"ಈ ದೇಶದಲ್ಲಿ ಯಾರನ್ನು ಕೇಳಿದರೂ ಕಥೆ ಹೇಳುತ್ತಾರೆ. ಅದೂ ಆ ಕಥೆ ನಡೆಯುವಾಗ ಎದುರಿಗೆ ಇದ್ದೆ ಅನ್ನುವಂತೆ ಹೇಳುತ್ತಾರೆ. ನಮಗೆ ಕಥೆ ಮತ್ತು ವಾಸ್ತವ, ಪುರಾಣ ಮತ್ತು ಚರಿತ್ರೆಯ ನಡುವಿನ ವ್ಯತ್ಯಾಸ ಗೊತ್ತಿಲ್ಲ. ಹಾಗಾಗಿ ಕೆಲವು ಕಥೆಗಳು ಸಂವಿಧಾನದ ಜಾಗ ಆಕ್ರಮಿಸಿಕೊಳ್ಳುತ್ತಿವೆ."
"ಈ ನೆಲದಲ್ಲಿ ಕಥೆಗಳನ್ನು ಹುಟ್ಟಿಸಿ, ಸಾಕಿ, ಅವು ಬಲಿಷ್ಠವಾದ ಮೇಲೆ ಸಾಮಾನ್ಯರ ಮೇಲೆ ಛೂ ಬಿಡುವ ತಂಡಗಳೇ ಇವೆ."
ಸೆ. ೩೦ರಂದು 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ನಟರಾಜ ಬೂದಾಳು ಅವರ "ನಮ್ಮನ್ನು ಆಳುತ್ತಿರುವ ಕಥೆಗಳು " ಎಂಬ ಲೇಖನವು ಕಥಾ ರಾಜಕಾರಣದ (Story Politics) ಕುರಿತು ವಿಶ್ಲೇಷಣೆಯನ್ನು ನೀಡುತ್ತದೆ. ಇದು ಅತ್ಯಂತ ಗಂಭೀರ ವಿಚಾರವಾಗಿದೆ.
ಕಥೆಗಳನ್ನು ಕಥೆಗಳಾಗಿ ಓದುವ, ಅಥವಾ ಕೇಳುವ, ಪರಿಜ್ಞಾನ ಇದ್ದರೆ, ಕಲ್ಪಿತ ಕಥೆಗಳು ಉಪಯುಕ್ತವೇ ಆಗುತ್ತವೆ. ಅದಿಲ್ಲದಿದ್ದಾಗ ಕಥೆಗಳು ದುಷ್ಟರ ರಾಜಕೀಯ ದಾಳಗಳಾಗುತ್ತವೆ. ಇದು ವಿಷಾದದ ಸಂಗತಿ. ಯಾಕೆಂದರೆ ಕಲ್ಪಿತ ಕಥೆಗಳು, ಅವು ಪುರಾಣವೇ ಆಗಲಿ, ಜಾನಪದವೇ ಆಗಲಿ, ಒಳ್ಳೆಯದನ್ನು ಉದ್ದೀಪನಗೊಳಿಸುವ ಉದ್ದೇಶ ಹೊಂದಿರುತ್ತವೆ. ಅಹಂಕಾರವನ್ನು ತೊಡೆಯುವುದು, ಸಹಾನುಭೂತಿಯನ್ನು ಬೆಳೆಸುವುದು, ನಿರಾಶೆಯ ಸ್ಥಿತಿಯಲ್ಲಿರುವಾಗ ಆಶಾಭಾವನೆಯನ್ನು ಮೂಡಿಸುವುದು, ಇತ್ಯಾದಿ. ಆದರೆ ಅವನ್ನು ವಾಸ್ತವವೆಂದು ನಂಬುವುದು ಅಪಾಯಕ್ಕೆ ದಾರಿ.
ಒಂದೆಡೆ ಪುಸ್ತಕ ಓದುವವರು ಕಡಿಮೆಯಾಗುತ್ತಿದ್ದರೆ, ಇನ್ನೊಂದೆಡೆ "ಕಥೆ"ಗಳನ್ನು ನಂಬುವವರು ಹೆಚ್ಚುತ್ತಿದ್ದಾರೆ. ಇದು ಅಮೆರಿಕದಂತಹ ದೇಶಗಳನ್ನೂ ಬಿಟ್ಟಿಲ್ಲ. ಜಾರ್ಜ್ ಆರ್ ಆರ್ ಮಾರ್ಟಿನ್ ಬರೆದ "ಗೇಮ್ ಆಫ್ ಥ್ರೋನ್ಸ್ " ನಲ್ಲಿ ಬರುವ ಈ ಸಾಲುಗಳನ್ನು ನೋಡಿ- There is nothing in the world more powerful than a good story. Nothing can stop it. No enemy can defeat it. (ಕಥೆಗಿಂತ ಶಕ್ತಿಶಾಲಿಯಾಗಿರುವುದು ಈ ಜಗತ್ತಿನಲ್ಲಿ ಬೇರೆ ಏನೂ ಇಲ್ಲ. ಯಾವುದೂ ಇದನ್ನು ತಡೆಯಲಾಗದು. ಯಾವ ಶತ್ರುವೂ ಇದನ್ನು ಸೋಲಿಸಲಾಗದು. ) ಟ್ರಂಪ್ ತರಹದ ಅವಿವೇಕಿಗಳು ರಾಷ್ಟ್ರದ ಗದ್ದುಗೆಗೆ ಬರುವುದು ಸುಳ್ಳು"ಕಥೆ"ಗಳ ಶಕ್ತಿಗೆ ಸಾಕ್ಷಿ.
No comments :
Post a Comment