ಕಳೆದ ವಾರ ವರದಿಯಾದ ಕೆಲವು ಹಿಂಸಾಚಾರದ ಘಟನೆಗಳು ಜಿ ಎಸ್ ಶಿವರುದ್ರಪ್ಪನವರ 'ಎಲ್ಲೋ ಹುಡುಕಿದೆ..' ಕವಿತೆಯನ್ನು ನೆನಪಿಸಿದವು. ದೂರದ ಅಮೆರಿಕೆಯಲ್ಲಿ ವಿಶ್ವ ವಿದ್ಯಾನಿಲಯದಲ್ಲಿ ಭಾಷಣ ಮಾಡುತ್ತಿದ್ದಾಗ ಹಂತಕನ ಗುಂಡಿಗೆ ಬಲಿಯಾದ ಬಲ-ಪಂಥೀಯ ಇನ್ಫ್ಲ್ಯೂಯೇನ್ಸರ್ ಚಾರ್ಲಿ ಕರ್ಕ್ ಸುದ್ದಿಯಾಗಲಿ, ಇಲ್ಲೇ ನಮ್ಮ ಹಳೇ ಮೈಸೂರು ಪ್ರಾಂತ್ಯದಲ್ಲಿ ಗಣೇಶ ವಿಸರ್ಜನೆಯ ಸಮಯದಲ್ಲಿ ನಡೆದ ಕೋಮು ಗಲಭೆಯ ಸುದ್ದಿಯಾಗಲಿ ಇವೆಲ್ಲ ಸೂಚಿಸುವುದು ಜನರಲ್ಲಿ ಹೆಚ್ಚಾಗುತ್ತಿರುವ ಅಸಾಮರಸ್ಯ, ದ್ವೇಷ, ಇವನ್ನೇ. ಕರ್ಕ್ ಗೆ ಗುಂಡಿಕ್ಕಿದ ರಾಬಿನ್ಸನ್ ಎಂಬಾತ ಈಗ ಸೆರೆಸಿಕ್ಕಿದ್ದು ಆತನ ವಿಪರೀತದ ಅಂತರ್ಜಾಲದ ಬಳಕೆ ಮತ್ತು ಅದರಿಂದಾಗಿರಬಹುದಾದ ವೈಚಾರಿಕ ಗೊಂದಲಗಳ ಬಗ್ಗೆ ಅಭಿಪ್ರಾಯಗಳು ಕೇಳಿಬರುತ್ತಿವೆ.
ಹಾಗೆಯೇ ಮದ್ದೂರಿನಲ್ಲಿ ನಡೆದ ಕಲ್ಲು ತೂರಾಟದ ಘಟನೆ ಕೋಮು ಸಾಮರಸ್ಯವನ್ನು ಕದಡುವ ದೊಡ್ಡ ವಿಚಾರವಾಗಿ ಬದಲಾಗುತ್ತಿರುವುದು ವಿಷಾದಕರ. ರಾಜಕೀಯಕ್ಕಾಗಿ ಘಟನೆಯನ್ನು ಬಳಸಿಕೊಳ್ಳಲು ಯತ್ನಿಸುತ್ತಿರುವುದು ಒಪ್ಪುವಂಥದ್ದಲ್ಲ.
ಇವತ್ತಿನ ಪ್ರಜಾವಾಣಿ ದಿನಪತ್ರಿಕೆಯಲ್ಲಿ 'ಪ್ರಜಾಪ್ರಭುತ್ವ ದಿನ' ದ ಹಿನ್ನೆಲೆಯಲ್ಲಿ ಚಿಂತನೆಗೆ ಒಡ್ಡುವ ಕೆಲ ಲೇಖನಗಳಿವೆ. ಚಂದ್ರಕಾಂತ ವಡ್ಡು ಅವರ 'ಧರ್ಮಕಾರಣ: ಅರಾಜಕತೆಗೆ ಆಹ್ವಾನ' ಎಂಬ ಲೇಖನದಲ್ಲಿ ವ್ಯವಸ್ಥೆಯ ಅವಿಭಾಜ್ಯ ಅಂಗಗಳಾದ ರಾಜಕೀಯ ಪಕ್ಷಗಳು, ಧರ್ಮಕೇಂದ್ರಿತ ಸಂಘಟನೆಗಳು, ಹಾಗೂ ಮಾಧ್ಯಮಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಹಿಸಬೇಕಾದ ಪಾತ್ರದ ಬಗ್ಗೆ ಪ್ರಸ್ತಾಪವಿದೆ.
ಇದೇ ಪತ್ರಿಕೆಯಲ್ಲಿ ಸಚಿವ ಮಹದೇವಪ್ಪ ಅವರು 'ಪ್ರಜಾಪ್ರಭುತ್ವ ಉಳಿಸಿಕೊಳ್ಳದೆ ಹೋದರೆ..' ಎಂಬ ಲೇಖನದಲ್ಲಿ ಭಾರತೀಯ ಜನತಂತ್ರ ವ್ಯವಸ್ಥೆಯ ವೈಶಿಷ್ಟ್ಯಗಳು, ಈ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಜಾಗೃತರಾಗಿರಬೇಕಾದ ಅಗತ್ಯ, ಮತದಾನದ ಹಕ್ಕು,ಇತ್ಯಾದಿಗಳ ಬಗ್ಗೆ ಬರೆದಿದ್ದಾರೆ.
'ಪ್ರಜಾಪ್ರಭುತ್ವ ದಿನ' ವಾದ ಇಂದು ನಾವು ಕೆಲವು ಮೂಲಭೂತ ಪ್ರಶ್ನೆಗಳನ್ನು ನಮ್ಮನ್ನೇ ಕೇಳಿಕೊಳ್ಳಬೇಕು. ಪ್ರಜಾಪ್ರಭುತ್ವ ಎಂದೊಡನೆ ಲಿಬರಲ್ ಡೆಮಾಕ್ರಸಿ (ಉದಾರವಾದಿ ಪ್ರಜಾಪ್ರಭುತ್ವ) ಎಂದೇನೂ ಅರ್ಥವಲ್ಲ. ಈ ಕುರಿತು ಕೆಲವರ್ಷಗಳ ಹಿಂದೆ ಓದಿದ ಲೇಖನವೊಂದು ನೆನಪಾಗುತ್ತದೆ. ಆಧುನಿಕ ಸಮಾಜಕ್ಕೆ ಪ್ರಜಾಪ್ರಭುತ್ವ ಮತ್ತು ಉದಾರವಾದ ಎರಡರಿಂದಲೂ ಉಪಯೋಗ ಇದೆ. ಆದರೆ 'ಎಲ್ಲರನ್ನೂ ಒಳಗೊಳ್ಳುವ' ಜನತಂತ್ರವನ್ನು ಉಳಿಸಿಕೊಂಡೂ ಉದಾರ ನೀತಿ, ಮತ್ತು ಹಕ್ಕುಗಳನ್ನು ಉಳಿಸಿಕೊಳ್ಳುವುದು ಸವಾಲಾಗಿದೆ.
'ಉದಾರವಾದ'ವು ವಿಭಿನ್ನ ಕಲ್ಪನೆಗಳ ತಾಕಲಾಟವನ್ನು ಆಹ್ವಾನಿಸಿದರೆ, ನಿರಂಕುಶವಾದವು ವಿರೋಧ ಪಕ್ಷಗಳನ್ನು ಜನರ ಶತ್ರುಗಳನ್ನಾಗಿ ಬಿಂಬಿಸಿ ಏಕವ್ಯಕ್ತಿ ಕೇಂದ್ರಿತ ಅಧಿಕಾರವನ್ನು ಸ್ಥಾಪಿಸುವುದಾಗಿರುತ್ತದೆ. ಟಿ ಎಸ್ ಎಲಿಯಟ್ ಹೇಳಿದಂತೆ 'ಸಾಂವಿಧಾನಿಕ ವ್ಯವಸ್ಥೆಯ ಉಳಿವು ನಿಷ್ಟ ವಿರೋಧ ಪಕ್ಷದೊಡನೆ ನಿರಂತರ ಒಡನಾಟವನ್ನು ಅವಲಂಬಿಸಿರುತ್ತದೆ'.
ನ್ಯೂ ಸ್ಟೇಟ್ಸ್ಮನ್ ಮ್ಯಾಗಝಿನ್ ನಲ್ಲಿ ಪ್ರಕಟವಾಗಿದ್ದ ' ಪ್ರಜಾಪ್ರಭುತ್ವಗಳಿಗೆ ನಿಷ್ಟ ವಿರೋಧ ಪಕ್ಷದ ಅಗತ್ಯ ಏಕಿದೆ?' ಎಂಬ ಲೇಖನದಲ್ಲಿ ಹಲವು ದೇಶಗಳಲ್ಲಿನ ವರ್ತಮಾನದ ರಾಜಕೀಯ ಬೆಳವಣಿಗೆಗಳನ್ನು ಪರಿಣಾಮಕಾರಿಯಾಗಿ ವಿಶ್ಲೇಷಿಸಲಾಗಿದೆ. 'ಸ್ಟ್ರಾಂಗ್ ಮ್ಯಾನ್' ಪ್ರಜಾಪ್ರಭುತ್ವದ ಮಾದರಿ, ವಿರೋಧ ಪಕ್ಷಗಳನ್ನು ಜನರ ಶತ್ರುಗಳಾಗಿ ಬಿಂಬಿಸುವುದು, ಕ್ರಮಬದ್ಧವಲ್ಲದ ಸಾಂವಿಧಾನಿಕ ಪ್ರಕ್ರಿಯೆಗಳನ್ನು ಪ್ರಶ್ನಿಸುವವರನ್ನು 'ಜನರ ಸಂಪರ್ಕವಿಲ್ಲದ ಎಲೈಟ್'ಗಳೆಂದು ಕರೆಯುವುದು ಇತ್ಯಾದಿಯನ್ನು ಚರ್ಚಿಸಲಾಗಿದೆ. ಇದೇ ಲೇಖನದಲ್ಲಿ ಅಂತಹ ತಂತ್ರಗಳ ವಿರುದ್ಧ ಇರುವ institutional checks and balance (ಸಾಂಸ್ಥಿಕ ಪರಿಶೀಲನೆಗಳು) ಬಗ್ಗೆ ಹೀಗೆ ಬರೆಯಲಾಗಿದೆ - "ಸಂವಿಧಾನ ವಿಧಿಸುವ ನಿರ್ಬಂಧಗಳು ಮತ್ತು ಅಧಿಕಾರಗಳ ಪ್ರತ್ಯೇಕತೆ - ಇವುಗಳೆಲ್ಲಾ ಸಾಕಷ್ಟು ಜನರು ಅವುಗಳನ್ನು ನಂಬುವವರೆಗೆ ಮಾತ್ರ ಅಸ್ತಿತ್ವದಲ್ಲಿರುತ್ತವೆ. ಐತಿಹಾಸಿಕವಾಗಿ ನೋಡುವುದಾದರೆ, ತಮ್ಮ ಅಧಿಕಾರವನ್ನು ನಿರ್ಬಂಧಿಸಲು ವಿನ್ಯಾಸಗೊಳಿಸಲಾದ ಸರಪಳಿಗಳನ್ನು ತೆಗೆದುಹಾಕಲು ಸರಿಯಾದ ನಿರಂಕುಶಾಧಿಕಾರಿಗೆ ಯಾವುದೇ ಸಮಯ ತೆಗೆದುಕೊಳ್ಳುವುದಿಲ್ಲ."
ಕಣ್ಣು ಬಿಟ್ಟು ನೋಡಿದರೆ ಜನತಂತ್ರ ವ್ಯವಸ್ಥೆಯ ಡೋಲಾಯಮಾನ ಸ್ಥಿತಿ, ಇದನ್ನು ಉಳಿಸಿಕೊಳ್ಳಲು ಇರುವ ಸವಾಲುಗಳು ಇವೆಲ್ಲಾ ನಮಗೆ ಅರಿವಾಗುವ ಸಂಗತಿಗಳೇ. ಇದನ್ನು ನೆನಪು ಮಾಡಿಕೊಳ್ಳಲು ಇಂದಿನ 'ಪ್ರಜಾ ಪ್ರಭುತ್ವ ದಿನ' ಸೂಕ್ತ ದಿನ.
ಪ್ರಜಾ ಪ್ರಭುತ್ವ ದಿನದ ಶುಭಾಶಯಗಳು!
No comments :
Post a Comment