Monday, June 24, 2024

ನಾತಿಚರಾಮಿ



ಚಿತ್ತಾಲರ ಕಾದಂಬರಿಗಳಲ್ಲಿ ಮತ್ತು ಕಾಯ್ಕಿಣಿಯವರ ಕತೆಗಳಲ್ಲಿ ನಿಚ್ಚಳವಾಗಿ ಪ್ರತ್ಯಕ್ಷವಾಗುವ ಮುಂಬಯಿ ಶಹರದಂತೆ ನಮ್ಮ ಬೆಂಗಳೂರು ಶಹರವು ಕಾದಂಬರಿಗಳಲ್ಲಿ ಮೂಡಿರುವುದು ಕಡಿಮೆಯೇ. 'ನಾತಿಚರಾಮಿ'ಯಂತಹ ಕಾದಂಬರಿಗಳು ಆ ಕೊರತೆಯನ್ನು ನೀಗಿಸುವಲ್ಲಿ ಒದಗಿ ಬರುವಂತಹವು. 

ಬೆನ್ನುಡಿಯಲ್ಲಿ ಲೇಖಕಿಯವರೇ ಬರೆದಿರುವಂತೆ, ಇದು ಬಾಲ್ಯದಿಂದಲೂ ಸಮಾಜದಿಂದ ಕಲಿಸಲ್ಪಟ್ಟ ಸೋ ಕಾಲ್ಡ್ ಮೌಲ್ಯಗಳ, ನಂಬಿಕೆಗಳ, ನಿರೀಕ್ಷೆಗಳನ್ನು ನಾಯಕಿ ಗೌರಿ ದಾಟುವ ಕಥೆ. 'ನಾತಿಚರಾಮಿ - ನಿನ್ನ ಹೊರತಾಗಿ ಅಲ್ಲ' ಎನ್ನುವ ಮದುವೆಯ ಪ್ರಮಾಣವನ್ನು ಗಂಡ ಹೋದ ಮೇಲೂ ಕಳಚಿಕೊಳ್ಳುವುದು ಸಲೀಸಾಗದೆ ಹೋಗುವುದನ್ನು ಸಮಾಜದ ನಿರೀಕ್ಷೆಗಳ ಬಂಧನಕ್ಕೊಂದು ರೂಪಕವನ್ನಾಗಿ ನೋಡಬಹುದು. 

 ಐವತ್ತು ವರುಷಗಳ ಹಿಂದೆ ಭೈರಪ್ಪನವರ ಕಾದಂಬರಿಯಲ್ಲಿ ಜಾತಿಯ ಸಂಕೋಲೆಯನ್ನು 'ದಾಟು'ವ ಕಥೆಯಿದ್ದರೆ, ಇಲ್ಲಿ ಪ್ರಬಲವಾಗಿರುವ ಸಾಮಾಜಿಕ ಕ್ರಮದ ದೃಷ್ಟಿಕೋನದಿಂದ "ಸಮಂಜಸ"ವಾದ ಜೀವನವನ್ನು ನಡೆಸಲು ನಮ್ಮ ಮೇಲೆ ಬರುವ ಅಮೂರ್ತ ಆಂತರಿಕ "ನಿರ್ದೇಶನ"ವನ್ನು ದಾಟುವ ಕಥೆಯಿದೆ. 

 ನನ್ನ ಇದುವರೆಗಿನ ಕಾದಂಬರಿಗಳ  ಓದಿನ ಹಾಗೂ ಚಲಚಿತ್ರಗಳ ವೀಕ್ಷಣೆಯ ಅನುಭವದಲ್ಲಿ ಹೇಳುವುದಾದರೆ, ಕಾದಂಬರಿಯಾಧಾರಿತ ಚಿತ್ರಗಳಲ್ಲಿ ಗದ್ಯದ ಆಳ ಮತ್ತು ಅಗಲ ಎರಡನ್ನೂ ದೃಶ್ಯಗಳಲ್ಲಿ ಕಾಣಲು ಸಾಧ್ಯವಾಗುವುದು ವಿರಳವೇ. ಆದರೆ 'ನಾತಿಚರಾಮಿ'ಯಲ್ಲಿ ಚಿತ್ರಕ್ಕೂ ಕಾದಂಬರಿಗೂ ಪರಿಣಾಮದಲ್ಲಿ ಅಂತಹ ಹೆಚ್ಚಿನ ವ್ಯತ್ಯಾಸ ಕಾಣಲಿಲ್ಲ. ಮಂಸೋರೆ ಅವರಂತಹ ಸಮರ್ಥ ನಿರ್ದೇಶಕ ಮತ್ತು ಎಲ್ಲ ಪಾತ್ರಗಳಿಗೂ ಸಮರ್ಥ ಕಲಾವಿದರ ಆಯ್ಕೆ ಅದಕ್ಕೆ ಕಾರಣ ಇರಬಹುದು. ವಿಶೇಷವಾಗಿ ಶ್ರುತಿ ಮತ್ತು ವಿಜಯ್ ಅವರ ಅಭಿನಯ. 

 ಕಾದಂಬರಿಯ ಕುರಿತು ನನಗನಿಸಿದ್ದು- ಸ್ವತಃ ಚಿತ್ರ ವಿಮರ್ಶಕಿಯಾಗಿರುವ ಸಂಧ್ಯಾರಾಣಿಯವರ ಸೂಕ್ಷ್ಮಗ್ರಾಹಿ ಲೇಖನಿಯಲ್ಲಿ ಪಾತ್ರಗಳ ಒಳತೋಟಿ, ಸಂಬಂಧಗಳ ಸಿಕ್ಕುಗಳು ಎಲ್ಲವೂ ಸೂಕ್ತ ಅಭಿವ್ಯಕ್ತಿಯನ್ನು ಪಡೆದಿವೆ. ಭಾವನಾತ್ಮಕವಾಗಿ ಮರಗಟ್ಟದೇ ಉಳಿಯಲು, ಜೀವಂತಿಕೆಯನ್ನು ಕಾಯ್ದಿಟ್ಟುಕೊಳ್ಳಲು, ತಮ್ಮನ್ನು ತಾವು ಪಡೆದುಕೊಳ್ಳಲು ಸಮಾಜದ ನಿರೀಕ್ಷೆಗಳ ಗೋಡೆಗಳನ್ನು ದಾಟುವುದು ಅನಿವಾರ್ಯ. ಗೌರಿ, ಸುಮಾ ಮತ್ತು ಲಕ್ಷ್ಮಮ್ಮನ ಕಥೆಗಳು ಪ್ರತಿನಿಧಿಸುವುದು ಇದನ್ನೇ. 

ಈ ದಾಟುವಿಕೆಯು ಕಾಲಕಾಲಕ್ಕೆ ಎಲ್ಲೆಡೆಯೂ ನಡೆಯುವ ವಿದ್ಯಮಾನ. ವೈಯಕ್ತಿಕತೆ, ಸ್ವಾಯತ್ತತೆ, ಸ್ವಾತಂತ್ರ್ಯ ಇವೆಲ್ಲ ನಿಬಂಧನೆಗೊಳಪಟ್ಟೇ ಬರುವಂತಹವು. ಒಂದು ಪೂರ್ವ ನಿರ್ಧಾರಿತ "ಸಂತೋಷದ, ಸಮತೋಲಿತ, ಸಮಂಜಸವಾದ ಜೀವನ"ದ ವ್ಯಾಖ್ಯೆಯ ಚೌಕಟ್ಟನ್ನು ಮೀರುವುದು ಅಥವಾ ಬದಲಿಸುವುದು ಸುಲಭದ ಮಾತಲ್ಲ. 

ಕಾದಂಬರಿಗಳು ಸಾಮಾನ್ಯವಾಗಿ ವ್ಯಕ್ತಿ ಮತ್ತು ಸಮಾಜದ ಅನುಸಂಧಾನವನ್ನು ಬಿಂಬಿಸುತ್ತವೆ. ಪಾತ್ರಗಳ ಒಳಗಿನ ಅಭೀಪ್ಸೆಗಳು ಮತ್ತು ಅವುಗಳಿಗೆ ಇದಿರಾಗುವ ಸೋ ಕಾಲ್ಡ್ ನಿರೀಕ್ಷೆಗಳು, ಅದರಿಂದಾಗುವ ಸಂಘರ್ಷ ಇವೇ ಕೇಂದ್ರದಲ್ಲಿರುತ್ತವೆ. ಪಾತ್ರಗಳ ಮೂಲಕ ರೂಢಿಗತ ಧೋರಣೆಗಳನ್ನು, ನಂಬಿಕೆಗಳನ್ನು ಅರಿಯಲು ಕಾದಂಬರಿಗಳು ನಿಜಕ್ಕೂ ಸಹಕಾರಿ. 

ಸರಳವಾದ, ನಿತ್ಯಬಳಕೆಯ ಭಾಷೆ ಹಾಗೂ ನುಡಿಗಟ್ಟುಗಳನ್ನು ನಾತಿಚರಾಮಿ ಯಲ್ಲಿ ನಾವು ಕಾಣಬಹುದು. 'ಅನ್ನೊಂದ್ ದಿನಕ್ಕೆ ಆಲು ತುಪ್ಪ' ಎಂಬ ಗಾದೆ ಓದುವಾಗ ನಗೆಯ ಜೊತೆ ನಮ್ಮ ಜನಪದರ ಜಾಣ್ಮೆಯೂ ಅರಿವಿಗೆ ಬಂತು.

No comments :