Sunday, July 02, 2023

ಗ್ರಂಥಾಲಯಗಳು

ಇತ್ತೀಚೆಗೆ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಗ್ರಂಥಾಲಯ ಮಹತ್ವ ಮತ್ತು ಪುನಶ್ಚೇತನ ಕ್ರಮ ಎಂಬ ಲೇಖನವು ನನ್ನಲ್ಲಿ ಹಲವು ನೆನಪುಗಳನ್ನು, ಆಲೋಚನೆಗಳನ್ನೂ ಎಚ್ಚರಗೊಳಿಸಿತು.

ಗ್ರಂಥಾಲಯಗಳೊಟ್ಟಿಗಿನ  ಮತ್ತು ಪುಸ್ತಕಗಳೊಟ್ಟಿಗಿನ ನನ್ನ ಮೊದಲ ಅನುಭವಗಳನ್ನು  ನೆನೆಯಹೊರಟರೆ ಅದು ನನ್ನನ್ನು ಬಹಳ ಹಿಂದಿನ ದಿನಗಳಿಗೆ ಕೊಂಡೊಯ್ಯುವುದು. ಹಳ್ಳಿಯ ಪ್ರಾಥಮಿಕ ಶಾಲೆಯಲ್ಲಿದ್ದ ಒಂದೇ ಒಂದು ಕಬ್ಬಿಣದ ಪೆಟ್ಟಿಗೆಯ ಪುಸ್ತಕ ಸಂಗ್ರಹ.  ಮುಂದೆ ಮೈಸೂರಿನಲ್ಲಿ ಪ್ರೌಢಶಾಲೆಯಲ್ಲಿ ಓದುವಾಗ ಆ ಶಾಲೆಯಲ್ಲಿದ್ದ ಅದ್ಭುತ ಗ್ರಂಥಾಲಯ ಮತ್ತು ಅಲ್ಲಿನ ಗ್ರಂಥಪಾಲಕರು ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿಯನ್ನು ಮೂಡಿಸುವ ಸಲುವಾಗಿ ತೆಗೆದುಕೊಳ್ಳುತ್ತಿದ್ದ ಲೈಬ್ರರಿ  ಕ್ಲಾಸ್, ಇದೆಲ್ಲ ನೆನಪಾಗುವುದು.  

ಪ್ರಜಾವಾಣಿಯ ಲೇಖನದಲ್ಲಿ, ಸಾರ್ವಜನಿಕ ಗ್ರಂಥಾಲಯಗಳ ಪುನಶ್ಚೇತನಕ್ಕಾಗಿ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಓದಿದ್ದು ಭರವಸೆ ಮೂಡಿಸುತ್ತದೆ. ಇದು ಅತ್ಯಂತ ಅಗತ್ಯವಾಗಿ ಆಗಬೇಕಾಗಿರುವ ಕಾರ್ಯ. ಅಜೀಮ್ ಪ್ರೇಮ್ ಜೀ ಸಂಸ್ಥೆಯು ದೇಶಾದ್ಯಂತ ವಿವಿಧ ಪಟ್ಟಣಗಳಲ್ಲಿ ೨೭೮ ಗ್ರಂಥಾಲಯಗಳನ್ನು ನಿರ್ವಹಿಸುತ್ತಿರುವ ವಿಚಾರ ಸ್ವಾಗತಾರ್ಹವಾದದ್ದು. 

ಇತರ ಹಲವು ಸಂಘ ಸಂಸ್ಥೆಗಳು ಮತ್ತು ಸರ್ಕಾರದ ಇಲಾಖೆಗಳು ಸಹ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಉಮಾ ಮಹಾದೇವನ್ ಎಂಬ ಅಧಿಕಾರಿಯೊಬ್ಬರು ಗ್ರಾಮೀಣ ಭಾಗಗಳಲ್ಲಿ ಗ್ರಂಥಾಲಯಗಳ ಆರಂಭ ಮತ್ತು ಪುನಶ್ಚೇನದ ಕಾರ್ಯಕ್ರಮಗಳ ಬಗೆಗೆ ಸಾಮಾಜಿಕ ಮಾಧ್ಯಮದಲ್ಲಿ ಆಗಾಗ ಹಂಚಿಕೊಳ್ಳುತ್ತಾರೆ. ಗ್ರಾಮೀಣ ಭಾಗದ ಜನತೆ, ಅದರಲ್ಲೂ ಮಕ್ಕಳು ಪುಸ್ತಕಲೋಕಕ್ಕೆ ತೆರೆದುಕೊಳ್ಳುವುದು ಸಂತಸದ ವಿಷಯ. ಸ್ಥಳೀಯವಾದ ರಚನಾತ್ಮಕ ಕಾರ್ಯಕ್ರಮಗಳು ಸಾರ್ವಜನಿಕ ಗ್ರಂಥಾಲಯಗಳ ಮಾಂತ್ರಿಕತೆಯನ್ನು ಹರಡುತ್ತಿರುವ ಬಗ್ಗೆ ಉಮಾ ಅವರು 'ದಿ ಹಿಂದೂ' ಪತ್ರಿಕೆಯಲ್ಲಿ ಲೇಖನವನ್ನೂ ಬರೆದಿದ್ದರು. 

ಮೊನ್ನೆ ಪ್ರಜಾವಾಣಿಯಲ್ಲಿ ಇನ್ನೊಂದು ವರದಿ ಪ್ರಕಟವಾಗಿತ್ತು. "ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೈಟೆಕ್ ಗ್ರಂಥಾಲಯ” ಎಂಬ ಈ ಲೇಖನ ಕಲಬುರ್ಗಿಯ ಜೇವರ್ಗಿಯಲ್ಲಿ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸವನ್ನು ಉತ್ತೇಜಿಸಲು ಕಾಲೇಜೊಂದರ ಸಿಬ್ಬಂದಿ ಕೈಗೊಳ್ಳುತ್ತಿರುವ ವಿಶಿಷ್ಟ ಮತ್ತು ಸೃಜನಾತ್ಮಕ ಚಟುವಟಿಕೆಗಳ ಕುರಿತಾಗಿತ್ತು . 

ವೈಯಕ್ತಿಕವಾಗಿ ನಾನು ಪುಸ್ತಕಗಳಿಂದ ಜೀವನದಲ್ಲಿ ಪ್ರಭಾವಿಸಲ್ಪಟ್ಟಿರುವುದು, ಪಡೆದಿರುವುದು ಬಹಳಷ್ಟಿದೆ. ಹೀಗಾಗಿಯೇ ಗ್ರಂಥಾಲಯಗಳ ಉಪಯುಕ್ತತೆಯ ಬಗ್ಗೆ ಮತ್ತು ಅವುಗಳ ಪುನಶ್ಚೇತನದ ಅಗತ್ಯದ ಬಗ್ಗೆ ನನಗೆ ಅನುಮಾನವೇ ಇಲ್ಲ. ಪುಸ್ತಕಗಳಿಂದ ಆಗುವ ಪ್ರಯೋಜನಗಳ ಬಗ್ಗೆ ಹೇಳುತ್ತಾ ಹೋದರೆ ಅದಕ್ಕೆ ಕೊನೆ ಮೊದಲಿಲ್ಲ. 

ತಕ್ಷಣಕ್ಕೆ ಹೊಳೆಯುವುದಿಷ್ಟು-

ಪುಸ್ತಕಗಳು ಸ್ಪೂರ್ತಿದಾಯಕವಾಗಿರಬಲ್ಲವು. ಅದರಲ್ಲೂ ಜೀವನಚಿತ್ರಗಳು ಸಾಧಕರ ಹಾದಿಯಲ್ಲಿನ ಏಳುಬೀಳುಗಳು  ಹಾಗೂ ಅವನ್ನು ಅವರು ನಿಭಾಯಿಸುವುದರ ವಿವರಗಳನ್ನು ಕಟ್ಟಿಕೊಡಬಲ್ಲವು. ಉದಾಹರಣೆಗೆ,  ಭಾರತದಲ್ಲಿ ಹಾಲು ಉತ್ಪಾದನೆಯಲ್ಲಿ ಕ್ರಾಂತಿಯನ್ನೇ ಮಾಡಿದ ಡಾ ವರ್ಗಿಸ್ ಕುರಿಯನ್ ಅವರ ಆತ್ಮಚರಿತ್ರೆ 'ಐ ಟೂ ಹ್ಯಾಡ್ ಎ ಡ್ರೀಮ್', ದೇಶದಲ್ಲಿ ಬಾಹ್ಯಾಕಾಶ ಸಂಶೋಧನೆಗೆ ಅಡಿಪಾಯ ಹಾಕಿದ ವಿಕ್ರಂ ಸಾರಾಭಾಯಿಯವರ ಕುರಿತಾದ 'ವಿಕ್ರಂ ಸಾರಾಭಾಯ್ - ಎ ಲೈಫ್'   ಇವು ಈ ಬಗೆಯ ಪುಸ್ತಕಗಳು. ಇತ್ತೀಚಿಗೆ ಪ್ರಕಟವಾಗಿರುವ ಎಚ್ ಡಿ ದೇವೇಗೌಡರ ಜೀವನದ ಕುರಿತಾದ 'ಫರೋಸ್ ಇನ್ ಎ ಫೀಲ್ಡ್ '  ಸಹ ಅತ್ಯುತ್ತಮ ಜೀವನಚಿತ್ರಗಳಲ್ಲೊಂದು.

ಪುಸ್ತಕಗಳಿಂದ ರಂಜನೆ ಅಷ್ಟೇ ಅಲ್ಲ, ಅವು ನಮ್ಮನ್ನು ಅಳಿಸುವ, ಕಷ್ಟದ ಕ್ಷಣಗಳಲ್ಲಿ ಸಾಂಗತ್ಯ ಒದಗಿಸುವ, ನೆಮ್ಮದಿ ತರುವ ಶಕ್ತಿಯನ್ನೂ ಪಡೆದಿವೆ. ಬೆಳೆಯುವ ಮಕ್ಕಳ ಮನಸ್ಸಿನ ಮೇಲೆ ದೀರ್ಘಾವಧಿಯಲ್ಲಿ ಪ್ರಯೋಜನಕಾರಿಯಾಗುವ ಪರಿಣಾಮವನ್ನು ಪುಸ್ತಕಗಳು ಬೀರಬಲ್ಲವು. 

ಪುಸ್ತಕಗಳು ಸಂಪರ್ಕ ಸೇತುಗಳಾಗಬಲ್ಲವು. ವಿಸ್ತಾರವಾದ ಪ್ರಪಂಚದೊಂದಿಗೆ, ನಮ್ಮ ಹಿಂದಿನ ಈಗಿನ ಮುಂದಿನ ಕಾಲದೊಂದಿಗೆ, ಎಲ್ಲ ದೇಶ ಜನಾಂಗ ಸಂಸ್ಕೃತಿಗಳ ಜನರೊಂದಿಗೆ ನಮ್ಮನ್ನು ಬೆಸೆಯುವ ಸಾಧನವಾಗಿ ಪುಸ್ತಕಗಳಿಗಿಂತ ಬೇರೊಂದಿಲ್ಲ. 

ಪುಸ್ತಕಗಳಿಂದ ನಿಜವಾದ ಶಿಕ್ಷಣ ಸಾಧ್ಯ . ನಿಜವಾಗಿ ಶಿಕ್ಷಿತರಾಗುವುದೆಂದರೆ ನಮ್ಮ ಓದು ಬರವಣಿಗೆಯ ಮೂಲಕ ರಾಜಕೀಯ, ಸಾಮಾಜಿಕ, ನ್ಯಾಯಿಕ, ಸಾಂಸ್ಕೃತಿಕ ಕೌಶಲಗಳನ್ನು ಅರಿಯುವುದು. ವಿಚಾರಗಳನ್ನು ಪರಾಮರ್ಶಿಸುವ, ನಮ್ಮೊಳಗನ್ನೇ ಪರೀಕ್ಷೆಗೆ ಒಡ್ಡಿಕೊಳ್ಳುವ, ಇತರರ ಜೀವನ ರೀತಿಯನ್ನು ಅರಿಯುವುದು ಮತ್ತು  ಒಪ್ಪಿಕೊಳ್ಳುವುದನ್ನು ಕಲಿಯುವುದು. ಚಲನಚಿತ್ರ, ಟೆಲಿವಿಷನ್, ಅಥವಾ ವಾಟ್ಸಾಪ್ ನಿಂದ ಇದು ಸಾಧ್ಯವಾಗದು. ಕನ್ನಡದ ಪ್ರಖ್ಯಾತ ಕಾದಂಬರಿಕಾರ ಮತ್ತು ಕತೆಗಾರರಾಗಿದ್ದ ಯಶವಂತ ಚಿತ್ತಾಲರು ನಾವೇಕೆ ಓದಬೇಕು ಎಂಬ ಬಗ್ಗೆ ಬರೆಯುತ್ತ, ನಮ್ಮ ಜೀವನದ ಮಟ್ಟವನ್ನು ಸುಧಾರಿಸಿಕೊಳ್ಳಲು ನಾವು ಶ್ರಮಿಸುವಂತೆಯೇ ನಮ್ಮ ನೋಡುವ ಭಾವಿಸುವ ಯೋಚಿಸುವ  ಮಟ್ಟವನ್ನೂ ನಾವು  ಸುಧಾರಿಸಿಕೊಳ್ಳಬೇಕು ಮತ್ತು ಇದು ಪುಸ್ತಕಗಳ ಓದಿನಿಂದಲೇ ಸಾಧ್ಯ ಎಂದು ಬರೆದಿದ್ದರು. 

"ಸ್ವರ್ಗ ಎನ್ನುವುದಿದ್ದರೆ ಅದೊಂದು ಗ್ರಂಥಾಲಯದಂತೆ ಇರುತ್ತದೆ ಎಂದೇ ನಾನು ಯಾವಾಗಲೂ ಕಲ್ಪಿಸಿಕೊಂಡಿದ್ದೇನೆ" - ಜೋರ್ಜ್ ಲೂಯಿ ಬೋರ್ಜೆ 

ಈ ಹೇಳಿಕೆ ಗ್ರಂಥಾಲಯಗಳ ಮಹತ್ವವನ್ನು  ತೋರುವಂತಿದೆ. ಇಂಟರ್ನೆಟ್ ಯುಗದಲ್ಲಿ ಪುಸ್ತಕ ಪ್ರೀತಿ ಚಿಕ್ಕವರು ದೊಡ್ಡವರು ಎಲ್ಲರಲ್ಲೂ ಜಾಗೃತವಾಗಬೇಕಿದೆ. 

No comments :