Monday, September 04, 2023

ವಿದ್ಯಾರ್ಥಿ ಆತ್ಮಹತ್ಯೆಗಳು

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರಗಳನ್ನು ನಡೆಸುವ ರಾಜಸ್ಥಾನದ ಕೋಟಾ ಎಂಬ ನಗರದಲ್ಲಿ ಪದೇ ಪದೇ ವಿದ್ಯಾರ್ಥಿಗಳ ಆತ್ಮಹತ್ಯೆ ವರದಿಗಳು ಬರುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿ. ಇದೇ ವಾರ "ಕೋಟಾ: ಕೊನೆಗಾಣದ ಆತ್ಮಹತ್ಯೆ" ಎಂಬ ಹೆಸರಿನಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ ಕೋಟಾ ನಗರದಲ್ಲಿ ನಡೆದಿರುವ ಆತ್ಮಹತ್ಯೆಗಳಿಗೆ ಸಂಬಂಧಿಸಿದ ಹಲವು ಅಂಕಿ-ಅಂಶ ಮತ್ತು ಮಾಹಿತಿಯನ್ನು ಒದಗಿಸುತ್ತದೆ. ಮುಖ್ಯವಾಗಿ ಯೋಚಿಸಬೇಕಾಗಿರುವುದು ವಿದ್ಯಾರ್ಥಿಗಳನ್ನು ಇಂತಹ ತೀವ್ರ ತೀರ್ಮಾನಕ್ಕೆ ದೂಡಲು ಹಿನ್ನೆಲೆಯಲ್ಲಿ ಇರುವ ವಿಚಾರಗಳ ಬಗ್ಗೆ. 

ಶೈಕ್ಷಣಿಕ ಒತ್ತಡ ದಂತೆಯೇ ಮಾನಸಿಕ ದಣಿವು, ಸಂಬಂಧಗಳಲ್ಲಿರುವ ಸಮಸ್ಯೆ, ಕುಟುಂಬದಲ್ಲಿ ಮಾನಸಿಕ ಸಮಸ್ಯೆಗಳ ಇತಿಹಾಸ ಇರುವುದು ಇವೆಲ್ಲಾ ಸಹ ಆತ್ಮಹತ್ಯೆಯಂತಹ ಕಠೋರ ನಿರ್ಧಾರಕ್ಕೆ ಕಾರಣವಾಗಿರಬಹುದು. ವಿಜ್ಞಾನಕ್ಕೆ ಸಂಬಂಧಿಸದ ಶೈಕ್ಷಣಿಕ ಕೋರ್ಸುಗಳಲ್ಲಿ ಉದ್ಯೋಗದ ಅವಕಾಶಗಳು ಕಡಿಮೆ ಎಂಬ ಕಾರಣಕ್ಕೆ ಪೋಷಕರ ಒತ್ತಡವಿಲ್ಲದಿದ್ದರೂ ಕೆಲವೊಮ್ಮೆ ವಿದ್ಯಾರ್ಥಿಗಳೇ ತಮಗೆ ಕಲಿಯುವಿಕೆ ಕಷ್ಟವಾದರೂ ಸೇರಿಕೊಂಡು ಮುಂದೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗುವುದೂ ಇದೆ. ಫಲಿತಾಂಶವೊಂದೇ ಗುರಿಯಾಗಿರುವ ತರಬೇತಿ ಕೇಂದ್ರಗಳು ಅತ್ಯಂತ ಕಠಿಣ ತರಬೇತಿ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುವುದರಿಂದ ಕೆಲ ವಿದ್ಯಾರ್ಥಿಗಳು ಹೊಂದಿಕೊಳ್ಳಲೂ ಆಗದ, ಹೊರಬರಲೂ ಆಗದ ಸ್ಥಿತಿಗೆ ಸಿಲುಕಿಕೊಳ್ಳುತ್ತಾರೆ. ಆಗ ಅವರ ಪೋಷಕರು ಅವರ  ಸಹಾಯಕ್ಕೆ ನಿಲ್ಲಬೇಕಾದದ್ದು ಅತ್ಯಗತ್ಯ . ನಿಜ, ಆದರೆ ಕೆಲವೊಮ್ಮೆ ಪೋಷಕರನ್ನು ನಿರಾಸೆಗೊಳಿಸಬಾರದೆಂಬ ಹಿಂಜರಿಕೆಯೋ , ಅಥವಾ ಇನ್ನಷ್ಟು ಪ್ರಯತ್ನದಿಂದ ಮುಂದಿನ ಸಲ ಯಶಸ್ವಿಯಾಗುವೆನೆಂಬ ಆಶಾಭಾವನೆಯಿಂದಲೋ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯಕ್ಕೆ ಮೀರಿದ ಚಕ್ರವ್ಯೂಹದಲ್ಲಿ ಸಿಲುಕುತ್ತಾರೆ. ಪರೀಕ್ಷೆಯಲ್ಲಿನ ಅಂಕಗಳಷ್ಟೇ ಸಾಮರ್ಥ್ಯದ ಮಾನದಂಡವಾದಾಗ  ಅಭ್ಯರ್ಥಿಯಲ್ಲಿರಬಹುದಾದ ಇತರ ಸಾಮರ್ಥ್ಯಗಳೆಲ್ಲ ಗೌಣವಾಗಿ ವಿಫಲತೆಯ ಹಣೆಪಟ್ಟಿ ಅಂಟಿಕೊಳ್ಳುತ್ತದೆ. ಭಾವನೆಗಳು ತೀವ್ರವಾಗಿರುವ ಹದಿಹರಯದ ವಯಸ್ಸೂ ತಕ್ಷಣದ ತೀರ್ಮಾನಗಳಿಗೆ ಅನಾಹುತಗಳಿಗೆ ಕಾರಣವಾಗುತ್ತದೆ. 

ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿದ್ಯಾರ್ಥಿಗಳನ್ನು ತಯಾರು ಮಾಡುವ ತರಬೇತಿ ಸಂಸ್ಥೆಗಳ ಬಗ್ಗೆ "ಖೋಟಾ ಕಾರ್ಖಾನೆಗಳಿಗೆ ಬಲಿಯಾಗುತ್ತಿರುವ ವಿದ್ಯಾರ್ಥಿಗಳು" ಎಂಬ ಹೆಸರಿನ ಲೇಖನವನ್ನು ವಾರ್ತಾಭಾರತಿ ಯಲ್ಲಿ ನೋಡಿದೆ. ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಜೀವನದ ಬಗ್ಗೆ, ಅನೇಕ ರೀತಿಯ ಉದ್ಯೋಗಗಳ ಬಗ್ಗೆ, ಪರಿಶ್ರಮ ಮತ್ತು ಸಾಧನೆಗಳ ಬಗ್ಗೆ, ಸೋಲು-ಗೆಲುವುಗಳ ಅನಿವಾರ್ಯತೆಯ ಬಗ್ಗೆ,  ಆರೋಗ್ಯಕರ ಹವ್ಯಾಸಗಳ ಬಗ್ಗೆ ಚಿಕ್ಕಂದಿನಿಂದಲೇ ಅರಿವು ಮೂಡಿಸುವುದು ಹೆಚ್ಚು ಪ್ರಯೋಜನವಾಗಬಹುದು. ಟ್ಯೂಷನ್ ಸೆಂಟರ್ ಗಳನ್ನೇ ಮುಚ್ಚಿಸಿಬಿಡಬೇಕು ಎನ್ನುವುದು 'ಎತ್ತು ಈಯಿತು ಎಂದರೆ ಕೊಟ್ಟಿಗೆಯಲ್ಲಿ ಕಟ್ಟು' ಎಂದಂತೆ ಆಗಬಹುದು. 

No comments :