Sunday, December 09, 2012

ಆಡಾಡತ ಆಯುಷ್ಯ

ಹೆತ್ತವರಿಗೆ ಹೆಮ್ಮೆ ತಂದ ಮಗ ತಾವಾದ ಮೇಲೆ ತಮ್ಮ ಕುರಿತು "ಮತ್ತು ನಾವು ಇವನು ಬೇಡ ಅಂತ ಅಂದುಕೊಂಡಿದ್ದೆವು!" ಎಂದು ತಂದೆಯವರನ್ನುದ್ದೇಶಿಸಿ ತಮ್ಮ ತಾಯಿ ಒಮ್ಮೆ ಹೇಳಿದ್ದ ಮಾತನ್ನು "ಆಡಾಡತ ಆಯುಷ್ಯ" ಎಂಬ ತಮ್ಮ ಆತ್ಮ-ಕತೆಯ ಆರಂಭದಲ್ಲೇ ಗಿರೀಶ್ ಕಾರ್ನಾಡರು ನೆನೆಯುತ್ತಾರೆ. ತಮ್ಮ ತಾಯಿಯವರ ಯೋಜನೆಯಂತೆ ತಮ್ಮ ಹುಟ್ಟಿಗೇ ಎರವಾಗಬಹುದಾಗಿದ್ದ ಪುಣೆಯ ಡಾ. ಮಧುಮಾಲತಿ ಗುಣೆ ಎಂಬುವರಿಗೇ ಪುಸ್ತಕದ ಅರ್ಪಣೆಯನ್ನೂ ಮಾಡುವುದರ ಮೂಲಕ ಆರಂಭದಲ್ಲೇ ತಮ್ಮ ಆತ್ಮಕತೆಯ ಬರವಣಿಗೆಯಲ್ಲಿ ಉದ್ದಕ್ಕೂ ಕಾಣಬರುವ ಸ್ವಾರಸ್ಯಕರ ಹಾಗೂ ಆತ್ಮೀಯ ಶೈಲಿಯ ಪರಿಚಯ ಮಾಡಿಸುತ್ತಾರೆ. ಅಂದು ತಮ್ಮ ತಾಯಿಯವರು ಹೇಳಿದ ಮಾತಿನಿಂದ ತಾವಿಲ್ಲದೆಯೂ ಈ ಜಗತ್ತು ಇರಬಹುದಾಗಿತ್ತೆಂಬ ಯೋಚನೆಗೆ ಮಂಕಾಗಿ ಕೂತದ್ದನ್ನು ಕಾರ್ನಾಡರು ನೆನೆಯುವಾಗ, ಪ್ರತಿ ಹುಟ್ಟಿನಲ್ಲೂ ಇಂತಹದ್ದೊಂದು ಅಸಂಭಾವ್ಯತೆಯ ಅಂಶ ಇರಬಹುದೆಂಬ ವಿಚಾರ ನಮಗೂ ಬರುವುದು. ಅಡಿಗರ "ಇದು ಬಾಳು" ಪದ್ಯದ "ಯಾರ ಲೀಲೆಗೋ ಯಾರೋ ಏನೋ ಗುರಿ ಇರದೆ ಬಿಟ್ಟ ಬಾಣ" ಸಾಲು ಸಹ ಇದೇ ಭಾವನೆಯದ್ದು.


ಆರಂಭದಲ್ಲಿ ಡಾ. ಮಧುಮಾಲತಿ ಗುಣೆಯವರಿಗೆ ಪುಸ್ತಕದ ಅರ್ಪಣೆ ಮಾಡುವಲ್ಲಿ ಬಾಳಿನ ಆಕಸ್ಮಿಕತೆ, ಅಸಂಭಾವ್ಯತೆಗಳ ವಿಚಾರ ಕ್ಷಣ ಪ್ರಸ್ತಾಪಿಸುವ ಲೇಖಕರು ಮುಂದೆಲ್ಲೂ ಅಂತಹ ಅಮೂರ್ತ, ದಾರ್ಶನಿಕ ವಿಚಾರಗಳ ಪ್ರಸ್ತಾಪಕ್ಕೆ ಹೋಗದೆ ವ್ಯಾವಹಾರಿಕ ಜಗತ್ತಿನ ನೆಲೆಯಲ್ಲೇ ಉಳಿಯುತ್ತಾರೆ. ಯಾವುದೇ ಸೃಜನಶೀಲ ಸಾಹಿತಿ ತನ್ನ ಅಧ್ಯಯನ, ಅನುಭವ, ಸ್ಮೃತಿ ಇವುಗಳನ್ನಾಧರಿಸಿ ರಚಿಸುವ ಯಾವುದೇ ಕೃತಿಯೂ ಒಂದು ಅರ್ಥದಲ್ಲಿ ಬಾಳು ಎಂದರೇನೆಂದು ಅರಿಯುವ ಪ್ರಯತ್ನವೇ ಆಗಿದ್ದರೂ ಅಡಿಗರ ಪದ್ಯದ ಅಲೌಕಿಕ ಅನ್ವೇಷಣೆಯ ತೀವ್ರತೆ ಕಾಣುವುದು ಅಪರೂಪ.


"ಆಡಾಡ್ತ ಆಯುಷ್ಯ" ಎಂದು ಕರೆದರೂ ಆತ್ಮಕತೆಯ ಆರಂಭದಿಂದಲೂ ಕಾಣಸಿಗುವುದು ಒಂದು ಶಿಸ್ತುಬದ್ಧ ಹಾಗೂ ಎಲ್ಲ ಘಟ್ಟಗಳಲ್ಲೂ ಉತ್ಕೃಷ್ಟತೆಗಾಗಿ ತುಡಿವ ಜೀವನದ ಚಿತ್ರವೇ. ವಿಚಾರ ಆಚರಣೆಗಳಲ್ಲಿ ಯಾವುದೇ ಡಾoಬಿಕತೆಗೆ ಆಸ್ಪದವಿಲ್ಲದ ನೇರ ನಡವಳಿಕೆಗಳು ಕಾರ್ನಾಡರ ವೈಶಿಷ್ಟ್ಯ. ಈ ಕಾರಣಕ್ಕಾಗೆ ಕೆಲವು ಸಂದರ್ಭಗಳಲ್ಲಿ ಅವರು ವಿವಾದಗಳಲ್ಲಿ ಸಿಲುಕಿಕೊಳ್ಳುವುದೂ ಉಂಟು. ಇತ್ತೀಚೆಗೆ ಕಾದಂಬರಿಕಾರ ನಾಯ್ ಪಾಲ್ ಅವರ ಬಗೆಗೆ ಕಾರ್ನಾಡರು ವ್ಯಕ್ತಪಡಿಸಿದ ಅಭಿಪ್ರಾಯ ಚರ್ಚೆಗೆ ಗ್ರಾಸವಾಯಿತು. ಆತ್ಮ-ಕತೆಯಲ್ಲೂ ವ್ಯಕ್ತಿ ವಿಷಯಗಳ ಬಗೆಗೂ ಅವರ ಪ್ರತಿಕ್ರಿಯೆ ಪ್ರತಿಸ್ಪಂದನಗಳೆಲ್ಲ ನೇರವೂ , ನಿರ್ಭಿಡೆಯವೂ ಆಗಿವೆ.


ಗಣಿತ ಶಾಸ್ತ್ರ ವಿಷಯದಲ್ಲಿ ಪದವಿ ಪರೀಕ್ಷೆಯಲ್ಲಿ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದು, ರೋಹ್ಡ್ಸ್ ಸ್ಕಾಲರ್ಷಿಪ್ ಮೂಲಕ ಆಕ್ಸ್ ಫರ್ಡ್ನಲ್ಲಿ ಸ್ನಾತಕೋತ್ತರ ಪದವಿ, ಆಕ್ಸ್ ಫರ್ಡ್ನಲ್ಲಿ ಯೂನಿಯನ್ ಸೊಸೈಟಿಯ ಅಧ್ಯಕ್ಷ ಪದವಿ ಹೀಗೇ ಗಿರೀಶರ ಸಾಧನೆಗಳು ಹಲವಾರು. ಇದೆಲ್ಲದರ ನಡುವೆ ಸುಪ್ತವಾಗಿ ಹರಿದು, ದೀಪ್ತವಾಗಿ ಪ್ರಕಟಗೊಂಡ ಕನ್ನಡ ಸಾಹಿತ್ಯ ಪ್ರೀತಿ, ಪ್ರತಿಭೆ. ಕನ್ನಡದಲ್ಲಿ ಶ್ರೇಷ್ಟ ಕೃತಿಗಳು ಪ್ರಕಟವಾದಾಗೆಲ್ಲ ಸಂಭ್ರಮಿಸಿ, ಕೆಲವನ್ನು ಚಲನಚಿತ್ರವಾಗಿಸುವ ದಿಸೆಯಲ್ಲಿ ಬಿವಿ ಕಾರಂತರಂತಹವರೊಡನೆ ಕಾರ್ಯ ಪ್ರವೃತ್ತರಾಗುತ್ತಿದ್ದ ಬಗೆ ಅವರ ಕನ್ನಡ ಅಭಿಮಾನದ ಸ್ಪಷ್ಟ ಗುರುತು.
ತಮ್ಮ ಇಪ್ಪತ್ತಮೂರನೆ ವಯಸ್ಸಿಗೇ "ಯಯಾತಿ" ಎಂಬ ಮುಖ್ಯವಾದ ನಾಟಕವನ್ನು ರಚಿಸಿದ ಪ್ರತಿಭೆ ಗಿರೀಶ್ ಕಾರ್ನಾಡ್. ಅಲ್ಲಿಂದ ಮುಂದೆ ಈವರೆಗೆ ಅವರು ರಚಿಸಿರುವ
ನಾಟಕಗಳ ಸಂಖ್ಯೆ ಹದಿಮೂರು. ೨೦೦೬ ರಲ್ಲಿ ಪ್ರಕಟವಾದ ಅವರ "ಮದುವೆಯ ಆಲ್ಬಮ್" ಎಂಬ ನಾಟಕವನ್ನು ಓದುವಾಗ ಕನ್ನಡದಲ್ಲಿಯೂ ಜಾರ್ಜ್ ಬರ್ನಾರ್ಡ್ ಷಾ ನ  ಮಾದರಿಯ ನಾಟಕವೊಂದನ್ನು ಓದಿದಂತಹ ಅನುಭವ ಆದದ್ದರ ನೆನಪಾಗುತ್ತಿದೆ. ಪ್ರಸ್ತುತ ಸಮಾಜದ ಒಂದು  ಸ್ತರದ ಜನರ  ವ್ಯವಹಾರಗಳ ನಡವಳಿಕೆಗಳ ಸೂಕ್ಷ್ಮ ಗ್ರಹಿಕೆ, ಹಾಗೆಯೇ ವೈವಿಧ್ಯಮಯ ಪಾತ್ರಗಳ ಸೂಕ್ತ ಅಭಿವ್ಯಕ್ತಿ ಶೈಲಿ, ಸಮರ್ಪಕ ನುಡಿಕಟ್ಟುಗಳ ಬಳಕೆ ಇವೆಲ್ಲವುಗಳಲ್ಲೂ ನಾಟಕಕಾರನ ಪ್ರತಿಭೆ, ಬುದ್ಧಿ ಶಕ್ತಿಗಳು ಹೊರಹೊಮ್ಮುವುದನ್ನು ಕಾಣಬಹುದು.

ಕಾರ್ನಾಡರ ಚಿತ್ರ ಜಗತ್ತಿನ ಹಲವಾರು ಸಾಹಸಗಳು ಸಾಧನೆಗಳ ಬಗೆಗೆ "ಆಡಾಡತ  ಆಯುಷ್ಯ" ದಲ್ಲಿ ಸಾಕಷ್ಟು ಮಾಹಿತಿ ಇದೆ. ಕನ್ನಡದ  ಹೆಸರಾಂತ  ಚಿತ್ರಗಳಾದ ಸಂಸ್ಕಾರ, ವಂಶವೃಕ್ಷ, ಕಾಡು, ಒಂದಾನೊಂದು ಕಾಲದಲ್ಲಿ, ಕಾನೂರು ಹೆಗ್ಗಡಿತಿ ಮುಂತಾದವುಗಳ ಬಗೆಗೆ ಕುತೂಹಲಕರವಾದ ಹಾಗೂ ಖಾಸಗಿಯಾದ ವಿವರಗಳು ಸಿಗುತ್ತವೆ. ದೂರದರ್ಶನದಲ್ಲಿ ಒಮ್ಮೆ "ಒಂದಾನೊಂದು ಕಾಲದಲ್ಲಿ" ಚಿತ್ರ ನೋಡುವಾಗ ಆ ಚಿತ್ರಕ್ಕೆ  ಕಥೆ, ಚಿತ್ರಕಥೆ ನಿರ್ದೇಶನ ನೀಡಿದ್ದ ಗಿರೀಶ್ ಕಾರ್ನಾಡರು ಹಾಗೂ ಅಭಿನಯ ನೀಡಿದ್ದ ಶಂಕರ ನಾಗ್, ಸುಂದರಕೃಷ್ಣ  ಅರಸ್ ರ ಪ್ರತಿಭೆ ಅಚ್ಚರಿ ಮೂಡಿಸಿದ್ದು ನೆನಪಾಗುತ್ತಿದೆ.  ಅದಕ್ಕೂ  ಹಿಂದೆ ಡಿವಿಡಿ ಮೂಲಕ ನೋಡಿದ್ದ ಜಗತ್ಪ್ರಸಿದ್ಧ ನಿರ್ದೇಶಕ ಅಕಿರಾ ಕುರಸಾವನ "ರಾಶೋಮೊನ್" ಚಿತ್ರದ ಮಟ್ಟಕ್ಕೆ ಏರುವ ಚಿತ್ರ ಇದೆಂದು ಅನಿಸಿತ್ತು . 

"ಆಡಾಡತ ಆಯುಷ್ಯ" ದಲ್ಲಿ ಕಾರ್ನಾಡರ ಬರವಣಿಗೆಯ ಶೈಲಿಯಂತೂ ಅತ್ಯಂತ ಆಪ್ಯಾಯಮಾನ. ಅವರ ಆಯೀ, ಬಾಪ್ಪಾರ ಸಂಬಂಧ  ಸಂಸಾರದ ವಿವರಗಳಿಂದ ಆರಂಭಿಸಿ,  ತಮ್ಮ ಬಾಲ್ಯ  ಕಾಲವನ್ನು ಕಳೆದ ಶಿರಸಿ, ಧಾರವಾಡಗಳ ಚಿತ್ರಣ, ಮುಂದೆ  ಶಿಕ್ಷಣಕ್ಕಾಗಿ ತಾವು ಸಂದರ್ಶಿಸಿದ  ಮುಂಬೈ, ಆಕ್ಸ್ ಫರ್ಡ್, ನಂತರ ವೃತ್ತಿಗಾಗಿ ಕಾಲ ಕಳೆದ ಮದ್ರಾಸು ಪುಣೆ ಇವುಗಳ ವಿವರ. ಪುಣೆಯ ಫಿಲಂ ಹಾಗೂ ಟೆಲಿವಿಜನ್  ಸಂಸ್ಥೆಯ ನಿರ್ದೇಶಕನ ವೃತ್ತಿಯ ಅನುಭವಗಳು  ಹೀಗೇ ವೈವಿಧ್ಯಮಯ ವಿವರಗಳು.  ಅನಗತ್ಯ ಸಂಭಾವಿತತನ,  ಸೋಗು ತೋರದ ನಿತ್ಯ ಜೀವನದ ವರ್ಣನೆಗಳು.

 ಧಾರವಾಡದ ಅದರಲ್ಲೂ  ಸಾರಸ್ವತಪುರದ ವರ್ಣನೆಯಂತೂ ಆ ಬಡಾವಣೆಯ ಪರಿಚಯ ಇರುವವರಿಗೆ ಅತ್ಯಂತ ಸ್ವಾರಸ್ಯಕರವೆನಿಸಬಹುದು. ಹುಬ್ಬಳ್ಳಿಯಲ್ಲಿ  ಇಂಜಿನೀರಿಂಗ್ ಓದುವಾಗ ಆಗೀಗ ಹೋಗಿ ಬಂದಷ್ಟೇ ಧಾರವಾಡದ ಪರಿಚಯ ಇರುವ ನನಗೂ ಗಿರೀಶರು ನೀಡುವ ವಿವರಗಳು ಧಾರವಾಡದ ಒಂದು ಹೊಸ ನೋಟವನ್ನೇ ನೀಡಿದವು.

ಇದೀಗ ಎಪ್ಪತ್ತ ನಾಲ್ಕು ವರುಷಗಳು ತುಂಬಿರುವ ಗಿರೀಶರ ಮೊದಲ ಮೂವತ್ತೇಳು  ವರುಷಗಳ ಆತ್ಮ-ಕತೆಗಳಷ್ಟೇ "ಆಡಾಡತ  ಆಯುಷ್ಯ"ದ ಭಾಗವಾಗಿವೆ. ಇದರ ಉತ್ತರಾರ್ಧದ ಸೂಚನೆಯನ್ನು ಲೇಖಕರು ಪುಸ್ತಕದ ಕಡೆಯಲ್ಲಿ ನೀಡಿದ್ದು, ಅಂತಹದ್ದೊಂದು ಭಾಗ ಪ್ರಕಟವಾದರೆ ಅದನ್ನು "ನೋಡ ನೋಡ್ತಾ ದಿನಮಾನ" ಎಂದು ಕರೆಯಬಹುದಾದ ಸಾಧ್ಯತೆಯ ಸೂಚನೆ ನೀಡಿದ್ದಾರೆ. ತಾವು ಮೆಚ್ಚಿದ ಬೇಂದ್ರೆ ಕವಿತೆ "ನನ್ನ ಕಿನ್ನರಿ" ಯ ಮೊದಲನೆ ಸಾಲು ("ನೋಡ ನೋಡ್ತಾ ದಿನಮಾನ ಆಡಾಡ್ತ  ಆಯುಷ್ಯಾ") ಈ ಆತ್ಮ-ಕತೆಯ ಶೀರ್ಷಿಕೆಯಾಗಿರುವುದು ವಿಶೇಷ.

ಅಂತೂ ತುಂಬಾ ಆಸಕ್ತಿಯಿಂದ ಓದಿಸಿಕೊಳ್ಳುವ ಈ ಪುಸ್ತಕ ನನಗಂತೂ "ಓದ್ ಓದ್ತಾ ಅಂತ್ಯ" ಆದದ್ದೇ ತಿಳಿಯಲಿಲ್ಲ. ಇನ್ನು "ನೋಡ್ ನೋಡ್ತಾ ದಿನಮಾನ" ದ ಇದಿರು ನೋಡ್ತಾ ಇರುವುದೊಂದೇ ಸಾಧ್ಯತೆ.

1 comment :

Girish B Hukkeri said...

Thanks Srinath Shiragalale, for the nice review of the book. The review helped me to get the gist of the book, without spending time to read the same. Additionally, the review inspired me to read the book. Hope to read the book down the line. Keep up your contribution in introducing us & others to the world of literature!