Monday, October 30, 2023

ಜಾತಿಗಣತಿ ಸಮೀಕ್ಷಾ ವರದಿ: ರಾಜಕೀಯ ಸಂಚಲನ

ಈ ತಿಂಗಳ ಆರಂಭದಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಹಾರದಲ್ಲಿ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿದಾಗಿನಿಂದ ಈ ವಿಷಯಕ್ಕೆ ಸಂಬಂಧಪಟ್ಟಂತೆ ಕೆಲವು ಸ್ವತಂತ್ರ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.  ಈ ವಿಷಯಕ್ಕೆ ಸಂಬಂಧಪಟ್ಟಂತೆ ಲೇಖನಗಳು ಪ್ರಕಟವಾಗಿವೆ. ಪ್ರಜಾವಾಣಿಯಲ್ಲಿ "ಶ್ರೇಷ್ಠತೆಯ ವ್ಯಸನಕ್ಕೆ ಜಾತಿಗಣನೆ ಮದ್ದು" ಎಂಬ ಲೇಖನ ಪ್ರಕಟವಾಗಿತ್ತು. ಶ್ರೇಷ್ಠತೆಯ ವ್ಯಸನಕ್ಕೆ ಜಾತಿ "ಗಣನೆ" ಹೇಗೆ ಮದ್ದಾಗುತ್ತದೋ ಗೊತ್ತಿಲ್ಲ. ಆದರೆ ಅದರಲ್ಲಿ ಲೇಖಕರು ಬರೆದಿರುವಂತೆ "ಅಲಕ್ಷಿತ ಸಮುದಾಯಗಳ ಜನರನ್ನು ಕಾಲಾಳುಗಳನ್ನಾಗಿ ಬಳಸಿಕೊಂಡು ರಾಜಕಾರಣ ಮಾಡುತ್ತಿರುವ ಪ್ರಬಲ ಜಾತಿಗಳ ಹಿತಾಸಕ್ತಿಗೆ ಹೊಡೆತ ಬೀಳಲಿದೆ" ಎಂಬುದನ್ನು ಒಪ್ಪಬಹುದು. 

ಬಿಹಾರದ ಜಾತಿಗಣತಿ ವರದಿಯಲ್ಲಿ OBC ವರ್ಗಕ್ಕೆ ಸೇರಿದವರ ಸಂಖ್ಯೆ ಶೇ ೬೩ ರಷ್ಟು ಎಂದು ತಿಳಿದು ಬಂದಿದೆ. ಈ ವರ್ಗದ ಮೀಸಲಾತಿ ಶೇ ೨೭ ಇರುವುದರಿಂದ ಈಗಿರುವ ಮೀಸಲಾತಿಯಲ್ಲಿ ಪರಿಮಾಣದ ನಿರ್ಧಾರ ಅಸಮಂಜಸವಾಗಿ ಇದೆ ಎಂಬ  ಭಾವನೆ ಬರುವುದು ಸಹಜ. ಅಲ್ಲದೆ ಜಾತಿಗಣತಿಯ ಜೊತೆಗೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಜಾತಿವಾರು ಅಂಕಿ ಅಂಶದ ವರದಿಯ ಬಿಡುಗಡೆಗೆ ಒತ್ತಾಯ ಕೇಳಿ ಬರುತ್ತಿದೆ. ಅದಕ್ಕೆ ವಿರೋಧ ಪಕ್ಷಗಳ ಬೆಂಬಲವೂ ವ್ಯಾಪಕವಾಗಿ ವ್ಯಕ್ತವಾಗುತ್ತಲಿದೆ. ಈ ಬಗೆಯ ವಿಸ್ತೃತ ಸಮೀಕ್ಷೆಗಳಿಗೆ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಯಿಂದ ಪ್ರೋತ್ಸಾಹ ಕಂಡು ಬಂದಿಲ್ಲ. ಪ್ರಜಾವಾಣಿಯ ಲೇಖನದಲ್ಲಿ "ಪ್ರಧಾನಿಯವರು ಜಾತಿಗಣತಿ ವರದಿ ಬಿಡುಗಡೆಯಾದ ಬಳಿಕ, ಅದನ್ನು ಉಲ್ಲೇಖಿಸದೆ, ವಿರೋಧ ಪಕ್ಷಗಳು ದೇಶವನ್ನು ಜಾತಿ ಆಧಾರದ ಮೇಲೆ ವಿಭಜಿಸಿವೆ" ಎಂದು  ಹೇಳಿರುವ ಬಗ್ಗೆ ಪ್ರಸ್ತಾಪ ಇದೆ. ಈ ಹಿಂದೆ ಬಿಹಾರ ಸರ್ಕಾರದ  ಜಾತಿಗಣತಿ ಕುರಿತು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಲ್ಲಿ ಅಫಿಡವಿಟ್ ಸಲ್ಲಿಸಿದ್ದನ್ನೂ ನೆನಪಿಸಿಕೊಳ್ಳಬಹುದು.  

ಕೆಲವು ವರ್ಷಗಳ ಹಿಂದೆ How the BJP Wins ಎಂಬ ಪುಸ್ತಕ ಬಂದಿತ್ತು. ಅದರಲ್ಲಿ Social Engineering ಎಂಬ ಒಂದು ಅಧ್ಯಾಯದಲ್ಲಿ ೨೦೧೭ ರ ಉತ್ತರ ಪ್ರದೇಶ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಅಳವಡಿಸಿಕೊಂಡಿದ್ದ ತಂತ್ರಗಾರಿಕೆಯ ಬಗ್ಗೆ ಬರೆದಿದ್ದರು. ಜಾತಿಯಾಧಾರಿತ ರಾಜಕೀಯದ ವಿವರಣೆ ಅಂಕಿ ಅಂಶಗಳೊಂದಿಗೆ ವಿವರಿಸಿದ್ದರು. ಬಿಜೆಪಿಯ ಭೂಪಿಂದರ್ ಯಾದವ್ ಅವರು ಈ ಪುಸ್ತಕದ ಲೇಖಕರಿಗೆ ವಿವರಿಸಿದಂತೆ ಅಮಿತ್ ಷಾ ರೂಪಿಸಿದ '೬೦ ಪರ್ಸೆಂಟ್' ಫಾರ್ಮುಲವು ಪಕ್ಷದ ಯಶಸ್ಸಿಗೆ ಕಾರಣವಾಗಿತ್ತು. ೨೦ ಪರ್ಸೆಂಟ್ ಮುಸ್ಲಿಮರು, ೧೦ ಪರ್ಸೆಂಟ್ ಯಾದವರು ಮತ್ತು ೧೦ ಪರ್ಸೆಂಟ್ ಜಾಟವ(ದಲಿತ)ರು ಈ ಮೂರು ಗುಂಪಿನವರನ್ನು ಹೊರಗಿಟ್ಟು ಉಳಿದ ೬೦ ಪರ್ಸೆಂಟ್ ಜನರನ್ನು ತಮ್ಮ ಮತ ಬೇಟೆಗೆ ಗುರಿಯಾಗಿಸುವುದು ಅವರ ತಂತ್ರವಾಗಿತ್ತು. 

ಸುನಿಲ್ ಬನ್ಸಲ್ ೨೦೧೪ ರಲ್ಲಿ ಉತ್ತರ ಪ್ರದೇಶ ಬಿಜೆಪಿಯ  ಸಾಂಸ್ಥಿಕ ಪ್ರಧಾನ ಕಾಯದರ್ಶಿಯಾಗಿ ಆಯೋಜನೆಗೊಂಡಾಗ ಇಡೀ ಬಿಜೆಪಿ ರಾಜ್ಯ ಘಟಕದ ಸರ್ವೇಕ್ಷಣೆ ಮಾಡಿಸುತ್ತಾರೆ. ಅದರಲ್ಲಿ ತಿಳಿದು ಬರುವುದೇನೆಂದರೆ ಇಡೀ ರಾಜ್ಯದಲ್ಲಿ ಎಲ್ಲ ಮಟ್ಟದಲ್ಲಿ ಪಕ್ಷದ ಹುದ್ದೆಗಳಲ್ಲಿದ್ದವರಲ್ಲಿ OBC ವರ್ಗದವರು ಶೇ ೭ ಮತ್ತು ದಲಿತರು ಶೇ ೩ ಮಾತ್ರ. ಅಲ್ಲಿಂದ ಆರಂಭಿಸಿ ಮುಂದಿನ ಎರಡು ವರ್ಷಗಳಲ್ಲಿ ಈ ಎರಡು ವರ್ಗಗಳ ಪ್ರಾತಿನಿಧ್ಯವನ್ನು ಶೇ ೩೦ಕ್ಕೆ ಏರಿಸಲಾಗುತ್ತದೆ. ರಾಜ್ಯದಲ್ಲಿ ಪಕ್ಷದ ಅಧ್ಯಕ್ಷ ಹುದ್ದೆಗೂ OBC ಗುಂಪಿಗೆ ಸೇರಿದ ಕೇಶವ ಪ್ರಸಾದ್ ಮೌರ್ಯ ಅವರನ್ನು ಆಯ್ಕೆ ಮಾಡಲಾಗುತ್ತದೆ. 

ಮುಂದೆ ೨೦೧೭ರ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ  ಪಕ್ಷ ಪ್ರಚಂಡ ಬಹುಮತದಿಂದ ಆರಿಸಿ ಬರುತ್ತದೆ. ಪ್ರಬಲ ಜಾತಿಗಳ ಪಕ್ಷವೆಂದು ಗುರುತಿಸಿಕೊಂಡಿದ್ದರೂ ಅಲಕ್ಷಿತ ಸಮುದಾಯಗಳ ಜನರ ಮತಗಳನ್ನು ಸೆಳೆಯಲು ಪಕ್ಷಕ್ಕೆ ನೆರವಾಗಿದ್ದು ಜಾತಿ ಸಮೀಕರಣವೇ ಆಗಿತ್ತು.  

ಬಿಹಾರದ ಜಾತಿ ಗಣತಿ ವರದಿಯು "ಅಂಚಿನಲ್ಲಿರುವ ಅತಿ ಸಣ್ಣ ಸಮೂಹಗಳ ಮೇಲೆ ಬೆಳಕು ಚೆಲ್ಲುವ" ಜೊತೆಗೆ "ಮೀಸಲಾತಿಯಲ್ಲಿ ಶೇ ೫೦ ರ ಮೇಲ್ಮಿತಿ" ಯಂತಹ ವಿಚಾರಗಳನ್ನು ಚರ್ಚೆಗೆ ತಂದಿದೆ. ಹಿಂದಿನ ಚುನಾವಣೆಗಳಲ್ಲಿ OBC ಮತಗಳನ್ನು  ಗಣನೀಯವಾಗಿ ಗಳಿಸಿರುವ ಬಿಜೆಪಿ ಗೆ ಜಾತಿ ಗಣತಿಯ ಕುರಿತು ಏಕೆ ಭಯ ಎಂಬ ಪ್ರಶ್ನೆಗಳು ಏಳುತ್ತಿವೆ.  ಜಾತಿ ಗಣತಿಯ ವರದಿಯು ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಲು ಕಾರಣಗಳಿವೆ.  ಮುಖ್ಯವಾಗಿ, ಸಾಮಾಜಿಕ ನ್ಯಾಯ ದ ದೃಷ್ಟಿಯಿಂದ ಅಪ್ರಿಯ ಸತ್ಯಗಳನ್ನು ಎಲ್ಲ ವರ್ಗಗಳವರೂ ಮನಗಾಣಲೇಬೇಕಾದ ಕಾಲ ಬಂದಿದೆ. ಅದರಲ್ಲೇ ಎಲ್ಲರ ಹಿತವೂ ಇದೆ. ಇದನ್ನು ಕೋಮುವಾದದ ವಿರುದ್ಧ ವಿರೋಧ ಪಕ್ಷದವರು ಹುಟ್ಟು ಹಾಕುತ್ತಿರುವ ಜಾತಿವಾದ ಎಂದು ಕಾಣುವುದು ಸಿನಿಕತನವಾಗುತ್ತದೆ. ಇವೆರಡೂ ವಾದಿಗಳಿಗೂ ಅವರ ನಂಬಿಕೆ ಅಭಿಪ್ರಾಯಗಳಿಗೆ ಅವರದೇ ಸಮರ್ಥನೆಗಳಿರಬಹುದು. ನಮ್ಮದೇ ಸಿದ್ಧಾಂತಗಳಿಗೆ ಗಟ್ಟಿಯಾಗಿ ಜೋತು ಬೀಳುವುದರಿಂದ ಯಾವ ಸಮಸ್ಯೆಗೂ ಪರಿಹಾರ ಸಿಗಲಾರದು. ಹಾಗೆಯೇ ಯಾವುದೇ ಐತಿಹಾಸಿಕ ಸಮಸ್ಯೆಗೆ ಇಂದಿನ ತಲೆಮಾರಿನವರನ್ನು ಸಂಪೂರ್ಣ ಹೊಣೆಗಾರರನ್ನಾಗಿಸಿ ಪರಿಹಾರ ಹುಡುಕುವುದೂ ಅರ್ಥಹೀನ. ಇಲ್ಲೇ ನಮಗೆ ಪ್ರೌಢ ಮತ್ತು ವಿವೇಕವಂತ ರಾಜಕೀಯ ನಾಯಕರ ಅಗತ್ಯ ಅತ್ಯಂತ ಜರೂರಿನ ವಿಚಾರವಾಗಿರುವುದು.

ಕರ್ನಾಟಕದಲ್ಲೂ ಜಾತಿ ಗಣತಿಯ ವರದಿಯನ್ನು ಬಿಡುಗಡೆ ಮಾಡಲೆಂಬ ಅಭಿಪ್ರಾಯ, ಹಾಗೆಯೇ  ಇಂತಹ ಗಣತಿಗೆ ಸ್ವಾಗತ ಸೂಚಿಸುವ ಲೇಖನಗಳು ಪತ್ರಿಕೆಗಳಲ್ಲಿ ಬರುತ್ತಿವೆ. ಶಿವಸುಂದರ್ ಅವರು ವಾರ್ತಾ ಭಾರತಿಯಲ್ಲಿ ಭಾಗ ೧ಭಾಗ ೨, ಮತ್ತು ಭಾಗ ೩ ವಿಸ್ತೃತವಾಗಿ ಬರೆದಿದ್ದಾರೆ.

No comments :