ಮೊನ್ನೆ (ನವೆಂಬರ್ 22) ಚಿಕ್ಕಮಗಳೂರಿನಲ್ಲಿ ' ಮಲ್ನಾಡ್ ಅಲ್ಟ್ರಾ' ಮ್ಯಾರಥಾನ್ ಸ್ಪರ್ಧೆ ಇತ್ತು. 50 ಕಿಮೀ ಓಟದಲ್ಲಿ ಭಾಗವಹಿಸಿ ನಿಗದಿತ ಹತ್ತು ಗಂಟೆಗಳ ಒಳಗೆ ಮುಗಿಸಿದ್ದು ಒಂದು ಒಳ್ಳೆಯ ಅನುಭವವಾಗಿತ್ತು. ಚಿಕ್ಕಮಗಳೂರಿನ ಹಸಿರು ಗುಡ್ಡಗಳಲ್ಲಿರುವ ಕಾಫಿ ತೋಟಗಳ ಒಳಗೆ ಹೆಚ್ಚಿನ ಭಾಗ ಸಾಗುವ ಈ ಓಟದ ಒಂಬತ್ತನೆ ಆವೃತ್ತಿ ಈ ವರ್ಷದ ಓಟವಾಗಿತ್ತು. ಮೊದಲ ಎರಡನ್ನು ಬಿಟ್ಟರೆ ಉಳಿದ ಎಲ್ಲ ಆವೃತ್ತಿಗಳಲ್ಲಿ ಭಾಗವಹಿಸಿದ್ದೇನೆ.
ಹಾರುಕಿ ಮುರಾಕಮಿ ಎಂಬ ಜಪಾನಿ ಲೇಖಕ ಬರೆದ What I Talk About When I Talk About Running ( ಓಡುವುದರ ಬಗ್ಗೆ ಮಾತನಾಡುವಾಗ ನಾನು ಯಾವುದರ ಬಗ್ಗೆ ಮಾತನಾಡುತ್ತೇನೆ ) ಎಂಬ ಪುಸ್ತಕ ಅವರ ಜೀವನದ ಕತೆಯೇ ಆಗಿದ್ದು ಅವರ ಓಟದ ಬಗೆಗಿನ ಪ್ರೇಮ ಮತ್ತು ಅವರ ಬರವಣಿಗೆಯ ವೃತ್ತಿ ಇವೆರಡನ್ನೂ ಕುರಿತದ್ದೇ ಆಗಿದೆ. ತಮ್ಮ 33 ನೇ ವಯಸ್ಸಿಗೆ ಓಡುವುದನ್ನು ಆರಂಭಿಸಿದ ಮುರಾಕಮಿ 2007 ರಲ್ಲಿ ಈ ಪುಸ್ತಕ ಪ್ರಕಟವಾಗುವ ವೇಳೆಗೆ ಸುಮಾರು 25 ಮ್ಯಾರಥಾನ್ ಗಳನ್ನು ಓಡಿರುತ್ತಾರೆ .
ಓಟ ಮತ್ತು ಬರವಣಿಗೆ ಇವೆರಡು ಚಟುವಟಿಕೆಗಳ ನಡುವೆ ಇರುವ ಸಂಬಂಧದ ಬಗ್ಗೆ ಗಮನಿಸುವುದು ಈ ಪುಸ್ತಕದ ಕೇಂದ್ರ ಉದ್ದೇಶವಾಗಿದೆ. ಇವೆರಡರಲ್ಲೂ ಏಕಾಗ್ರತೆ , ಶಿಸ್ತು , ಮತ್ತು ಸಹಿಷ್ಣುತೆ ಇವು ಮುಖ್ಯ ಗುಣಗಳಾಗಿರುವ ಬಗ್ಗೆ ಬರೆಯುತ್ತಾರೆ. ತಮ್ಮ ಓಟಗಳ ಬಗ್ಗೆ ಬರೆಯುತ್ತಲೇ ಅಂತರ್ಮುಖತೆ , ಏಕಾಂತ , ತನ್ನನ್ನು ತಾನು ಒಪ್ಪಿಕೊಳ್ಳುವ ಪ್ರಕ್ರಿಯೆ ಮುಂತಾದವನ್ನು ಶೋಧಿಸುತ್ತಾರೆ. ಓಡುವುದಕ್ಕೆ ಪ್ರೇರಣೆ , ಓಡುವಾಗ ದೇಹ ಮತ್ತು ಮನಸ್ಸು ಎರಡೂ ಎದುರಿಸುವ ಹೋರಾಟಗಳು, ಮತ್ತು ಒಬ್ಬಂಟಿಯಾಗಿ ದೂರದ ಓಟದಲ್ಲಿ ತೊಡಗುವಾಗ ಸಿಗುವ ಶಾಂತಿ ಇವೆಲ್ಲದರ ಬಗೆಗೆ ತುಂಬ ಸರಳವಾಗಿ ವಿವರಿಸುತ್ತಾರೆ. ಹಾಗೆಯೇ ವಯಸ್ಸು ಮಾಡುವ ಪರಿಣಾಮಗಳು, ಓಡುವ ವೇಗ ತಗ್ಗುವುದು ಅದನ್ನು ಒಪ್ಪಿಕೊಳ್ಳುವುದು ಮತ್ತು ಆ ಪ್ರಕ್ರಿಯೆಯನ್ನು ಜೀವನಕ್ಕೂ ಅನ್ವಯವಾಗುವ ದರ್ಶನದಂತೆ ಕಾಣುವುದು, ಹೀಗೆ ಓಡುವುದನ್ನು ಕುರಿತು ಮಾತನಾಡುತ್ತ ಜೀವನದ ಕುರಿತೂ ಮಾತನಾಡುತ್ತಾರೆ.
ಒಂದು ದಿನಚರಿಯ ಶೈಲಿಯಲ್ಲಿ ಸಾಗುವ ಪುಸ್ತಕವು ಲೇಖಕರ ಪ್ರವಾಸಗಳು , ನ್ಯೂಯಾರ್ಕ್ ಸಿಟಿ ಮ್ಯಾರಥಾನ್ ನಂತಹ ಓಟಗಳಿಗೆ ಅವರು ಸಿದ್ಧವಾಗುವ ಬಗೆ , ಅವರ ದೈನಂದಿನ ಅಭ್ಯಾಸಗಳು ಇತ್ಯಾದಿಗಳನ್ನೂ ಒಳಗೊಳ್ಳುತ್ತಾ ಆಸಕ್ತಿಯನ್ನು ಕಾಯುಕೊಳ್ಳುತ್ತದೆ .
ಅಲ್ಲಿಯವರೆಗೆ ಓಡುವುದನ್ನು ಒಂದು ವೃತ್ತಿನಿರತ ಕ್ರೀಡೆಯಾಗಿಯಷ್ಟೇ ಕಂಡಿದ್ದ ನನಗೆ ಇದೊಂದು ಸಾಮಾನ್ಯರಿಗೂ ಎಟುಕುವ ಆರೋಗ್ಯಪೂರ್ಣ ಹವ್ಯಾಸವೂ ಆಗಬಹುದೆಂದು ಅನಿಸತೊಡಗಿತು. ಓಡುವುದನ್ನು ಜೀವನಕ್ಕೊಂದು ರೂಪಕವಾಗಿ ಬಳಸಿಕೊಂಡು ಹಿಡಿದದ್ದನ್ನು ಸುಲಭವಾಗಿ ಕೈ ಚೆಲ್ಲದಿರುವುದು , ಸ್ವತಹ ನಿರ್ಮಿಸಿಕೊಂಡ ಮಿತಿಗಳನ್ನು ವಿಸ್ತರಿಸಿಕೊಳ್ಳುವುದು, ತನ್ನದೇ ಗುರಿಗಳನ್ನು ನಿರ್ಮಿಸಿಕೊಂಡು ಅವನ್ನು ಮೀರುವ ಸ್ಪರ್ಧೆಗಿಳಿಯುವುದು ಇವೆಲ್ಲ ಸಾಧ್ಯತೆಗಳನ್ನು ಮುರಾಕಮಿ ವಿವರಿಸುವ ರೀತಿ ತುಂಬಾ ಸ್ಫೂರ್ತಿದಾಯಕ ಅನಿಸಿತು. ಓಡುವುದನ್ನು ನಿತ್ಯಜೀವನದ ಭಾಗವಾಗಿಸಿಕೊಳ್ಳುವುದರ ಪ್ರಾಮುಖ್ಯತೆ ಮನವರಿಕೆಯಾಯಿತು.
ಪುಸ್ತಕಗಳ ಅಗತ್ಯ, ಮಹತ್ವ ಮತ್ತು ಶಕ್ತಿಯ ಬಗ್ಗೆ ಮೊದಲಿಂದಲೂ ಯಾವುದೇ ಅನುಮಾನ ಇರದಿದ್ದರೂ ಕೆಲವು ಪುಸ್ತಕಗಳು ಆಶ್ಚರ್ಯವಾಗುವಷ್ಟು ಪರಿಣಾಮ ಬೀರುತ್ತವೆ. ಈ ಪುಸ್ತಕದ ಶೀರ್ಷಿಕೆಯು ರೇಮಂಡ್ ಕಾರ್ವರ್ ಬರೆದ What we talk about When we talk about love ಎಂಬ ಸಣ್ಣಕತೆಯ ಶೀರ್ಷಿಕೆಯಿಂದ ಪ್ರಭಾವಿತವಾಗಿದೆ. ನಾನು ಓದಿರುವ ಅತ್ಯಂತ ಆಸಕ್ತಿಪೂರ್ಣ ಕತೆಗಳಲ್ಲಿ ಅದೂ ಒಂದು. ಅದರ ಬಗ್ಗೆ ಇನ್ನೊಂದು ದಿನ ಬರೆಯುವೆ.
No comments :
Post a Comment