Monday, August 14, 2023

ಹವಾಮಾನ ಬದಲಾವಣೆ: ತಡೆಯಲು ಬೇಕಿದೆ ಜೀವನಶೈಲಿಯ ಬದಲಾವಣೆ

ಜಾಗತಿಕ ತಾಪಮಾನದ ಹೆಚ್ಚಳ, ಹವಾಮಾನದ ಬದಲಾವಣೆ, ನೈಸರ್ಗಿಕ ವಿಕೋಪ, ಇವೆಲ್ಲ ನಾವು ಸಾಮಾನ್ಯವಾಗಿ ಸುದ್ದಿ ಶೀರ್ಷಿಕೆಗಳಾಗಿ ಓದಿ ಉದಾಸೀನ ಮಾಡುವ ಸಂಗತಿಗಳಾಗಿ ಈಗ ಉಳಿದಿಲ್ಲ. ಪರಿಣಾಮಗಳು ನಮ್ಮ ತೀರಾ ಹತ್ತಿರ ಹತ್ತಿರ ಬರುತ್ತಿವೆ. ಅಭಿವೃದ್ಧಿ ಸಂಬಂಧಿತ ನೀತಿ ನಿರ್ಧರಿಸುವ ಸರ್ಕಾರಗಳು ಮತ್ತು ನಾಯಕರು, ಹಾಗೆಯೇ ನಾಳೆಯೆಂಬುದೇ ಇಲ್ಲವೆಂಬಂತೆ ಪರಿಸರದ ನಿರ್ಲಕ್ಷ್ಯದಲ್ಲಿ ಬದುಕುತ್ತಿರುವ ಜನರೂ ಎಲ್ಲರೂ ಎಚ್ಚರಗೊಳ್ಳಲೇಬೇಕಾಗಿದೆ.  

ಹಿಮಾಚಲ ಮತ್ತು ಉತ್ತರಕಾಂಡ ಗಳ ಭೂಕುಸಿತ, ಅಸ್ಸಾಂ ಮತ್ತು ದೆಹಲಿ ಯ ಪ್ರವಾಹ ಪರಿಸ್ಥಿತಿ ತೀವ್ರತರವಾದ ಸಾವು ನೋವು, ಆಸ್ತಿ ನಷ್ಟಗಳನ್ನು ಉಂಟುಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ನಿತ್ಯದ ಸುದ್ದಿಗಳಾಗಿವೆ. ಕರ್ನಾಟಕವೂ ಆಗಿಂದಾಗ ಅತಿವೃಷ್ಟಿ ಅನಾವೃಷ್ಟಿಗಳ ಸಂಕಷ್ಟಕ್ಕೆ ಗುರಿಯಾಗುತ್ತಲೇ ಇದೆ. 

ಹಾಗೆಯೇ ಜಾಗತಿಕವಾಗಿಯೂ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ  ಹಲವಾರು ಸುದ್ದಿಗಳು ನಿತ್ಯ ವರದಿಯಾಗುತ್ತಿವೆ. ಹವಾಯಿಯ ಸುಂದರ ದ್ವೀಪದಲ್ಲಿ ಹವಾಮಾನ ಬದಲಾವಣೆಯ ಪರಿಣಾಮವಾದ ಕಾಳ್ಗಿಚ್ಚಿನಿಂದ ನಗರವೊಂದು ನಾಶವಾಗಿ ಹಲವಾರು ಮಂದಿಯ ಸಾವು, ಸಹಸ್ರಾರು ಮಂದಿಯ ಸ್ಥಳ ಪಲ್ಲಟಕ್ಕೆ ಕಾರಣವಾಗಿರುವುದು ಈಚಿನ ಸುದ್ದಿ. ಜುಲೈ ತಿಂಗಳು ಪ್ರಪಂಚದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಉಷ್ಣಾಂಶ ದಾಖಲಾದ ತಿಂಗಳೆಂದು ಯೂರೋಪಿನ ವಿಜ್ಞಾನಿಗಳು ಹೇಳಿರುವುದಾಗಿ ‘ದಿ ವೀಕ್’ ಪತ್ರಿಕೆ ವರದಿ ಮಾಡಿದೆ.   

ಅಧಿಕ ಇಂಗಾಲವು ಬಿಸಿಪ್ರಳಯಕ್ಕೆ ಕಾರಣವಾಗಿ ಮಾಡಬಹುದಾದ ಅನಾಹುತವನ್ನು ಕಲ್ಪಿಸಿಕೊಳ್ಳುವುದೂ ಭಯಾನಕ. ಕನ್ನಡದ ಶ್ರೇಷ್ಟ ವಿಜ್ಞಾನ ಸಾಹಿತಿ ನಾಗೇಶ್ ಹೆಗಡೆಯವರು ಹಿಂದೊಮ್ಮೆ ಬರೆದಿದ್ದ 'ಇಂಗಾಲಶಾಹಿಯ ಅಂತ್ಯದ ಆರಂಭ' ಎಂಬ ಲೇಖನ ನೆನಪಾಗುತ್ತದೆ. ಹಲವಾರು ವರ್ಷಗಳಿಂದ ಹೆಗಡೆಯವರು ಪರಿಸರ ವ್ಯವಸ್ಥೆಯ ಸಮರ್ಪಕ ನಿರ್ವಹಣೆಯ ತುರ್ತು ಅಗತ್ಯದ ಬಗ್ಗೆ ಲೇಖನಗಳನ್ನು ಬರೆಯುತ್ತಲೇ ಇದ್ದಾರೆ. 

ಪ್ರಕೃತಿ, ಪರಿಸರ, ಅನಿರ್ಬಂಧಿತ ಅಭಿವುದ್ಧಿಯ ಅನಾಹುತಗಳು ಇತ್ಯಾದಿಗಳ ಬಗ್ಗೆ ತಿಳಿಯಲು ಹಲವು ವರ್ಷಗಳಿಂದ ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿರುವ ಹೆಗಡೆಯವರ ವಿಜ್ಞಾನ ವಿಶೇಷ ಸರಣಿಯನ್ನು ನೋಡಬಹುದು. 

No comments :