Monday, July 31, 2023

ಕಲಿಕಾ ಮಾಧ್ಯಮವಾಗಿ ಕನ್ನಡ

ಕಲಿಕೆಯಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸುವ ವಿಚಾರ ಆಗಿಂದಾಗ್ಗೆ ಸಾರ್ವಜನಿಕ ಚರ್ಚೆಗೆ ಬರುತ್ತಲೇ ಇರುತ್ತದೆ. ಇದೀಗ ಗ್ರಾಮ ಪಂಚಾಯತಿಗೊಂದು ಇಂಗ್ಲಿಷ್ ಶಾಲೆಯನ್ನು ಆರಂಭಿಸಬೇಕು ಎಂದು ಶಾಸಕರೊಬ್ಬರು ಸರ್ಕಾರವನ್ನು ಒತ್ತಾಯಿಸಿದ ಸುದ್ದಿಯ ಹಿನ್ನೆಲೆಯಲ್ಲಿ ಪ್ರಜಾವಾಣಿಯಲ್ಲಿ ವಸಂತ ಶೆಟ್ಟಿಯವರ "ಕಲಿಕೆಯಲ್ಲಿ ಕನ್ನಡ ಮಾಧ್ಯಮದ ಮರುಹುಟ್ಟಿಗೆ ಏನು ಬೇಕು?" ಎಂಬ ಹೆಸರಿನ ಲೇಖನವನ್ನು ನೋಡಿದೆ. 

ಭಾಷೆಯ ಪ್ರಶ್ನೆ ಬಂದಾಗ ಶಾಂತವಾಗಿ, ನಿರ್ಭಾವುಕವಾಗಿ ವಿಚಾರ ಮಾಡುವುದು ಕಷ್ಟ. ಕಲಿಕಾ ಮಾಧ್ಯಮದ ವಿಷಯದಲ್ಲೂ ಅದೇ ಆಗಿರುವುದು. ಸುಮಾರು ಹತ್ತು ವರ್ಷಗಳ ಹಿಂದೆ ಸುಪ್ರೀಂ ಕೋರ್ಟಿನ ತೀರ್ಪು ಬಂದ ಸಂದರ್ಭದಲ್ಲಿ ಕಲಿಕಾ ಮಾಧ್ಯಮದ ಕುರಿತು ಸುದ್ದಿ ಮಾಧ್ಯಮಗಳಲ್ಲಿ ಚರ್ಚೆಗಳಾಗಿದ್ದವು. 

ಪ್ರಜಾವಾಣಿಯಲ್ಲಿ ಪದ್ಮರಾಜ ದಂಡಾವತಿಯವರು "ಕನ್ನಡ ಪ್ರೇಮ: ಭ್ರಮೆ ಮತ್ತು ವಾಸ್ತವ" ಎಂಬ ತಮ್ಮ ಲೇಖನದಲ್ಲಿ ಕನ್ನಡ ಭಾಷೆ ಅನ್ನದ ಭಾಷೆ ಅನಿಸದೇ  ಇದ್ದ ಕಾರಣಕ್ಕೆ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿಸಿ ಬಂದ  ಬಗ್ಗೆ ಬರೆದಿದ್ದರು. ನಮ್ಮಂತವರಿಗೇ ಕನ್ನಡ ಅನ್ನದ ಭಾಷೆ ಅನಿಸದೇ ಇದ್ದರೆ  ಮನೆ ಕೆಲಸಕ್ಕೆ ಬರುವ ಹೆಂಗಸಿಗೆ, ತರಕಾರಿ ಮಾರುವ ಗಂಡಸಿಗೆ ಏಕೆ ಅನಿಸಬೇಕು? ಎಂಬ ಪ್ರಶ್ನೆಯನ್ನೆತ್ತಿದ್ದರು. 

ಸುಪ್ರೀಂ ಕೋರ್ಟಿನ ಸಂವಿಧಾನ ಪೀಠದ ತೀರ್ಪಿನ  ನಂತರ ಕಡ್ಡಾಯ ಕನ್ನಡ ಮಾಧ್ಯಮದ ಮರುಹುಟ್ಟು ಅಸಂಭವನೀಯವಾಗಿ ಕಾಣುತ್ತಿದೆ. ಕನ್ನಡ ಮಾಧ್ಯಮದ ಪ್ರಯೋಜನಗಳ ಬಗ್ಗೆ ಬರೆಯುತ್ತ "ಪದ ಸಂಪತ್ತಿನ ಬುನಾದಿಯ ಮೇಲೆ ಹೊಸ ವಿಷಯಗಳನ್ನು ಕಲಿಸುತ್ತ  ಹೋಗುವುದು, ಮಗುವಿನ ಬೌದ್ಧಿಕ ವಿಕಾಸ, ಮಕ್ಕಳಲ್ಲಿ  ಸಮಸ್ಯೆ ಬಗೆಹರಿಸುವ ಕಲೆ, ವಸ್ತುನಿಷ್ಠವಾಗಿ ಯೋಚಿಸುವ ಶಕ್ತಿ  ಪಡೆಯುವ ಪರಿಣಾಮಕಾರಿ ಮಾರ್ಗ" ಇತ್ಯಾದಿಗಳನ್ನು ವಸಂತ ಶೆಟ್ಟಿಯವರು ಪಟ್ಟಿ ಮಾಡಿದ್ದಾರೆ. ಹಾಗೂ "ಸಮಾನತೆಯ ನೆಲೆಯ ಶಿಕ್ಷಣವನ್ನು ಸಾಧ್ಯವಾಗಿಸುವ ಏಕೈಕ  ಸಾಧನ" ವಾಗಿಯೂ ಕನ್ನಡ ಮಾಧ್ಯಮವನ್ನು ಕಾಣುವ ಅಗತ್ಯವನ್ನು ಲೇಖಕರು ವಿವರಿಸುತ್ತಾರೆ. ಪಶ್ಚಿಮದ ಎಲ್ಲ ಮುಂದುವರಿದ ದೇಶಗಳಿಗೂ ಕಲಿಕೆಯಲ್ಲಿ ಯಾವ ನುಡಿಯಿರಬೇಕು ಅನ್ನುವ ಪ್ರಶ್ನೆ ಎಂದೋ ಬಗೆಹರಿದಿದೆಯೆಂದು ಬರೆಯುತ್ತಾರೆ. 

ಭಾಷೆಗೆ ಸಂಬಂಧಪಟ್ಟಂತೆ ಅಲ್ಲಿಯೂ ಕಾಲಕಾಲಕ್ಕೆ ಚರ್ಚೆಗಳು ನಡೆಯುತ್ತಿರುತ್ತವೆ. ಈಗ ಐದಾರು ವರ್ಷಗಳ ಹಿಂದೆ ಚಾರ್ಲ್ಸ್ ಟೇಲರ್ ಎಂಬ ಕೆನಡಾದ ಫಿಲಾಸಫಿ ಪ್ರೊಫೆಸರ್ ಒಬ್ಬರು ಪ್ರಕಟಿಸಿದ್ದ The Language Animal : The  Full Shape of the Human Linguistic Capacity (ದಿ ಲ್ಯಾಂಗ್ವೇಜ್ ಅನಿಮಲ್)  ಎಂಬ ಪುಸ್ತಕದಲ್ಲಿ ಕಳೆದ ಒಂದು ಶತಮಾನದಲ್ಲಿ ಭಾಷೆಯ ಕುರಿತು ದಾರ್ಶನಿಕ ಆಸಕ್ತಿ ಒಂದು ಗೀಳಿನಷ್ಟು ತೀವ್ರವಾಗಿ ಬೆಳೆದಿರುವುದನ್ನು ಪ್ರಸ್ತಾಪಿಸುತ್ತಾರೆ. 

ಹೇಗೆ ಭಾಷೆಯನ್ನು ಎರಡು ವಿಭಿನ್ನ ಬಗೆಯಲ್ಲಿ ವ್ಯಾಖ್ಯಾನಿಸಲಾಗುತ್ತದೆ ಎಂಬುದು ಈ ಪುಸ್ತಕದುದ್ದಕ್ಕೂ ಪ್ರಸ್ತಾಪವಾಗುತ್ತದೆ. ಕೇವಲ ಮಾಹಿತಿಯನ್ನು ಕಲೆ ಹಾಕುವ ಮತ್ತು ಸಂವಹನಗೊಳಿಸುವ ಸಾಧನವಾಗಿ ನೋಡುವುದು ಒಂದು ರೀತಿಯಾದರೆ , "ನನ್ನ ಭಾಷೆಯ ಮಿತಿಯೇ ನನ್ನ ಪ್ರಪಂಚದ ಮಿತಿಯೂ" ಎಂದು ಹೇಳುವವರೂ ( ವಿಟ್ ಜೆನ್ಸ್ಟೈನ್) ಇದ್ದಾರೆ . ಕೆಲವರಿಗೆ "ತಾವು ಆಗಲೇ ಗುರುತಿಸುವ ವಸ್ತು, ಘಟಕಗಳಿಗೆ ಹೆಸರು ಕೊಡುವುದಷ್ಟೇ ಭಾಷೆಯ ಉಪಯೋಗ ಅನಿಸಿದರೆ, “ಭಾಷೆಯೆಂದರೆ ಬರೀ ಪದಗಳ ಸಂಗ್ರಹವಲ್ಲ, ಬದಲಿಗೆ ಅದು ಒಂದು ಸಾಮೂಹಿಕ ಪ್ರಯೋಗ, ಭಾಷೆ ಬೆಳೆಯುವುದು ಹೊಸ ಹೊಸ ಪದಗಳನ್ನು ಸೇರಿಸುವುದರಿಂದ ಅಲ್ಲ, ಬದಲಿಗೆ ಸಂಕಥನಗಳ, ರೂಪಕಗಳ ಬಲದಿಂದ” ಎಂದು ಮಾರ್ಟಿನ್ ಹೈಡೆಗರ್, ವಿಟ್ ಜೆನ್ಸ್ಟೈನ್ ಮೊದಲಾದವರು ಭಾವಿಸಿದ್ದರು. ಹೀಗೆ ಒಂದು ಗುಂಪಿನವರಿಗೆ ಭಾಷೆ ವಿಜ್ಞಾದ ಭಾಗವಾಗಿದ್ದರೆ  ಇನ್ನೊಂದು ಗುಂಪಿನವರಿಗೆ ಅದೊಂದು ಕವಿತೆ, ತಮ್ಮ ಪ್ರಪಂಚವನ್ನು ಬದಲಿಸುವ, ಹೊಸ ಅರ್ಥಗಳನ್ನು ಸ್ಫುರಿಸುವ ಶಕ್ತಿಯುಳ್ಳದ್ದು. 

ಇಲ್ಲಿ ಯಾರ ಅಭಿಪ್ರಾಯ ಸರಿ ಯಾರದು ಸರಿಯಲ್ಲ ಎನ್ನುವುದು ಅವರವರ ವಿವೇಚನೆಗೆ ಬಿಟ್ಟದ್ದು. ಕನ್ನಡ ಅಥವಾ ಇಂಗ್ಲಿಷ್ ಮಾಧ್ಯಮ ಬೇಕೇ ಎನ್ನುವುದೂ ಹಾಗೆಯೇ. 

ನನ್ನ  ಸ್ವಂತ ಅನುಭವದ ಹಿನ್ನೆಲೆಯಲ್ಲಿ ಹೇಳುವುದಾದರೆ ಮಾಧ್ಯಮಿಕ ಶಾಲೆಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತದ್ದು ನನಗೆ ತುಂಬಾ ಉಪಯೋಗವಾಗಿದೆ. ಆದರೆ ಎಲ್ಲರ ಅನುಭವ ಒಂದೇ ಆಗಿರುವುದಿಲ್ಲ.

ಧರ್ಮ, ರಾಜಕೀಯ ಸಿದ್ಧಾಂತ ಇತ್ಯಾದಿಗಳ ಬಗ್ಗೆ ಭಿನ್ನಾಭಿಪ್ರಾಯಗಳಿರುವಂತೇ ಕಲಿಕಾ ಮಾಧ್ಯಮದ ಬಗ್ಗೆಯೂ ಒಮ್ಮತ ಕಷ್ಟದ ವಿಷಯ. ಇವೆಲ್ಲ ಕಾನೂನು ಹೋರಾಟದಿಂದ ಸಾಧಿಸುವಂತಹವಲ್ಲ. ಭಾಷೆಯನ್ನು ಉಳಿಸುವುದೂ ಬೆಳೆಸುವುದೂ ಬಳಸುವವರ ಕೈಯಲ್ಲಿದೆ. 

No comments :