ಸೋಮವಾರ, ಅಕ್ಟೋಬರ್ 19, 2026

ಕಾದಂಬರಿ ಆಧಾರಿತ ನೆಟ್ ಫ್ಲಿಕ್ಸ್ ಶೋ - East of Eden

ಈಚೆಗಿನ ಒಂದು ಅಂದಾಜಿನ ಪ್ರಕಾರ ಅಮೆರಿಕ ಮತ್ತು ಯುಕೆಗಳಲ್ಲಿ ಪ್ರಸಾರವಾಗುವ ಮೂರು ಟೆಲಿವಿಶನ್ ಶೋಗಳಲ್ಲಿ ಒಂದು ಶೋ  ಪ್ರಕಟವಾದ ಪುಸ್ತಕವೊಂದನ್ನು ಆಧರಿಸಿದ್ದಾಗಿರುತ್ತದೆ ಎಂದು ಇಂಟರ್ನೆಟ್ ಹೇಳುತ್ತದೆ. ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್ ನಂತಹ ಸ್ಟ್ರೀಮಿಂಗ್ ವೇದಿಕೆಗಳು ನಿರ್ಮಿಸುವ ಡ್ರಾಮಗಳಲ್ಲಿ ಪ್ರತಿ ಎರಡರಲ್ಲಿ ಒಂದು ಶೋ ಪುಸ್ತಕವನ್ನು ಆಧರಿಸಿದ್ದಾಗಿರುತ್ತದಂತೆ.  

ನಾವು ಓದಿ ಇಷ್ಟಪಟ್ಟಿರುವ ಕೃತಿಯೊಂದು ಸಿನಿಮಾ ಅಥವಾ ಟೆಲಿವಿಶನ್ ಶೋ ನ ರೂಪದಲ್ಲಿ ಬಂದಾಗ ಸಹಜವಾಗೇ ಕುತೂಹಲ ಇರುತ್ತದೆ.  ಕಳೆದ ವಾರ ಅಮೆರಿಕದ ಮುಖ್ಯ ಕಾದಂಬರಿಕಾರರಲ್ಲಿ ಒಬ್ಬರಾದ  ಜಾನ್ ಸ್ಟೇನ್ಬೆಕ್ ರ East of  Eden ಕೃತಿಯನ್ನು ಆಧರಿಸಿದ TV ಸೀರೀಸ್ ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಆಗುತ್ತಿರುವುದನ್ನು ಗಮನಿಸಿದಾಗ,  ಸ್ವಲ್ಪ ಕುತೂಹಲದಿಂದ  ಆದರೆ ಹೆಚ್ಚಿನ ನಿರೀಕ್ಷೆಯೇನೂ ಇಲ್ಲದೆ ನೋಡಲು ಆರಂಭಿಸಿದೆ. ನೋಡಿ ಮುಗಿಸುವಾಗ  ಏಳು ಕಂತುಗಳ ಈ ಸೀರೀಸ್ ತುಂಬ ಚೆನ್ನಾಗಿಯೇ ಮೂಡಿಬಂದಿದೆ ಅನಿಸಿತು.   

ಹಲವಾರು ಕಾದಂಬರಿಗಳನ್ನು ರಚಿಸಿದ ಸ್ಟೇನ್ಬೆಕ್ ಕಡೆಯಲ್ಲಿ ರಚಿಸಿದ ಕಾದಂಬರಿ East of  Eden . ಬೈಬಲ್ ನಲ್ಲಿ ಬರುವ ಕೇನ್ ಮತ್ತು ಏಬಲ್ ಸೋದರರ ಕತೆಯಂತೇ ಇಬ್ಬರು ಸೋದರರ ವ್ಯತಿರಿಕ್ತ ಮನೋಗುಣ ಒಂದು ಮುಖ್ಯ ಸೆಲೆಯಾಗಿರುವಂತೆಯೇ ಇವರ ಜೀವನದಲ್ಲಿ ಅನಿರೀಕ್ಷಿತವಾಗಿ ಪ್ರವೇಶಿಸಿ ಸೋದರರಿಬ್ಬರ ಮುಂದಿನ ಜೀವನವನ್ನು  ಇನ್ನಿಲ್ಲದಂತೆ ಬದಲಾಯಿಸುವ ಕ್ಯಾಥಿ ಸಹ ಈ ಕಾದಂಬರಿಯ ಮುಖ್ಯ ಸೆಲೆ. ಹತ್ತೊಂಬತ್ತನೆ ಶತಮಾನದ ಕಡೆಯ ದಶಕಗಳಿಂದ ಇಪ್ಪತ್ತನೆ ಶತಮಾನದ  ಮೊದಲನೆ ಮಹಾಯುದ್ಧ ದ ಕಾಲಘಟ್ಟದ  ಅಮೆರಿಕ, ಅದರಲ್ಲೂ  ಸ್ಟೇನ್ ಬೆಕ್ ನ ಪೂರ್ವಜರು ನೆಲೆಸಿದ್ದ ಕ್ಯಾಲಿಫೋರ್ನಿಯದ ಸಲಿನಾಸ್ ಕಣಿವೆ ಪ್ರದೇಶದ ವರ್ಣನೆ ಕೃತಿಯಲ್ಲಿದೆ. 

ನೆಟ್‌ಫ್ಲಿಕ್ಸ್ ಸೀರೀಸ್ ನಲ್ಲಿ ಕ್ಯಾಥಿ ಪಾತ್ರದಲ್ಲಿ ಫ್ಲಾರೆನ್ಸ್ ಪ್ಯೂ ಅವರ ಅಭಿನಯ ಅತ್ಯುತ್ತಮವಾಗಿದೆ. ಬಹುಮಟ್ಟಿಗೆ ಮೂಲ ಕಾದಂಬರಿಯ ಕಥಾ ಹಂದರವನ್ನೇ ಹೊಂದಿರುವ ಸೀರೀಸ್ ನಲ್ಲಿ ಕೆಲವು ಚಿಕ್ಕ ಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಮಹಿಳೆಯೊಬ್ಬಳ ಬುದ್ಧಿಶಕ್ತಿ, ಸ್ವಾತಂತ್ರ್ಯ, ಸ್ವಾವಲಂಬಿಯಾಗಿ ಉಳಿಯುತ್ತೇನೆಂಬ ಅವಳ ನಿರ್ಧಾರ ಸಹ ನಿಯಂತ್ರಣ ಬಯಸುವ ಸಮಾಜದಲ್ಲಿ ಅಧೀರತೆಯನ್ನು ಉಂಟು ಮಾಡುವುದನ್ನು  ಕ್ಯಾಥಿಯ ಪಾತ್ರದ ಮೂಲಕ ತೋರಿಸಲಾಗಿದೆ. ತನ್ನ ಗಂಡ ಆಡಮ್ ಮತ್ತು ಮಕ್ಕಳಾದ ಆ್ಯರನ್ ಮತ್ತು ಕೇಲಿಬ್ ಇವರ ಬದುಕಿನಲ್ಲಿ ಬಿರುಗಾಳಿ ಎಬ್ಬಿಸುವ ಅವಳ ವರ್ತನೆಗೆ ಹಿನ್ನೆಲೆಯಾಗಿ  ಕಾರಣವೇನು ಎಂಬ ಪ್ರಶ್ನೆಯನ್ನು ಚಿತ್ರವು ಹುಟ್ಟು ಹಾಕುತ್ತದೆ. 

ಒಂದು ಕುಟುಂಬದ ದುರಂತ ಕತೆಯಾಗಿರುವಂತೆಯೇ ಅಂದಿನ ಅಮೆರಿಕನ್ ಸಮಾಜದ ನೈತಿಕ ಭ್ರಷ್ಟತೆಗೆ ಒಂದು ರೂಪಕವಾಗಿಯೂ East of Eden ಕೃತಿಯನ್ನು ಕಾಣಬಹುದು. ಜನರು ತಮ್ಮ ಜೀವನದಲ್ಲಿ ಆರಿಸಿಕೊಳ್ಳುವ ಆಯ್ಕೆಗಳು ಏನೇ ಇರಲಿ, ತಮ್ಮಿಂದ ಆದದ್ದಕ್ಕೆ ಜವಾಬ್ದಾರಿ ತೆಗೆದುಕೊಳ್ಳುವ, ಮುಂದಿನದಕ್ಕೆ ಸೂಕ್ತ ತೀರ್ಮಾನ ತೆಗೆದುಕೊಳ್ಳುವ ಆಯ್ಕೆ ಅವರಿಗಿರುತ್ತದೆ ಎಂದು ಸೂಚಿಸುವುದೂ ಕೃತಿಯ ಉದ್ದೇಶ ಇರಬಹುದು. 

ಜಾನ್ ಸ್ಟೇನ್ಬೆಕ್ ರಚಿಸಿರುವ Grapes of Wrath, Cannery Row  ಕಾದಂಬರಿಗಳಲ್ಲಿ ಸಹ ಕ್ಯಾಲಿಫೋರ್ನಿಯದ ಸಲಿನಾಸ್ ಕಣಿವೆ ಪ್ರದೇಶದ ಜೀವನದ ಚಿತ್ರ ಮತ್ತು ನಗರೀಕರಣವು ಒಂದು ಸಮೂಹದ ಜೀವನಕ್ರಮದಲ್ಲಿ ತರುವ ಬದಲಾವಣೆಗಳ ಚಿತ್ರ ಕಾಣಬರುತ್ತದೆ. 

ಕಾಮೆಂಟ್‌ಗಳಿಲ್ಲ :