ಈ ವರ್ಷದ ಬೂಕರ್ ಗೆ ಶಾರ್ಟ್ ಲಿಸ್ಟ್ ಆಗಿರುವ ಎಲ್ಲ ಆರು ಕಾದಂಬರಿಗಳು ಉತ್ಕೃಷ್ಟ ಗುಣಮಟ್ಟದ್ದವಾಗಿದ್ದು ಯಾವುದಕ್ಕೆ ಪ್ರಶಸ್ತಿ ಬರುತ್ತದೆ ಎಂದು ಊಹಿಸುವುದು ಕಷ್ಟ. ಅಂತಿಮ ಪಟ್ಟಿ ಘೋಷಣೆಯಾದ ಮೇಲೆ ಕಳೆದ ಒಂದೂವರೆ ತಿಂಗಳಲ್ಲಿ ಎಲ್ಲ ಆರು ಕಾದಂಬರಿಗಳನ್ನು ಓದಿದ ಮೇಲೆ ನನಗನಿಸಿದ್ದು ಇದು. ಇನ್ನೇನು ಕೆಲವೇ ಗಂಟೆಗಳಲ್ಲಿ ಪ್ರಶಸ್ತಿಯ ಘೋಷಣೆಯಾಗಲಿದೆ.
ಗೆಲ್ಲಲೆಂದು ನಾನು ಬಯಸುತ್ತಿರುವ, ಭಾರತೀಯ ಸಂಜಾತೆ ಕಿರಣ್ ದೇಸಾಯಿ ಅವರ "ದಿ ಲೋನ್ಲಿನೆಸ್ಸ್ ಆಫ್ ಸೋನಿಯಾ ಅಂಡ್ ಸನ್ನಿ" ಹಲವಾರು ವಿಮರ್ಶಕರ ಮನ್ನಣೆ ಗಳಿಸಿ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿ ಇರುವುದು ನಿಜವಾದರೂ ಗೆಲುವು ನಿಶ್ಚಯವಿಲ್ಲ. ಸೂಸನ್ ಚೊಯ್ ಅವರು ಬರೆದಿರುವ "ಫ್ಲಾಶ್ ಲೈಟ್" ಗೆದ್ದರೂ ಗೆಲ್ಲಬಹುದು. ಅಮೇರಿಕ, ಜಪಾನ್, ಸೌತ್ ಕೊರಿಯಾ ಗಳನ್ನು ಒಳಗೊಳ್ಳುವ ಕಾದಂಬರಿ ಬಹುತೇಕ 'ಫ್ಲಾಶ್ ಬ್ಯಾಕ್' ನಲ್ಲಿ ನಿರೂಪಿತಗೊಳ್ಳುತ್ತದೆ. ಒಂದು ರಾಜಕೀಯ ಥ್ರಿಲ್ಲರ್ ನಂತೆ ವೇಗದ ಶೈಲಿ ಹೊಂದಿದ್ದರೂ ಇದು ನಿರೂಪಿಸುವ ವಲಸಿಗರ ಅನುಭವ, ಕೊರಿಯಾ-ಜಪಾನ್ ನ ಯುದ್ಧದಲ್ಲಿ ನಡುವೆ ಸಿಲುಕಿದ ಕುಟುಂಬವೊಂದರ ಕತೆ, ಇವೆಲ್ಲ ಎಳೆಗಳನ್ನೂ ಅತ್ಯಂತ ನಾಜೂಕಾಗಿ ಹೆಣೆದಿರುವ ಬಗೆ ಇವೆಲ್ಲದರಿಂದ ಇಷ್ಟವಾಗುತ್ತದೆ. ಇನ್ನುಳಿದ ನಾಲ್ಕರಲ್ಲಿ ಒಂದು ಕಾದಂಬರಿ ಈ ವರ್ಷದ ಬೂಕರ್ ಗದ್ದುಗೆ ಏರಿದರೂ ನನಗಂತೂ ಬೇಸರವಾಗುವುದಿಲ್ಲ.
ಕಿರಣ್ ದೇಸಾಯಿಯವರು ತಮ್ಮ ೨೦೦೬ರ ಕೃತಿ 'ಇನ್‌ಹೆರಿಟೆನ್ಸ್ ಆಫ್ ಲಾಸ್" ಗೆ ಬೂಕರ್ ಪ್ರಶಸ್ತಿ ಗಳಿಸಿದ್ದರು . 'ಇನ್‌ಹೆರಿಟೆನ್ಸ್ ' ನನಗೆ ಬಹಳ ಇಷ್ಟವಾಗಿದ್ದ ಕಾದಂಬರಿ. ನ್ಯೂಯಾರ್ಕ್ ನಗರ ಮತ್ತು ದಾರ್ಜಿಲಿಂಗ್ ಗಳಲ್ಲಿ ಕೇಂದ್ರಿತವಾಗಿತ್ತು. ವಲಸಿಗರ ಅನುಭವಗಳು ಹಾಗೂ ಏಕಾಂಗಿತನದ ಅವಸ್ಥೆ ಇವನ್ನು ಮುಖ್ಯ ಕಾಳಜಿಗಳಾಗಿ ಉಳ್ಳ ಕತಾವಸ್ತು ಆ ಕಾದಂಬರಿಯದಾಗಿತ್ತು. ನೆನಪಿಸಿಕೊಂಡಷ್ಟೇ ಈಗಲೂ ಡಾರ್ಜಿಲಿಂಗಿನ ಮಂಜು ಸುರಿಯುವ ಮಬ್ಬುಗತ್ತಲೆಯ ದೃಶ್ಯ ಕಣ್ಣ ಮುಂದೆ ಬರುತ್ತದೆ.
ಕಿರಣ್ ದೇಸಾಯಿ ಅವರ ಹೊಸ ಕಾದಂಬರಿಯು ಹಿಂದಿನ ಕಾದಂಬರಿಗಿಂತ ಬಹಳ ವಿಸ್ತಾರವಾದ ಕಾಲ ಹಾಗೂ ಸ್ಥಳಗಳನ್ನು ಒಳಗೊಂಡಿದೆ. ವಿವಿಧ ಪಾತ್ರಗಳ ಜೀವನದ ಸಣ್ಣ ವಿವರಗಳನ್ನು ಒಳಗೊಳ್ಳುತ್ತದೆ.
600 ಕ್ಕೂ ಹೆಚ್ಚು ಪುಟಗಳ ಈ ಕಾದಂಬರಿ ಆರಂಭವಾಗುವುದು ಸೋನಿಯಾ ಶಾ ಮತ್ತು ಸನ್ನಿ ಭಾಟಿಯಾ ಅವರ ಕುಟುಂಬಗಳ ಮತ್ತು ಅವರ ಪೋಷಕರ ಆಪ್ತ ವಲಯಗಳ ವಿವರಗಳೊಂದಿಗೆ. ವರ್ಗ, ಧರ್ಮ, ಲಿಂಗ ಮತ್ತು ವಲಸೆ ಈ ಎಲ್ಲಾ ಅಂಶಗಳು ಪ್ರತಿ ಪಾತ್ರದ ಮೇಲೆ ಹೇರುವ ಭಾರ, ಬೀರುವ ಪ್ರಭಾವ ಇವು ಪ್ರಕಟವಾಗುವ ಬಗೆಯು ಕಾದಂಬರಿಯ ಶಕ್ತಿ. ಬಹುತೇಕ ಎಲ್ಲ ಪಾತ್ರಗಳ ಆಂತರಿಕ ಚಿಂತನೆಗಳಿಗೂ ಅವರ ಕಾದಂಬರಿಗಳಲ್ಲಿ ಜಾಗವಿದೆ.
90ರ ಮಧ್ಯಭಾಗದಿಂದ 2000 ದ ಆರಂಭದವರೆಗೂ ಕತೆ ಜರುಗುತ್ತದೆ. ಅಮೆರಿಕೆಯ ವರ್ಮಾಂಟ್ ನಲ್ಲಿ ವಿದ್ಯಾರ್ಥಿಯಾಗಿರುವ ಸೋನಿಯಾ ಬಗ್ಗೆ ಅವಳ ತಂದೆ ದೆಹಲಿಯಿಂದ ತಮ್ಮ ಪೋಷಕರಿಗೆ (ದಾದಾಜಿ ಮತ್ತು ಬಾ) ಕರೆ ಮಾಡಿ ಅವಳು ಅಮೆರಿಕೆಯಲ್ಲಿ ಏಕಾಕಿತನವನ್ನು ಅನುಭವಿಸುತ್ತಿರುವುದಾಗಿ ಹೇಳುತ್ತಾರೆ. ದಾದಾಜಿ ಅಲಹಾಬಾದ್ನಲ್ಲಿ ತನ್ನ ನೆರೆಹೊರೆಯವರಾದ ಮತ್ತು ತಮ್ಮೊಂದಿಗೆ ಚೆಸ್ ಆಡುವ ಭಾಟಿಯಾಗೆ ಪತ್ರ ಬರೆಯುತ್ತಾರೆ. ಭಾಟಿಯಾ ಅವರ ಮೊಮ್ಮಗ ಸನ್ನಿಗೆ ಸೋನಿಯಾಳೊಂದಿಗೆ ಮದುವೆಯ ಪ್ರಸ್ತಾವನೆಯನ್ನು ದಾದಾಜಿ ಮಾಡುತ್ತಾರೆ—ಅವನು ನ್ಯೂಯಾರ್ಕ್ ನಗರದಲ್ಲಿ ಪತ್ರಕರ್ತನಾಗಿದ್ದು ಆಸೋಸಿಯೇಟೆಡ್ ಪ್ರೆಸ್‌ನಲ್ಲಿ ಕೆಲಸ ಗಟ್ಟಿ ಮಾಡಿಕೊಳ್ಳುವ ಪ್ರಯತ್ನದಲ್ಲಿರುತ್ತಾನೆ.
ಸೋನಿಯಾ ಮತ್ತು ಸನ್ನಿ ಮೊದಲು ಹೇಗೆ ಭೇಟಿಯಾಗುತ್ತಾರೆ ಮತ್ತು ನಂತರ ಮತ್ತೆ ಹೇಗೆ ಭೇಟಿಯಾಗುತ್ತಾರೆ ಎಂಬುದು ಕಥೆಯೊಳಗಿನ ಎಳೆ. ಸೋನಿಯಾ ತನ್ನ ಒಂಟಿತನವನ್ನು ಕಳೆಯಲು ಮೊದಲು ಭೇಟಿಯಾಗುವುದು ಸನ್ನಿಯನ್ನಲ್ಲ. ಯಶಸ್ವಿ ಚಿತ್ರಕಲಾವಿದನಾದರೂ ತುಂಬ ಸ್ವಾರ್ಥಿಯಾದ ಇಲಾನ್‌ನನ್ನು ಅವಳು ಭೇಟಿಯಾಗುತ್ತಾಳೆ. ಅವನು ಅವಳನ್ನು ತನ್ನ ಸಂಗಾತಿಯಾಗಿಸಿಕೊಳ್ಳುತ್ತಾನೆ. ಆದರೆ ಅದು ಆರೋಗ್ಯಕರವಾದ ಸಂಬಂಧವಾಗಿರುವುದಿಲ್ಲ ಮತ್ತು ಕೆಟ್ಟದಾಗಿ ಕೊನೆಗೊಳ್ಳುತ್ತದೆ.
ಸೋನಿಯಾ ಭಾರತಕ್ಕೆ ವಾಪಸ್ಸಾಗುತ್ತಾಳೆ, ಅಲ್ಲಿ ಮಹಿಳೆಯಾಗಿ, ಭಾರತೀಯಳಾಗಿ, ತನ್ನ ಮೇಲಿನ ಶತಮಾನಗಳ ಪ್ರಭಾವ ಮತ್ತು ಪೂರ್ವಾಗ್ರಹಗಳನ್ನು ಅರಿತುಕೊಳ್ಳುವ ತನ್ನ ಪ್ರಯಾಣವನ್ನು ಆರಂಭಿಸುತ್ತಾಳೆ, ಮತ್ತು ಕಲಾವಿದಳಾಗಿ ತನ್ನ ಧ್ವನಿಯನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಾಳೆ. ತನ್ನ ಸ್ವಂತದ ಇಷ್ಟದಂತೆ ಬದುಕಲು ಕಲಿಯುತ್ತಾಳೆ. ದೆಹಲಿ, ವರ್ಮಾಂಟ್, ಅಲಹಾಬಾದ್, ಮೆಕ್ಸಿಕೊ, ಗೋವಾ, ಇಟಲಿ ಹೀಗೆ ಕತೆಯ ಹಂದರ ಹಲವು ಸ್ಥಳಗಳನ್ನು ವ್ಯಾಪಿಸಿದೆ.
ದೇಸಾಯಿ ಎರಡು ದಶಕಗಳ ಕಾಲ "The Loneliness of Sonia and Sunny" ಮೇಲೆ ಕೆಲಸ ಮಾಡಿದ್ದಾರೆ. ವಿಭಿನ್ನ ಪಾತ್ರಗಳ ಒಳತೋಟಿಗಳು, ಒಬ್ಬಂಟಿತನ ಎಲ್ಲವನ್ನೂ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಹಿಂದಿನ ಕಾದಂಬರಿಯಂತೇ ಇಲ್ಲೂ ಅನೇಕ ರಾಜಕೀಯದ ವಿಚಾರಗಳೂ ಕತಾ ನಿರೂಪಣೆಯ ಭಾಗವಾಗಿ ಸೂಕ್ತವಾಗಿ ಮತ್ತು ಮಾರ್ಮಿಕವಾಗಿ ಪ್ರಸ್ತಾಪಿಸಲ್ಪಟ್ಟಿವೆ. ದೆಹಲಿಯಲ್ಲಿ ಸಿಖ್ ಜನರ ಹತ್ಯೆ, ಅಯೋಧ್ಯೆಯ ಬಾಬರಿ ಮಸೀದಿಯ ಧ್ವಂಸ, ನ್ಯೂಯಾರ್ಕ್ ನ 9/11, ಹೀಗೆ ಅನೇಕ ಘಟನೆಗಳು ಕತೆಯ ಭಾಗವಾಗಿವೆ.
ಒಂದು ಉತ್ತಮ ಕಾದಂಬರಿಯನ್ನು ಓದುವುದೆಂದರೆ ನಮ್ಮನ್ನೇ ಮತ್ತು ನಮ್ಮ ಸುತ್ತಲಿನ ಜಗತ್ತನ್ನೇ ಇನ್ನೊಂದು ಕೋನದಿಂದ ನೋಡಿದಂತೆ. ಸಂವೇದನೆ ಮತ್ತು ಸೂಕ್ಷ್ಮತೆ ಬೆರೆತ ದೃಷ್ಟಿ ಕೃತಿಕಾರರದ್ದಾದರೆ ನಮ್ಮ ಗ್ರಹಿಕೆಗೆ ಸಿಕ್ಕಿರದ ಎಷ್ಟೋ ವಿವರಗಳನ್ನು ಪಡೆದಂತೆ.
No comments :
Post a Comment