ಈ ಬಾರಿಯ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ಟಾಕ್ ಅವರನ್ನು ಆಯ್ಕೆ ಮಾಡಿದ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕಟಿಸಿದ ನಂತರ ಕಳೆದ ಹತ್ತು ದಿನಗಳಲ್ಲಿ ಈ ವಿಚಾರದ ಕುರಿತು ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿದೆ.
ಸಾಹಿತ್ಯಕ್ಕಾಗಿ ನೀಡುವ ಬೂಕರ್ ನಂತಹ ಪ್ರಖ್ಯಾತ ಪ್ರಶಸ್ತಿಯನ್ನು ತಮ್ಮ ಕನ್ನಡದ ಕೃತಿಯ ಅನುವಾದಕ್ಕಾಗಿ ಪಡೆದಿರುವ ಸಾಹಿತಿಗೆ ನಾಡ ಹಬ್ಬ ದಸರಾ ಉದ್ಘಾಟನೆಯ ಗೌರವ ನೀಡುವುದು ಕನ್ನಡಿಗರಿಗೆ ಸಂತಸದ ವಿಷಯ ಆಗಬೇಕು. ಎಲ್ಲ ಜನಾಂಗದವರನ್ನೂ ಗೌರವದಿಂದ ಕಾಣುವುದು ಕನ್ನಡ ನಾಡಿನ ಸಂಸ್ಕೃತಿಯೂ ಆಗಿದೆ. ಆದರೆ ಈಚಿನ ದಿನಗಳಲ್ಲಿ ಎಲ್ಲ ವಿಚಾರಗಳಲ್ಲೂ ಧರ್ಮವನ್ನು ಎಳೆದುತರುವ ಪ್ರವೃತ್ತಿ ಕಂಡುಬರುತ್ತಿದೆ.
ಮೊನ್ನೆ ಪ್ರಜಾವಾಣಿಯಲ್ಲಿ ಪ್ರಕಟವಾದ ರವೀಂದ್ರ ಭಟ್ಟ ಅವರ "ಎಲ್ಲರ ಎದೆ ಬೆಳಗಲಿ ಹಣತೆ" ಎಂಬ ಲೇಖನದಲ್ಲಿ "ಸೌಹಾರ್ದ ಮನೋಭಾವ ನಮ್ಮ ಮಣ್ಣಿನ ಗುಣ "ಎಂದು ಬರೆಯುತ್ತಾರೆ.
ಹಾಗೆಯೇ ಈದಿನ.ಕಾಮ್ ನಲ್ಲಿ ಕಾಲಮಾನ ಎಂಬ ಅಂಕಣದಲ್ಲಿ "ಮುಷ್ತಾಕ್ ದಸರಾ ಉದ್ಘಾಟನೆ- ವಿವಾದಗಳ ಸುತ್ತಮುತ್ತ" ಕಣ್ಣು ಹಾಯಿಸಲಾಗಿದೆ.
“ಸರ್ವ ಜನಾಂಗದ ಶಾಂತಿಯ ತೋಟ” ಎಂಬ ಮಾತುಗಳನ್ನಾಡಿದ ಕುವೆಂಪು ಅವರ ಸದಾಶಯದ ಮಾರ್ಗದಲ್ಲಿ ನಮ್ಮ ನಾಡಹಬ್ಬ-ದಸರಾ ಜರುಗಲಿ ಎಂಬ ಆಶಯದೊಡನೆ ಆ ಲೇಖನ ಮುಕ್ತಾಯವಾಗುತ್ತದೆ.
ಎಂಭತ್ತರ ದಶಕದಲ್ಲಿ ಲಂಕೇಶ್ ಪತ್ರಿಕೆಯಲ್ಲಿ ಬಾನು ಮುಷ್ಟಾಕ್ ರ ಕತೆಗಳು ಮತ್ತು ಲೇಖನಗಳು ಪ್ರಕಟವಾಗುತ್ತಿದ್ದದ್ದು ನನಗೆ ನೆನಪಿದೆ. ತಮ್ಮ ಮುಸ್ಲಿಂ ಸಮುದಾಯದ ದೈನಂದಿನ ಬದುಕಿನ ಅನುಭವದ ಹಿನ್ನೆಲೆಯಲ್ಲಿ ಕೌಟುಂಬಿಕ ಸಂಬಂಧಗಳು, ಆಧುನಿಕತೆಯ ಸವಾಲುಗಳು, ಸಾಮಾಜಿಕ ವ್ಯವಸ್ಥೆಯಲ್ಲಿ ವಿಶೇಷವಾಗಿ ಮಹಿಳೆಯರು ಪಡುವ ಸಂಕಷ್ಟಗಳು, ಮುಂತಾದ ವಿಚಾರಗಳನ್ನು ಸೂಕ್ಷ್ಮ ದೃಷ್ಟಿಯಿಂದ ಗಮನಿಸುತ್ತಾ ಪರಿಣಾಮಕಾರಿಯಾದ ನುಡಿಕಟ್ಟಿನಲ್ಲಿ ದಾಖಲಿಸುವ ಬರವಣಿಗೆ ಅವರದಾಗಿತ್ತು. ದೀಪಾ ಬಸ್ತಿ ಯವರು ಅತ್ಯಂತ ಸಮರ್ಥವಾಗಿ ಅನುವಾದಿಸಿರುವ ಬಾನು ಅವರ ಕತಾ ಸಂಕಲನ 'Heart Lamp' ಈ ವರ್ಷ ಬೂಕರ್ ಪ್ರಶಸ್ತಿ ಪಡೆದಿದೆ.
ತಮ್ಮ ಬೂಕರ್ ಪ್ರಶಸ್ತಿ ಸ್ವೀಕಾರ ಭಾಷಣದಲ್ಲಿ ಅವರು ಹೇಳಿದ ಮಾತುಗಳನ್ನು ಗಮನಿಸಿ-
"ಪ್ರತಿಯೊಂದು ಧ್ವನಿಯನ್ನು ಕೇಳುವ, ಪ್ರತಿಯೊಂದು ಕಥೆಯೂ ಮುಖ್ಯವಾಗುವ ಮತ್ತು ಪ್ರತಿಯೊಬ್ಬ ವ್ಯಕ್ತಿಯೂ ಸೇರಿರುವ ಜಗತ್ತನ್ನು ಒಟ್ಟಾಗಿ ನಾವು ರಚಿಸುತ್ತೇವೆ... ಯಾವುದೇ ಕಥೆಯು ಎಂದಿಗೂ ಚಿಕ್ಕದಲ್ಲ, ಮಾನವ ಅನುಭವವನ್ನೆಲ್ಲ ಒಂದು ವಸ್ತ್ರದಂತೆ ಭಾವಿಸಿದರೆ ಅದರ ಪ್ರತಿಯೊಂದು ದಾರವು ಇಡೀ ತೂಕವನ್ನು ಹಿಡಿದಿಟ್ಟುಕೊಳ್ಳುತ್ತದೆ. ನಮ್ಮನ್ನು ವಿಭಜಿಸಲು ಆಗಿಂದಾಗ ಪ್ರಯತ್ನಿಸುವ ಜಗತ್ತಿನಲ್ಲಿ ಸಾಹಿತ್ಯವು ನಮಗೆ ಉಳಿದಿರುವ ಕೊನೆಯ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ, ಅಲ್ಲಿ ನಾವು ಪರಸ್ಪರರ ಮನಸ್ಸಿನಲ್ಲಿ ಬದುಕಬಹುದು...ಕೆಲವು ಪುಟಗಳವರೆಗಾದರೂ.. "
ತಮ್ಮದೇ ಕನ್ನಡ ನಾಡಿನಲ್ಲಿ ತಮ್ಮದೇ ಕನ್ನಡ ಭಾಷಿಗರಿಂದ ವಿರೋಧ ಅವರಿಗೆ ಎದುರಾಗುತ್ತಿರುವುದು ದುರದೃಷ್ಟಕರ.
No comments :
Post a Comment