Sunday, April 25, 2021

ದಿ ಪ್ಲೇಗ್ - ಆಲ್ಬರ್ಟ್ ಕಮೂ ಕಾದಂಬರಿ

೧೯೪೦ ರ ದಶಕದಲ್ಲಿ ಆಲ್ಬರ್ಟ್  ಕಮೂ ಬರೆದ 'ದಿ ಪ್ಲೇಗ್' ಕಾದಂಬರಿಯು ಕಳೆದ ಒಂದು ವರ್ಷದ ಅವಧಿಯಲ್ಲಿ ಕೋವಿಡ್ ಮಹಾ ಮಾರಿಯ ಹಿನ್ನೆಲೆಯಲ್ಲಿ ಅನೇಕ ಲೇಖನಗಳಲ್ಲಿ ಚರ್ಚೆಗೆ ಬಂದಿರುವುದನ್ನು ನೋಡಿದ್ದೇನೆ. 

ಅಲ್ಜಿರಿಯಾ ದೇಶದ ಒಂದು ನಗರವಾದ ಓರಾನ್ ಎಂಬುದು ಈ ಕಾದಂಬರಿಯ ಕೇಂದ್ರ ಸ್ಥಳ.  ಆರಂಭದಲ್ಲಿ ಇಲ್ಲಿನ ಜನ ತಮ್ಮ ತಮ್ಮ  ವೃತ್ತಿ ವ್ಯವಹಾರಗಳಲ್ಲಿ ತೊಡಗಿಕೊಂಡು ಪ್ರಕೃತಿಯೊಡನೆ ಅಷ್ಟೇನೂ ಸಂಪರ್ಕ ಇರದವರಂತೆ ತಮ್ಮ  ಪಾಡಿಗೆ ಇರುತ್ತಾರೆ.  

ಕಾದಂಬರಿಯ ನಿರೂಪಕ ಮತ್ತು ಕೇಂದ್ರ ಪಾತ್ರವಾದ ಡಾಕ್ಟರ್ ರಿಯೂ ಒಂದು ದಿನ ಒಂದು ಸತ್ತ ಇಲಿಯನ್ನು ನೋಡುತ್ತಾನೆ. ಸ್ವಲ್ಪ ಸಮಯದಲ್ಲೇ ಮತ್ತೊಂದು. ಮಗದೊಂದು.  ಹೀಗೆ  ಓರಾನ್ ನಲ್ಲಿ ಒಂದಾದ ಮೇಲೆ ಒಂದರಂತೆ ಇಲಿಗಳು  ಚರಂಡಿಗಳಿಂದ  ಹೊರಬಂದು ಬೀದಿಗಳಲ್ಲಿ ಸಾಯುತ್ತವೆ. ಮೊದಲಿಗೆ ಈ ವಿದ್ಯಮಾನದ ಪ್ರಾಮುಖ್ಯತೆ ಅಲ್ಲಿನ ಜನರಿಗೆ ಅರ್ಥವಾಗುವುದಿಲ್ಲ. ಮುಂದೆ ಕೆಲವು ವಾರಗಳಲ್ಲಿ ಜ್ವರದೊಂದಿಗೆ ಬರುವ ನಿಗೂಢವಾದ ಖಾಯಿಲೆಯಿಂದ ಜನರು ಸಾಯತೊಡಗುತ್ತಾರೆ.  ರೋಗದ ಲಕ್ಷಣಗಳೂ ಭೀಕರವಾಗಿರುತ್ತವೆ. 

ಡಾಕ್ಟರ್  ರಿಯೂ ಮತ್ತು ಓರಾನಿನ ಇತರ ಡಾಕ್ಟರುಗಳು ಇದು ಪ್ಲೇಗ್ ಎಂದು ಗುರುತಿಸುತ್ತಾರೆ. ಮುನಿಸಿಪಲ್ ಅಧಿಕಾರಿಗಳು, ಸಾರ್ವಜನಿಕ ಅರೋಗ್ಯ ಇಲಾಖೆ, ವೃತ್ತ ಪತ್ರಿಕೆಗಳು, ರೇಡಿಯೋ ಹೀಗೆ ಎಲ್ಲರೂ ಪ್ಲೇಗ್ ರೋಗಕ್ಕೆ  ಸಂಬಂಧಪಟ್ಟಂತೆ ರೋಗಿಗಳ ಶುಶ್ರೂಷೆ, ಜನ ಜಾಗೃತಿ, ನೈರ್ಮಲ್ಯ ಇತ್ಯಾದಿ ಕೆಲಸಗಳಲ್ಲಿ ತೊಡಗುತ್ತಾರೆ. 

ಹೀಗೆ  ಆರಂಭವಾಗುವ ಕಾದಂಬರಿಯಲ್ಲಿ ಅಲ್ಬರ್ಟ್ ಕಮೂ ಸಮಾಜದ ವಿವಿಧ ಸ್ತರಗಳ ಜನರು  ಇಂತಹದೊಂದು ಅನಿರೀಕ್ಷಿತ ಸನ್ನಿವೇಶಕ್ಕೆ ಮುಖಾಮುಖಿಯಾಗುವ ಬಗೆಯನ್ನು ತನ್ನ ಪ್ರತಿಭೆಯನ್ನು ಬಳಸಿ ಬಹಳ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾನೆ. ಪಾತ್ರಗಳ ವೈಯಕ್ತಿಕ ಜೀವನದ ವಿವರಗಳಿಗಿಂತಲೂ ಪ್ಲೇಗ್ ಮಾರಿಗೆ  ಸಾರ್ವಜನಿಕವಾಗಿ ಪ್ರತಿಕ್ರಿಯಿಸುವ ವಿವರಣೆಯೇ ಹೆಚ್ಚಾಗಿ ಇದೆ. 

ಡಾಕ್ಟರ್ ರಿಯೂ ನ ಪಾತ್ರವನ್ನು ಲಂಕೇಶ್ ತಮ್ಮ ಒಂದು ಲೇಖನದಲ್ಲಿ ಹೀಗೆ ವಿವರಿಸಿದ್ದರು-

"ದೇವರ ಬಗ್ಗೆ ಅತೀ ಗೌರವವಿಲ್ಲದ, ಮನುಷ್ಯ ಬದುಕಿನಿಂದ ಅತೀ ಅಪೇಕ್ಷೆ ಇಲ್ಲದ, ಸಾವಿನ ಬಗ್ಗೆ ಅತೀ ಆತುರವಿಲ್ಲದ, ಕರುಣೆ, ಪ್ರೀತಿ ತುಂಬಿದ ಈ ಡಾಕ್ಟರ ಪಾತ್ರವನ್ನು ಸೃಷ್ಟಿಸುವ ಮೂಲಕ, ಅಲ್ಜೀರಿಯದ ಆ ಪ್ಲೇಗ್ ಬಡಿದ ನಗರದ ನರನಾಡಿಗಳನ್ನು ಬಿಡದೆ ವರ್ಣಿಸುವ ಮೂಲಕ ಸಾಹಿತಿ ಕಾಮು ನಾವು ಜೀವನ ನಡೆಸಬೇಕಾದ ಶೈಲಿಯನ್ನು ದಾಖಲಿಸಿದ್ದಾನೆ."

ಉಳಿದಂತೆ, ಆಧುನಿಕ ಜೀವನದ ಅತಿಗಳಿಗೆ ದೇವರ ಶಿಕ್ಷೆ ಈ ಪ್ಲೇಗ್ ರೂಪದಲ್ಲಿ ಬಂದಿದೆ ಎಂದು ಭಾವಿಸುವ ಕ್ರಿಶ್ಚಿಯನ್ ಅರ್ಚಕ ಪ್ಯಾನೆಲೂ, ಪತ್ರಿಕಾ ವರದಿಯೊಂದನ್ನು ಮಾಡಲು ಬಂದು ಪ್ಲೇಗ್ ಕಾರಣದಿಂದ ಓರಾನ್  ನಗರದಲ್ಲಿ ಸಿಕ್ಕಿಕೊಳ್ಳುವ ಪತ್ರಕರ್ತ ರಾಂಬೇ , ಪ್ಲೇಗ್ ನೊಂದಿಗೆ ಹೋರಾಡುವುದಕ್ಕೆ ಡಾಕ್ಟರ್ ರಿಯೂ ಜೊತೆ ಕೈ ಜೋಡಿಸುವುದು ತನ್ನ ಕರ್ತವ್ಯವೆಂದು ತಿಳಿಯುವ  ಟರೂ, ಪ್ಲೇಗ್ ರೋಗ ತಂದೊಡ್ಡಿದ ಸನ್ನಿವೇಶವನ್ನು ಬಳಸಿಕೊಂಡು ನ್ಯಾಯ ವ್ಯವಸ್ಥೆಯ ಕಣ್ಣು ತಪ್ಪಿಸಿ ಕಾಳದಂಧೆಯಲ್ಲಿ ತೊಡಗುವ ಕೊಟಾರ್ಟ್ ಇವರೆಲ್ಲ ಕಾದಂಬರಿಯ ಇತರ ಪಾತ್ರಗಳು. 

ಡಾಕ್ಟರ್ ರಿಯೂ ನಂತೆಯೇ ಕಾದಂಬರಿಯಲ್ಲಿ ಬಹಳ ಮುಖ್ಯ ಎಂದು ನನಗೆ ಅನಿಸಿದ ಇನ್ನೊಂದು ಪಾತ್ರ ಟರೂ ನದ್ದು. "ನಾವೆಲ್ಲರೂ ಪ್ಲೇಗ್ ಪೀಡಿತರೇ. ಯಾರೂ ಇದರಿಂದ ಹೊರತಲ್ಲ" ಎನ್ನುತ್ತಾ ತನ್ನದೇ  ಜೀವನದ ಹಿನ್ನೆಲೆಯಲ್ಲಿ  ನ್ಯಾಯ ವ್ಯವಸ್ಥೆ, ರಾಜಕೀಯ ವಿಚಾರ ಧಾರೆಗಳು, ತೀವ್ರಗಾಮಿ ಸಂಘಟನೆಗಳು ಇವೆಲ್ಲದರ ಬಗ್ಗೆ ವಿಶ್ಲೇಷಣಾತ್ಮಕವಾಗಿ ಟರೂ ವಿವರಿಸುವುದು ಯೋಚಿಸಬೇಕಾದ ವಿಚಾರಗಳು ಅನಿಸಿತು. ಆದ್ದರಿಂದ ಈ ಬರಹದಲ್ಲಿ ಟರೂ ನ ಪಾತ್ರದ ಬಗ್ಗೆ ಹೆಚ್ಚು ವಿವರ ನೀಡಲು ಪ್ರಯತ್ನಿಸಿದ್ದೇನೆ. ಈ ಭಾಗವನ್ನು ಓದುವಾಗ ನಮ್ಮ ಭಾರತದ ರಾಜಕೀಯಕ್ಕೆ ಸಂಬಂಧಪಡುವ ಮಾವೋವಾದಿ ಸಂಘಟನೆಯ ಹಿನ್ನೆಲೆಯ  ಒಂದೆರಡು ಕಾದಂಬರಿಗಳು ನೆನಪಿಗೆ ಬಂದವು. ನೀಲ್ ಮುಖರ್ಜಿ ಬರೆದ 'ದಿ ಲೈಫ್ ಆಫ್ ಅದರ್ಸ್' ಮತ್ತು ಜುಂಪಾ ಲಹರಿ ಬರೆದ 'ದಿ ಲೋಲ್ಯಾನ್ಡ್'. 

ಡಾಕ್ಟರ್ ರಿಯೂ ಮತ್ತು ಟರೂ ನಡುವೆ ನಡೆಯುವ ಒಂದು ಮಾತುಕತೆ ಕಾದಂಬರಿಯಲ್ಲಿ ಒಂದು ಆಸಕ್ತಿ ಕೆರಳಿಸುವ ಘಟನೆಯಾಗಿ ಬರುತ್ತದೆ. ಹಗಲಿರುಳೆನ್ನದೆ ಪ್ಲೇಗ್ ರೋಗಿಗಳ ಆರೈಕೆಯಲ್ಲಿ ತೊಡಗಿಕೊಳ್ಳುವ ಈ ಇಬ್ಬರು ಸ್ನೇಹಿತರು ತಮ್ಮ ಕೆಲಸದಿಂದ ಒಂದು ಪುಟ್ಟ ವಿರಾಮ ತೆಗೆದುಕೊಂಡು ಸಮುದ್ರದಲ್ಲಿ ಈಜಲು ಹೋಗುತ್ತಾರೆ. ಆ  ಸಂದರ್ಭದಲ್ಲಿ ಟರೂ ತನ್ನ ಚಿಕ್ಕಂದಿನ ದಿನಗಳ ಬಗ್ಗೆ, ತನ್ನನ್ನು ಪ್ರಭಾವಿಸಿದ ವ್ಯಕ್ತಿಗಳು, ವಿಷಯಗಳ ಬಗ್ಗೆ ರಿಯೂನೊಂದಿಗೆ ಹಂಚಿಕೊಳ್ಳುತ್ತಾನೆ. 

ನಮ್ಮನ್ನು ಅಮರಿಕೊಳ್ಳುವ ಇನ್ನೊಂದು ಬಗೆಯ 'ಪ್ಲೇಗ್' ಬಗ್ಗೆ ಟರೂ ಹೇಳುತ್ತಾನೆ. ಓರಾನ್  ನಗರದ ಬಗ್ಗೆ ಮತ್ತು ಇಲ್ಲಿನ ಪ್ಲೇಗ್ ಬಗ್ಗೆ ತಿಳಿಯುವುದಕ್ಕಿಂತ ಬಹಳ ಮೊದಲೇ ತಾನು ಅಂಥದೊಂದು ಇನ್ನೊಂದು ಬಗೆಯ ಪ್ಲೇಗಿಗೆ ತುತ್ತಾಗಿದ್ದರ ಬಗ್ಗೆ ಹೇಳುತ್ತಾನೆ. ಆ  ದೃಷ್ಟಿಯಿಂದ ತಾನೂ ಸಹ ಎಲ್ಲರಂತೆ ಒಬ್ಬನೆಂದೂ, ಕೆಲವು ಜನರು ಅಂಥದೊಂದು ಪ್ಲೇಗ್ ತಮಗೆ ಬಡಿದಿರುವುದನ್ನು ತಿಳಿದಿರುವುದಿಲ್ಲ ಅಥವಾ ತಿಳಿದಿದ್ದರೂ ಆ ಪ್ಲೇಗಿನ  ಸ್ಥಿತಿಯಲ್ಲೂ ಆನಂದದಿಂದ ಇರುತ್ತಾರೆ ಮತ್ತು ಇನ್ನೂ ಕೆಲವರಿಗೆ ತಮ್ಮ ಪ್ಲೇಗಿನ ಬಗ್ಗೆ ತಿಳಿದಿರುತ್ತದೆ ಮತ್ತು ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆಂದೂ, ತಾನೂ ಸಹ ತನ್ನ ಪ್ಲೇಗಿನಿಂದ ತಪ್ಪಿಸಿಕೊಳ್ಳಲು ಸದಾ ಪ್ರಯತ್ನಿಸುತ್ತಿರುವುದಾಗಿ ಹೇಳುತ್ತಾನೆ. 

ಟರೂ ನ ತಂದೆ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುತ್ತಾನೆ. ಟರೂ ಹದಿನೇಳು ವರ್ಷದವನಾಗಿದ್ದಾಗ ಅವನ ತಂದೆ ಒಂದು ದಿನ ಅವನನ್ನು ತನ್ನ ಕೆಲಸದ ಸ್ಥಳಕ್ಕೆ ಕರೆದೊಯ್ಯುತ್ತಾನೆ. ಸರ್ಕಿಟ್ ಕೋರ್ಟಿನಲ್ಲಿ ಅಂದು ಒಂದು ಮುಖ್ಯವಾದ ಕೇಸು ವಿಚಾರಣೆಗೆ ಬಂದಿರುತ್ತದೆ. ಟರೂನ ಪಾಲಿಗೆ ಅಂದಿನ ಆ ಕೋರ್ಟಿನ ಕಲಾಪದ ವೀಕ್ಷಣೆ ಅತ್ಯಂತ ಮಹತ್ವದ ತಿರುವಿಗೆ ಕಾರಣವಾಗುತ್ತದೆ. 

ಅಪರಾಧಿ ಸ್ಥಾನದಲ್ಲಿದ್ದ ಸುಮಾರು ಮುವ್ವತ್ತು ವರ್ಷ ವಯಸ್ಸಿನ ವ್ಯಕ್ತಿಯ ಚಿತ್ರ ಟರೂನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಬಿಡುತ್ತದೆ. ಆ ವ್ಯಕ್ತಿಯು ಅಪರಾಧ ಮಾಡಿದ್ದರ ಬಗ್ಗೆ ಟರೂ ಗೆ ಅನುಮಾನ ಇರದಿದ್ದರೂ (ಯಾವ ಅಪರಾಧ ಅನ್ನುವುದು ಟರೂ ಗೆ ಅಷ್ಟು ಮುಖ್ಯ ಅನಿಸುವುದಿಲ್ಲ), ಯಾವುದೇ ಅಪರಾಧ ಆಗಿರಲಿ, ಆ ವ್ಯಕ್ತಿ ತಾನು ಮಾಡಿದ್ದೆಲ್ಲವನ್ನೂ ಒಪ್ಪಿಕೊಳ್ಳಲು ಸಿದ್ಧನಿದ್ದದ್ದೂ, ತನ್ನ ಅಪರಾಧ ಮತ್ತು ತನಗೆ ಅದರಿಂದ ಆಗಬಹುದಾದ ಶಿಕ್ಷೆಯ ಬಗ್ಗೆ ಅವನಲ್ಲಿ ಭಯಭೀತಿ ಇದ್ದದ್ದೂ ಇದೆಲ್ಲವೂ ಟರೂ ನಿಗೆ ಕಣ್ಣಿಗೆ ಕಟ್ಟಿದಂತೆ ಉಳಿದುಬಿಡುತ್ತವೆ. ಎಲ್ಲರೂ ಆ ಅಪರಾಧಿಯ ಸಾವನ್ನು ಬಯಸುತ್ತಿದ್ದಾರೆಂದು ಅರಿವಿಗೆ ಬಂದು ಅಪರಾಧಿಯ ಬಗ್ಗೆ ಟರೂ ಗೆ ಇನ್ನಿಲ್ಲದ ಅನುಕಂಪ ಬಂದುಬಿಡುತ್ತದೆ. ಇಷ್ಟರಲ್ಲಿ ಟರೂ ನ ತಂದೆ  ಪ್ರಾಸಿಕ್ಯೂಟರ್ ಸ್ಥಾನದಲ್ಲಿ ನಿಂತು, ಸಮಾಜದ ದೃಷ್ಟಿಯಿಂದ ಅಪರಾಧಿಗೆ ಸಾವಿನ ಶಿಕ್ಷೆ ಆಗಲೇಬೇಕೆಂದು  ವಾದಿಸುತ್ತಾನೆ. ಅಪರಾಧಿಗೆ ಸಾವಿನ ಶಿಕ್ಷೆ(death penalty) ಆಗುತ್ತದೆ. ಟರೂ ಇದರಿಂದ ತೀರಾ ತಳಮಳಗೊಳ್ಳುತ್ತಾನೆ. ಅಲ್ಲದೆ ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಯಲ್ಲಿರುವ ಕಾರಣ ಟರೂ  ನ ತಂದೆ ಇಂತಹ ಶಿಕ್ಷೆಯ ಅನುಷ್ಟಾನವನ್ನು ವೀಕ್ಷಿಸುವ ಆಹ್ವಾನಿತರಲ್ಲಿ ಒಬ್ಬನಾಗಿರುವುದೂ ಟರೂ ನನ್ನ ವಿಚಲಿತಗೊಳಿಸುತ್ತದೆ. ಮನೆ ಬಿಟ್ಟು ಹೋಗಲು ಟರೂ ನಿರ್ಧರಿಸುತ್ತಾನೆ. 

ಈ ರೀತಿ ತನ್ನ ಹದಿನೆಂಟನೇ ವಯಸ್ಸಿಗೇ ಟರೂ ಅನುಕೂಲಸ್ಥ ಕುಟುಂಬದಿಂದ ಬಂದವನಾದರೂ ಬಡತನಕ್ಕೆ ಈಡಾಗಬೇಕಾಗುತ್ತದೆ. ಸಾವಿನ ಶಿಕ್ಷೆ ಮತ್ತು ಅದರ ಅಮಾನವೀಯತೆಯ ಬಗ್ಗೆ ಟರೂ ನ ಆಸಕ್ತಿ ಹೆಚ್ಚಾಗುತ್ತದೆ. ತಾನು ವೀಕ್ಷಿಸಿದ್ದ ಕೋರ್ಟ್ ರೂಮ್ ಕಲಾಪ ಮತ್ತು ಸಾವಿನ ಶಿಕ್ಷೆಯ ಘಟನೆ ಅವನನ್ನು ರಾಜಕೀಯದತ್ತ ಸೆಳೆಯುತ್ತವೆ. ಇನ್ನೊಬ್ಬ ಮನುಷ್ಯನ ಹತ್ಯೆಯ ಆಧಾರದ  ಮೇಲೆ ರೂಪಿತವಾದ ಸಮಾಜವು ಟರೂ ನಿಗೆ ಒಪ್ಪಿಗೆಯಾಗುವುದಿಲ್ಲ. ಇಂತಹ ವ್ಯವಸ್ಥೆಯ ವಿರುದ್ಧವಿದ್ದ ರಾಜಕೀಯ ಶಕ್ತಿಗಳು ಟರೂ ಗೆ ಸಮ್ಮತವಾಗುತ್ತವೆ. 

ಅಂತಹ ರಾಜಕೀಯ ಶಕ್ತಿಗಳ ಜೊತೆ ಬಹಳ ಸಮಯ ಕಳೆಯುವ ಟರೂ ಯೂರೋಪಿನ ಹಲವು ದೇಶಗಳಲ್ಲಿ ಹೋರಾಟಗಳಲ್ಲಿ ಭಾಗಿಯಾಗುತ್ತಾನೆ. ತಾನು ಭಾಗಿಯಾಗಿರುವ ಗುಂಪುಗಳೂ ಕೆಲವೊಮ್ಮೆ ಸಾವಿನ ಶಿಕ್ಷೆ ವಿಧಿಸುವುದು ಟರೂ ಗೆ ಗೊತ್ತಿದ್ದರೂ, ಇಂತಹ ಕೆಲವು ಹತ್ಯೆಗಳು ಅಗತ್ಯವೆಂದೂ, ಯಾರೂ ಯಾರನ್ನೂ ಕೊಲ್ಲದಂತಹ ಒಂದು ಪ್ರಪಂಚವನ್ನು ಕಟ್ಟಲು ಇದು ಅನಿವಾರ್ಯ  ಎಂದು ಅವನಿಗೆ ಹೇಳಲಾಗುತ್ತದೆ. ಇದು ಒಂದು ಮಟ್ಟಿಗೆ ಸತ್ಯವೇ ಆಗಿದ್ದರೂ ಅಂತಹ ಸತ್ಯಗಳೊಂದಿಗೆ ಬದುಕುವುದು ಅವನಿಗೆ ಸಾದ್ಯವಾಗದೆಂಬುದೂ ಅವನ ಯೋಚನೆಯಾಗಿರುತ್ತದೆ. ಆದರೂ ಚಿಕ್ಕಂದಿನ ಆ ಕೋರ್ಟಿನ ಘಟನೆಯ ನೆನಪು ಅವನನ್ನು ಈ ಗುಂಪುಗಳೊಂದಿಗೆ ಮುಂದುವರೆಯುವಂತೆ ಮಾಡುತ್ತದೆ. ಮುಂದೆ ಒಂದು ದಿನ ಹಂಗರಿಯಲ್ಲಿ ತನ್ನ ಗುಂಪಿನವರಿಂದ ಒಂದು ಹತ್ಯೆಯ ಶಿಕ್ಷೆಯನ್ನು ವೀಕ್ಷಿಸುವವರೆಗೂ. ಅಂದು ಟರೂ ಗೆ ತಾನು ಹಿಂದೆ ಕೋರ್ಟಿನಲ್ಲಿ ಅಪರಾಧಿಯ ಶಿಕ್ಷೆಯನ್ನು ವೀಕ್ಷಿಸಿದಾಗ ಬಂದಿದ್ದಂತಹ ತೀವ್ರ ಭೀಕರತೆಯ ಭಾವನೆ ಬರುತ್ತದೆ. 

ಮೊದಲ ಬಾರಿಗೆ ಟರೂ ಗೆ ತಾನೂ ಸಹ 'ಪ್ಲೇಗ್'ಗೆ ಬಲಿಯಾದವನೆಂಬ ಸತ್ಯ ಹೊಳೆಯುತ್ತದೆ.  ಪರೋಕ್ಷವಾಗಿ ಸಾವಿರಾರು ಜನರ ಹತ್ಯೆಗೆ ತಾನೂ ಕಾರಣವಾದೆನೆಂದು ಅನಿಸತೊಡಗುತ್ತದೆ. ಒಂದು ಪ್ಲೇಗ್ ನ್ನು ಎದುರಿಸುವ ಸಲುವಾಗಿ  ಮತ್ತೆ ಹಿಂಸೆಯನ್ನೇ ಸಮರ್ಥಿಸುವ ವಿಚಾರಧಾರೆಯನ್ನು ಒಪ್ಪಿಕೊಳ್ಳುವ ಮೂಲಕ ತಾನೂ ಇನ್ನೊಂದು ಪ್ಲೇಗಿಗೆ ಗುರಿಯಾದೆನೆಂಬ ಪಾಪಪ್ರಜ್ಞೆ ಕಾಣಿಸಿಕೊಳ್ಳುತ್ತದೆ. ಅವನ ಗುಂಪಿನ ಇತರರಿಗೆ ಇಂತಹ ಯಾವುದೇ ಕಾಳಜಿ ಇದ್ದಂತೆ ಇವನಿಗೆ ಕಾಣುವುದಿಲ್ಲ. ಇದ್ದರೂ ಅದರ ವಿಷಯವಾಗಿ ಅವರು ಮಾತನಾಡಲು ಹೋಗುತ್ತಿರಲಿಲ್ಲ. ಟರೂ ಗೆ ಈ ವಿಚಾರ ಗಂಟಲಲ್ಲಿ ಸಿಕ್ಕಿಕೊಂಡಂತೆ ಕಾಡುತ್ತದೆ.  ಹೀಗಾಗಿ ಗುಂಪಿನ ಇತರರ ಜೊತೆ ಅವನಿಗೆ ಒಂದು  ಪರಕೀಯ ಭಾವನೆ ಉಂಟಾಗುತ್ತದೆ. ಮಹತ್ತರವಾದ ಗುರಿಯೊಂದರ ಸಾಧನೆಗೆ ಇದೆಲ್ಲ ಅನಿವಾರ್ಯವೆಂದು  ಅವನ ಗುಂಪಿನ ಇತರರು ಅವನಿಗೆ ಸಮಜಾಯಿಷಿ ನೀಡುತ್ತಾರೆ. ಆದರೆ ತನ್ನ ಗುಂಪಿನವರ ಹಿಂಸೆಯ ತರ್ಕವನ್ನು ಒಪ್ಪಿಕೊಂಡರೆ ಎದುರಾಳಿ ಗುಂಪಿನ ತರ್ಕವನ್ನೂ ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಅವನಿಗೆ ಅನಿಸುತ್ತದೆ. ಅಲ್ಲದೆ, ಒಂದು ಸಲ ಈ ಹಿಂಸೆಯ ಮಾರ್ಗವನ್ನು ಒಪ್ಪಿಕೊಂಡು, ಒಂದು ಹತ್ಯೆಯನ್ನು  ಅನುಮೋದಿಸಿದರೆ  ಮತ್ತೆ ನಿಲ್ಲಿಸಲು ಕಾರಣಗಳಿರುವುದಿಲ್ಲ ಎಂಬುದರ ಅರಿವೂ ಅವನಿಗಾಗುತ್ತದೆ. 

ಹೀಗೆ ಟರೂ ಗೆ ತನ್ನನ್ನೂ ಸೇರಿ ಎಲ್ಲರೂ ಪ್ಲೇಗ್ ಬಡಿದವರೇ ಆಗಿದ್ದೇವೆಂಬ ಅರಿವಿನಿಂದ ತನ್ನ ಬಗ್ಗೆಯೇ ನಾಚಿಕೆಯೂ ಆಗಿ ಮನಸ್ಸಿನ ಶಾಂತಿಯೇ ಕಳೆದು ಹೋಗುತ್ತದೆ. ಕಳೆದುಹೋದ ಮನಶ್ಶಾಂತಿಯನ್ನು ಹುಡುಕುತ್ತ ಎಲ್ಲರನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ.  ಯಾರಿಗೇ ಆಗಲಿ ಮಾರಣಾಂತಿಕ ಶತ್ರುವಾಗದೇ ಇರಲು ನಿರ್ಧರಿಸುತ್ತಾನೆ. ಇತರರನ್ನು ನಾಶ ಮಾಡುವ ಮನಸ್ಥಿತಿಯ 'ಪ್ಲೇಗ್'ನ್ನು ಎದುರಿಸುವುದು ಮತ್ತು ಅದಕ್ಕೆ ಬಲಿಯಾಗದಿರುವುದು ಅವನ ಗುರಿಯಾಗುತ್ತದೆ.  ಶಾಂತಿಯಿಂದ ಇರಲು ಅದೊಂದೇ ಮಾರ್ಗವೆಂದು ಮನಗಾಣುತ್ತಾನೆ. ಹೀಗಾಗಿ ನೇರವಾಗಿ ಮತ್ತು ಪರೋಕ್ಷವಾಗಿ ಇನ್ನೊಬ್ಬರನ್ನು ಸಾಯಿಸುವ ಅಥವಾ ಸಾಯಿಸಲು ಕಾರಣವಾಗುವ ಎಲ್ಲವನ್ನೂ  ನಿರಾಕರಿಸಲು ನಿರ್ಧರಿಸುತ್ತಾನೆ. 

ಪ್ಲೇಗ್ ಅನ್ನು ಒಂದು ಸಂಕೇತದಂತೆ ಬಳಸುತ್ತ ಮನುಷ್ಯರ ಮನಸ್ಸುಗಳಿಗೆ ತಗುಲುವ ಪ್ಲೇಗ್ ಬಗ್ಗೆ ಹೇಳುವ ಟರೂ,  ಓರಾನ್ ನ  ಪ್ಲೇಗ್  ಜೊತೆ ಅದನ್ನು ಹೋಲಿಕೆ ಮಾಡುತ್ತಾ ಹೀಗೆ ಹೇಳುತ್ತಾನೆ- "ಎಲ್ಲರೂ ಪ್ಲೇಗ್ ಬಡಿದವರೇ ಆಗಿರುವುದರಿಂದ ನಮ್ಮನ್ನು ನಾವೇ ಎಚ್ಚರಿಕೆಯಿಂದ ಕಾಯ್ದುಕೊಳ್ಳುತ್ತಾ ಇನ್ನೊಬ್ಬರಿಗೆ ಅದನ್ನು ದಾಟಿಸುವುದನ್ನು ತಪ್ಪಿಸಬೇಕು. ಪ್ರಕೃತಿಯಲ್ಲಿ ಸಹಜವಾಗಿ ಬರುವುದೇ ರೋಗಾಣು. ಆರೋಗ್ಯ, ಶುದ್ಧತೆ, ಇವೆಲ್ಲಾ ಸತತ ಇಚ್ಛಾಶಕ್ತಿಯಿಂದ ಸಾಧಿಸಬೇಕಾದಂತಹವು.  ಒಳ್ಳೆಯ ಮನುಷ್ಯನಾದವನೆಂದರೆ ಬೇರೆ ಯಾರಿಗೂ ರೋಗವನ್ನು ದಾಟಿಸದವನು. ಬಹಳ ಏಕಾಗ್ರತೆಯಿರುವವರಿಂದ ಮಾತ್ರ ಇದು ಸಾಧ್ಯ.  ಪ್ಲೇಗ್ ಪೀಡಿತರಾಗಿ  ಇರುವುದು ಬಹಳ ತ್ರಾಸ ಉಂಟು  ಮಾಡುವಂತದ್ದು. ಆದರೆ ಪ್ಲೇಗನ್ನು ಬರಿಸಿಕೊಳ್ಳದೇ ಉಳಿಯಲು ಬಯಸುವುದು ಇನ್ನೂ ತ್ರಾಸದಾಯಕ. ಅದಕ್ಕೇ ಎಲ್ಲರೂ ಸುಸ್ತಾದಂತೆ ಕಾಣಿಸುವುದು. ಏಕೆಂದರೆ ಈಗ ಎಲ್ಲರೂ ಸ್ವಲ್ಪ ಪ್ಲೇಗ್ ಬಡಿದವರೇ.  ಪ್ಲೇಗ್ ನಿಂದ ಬಿಡುಗಡೆ ಬಯಸುವವರು ಇನ್ನೂ ಅತ್ಯಂತ ತ್ರಾಸಪಡುವವರು, ಏಕೆಂದರೆ ಆ ಬಿಡುಗಡೆ ಅವರಿಗೆ ಸಾವಿನೊಂದಿಗಷ್ಟೇ ಬರಬೇಕು."  

ತಾನು ಎಲ್ಲರನ್ನು ಎರಡು ಗುಂಪುಗಳಾಗಿ ನೋಡುವುದಾಗಿಯೂ, ಒಂದು ಗುಂಪಿನವರು ಕ್ರಿಮಿಗಳಾದರೆ, ಇನ್ನೊಂದು ಗುಂಪಿನವರು ಆ ಕ್ರಿಮಿಗಳಿಗೆ ಬಲಿಯಾಗುವವರೆಂದೂ, ಮತ್ತು ನಾವು ಸಾಧ್ಯವಾದಷ್ಟು ಮಟ್ಟಿಗೆ ಕ್ರಿಮಿಗಳ ಗುಂಪಿಗೆ ಸೇರಲು ನಿರಾಕರಿಸಬೇಕೆಂದು ಟರೂ ಹೇಳುತ್ತಾನೆ. ಮೂರನೆಯ ಇನ್ನೊಂದು ಗುಂಪು ಇರಬೇಕೆಂದೂ ಅದು ಜಾಢ್ಯವನ್ನು ನಿಜವಾಗಿ ಗುಣಪಡಿಸುವವರ ಗುಂಪೆಂದೂ ಆದರೆ ಅದು ಅತ್ಯಂತ ಕಷ್ಟದ ಕೆಲಸವಾಗಿರುವುದರಿಂದ ತಾನು ಎರಡನೇ ಗುಂಪಿನಲ್ಲಿ ಇರಲು ಬಯಸುವುದಾಗಿಯೂ  ಹೇಳುತ್ತಾನೆ.  ಎರಡನೇ ಗುಂಪಿನಲ್ಲಿದ್ದುಕೊಂಡು ಅಲ್ಲಿನವರಿಗೆ ಸಹಾಯ ಮಾಡುತ್ತಲೇ ಮೂರನೆಯ ಗುಂಪಿಗೆ ಹೋಗುವ ಮತ್ತು ಆ ಮೂಲಕ ಶಾಂತಿಯನ್ನು ಸಾಧಿಸುವ ಪ್ರಯತ್ನ ಮಾಡುವುದು ತನ್ನ ಗುರಿಯೆಂದು  ಟರೂ ತನ್ನ ಮಾತನ್ನು ನಿಲ್ಲಿಸುತ್ತಾನೆ. 

ಹೀಗೆ 'ದಿ ಪ್ಲೇಗ್' ಕಾದಂಬರಿಯು ಬಾಹ್ಯವಾಗಿ ತಗುಲಿಕೊಳ್ಳುವ ರೋಗವನ್ನು ಎದುರಿಸಲು  ನಾವು ಸಿದ್ಧವಾಗುವಂತೇ ಮೇಲೆ ವಿವರಿಸಿದ ದ್ವೇಷವೆಂಬ ಆ  ಇನ್ನೊಂದು ಪ್ಲೇಗ್ ನ್ನು ಎದುರಿಸಲು ಸಹ ನಾವು ಸಿದ್ಧವಾಗಬೇಕಾದ ಅಗತ್ಯವನ್ನು ಹೇಳುತ್ತದೆ. 

ಕಾದಂಬರಿಯ ಕಡೆಯಲ್ಲಿ ಓರಾನಿನ ಪ್ಲೇಗು ಸಂಪೂರ್ಣ ನಿಯಂತ್ರಣಕ್ಕೆ ಬಂದು ನಗರದಲ್ಲಿ ವಿಧಿಸಿದ್ದ ಮುಂಜಾಗ್ರತೆಯ ಅನೇಕ ನಿಷೇಧಗಳನ್ನು ತೆರವು ಮಾಡಲಾಗುತ್ತದೆ. ಜನರ ಸಂತಸದ ಕೂಗು ಕೇಕೆಗಳನ್ನು ಕೇಳಿಸಿಕೊಳ್ಳುವ ಡಾಕ್ಟರ್ ರಿಯೂ ನಿಗೆ ಈ ಬಗೆಯ ಸಂಭ್ರಮ ಹೆಚ್ಚು ಕಾಲದ್ದಲ್ಲ ಎಂಬ ವಿಚಾರ ನೆನಪಿಗೆ ಬರುತ್ತದೆ. ಪ್ಲೇಗ್ ನ ಕ್ರಿಮಿ ಸಂಪೂರ್ಣ ಸಾಯುವುದಿಲ್ಲ ಅಥವಾ ಮರೆಯಾಗುವುದಿಲ್ಲ. ಅದು ಪೀಠೋಪಕರಣಗಳಲ್ಲೋ, ಬಟ್ಟೆಗಳಲ್ಲೋ ತಟಸ್ಥವಾಗಿ ಉಳಿದು, ಕೋಣೆಗಳಲ್ಲೋ, ಅಡಿಮನೆಯಲ್ಲೋ, ಟ್ರಂಕಿನಲ್ಲೋ, ಕರವಸ್ತ್ರದಲ್ಲೋ, ಕಾಗದದಲ್ಲೋ ತಾಳ್ಮೆಯಿಂದ ಕಾದು, ಮನುಷ್ಯರ ಶಿಕ್ಷೆ ಮತ್ತು ಶಿಕ್ಷಣಕ್ಕಾಗಿ  ಒಂದು ದಿನ ತನ್ನ ಇಲಿಗಳನ್ನು ಅವರ ಮೋಜಿನ ನಗರಗಳಲ್ಲಿ  ಸಾಯಲು ಕಳಿಸಬಲ್ಲುದು ಎನ್ನುವುದು ಅವನಿಗೆ ತಿಳಿದಿರುತ್ತದೆ. ಉತ್ಸಾಹದಲ್ಲಿದ್ದ ಜನರಿಗೆ ಅದರ  ಪರಿವೆ ಇರುವುದಿಲ್ಲ.   


1 comment :

ವಿನಯ್ ಮಾಧವ್ said...

ಪ್ಲೇಗ್ ನ ಕ್ರಿಮಿ‌ಸಾಯುವುದಿಲ್ಲ ಅಥವಾ ಮರೆಯಾಗುವುದಿಲ್ಲ. ಅದು ಪೀಠೋಪಕರಣಗಳಲ್ಲೋ, ಬಟ್ಟೆಗಳಲ್ಲೋ ತಟಸ್ಥವಾಗಿ ಉಳಿದು........ ಎನ್ನುವ ಮಾತು ಸರ್ವಕಾಲಕ್ಕೂ, ಸರ್ವ ಸಮಾಜಕ್ಕೂ ಅನ್ವಯಿಸುತ್ತದೆ.