವಾಲ್ಟರ್ ಕರಗುವುದಿಲ್ಲ.  ಕಾಲೆರಾ ದ  ಅಂತಹ ಭಯಾನಕ ಪರಿಸ್ಥಿತಿಯಲ್ಲೂ ತನ್ನ ಒಂದು  ಅತಿಕ್ರಮಣವನ್ನು ಕ್ಷಮಿಸದ ಅವನ ಕಠೋರತೆ ಅವಳಿಗೆ ಆಶ್ಚರ್ಯ ಉಂಟು ಮಾಡುತ್ತದೆ.  ಅವಳನ್ನು ತೀವ್ರವಾಗಿ ಪ್ರೀತಿಸಿದವನಾಗಿ ಕಡೆಗೆ ಆ ಪ್ರೀತಿ  ಒಂದು ಸುಂದರ ಭ್ರಮೆಯಾಗಿತ್ತೆಂಬುದು  ಅರಿವಾದಾಗ ಅವನಿಗೆ  ವಾಸ್ತವವನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಹೀಗಾಗಿ ಅವಳನ್ನಿರಲಿ ತನ್ನನ್ನೇ ಕ್ಷಮಿಸುವುದು ಅವನಿಗೆ ಕಷ್ಟವಾಗುತ್ತದೆ.  ಹೀಗಾಗಿ ಅವನು ಮಾನಸಿಕವಾಗಿ ಅವಳಿಂದ ದೂರವೇ ಉಳಿಯುತ್ತಾನೆ. ಕಾಲೆರಾದಂತಹ ಅತಿ ಬಿಕ್ಕಟ್ಟಿನ ಸಂದರ್ಭದಲ್ಲೂ ಅವನ ಈ ವರ್ತನೆ ಅವಳಿಗೆ ಅತಿಯೆನಿಸುತ್ತದೆ.

ಮುಂದೆ ಕತೆಯು ಪಡೆಯುವ ತಿರುವು ಹಾಗೂ ನಿರೂಪಣೆಯು ಸಾಮರ್ಸೆಟ್  ಮೌಮ್ ನ ಕುಶಲ ಕಲೆಗಾರಿಕೆಯನ್ನು ಪರಿಚಯಿಸುತ್ತದೆ. ಕೆಲವೊಮ್ಮೆ ತೀವ್ರ ಬಿಕ್ಕಟ್ಟಿನ ಸಂದರ್ಭಗಳು ನಮ್ಮ ಯೋಚನೆಯ ಹಾದಿಯನ್ನೇ ಬದಲಿಸಿಬಿಡುತ್ತವೆ. ನಮ್ಮ ಆಯ್ಕೆಗಳು  ಮೌಲ್ಯಗಳು ಹೊಸದೊಂದು ನಿಕಷಕ್ಕೆ ಒಡ್ಡಿಕೊಳ್ಳುತ್ತವೆ. ಬಿಕ್ಕಟ್ಟಿನ ಆಚಿನ ಬದುಕು ಇನ್ನೊಂದು ಆವರ್ತದಲ್ಲಿ ಚಲಿಸುವುದು ಸಾಧ್ಯವಿರುತ್ತದೆ.

ಕಿಟ್ಟಿ ಚಿಕ್ಕ ಮಕ್ಕಳಿಗಾಗಿ ಚರ್ಚಿನ ವತಿಯಿಂದ ಸನ್ಯಾಸಿನಿಯರು ನಡೆಸುತ್ತಿದ್ದ ಶಾಲೆಯಲ್ಲಿ ಕೆಲಸ ಮಾಡಲು ಆರಂಭಿಸುತ್ತಾಳೆ. ಇದೇ ಸಮಯದಲ್ಲಿ ವಾಲ್ಟರ್ ಗೆ ಕಾಲೆರಾ ತಗುಲುತ್ತದೆ. ಸ್ವಲ್ಪ ಸಮಯದಲ್ಲೇ ಆತ ತೀರಿಕೊಳ್ಳುತ್ತಾನೆ. ಚರ್ಚಿನ ಸೇವಾ ಕೆಲಸದಲ್ಲಿ ತೊಡಗಿಕೊಂಡ ಕಿಟ್ಟಿ ಈ ರೀತಿಯ ಜೀವನದಲ್ಲೂ ಇರುವ ನೆಮ್ಮದಿಯನ್ನು ಗುರುತಿಸುತ್ತಾಳೆ. ಆಕೆ ತಾಯಿಯಾಗಲಿರುವಳೆಂಬುದು ತಿಳಿದಾಗ ಚರ್ಚಿನ ಮದರ್ ಸುಪೀರಿಯರ್ ಅವಳನ್ನು ಹಾಂಗ್ ಕಾಂಗ್ ಗೆ ಮರಳಿ ಕಳಿಸುತ್ತಾರೆ. ಕಿಟ್ಟಿಯ ಕೆಲಸದ ಬಗ್ಗೆ ಅಷ್ಟರಲ್ಲಾಗಲೇ ಹಾಂಗ್ ಕಾಂಗ್ ನಲ್ಲೂ ತಿಳಿದಿರುತ್ತದೆ. ಚಾರ್ಲ್ಸ್ ನ ಜೊತೆ ಆಕೆಯ ಹಿಂದಿನ ಸ್ನೇಹದ ಬಗ್ಗೆ ತಿಳಿಯದ ಮಿಸೆಸ್ ಟೌನ್ಸೆಂಡ್ ಆಕೆಯನ್ನು ತಮ್ಮ ಮನೆಗೇ ಆಹ್ವಾನಿಸುತ್ತಾರೆ. ಅವರ ಬಲವಂತಕ್ಕೆ ಅಲ್ಲಿ ಉಳಿಯುತ್ತಾಳೆ.ಅಲ್ಲಿ ಮತ್ತೆ ಚಾರ್ಲ್ಸ್ ನ ಸಂಪರ್ಕಕ್ಕೆ ಬರುತ್ತಾಳೆ. ಇನ್ನೊಮ್ಮೆ ಚಾರ್ಲ್ಸ್ ನ ಆಹ್ವಾನಕ್ಕೆ ಮಣಿಯುತ್ತಾಳೆ. ಮೀ-ಟಾನ್-ಫು ನಲ್ಲಿನ ತನ್ನಎಲ್ಲ ಪರಿವರ್ತನೆಗಳೂ ನಿರ್ಧಾರಗಳೂ ಸುಳ್ಳಾಗಿ ತಾನು ದುರ್ಬಲಳಾದೆನೆಂದು ಆಕೆಗೆ ಪರಿತಾಪವಾಗುತ್ತದೆ. ತನ್ನ ಬದಲಾದ ಧ್ಯೇಯಗಳ ಅನ್ವಯವೇ ಬದುಕಬೇಕೆಂದು ನಿರ್ಧರಿಸಿ ಹಾಂಗ್ ಕಾಂಗ್ ಬಿಡಲು ನಿರ್ಧರಿಸುತ್ತಾಳೆ. ಇದೆ ಸಮಯದಲ್ಲಿ ಕಿಟ್ಟಿಯ ತಾಯಿ ತೀರಿಕೊಂಡದ್ದರಿಂದ ತಂದೆ ಒಬ್ಬರೇ ಇರಬೇಕಾಗಿರುತ್ತದೆ ಹಾಗೂ ಅವರಿಗೆ ಕ್ಯಾರಿಬಿಯನ್ ನಲ್ಲಿ ದೊಡ್ಡ ಹುದ್ದೆಯೂ ಸಿಕ್ಕಿರುತ್ತದೆ. ಕಿಟ್ಟಿ ಅವರೊಂದಿಗೆ ಹೋಗಿ ಇರಲು ನಿರ್ಧರಿಸುತ್ತಾಳೆ.

'ಮದಾಮ್ ಬೋವರಿ' ಯ ಎಮ್ಮಾ ಳೊಂದಿಗೆ ಬಹಳಷ್ಟು ಸಾಮ್ಯಗಳು ಕಂಡರೂ 'ದಿ ಪೇಂಟೆಡ್ ವೈಲ್' ನ ಕಿಟ್ಟಿ ಎಮ್ಮಾ ಳಂತೆ ದುರಂತ ಅಂತ್ಯವನ್ನು ಕಾಣದಿರುವುದು ಒಂದು ಪ್ರಮುಖ ವ್ಯತ್ಯಾಸ. ಕಿಟ್ಟಿ ತನ್ನ ಭವಿಷ್ಯದ ದಿನಗಳನ್ನು ಭರವಸೆಯಿಂದ ಹೊಸ ಸ್ಪೂರ್ತಿಯಿಂದ ಎದುರು ನೋಡುವುದರೊಂದಿಗೆ ಕಾದಂಬರಿ ಮುಗಿಯುತ್ತದೆ. ಕಾದಂಬರಿಯ ಕಡೆಯಲ್ಲಿ ಕಿಟ್ಟಿಯ ಸ್ವಗತ ಹೀಗೆ ಸಾಗುತ್ತದೆ -

"ನನಗೆ ಧೈರ್ಯ ಮತ್ತು ಭರವಸೆಗಳಿವೆ. ಆಗಿದ್ದು ಆಗಿದೆ. ಜೀವನವು ಅಸ್ಥಿರ. ಬರುವುದೆಲ್ಲ ಬರಲಿ. ಎಲ್ಲವನ್ನೂ ಲಘು ಹೃದಯದಿಂದ ಎದುರಿಸುತ್ತೇನೆ. ಇನ್ನೂ ಎಷ್ಟೊಂದು ತಿಳಿಯಲು ಇದೆ. ನಾನು ಬಹಳಷ್ಟು ಓದಬೇಕು. ಬಹಳಷ್ಟು ಕಲಿಯಬೇಕು. ನನ್ನ ಕಣ್ಣ ಮುಂದೆ ಪ್ರಪಂಚದ ಎಷ್ಟೊಂದು ಖುಷಿಗಳಿವೆ, ಜನರಿದ್ದಾರೆ, ಸಂಗೀತವಿದೆ, ನೃತ್ಯವಿದೆ, ಸೌಂದರ್ಯವಿದೆ, ಸಮುದ್ರವಿದೆ, ತಾಳೆ ಮರಗಳಿವೆ, ಸೂರ್ಯೋದಯ, ಸೂರ್ಯಾಸ್ತ, ನಕ್ಷತ್ರಗಳಿಂದ ಕೂಡಿದ ರಾತ್ರಿಗಳಿವೆ. ಎಲ್ಲವೂ ಅಸ್ಪಷ್ಟವಾಗಿದೆ. ಆದರೂ ಒಂದು ಆಕೃತಿಯಿದೆ. ಒಂದು ಅನಂತ ಸಂಪತ್ತಿನ ರಾಶಿ, ಒಂದು ಉದಾರತೆ, ಒಂದು ದಾರಿ, ಒಂದು ದಾರಿ ದೀವಿಗೆ ಮತ್ತು ಬಹುಶಃ ಎಲ್ಲದರ ಕಡೆಯಲ್ಲಿ - ದೇವರು."

ಆದರೆ ಎಮ್ಮಾ ಬೊವರಿಗೆ ಕಡೆಯಲ್ಲಿ ಇದ್ದ ಆಯ್ಕೆಯೇ  ಬೇರೆ.

No comments :