Monday, September 29, 2025

ಸೆಪ್ಟೆಂಬರ್ ೨೮ - ವಿಶ್ವ ಸುದ್ದಿ ದಿನ

ಸೆಪ್ಟೆಂಬರ್ ೨೮ರ  ವಿಶ್ವ ಸುದ್ದಿ ದಿನದ ಅಂಗವಾಗಿ ನಡೆದ ಜಾಗತಿಕ ಅಭಿಯಾನದ ಭಾಗವಾಗಿ ಪ್ರಜಾವಾಣಿ ಯು ಈ ವಾರ ಪ್ರಕಟಿಸಿದ ಮೂರು ಲೇಖನಗಳು ಪತ್ರಿಕೋದ್ಯಮ ಮತ್ತು ಮಾಧ್ಯಮಗಳ ಇಂದಿನ ಸ್ಥಿತಿಯ ಬಗ್ಗೆ ಬೆಳಕು ಚೆಲ್ಲುತ್ತವೆ. 

"ಕಳವಳ ಹುಟ್ಟಿಸುವ ವಿಚಾರವೆಂದರೆ, ಜನರಿಗೆ ಸತ್ಯ ಮತ್ತು ಮಿಥೈಗಳ ನಡುವಿನ ವ್ಯತ್ಯಾಸ ಗುರ್ತಿಸುವ ಆಸಕ್ತಿಯಾಗಲಿ, ಸಾಮರ್ಥ್ಯವಾಗಲಿ ಇಲ್ಲದ ಕಾಲಮಾನದಲ್ಲಿ ನಾವು ಬದುಕುತ್ತಿದ್ದೇವೆ.  ಸತ್ಯವನ್ನು ಹೇಗೆ ಕಂಡುಕೊಳ್ಳಬೇಕು ಎನ್ನುವುದರ ಬಗ್ಗೆಯೇ ಇಂದು ನಮ್ಮಲ್ಲಿ ಸಹಮತ ಇಲ್ಲ. ಚಾರಿತ್ರಿಕವಾಗಿ ಯಾವ ಅಂಶಗಳ ಆಧಾರದಲ್ಲಿ ವಾಸ್ತವಾಂಶಗಳನ್ನು ನಿರ್ಧರಿಸಲಾಗುತ್ತಿತ್ತೋ- ಶಿಕ್ಷಣ, ಪರಿಣತಿ, ಅನುಭವ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪುರಾವೆ- ಅವುಗಳನ್ನು ಅಪ್ರಸ್ತುತಗೊಳಿಸಲಾಗಿದೆ, ಕೈಬಿಡಲಾಗಿದೆ ಮತ್ತು ನಿರಾಕರಿಸಲಾಗಿದೆ." ಇದು "ಪತ್ರಿಕೋದ್ಯಮ - ಜಾಗತಿಕ ಪಾಠಗಳು" (ಮಾರ್ಟಿನ್ ಬೇರನ್) ಎಂಬ ಲೇಖನದಲ್ಲಿದೆ.  

+ "ಆಧುನಿಕ ತಂತ್ರಜ್ಞಾನಗಳು ಪತ್ರಿಕೋದ್ಯಮ ಮತ್ತು ಪ್ರಜಾಪ್ರಭುತ್ವಗಳ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರುತ್ತಿವೆ. ಸಾಮಾಜಿಕ ಮಾಧ್ಯಮಗಳು ಸುಳ್ಳು ಮಾಹಿತಿಗಳು, ಅವುಗಳ ಪ್ರಸರಣಕ್ಕೆ ಉತ್ತೇಜನ ನೀಡುವುದರ ಜೊತೆಗೆ ಮಾಧ್ಯಮ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿವೆ. ಈ ಮಾಧ್ಯಮಗಳು ನಕಲಿ ಸುದ್ದಿಗಳನ್ನು ಹರಡುವ, ಸಮಾಜದ ಧ್ರುವೀಕರಣ ಮತ್ತು ದ್ವೇಷ ಹರಡುವ ಮೈದಾನಗಳಾಗಿವೆ. ಜಗತ್ತಿನಾದ್ಯಂತ ಕಂಡುಬರುತ್ತಿರುವ ಪ್ರಕ್ಷುಬ್ಧ ಸನ್ನಿವೇಶದಿಂದಾಗಿ ಪ್ರಜಾಪ್ರಭುತ್ವ ಮತ್ತು ಪತ್ರಿಕೋದ್ಯಮ ಸಂಕಷ್ಟಕ್ಕೆ ಸಿಲುಕಿವೆ. ಕಣ್ಣ ಮುಂದೆ ತಕ್ಷಣಕ್ಕೆ ಯಾವ ಪರಿಹಾರವೂ ಕಾಣುತ್ತಿಲ್ಲ" ಇದು "ಕಗ್ಗತ್ತಲ ಕಾಲದಲ್ಲಿ ಬೆಳಕಿನ ನಿರೀಕ್ಷೆ" (ಫರ್ನಾಂಡೊ ಬೆಲ್‌ಝನ್ಸ್‌) ಎಂಬ ಲೇಖನದಿಂದ. 

+ "ಸಾಮುದಾಯಿಕ ಬದುಕಿನ ಬುನಾದಿಯಾಗಿರುವ ಸತ್ಯಾಂಶಗಳನ್ನು ತಿರುಚುವ ಸಂಘಟಿತವಾದ ಮತ್ತು ಪ್ರಜ್ಞಾಪೂರ್ವಕವಾದ ಕ್ರಿಯೆಗಳಿಂದ ಸಮಾಜದ ಸಂರಚನೆಯೇ ಛಿದ್ರಗೊಳ್ಳುತ್ತಿದೆ. ಸುದ್ದಿಗಳನ್ನು ಸುಳ್ಳು ಎಂದು ನೀವು ಸಾಬೀತುಪಡಿಸುವ ಅಗತ್ಯವೇ ಇಲ್ಲ; ನಿರಂತರವಾಗಿ ಆರೋಪ ಹೊರಿಸುವುದು, ಅನುಮಾನಗಳನ್ನು ಬಿತ್ತುವುದು ಮತ್ತು ಪಿತೂರಿಗಳನ್ನು ಹರಡುವ ಕೆಲಸ ಮಾಡಿದರೆ ಸಾಕು; ಉಳಿದ ಕೆಲಸವನ್ನು ಸಾಮಾಜಿಕ ಜಾಲತಾಣಗಳು ಮಾಡಿ ಮುಗಿಸುತ್ತವೆ." ಇದು "ಸತ್ಯದ ಹಾದಿಯಲ್ಲಿ ಪತ್ರಕರ್ತ ಏಕಾಂಗಿ" (ಫಿಲ್ ಚೆಟ್‌ವಿಂಡ್) ಎಂಬ ಲೇಖನದಿಂದ. ಈ ಲೇಖನದ ಪ್ರಕಾರ, ಹಿಂಸೆ ಮತ್ತು ಬೆದರಿಕೆಗಳ ವ್ಯಾಪ್ತಿಯು ಜಾಗತಿಕವಾಗಿ ನಿರಂತರವಾಗಿ ಹಿಗ್ಗುತ್ತಲೇ ಇದೆ.  ಈ ವಿದ್ಯಮಾನಗಳು ಕೇವಲ ಅಸ್ಥಿರ ರಾಜಕೀಯ ಪರಿಸ್ಥಿತಿ ಇರುವ ದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ. ಪತ್ರಿಕಾ ಸ್ವಾತಂತ್ರ್ಯದ ಸುದೀರ್ಘ ಇತಿಹಾಸವಿರುವ ದೇಶಗಳಲ್ಲಿ ಹಾಗೂ ಅತ್ಯುನ್ನತ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳಲ್ಲಿಯೂ ಈ ಬೆಳವಣಿಗೆಗಳು ಸಾಮಾನ್ಯ ಎನ್ನುವಂತಾಗಿವೆ. ಇದು ಜಾಗತಿಕ ಮೌಲ್ಯ ವ್ಯವಸ್ಥೆಯಲ್ಲಿ ಅಪಾಯಕಾರಿ ಬದಲಾವಣೆಗಳು ಆಗಿರುವುದನ್ನು ಸೂಚಿಸುತ್ತದೆ.

No comments :