Monday, November 05, 2012

ಕನ್ನಡ ಕಾಮನಬಿಲ್ಲು

ನವೆಂಬರಿನಲ್ಲಿ ಬೆಂಗಳೂರಿನಲ್ಲಿ ನಾವು ಕನ್ನಡಿಗರಲ್ಲಿ ಕನ್ನಡ ಭಾಷಾಭಿಮಾನ ಮತ್ತದರ ಪ್ರದರ್ಶನ  ಮಂಜಿನಂತೆ ಎಲ್ಲೆಡೆ ಆವರಿಸಿಬಿಡುತ್ತದೆ. ಮತ್ತೆ ದಿನಗಳು ಕಳೆಯುತ್ತ ಹೋದಂತೆ ಬೆಳಕಿಗೆ ಮಂಜು ಕರಗುವಂತೆ ಕ್ರಮೇಣ ಕರಗುತ್ತಾ ಮತ್ತೆ ಸುಪ್ತವಾಗಿಬಿಡುತ್ತದೆ. 

ನಮ್ಮಂತಹ ಐಟಿ ಬಿಟಿ ಕನ್ನಡಿಗರಿಗೆ ಕಚೇರಿಯಲ್ಲಂತೂ ಮಧ್ಯಾಹ್ನ ಊಟದ ಸಮಯದಲ್ಲಷ್ಟೇ ಅದೂ ಕನ್ನಡಿಗ ಸಹೋದ್ಯೋಗಿಗಳಾರಾದರೂ  ಜೊತೆಯಾದರಷ್ಟೇ ಕನ್ನಡದಲ್ಲಿ ಮಾತಾಡುವ ಅವಕಾಶ. ಇಲ್ಲದಿದ್ದರೆ ಅದೂ ಇಲ್ಲ. ಇನ್ನು ಮನೆಯ ಹೊರಗೆ ಲಭ್ಯವಿರುವ ಕನ್ನಡದ ಕೊಂಡಿ FM ಚಾನಲ್ ಗಳು. ವಾಹನಗಳಲ್ಲಿ ಸಂಚರಿಸುತ್ತಿರುವಾಗ  ಅಥವಾ ಅಂಗಡಿ ಮತ್ತಿತರೆಡೆ ರೇಡಿಯೋದಲ್ಲಿ ಕೇಳಸಿಗುವ ಕನ್ನಡ "ಸಕತ್ ಹಾಟ್ ಮಗಾ", "ಹಿಟ್ ಮೇಲೆ ಹಿಟ್", "ಕೇಳಿ ಕೇಳಿಸಿ ಲೈಫ್ ನಿಮ್ಮದಾಗಿಸಿ" ಈ ಮಾದರಿಯದು :-)

ಆದರೆ ಕಳೆದ ವಾರ ರಾಜ್ಯೋತ್ಸವದ ರಜಾ ದಿನ 'ನೀಲಂ' ಚಂಡಮಾರುತದ  ದೆಸೆಯಿಂದ  ಮನೆಯಲ್ಲೇ  ದಿನವಿಡೀ  ಕಳೆಯಬೇಕಾಗಿ,  ಆಕಾಶವಾಣಿಯ "ರೈನ್ ಬೊ  101.3 - ಕನ್ನಡ ಕಾಮನಬಿಲ್ಲು" ಚಾನಲನ್ನು ಬೆಳಗಿನಿಂದ ಸಂಜೆವರೆಗೂ ಕೇಳುವಾಗ ನಿಜಕ್ಕೂ ಕನ್ನಡದ ಗಾಳಿಯನ್ನೇ ಉಸಿರಾಡಿದ ಅನುಭವ.  ಈ ವಾಹಿನಿಯ ನಿರೂಪಕರು ಬಳಸುವ ನವಿರಾದ ಗಂಭೀರವಾದ  ಕನ್ನಡವೂ ಇಷ್ಟವಾಯಿತು.  ಅಂದು ಪ್ರಸಾರವಾದ ಬಹುಪಾಲು ಚಲನಚಿತ್ರ ಗೀತೆಗಳೂ ಕನ್ನಡ ಚಲನಚಿತ್ರ ಸಂಗೀತದ ಸುವರ್ಣ ಯುಗ ಎನ್ನಬಹುದಾದ 1965-85 ರ ಕಾಲದವು.

ಬೆಳಗ್ಗೆ 11 ರ ಸುಮಾರಿಗೆ ರೇಡಿಯೋ ಕೇಳಲು ಆರಂಭಿಸಿದರೆ ರಾತ್ರಿ 11 ರ ವರೆಗೂ ಅವ್ಯಾಹತವಾಗಿ ಹಿನ್ನೆಲೆಯಲ್ಲಿ ಮೂಡಿ ಬರುತ್ತಿದ್ದ ಗೀತೆಗಳು ಒಂದು ದಿನದ ಮಟ್ಟಿಗಾದರೂ ಕನ್ನಡದ ಜೇನಿನ ಹೊಳೆಯಲ್ಲಿ ಮೀಯಿಸಿ ತೇಲಿಸಿದವು. ಕೆಲವು ಭಾಗಗಳ  ಹಾಡುಗಳು ಶ್ರೋತೃಗಳ ಕೋರಿಕೆಯವಾದರೆ ಇನ್ನು ಕೆಲವು ಕಾರ್ಯಕ್ರಮ ನಿರೂಪಕರ ಆಯ್ಕೆಯವಾಗಿದ್ದವು. ಮಧ್ಯೆ ಒಂದೆರಡು ಸಂದರ್ಶನಗಳನ್ನಾಧರಿಸಿದ ಕಾರ್ಯಕ್ರಮಗಳೂ ಇದ್ದವು.

ಅಂದು ನಾನು ಕೇಳಿದ ಮೊದಲನೇ ಹಾಡು 'ಕಲ್ಲಾದರೆ ನಾನು ಬೇಲೂರಿನ ಗುಡಿಯಲ್ಲಿ ಇರುವೆ'.  ಅಲ್ಲಿಂದ ಮುಂದೆ ಪ್ರಸಾರವಾಗಿದ್ದು ಇನ್ನೂ ಹಿಂದಿನ ಕನ್ನಡ ಚಿತ್ರ ಸಂಗೀತದ ಪರಿಮಳ ಸೂಸಿದ 'ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ' . ಜಮಾನದ ಹಾಡುಗಳೇ ಆದರೂ ನಮ್ಮ ಎಷ್ಟೋ  ಹಿಂದಿನ ಹಾಡುಗಳ ಸಂಗೀತ, ಸಾಹಿತ್ಯ ಇಂದಿನ ಹಲವು ಹಾಡುಗಳಿಗೆ ಹೋಲಿಸಿದರೆ ನಿಜಕ್ಕೂ ಉತ್ಕೃಷ್ಟ.

ಮುಂದೆ ಪ್ರಸಾರವಾಗಿದ್ದು  'ಕನ್ನಡ ನಾಡಿನ ಜೀವನದಿ ಕಾವೇರಿ '. ಅಲ್ಲಿಂದ ಮುಂದೆ 'ಅಪಾರ  ಕೀರ್ತಿ ಗಳಿಸಿ ಮೆರೆವ ನಮ್ಮ ಭವ್ಯ ನಾಡಿ'ಗೊಂದು ಗೀತ ಪ್ರದಕ್ಷಿಣೆ.  ಕನ್ನಡ ದ ಕುರಿತಾದ ಹಾಡುಗಳದೇ  ಅಂದು ಪೈಪೋಟಿ. 'ಕನ್ನಡಕ್ಕಿಲ್ಲ ಸಾಟಿ ಚಂದನಕ್ಕಿಲ್ಲ  ಪೋಟಿ', 'ಕನ್ನಡವೇ ನಮ್ಮಮ್ಮ', ಕನ್ನಡವೆನೆ ಕುಣಿದಾಡುವುದೆನ್ನೆದೆಯು', 'ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ' ಹೀಗೇ...ಕನ್ನಡದ ಗುಣಗಾನದ ಮಹಾಪೂರ.

ಮಹಾನ್ ಗಾಯಕ ಪಿ ಬಿ ಶ್ರೀನಿವಾಸ್ ಅವರೊಂದಿಗೆ ಆಕಾಶವಾಣಿ ಹಾಸನದವರು ಈ ಹಿಂದೆ ನಡೆಸಿದ ಸಂದರ್ಶನ 'ಭಾವ ಭೃಂಗ' ಕಾರ್ಯಕ್ರಮ ಅಂದು ಮಧ್ಯಾಹ್ನ ರೈನ್ ಬೊ ನಲ್ಲಿ ಮರುಪ್ರಸಾರವಾಯಿತು.  ಪಿ ಬಿ ಯವರ ಕಂಠ ನಿಜಕ್ಕೂ ಅದ್ಭುತ. ತಮ್ಮ ವೃತ್ತಿ ಜೀವನದ ಹಲವು ನೆನಪುಗಳನ್ನು ಅವರು ಹಂಚಿಕೊಂಡರು. ರಾಜ್ ರಿಂದ ಪಿ ಬಿ ಯವರ ಹಿನ್ನೆಲೆ ಗಾಯನದ ವೃತ್ತಿಗೆ ಧಕ್ಕೆಯಾಯಿತು ಎಂದು ಕೆಲವರು ಮಾತಾಡುವುದನ್ನು  ಅದು ಬರಿ ಊಹಾಪೋಹ ಎಂದು ಬಣ್ಣಿಸಿದ ಪಿ ಬಿ ಯವರು, ರಾಜ್ ನಿಜಕ್ಕೂ ಅದ್ಭುತ ಹಾಡುಗಾರರೆಂದೂ ಅವರ ಚಿತ್ರಗಳಲ್ಲಿ ಸಿಕ್ಕ ಅವಕಾಶಕ್ಕಾಗಿ ತಾನು ನಿಜಕ್ಕೂ ಋಣಿಯಾಗಿರುವುದಾಗಿಯೂ ಹೇಳಿದರು. ಹಾಗೆಯೇ ಪಿ ಬಿ ಯವರು ಹಾಡಿದ ಹಲವಾರು ಸುಂದರ ಹಾಡುಗಳನ್ನೂ ಕೇಳಿಸಲಾಯಿತು. 'ಕನ್ನಡವೇ ತಾಯ್ನುಡಿಯು  ಕರುನಾಡು ತಾಯ್ನಾಡು', 'ದಿವ್ಯಗಗನ ವನವಾಸಿನಿ', 'ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ', 'ಧನಲಕ್ಷ್ಮಿ ದಯೆತೋರು ಅಮ್ಮಾ' ...ಹೀಗೇ ಹಲವಾರು.

ಸಂಜೆಯ ಕಾರ್ಯಕ್ರಮದಲ್ಲಿ ಸ್ಪರ್ಧೆಯೂ ಇತ್ತು.  ಶ್ರೋತೃಗಳು ದೂರವಾಣಿಯ ಮೂಲಕ ಭಾಗವಹಿಸಿ ಪ್ರಶಸ್ತಿ ಗೆಲ್ಲುವ ಅವಕಾಶ. ಅನೇಕರು ಅನೇಕ  ಕಡೆಗಳಿಂದ ಕರೆಮಾಡಿ ಉತ್ಸಾಹದಿಂದ ಪಾಲ್ಗೊಂಡರು. ನಿರೂಪಕಿಯೂ ತುಂಬಾ ಚೆನ್ನಾಗಿ ಕಾರ್ಯಕ್ರಮ ನಡೆಸಿದರು. ನಿರೂಪಕಿ ಕೇಳುವ ಮೂರು ಪ್ರಶ್ನೆಗಳಿಗೆ ಸರಿ ಉತ್ತರ ಹೇಳಿದವರಿಗೆ ಬಹುಮಾನವಿತ್ತು. ಉದಾಹರಣೆಗೆ ಈ ಗಾದೆ "ಅಣ್ಣ ಅತ್ತರೆ ತಮ್ಮನೂ ಅಳ್ತಾನೆ"... ಹೀಗೇ. ಸ್ಪರ್ಧಿ-ನಿರೂಪಕಿ ನಡುವಿನ ಸಂಭಾಷಣೆಗಳು ಕೇಳಲು ಮುದವಾಗಿದ್ದವು. ಇದೇ ಕಾರ್ಯಕ್ರಮದಲ್ಲಿ  ಕೆಲ ಪ್ರೇಮ ಗೀತೆಗಳೂ ಪ್ರಸಾರವಾದವು. 'ಏನೋ ಮೋಹ..ಏನೋ ದಾಹ', 'ಜಿನು ಜಿನುಗೋ ಜೇನಾ ಹನಿ ಮಿನು ಮಿನುಗೋ ತುಟಿಗೇ ಇಬ್ಬನಿ', 'ಮುಸ್ಸಂಜೆ ವೇಳೇಲಿ ಮುತ್ತಿಟ್ಟ ಉಸಿರಾ ಆಣೆ ಬಿಟ್ಟೋದ ದಾರೀಲಿ ಖುಷಿಯೇ ಇಲ್ಲಾ' ಹೀಗೇ ...

ರೈನ್ ಬೊ ದಲ್ಲಿ ರಾಜ್ಯೋತ್ಸವದಂದು ಪ್ರಸಾರವಾದ ಕಾರ್ಯಕ್ರಮಗಳೆಲ್ಲ ಚೆನ್ನಾಗಿದ್ದವು. ಅವುಗಳಿಗೆಲ್ಲ ಮುಕುಟಪ್ರಾಯ ಎನ್ನುವಂತಹ ಕಾರ್ಯಕ್ರಮವೆಂದರೆ ಶ್ರೀಧರ ಮೂರ್ತಿಯವರು ರಾತ್ರಿ 10 ರಿಂದ 11 ರವರೆಗೆ ನಡೆಸಿಕೊಟ್ಟ ಶಾಸ್ತ್ರೀಯ ಸಂಗೀತವನ್ನಾಧರಿಸಿದ ಕನ್ನಡ ಚಿತ್ರಗೀತೆಗಳ ಕಾರ್ಯಕ್ರಮ. 'ಅಭೇರಿ' ರಾಗದಲ್ಲಿ ಸಂಯೋಜನೆಗೊಂಡ ಹಲವಾರು ಅನುಪಮ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು.  ಇಂತಹ  ಹಾಡುಗಳನ್ನು ಕೇಳುವಾಗ ಭಾರತೀಯ ಶಾಸ್ತ್ರೀಯ ಸಂಗೀತದ ಶಕ್ತಿ ಕೇಳುಗರಿಗೆ ಮನವರಿಕೆಯಾಗದೆ ಇರಲಾರದು. ಹಾಗೆಯೇ ನಮ್ಮ ಕನ್ನಡದ ಪ್ರತಿಭಾವಂತ ಸಂಗೀತ ನಿರ್ದೇಶಕರುಗಳು  ಕೇವಲ ಒಂದು ರಾಗವನ್ನಾಧರಿಸಿ ಸಂಯೋಜಿಸಿದ ಈ ಗೀತೆಗಳನ್ನು ಕೇಳುತ್ತಿದ್ದರೆ   ಕನ್ನಡ ಚಲನಚಿತ್ರ ಇತಿಹಾಸದ ಗಣಿಯಲ್ಲಿ ಅಡಗಿರುವ ಇನ್ನುಳಿದ ವಿಶಿಷ್ಟ ಸಾಹಿತ್ಯ ಹಾಗೂ ಸಂಗೀತವುಳ್ಳ  ಗೀತೆಗಳ ಬಂಗಾರದ  ಭಂಡಾರದ  ಬಗೆಗೆ ವಿಸ್ಮಯವಾಗುತ್ತದೆ.

ಅಂದು ಪ್ರಸಾರವಾದ ಅಭೇರಿ ರಾಗವನ್ನಾಧರಿಸಿದ ಗೀತೆಗಳ ಪಟ್ಟಿ (ಲಭ್ಯವಿರುವ YouTube ಕೊಂಡಿಗಳೊಂದಿಗೆ)-

ಪಂಚಮ ವೇದ ಪ್ರೇಮದ ನಾದ (ಗೆಜ್ಜೆಪೂಜೆ - ವಿಜಯ ಭಾಸ್ಕರ್),
ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ (ದಾರಿ ತಪ್ಪಿದ ಮಗ - ಜಿ ಕೆ ವೆಂಕಟೇಶ್),
ನಗು ನಗುತಾ ನಲಿ ನಲಿ (ಬಂಗಾರದ ಮನುಷ್ಯ - ಜಿ ಕೆ ವೆಂಕಟೇಶ್),
ಜಗದೀಶನಾಡುವಾ ಜಗವೇ ನಾಟಕ ರಂಗ (ಶ್ರೀ ರಾಮಾಂಜನೇಯ ಯುದ್ಧ - ಜಿ ಕೆ ವೆಂಕಟೇಶ್),
ಬಾರೇ ಬಾರೇ ಚಂದದ ಚೆಲುವಿನ ತಾರೆ (ನಾಗರ  ಹಾವು - ವಿಜಯ ಭಾಸ್ಕರ್),
ವಿರಹ ನೂರು ನೂರು ತರಹ (ಎಡಕಲ್ಲು ಗುಡ್ಡದ ಮೇಲೆ - ಎಂ. ರಂಗರಾವ್),
ಹೂವು ಚೆಲುವೆಲ್ಲಾ ನಂದೆಂದಿತು (ಹಣ್ಣೆಲೆ ಚಿಗುರಿದಾಗ),
ನಮ್ಮ ಸಂಸಾರ ಆನಂದ ಸಾಗರ (ನಮ್ಮ ಸಂಸಾರ - ಎಂ. ರಂಗರಾವ್),
ಇವಳೇ ವೀಣಾ ಪಾಣಿ (ಎಂ. ರಂಗರಾವ್),
ಆಸೆಯ ಭಾವ ಒಲವಿನ ಜೀವ (ಮಾಂಗಲ್ಯ ಭಾಗ್ಯ - ರಾಜನ್ ನಾಗೇಂದ್ರ),
ನೀ ನಡೆದರೇ ಸೊಗಸು (ಅನುರಾಗ ಅರಳಿತು - ಉಪೇಂದ್ರ ಕುಮಾರ್),
ತೆರೆದಿದೆ ಮನೆ ಓ ಬಾ ಅತಿಥಿ (ಹೊಸ ಬೆಳಕು -  ಎಂ. ರಂಗರಾವ್).

3 comments :

Vijaya said...

awesome Srinath,miss bangalore radiocity/fm radio channels ,lines...iga traffic hegideeee.... sakhat hot maga ..lines

Girish B Hukkeri said...

Srinath. I returned to Bangalore to listen to Kannada.

Anonymous said...

ಕನ್ನಡದ ತಿಂಗಳೇ ಎನಿಸಿಕೊಂಡಿರುವ ನವೆಂಬರ್‌ನ ಒಂದು ದಿನವನ್ನು ಇದಕ್ಕಿಂತ ಅರ್ಥಪೂರ್ಣವಾಗಿ ಕಳೆಯಲು ಸಾಧ್ಯವೇ ಇಲ್ಲವೇನೋ ಎನಿಸುವುಷ್ಟು ಆತ್ಮೀಯ ಶೈಲಿಯ ಬರಹ. Let's thank Neelam for this beautiful blog.