"ಪ್ರಜಾಪ್ರಭುತ್ವವು ಸುಂದರವಾಗಿದೆ. ಅದು ನಿಮಗೆ ಸಾಕಷ್ಟು ಸ್ವಾತಂತ್ರ್ಯಗಳನ್ನು ನೀಡುತ್ತದೆ. ಅದನ್ನು ನಾಶಮಾಡುವ ಸ್ವಾತಂತ್ರ್ಯವನ್ನೂ ಸಹ ನೀಡುತ್ತದೆ" - ಮುಬಿ ಓಟಿಟಿ ವೇದಿಕೆಯಲ್ಲಿ ಕಳೆದ ಎಂಟು ವಾರಗಳಿಂದ ಸ್ಟ್ರೀಮ್ ಆದ "ಮುಸೋಲಿನಿ: ಸನ್ ಆಫ್ ದಿ ಸೆಂಚುರಿ" ಎಂಬ ವೆಬ್ ಸರಣಿಯಲ್ಲಿ ಒಂದು ಎಪಿಸೋಡ್ ನಲ್ಲಿ ಮುಸೋಲಿನಿ ಹೇಳುವ ಮಾತಿದು. 2018 ರಲ್ಲಿ ಪ್ರಕಟವಾದ ಆಂಟೋನಿಯೊ ಸ್ಕುರಾಟಿ ಬರೆದ ಇದೇ ಹೆಸರಿನ ಪುಸ್ತಕವನ್ನು ಆಧಾರವಾಗಿಟ್ಟುಕೊಂಡು ರಚಿಸಿದ ಸರಣಿಯಾದರೂ ನಿರ್ದೇಶಕ ಜೋ ರೈಟ್ ಇದನ್ನು ಒಂದು ಸಾಮಾನ್ಯ ನಾಟಕವನ್ನು ಮೀರಿದ ಕೃತಿಯನ್ನಾಗಿಸಲು ಕೆಲವು ತಂತ್ರಗಳನ್ನು ಬಳಸಿದ್ದಾರೆ. ಉದಾಹರಣೆಗೆ, ಕೆಲವು ಸಂದರ್ಭಗಳಲ್ಲಿ ಮುಖ್ಯ ಪಾತ್ರವಾದ ಮುಸೋಲಿನಿ ಗುಂಪಿನಲ್ಲಿ ಬೇರೆ ಜನರೊಡನೆ ಓಡಾಡುತ್ತಿರುವಾಗಲೇ ವೀಕ್ಷಕರೊಡನೆ (ಅಂದರೆ ನಮ್ಮೊಡನೆ) ನೇರವಾಗಿ ಮಾತನಾಡುವುದು ಅಂತಹ ಒಂದು ತಂತ್ರ. ಒಂದು ದೀರ್ಘವಾದ ಸ್ವಗತದಲ್ಲಿ ತನ್ನ ಬಗ್ಗೆ ಆತ ಹೇಳಿಕೊಳ್ಳುವುದು ಅವನ ಮಾನಸಿಕತೆಯನ್ನು ಅರಿಯಲು ಸಹಾ ಮಾಡುತ್ತದೆ.
ಈ ಸರಣಿಯು 1920 ರಿಂದ 1945ರ ನಡುವೆ ಇಟಲಿಯಲ್ಲಿ ನಡೆದ ವಿದ್ಯಮಾನಗಳ ರಕ್ತಸಿಕ್ತ ಇತಿಹಾಸದ ನಾಟಕವಷ್ಟೇ ಅಲ್ಲ , ಇದು ನಿರಂಕುಶಾಧಿಕಾರದ (authoritarianism) ಆಕರ್ಷಕ ಶಕ್ತಿಯ ಕುರಿತಾದ ಎಚ್ಚರಿಕೆಯ ಕಥೆಯೂ ಆಗಿದೆ. ಲೂಕಾ ಮೆರಿನೆಲ್ಲಿ ಎಂಬ ಇಟಾಲಿಯನ್ ನಟ ಮುಸೋಲಿನಿಯ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ.
ಈ ಸರಣಿಗೆ ಆಧಾರವಾಗಿರುವ ಪುಸ್ತಕದ ಕರ್ತೃ ಸ್ಕುರಾಟಿ ಪುಸ್ತಕವನ್ನು ಐತಿಹಾಸಿಕ ಸಾಕ್ಷ್ಯಚಿತ್ರ ಎಂದು ವಿವರಿಸುತ್ತಾರೆ, ಐತಿಹಾಸಿಕ ಕಾದಂಬರಿ ಎಂದಲ್ಲ. ಅಂದರೆ ಇದರಲ್ಲಿರುವ ಬಹುಪಾಲು ಘಟನೆಗಳು ವಾಸ್ತವದಲ್ಲಿ ನಡೆದ ಘಟನೆಗಳೇ ಆಗಿವೆ.
ಮುಸೊಲಿನಿ ತನ್ನ ಫ್ಯಾಸಿಸ್ಟ್ ಆಡಳಿತವನ್ನು ಸ್ಥಾಪಿಸುವ ಮೂಲಕ ಇಟಲಿಯಲ್ಲಿದ್ದ ಸಂಸದೀಯ ಪ್ರಜಾಪ್ರಭುತ್ವವನ್ನು ಹೇಗೆ ದುರ್ಬಲಗೊಳಿಸಿದ ಎಂಬುದನ್ನು ಸರಣಿಯು ವಿವರವಾಗಿ ತೋರಿಸುತ್ತದೆ.
1914-1918 ರ ಮೊದಲನೇ ಜಾಗತಿಕ ಮಹಾಯುದ್ಧವಾದ ಮೇಲೆ ಇಟಲಿಯಲ್ಲಿ ಬಡತನ, ನಿರುದ್ಯೋಗ, ಹತಾಶೆ ತುಂಬಿದ್ದವು. ಇದನ್ನು ಬಳಸಿಕೊಂಡು ಗದ್ದುಗೆಗೆ ಏರಲು ಮುಸೋಲಿನಿ ಯೋಜನೆ ರೂಪಿಸುತ್ತಾನೆ. ಅವನಂತೆಯೇ ವಿಶ್ವಯುದ್ಧದಲ್ಲಿ ಭಾಗವಹಿಸಿದ್ದ ಕೆಲವರನ್ನು ಸೇರಿಸಿ ಒಂದು ಗೂಂಡಾ ಪಡೆಯನ್ನು ಸೃಷ್ಟಿಸಿ ವಿರೋಧಿಗಳನ್ನು ಅಂಗವಿಕಲಗೊಳಿಸಲು, ಕೊಲ್ಲಲು ಮತ್ತು ಬೆದರಿಸಲು ಬಳಸುತ್ತಾನೆ. 'ಇಟಾಲಿಯನ್ ಫಾಸ್ಸಿಸ್ ಆಫ್ ಕಾಂಬ್ಯಾಟ್' (Italian Fasces of Combat) ಎಂಬ ಹೆಸರಿನ ಈ ಗುಂಪು ಚರ್ಚ್, ರಾಜಪ್ರಭುತ್ವ, ಅಂದಿನ ಇಟಾಲಿಯನ್ ರಾಜ್ಯ ಮತ್ತು ಚುನಾವಣೆಗಳ ಪರಿಕಲ್ಪನೆಯ ವಿರುದ್ಧ ನಿಲ್ಲುತ್ತದೆ ಎಂದು ಮುಸೊಲಿನಿ ಘೋಷಿಸುತ್ತಾನೆ. 1921 ರಲ್ಲಿ ಡೆಪ್ಯೂಟಿಗಳ ಚೇಂಬರ್‌ಗೆ ಚುನಾಯಿತರಾಗಲು, ಅವರು ಭೂಮಾಲೀಕರು ಮತ್ತು ವ್ಯಾಪಾರಸ್ಥರಂತಹ ಬೂರ್ಜ್ವಾ ಸಮಾಜದ ಅಂಶಗಳೊಂದಿಗೆ ಕೈಜೋಡಿಸುತ್ತಾರೆ.
ಮುಸೊಲಿನಿಯ ಅಧಿಕಾರದ ಏರಿಕೆಗೆ ಆಳುವ ವರ್ಗಗಳ ನ್ಯೂನತೆಗಳು ಕಾರಣ ಎಂದು ಸರಣಿಯು ಒತ್ತಿಹೇಳುತ್ತದೆ. 1922 ರ 'ಮಾರ್ಚ್ ಆನ್ ರೋಮ್' (March on Rome) ಒಂದು ಸಾಮೂಹಿಕ ಪ್ರದರ್ಶನವಾಗಿದ್ದರೂ, ಅದರ ಹಿಂದಿನ ಶಕ್ತಿ ಅಷ್ಟೇನೂ ಪ್ರಬಲವಾಗಿರುವುದಿಲ್ಲ; ಮುಸೊಲಿನಿ ವಾಸ್ತವವಾಗಿ ಸ್ವಿಟ್ಜರ್ಲೆಂಡ್‌ಗೆ ಪಲಾಯನ ಮಾಡಲು ಸಿದ್ಧನಾಗಿರುತ್ತಾನೆ. ಆದರೂ, ರಾಜ ವಿಕ್ಟರ್ ಎಮ್ಯಾನುಯೆಲ್ III ಯು ಪ್ರಧಾನ ಮಂತ್ರಿ ಲೂಯಿಗಿ ಫ್ಯಾಕ್ಟಾ ನ ಮಾರ್ಷಲ್ ಲಾ (martial law) ಘೋಷಣೆಗೆ ಸಹಿ ಹಾಕಲು ನಿರಾಕರಿಸುತ್ತಾನೆ. ಜನರಲ್ ಗಳು ತನ್ನ ವಿರುದ್ಧ ಬಂಡೇಳಬಹುದು ಎನ್ನುವ ಭಯ ಅವನಿಗಿರುತ್ತದೆ. ನಂತರ ರಾಜನು ಮುಸೊಲಿನಿಯನ್ನು ಪ್ರಧಾನ ಮಂತ್ರಿಯಾಗಿ ನೇಮಿಸುತ್ತಾನೆ, ಫ್ಯಾಸಿಸ್ಟರು ಸಂಸತ್ತಿನಲ್ಲಿ ಅಲ್ಪಸಂಖ್ಯಾತರಾಗಿದ್ದರೂ ಸಹ. ಈ ನಡುವೆ ಪ್ರಜಾಪ್ರಭುತ್ವದ ಸಮರ್ಥಕ ಮ್ಯಾಟಿಯೊಟಿ ಎನ್ನುವವನನ್ನು ಫ್ಯಾಸಿಸ್ಟರ ಗುಂಪು ಬರ್ಬರವಾಗಿ ಹತ್ಯೆಗೈಯುತ್ತದೆ. ಆದಾಗ್ಯೂ ಕೆಲವೇ ವಾರಗಳಲ್ಲಿ, ಸಂಸತ್ತು ಮುಸೊಲಿನಿಗೆ ಸರ್ವಾಧಿಕಾರಿ ಅಧಿಕಾರವನ್ನು ನೀಡಲು ಮತ ಹಾಕುತ್ತದೆ.
ಈ ಸರಣಿಯನ್ನು ನೋಡುವಾಗ ಹಿಂದೆ ಓದಿದ್ದ ವಿಲಿಯಮ್ ಶೈರರ್ ಬರೆದ 'ದಿ ರೈಸ್ ಅಂಡ್ ಫಾಲ್ ಆಫ್ ದಿ ಥರ್ಡ್ ರೈಖ್' (The Rise and Fall of the Third Reiche) ಕೃತಿ ನೆನಪಿಗೆ ಬಂತು. ಆರಂಭದಲ್ಲಿ ಹಿಟ್ಲರ್ ಸಹ ಇಟಲಿಯಲ್ಲಿ ಮುಸೋಲಿನಿ ಅಧಿಕಾರಕ್ಕೆ ಬಂದ ಮಾದರಿಯನ್ನು ಮೆಚ್ಚಿದ್ದನು ಎಂದು ಈ ಪುಸ್ತಕದಲ್ಲಿ ಓದಿದ್ದು ನೆನಪಿದೆ.
ಹಾಗೆಯೇ, ಮ್ಯಾಡೆಲಿನ್ ಆಲ್ ಬ್ರೈಟ್ ಬರೆದ 'ಫ್ಯಾಸಿಸಂ: ಎ ವಾರ್ನಿಂಗ್ ' (Fascism: A Warning) ಸಹ ಅನೇಕ ದೇಶಗಳಲ್ಲಿ ಜನತಂತ್ರ ವ್ಯವಸ್ಥೆ ಎದುರಿಸುವ ಅಪಾಯಗಳು, ಯಾವುದೇ ಉತ್ತಮ ಪರ್ಯಾಯವನ್ನೂ ಒದಗಿಸದೆಯೇ ಅಸ್ತಿತ್ವದಲ್ಲಿರುವ ಜನತಂತ್ರದ ಸಂಸ್ಥೆಗಳು ಮತ್ತು ತತ್ವಗಳನ್ನು ಹಾಳುಗೆಡವುವ ಅಹಂಕಾರಿ ನಾಯಕರುಗಳು ಮುಂತಾದ ವಿಚಾರಗಳನ್ನು ಚರ್ಚಿಸುತ್ತದೆ. ರಾಜಕೀಯ ಸಹಭಾಗಿತ್ವ, ಸಂವಾದ, ವೈಚಾರಿಕತೆ, ಸತ್ಯ, ಇವೆಲ್ಲವುಗಳೂ ಮಾಯವಾಗುತ್ತಿರುವುದರ ಬಗ್ಗೆ ಎಚ್ಚರಿಸುತ್ತದೆ. ನಾವು ಅವಮಾನಪಡಬೇಕಾದ ಮುಸೋಲಿನಿ, ಹಿಟ್ಲರ್, ಸ್ಟಾಲಿನ್, ಮಿಲೋಸೆವಿಚ್, ಪುಟಿನ್ ಮುಂತಾದ ನಿರಂಕುಶಾಧಿಕಾರಿಗಳ ಬಗ್ಗೆ ಮತ್ತು ನಾವು ನೆನೆಯಬೇಕಾದ ಲಿಂಕನ್, ಕಿಂಗ್, ಗಾಂಧಿ, ಮಂಡೇಲಾ ರಂತಹ ಶ್ರೇಷ್ಟ ನಾಯಕರ ಬಗ್ಗೆಯೂ ಪುಸ್ತಕದಲ್ಲಿದೆ.
'ಮುಸೋಲಿನಿ' ಸರಣಿಯಾಗಲಿ, ಮೇಲೆ ಪ್ರಸ್ತಾಪಿಸಿದ ಪುಸ್ತಕಗಳಾಗಲಿ, ಇವತ್ತಿನ ಸಂದರ್ಭಕ್ಕೆ ಅತ್ಯಂತ ಪ್ರಸ್ತುತವಾಗಿವೆ. ಕೆಲವರನ್ನು ಹೊರಗಿಡುವ (exclusionary), ಕಿರಿದಾದ, ಅಸಹಿಷ್ಣುತೆಯ ದೇಶಭಕ್ತಿಯ ಪರಿಕಲ್ಪನೆಯನ್ನು ವಿರೋಧಿಸಲು, ರಾಷ್ಟ್ರೀಯತಾವಾದಿ ಮತಾಂಧತೆಯನ್ನು ಎದುರಿಸಲು, ಬಹುತ್ವವಾದಿ ದೇಶಭಕ್ತಿಯ ಪರ್ಯಾಯ ಪರಿಕಲ್ಪನೆಯನ್ನು ಮುಂದಿಡಬೇಕಾಗಿದೆ. ಆಗ ಮಾತ್ರ ಮತಾಂಧತೆ ಮತ್ತು ಫ್ಯಾಸಿಸಂನಿಂದ ರಾಷ್ಟ್ರವನ್ನು ಉಳಿಸಬಹುದು
ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಮುಸೋಲಿನಿಯ ಇಟಲಿ, ಹಿಟ್ಲರ ನ ಜರ್ಮನಿಗಳ ಉದಾಹರಣೆಗಳು ಇದ್ದೇ ಇವೆ.
 
 
No comments :
Post a Comment