ಮೊನ್ನೆ ನೆಟ್ ಫ್ಲಿಕ್ಸ್ ನಲ್ಲಿ ' ದಿ ಗರ್ಲ್ ಫ್ರೆಂಡ್' ' ತೆಲುಗು ಸಿನಿಮಾ ನೋಡುವಾಗ ವರ್ಷಗಳ ಹಿಂದೆ ಓದಿದ್ದ ರೇಮಂಡ್ ಕಾರ್ವರ್ ಕತೆ “ವಾಟ್ ವಿ ಟಾಕ್ ಅಬೌಟ್ ವೆನ್ ವಿ ಟಾಕ್ ಅಬೌಟ್ ಲವ್” ನೆನಪಾಯಿತು. ಈ ಚಿತ್ರ ಮತ್ತು ಆ ಕತೆ ಇವೆರಡು ಬಳಸುವ ನಿರೂಪಣಾ ತಂತ್ರ ವಿಭಿನ್ನವಾದರೂ ಎರಡರಲ್ಲೂ ಇರುವ ಒಂದು ಸಮಾನ ಸೆಲೆ ಏನೆಂದರೆ ರೊಮ್ಯಾಂಟಿಕ್ ಲವ್ ಅನ್ನು ಒಂದು ವಾಸ್ತವಿಕ ನೆಲೆಯಿಂದ ಶೋಧಿಸುವುದು.
ರಾಹುಲ್ ರವೀಂದ್ರನ್ ನಿರ್ದೇಶನದ ' ದಿ ಗರ್ಲ್‌ಫ್ರೆಂಡ್' ಮತ್ತು ರೇಮಂಡ್ ಕಾರ್ವರ್ ಅವರ “ವಾಟ್ ವಿ ಟಾಕ್ ಅಬೌಟ್ ವೆನ್ ವಿ ಟಾಕ್ ಅಬೌಟ್ ಲವ್” ಎರಡೂ ಒಂದೇ ಪ್ರಶ್ನೆಯನ್ನು ಸುತ್ತುವರೆದಿವೆ: “ಪ್ರೀತಿ” ಸಹ ಹೇಗೆ ಇನ್ನೊಬ್ಬರ ಸ್ವಂತತೆಯನ್ನು ಇಲ್ಲವಾಗಿಸುವ, ಭಾವನಾತ್ಮಕವಾಗಿ ನಿರ್ಬಂಧಿಸುವ , ಉಸಿರುಗಟ್ಟಿಸುವ ಸಂಬಂಧವಾಗಿ ಪರಿಣಮಿಸಬಹುದು ಅನ್ನುವುದನ್ನು ಈ ಎರಡೂ ಕೃತಿಗಳು ಶೋಧಿಸುತ್ತವೆ.
ದಿ ಗರ್ಲ್‌ಫ್ರೆಂಡ್ ಮುಖ್ಯವಾಗಿ ಭೂಮಾ ಎಂಬ ಸಾಹಿತ್ಯ ವಿದ್ಯಾರ್ಥಿನಿಯ, ಮತ್ತು ಆಕೆಯ ಜೀವನದಲ್ಲಿ ಪ್ರವೇಶಿಸಿ ಕ್ರಮೇಣವಾಗಿ ಸಂಪೂರ್ಣ ಆವರಿಸಿಕೊಳ್ಳುವ ಇಂಜಿನಿಯರಿಂಗ್ ವಿದ್ಯಾರ್ಥಿ ವಿಕ್ರಮ್ ಇವರ ಕತೆಯಾಗಿದೆ. ಅವನು ಆಕೆಯ ಸರಳ ಸೌಮ್ಯ ಸ್ವಭಾವದಿಂದ ಆಕರ್ಷಿತನಾಗುತ್ತಾನೆ. ಅವಳು ಭವಿಷ್ಯದಲ್ಲಿ ತನ್ನ ಹೆಂಡತಿಯಾಗಬೇಕೆಂಬ ಹಂಬಲದಿಂದಾಗಿ ಅವಳನ್ನು ಪ್ರೀತಿಸುತ್ತಾನೆ. ಸಂಬಂಧ ಮುಂದುವರೆದಂತೆ, ಅವಳ ಮೇಲಿನ ಅವನ ಭಾವನಾತ್ಮಕ ಮತ್ತು ದೈನಂದಿನ ಅವಲಂಬನೆ ಹೆಚ್ಚುತ್ತಾ ಹೋಗುತ್ತದೆ. ತನ್ನ ಅಗತ್ಯಗಳ ಪೂರೈಕೆಯ ಸಾಧನವಾಗಿ ರೂಪುಗೊಳ್ಳುತ್ತಾಳೆ, ಕೋಣೆಯನ್ನು ಸ್ವಚ್ಛಗೊಳಿಸುವುದು, ಅವನ ಊಟ ತಿಂಡಿಯ ಕಾಳಜಿ ಹೀಗೆ ತನ್ನ ತಾಯಿಯಂತೆ ‘ಚೆನ್ನಾಗಿ ನೋಡಿಕೊಳ್ಳುವುದನ್ನು’ಅವನು ನಿರೀಕ್ಷಿಸುತ್ತಾನೆ. ಇದು ಭೂಮಾಳಿಗೆ ಒಂದು ರೀತಿಯ ಉಸಿರುಗಟ್ಟಿಸುವ ಅನುಭವವಾಗಿ ಬದಲಾಗುತ್ತ ಹೋಗುತ್ತದೆ. ಅಸೂಯೆ, ನಿಯಂತ್ರಣ ಮತ್ತು ಕಾಳಜಿ ಇವುಗಳನ್ನು ‘ಪ್ರೀತಿ’ ಯ ಸಂಕೇತಗಳಾಗಿ ಭಾವಿಸುವ ಪುರುಷಸ್ವಾಮ್ಯ ದ ಮಾದರಿ ವಿಕ್ರಮ್ ನ ಪ್ರೀತಿಯಲ್ಲಿ ಕಾಣಬಹುದು. ಇದು ಅವನು ತನ್ನದೇ ಕುಟುಂಬದಲ್ಲಿ ಕಂಡ ಮಾದರಿಯ ಪ್ರೀತಿಯಾಗಿರುತ್ತದೆ. ಭೂಮಾಳಿಗೆ ಸಹ ಚಿಕ್ಕ ವಯಸ್ಸಿನಲ್ಲೇ ತಾಯಿ ತೀರಿಕೊಂಡಿದ್ದರಿಂದ ತನ್ನ ತಂದೆಯನ್ನಷ್ಟೇ ಕುಟುಂಬವಾಗಿ ಹೊಂದಿರುತ್ತಾಳೆ. ಇಂತಹ ಪರಿಸ್ಥಿತಿಯಲ್ಲಿ ಅವಳು ತೆಗೆದುಕೊಳ್ಳುವ ನಿರ್ಧಾರ, ಎದುರಿಸುವ ಮಾನಸಿಕ ಒತ್ತಡ ಚಿತ್ರದ ನಿರ್ಣಾಯಕ ಸನ್ನಿವೇಶ.
ರಶ್ಮಿಕಾ ಮಂದಣ್ಣ ಮತ್ತು ದೀಕ್ಷಿತ್ ಶೆಟ್ಟಿ ಇಬ್ಬರೂ ಭೂಮಾ ಮತ್ತು ವಿಕ್ರಮ್ ರ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಹಾಗೆಯೇ, ಸಾಹಿತ್ಯದ ಅಧ್ಯಾಪಕನ ಪಾತ್ರದಲ್ಲಿ ರಾಹುಲ್ ರವೀಂದ್ರನ್ ಪಾತ್ರ ಸಹ ಗಮನ ಸೆಳೆಯುತ್ತದೆ. ಇಂದಿನ ದಿನದಲ್ಲಿ ಸಾಹಿತ್ಯದ ಪ್ರಸ್ತುತತೆಯ ಬಗ್ಗೆ ಅವರು ವಿದ್ಯಾಥಿಗಳೊಂದಿಗೆ ಚರ್ಚಿಸುತ್ತಾರೆ.
ಅವರ ಆರಂಭಿಕ ಸಾಹಿತ್ಯ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ನೀವು ಇಂಗ್ಲಿಷ್ ಏಕೆ ಅಧ್ಯಯನ ಮಾಡುತ್ತಿದ್ದೀರಿ ಎಂದು ಕೇಳುತ್ತಾರೆ. ಕಥೆಗಳ ಮೂಲಕ ಸ್ವಂತದ ಧ್ವನಿಯನ್ನು ಅರಿಯುವ ಬಗ್ಗೆ ಮಾತನಾಡುತ್ತಾರೆ. ನಂತರದ ಇನ್ನೊಂದು ತರಗತಿಯಲ್ಲಿ ಸಂಬಂಧಗಳಲ್ಲಿ ಗೌರವ ಮತ್ತು ಒಪ್ಪಿಗೆಯ ಅಗತ್ಯವನ್ನು ಚರ್ಚಿಸುತ್ತಾರೆ. ಇದೆಲ್ಲ ಒಂದು ರೀತಿಯಲ್ಲಿ ಭೂಮಾ ಳ ಚಿಂತನೆಯನ್ನು ಪ್ರಭಾವಿಸುವಂತೆ ಅನಿಸುತ್ತದೆ.ಇನ್ನು ಕಾರ್ವರ್‌ನ ಕಥೆಯು ಪ್ರೀತಿಯ ಅನ್ವೇಷಣೆಯನ್ನು ಒಂದೇ ಮಧ್ಯಾಹ್ನಕ್ಕೆ ಸಂಕುಚಿತಗೊಳಿಸುತ್ತದೆ, ಎರಡು ಜೋಡಿಗಳು ಒಂದು ಮೇಜಿನ ಸುತ್ತಲೂ ಕುಳಿತು ಮದ್ಯಪಾನ ಮಾಡುತ್ತಾ ಪ್ರೀತಿಯ ವ್ಯಾಖ್ಯಾನ ಕ್ಕೆ ಪ್ರಯತ್ನಿಸುತ್ತಾರೆ. ಪಾತ್ರಗಳು ಪ್ರೀತಿಯನ್ನು ಪದಗಳಲ್ಲಿ ಹಿಡಿದಿಡಲು ಪ್ರಯತ್ನಿಸುವುದು ನಿರಂತರವಾಗಿ ವಿಫಲಗೊಳ್ಳುತ್ತದೆ. ರೇಮಂಡ್ ಕಾರ್ವರ್ ಕತೆಗಳ ಮುಖ್ಯಗುಣ ಸಾಮಾನ್ಯ ಜನರ ದಿನನಿತ್ಯದ ಜೀವನದ ಘಟನೆಗಳನ್ನು ತುಂಬ ವಾಸ್ತವಿಕವಾದ ದೃಷ್ಟಿಯಿಂದ ಅವಲೋಕಿಸಿ, ಅತ್ಯಂತ ಸರಳ ನೇರ ಶೈಲಿಯಲ್ಲಿ ಆದರೂ ಸೂಕ್ಷ್ಮವಾಗಿ ಹಿಡಿದಿಡುವುದು. ಜೀವನವನ್ನು ಇದು ಹೀಗೆ ಎಂದು ನಿಖರವಾಗಿ ಹೇಳುವುದರ ಕಷ್ಟ ಕಾರ್ವರ್ ಕತೆಗಳನ್ನು ಓದುವಾಗ ಅರಿವಿಗೆ ಬರುವ ಸಂಗತಿ.
ಈ ಕತೆಯಲ್ಲೂ ಹಾಗೆಯೇ. ತನ್ನ ಮಾಜಿ ಪ್ರೇಮಿ ಎಡ್ ತನ್ನನ್ನು ಹೊಡೆದು ಜೀವ ಬೆದರಿಕೆ ಹಾಕಿದರೂ ಸಹ, ತನ್ನನ್ನು ಪ್ರೀತಿಸುತ್ತಿದ್ದ ಎಂದು ಟೆರ್ರಿ ಹೇಳುತ್ತಾಳೆ. ಆದರೆ ಅವಳ ಪ್ರಸ್ತುತ ಸಂಗಾತಿ ಮೆಲ್, ಇದು ಪ್ರೀತಿಯಲ್ಲ ಎಂದು ಒತ್ತಿ ಹೇಳುತ್ತಾನೆ. ವೃತ್ತಿಯಲ್ಲಿ ಕಾರ್ಡಿಯಾಲಜಿಸ್ಟ್ ಆಗಿರುವ ಮೆಲ್ ತನ್ನ ವೃತ್ತಿ ಅನುಭವದ ಅನುಭವಗಳನ್ನೂ ಆಧರಿಸಿ ಪ್ರೀತಿಯ ವ್ಯಾಖ್ಯಾನಕ್ಕೆ ಪ್ರಯತ್ನಿಸುತ್ತಾನೆ.
ಕಾರ್ವರ್ ಯಾವುದೇ ಸುಲಭವಾದ ವ್ಯಾಖ್ಯಾನವನ್ನು ಮುಂದಿಡುವುದಿಲ್ಲ. ಪ್ರೀತಿಯು ಮೃದುತ್ವ ಮತ್ತು ಹಾನಿ ಎರಡನ್ನೂ ಒಳಗೊಂಡಿರುವುದರ ಬಗ್ಗೆ ಮತ್ತು ಯಾವುದೇ ಒಂದು ನಿಖರವಾದ ಪರಿಭಾಷೆಗೆ ಅದು ಸಿಗದಿರುವ ಬಗ್ಗೆ ಈ ಕತೆಯಲ್ಲಿ ಅನುಭವವಾಗುತ್ತದೆ. .
‘ದಿ ಗರ್ಲ್ ಫ್ರೆಂಡ್ ‘ ಮತ್ತು ‘ವಾಟ್ ವಿ ಟಾಕ್ ಎಬೌಟ್’ ಎರಡೂ ಕೃತಿಗಳು ಲಿಂಗ ಆಧಾರಿತ ನಿರೀಕ್ಷೆಗಳು ಪ್ರೀತಿ ಎಂದರೇನು ಎಂಬುದರ ಬಗ್ಗೆ ಜನರ ಅರ್ಥವನ್ನು ಹೇಗೆ ಪ್ರಭಾವಿಸುತ್ತವೆ ಎಂಬುದನ್ನು ಎತ್ತಿ ತೋರಿಸುತ್ತವೆ. ಆರೋಗ್ಯಕರ ಪ್ರೀತಿಯು ಇಬ್ಬರೂ ಪಾಲುದಾರರನ್ನು ಪೂರ್ಣ ವ್ಯಕ್ತಿಗಳಾಗಿ ಪರಿಗಣಿಸುತ್ತದೆ, ತುಂಬಬೇಕಾದ ಸಾಂಪ್ರದಾಯಿಕ ಪಾತ್ರಗಳಾಗಿ ಅಲ್ಲ. ಅಲ್ಲಿ ಸಮಾನತೆಯಿರುತ್ತದೆ. ಪರಸ್ಪರರ ಗಡಿಗಳು ಮತ್ತು ಮಹತ್ವಾಕಾಂಕ್ಷೆಗಳಿಗೆ ನಿಜವಾದ ಗೌರವ ಇರುತ್ತದೆ. ಪ್ರೀತಿ ಸ್ವಾಮ್ಯವಾದಾಗ ಹಾನಿಕಾರಕವಾಗುತ್ತದೆ. ಬಹುಶಃ ಇದೇ ಈ ಎರಡು ಕೃತಿಗಳ ಸಂದೇಶ.
No comments :
Post a Comment