Monday, September 08, 2025

ಶೊಶಾನ - ಕಲಹದ ನೆಲದ ಪ್ರೇಮಕತೆ

ಶೊಶಾನ - ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರವಾಗುತ್ತಿರುವ ಈ ಚಲನಚಿತ್ರ ೧೯೩೦-೪೦ ರ ಇಸ್ರೇಲ್ ನಲ್ಲಿ ನಡೆಯುವ ಕತೆ. ಕಳೆದ ಸುಮಾರು ಎರಡು ವರ್ಷಗಳಿಂದ ಪ್ಯಾಲಸ್ಟೈನ್ ನಲ್ಲಿ ನಡೆಯುತ್ತಿರುವ ಕಲಹ ಆರಂಭವಾಗುವುದಕ್ಕಿಂದ ಮೊದಲೇ ನಿರ್ಮಾಣವಾಗಿದ್ದ ಚಿತ್ರ ಇದು. 

ಐತಿಹಾಸಿಕ ಘಟನೆಗಳನ್ನು ಆಧರಿಸಿದ ಪುಸ್ತಕಗಳು, ಚಲನಚಿತ್ರಗಳು ದೀರ್ಘ ಕಾಲದ ಕೆಲ ಸಮಸ್ಯೆಗಳ ಬಗ್ಗೆ ಮಾನವೀಯ ವಿವರಗಳನ್ನು ಒದಗಿಸುವುದರೊಂದಿಗೆ  ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಹಾಗೆಯೇ ಕೆಲವು ಕೃತಿಗಳು ಪ್ರಾಪಗಾಂಡ ಮಾದರಿಯವೂ ಆಗಿರುತ್ತವೆ. ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಅಂತಹ ಚಿತ್ರಗಳನ್ನು ಗಮನಿಸಿದ್ದೇವೆ. 

ಶೊಶಾನ ಚಿತ್ರದ ಬಗ್ಗೆ ಬಂದಿರುವ ವಿಮರ್ಶೆಗಳನ್ನು ಗಮನಿಸಿದರೆ ಇದರಲ್ಲಿ ಬರುವ ಮುಖ್ಯ  ಪಾತ್ರಗಳು ನಿಜ ಜೀವನದಿಂದಲೇ ಬಂದವಾಗಿದ್ದು ಚಲನಚಿತ್ರದ ಕೆಲವು ಘಟನಾವಳಿಗಳು  ಕಾಲ್ಪನಿಕವಾಗಿದ್ದರೂ ಅಂದಿನ ಇಸ್ರೇಲ್ ನಲ್ಲಿ ಜಿಯಾನಿಸ್ಟ್ (ಸ್ವತಂತ್ರ ಯಹೂದಿ ರಾಷ್ಟ್ರ ಸ್ಥಾಪನೆಯ ಹೋರಾಟ)ಗಳಲ್ಲಿ ಸಹ ಬಣಗಳು ಇದ್ದದ್ದು ಮತ್ತು ಅವು ತಮ್ಮ ಗುರಿ ಸಾಧನೆಗೆ ಆಯ್ದುಕೊಂಡ ಮಾರ್ಗಗಳು ಬೇರೆ ಇದ್ದದ್ದು ಇದೆಲ್ಲ ಚಾರಿತ್ರಿಕ ಸತ್ಯಗಳೇ. 

ಬ್ರಿಟಿಷ್ ಆಡಳಿತದಲ್ಲಿದ್ದ ಅಂದಿನ ಪ್ಯಾಲಸ್ಟೈನ್ನಲ್ಲಿ ಆಗ ಮುಖ್ಯವಾಗಿದ್ದ ಹೋರಾಟ ಬ್ರಿಟಿಷರಿಂದ ಸ್ವತಂತ್ರವಾಗುವುದಾಗಿತ್ತು. ಯಹೂದಿ-ಅರಬ್ ಸಂಘರ್ಷ ಈ ಚಿತ್ರದಲ್ಲಿ ಇಲ್ಲ. ಇರುವ ಅರಬ್ ಪಾತ್ರಗಳು ಸಹ ಬ್ರಿಟಿಷರ ದೃಷ್ಟಿಯಲ್ಲಿ ಪ್ಯಾಲಸ್ಟೈನಿನ ಯಹೂದಿ ಮತ್ತು ಅರಬ್ ಜನರನ್ನು  ಬ್ರಿಟಿಷರು ಸಮಾನವಾಗಿ ಕಾಣುತ್ತಿದ್ದರೆಂದು ತೋರಿಸಲಿಕ್ಕಾಗಿ ಇರುವಂತೆ ಇವೆ.  ಇಬ್ಬರು ಬ್ರಿಟಿಷ್ ಪೊಲೀಸ್ ಅಧಿಕಾರಿಗಳಾಗಿ  ಟಾಮ್ ವಿಲ್ಕಿನ್ ಮತ್ತು ಜೆಫ್ರಿ ಮಾರ್ಟಿನ್ ಎಂಬ ಎರಡು ಪಾತ್ರಗಳಿವೆ. 

ಶೊಶಾನಳು ರಷಿಯನ್ ಯಹೂದಿ ಸೋಶಲಿಸ್ಟ್‌ನ ಮಗಳು. ಅವಳ ತಂದೆ ಅರಬ್ ಮತ್ತು ಯಹೂದಿಗಳು ಪ್ಯಾಲೆಸ್ಟೈನಿನಲ್ಲಿ ಹೊಸ ರಾಷ್ಟ್ರವನ್ನು ನಿರ್ಮಿಸಿ ಒಟ್ಟಾಗಿ ಬದುಕಬಹುದು ಎಂದು ನಂಬಿದ್ದವನು. ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದವರಲ್ಲಿ ಮುಖ್ಯವಾಗಿ ಹಗನಾ (ಬ್ರಿಟಿಷರೊಂದಿಗೆ ರಾಜಕೀಯ ಪರಿಹಾರ ಬಯಸುತ್ತಿದ್ದವರು) ಮತ್ತು ಇರ್ಗುನ್ (ಬ್ರಿಟಿಷರನ್ನು ಹಿಂಸಾತ್ಮಕ ಮಾರ್ಗದಿಂದ ಹೊರದೂಡಲು ಬಯಸುತ್ತಿದ್ದವರು) ಇವು ಎರಡು ಗುಂಪುಗಳು. ಶೊಶಾನಳು ಹಗನಾ ಜೊತೆ ಗುರುತಿಸಿಕೊಂಡವಳು. ಬ್ರಿಟಿಷ್ ಪೊಲೀಸ್ ಅಧಿಕಾರಿಯಾದ ಟಾಮ್ ವಿಲ್ಕಿನ್ (ಡಗ್ಲಸ್ ಬುತ್) ಜೊತೆಗೆ ಶೊಶಾನಗೆ ಪ್ರೀತಿಯ ಸಂಬಂಧವಿದೆ. ಟಾಮ್ ಗೆ ಜಿಯೋನಿಸ್ಟ್ ತತ್ವಗಳ ಕಡೆ ಸಹಾನುಭೂತಿ ಇರುವಂತಿದ್ದರೂ, ತಟಸ್ಥವಾಗಿರುವುದು ಮತ್ತು ಯಹೂದಿ ಹಾಗೂ ಅರಬ್ ಜನರಿಗೆ ಶಸ್ತ್ರಾಸ್ತ್ರಗಳನ್ನು ತಡೆಯುವುದು ಅವನ ಕರ್ತವ್ಯ . ಇಂತಹ ಸನ್ನಿವೇಶದಲ್ಲಿ ಶೊಶಾನ ಮತ್ತು ಟಾಮ್ ರ ವೈಯಕ್ತಿಕ ಬದುಕು ಮತ್ತು ಎದುರಾಗುವ ಸಾಂದರ್ಭಿಕ ಸವಾಲುಗಳು ಚಿತ್ರಕಥೆಯ ಕೇಂದ್ರದಲ್ಲಿವೆ.

ಒಂದು ಚಾರಿತ್ರಿಕ ಘಟ್ಟದಲ್ಲಿ ಇಸ್ರೇಲ್ ನಲ್ಲಿ ನಡೆದ ವಿದ್ಯಮಾನಗಳನ್ನು ಪರಿಚಯಿಸುವುದರಲ್ಲಿ ಚಿತ್ರದ ಮಹತ್ವ ಇದೆ. ಅರಬ್ಬರ ದೃಷ್ಟಿಕೋನ ಇಲ್ಲಿ ಕಾಣಬರುವುದಿಲ್ಲವಾದರೂ ಯಹೂದಿ-ಅರಬ್ಬರ ನಡುವಿನ ಕಲಹ ಪ್ಯಾಲಸ್ಟೈನ್ ಬ್ರಿಟಿಷರಿಂದ  ಸ್ವತಂತ್ರವಾಗಿ, ಇಸ್ರೇಲ್ ಸ್ಥಾಪನೆಯಾದ  ಮೇಲಿನ ವಿದ್ಯಮಾನ. 

ಕಳೆದ ಎರಡು ವರ್ಷಗಳಲ್ಲಿ ಮೊದಲು ಇಸ್ರೇಲ್ ನಲ್ಲಿ ಪ್ಯಾಲಸ್ಟೈನ್ ನ ಹಮಾಸ್ ಗುಂಪಿನ ಹಿಂಸಾತ್ಮಕ ದಾಳಿಯಿಂದ ಆರಂಭವಾಗಿ ನಂತರ ಪ್ರತ್ಯುತ್ತರವಾಗಿ ಇಸ್ರೇಲಿ ಸೇನೆ ಗಾಝಾ ಪ್ರಾಂತ್ಯದಲ್ಲಿ ನಡೆಸುತ್ತಿರುವ ದಾಳಿಗಳಲ್ಲಿ ಪ್ಯಾಲಸ್ಟೈನ್ ನಲ್ಲಿ ಹೆಂಗಸರೂ ಮಕ್ಕಳನ್ನೂ ಬಿಡದಂತೆ ಹತ್ಯೆಗೀಡಾಗುತ್ತಿರುವ ಸಾವಿರಾರು ಜನರು  ಹೊರ ಜಗತ್ತಿಗೆ ಅದರಲ್ಲೂ ಅಮೆರಿಕದಂತಹ ಪ್ರಭಾವಶಾಲಿ ರಾಷ್ಟ್ರಗಳಿಗೆ ಕೇವಲ ಸಂಖ್ಯೆಗಳಾಗಿರುವುದು ಅತ್ಯಂತ ದುಃಖಕರವಾಗಿದೆ. 

ಶೊಶಾನ ಚಿತ್ರದಲ್ಲಿ ನಾವು ಕಾಣುವಂತೆ ನೂರು ವರ್ಷಗಳ ಹಿಂದೆ ಯಹೂದಿ-ಅರಬ್ ಎರಡೂ ಜನಾಂಗದವರೂ ಸ್ವಾತಂತ್ರ್ಯಕ್ಕಾಗಿ ಒಟ್ಟಾಗಿ  ಹೋರಾಡಿದವರು. ಸ್ವಾತಂತ್ರ್ಯದ ಹೋರಾಟದಲ್ಲಿ ಕಾಣುವ ಒಗ್ಗಟ್ಟು ನಂತರದಲ್ಲಿ ಕಾಣದಾಗುವುದು ವಿಷಾದಕರ ವಿದ್ಯಮಾನ. ನೆಲಕ್ಕಾಗಿ ೧೯೪೮ರಲ್ಲಿ ಪ್ರಾರಂಭವಾದ ಕಲಹ ಇಂದಿಗೂ ಮುಂದುವರೆದಿದೆ. ಹೊಂದಾಣಿಕೆಯುಳಿದು ಬೇರೆ ಮಾರ್ಗವಿದೆಯೆಂದು ಅನಿಸುವುದಿಲ್ಲ. ಅಸ್ತ್ರಗಳ ಬಲದಿಂದ ಹಲವು ದಶಲಕ್ಷ ಜನರ ಅಸ್ಮಿತೆಯನ್ನೇ ಇಲ್ಲವಾಗಿಸುತ್ತೇವೆಂದು ಹೊರಡುವುದು ಒಪ್ಪುವ ವಿಚಾರವಲ್ಲ. ಎರಡು-ರಾಜ್ಯ ನಿರ್ಮಾಣವೊಂದೇ ಉಳಿದಿರುವ ಪರಿಹಾರ ಎಂದು ಹೆಚ್ಚು ಹೆಚ್ಚಾಗಿ ತೋರುತ್ತಿದೆ. 



No comments :