Monday, October 13, 2025

ಧಡಕ್ 2 - ಬಾಲಿವುಡ್ ನಲ್ಲೊಂದು ಡಿಫರೆಂಟ್ ಸಿನಿಮಾ

ಭಾರತೀಯ ಸಿನಿಮಾಗಳಲ್ಲಿ, ವಿಶೇಷವಾಗಿ ಹಿಂದಿ ಚಲನಚಿತ್ರಗಳಲ್ಲಿ, ಜಾತಿ (caste) ಯಂತಹ ಗಂಭೀರ ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸುವುದು ಬಹಳ ಕಡಿಮೆ. ಸಮಕಾಲೀನ ಹಿಂದಿ ಸಿನಿಮಾಗಳನ್ನು ಮಾತ್ರ ನೋಡಿದರೆ, ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆ "ಮುಗಿದುಹೋಗಿದೆ" ಎಂದುಕೊಳ್ಳುವಷ್ಟು ಅದರ ಅವಗಣನೆ ಕಾಣುತ್ತದೆ. "ಮಸಾನ್" ನಂತಹ ಚಿತ್ರ ಬಂದು ಹೋಗಿ ಹತ್ತು ವರ್ಷಗಳ ಕಾಲವೇ ಆಗಿದೆ. ಇದೀಗ ಮತ್ತೊಮ್ಮೆ ಅದೇ ನೀರಜ್ ಗೈವಾನ್  ಅವರ ನಿರ್ದೇಶನದ  "ಹೋಂಬೌನ್ಡ್ " ಎಂಬ ಚಿತ್ರ ಸಹ ಜಾತಿ ಸಮಸ್ಯೆಯ ಕುರಿತಾಗಿದ್ದು ಕೆಲವು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನೂ ಗಳಿಸಿ ಇದೀಗ ಚಿತ್ರ ಮಂದಿರಗಳಲ್ಲಿ ಬಂದಿದೆ. ಕೆಲವೇ ದಿನಗಳಲ್ಲಿ ಓಟಿಟಿ ಗೂ ಬರಲಿದೆ. 

ಈಗ ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಆಗುತ್ತಿರುವ "ಧಡಕ್ 2" ಚಿತ್ರವು  ಭಾರತೀಯ ಸಮಾಜದ ಅತಿರೇಕದ ಜಾತಿ ವಿಭಜಿತ ಮನಸ್ಥಿತಿಯ ವಿಕಾರವನ್ನು ತೆರೆಯ ಮೇಲೆ ತೋರಿಸುವ ಪ್ರಯತ್ನ ಮಾಡಿದೆ.  ಬಾಲಿವುಡ್ ನ ಅತಿರಂಜಿತ ಕಥಾವಸ್ತುಗಳ ಚಿತ್ರಗಳ ನಡುವೆ, ಅಂತರ-ಜಾತಿ ಸಂಬಂಧದ  ಈ ಚಿತ್ರವು  ವಾಸ್ತವಿಕ  ಚಿತ್ರವಾಗಿ ಮೂಡಿಬಂದಿದೆ. ಶಜಿಯಾ ಇಕ್ಬಾಲ್ ಅವರ ಚೊಚ್ಚಲ ನಿರ್ದೇಶನದ  ಈ ಚಿತ್ರವು 2018 ರ ತಮಿಳು ಭಾಷೆಯ ಚಲನಚಿತ್ರವಾದ Pariyerum Perumal (ಪರಿಯೇರುಮ್ ಪೆರುಮಾಳ್) ನ ರಿಮೇಕ್ ಆಗಿದೆ, ಇದು ಜಾತಿ ಹಿಂಸಾಚಾರ ಮತ್ತು ಪೂರ್ವಾಗ್ರಹದ ಕಥೆಯನ್ನು ತಮಿಳುನಾಡಿನಿಂದ ಹಿಂದಿಯ  ಹೃದಯಭಾಗಕ್ಕೆ ಕೊಂಡೊಯ್ದಿದೆ.

ಕಾನೂನು ಕಾಲೇಜಿನಲ್ಲಿ ಕಲಿಯುತ್ತಿರುವ ಮೇಲ್ಜಾತಿಯ  ಮಹಿಳೆ ವಿಧಿಶಾ ಭಾರದ್ವಾಜ್ ಮತ್ತು ದಲಿತ ನೀಲೇಶ್ ಅಹಿರ್ವಾರ್ ನಡುವಿನ ಬೆಳೆಯುತ್ತಿರುವ ಸಂಬಂಧವನ್ನು ಚಿತ್ರ ಅನ್ವೇಷಿಸುತ್ತದೆ. ನೀಲೇಶ್ ಮತ್ತು ವಿಧಿ ಒಂದು ಮದುವೆಯಲ್ಲಿ ಭೇಟಿಯಾಗುತ್ತಾರೆ. ನೀಲೇಶ್  ಬ್ಯಾಂಡ್‌ ಒಂದರಲ್ಲಿ ಡ್ರಮ್ಮರ್ ಆಗಿರುತ್ತಾನೆ.  ಕಾಲೇಜಿನಲ್ಲಿ, ನೀಲೇಶ್ ಭಾರತದ ಮೀಸಲಾತಿ  ವ್ಯವಸ್ಥೆಯ ಮೂಲಕ ತನ್ನ ಸೀಟು ಪಡೆದಿರುತ್ತಾನೆ. ಮತ್ತು ಆ  ಕಾರಣಕ್ಕಾಗಿ ತನ್ನ ಸುತ್ತಲಿರುವ ಹೆಚ್ಚಿನ ಮೇಲ್ಜಾತಿಯ ಸಹಪಾಠಿಗಳಿಂದ ಅವಮಾನವನ್ನು ಎದುರಿಸುತ್ತಿರುತ್ತಾನೆ.  ಸಂಯಮದಿಂದ ವರ್ತಿಸುವ  ನೀಲೇಶ್ ನ  ಸ್ನೇಹವನ್ನು  ಬಯಸಿ ವಿಧಿ ಅವನನ್ನು ಹಿಂಬಾಲಿಸುತ್ತಾಳೆ.

ನೀಲೇಶ್ ಮತ್ತು ವಿಧಿ ಇಬ್ಬರ ನಿಕಟತೆಯು ವಿಧಿಯ ಕುಟುಂಬದ ಕೋಪಕ್ಕೆ ಕಾರಣವಾಗುತ್ತದೆ. ವಿಧಿ ತನ್ನ ಕುಟುಂಬದ ಆಳವಾದ ಪೂರ್ವಾಗ್ರಹದ ಬಗ್ಗೆ ಅರಿವಿಲ್ಲದೆ ನೀಲೇಶ್‌ನನ್ನು ಕುಟುಂಬದ ಮದುವೆಗೆ ಆಹ್ವಾನಿಸುತ್ತಾಳೆ, ಅಲ್ಲಿ ಆಕೆಯ ಕುಟುಂಬವು ನೀಲೇಶ್‌ನನ್ನು ಅವಮಾನಿಸಿ ತೀವ್ರವಾಗಿ ಥಳಿಸುತ್ತದೆ.

ಈ ಪ್ರೀತಿಯ ಸಂಬಂಧವು ನೀಲೇಶ್‌ಗೆ ಅಪಾಯಕಾರಿಯಾಗಿರುತ್ತದೆ. ಮೇಲ್ನೋಟಕ್ಕೆ ಅತ್ಯಾಧುನಿಕವಾಗಿ ಕಂಡರೂ ವಿಧಿ ಯ  ಕುಟುಂಬದವರು ಈ  ಅಂತರ-ಜಾತಿ ಸಂಬಂಧದಿಂದ ಕುಟುಂಬದ ಹೆಸರಿಗೆ ಅಪಮಾನವಾಗಬಹುದು ಎಂಬ ಭಯವನ್ನು ಹೊಂದಿರುತ್ತಾರೆ. ಇದು  ಸೃಷ್ಟಿಸುವ ಸ್ಫೋಟಕ  ಸನ್ನಿವೇಶವನ್ನು ಚಿತ್ರಿಸಿರುವುದು  ಪರಿಣಾಮಕಾರಿಯಾಗಿದೆ. ಸಂಭಾಷಣೆಗಳು ಸಹ ಚೆನ್ನಾಗಿವೆ. ಚಿತ್ರದ ಅಂತ್ಯ ಸಹ ಸ್ವಲ್ಪ ವಿಭಿನ್ನವಾಗಿದೆ. 

ಚಿತ್ರದಲ್ಲಿ ಒಂದೆಡೆ ವಿಧಿ ಹೇಳುತ್ತಾಳೆ - 'ಇದೆಲ್ಲ (ಜಾತಿವಾದ) ಮುಗಿದು ಹೋದ ವಿಚಾರ ಎಂದು ನಾನೆಣಿಸಿದ್ದೆ'. ಅದಕ್ಕೆ ನೀಲೇಶ್‌ ಹೇಳುತ್ತಾನೆ- "ಅದನ್ನು ಅನುಭವಿಸದವರಿಗೆ ಹಾಗೆ ಅನಿಸುತ್ತದೆ". ಚಿತ್ರೋದ್ಯಮವನ್ನು ನಿಯಂತ್ರಿಸುವವರೂ ಜಾತಿವಾದದ ಸಂಕಷ್ಟವನ್ನು ಸ್ವಯಂ ಅನುಭವಿಸದ ಕಾರಣಕ್ಕೇ  ಇಂತಹ ಕಥಾವಸ್ತುಗಳ ಆಯ್ಕೆಯಲ್ಲಿ ಹಿಂಜರಿಯುತ್ತಿರಬಹುದೇನೋ.   ಅಥವಾ ಜಾತಿ ವ್ಯವಸ್ಥೆಯಲ್ಲಿ ಮೇಲಿರುವವರ  ಅಸಮಾಧಾನಕ್ಕೆ ಗುರಿಯಾಗುವ ಭಯವೂ ಇರಬಹುದೇನೋ. 

ಜಾತಿವಾದವು ಸ್ವಾತಂತ್ರ್ಯ ಬಂದ ಮೇಲಿನ ಏಳು ದಶಕಗಳ ನಂತರವೂ ಹಾಗೆಯೇ ಮುಂದುವರೆದಿದೆ. ಕನ್ನಡದ ವಿಶಿಷ್ಟ ಲೇಖಕ, ಪತ್ರಕರ್ತ ಲಂಕೇಶ್ ಅವರು ಜಾತೀಯತೆಯ ಬಗ್ಗೆ ತಮ್ಮ ಒಂದು ಲೇಖನದಲ್ಲಿ ಹೀಗೆ ಬರೆಯುತ್ತಾರೆ- "ನಮ್ಮ  ದೇಶದ ಜಾತೀಯತೆಯ ಜೊತೆಗೆ ಎಲ್ಲ ದೇಶಗಳ ಜಾತೀಯತೆಯ ಸಣ್ಣತನ, ಕೇಡಿತನ, ನನ್ನನ್ನು ಚಿಂತೆಗೀಡುಮಾಡಿದೆ. ನಾವು ಬೆಳೆದಂತೆಲ್ಲ, ಸುಶಿಕ್ಷಿತರಾದಂತೆಲ್ಲ ಯಾಕೆ ಮಾನವೀಯತೆ, ಜಾತ್ಯತೀತತೆ, ವಿನೋದ, ವ್ಯಾಮೋಹ ವೃದ್ಧಿಯಾಗುವುದಿಲ್ಲ ಎಂದು ಕೇಳಿಕೊಳ್ಳುತ್ತಿದ್ದೇನೆ..." ಅವರು ಇದನ್ನು ಬರೆದಿದ್ದು 1995 ರಲ್ಲಿ. ನಂತರದ ಈ ಮೂವತ್ತು ವರ್ಷಗಳಲ್ಲಿ ಬದಲಾವಣೆಯೇನೂ ಆದಂತೆ ಅನಿಸುವುದಿಲ್ಲ. 

ಅದೇನೇ ಇರಲಿ, ಕೇವಲ ಸಿದ್ಧ ಸೂತ್ರಗಳನ್ನು ಅವಲಂಬಿಸಿದ ಚಿತ್ರಗಳನ್ನೇ ನಿರ್ಮಿಸದೆ, ಸಾಮಾಜಿಕ ಪ್ರಸ್ತುತತೆಯಿರುವ ಕಥೆಗಳತ್ತಲೂ ಬಾಲಿವುಡ್ ಗಮನ ಹರಿಸುತ್ತಿರುವುದು ಉತ್ತಮ ಬೆಳವಣಿಗೆ. 


No comments :