Sunday, November 10, 2013

ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಮಸೂದೆ

ಇತ್ತೀಚೆಗೆ ಮಹಾರಾಷ್ಟ್ರದ ಮೂಢನಂಬಿಕೆ ವಿರೋಧಿ ಕಾರ್ಯಕರ್ತ ನರೇಂದ್ರ ದಾಬ್ಹೊಲ್ಕರ್  ಅವರ ಹತ್ಯೆ ಹಾಗೂ ಅದಾಗಿ ನಾಲ್ಕೇ ದಿನಗಳಲ್ಲಿ ಮಹಾರಾಷ್ಟ್ರ ಸರ್ಕಾರವು "ಮೂಢನಂಬಿಕೆಗಳು ಹಾಗೂ ಬ್ಲ್ಯಾಕ್ ಮ್ಯಾಜಿಕ್ ನಿಷೇಧ" ಕ್ಕಾಗಿ ಜಾರಿಗೊಳಿಸಿದ ಸುಗ್ರೀವಾಜ್ಞೆಯ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಸಹ ಈ ದಿಸೆಯಲ್ಲಿ ಕ್ರಮ ತೆಗೆದುಕೊಳ್ಳುವಲ್ಲಿ ಮುಂದಾಯಿತು.

‘ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಮಸೂದೆ’ ಗೆ ಸಂಬಂಧಪಟ್ಟಂತೆ ಸಲಹಾಪಟ್ಟಿಯನ್ನು ಸಿದ್ಧಪಡಿಸಿ ಕೊಡುವಂತೆ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ಮತ್ತು ಹುಬ್ಬಳ್ಳಿಯ ರಾಜ್ಯ ಕಾನೂನು ವಿಶ್ವವಿದ್ಯಾಲ­ಯಗಳಿಗೆ ರಾಜ್ಯ ಸರ್ಕಾರ ಕೋರಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಈಗಾಗಲೇ ರಾಷ್ಟ್ರೀಯ ಕಾನೂನು ಶಾಲೆ ಸಲ್ಲಿಸಿರುವ  ಕರಡು ಭಾರೀ ಚರ್ಚೆಗೆ ವಿರೋಧಕ್ಕೆ ಒಳಗಾಗಿದೆ.

ರಾಷ್ಟ್ರೀಯ ಕಾನೂನು ಶಾಲೆ ಇನ್ನೂ ಹಲವು ಪ್ರಜ್ಞಾವಂತರೊಡನೆ ಸಮಾಲೋಚಿಸಿ ಸಿದ್ಧಪಡಿಸಿದ ಈ ಸಲಹಾಪಟ್ಟಿಯು  ಮೂಢನಂಬಿಕೆಗಳನ್ನಷ್ಟೇ ನಿಷೇಧಿಸುವ ಸಲಹೆ ಸೂಚನೆಗಳನ್ನು ನೀಡಿದೆಯಾದರೂ ವ್ಯಕ್ತವಾಗುತ್ತಿರುವ ವಿರೋಧ ಅದರಲ್ಲೂ ವಿಶೇಷವಾಗಿ ಈ ಹಿಂದೆ ಅಧಿಕಾರದಲ್ಲಿದ್ದ ವಿರೋಧ ಪಕ್ಷದ ನಾಯಕರ ಆಕ್ರೋಶಭರಿತ ಪ್ರತಿಕ್ರಿಯೆಗಳು ಅಚ್ಚರಿ ಮೂಡಿಸುತ್ತವೆ.

ಇಲ್ಲಿ ನಂಬಿಕೆ - ಮೂಢನಂಬಿಕೆಗಳ ನಡುವೆ ವ್ಯತ್ಯಾಸವೇ ಇಲ್ಲವೇ ಎಂಬ ಪ್ರಶ್ನೆ ಏಳುತ್ತದೆ. ಮೂಢನಂಬಿಕೆಗಳ ಹಕ್ಕಿಗಾಗಿ ಇಷ್ಟೊಂದು ಜನ ಆವೇಶದ ದನಿ ತೆಗೆಯುತ್ತಿರುವುದು ಆಶ್ಚರ್ಯ ತರುತ್ತದೆ.  ಈ ಕರಡು ಮಸೂದೆಯ ವಿಚಾರವಾಗಿ ಪ್ರತಿಕ್ರಯಿಸಿರುವ ನಾಡಿನ ಹಲವು ಗಣ್ಯರ ಅಭಿಪ್ರಾಯಗಳು ಇಂದಿನ ಪ್ರಜಾವಾಣಿಯ ಲೇಖನದಲ್ಲಿವೆ.

ನಾಡಿನಲ್ಲಿ ಇಂತಹ ಸನ್ನಿವೇಶಗಳು ಏರ್ಪಟ್ಟ ಸಂದರ್ಭಗಳಲ್ಲೆಲ್ಲ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಪ್ರತಿಕ್ರಯಿಸುತ್ತ ವೈಚಾರಿಕ ಪ್ರಜ್ಞೆಯನ್ನು ಸದಾ ಜಾಗೃತಗೊಳಿಸುತ್ತಿದ್ದ ಒಬ್ಬ ಸಂವೇದನಾಶೀಲ ಲೇಖಕ - ಸಂಪಾದಕ ನೆನಪಿಗೆ ಬರುತ್ತಾರೆ. ಅಲ್ಲಿಯವರೆಗೆ ಅಥವಾ ಅಲ್ಲಿಂದೀಚೆಗೆ ಬೇರೆ ಇನ್ನಾವುದೇ ಪತ್ರಕರ್ತನಲ್ಲಿ ಕಂಡುಬರದ ತೀರ ವೈಯಕ್ತಿಕವೆನಿಸುವ ನುಡಿ ಕಟ್ಟಿನಲ್ಲಿ ಬರೆದ ಲಂಕೇಶರು ತಮ್ಮ ವ್ಯಂಗ್ಯ ತಮಾಶೆಗಳೊಂದಿಗೇ ನೀಡುತ್ತಿದ್ದ ಶಾಕ್  ನಮ್ಮ ಎಷ್ಟೋ ಮಂದಿ ಸಾರ್ವಜನಿಕ ವ್ಯಕ್ತಿಗಳನ್ನು ಒಂದಷ್ಟು ಹದ್ದುಬಸ್ತಿನಲ್ಲಿ ಇಡುವಷ್ಟು ಶಕ್ತವಾಗಿರುತ್ತಿತ್ತು.

ದೇವರು ಧರ್ಮ ಜಾತಿಗಳಿಂದ ಆಚೆಯೇ ಸದಾ ಉಳಿದ ಲಂಕೇಶರು ಜಾತ್ಯಾತೀತ ನಿಲುವಿನಿಂದ ಪ್ರಜಾ ಪ್ರಭುತ್ವದ ಆಶಯಗಳಿಂದ ಎಂದೂ ಹೊರಗುಳಿದವರಲ್ಲ. ಅವರು ವ್ಯಕ್ತಪಡಿಸುತ್ತಿದ್ದ ವಿಚಾರಗಳು ಲಕ್ಷಾಂತರ ಓದುಗರು ತಮ್ಮ ಆಲೋಚನೆಯ ದಿಕ್ಕನ್ನು ವಿಮರ್ಶೆಗೆ ಒಡ್ಡಿಕೊಳ್ಳುವಂತೆ ಇರುತ್ತಿದ್ದವು.

ಲಂಕೇಶ್ ಕಣ್ಮರೆಯಾಗಿ ಹದಿಮೂರು ವರುಶಗಳು ಕಳೆದಿವೆ. ಮೂಢನಂಬಿಕೆ ಪವಾಡ ಜ್ಯೋತಿಷ್ಯ ಇಂತವೇ ಎಲ್ಲೆಡೆ ರಾರಾಜಿಸುತ್ತಿರುವ  ಸಂದರ್ಭದಲ್ಲಿ ಲಂಕೇಶರ ಟೀಕೆ-ಟಿಪ್ಪಣಿ ಪುಸ್ತಕ ತೆರೆದು ಅವರು ಅದೆಷ್ಟೋ ವರುಶಗಳ ಹಿಂದೆ ಬರೆದ ಲೇಖನಗಳನ್ನು ಓದುತ್ತಿದ್ದರೆ ಅವರ ಅಭಿಪ್ರಾಯಗಳು ಇಂದಿಗೂ ಎಷ್ಟು ಪ್ರಸ್ತುತ ಎನಿಸುತ್ತದೆ.  ನಮ್ಮ ಸಮಾಜ ಬದಲಾಗಲೇ ಇಲ್ಲವೇ. ಅಥವಾ ಎಲ್ಲ ಉತ್ತಮ ಸಾಹಿತ್ಯದಂತೆ ಲಂಕೇಶರು ಬರೆದದ್ದೂ ಓದುಗರಾದ ನಮ್ಮಲ್ಲಿ ಬೆಳೆಯುತ್ತಲೇ ಹೋಯಿತೇ? ಎರಡೂ ನಿಜವಿರಬಹುದು.

ಮೂವತ್ತು ವರುಷಗಳ ಹಿಂದೆ "ದೇವರನ್ನು ಕುರಿತು" ಎಂಬ ಲೇಖನದಲ್ಲಿ ಹೀಗೆ ಬರೆಯುತ್ತಾರೆ-

"ದೇವರಿದ್ದಾನೆ ಅಥವಾ ಇಲ್ಲ ಎಂಬ ಪ್ರಶ್ನೆಗೆ ಹೋಗದೆ ಮನುಷ್ಯನಾದವನು ಈ ಜೀವನ ನಡೆಸಲು ಪಡೆಯಬೇಕಾದ ಸ್ಪಷ್ಟತೆಯ ಬಗ್ಗೆ  ಹೇಳುತ್ತೇನೆ.

ನಮ್ಮ ಹಳ್ಳಿ, ನಗರಗಳ ತಾಯಂದಿರು, ಮುದ್ದು ಮಗುವಿನ ಕಾಯಿಲೆಗೆ ಗುಳಿಗೆ ಕೊಡಲು ಹಣವಿಲ್ಲದ ಬಡವರು ಈ ದೇವರುಗಳ ಬಗ್ಗೆ ತಪ್ಪು ತಿಳಿದಿದ್ದಾರೆ. ಗೇಣು ಬಟ್ಟೆಗೆ ಗತಿ ಇಲ್ಲದ ಜನ ಈ ಸುಡುಗಾಡು ದೇವರುಗಳಿಗೆ ಕಾಣಿಕೆ ಕೊಟ್ಟು ಬಸವಳಿದು ಹೋಗಿದ್ದಾರೆ. "

ಇದೇ ಲೇಖನದಲ್ಲಿ ತಮ್ಮ ಮೆಚ್ಚಿನ (ನಾನೂ ಮೆಚ್ಚುವ) ಅಲ್ಬರ್ಟ್ ಕಾಮುವಿನ ಕಾದಂಬರಿ 'ಪ್ಲೇಗ್'ನ ಬಗ್ಗೆ ಬರೆಯುತ್ತ ಅದರಲ್ಲಿ ಬರುವ ಡಾಕ್ಟರ್ ಪಾತ್ರದ ಕುರಿತು ಹೀಗೆ ಬರೆಯುತ್ತಾರೆ-

"ದೇವರ ಬಗ್ಗೆ ಅತೀ ಗೌರವವಿಲ್ಲದ, ಮನುಷ್ಯ ಬದುಕಿನಿಂದ ಅತೀ ಅಪೇಕ್ಷೆ ಇಲ್ಲದ, ಸಾವಿನ ಬಗ್ಗೆ ಅತೀ ಆತುರವಿಲ್ಲದ, ಕರುಣೆ, ಪ್ರೀತಿ ತುಂಬಿದ ಈ ಡಾಕ್ಟರ ಪಾತ್ರವನ್ನು ಸೃಷ್ಟಿಸುವ ಮೂಲಕ, ಅಲ್ಜೀರಿಯದ ಆ ಪ್ಲೇಗ್ ಬಡಿದ ನಗರದ ನರನಾಡಿಗಳನ್ನು ಬಿಡದೆ ವರ್ಣಿಸುವ ಮೂಲಕ ಸಾಹಿತಿ ಕಾಮು ನಾವು ಜೀವನ ನಡೆಸಬೇಕಾದ ಶೈಲಿಯನ್ನು ದಾಖಲಿಸಿದ್ದಾನೆ."

ಇನ್ನು ಅದೇ ಸುಮಾರಿಗೆ ಲಂಕೇಶರು ಬರೆದ "ಧರ್ಮದ ಗಂಧವಿಲ್ಲದವರು" ಲೇಖನದಲ್ಲಿ ಗಾಂಧೀಜಿಯವರ ಧರ್ಮ ಕಲ್ಪನೆಯ ವಿಚಾರ ಬರುತ್ತದೆ.

"ಗಾಂಧೀಜಿ ಮೊದಲು ಈ ಜನಕ್ಕೆ ದುಡಿದುಣ್ಣುವ ರೀತಿಯ ಬಗ್ಗೆ, ಆತ್ಮ ಗೌರವದ ಮೂಲ ಪಾಠಗಳ ಬಗ್ಗೆ, ಬೇರೆ ಬೇರೆ ಧರ್ಮಗಳನ್ನು ಸಹಿಸುವ ಬಗ್ಗೆ, ಎಲ್ಲ ಧರ್ಮಗಳ ಮೂಲಕ್ಕಿರುವ ದಯೆ, ಕುತೂಹಲ, ಹೊಣೆಗಾರಿಕೆಯ ಬಗ್ಗೆ ಕಲಿಸತೊಡಗಿದರು. ಗಾಂಧೀಜಿ ಕಟ್ಟಬೇಕೆಂದಿದ್ದ  ಸುಖೀ ರಾಜ್ಯದಲ್ಲಿ ಧರ್ಮ ಖಾಸಗಿಯಾಗಬೇಕು, ಆಡಳಿತದ ಜವಾಬ್ದಾರಿ ಎಲ ಹೊಣೆಯರಿತ ಮಾನವರ ಮೇಲೆ ಬೀಳಬೇಕು, ಅಲ್ಲಿ ಜಾತೀಯತೆ ಕಂದಾಚಾರ, ಮೂಢನಂಬಿಕೆಗೆ  ಜಾಗವಿರಬಾರದು; ಈ ರಾಷ್ಟ್ರದ ಪ್ರತಿಯೊಬ್ಬನೂ ತನ್ನ ಕ್ರಿಯಾಶೀಲತೆಯಿಂದ ನಾಡಿನ ಮುನ್ನಡೆಗೆ ಕಾಣಿಕೆ ಸಲ್ಲಿಸುವಂತಾಗಬೇಕು. "

ಆದರೆ ಈಗಾಗುತ್ತಿರುವುದೇನು? ‘ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಮಸೂದೆ’ಯ ಕರಡಿನ ಪ್ರತಿ ಪ್ರಕಟವಾಗುತ್ತಿದ್ದಂತೆ ನಮ್ಮ ಮಾಜಿ ಮುಖ್ಯಮಂತ್ರಿಗಳೂ ಸದಾ ಹಸನ್ಮುಖಿಯೂ ಆದ   ರಾಜಕಾರಣಿಯೊಬ್ಬರು "ಈ ಮಸೂದೆಯು ಜನಗಳ ನಂಬಿಕೆಗಳಿಗೆ ವಿರೋಧವಾಗಿದೆ, ಯಾವ ಕಾರಣಕ್ಕೂ ಇದನ್ನು ವಿಧಾನ ಸಭೆಯ ಅಧಿವೇಶನದಲ್ಲಿ ಮಂಡನೆಯಾಗಲು ಬಿಡುವುದಿಲ್ಲ" ಎಂದು ಘರ್ಜಿಸಿದ್ದು ಸೋಜಿಗವಾಗಿತ್ತು. ದೇಶವನ್ನು "ಬೌಧ್ಧಿಕ ದಿವಾಳಿತನದಲ್ಲಿ, ವಿಜ್ಞಾನ ಹೀನ ದೈನೇಸಿ ಸ್ಥಿತಿಯಲ್ಲಿ, ಅವೈಚಾರಿಕ ಮೌಢ್ಯದಲ್ಲಿ ಇಡುವ" (ಲಂಕೇಶರ ನುಡಿಗಟ್ಟುಗಳು) ಕೆಲಸ ಇದಾಗುವುದಿಲ್ಲವೆ. ಮಸೂದೆಯನ್ನು ಮಂಡಿಸಿ ಆ ನಂತರ ಅದು ಏಕೆ ಬೇಡ ಎಂದು ವಿವರಿಸಬಹುದಲ್ಲವೆ.

ಕೊನೆಯದಾಗಿ, ಲಂಕೇಶರ ಇನ್ನೊಂದು ಲೇಖನವನ್ನು ಪ್ರಸ್ತಾಪಿಸಲೇಬೇಕು. ಇದು ತೊಂಬತ್ತರ ದಶಕದಲ್ಲಿ ಪ್ರಕಟವಾಗಿದ್ದ ಲೇಖನ. "ಹಾಲು ಮತ್ತು ಗಣಪತಿ' ಎನ್ನುವ ಶೀರ್ಷಿಕೆಯಲ್ಲಿ ಪ್ರಕಟವಾದ ಈ ಲೇಖನವೂ  ಮೂಢನಂಬಿಕೆಗೆ ಸಂಬಂಧಿಸಿದ್ದು. ೧೯೯೫ ರಲ್ಲಿ ಗಣಪತಿ ಹಾಲು ಕುಡಿದ ವಿಚಾರ ಎಲ್ಲೆಡೆ ಚರ್ಚಿತವಾದದ್ದು ಬಹಳ ಮಂದಿಗೆ ನೆನಪಿರಬಹುದು. ಇಂತದ್ದೊಂದು ಸನ್ನಿವೇಶ ಸೃಷ್ಟಿಯಾದದ್ದರ ಬಗ್ಗೆ ಲಂಕೇಶರ ಸಿಟ್ಟು, ದುಗುಡ ಪ್ರಕಟವಾಗಿದ್ದು ಹೀಗೆ-

"...ಮೊನ್ನೆ ಗುರುವಾರ ಹಾಲು ಭಾರತದ ದಿವಾಳಿತನಕ್ಕೆ, ಅಸಹಾಯತೆಗೆ ಸಂಕೇತವಾಯಿತು. ಕಳೆದ ಅರ್ಧ ಶತಮಾನದಷ್ಟು ಕಾಲ ಆರ್ಥಿಕ ನೆಮ್ಮದಿಗಾಗಿ ಕಾದು ಕುಳಿತ ಜನ ನಿರಾಶರಾಗಿದ್ದಾರೆ; ದೊಡ್ಡ ನಾಯಕನೊಬ್ಬ ಬರೀ ಕತೆ ಕಟ್ಟದೆ ಊಟ, ವಸತಿ, ಶಿಕ್ಷಣ, ತರಬೇತಿ ಎಲ್ಲವನ್ನು ಒದಗಿಸಿ ಈ ದೇಶವನ್ನು ಆಧುನಿಕಗೊಳಿಸಬಹುದೇ ಎಂದು ನಿರೀಕ್ಷಿಸಿದ್ದವರು ಕುಸಿದು ಕುಳಿತಿದ್ದಾರೆ... ಇಲ್ಲದಿದ್ದರೆ ಈ ಮರುಳತನವನ್ನು ಹೇಗೆ ವಿವರಿಸುವುದು? ... ಇಲ್ಲಿ ದುಡಿಯುವ ಕುಶಲತೆ ಮತ್ತು ಹೆಮ್ಮೆ, ನಮಗೆ ಬರಬೇಕಾದ್ದನ್ನು ಮಾತ್ರ ಆಶಿಸುವ ವಿನಯ, ನಮ್ಮ ಬದುಕನ್ನು ನಾವೇ ರೂಪಿಸಿಕೊಂಡ ಆತ್ಮ ಗೌರವ- ಯಾವುದಾದರೂ ಸಾಧ್ಯವೆ?"

ಇದೇ ಲೇಖನದಲ್ಲಿ ಜೀವನದ ನಿಜವಾದ ಪವಾಡ ಏನು ಎಂದು ಬೇರೆಯೇ ಒಂದು ದೃಷ್ಟಿಕೋನದಿಂದ ವಿವರಿಸುತ್ತ ನಮ್ಮನ್ನು ಚಕಿತಗೊಳಿಸುವುದು ಹೀಗೆ  -

"ನಿಜವಾದ ಪವಾಡ ವಿಜ್ಞಾನದ್ದು, ಈ ವಿಶ್ವದ್ದು. ನಾವು ಉಡಾಯಿಸಿದ ಕ್ಷಿಪಣಿ ಗ್ರಹವೊಂದು ನಮಗಾಗಿ ಕೆಲಸ ಮಾಡುತ್ತದೆ, ಲಕ್ಷಾಂತರ ಮೈಲಿಯಾಚೆಯ ಮುಖ ಇಲ್ಲಿ ಕಾಣುತ್ತೆ, ಧ್ವನಿ ಇಲ್ಲಿ ಕೇಳುತ್ತೆ ಎಂಬುದು ವಿಸ್ಮಯಕರ; ಹಾಗೆಯೇ ಮಾನವ ಇನ್ನೂ ಕಂಡುಕೊಳ್ಳದ ಅನೂಹ್ಯ ಸಂಗತಿಗಳು ಮನುಷ್ಯನ ವಿಧ್ಯುಕ್ತ ಕ್ರಿಯೆಗಳಲ್ಲಿ, ಅಂಧವೆನ್ನುವಂತೆ  ಕಾಣುವ ಆಚರಣೆಗಳಲ್ಲಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮನುಷ್ಯನ ವ್ಯಕ್ತಿತ್ವದಲ್ಲಿ ಇವೆ. ಭೂಮಿ, ಅದನ್ನೊಳಗೊಂಡ ವಿಶ್ವವನ್ನು ಶೋಧಿಸುತ್ತಿರುವ ಮಾನವ ತನ್ನ ವ್ಯಕ್ತಿತ್ವದ ಆಳಕ್ಕೆ ಹೋಗಿ ಹುಡುಕಿಲ್ಲ. ಶಾಪ, ಆಶೀರ್ವಾದ, ಚಟ, ಸೋಲು, ಗೆಲುವು, ಹೀಗೆ ನೂರಾರು ಸಂಕೇತಗಳ ಬೇರುಗಳನ್ನು ಪರೀಕ್ಷಿಸಿಲ್ಲ. ಈ ಸಂದರ್ಭದಲ್ಲಿ ಗಣಪತಿ ಹಾಲು ಕುಡಿಯುವುದು ಅಥವಾ ಕುಡಿಯದಿರುವುದು ನನಗಂತೂ ಹಾಸ್ಯಾಸ್ಪದ ಕ್ರಿಯೆ."

ಈ ನಿಜ ಪವಾಡಗಳ ಬಗೆಗೆ ಬೆರಗುಗೊಳ್ಳುವುದು ಸಾಧ್ಯವಾದಂದು  ಜನ ಸುಡುಗಾಡು ಸಿದ್ಧರ, ಬುಡುಬುಡಿಕೆಯವರ ಪವಾಡಗಳಿಗೆ ಮರುಳಾಗುವುದು ನಿಲ್ಲಬಹುದೇನೋ.

ಮೂಢನಂಬಿಕೆಗಳ ಗೂಡೇ ಆಗಿರುವ ನಮ್ಮ ದೇಶದಲ್ಲಿ ಸದ್ಯಕ್ಕಂತೂ ಪರಿಸ್ಥಿತಿ ಬದಲಾಗುವ ಯಾವುದೇ ಸೂಚನೆಗಳು ಕಾಣುತ್ತಿಲ್ಲ. ರಾಜಕಾರಣಿಗಳ ಸಾಮಾನ್ಯ ಗುಣವೆಂಬಂತೆ ತೋರುವ ಮೂಢನಂಬಿಕೆಗೆ ಹೊರತಾದವರೆಂಬ ಭಾವನೆಯನ್ನು ಆರಂಭದಲ್ಲೇ ಮೂಡಿಸಿದ ಸಿದ್ಧರಾಮಯ್ಯನವರು ಇಚ್ಛಾಶಕ್ತಿಯನ್ನು ಮೆರೆದು  ‘ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಮಸೂದೆ’ಯ ಬಗೆಗೆ ಆಸಕ್ತಿವಹಿಸಿ  ಇದಕ್ಕೊಂದು  ಕಾನೂನಿನ ರೂಪ ತರುವಲ್ಲಿ ಯಶಸ್ವಿಯಾಗುತ್ತಾರೆಂದು ಆಶಿಸೋಣ. ಯಾವುದೇ ಬದಲಾವಣೆಗೂ ಪ್ರತಿರೋಧ ಇದ್ದದ್ದೇ. ಅದರಲ್ಲೂ ಇಂತದ್ದೊಂದು ಬದಲಾವಣೆ ಖಂಡಿತಾ ಸುಲಭವಲ್ಲ. ಅವರ ಈ ಪ್ರಯತ್ನದಲ್ಲಿ ಎಲ್ಲ ವಿಚಾರವಂತರ ಬೆಂಬಲ ಇರಲಿ.


No comments :