Monday, July 24, 2023

ಮಿಲಾನ್ ಕುಂದೆರಾ

ಈಚೆಗೆ ತೀರಿಕೊಂಡ ಮಿಲಾನ್ ಕುಂದೆರಾ ಜೆಕೊಸ್ಲೊವಾಕಿಯಾದ ಕಾದಂಬರಿಕಾರ. ೧೯೭೫ ರಿಂದ ಫ್ರಾನ್ಸ್ ನಲ್ಲಿ ನೆಲೆಸಿದ್ದ ಕುಂದೆರಾ ಎರಡನೇ ಜಾಗತಿಕ ಯುದ್ಧದ ನಂತರದಲ್ಲಿ ತನ್ನ ದೇಶಕ್ಕೆ ಮತ್ತು ತನಗೆ ವೈಯಕ್ತಿಕವಾಗಿ ಆದದ್ದರ ಅನುಭವದಲ್ಲಿ ರಚಿಸಿದ ಕೃತಿಗಳು ಖಾಸಗಿ ಜೀವನದ ಸೂಕ್ಷ್ಮಗಳ ಜೊತೆಗೇ ರಾಜಕೀಯದ ವಿಪರೀತಗಳು ತಳುಕು ಹಾಕಿಕೊಂಡಿರುವುದನ್ನು ಕಟ್ಟಿಕೊಡುವ ಪರಿ ಅದ್ಭುತ.

ಕುಂದೆರಾ ಬರೆದ The Book Of Laughter and Forgetting (ನಗೆ ಮತ್ತು ಮರೆವಿನ ಪುಸ್ತಕ) ಮತ್ತು The Unbearable Lightness of Being (ಇರುವಿಕೆಯ ಅಸಹನೀಯ ಹಗುರತೆ) ಬಹಳ ಮುಖ್ಯವಾದ ಕಾದಂಬರಿಗಳು. ೧೯೬೮ರಲ್ಲಿ ರಷ್ಯನ್ ಸೇನೆ ಜೆಕೋಸ್ಲಾವಿಯಾಕ್ಕೆ ನುಗ್ಗಿ ಸ್ಟಾಲಿನ್ ಮಾದರಿಯ ಕಮ್ಯುನಿಸ್ಟ್ ತತ್ತ್ವದ ನಿಷ್ಟನೊಬ್ಬನನ್ನು ಸ್ಥಾಪಿಸಿದ ಮೇಲೆ ಶುರುವಾದ ದಬ್ಬಾಳಿಕೆ, ಅಲ್ಲಿನ ಜೀವನ ಸಂಸೃತಿಯ ಮೇಲೆ ನಡೆಸಿದ ದಾಳಿ ಇದೆಲ್ಲದರಿಂದ ತಪ್ಪಿಸಿಕೊಳ್ಳಲು ಕುಂದೆರಾ ಕಾರಿನಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಫ್ರಾನ್ಸ್ ಗೆ ಹೋಗಿ ನೆಲೆಸಿದ್ದ. 

ನಗೆ ಮತ್ತು ಮರೆವಿನ ಪುಸ್ತಕ ಕಾದಂಬರಿಯ ಬಗ್ಗೆ ಕನ್ನಡದ ಸಾಹಿತಿ, ಪತ್ರಕರ್ತ ಪಿ ಲಂಕೇಶ್ ತಮ್ಮ 'ಲಂಕೇಶ್ ಪತ್ರಿಕೆ' ಯಲ್ಲಿ ಬರೆದಿದ್ದರು.  

ಕುಂದೆರಾನ ಇನ್ನೊಂದು ಪುಸ್ತಕ The Unbearable Lightness of Being ಸಹ ತೀಕ್ಷ್ಣವಾದ ರಾಜಕೀಯ ಟಿಪ್ಪಣಿ ಉಳ್ಳದ್ದಾಗಿದೆ. ಈ ಕಾದಂಬರಿಯಲ್ಲಿ ಸಬೀನಾ ಎಂಬ ಪಾತ್ರದ ಮೂಲಕ ಕುಂದೆರಾ ಒಂದು ಆಸಕ್ತಿಕರವಾದ ವಿಚಾರವನ್ನು ಮುಂದಿಡುತ್ತಾನೆ. ಇಂಗ್ಲಿಷ್ನಲ್ಲಿ kitsch (ಗೂಗಲ್ ನಲ್ಲಿ ಇದರ ಕನ್ನಡ ಅನುವಾದ 'ಖಾಲಿ ಬೆಡಗು' ಎಂದಿದೆ) ಎಂದು ಕರೆಯುವ ಈ ವಿದ್ಯಮಾನವನ್ನು ಸಬೀನಾ totalitarianism (ನಿರಂಕುಶ ಪ್ರಭುತ್ವ) ಗೆ ಅನ್ವಯಿಸುತ್ತಾಳೆ. ಇಂತಹ ನಿರಂಕುಶ ಪ್ರಭುತ್ವವನ್ನು ಜನ ಒಪ್ಪಿಕೊಂಡಾಗ ಅವರು ಎಲ್ಲವನ್ನೂ ಗುಣಾತ್ಮಕವಾಗೇ ತೆಗೆದುಕೊಳ್ಳುತ್ತಾರೆ. ಇದು ಎಷ್ಟರಮಟ್ಟಿಗೆಂದರೆ ಅವರ ನಿತ್ಯಜೀವನದ ಸಮಸ್ಯೆಗಳನ್ನು ಎದುರಿಸುವ ಶಕ್ತಿಯನ್ನೇ ಕಳೆದುಕೊಳ್ಳುವಷ್ಟು. kitsch ಗೆ 'ಕೆಲಸಕ್ಕೆ ಬಾರದ ಡೌಲು' ಎಂಬ ಅರ್ಥವೂ ಗೂಗಲ್ ನಲ್ಲಿದೆ. ಜನರ ಬ್ರೈನ್ ವಾಶ್ ಮಾಡಲು kitsch ಉಪಯೋಗವಾಗುವುದನ್ನು ಸಬೀನಾ ಗಮನಿಸುತ್ತಾಳೆ. ವೈಯಕ್ತಿಕತೆಯನ್ನೇ ಕಳೆಯುವ ಈ kitsch ಅನ್ನು ಸಬಿನಾಳಿಂದ ಒಪ್ಪಿಕೊಳ್ಳಲಾಗುವುದೇ ಇಲ್ಲ. ಸರ್ವಾಧಿಕಾರ ಹೇಗಿರುತ್ತದೆ ಮತ್ತು ಬೆಂಬಲಿಗರನ್ನೂ ಪಡೆಯುತ್ತದೆ ಎಂಬುದನ್ನು ಕುಂದೆರಾ ಕಾದಂಬರಿಯ ಮೂಲಕ ನಿರೂಪಿಸುವಲ್ಲಿ ಅವನ ಪ್ರತಿಭೆ ನಮ್ಮ ಅನುಭವಕ್ಕೆ ಬರುತ್ತದೆ. ಒಂದು ಪ್ರಬಂಧದಲ್ಲಿ ಅಭಿವ್ಯಕ್ತಿಸಬಹುದಾದಂತಹ ವಿಚಾರಗಳನ್ನು ಕಾದಂಬರಿಯ ಹಂದರದಲ್ಲಿ ಹೊಂದಿಸಿರುವುದು ಅತ್ಯಂತ ಪರಿಣಾಮಕಾರಿಯಾಗಿದೆ.  

No comments :