Monday, August 07, 2023

ಮಣಿಪುರ: ಈ ಹಿಂಸೆಗೆ ಕೊನೆ ಎಂದು?

ಕಳೆದ ಮೂರು ತಿಂಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ  ಇಡೀ ದೇಶದ ಹಾಗೂ ವಿಶ್ವದ ಗಮನವನ್ನು ಸೆಳೆದಿದೆ. ಅಮರ್ತ್ಯ ಸೇನ್ ರ 'ಐಡೆಂಟಿಟಿ ಅಂಡ್ ವಯಲೆನ್ಸ್' (Identity and Violence) ಪುಸ್ತಕದ ಒಂದು ಸಾಲು ನೆನಪಿಗೆ ಬರುತ್ತದೆ. "ಭಯೋತ್ಪಾದನೆಯ ಪ್ರವೀಣ ಕುಶಲಕರ್ಮಿಗಳ ಪ್ರಭಾವದಿಂದ ಅಮಾಯಕ ಜನರಲ್ಲಿ  ತಮ್ಮ ಒಂದೇ ಗುರುತು ಮತ್ತು ಅಸ್ಮಿತೆಯನ್ನು ತೀವ್ರವಾಗಿ ಉದ್ದೀಪಿಸುವುದು ಹಿಂಸೆಗೆ ದಾರಿಯಾಗುತ್ತದೆ." ಇದು ಇತಿಹಾಸದುದ್ದಕ್ಕೂ ನಾವು ಕಂಡಿರುವ ಸತ್ಯ. 

ಸ್ವಾತಂತ್ರ್ಯ ಬಂದ ನಂತರದಲ್ಲಿ ಈಶಾನ್ಯ ರಾಜ್ಯಗಳನ್ನು ಭಾರತದೊಂದಿಗೆ ಜೋಡಿಸುವುದು ಸರಳವಾಗಿರಲಿಲ್ಲ. ಇತಿಹಾಸಕಾರ ರಾಮಚಂದ್ರ ಗುಹಾ ಅವರ  'ಇಂಡಿಯಾ ಆಫ್ಟರ್ ಗಾಂಧಿ' (India After Gandhi) ಪುಸ್ತಕದಲ್ಲಿ ಭಾಗ-೨ ರಲ್ಲಿ 'ಟ್ರೈಬಲ್ ಟ್ರಬಲ್' ಎಂಬ ಅಧ್ಯಾಯದಲ್ಲಿ ಇದರ ಮಾಹಿತಿ ಇದೆ. 

ಅಧ್ಯಾಯದ ಆರಂಭದಲ್ಲಿ ಲೇಖಕರು ಬ್ರಿಟಿಷ್ ಅಧಿಕಾರಿಯೊಬ್ಬ ನಾಗಾ ಬುಡಕಟ್ಟಿನವರ ಬಗ್ಗೆ ೧೮೪೦ರಲ್ಲಿ ಹೇಳಿರುವುದನ್ನು ಉಲ್ಲೇಖಿಸುತ್ತಾರೆ- " ಈ ಬುಡಕಟ್ಟಿನವರು ಕೆಚ್ಚಿನಿಂದ ತಮ್ಮನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ಶತ್ರುಗಳ ಮೇಲೆ ಅತ್ಯಂತ ಧೈರ್ಯದಿಂದ ಆಕ್ರಮಣ ಮಾಡುತ್ತಾರೆ. ಇವರಲ್ಲಿ ಅಪಾಯದ ಪ್ರಜ್ಞೆ ಅಥವಾ ಸಾವಿನ ಭಯಕ್ಕಿಂತ ಹೆಚ್ಚಿಗೆ ಮನಸ್ಸಿನ ದೃಢತೆ ಕಾಣುತ್ತದೆ. " ಇದು ನಾಗಾಗಳಂತೆಯೇ ಈಶಾನ್ಯದ ಇತರ ಬುಡಕಟ್ಟುಗಳಿಗೂ ಅನ್ವಯಿಸುತ್ತದೆ. ಇದಲ್ಲದೆ ಇದೇ ಅಧ್ಯಾಯದಲ್ಲಿ ಪ್ರಧಾನಿ ನೆಹರೂ ಅವರು ೧೯೫೨ ರಲ್ಲಿ ಈಶಾನ್ಯ ರಾಜ್ಯಗಳಲ್ಲಿ ಒಂದು ವಾರದ ಪ್ರವಾಸ ಕೈಗೊಂಡು ಅಲ್ಲಿನ ಜನರ ಬಗ್ಗೆ ತಿಳಿಯಲು ಪ್ರಯತ್ನಿಸಿದ್ದು, ದೇಶದ ಇತರ ಭಾಗದವರೂ ಅಲ್ಲಿನ ಜನರ ಕರಕುಶಲ ಕಲೆ ಇತ್ಯಾದಿಗಳ ಬಗ್ಗೆ ತಿಳಿಯಬೇಕಾದ ಅಗತ್ಯದ ಬಗ್ಗೆ ಬರೆದಿದ್ದು ಇತ್ಯಾದಿ ವಿವರಗಳಿವೆ. ಮತ್ತೆ ೧೯೫೫ರಲ್ಲಿ ನೆಹರೂ ಅವರು ತಮ್ಮ ಸಚಿವ ಸಂಪುಟಕ್ಕೆ ಈಶಾನ್ಯ ರಾಜ್ಯಗಳ ಬುಡಕಟ್ಟು ಪ್ರದೇಶಗಳ ಸಮಸ್ಯೆಯ ಬಗ್ಗೆ ಬರೆಯುತ್ತಾ ಅಲ್ಲಿನ ಜನರು ಭಾರತದಿಂದ ದೂರಾಗುತ್ತಿರುವ ಬಗ್ಗೆ ಹಾಗೂ ಬಲಪ್ರಯೋಗವಿಲ್ಲದೆ ಅವರನ್ನು ಇತರ ಭಾಗಗಳ ಜೊತೆ ಜೋಡಿಸುವ ಅಗತ್ಯದ ಬಗ್ಗೆ ಪ್ರಸ್ತಾಪಿಸಿದ್ದು ಸಹ ಇದೆ. 

ಆದರೂ ಈಶಾನ್ಯ ರಾಜ್ಯಗಳು ದಶಕಗಳ ಕಾಲ ಇತರ ಭಾಗಗಳಿಂದ ಪ್ರತ್ಯೇಕವಾಗಿಯೇ ಉಳಿದದ್ದು ಸತ್ಯ. ನೆಹರೂ ಅವರ ನಂತರ ಭಾರತದ ಪ್ರಧಾನಿಯೊಬ್ಬರು ಈಶಾನ್ಯ ರಾಜ್ಯಗಳಲ್ಲಿ ಒಂದು ವಾರದ ಪ್ರವಾಸ ಕೈಗೊಂಡಿದ್ದೆಂದರೆ ಎಚ್ ಡಿ ದೇವೇಗೌಡರು. ರೋಸಿ ಡಿ'ಸೋಜಾ ಅವರು ಅನುವಾದಿಸಿದ ಜೀವನ ಚರಿತ್ರೆ 'ನೇಗಿಲ ಗೆರೆಗಳು (ಎಚ್ ಡಿ ದೇವೇಗೌಡರ ಬದುಕು ಮತ್ತು ದುಡಿಮೆ)' ಪುಸ್ತಕದಲ್ಲಿ ಭಾಗ-೨ ರಲ್ಲಿ 'ಬ್ರಹ್ಮಪುತ್ರೆಯ ಹರಿವು ತಿರುವುಗಳಲ್ಲಿ' ಎಂಬ ಅಧ್ಯಾಯದಲ್ಲಿ ಈಶಾನ್ಯ ರಾಜ್ಯಗಳ ಬಗ್ಗೆ ಗೌಡರು ಹೇಳಿದ್ದು ದಾಖಲಾಗಿದೆ - 

"ಈಶಾನ್ಯ ಭಾರತದ ಪ್ರತಿಯೊಂದು ರಾಜ್ಯವು ವಿಭಿನ್ನ ಇತಿಹಾಸವನ್ನು ಹೊಂದಿದೆ. ವಿವಿಧ ಬುಡಕಟ್ಟುಗಳ ನೆಲೆಯಾಗಿರುವ ಈ ನಾಡಿನ ವೈವಿಧ್ಯತೆ ಅನನ್ಯವಾದದ್ದು. ಇವುಗಳು ಸ್ವಾತಂತ್ರಾನಂತರ ಬೇರೆ ಬೇರೆ ಕಾಲದಲ್ಲಿ ಭಾರತ ಒಕ್ಕೂಟ ವ್ಯವಸ್ಥೆಯೊಂದಿಗೆ ಸೇರಿಕೊಂಡವು. ಇಲ್ಲಿನ ಪರಿಸ್ಥಿತಿ ಅತ್ಯಂತ ಸಂಕೀರ್ಣವಾದಂತಹುದು. ನನ್ನನ್ನು ನೋಡಲು ಬಂದ ಎಲ್ಲಾ ಜನರು ಸಾಮಾನ್ಯವಾಗಿ ಹೇಳಿದ ಒಂದು ಮಾತೆಂದರೆ, “ಅವರು ಭಾರತೀಯರೇ ಆಗಿದ್ದರು ಕೂಡ ದೇಶದ ಉಳಿದ ಭಾಗದ ಜನರು ಅವರನ್ನು 'ಹೊರಗಿನವರಂತೆ ನೋಡುತ್ತಾರೆ ಮತ್ತು ಯಾರೂ ತಮ್ಮನ್ನು ನಿಜವಾಗಿ ಅರ್ಥಮಾಡಿಕೊಂಡಿಲ್ಲ,” ಎಂಬುದು. ಅವರ ಭಾಷೆ, ಸಂಸ್ಕೃತಿ, ಜನಾಂಗೀಯತೆ ಮತ್ತು ಧರ್ಮಕ್ಕೆ ಸಿಗಬೇಕಾದ ಗೌರವ ಅವರಿಗೆ ದೊರಕಿಲ್ಲ ಎಂಬ ನೋವು ಅವರನ್ನು ಕಾಡುತ್ತಿತ್ತು. "

"ಇತ್ತೀಚಿನ ವರ್ಷಗಳಲ್ಲಿ, ಇಲ್ಲಿಯ ಕೆಲವು ರಾಜ್ಯಗಳು ಹೊರಗಿನ ಜಗತ್ತಿಗೆ ತೆರೆದುಕೊಳ್ಳುವುದನ್ನು ಕಡಿಮೆ ಮಾಡಿದರೆ, ಇನ್ನು ಕೆಲವು ಉಗ್ರಗಾಮಿತ್ವ ಮತ್ತು ಭಯೋತ್ಪಾದನೆಯಿಂದ ಪೀಡಿತವಾಗಿವೆ. ಭಯೋತ್ಪಾದನೆಯ ಕಾರಣದಿಂದಾಗಿ ಹೂಡಿಕೆದಾರರು ಹಿಂಜರಿದು, ಅಭಿವೃದ್ಧಿ ಕುಂಠಿತವಾಗಿ, ನಿರುದ್ಯೋಗ ಹೆಚ್ಚಿ, ಅದು ಮತ್ತೆ ಭಯೋತ್ಪಾದನೆಗೆ ಸರಕಾಗುವ ವಿಷವರ್ತುಲದಲ್ಲಿ ಈ ರಾಜ್ಯಗಳು ಸಿಲುಕಿಕೊಂಡಿವೆ. ಇಂದು, ವಿದ್ಯಾವಂತ ನಿರುದ್ಯೋಗಿಗಳಿಗೆ ಕೆಲಸ ಕೊಡುವಂತಹ ಯಾವುದೇ ಪ್ರಮುಖ ಕೈಗಾರಿಕೆಗಳು ಅಥವಾ ಇತರ ಆರ್ಥಿಕ ಚಟುವಟಿಕೆಗಳು ಇಲ್ಲಿ ನಡೆಯುತ್ತಿಲ್ಲ. ಈ ಎಲ್ಲಾ ರಾಜ್ಯಗಳಲ್ಲಿ ಉದ್ಯೋಗಕ್ಕೆ ಇರುವ ಏಕೈಕ ಮಾರ್ಗವೆಂದರೆ ಸರ್ಕಾರಿ ಸೇವೆ. ಆದರೆ, ಸರ್ಕಾರಿ ಸೇವೆಯ ನೇಮಕಾತಿಗೂ ಒಂದು ಮಿತಿ ಇದೆ. " 

ಆರ್ಥಿಕ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಗೌಡರು ಈ ಪ್ರದೇಶವನ್ನು ಕಾಡುತ್ತಿದ್ದ ಜನಾಂಗೀಯ ಸಂಘರ್ಷವನ್ನು ಉದ್ದೇಶಿಸದೆ ಬಿಡಲಿಲ್ಲ. ತಮ್ಮ ಮಾತು ಮುಂದುವರಿಸಿ ಅವರು ಹೇಳುತ್ತಾರೆ: `ಇಲ್ಲಿನ ವಿವಿಧ ಜನಾಂಗಗಳಲ್ಲಿ  ತಮ್ಮ ಅಸ್ಮಿತೆ ಬಗ್ಗೆ ಅಭದ್ರತೆಯ ಭಾವನೆ ಕಾಡುತ್ತಿದೆ ಮತ್ತು ಕೇಂದ್ರ ಸರಕಾರ ಈ  ಪ್ರಾಂತ್ಯವನ್ನು ಮಲತಾಯಿ ಧೋರಣೆಯಿಂದ ನೋಡುತ್ತದೆ ಎಂಬ ಭಾವನೆ ಇದೆ. ಈ ಭಾವನೆಗಳನ್ನು ಸಂಪೂರ್ಣವಾಗಿ ಒಪ್ಪಬಹುದು ಅಥವಾ ಒಪ್ಪದಿರಬಹುದು. ಆದರೆ ಜನರಲ್ಲಿ ಈ ಭಾವನೆ ಇರುವುದಂತೂ ನಿಜ. ಹಾಗಾಗಿ ಜನರ ಮನಸ್ಸಿನಿಂದಈ ಭಾವನೆಯನ್ನು ತೊಡೆದುಹಾಕುವ ನಿಟ್ಟಿನಲ್ಲಿ ಒಂದು ನಿರ್ದಿಷ್ಟ ಸಮಯದ ಒಳಗೆ, ಈ  ಪ್ರದೇಶದಲ್ಲಿ ಅಗತ್ಯವಾದ ಮೂಲಸೌಕರ್ಯವನ್ನು ದೇಶದ ಉಳಿದ ಭಾಗಗಳ ಮುಚ್ಚಿ ಸರಿಸಮನಾಗಿ ಅಭಿವೃದ್ಧಿಪಡಿಸುವುದು ನಮ್ಮ ಗುರಿಯಾಗಿದೆ."

ತಮ್ಮ ಹನ್ನೊಂದೇ ತಿಂಗಳ ಅವಧಿಯಲ್ಲಿ ದೇವೇಗೌಡರು ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನಿಸಿರುವುದಕ್ಕೆ ದಾಖಲೆಗಳಿವೆ

ಮಣಿಪುರದ ವರ್ತಮಾನದ ಸಮಸ್ಯೆಯ ಮೂಲವನ್ನು ತಿಳಿಯಲು  ಇತಿಹಾಸದ ಈ ಭಾಗಗಳನ್ನು ಗಮನಿಸುವ ಅಗತ್ಯ ಇದೆ. 'ದಿ ಇಕನಾಮಿಸ್ಟ್' ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಮಣಿಪುರದ ವಿದ್ಯಮಾನಗಳನ್ನು ಹೀಗೆ ವಿವರಿಸಲಾಗಿದೆ- ಬಹುಸಂಖ್ಯಾತ ಮೈತೆಯಿಯರ ಗುಂಪು  ಅಲ್ಪಸಂಖ್ಯಾತರಾದ ಕುಕಿಯರ ಮೇಲೆ ನಡೆಸಿದ ಹಿಂಸೆ ಇದಾಗಿದೆ. ಗುಡ್ಡ ಪ್ರದೇಶದಲ್ಲಿರುವ ಕುಕಿಯರು ಬುಡಕಟ್ಟು  ವರ್ಗಕ್ಕೆ ಸೇರಿದವರಾಗಿರುವುದರಿಂದ ಹೆಚ್ಚಿನ ಸೌಲಭ್ಯ ಪಡೆಯುತ್ತಿದ್ದಾರೆಂದು ಕಣಿವೆ ಪ್ರದೇಶದಲ್ಲಿ ಅಧಿಕವಾಗಿರುವ ಮೈತೆಯಿಯರು ತಿಳಿಯುತ್ತಾರೆ.  ತಮ್ಮನ್ನೂ ರಾಜ್ಯದ ಬುಡಕಟ್ಟು ವರ್ಗಕ್ಕೆ ಸೇರಿಸುವ ಮೈತೆಯಿಯರ ಹಕ್ಕೊತ್ತಾಯವನ್ನು ಕುಕಿಯರು ವಿರೋಧಿಸುತ್ತಾರೆ. ಮೈತೆಯಿಯರನ್ನು ಬುಡಕಟ್ಟು ವರ್ಗಕ್ಕೆ ಸೇರಿಸಿದರೆ ಅವರೂ ಗುಡ್ಡಗಾಡಿನಲ್ಲಿ ನೆಲೆಸಲು ಅವಕಾಶವಾಗಿ ತಮ್ಮನ್ನು ಇನ್ನಷ್ಟು ತುಳಿಯುತ್ತಾರೆಂಬುದು ಕುಕಿಯರ ಭಯ. 

ಗುಂಪುಗಳಲ್ಲಿ ಅಸ್ಮಿತೆ ಮತ್ತು ಜೀವನೋಪಾಯಕ್ಕೆ ಸಂಬಂಧಿಸಿದ ಅಭದ್ರತೆಯಿಂದ ಆರಂಭವಾದ ಜಗಳವು  ಮಹಿಳೆಯರನ್ನು ಬೆತ್ತಲುಗೊಳಿಸಿ ಹಿಂಸಿಸುವಷ್ಟು  ಪೈಶಾಚಿಕತೆಯ ಆಯಾಮವನ್ನು ಪಡೆದದ್ದು ವೈರಲ್ ಆದ ವಿಡಿಯೋಗಳ ಮೂಲಕ ಎಲ್ಲರ ಗಮನಕ್ಕೆ ಬಂದಿದೆ. ಪತ್ರಿಕೆಗಳಲ್ಲಿ ಪ್ರತಿಕ್ರಿಯೆಗಳೂ ಬಂದಿವೆ. 

ಹಿಂಸೆಯನ್ನು ಹತ್ತಿಕ್ಕುವಲ್ಲಿ ವಿಫಲರಾಗಿರುವುದು ಮೂಲಭೂತ ಹೊಣೆಗಾರಿಕೆಯ ವೈಫಲ್ಯ ಎನ್ನುವುದು ಒಬ್ಬರ ಅಭಿಪ್ರಾಯವಾದರೆ, ಮಣಿಪುರದಲ್ಲಿನ ಈ ಅವ್ಯವಸ್ಥೆ ಉದ್ದೇಶಪೂರ್ವಕ ಸೃಷ್ಟಿ ಎಂದು ಇನ್ನೊಬ್ಬರ ಆಪಾದನೆ. 

ಎರಡು ಗುಂಪುಗಳ ನಡುವಿನ ಹಗೆತನದಲ್ಲಿ ಹಿಂಸೆಗೆ ಬಲಿಪಶುಗಳಾಗುತ್ತಿರುವ ಮಹಿಳೆಯರ ಪರಿಸ್ಥಿತಿಯ ಬಗ್ಗೆ ಮತ್ತು ದೇಶದ ಪ್ರಜ್ಞಾವಂತರು ಸರಕಾರಗಳನ್ನು ಪ್ರಶ್ನಿಸಬೇಕಾದ ಅಗತ್ಯದ ಬಗ್ಗೆ ಬರೆಯುತ್ತಾ ಮೌನವೊಂದು ಮಹಾಪಾಪ ಎಂದು ಎಚ್ಚರಿಸುವ ಹರಿತವಾದ ಲೇಖನವೂ ಇದೆ. 

ಒಟ್ಟಿನಲ್ಲಿ ಇಡೀ ದೇಶದ ದೃಷ್ಟಿ ಈಗ ಮಣಿಪುರದತ್ತ ನೆಟ್ಟಿದೆ. 

No comments :