Sunday, October 20, 2013

ನೆನಪಿನ ಸರಕುಗಳು

ಮುಂದೆಂದೋ ಒಂದು ದಿನ ಉಪಯೋಗಕ್ಕೆ ಬಂದೀತು ಎಂದೋ ಅಥವಾ ಯಾವುದೋ ಸಂದರ್ಭ ಅಥವಾ ವ್ಯಕ್ತಿಯ ನೆನಪಿಗೆಂದೋ ಕಾಗದಗಳು ಹಾಗೂ ಚಿಕ್ಕ ಪುಟ್ಟ  ವಸ್ತುಗಳನ್ನು ಸಂಗ್ರಹಿಸಿಡುವ ಅಭ್ಯಾಸ ಎಷ್ಟು ಮಂದಿಗಿದೆಯೋ ಗೊತ್ತಿಲ್ಲ. ನನಗಂತೂ ಇಂತಹ ಅಭ್ಯಾಸ ಬಹಳ ಹಳೆಯದು. ವರ್ಷಗಳು ಕಳೆದಂತೆ ಸಂಗ್ರಹವೂ ಬೆಳೆಯುತ್ತ ಹೋಗುತ್ತಿದ್ದರೂ ಧಾವಂತದ ಬದುಕಿನಲ್ಲಿ ನೆನಪಿನ ಈ ಸರಕುಗಳತ್ತ ಕಣ್ಣು ಹಾಯುವುದೂ ಅಪರೂಪ.

ಹಳ್ಳಿಯ ಮನೆಯಲ್ಲಿರುವ  ಒಂದು ಬೀರು , ನಗರದ  ಮನೆಯಲ್ಲಿನ   ಪುಸ್ತಕದ ಬೀರು, ಮಲಗುವ ಕೋಣೆಯ  ಅಟ್ಟದಲ್ಲಿರುವ ರಟ್ಟಿನ ಪೆಟ್ಟಿಗೆಗಳು  ಹೀಗೇ ನೆನಪುಗಳ ಸರಕುಗಳ ಅಕ್ಷಯ ಪಾತ್ರೆಗಳು ಅನೇಕ. ಆದರೆ ಈ ಪೆಟ್ಟಿಗೆಗಳಲ್ಲೆಲ್ಲ  ಏನೇನು ಇದೆ ಎಂದು ನೆನೆದರೆ ನನಗೇ  ಸ್ಪಷ್ಟವಿಲ್ಲ. "ನೀವು ನೆನಪಿಗಾಗಿ ಯಾವ ಹಳೆಯ ವಸ್ತು/ಪುಸ್ತಕ ಇತ್ಯಾದಿ ಸಂಗ್ರಹಿಸಿದ್ದೀರಿ" ಎಂದು ಫೇಸ್ಬುಕ್ ನಲ್ಲಿ ಸಹಪಾಟಿಯೊಬ್ಬರು ನಮ್ಮ ಗೆಳೆಯರ ಗುಂಪಿಗೆ ಕಳಿಸಿದ ಸರಳ ಪ್ರಶ್ನೆನನ್ನನ್ನು ನನ್ನ ನೆನಪಿನ ಸರಕುಗಳ ಸಂಗ್ರಹದತ್ತ ಇಣುಕು ನೋಟ ಬೀರುವಂತೆ ಮಾಡಿತು.

ಹೈಸ್ಕೂಲ್ ದಿನಗಳಲ್ಲಿ ನಾನು ಓದಿ ಮುಗಿಸಿದ ಪುಸ್ತಕಗಳ ಪಟ್ಟಿ, ವೃತ್ತ ಪತ್ರಿಕೆಗಳಲ್ಲಿ ಬರುತ್ತಿದ್ದ ರಸ ಪ್ರಶ್ನೆಗಳ ಸಂಗ್ರಹ, ದಿನ ಪತ್ರಿಕೆಯಲ್ಲಿ ಬರುತ್ತಿದ್ದ ಸುಭಾಷಿತಗಳ ಸಂಗ್ರಹ, ಪ್ರತಿಯೊಂದು ಫುಟ್ ಬಾಲ್ ಹಾಗೂ ಕ್ರಿಕೆಟ್ ವಿಶ್ವ ಕಪ್ ಪಂದ್ಯಾವಳಿಗಳ ಹಿಂದಿನ ಏಳೆಂಟು ವಾರಗಳು 'ಸ್ಪೋರ್ಟ್ಸ್ ಸ್ಟಾರ್ ' ಎಂಬ ವೃತ್ತ ಪತ್ರಿಕೆಯಲ್ಲಿ ವಾರ  ವಾರವೂ ಪ್ರಕಟವಾಗುತ್ತಿದ್ದ 'ವಿಶ್ವ ಕಪ್ ವಿಶೇಷ' ಭಾಗಗಳ  ಸಂಗ್ರಹ, ಒಲಂಪಿಕ್ಸ್ ವಿಶೇಷ ಸಂಚಿಕೆಗಳು, ಹೈಸ್ಕೂಲ್ ದಿನಗಳಲ್ಲಿ ನಾನು ಓದುತ್ತಿದ್ದ ವಸತಿ ಶಾಲೆಯಲ್ಲಿ ಕಡ್ಡಾಯವಾಗಿ ಬರೆಯಬೇಕಿದ್ದ ದಿನಚರಿ ಪುಸ್ತಕಗಳು, ಎಸೆಸೆಲ್ಸಿ ಹಾಗೂ ಪಿಯುಸಿಯ ಸಮೂಹ ಚಿತ್ರಗಳು, ಶಾಲಾ ದಿನಗಳ ಭೂಪಟಗಳ  ಪುಸ್ತಕ, ಪಠ್ಯ ಪುಸ್ತಕಗಳು, ಬಹುಮಾನವಾಗಿ ಬಂದ ಕಥೆ ಪುಸ್ತಕಗಳು, ಹಾಡುಗಳನ್ನು  ಸಂಗ್ರಹಿಸಿರುವ ನೋಟ್ ಪುಸ್ತಕಗಳು, ಶಾಲಾ ದಿನಗಳ ಪ್ರವಾಸದ ನೋಟ್ ಪುಸ್ತಕಗಳು, ಶಾಲಾ ಕಾಲೇಜು ದಿನಗಳ ಹಸ್ತಾಕ್ಷರ ಪುಸ್ತಕಗಳು, ನಾನು ವಸತಿ ಶಾಲೆಯಲ್ಲಿದ್ದಾಗ  ಅಮ್ಮ ಬರೆಯುತ್ತಿದ್ದ ಕಾಗದಗಳು, ಕಾಲೇಜು ದಿನಗಳಲ್ಲಿ ರಜೆಯಲ್ಲಿ ಗೆಳೆಯರು ಬರೆದ ಕಾಗದಗಳು, ನಾನು ಮಾಧ್ಯಮಿಕ  ಶಾಲೆಯಲ್ಲಿದ್ದಾಗ ಬಹುಮಾನವಾಗಿ ಪಡೆದಿದ್ದ ಕನ್ನಡ ನಿಘಂಟು, ಆ ದಿನಗಳಲ್ಲಿ ನಾನು ಬಹುವಾಗಿ ಮೆಚ್ಚುತ್ತಿದ್ದ ಕ್ರಿಕೆಟ್, ಫುಟ್ ಬಾಲ್ ಹಾಗೂ ಟೆನಿಸ್ ತಾರೆಯರ ಪೋಸ್ಟರ್ ಗಳು, ಅಮೆರಿಕನ್ನರು ಇರಾಕಿನ ಮೇಲೆ ಮೊದಲ ಸಲ ದಾಳಿ ಮಾಡಿದಾಗ ಆಗಿನ ವೃತ್ತ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಚಿತ್ರಗಳ ಕಟಿಂಗ್ ಗಳನ್ನು ಸೇರಿಸಿ ನಾನು ತಯಾರಿಸಿದ್ದ ಒಂದು ಕೊಲಾಜ್, ಹೀಗೇ ಸರಕುಗಳ ಪಟ್ಟಿ ಮುಗಿಯುವುದೇ ಇಲ್ಲ -ಇವೆಲ್ಲ ಇರುವುದು ಹಳ್ಳಿ ಮನೆಯ ನನ್ನ ಕೋಣೆಯ, ನನ್ನ ಮಂಚಕ್ಕೆ ಹೊಂದಿಸಿರುವ ಬೀರುವಿನಲ್ಲಿ. ಒಮ್ಮೊಮ್ಮೆ ಇವನ್ನೆಲ್ಲ ನೋಡುತ್ತಾ ನನ್ನಷ್ಟಕ್ಕೇ ತಲೆಯಾಡಿಸುತ್ತೇನೆ ಮತ್ತು ಅದರಲ್ಲಿರುವಷ್ಟೂ ವಸ್ತುಗಳೇನೂ  ಅಗತ್ಯದ ಅನಿವಾರ್ಯದವುಗಳಲ್ಲ ಎಂದು ನಂಬುವಾಗಲೇ ಯಾವನ್ನು ಎಸೆಯಬಹುದು ಎಂದು ನಿರ್ಧರಿಸುವಲ್ಲಿ ಕಷ್ಟಪಡುತ್ತೇನೆ.

ಕ್ಷಮಿಸಿ, ಹಳ್ಳಿ ಮನೆಯಲ್ಲಿರುವ  ಸರಕುಗಳದ್ದೇ ಇಷ್ಟು ದೊಡ್ಡ ಪಟ್ಟಿ ಕೊಟ್ಟ ಮೇಲೂ ನಗರದ ಮನೆಯಲ್ಲಿ  ಈಚಿನ ವರ್ಷಗಳಲ್ಲಿ ಸಂಗ್ರಹಿಸಿರುವ  ಸರಕುಗಳ ಬಗ್ಗೆಯೂ ಒಂದಿಷ್ಟು ಹೇಳುವುದಿದೆ.  ಈ ಮನೆಯಲ್ಲಿ ಬೀರುವಿನ ತುಂಬಾ ಆಗೀಗ ಕೊಂಡ, ಓದಿದ ಓದದಿರುವ ಪುಸ್ತಕಗಳು, ತೊಂಬತ್ತರ ದಶಕದಲ್ಲಿ ಬರುತ್ತಿದ್ದ ಇಲ್ಲಸ್ಟ್ರೆಟೆಡ್  ವೀಕ್ಲಿ,  ಜಂಟಲ್ಮನ್  ಮೊದಲಾದ ವೃತ್ತ ಪತ್ರಿಕೆಗಳ ಆಯ್ದ ಕೆಲ ಸಂಚಿಕೆಗಳು, ಕನ್ನಡದ ಶ್ರೇಷ್ಟ ಪತ್ರಕರ್ತ, ಸಾಹಿತಿ ಲಂಕೇಶರು ಮೃತರಾದಾಗ ಅವರ ಪತ್ರಿಕೆಯ ಬಳಗ ಅವರ ನೆನಪಿಗಾಗಿ ಅದ್ಭುತವಾಗಿ ರೂಪಿಸಿದ್ದ ಸಂಚಿಕೆ "ಇಂತಿ ನಮಸ್ಕಾರಗಳು!", ಕೆಲ ವೈಯಕ್ತಿಕ ಪತ್ರಗಳು, ಕೆಲ ವರ್ಷಗಳ ಹಿಂದೆ ಮಗಳು ವಿವಾಹ ವಾರ್ಷಿಕೋತ್ಸವದಂದು ತಾನೇ ತಯಾರಿಸಿ ನೀಡಿದ ಕ್ರಿಯೇಟಿವ್ ಆಗಿರುವ ಗ್ರೀಟಿಂಗ್ ಕಾರ್ಡ್, ಮಗಳ ಬಾಲ್ಯದ ಕಲಾ ಸೃಷ್ಟಿ ಪ್ರಯತ್ನಗಳು, ಕಚೇರಿಯಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಸಹೋದ್ಯೋಗಿಗಳು ನೀಡಿರುವ ಕಿರು ಕಾಣಿಕೆಗಳು, ಕಚೇರಿಯವರು ನೀಡಿರುವ ಸಣ್ಣ ಪುಟ್ಟ ಉಡುಗೊರೆಗಳು, ಸೇವಾ ಶ್ಲಾಘನೆಯ ಫಲಕ, ಉಡುಗೊರೆಯಾಗಿ ಬಂದ  ಪುಸ್ತಕಗಳು, ಹೀಗೇ. ದುಬಾರಿ ಯಾವುದೂ  ಅಲ್ಲ. ಬೆಲೆಯೇನಿದ್ದರೂ ನೆನಪುಗಳ ದೃಷ್ಟಿಯಿಂದ.

ನನ್ನ ಬಳಿಯಿರುವ ಪುಸ್ತಕಗಳಲ್ಲಿ ಹಲವನ್ನಾದರೂ  ಈ  ಪುಸ್ತಕಗಳ ಉಪಯೋಗವಾಗಬಹುದಾದವರು ಯಾರಿಗಾದರೂ ಕೊಡುವ ಯೋಚನೆ ಇದೆ. ಇನ್ನುಳಿದ ವಸ್ತುಗಳು, ಕಾಗದಗಳು ಬಹುಶಃ ನನ್ನೊಂದಿಗೇ ಉಳಿದಾವು. ಇನ್ನಷ್ಟು ಸಮಯವಾದರೂ.

ಹೌದು, ಇವೆಲ್ಲಾ  ಸರಕುಗಳು  ಅಗತ್ಯವೇ ಎಂಬ ಪ್ರಶ್ನೆ ಇಂದಿನ ದಿನಗಳಲ್ಲಿ ಸಹಜವೇ. ಈಗೆಲ್ಲ Clutterfree, Lean Systems, Minimalism ಹೀಗೆ ಸರಳೀಕರಣದ ಭರಾಟೆ. ಆದರೂ ನೆನಪಿನ ಕಿರು ಸರಕುಗಳು (keepsakes, bits and pieces of paper, artifacts etc) ಒಂದು ರೀತಿಯಲ್ಲಿ ನಾವು ಸಾಗಿ ಬಂದ ಹಾದಿ, ಆಯ್ದುಕೊಂಡ ಆಯ್ಕೆಗಳು, ಮೆಚ್ಚುವ ಲೇಖನಗಳು, ಮೆಚ್ಚುವ ಸಂಗೀತ ಇವೆಲ್ಲದರ ಪ್ರತೀಕಗಳು. ಆದರಿಂದಲೇ ಅವನ್ನು ನಿರ್ದಾಕ್ಷಿಣ್ಯವಾಗಿ ಹೊರ ಹಾಕುವುದು ಕಠಿಣ. ನಿಜ, ಇಂತಹ ವಸ್ತುಗಳೇ ಇರದಾಗ ಮನೆ ಅಥವಾ ಅಪಾರ್ಟ್ಮೆಂಟ್ ಇನ್ನಷ್ಟು ಚೆನ್ನಾಗಿ ಕಾಣಬಹುದು.  ಆದರೆ ಅಲ್ಲಿ ಮೂಲಭೂತವಾಗಿ ನಮ್ಮನ್ನು ಬಿಂಬಿಸುವ, ಪ್ರತಿನಿಧಿಸುವ, ಒಳಗೊಳ್ಳುವ ಏನೂ ಇರುವುದಿಲ್ಲ.  ಯಾವುದೂ ನಿಶ್ಚಿತವಲ್ಲದ ಬದುಕಿನ ಯಾನದಲ್ಲಿ ನೆನಪಿನ ಸಣ್ಣ ಪುಟ್ಟ ಸರಕುಗಳ ಮೇಲಿನ ಮೋಹ ವಿಚಿತ್ರವೇ ಅನಿಸಿದರೂ ತರ್ಕವೊಂದೇ ಅಲ್ಲ ಎಲ್ಲವೂ, ಅಲ್ಲವೇ ?

ನನ್ನ ಸಂಗ್ರಹದಲ್ಲಿ ನಾನು ವಿಶೇಷವಾಗಿ ಪರಿಗಣಿಸುವ ವಸ್ತುಗಳಲ್ಲಿ ೧೯೯೯ರಲ್ಲಿ ಜಂಟಲ್ಮನ್ ಮ್ಯಾಗಜಿನ್ ಪ್ರಕಟಿಸಿದ ಎರಡು 'ಮ್ಯೂಸಿಕ್ ಸ್ಪೆಶಲ್ ' ಸಂಚಿಕೆಗಳು ಸಹ ಸೇರಿವೆ. ನನಗೆ ಪಾಶ್ಚಾತ್ಯ ಸಂಗೀತದ ಹಲವು ಪ್ರಕಾರಗಳಾದ ಪಾಪ್, ರಾಕ್, ಜಾಜ್ , ಕ್ಲಾಸಿಕಲ್ ಇತ್ಯಾದಿಗಳ  ಬಗೆಗೆ ಅರಿವು ಆಸಕ್ತಿ ಮೂಡಿಸಲು ಇವೇ ಸಂಚಿಕೆಗಳು ಮುಖ್ಯ ಕಾರಣವಾದವು. ಅಲ್ಲಿಂದೀಚೆಗೆ ನಾನು ಈ ಎಲ್ಲ ಸಂಗೀತ ಪ್ರಕಾರಗಳಲ್ಲಿ  ಸಂಗ್ರಹಿಸಿರುವ, ಮತ್ತು ಮೆಚ್ಚುವ  ಸಂಗೀತದ ಅಲ್ಬಮ್ ಗಳ ಬಗೆಗೆ ತಿಳಿಯುವ ಆಸಕ್ತಿಯಿದ್ದರೆ, ಈ ಕೊಂಡಿಯನ್ನು ಕ್ಲಿಕ್ಕಿಸಿ: My Music Lists.

2 comments :

ಅಂಜನ್ said...

ನಮಸ್ಕಾರ ಶ್ರೀನಾಥ್. ನಿಮ್ಮ ನೆನಪಿನ ಬುತ್ತಿಯನ್ನು ಬಹಳ ಚೆನ್ನಾಗಿ ಉಣಬದಿಸಿದ್ದೀರಿ. ಹೌದು. ಇವೆಲ್ಲವೂ ಅತ್ಯಮೂಲ್ಯ. ನಮ್ಮ ವ್ಯಕ್ತಿತ್ವ, ನಾವು ಬೆಳೆದು ಬಂದ ದಾರಿ, ಇವೆಲ್ಲವೂ ಇದ್ರಲ್ಲಿ ಅಡಕವಾಗಿರುತ್ತೆ. ಕೆಲವು ಸಾರಿ, ಖುಷಿ ಆಗುತ್ತೆ, ಮತ್ತೆ ಕೆಲವು ಸಾರಿ ಬೇಜಾರಾಗುತ್ತೆ, ಅವನ್ನೆಲ್ಲ ನೋಡಿ. ಚೆನ್ನಾಗಿದೆ ಲೇಖನ.

ವಿನಯ್ ಮಾಧವ said...

ಶ್ರೀನಾಥ್,

ಕೆಲವನ್ನು ನಾವು ಯಾಕೆ ಇಟ್ಕೊಂಡಿದ್ದೇವೆ ಅಂತ ಗೊತ್ತಿರೋದಿಲ್ಲ. ಆದ್ರೆ, ಅದನ್ನ ಯಾರಾದ್ರೂ ಮುಟ್ಟಿದರೂ ಸಿಟ್ಟು ಬರುತ್ತೆ. ನಮ್ಮ ತಂದೆಯವರ ಒಂದು ಹಳೇ ಟೈಪ್ ರೈಟರ್ ನನ್ನ ಹತ್ತಿರ ಇದೆ. ಅದು ನಾನು ಹುಟ್ಟುವ ಸಮಯದಲ್ಲಿ, ಯಾರೋ ಅಫ್ರಿಕಾದ ಹೆಂಗಸೊಬ್ಬಳು ನನ್ನ ತಂದೆಗೆ ಆರು ರೂಪಾಯಿಗೆ ಮಾರಿದ್ದಂತೆ. ನನ್ನ ಮಗಳಿಗೂ ಅದನ್ನು ಮುಟ್ಟಲು ಬಿಟ್ಟಿಲ್ಲ. ಹಾಗೇ, ನಾನೂ ಅದನ್ನು ದಶಕಗಳಿಂದ ಉಪಯೋಗಿಸಿಲ್ಲ :)