ಈ ಸಲದ ಬುಕರ್ ಪ್ರಶಸ್ತಿ ಪಡೆದ ಕಾದಂಬರಿ ಡೇವಿಡ್ ಸಲಯ್ ಬರೆದ ' ಫ್ಲೆಷ್ ' ನನಗೆ ಇಷ್ಟವಾದ ಕೃತಿ. ಸಾಮಾನ್ಯವಾಗಿ ಅಮೆರಿಕನ್ ಅಥವಾ ಬ್ರಿಟಿಷ್ ಲೇಖಕರ ಕೃತಿಗಳೇ ಇಂತಹ ಪ್ರಶಸ್ತಿಗಳಿಗೆ ಆಯ್ಕೆಯಾಗುವುದನ್ನು ನಾವು ಕಾಣುತ್ತೇವೆ . ಹಾಗೆಯೇ ಕಾದಂಬರಿಗಳು ಈ ಎರಡು ದೇಶಗಳಲ್ಲಿಯೇ ನಡೆಯುವ ಕತೆಗಳಾಗಿರುವ ಸಾಧ್ಯತೆಯೂ ಹೆಚ್ಚು. ' ಫ್ಲೆಷ್ ' ಕೃತಿಯ ಕಾದರಂಬರಿಕಾರ ಹಂಗರಿ - ಕೆನಡ - ಬ್ರಿಟಿಷ್ ಮೂಲದವರು ಮತ್ತು ಕಾದಂಬರಿಯಲ್ಲಿ ಮುಖ್ಯ ಪಾತ್ರವಾಗಿರುವ ಇಸ್ಟ್ವಾನ್ ಸಹ ಹಂಗರಿ ಮೂಲದವನಾಗಿದ್ದು ನಂತರ ಬ್ರಿಟನ್ ನಲ್ಲಿ ವೃತ್ತಿ ಮಾಡುತ್ತಿರುವವನು.
ಬಾಲ್ಯದಿಂದ ಮಧ್ಯವಯಸ್ಸಿನ ತನಕ ಇಸ್ಟ್ವಾನ್ ನ ಬದುಕಿನ ಕತೆ ಮತ್ತು ಈ ದಶಕಗಳಲ್ಲಿ ಅವನು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಏಕಾಂಗಿಯಾಗುಳಿಯುವುದರ ಶೋಧನೆ ಈ ಕೃತಿಯ ಮುಖ್ಯ ಸೆಲೆಯಾಗಿದೆ. ಇಸ್ಟ್ವಾನ್ ಮತ್ತು ಅವನ ತಾಯಿ ಹಂಗರಿಯ ಒಂದು ಪಟ್ಟಣದಲ್ಲಿ ವಾಸ ಮಾಡಲು ತೊಡಗುತ್ತಾರೆ. ತುಂಬ ನಾಚಿಕೆಯ ಮತ್ತು ಹೆಚ್ಚು ಮಾತನಾಡದ ಸ್ವಭಾವದ ಹದಿವಯಸ್ಸಿನ ಇಸ್ಟ್ವಾನ್ ಮತ್ತು ಅವನ ನೆರೆಮನೆಯ ವಯಸ್ಕ ಮಹಿಳೆ ದೈಹಿಕ ಸಂಬಂಧ ಹೊಂದಿರುತ್ತಾರೆ ಮತ್ತು ಒಮ್ಮೆ ಇಸ್ಟ್ವಾನ್ ಅವಳ ಮನೆಗೆ ಹೋದಾಗ ಆಕೆಯ ಗಂಡನ ಜೊತೆ ಮುಖಾಮುಖಿಯಾಗಿ ತಳ್ಳಾಟದಲ್ಲಿ ಗಂಡ ಮೆಟ್ಟಲುಗಳಿಂದ ಕೆಳಗೆ ಬಿದ್ದು ಸತ್ತು ಹೋಗುತ್ತಾನೆ. ಇಸ್ಟ್ವಾನ್ ನನ್ನು ಬಾಲಾಪರಾಧಿಗಳ ಕಾರಾಗೃಹಕ್ಕೆ ಕಳುಹಿಸಲಾಗುತ್ತದೆ. ಸ್ವಲ್ಪ ಕಾಲದ ನಂತರ ಅಲ್ಲಿಂದ ಬಿಡುಗಡೆಯಾಗಿ, ಸೇನೆಯನ್ನು ಸೇರುತ್ತಾನೆ. ಇರಾಕ್ ನಲ್ಲಿ ಸೇವೆ ಸಲ್ಲಿಸುತ್ತಾನೆ. ಅಲ್ಲಿಂದ ಅವನು ಹಂಗರಿಗೆ ಹಿಂದಿರುಗಿದ ಮೇಲೆ ಸಮಾಜದೊಂದಿಗೆ ಬೆರೆಯಲು ಅವನಿಗೆ ಕಷ್ಟವಾಗುತ್ತದೆ.
ಮುಂದೆ ಇಸ್ಟ್ ವಾನ್ ಲಂಡನ್ ಗೆ ಹೋಗುತ್ತಾನೆ. ಅಲ್ಲಿ ಮೊದಲು ಸೆಕ್ಯುರಿಟಿ ಕೆಲಸಕ್ಕೆ ಸೇರುತ್ತಾನೆ. ಮುಂದೆ ಶ್ರೀಮಂತನೊಬ್ಬನ ಕಾರು ಡ್ರೈವರ್ ಆಗಿ ಸೇರುತ್ತಾನೆ. ಶ್ರೀಮಂತನ ಹೆಂಡತಿಯೊಡನೆ ಸಂಬಂಧವಾಗುತ್ತದೆ. ಹಣ ಮತ್ತು ಅಧಿಕಾರಗಳು ಸಹಜ ಮೌಲ್ಯಗಳನ್ನು ಮುಕ್ಕಾಗಿಸುವ ಪರಿ ಇಲ್ಲಿ ಚಿತ್ರಿತವಾಗಿದೆ.
ಹೀಗೇ ಮುಂದುವರಿಯುವ ಇಸ್ಟ್ವಾನ್ ನ ಬದುಕು ಅವನ ಸ್ವಂತದ ನಿರ್ಧಾರ ಯೋಜನೆಗಳಿಗಿಂತ ಅವನ ಜೀವನದಲ್ಲಿ ಬರುವ ಬೇರೆಯವರ ಆಸೆಗಳು, ಸಾಮಾಜಿಕ ರಿವಾಜು ವ್ಯವಸ್ಥೆಗಳು ಇವೇ ಕಾರಣಗಳನ್ನು ಹೆಚ್ಚಾಗಿ ಅವಲಂಬಿಸಿದಂತೆ ಭಾಸವಾಗುತ್ತದೆ. ಹಂಗರಿಯಿಂದ ಆರಂಭವಾಗುವ ಅವನ ಬದುಕಿನ ಪಯಣದಲ್ಲಿ ಅವನು ಮರಳಿ ಹಂಗರಿಗೆ ಬರುವುದರೊಂದಿಗೆ ಕಾದಂಬರಿ ಮುಗಿಯುತ್ತದೆ.
ಇಷ್ಟೇ ಹೇಳಿದರೆ ಕಾದಂಬರಿಗೆ ನ್ಯಾಯ ಒದಗೀತೆ? ಇಲ್ಲ . ಗಮನಿಸಿದರೆ ಇನ್ನೂ ಎಷ್ಟೋ ವಿಚಾರಗಳನ್ನು ಸಲಯ್ ಕಾದಂಬರಿಯಲ್ಲಿ ದಾಖಲಿಸಿದ್ದಾರೆ. ಎಲ್ಲರೂ ತನ್ನನ್ನು ದೂರ ಇಟ್ಟಂತೆ ಭಾವಿಸುವ ಇಸ್ಟ್ವಾನ್, ಅವನ ಒಂದೊಂದೇ ಪದದ ಉತ್ತರಗಳು, ಇದೆಲ್ಲಾ ಕೆಲವರಲ್ಲಿ ನಾವು ಕಾಣುವ ಒಂದು ಬಗೆಯ ವಿಮುಖತೆಯ ಲಕ್ಷಣಗಳಂತೆ ಕಾಣುತ್ತವೆ.
ಲೈಂಗಿಕ ವಾಂಛೆ, ಕೆಲವೊಮ್ಮೆ ಭಾಷೆಯಲ್ಲಿ ಸಂವಹಿಸಲಾಗಿದ ಅದರ ಅನುಭವ ತೀವ್ರತೆ, ದೈಹಿಕ ಅಗತ್ಯಗಳು ಪ್ರಚೋದಿಸುವ ಅವನ ವರ್ತನೆಗಳು, ಮತ್ತದರಿಂದಲೂ ಅವನಿಗೆ ನಿಜವಾದ ಆತ್ಮೀಯತೆ ನಿಲುಕದೇ ಹೋಗುವುದು, ಇದೆಲ್ಲವೂ ವ್ಯಕ್ತಿಯ ಜೀವನದಲ್ಲಿ ದೈಹಿಕತೆಯ ಪಾತ್ರವನ್ನು ಕಾಣಿಸುವ ಪ್ರಯತ್ನವಾಗಿದೆ. ಕಾದಂಬರಿಯ ಶೀರ್ಷಿಕೆ ಸಹ ಇದನ್ನೇ ಪ್ರತಿನಿಧಿಸುವಂತಿದೆ.
ಇನ್ನು ಇಸ್ಟ್ವಾನ್ ಹಂಗರಿಯಿಂದ ಲಂಡನ್ನಿಗೆ ಕೆಲಸ ಹುಡುಕಿಕೊಂಡು ಹೋಗುವುದು, ದುಡಿಯುವ ವರ್ಗ ಮತ್ತು ಶ್ರೀಮಂತವರ್ಗಗಳಲ್ಲಿನ ಅಂತರ, ವಲಸಿಗನಾಗಿ ಎದುರಿಸುವ ಸಮಸ್ಯೆ, ಆರ್ಥಿಕವಾಗಿ ಯಶಸ್ವಿಯಾದರೂ ಸಾಮಾಜಿಕವಾಗಿ ಅವನನ್ನು ಒಪ್ಪಿಕೊಳ್ಳದ ಗಣ್ಯವರ್ಗ, ಹೀಗೆ ಯೂರೋಪಿನ ವರ್ತಮಾನದ ಬಿಕ್ಕಟ್ಟುಗಳೂ ಬಿಂಬಿತವಾಗಿವೆ.
ಮಿತವಾದ ಪದ ಬಳಕೆ, ಚುರುಕಾಗಿ ಸಾಗುವ ನಿರೂಪಣೆ ಇವುಗಳಿಂದ ಈ ಕಾದಂಬರಿಯು ವೇಗವಾಗಿ ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿದೆ.
ಒಟ್ಟಿನಲ್ಲಿ , ಬುಕರ್ ನಂತಹ ಪ್ರತಿಷ್ಟಿತ ಪ್ರಶಸ್ತಿಗೆ ಅರ್ಹವಾದ ಕಾದಂಬರಿ ಇದೆಂದು ನನಗನಿಸಿತು. ಸಾಹಿತ್ಯದ ಮಹತ್ವ ಇರುವುದೇ ವ್ಯಕ್ತಿ ಮತ್ತು ಸಮಾಜ ಇವೆರಡು ಮೂಲಭೂತ ಘಟಕಗಳ ಮುಖಾಮುಖಿಯನ್ನು ವಿವರಿಸುವುದರಲ್ಲಿ. ಸ್ಪಷ್ಟವಾಗಿ ರಾಜಕೀಯವಾದ ವಿವರಣೆಗೆ ಹೋಗದೆಯೂ ಯಾವುದೇ ಉತ್ತಮ ಸಾಹಿತ್ಯ ಕೃತಿಯು ತನ್ನ ಕಾಲಮಾನದ ತಲ್ಲಣಗಳನ್ನು ಕಟ್ಟಿಕೊಡಬಲ್ಲದು. ಅದಕ್ಕಿಂತಲೂ ಮುಖ್ಯವಾದದ್ದೆಂದರೆ ಚಿಕ್ಕಚಿಕ್ಕ ವಿಚಾರಗಳನ್ನೂ ಸೂಕ್ಷ್ಮತೆಯಿಂದ ಗಮನಿಸುವುದು ಮತ್ತು ಅರಿಯುವುದನ್ನು ಕಲಿಸಬಲ್ಲದು.
No comments :
Post a Comment