"ಕರ್ನಾಟಕವೆನ್ನುವುದು ಸಮಾನತೆ, ಸೌಹಾರ್ದತೆಗಳ ಪರಂಪರೆಯುಳ್ಳ ನಾಡು. 'ಕನ್ನಡವಾಗಿರುವುದು' ಮತ್ತು 'ಕನ್ನಡತನ' ಹೊಂದಿರುವುದೆಂದರೆ, ಭಾಷೆಯ ಜೊತೆಗೆ ಈ ಪರಂಪರೆಯನ್ನು ಹೃದಯಸ್ಥ ಮಾಡಿಕೊಂಡು ಬೆಳೆಸಬೇಕು. ಇಲ್ಲದಿದ್ದರೆ, ಕನ್ನಡಪರ ಪ್ರತಿಪಾದನೆಯು ಅಪೂರ್ಣವಾಗುತ್ತದೆ." (ಕನ್ನಡ ರಾಜ್ಯೋತ್ಸವ ದಿನದಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಬರಗೂರು ರಾಮಚಂದ್ರಪ್ಪನವರ "ಕನ್ನಡವಾಗಿರುವುದು ಎಂದರೆ..." ಎಂಬ ಲೇಖನದ ಸಾಲುಗಳು.)
ಕುವೆಂಪು ಅವರ ಎರಡು ಕವನಗಳ ಸಾಲುಗಳಲ್ಲಿ ಕನ್ನಡದ ಪರಂಪರೆ ಬಿಂಬಿತವಾಗಿರುವುದನ್ನು ಲೇಖಕರು ಪ್ರಸ್ತಾಪಿಸುತ್ತಾರೆ.
ಕನ್ನಡದ ಐಡೆಂಟಿಟಿಯ ಪರಿಕಲ್ಪನೆಯಲ್ಲೇ ಭಿನ್ನ ಅಭಿಪ್ರಾಯಗಳು ಇರಬಹುದು.
ಡಿ. ಆರ್ . ನಾಗರಾಜ್ ಅವರ 'ಸಾಹಿತ್ಯ ಕಥನ' (ಲೇಖನ ಸಂಗ್ರಹ)ದಲ್ಲಿ 'ಕನ್ನಡ ರಾಷ್ಟ್ರೀಯತೆಯ ಸ್ವರೂಪ' ಎಂಬ ಲೇಖನದಲ್ಲಿ 'ಕನ್ನಡತ್ವ ಮತ್ತು ಕರ್ನಾಟಕತ್ವ'ಗಳ ಪರಿಕಲ್ಪನೆಯಲ್ಲೇ ಭಿನ್ನ ಚಿಂತನೆಗಳು ಇರುವುದನ್ನು ಗುರುತಿಸಲಾಗಿದೆ. ಒಂದೆಡೆ, ಡಾ. ಎಂ. ಚಿದಾನಂದ ಮೂರ್ತಿಯವರು ತಮ್ಮ 'ಕನ್ನಡ ಸಂಸ್ಕೃತಿ: ನಮ್ಮ ಹೆಮ್ಮೆ" ಎಂಬ ಕೃತಿಯಲ್ಲಿ ಪ್ರತಿಪಾದಿಸುವ 'ಅನ್ಯರಿಂದ ಕನ್ನಡಿಗ ನಾಶವಾಗುತ್ತಿದ್ದಾನೆ; ಅನ್ಯರಿಂದ ಕನ್ನಡ ಭಾಷೆ ನಿರ್ನಾಮವಾಗುತ್ತಿದೆ' ಎಂಬ ಆತಂಕ (ಇದನ್ನು ನಾಗರಾಜ್ 'ಆತಂಕಕೇಂದ್ರಿತ ರಾಷ್ಟ್ರೀಯತೆ' ಎಂದು ಕರೆಯುತ್ತಾರೆ); ಇನ್ನೊಂದೆಡೆ ಆಲೂರು ವೆಂಕಟರಾಯರ 'ಕರ್ನಾಟಕತ್ವದ ವಿಕಾಸ' ಕೃತಿಯಲ್ಲಿ ಕನ್ನಡ ರಾಷ್ಟ್ರೀಯತೆ ಮತ್ತು 'ಹಿಂದುತ್ವ'ದ ನಡುವಿನ ಸಂಬಂಧದ ಸ್ಪಷ್ಟ ಉಲ್ಲೇಖ ( ನಾಗರಾಜ್ ಇದನ್ನು 'ಆಧ್ಯಾತ್ಮಿಕ ರಾಷ್ಟ್ರೀಯತೆ' ಎಂದು ಕರೆಯುತ್ತಾರೆ). ಕನ್ನಡ ಸಂಸ್ಕೃತಿಗೆ ಹಿಂದುಯೇತರ ಜನಾಂಗಗಳ ಕೊಡುಗೆಯ ಪ್ರಸ್ತಾಪ ಆಲೂರರಲ್ಲೂ, ಚಿದಾನಂದ ಮೂರ್ತಿ ಅವರಲ್ಲೂ ಇಲ್ಲದೇ ಇರುವುದನ್ನು ನಾಗರಾಜ್ ಗುರುತಿಸುತ್ತಾರೆ. ಕನ್ನಡ ರಾಷ್ಟ್ರೀಯತೆಯು ಹಲವು ಗುರುತುಗಳನ್ನು (multiple identities) ಒಳಗೊಂಡಿರಬೇಕು ಎಂದು ಡಿ. ಆರ್. ನಾಗರಾಜ್ ಅವರು ಪ್ರತಿಪಾದಿಸುತ್ತಾರೆ.
ಮತ್ತೆ ಬರಗೂರರ ಲೇಖನಕ್ಕೆ ಹಿಂದಿರುಗುವುದಾದರೆ, ಅವರು ಪ್ರಸ್ತಾಪಿಸುವ ಕುವೆಂಪು ರವರ 'ಸರ್ವ ಜನಾಂಗದ ಶಾಂತಿಯ ತೋಟ' ಎಂಬ ಸಾಲಾಗಲೀ, 'ಕವಿರಾಜಮಾರ್ಗ'ದಲ್ಲಿ ಪ್ರತಿಪಾದಿಸಿರುವ 'ಪರವಿಚಾರ ಮತ್ತು ಪರಧರ್ಮವನ್ನು ಸಹಿಸುವುದೇ ನಿಜವಾದ ಬಂಗಾರ' ಎನ್ನುವುದಾಗಲೀ , ಆದಿಕವಿ ಪಂಪನ 'ಮಾನವ ಜಾತಿ ತಾನೊಂದೆ ವಲಂ' ಸಾಲಾಗಲೀ... ಇವೆಲ್ಲವೂ ಪ್ರಬಲವಾಗಿ ಪ್ರತಿಪಾದಿಸುವುದು ಈ ನೆಲದ ಒಳಗೊಳ್ಳುವಿಕೆ ಮತ್ತು ಸೌಹಾರ್ದತೆಗಳನ್ನೇ.
ಕುವೆಂಪು ಅವರ ಇನ್ನೊಂದು ಕವನದಲ್ಲಿ ಈ ಸಾಲುಗಳಿವೆ-
ಮತದ ಬಿರುಕುಗಳನು ತೊರೆವೆನುಡಿಗಳೊಡಕುಗಳನು ಮರೆವೆ
ಕನ್ನಡವಾಗಿರುವುದು ಎಂದರೆ ಇದೇ ಅಲ್ಲವೇ.
No comments :
Post a Comment