Monday, October 13, 2025

ಧಡಕ್ 2 - ಬಾಲಿವುಡ್ ನಲ್ಲೊಂದು ಡಿಫರೆಂಟ್ ಸಿನಿಮಾ

ಭಾರತೀಯ ಸಿನಿಮಾಗಳಲ್ಲಿ, ವಿಶೇಷವಾಗಿ ಹಿಂದಿ ಚಲನಚಿತ್ರಗಳಲ್ಲಿ, ಜಾತಿ (caste) ಯಂತಹ ಗಂಭೀರ ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸುವುದು ಬಹಳ ಕಡಿಮೆ. ಸಮಕಾಲೀನ ಹಿಂದಿ ಸಿನಿಮಾಗಳನ್ನು ಮಾತ್ರ ನೋಡಿದರೆ, ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆ "ಮುಗಿದುಹೋಗಿದೆ" ಎಂದುಕೊಳ್ಳುವಷ್ಟು ಅದರ ಅವಗಣನೆ ಕಾಣುತ್ತದೆ. "ಮಸಾನ್" ನಂತಹ ಚಿತ್ರ ಬಂದು ಹೋಗಿ ಹತ್ತು ವರ್ಷಗಳ ಕಾಲವೇ ಆಗಿದೆ. ಇದೀಗ ಮತ್ತೊಮ್ಮೆ ಅದೇ ನೀರಜ್ ಗೈವಾನ್  ಅವರ ನಿರ್ದೇಶನದ  "ಹೋಂಬೌನ್ಡ್ " ಎಂಬ ಚಿತ್ರ ಸಹ ಜಾತಿ ಸಮಸ್ಯೆಯ ಕುರಿತಾಗಿದ್ದು ಕೆಲವು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನೂ ಗಳಿಸಿ ಇದೀಗ ಚಿತ್ರ ಮಂದಿರಗಳಲ್ಲಿ ಬಂದಿದೆ. ಕೆಲವೇ ದಿನಗಳಲ್ಲಿ ಓಟಿಟಿ ಗೂ ಬರಲಿದೆ. 

ಈಗ ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಆಗುತ್ತಿರುವ "ಧಡಕ್ 2" ಚಿತ್ರವು  ಭಾರತೀಯ ಸಮಾಜದ ಅತಿರೇಕದ ಜಾತಿ ವಿಭಜಿತ ಮನಸ್ಥಿತಿಯ ವಿಕಾರವನ್ನು ತೆರೆಯ ಮೇಲೆ ತೋರಿಸುವ ಪ್ರಯತ್ನ ಮಾಡಿದೆ.  ಬಾಲಿವುಡ್ ನ ಅತಿರಂಜಿತ ಕಥಾವಸ್ತುಗಳ ಚಿತ್ರಗಳ ನಡುವೆ, ಅಂತರ-ಜಾತಿ ಸಂಬಂಧದ  ಈ ಚಿತ್ರವು  ವಾಸ್ತವಿಕ  ಚಿತ್ರವಾಗಿ ಮೂಡಿಬಂದಿದೆ. ಶಜಿಯಾ ಇಕ್ಬಾಲ್ ಅವರ ಚೊಚ್ಚಲ ನಿರ್ದೇಶನದ  ಈ ಚಿತ್ರವು 2018 ರ ತಮಿಳು ಭಾಷೆಯ ಚಲನಚಿತ್ರವಾದ Pariyerum Perumal (ಪರಿಯೇರುಮ್ ಪೆರುಮಾಳ್) ನ ರಿಮೇಕ್ ಆಗಿದೆ, ಇದು ಜಾತಿ ಹಿಂಸಾಚಾರ ಮತ್ತು ಪೂರ್ವಾಗ್ರಹದ ಕಥೆಯನ್ನು ತಮಿಳುನಾಡಿನಿಂದ ಹಿಂದಿಯ  ಹೃದಯಭಾಗಕ್ಕೆ ಕೊಂಡೊಯ್ದಿದೆ.

ಕಾನೂನು ಕಾಲೇಜಿನಲ್ಲಿ ಕಲಿಯುತ್ತಿರುವ ಮೇಲ್ಜಾತಿಯ  ಮಹಿಳೆ ವಿಧಿಶಾ ಭಾರದ್ವಾಜ್ ಮತ್ತು ದಲಿತ ನೀಲೇಶ್ ಅಹಿರ್ವಾರ್ ನಡುವಿನ ಬೆಳೆಯುತ್ತಿರುವ ಸಂಬಂಧವನ್ನು ಚಿತ್ರ ಅನ್ವೇಷಿಸುತ್ತದೆ. ನೀಲೇಶ್ ಮತ್ತು ವಿಧಿ ಒಂದು ಮದುವೆಯಲ್ಲಿ ಭೇಟಿಯಾಗುತ್ತಾರೆ. ನೀಲೇಶ್  ಬ್ಯಾಂಡ್‌ ಒಂದರಲ್ಲಿ ಡ್ರಮ್ಮರ್ ಆಗಿರುತ್ತಾನೆ.  ಕಾಲೇಜಿನಲ್ಲಿ, ನೀಲೇಶ್ ಭಾರತದ ಮೀಸಲಾತಿ  ವ್ಯವಸ್ಥೆಯ ಮೂಲಕ ತನ್ನ ಸೀಟು ಪಡೆದಿರುತ್ತಾನೆ. ಮತ್ತು ಆ  ಕಾರಣಕ್ಕಾಗಿ ತನ್ನ ಸುತ್ತಲಿರುವ ಹೆಚ್ಚಿನ ಮೇಲ್ಜಾತಿಯ ಸಹಪಾಠಿಗಳಿಂದ ಅವಮಾನವನ್ನು ಎದುರಿಸುತ್ತಿರುತ್ತಾನೆ.  ಸಂಯಮದಿಂದ ವರ್ತಿಸುವ  ನೀಲೇಶ್ ನ  ಸ್ನೇಹವನ್ನು  ಬಯಸಿ ವಿಧಿ ಅವನನ್ನು ಹಿಂಬಾಲಿಸುತ್ತಾಳೆ.

ನೀಲೇಶ್ ಮತ್ತು ವಿಧಿ ಇಬ್ಬರ ನಿಕಟತೆಯು ವಿಧಿಯ ಕುಟುಂಬದ ಕೋಪಕ್ಕೆ ಕಾರಣವಾಗುತ್ತದೆ. ವಿಧಿ ತನ್ನ ಕುಟುಂಬದ ಆಳವಾದ ಪೂರ್ವಾಗ್ರಹದ ಬಗ್ಗೆ ಅರಿವಿಲ್ಲದೆ ನೀಲೇಶ್‌ನನ್ನು ಕುಟುಂಬದ ಮದುವೆಗೆ ಆಹ್ವಾನಿಸುತ್ತಾಳೆ, ಅಲ್ಲಿ ಆಕೆಯ ಕುಟುಂಬವು ನೀಲೇಶ್‌ನನ್ನು ಅವಮಾನಿಸಿ ತೀವ್ರವಾಗಿ ಥಳಿಸುತ್ತದೆ.

ಈ ಪ್ರೀತಿಯ ಸಂಬಂಧವು ನೀಲೇಶ್‌ಗೆ ಅಪಾಯಕಾರಿಯಾಗಿರುತ್ತದೆ. ಮೇಲ್ನೋಟಕ್ಕೆ ಅತ್ಯಾಧುನಿಕವಾಗಿ ಕಂಡರೂ ವಿಧಿ ಯ  ಕುಟುಂಬದವರು ಈ  ಅಂತರ-ಜಾತಿ ಸಂಬಂಧದಿಂದ ಕುಟುಂಬದ ಹೆಸರಿಗೆ ಅಪಮಾನವಾಗಬಹುದು ಎಂಬ ಭಯವನ್ನು ಹೊಂದಿರುತ್ತಾರೆ. ಇದು  ಸೃಷ್ಟಿಸುವ ಸ್ಫೋಟಕ  ಸನ್ನಿವೇಶವನ್ನು ಚಿತ್ರಿಸಿರುವುದು  ಪರಿಣಾಮಕಾರಿಯಾಗಿದೆ. ಸಂಭಾಷಣೆಗಳು ಸಹ ಚೆನ್ನಾಗಿವೆ. ಚಿತ್ರದ ಅಂತ್ಯ ಸಹ ಸ್ವಲ್ಪ ವಿಭಿನ್ನವಾಗಿದೆ. 

ಚಿತ್ರದಲ್ಲಿ ಒಂದೆಡೆ ವಿಧಿ ಹೇಳುತ್ತಾಳೆ - 'ಇದೆಲ್ಲ (ಜಾತಿವಾದ) ಮುಗಿದು ಹೋದ ವಿಚಾರ ಎಂದು ನಾನೆಣಿಸಿದ್ದೆ'. ಅದಕ್ಕೆ ನೀಲೇಶ್‌ ಹೇಳುತ್ತಾನೆ- "ಅದನ್ನು ಅನುಭವಿಸದವರಿಗೆ ಹಾಗೆ ಅನಿಸುತ್ತದೆ". ಚಿತ್ರೋದ್ಯಮವನ್ನು ನಿಯಂತ್ರಿಸುವವರೂ ಜಾತಿವಾದದ ಸಂಕಷ್ಟವನ್ನು ಸ್ವಯಂ ಅನುಭವಿಸದ ಕಾರಣಕ್ಕೇ  ಇಂತಹ ಕಥಾವಸ್ತುಗಳ ಆಯ್ಕೆಯಲ್ಲಿ ಹಿಂಜರಿಯುತ್ತಿರಬಹುದೇನೋ.   ಅಥವಾ ಜಾತಿ ವ್ಯವಸ್ಥೆಯಲ್ಲಿ ಮೇಲಿರುವವರ  ಅಸಮಾಧಾನಕ್ಕೆ ಗುರಿಯಾಗುವ ಭಯವೂ ಇರಬಹುದೇನೋ. 

ಜಾತಿವಾದವು ಸ್ವಾತಂತ್ರ್ಯ ಬಂದ ಮೇಲಿನ ಏಳು ದಶಕಗಳ ನಂತರವೂ ಹಾಗೆಯೇ ಮುಂದುವರೆದಿದೆ. ಕನ್ನಡದ ವಿಶಿಷ್ಟ ಲೇಖಕ, ಪತ್ರಕರ್ತ ಲಂಕೇಶ್ ಅವರು ಜಾತೀಯತೆಯ ಬಗ್ಗೆ ತಮ್ಮ ಒಂದು ಲೇಖನದಲ್ಲಿ ಹೀಗೆ ಬರೆಯುತ್ತಾರೆ- "ನಮ್ಮ  ದೇಶದ ಜಾತೀಯತೆಯ ಜೊತೆಗೆ ಎಲ್ಲ ದೇಶಗಳ ಜಾತೀಯತೆಯ ಸಣ್ಣತನ, ಕೇಡಿತನ, ನನ್ನನ್ನು ಚಿಂತೆಗೀಡುಮಾಡಿದೆ. ನಾವು ಬೆಳೆದಂತೆಲ್ಲ, ಸುಶಿಕ್ಷಿತರಾದಂತೆಲ್ಲ ಯಾಕೆ ಮಾನವೀಯತೆ, ಜಾತ್ಯತೀತತೆ, ವಿನೋದ, ವ್ಯಾಮೋಹ ವೃದ್ಧಿಯಾಗುವುದಿಲ್ಲ ಎಂದು ಕೇಳಿಕೊಳ್ಳುತ್ತಿದ್ದೇನೆ..." ಅವರು ಇದನ್ನು ಬರೆದಿದ್ದು 1995 ರಲ್ಲಿ. ನಂತರದ ಈ ಮೂವತ್ತು ವರ್ಷಗಳಲ್ಲಿ ಬದಲಾವಣೆಯೇನೂ ಆದಂತೆ ಅನಿಸುವುದಿಲ್ಲ. 

ಅದೇನೇ ಇರಲಿ, ಕೇವಲ ಸಿದ್ಧ ಸೂತ್ರಗಳನ್ನು ಅವಲಂಬಿಸಿದ ಚಿತ್ರಗಳನ್ನೇ ನಿರ್ಮಿಸದೆ, ಸಾಮಾಜಿಕ ಪ್ರಸ್ತುತತೆಯಿರುವ ಕಥೆಗಳತ್ತಲೂ ಬಾಲಿವುಡ್ ಗಮನ ಹರಿಸುತ್ತಿರುವುದು ಉತ್ತಮ ಬೆಳವಣಿಗೆ. 


Tuesday, October 07, 2025

ಕಥೆ ಮತ್ತು ವಾಸ್ತವ, ಪುರಾಣ ಮತ್ತು ಚರಿತ್ರೆ


"ಈ ದೇಶದಲ್ಲಿ ಯಾರನ್ನು ಕೇಳಿದರೂ ಕಥೆ ಹೇಳುತ್ತಾರೆ. ಅದೂ ಆ ಕಥೆ ನಡೆಯುವಾಗ ಎದುರಿಗೆ ಇದ್ದೆ ಅನ್ನುವಂತೆ ಹೇಳುತ್ತಾರೆ. ನಮಗೆ ಕಥೆ ಮತ್ತು ವಾಸ್ತವ, ಪುರಾಣ ಮತ್ತು ಚರಿತ್ರೆಯ ನಡುವಿನ ವ್ಯತ್ಯಾಸ ಗೊತ್ತಿಲ್ಲ. ಹಾಗಾಗಿ ಕೆಲವು ಕಥೆಗಳು ಸಂವಿಧಾನದ ಜಾಗ ಆಕ್ರಮಿಸಿಕೊಳ್ಳುತ್ತಿವೆ."  

"ಈ ನೆಲದಲ್ಲಿ ಕಥೆಗಳನ್ನು ಹುಟ್ಟಿಸಿ, ಸಾಕಿ, ಅವು ಬಲಿಷ್ಠವಾದ ಮೇಲೆ ಸಾಮಾನ್ಯರ ಮೇಲೆ ಛೂ ಬಿಡುವ ತಂಡಗಳೇ ಇವೆ." 

ಸೆ. ೩೦ರಂದು 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ನಟರಾಜ ಬೂದಾಳು ಅವರ  "ನಮ್ಮನ್ನು ಆಳುತ್ತಿರುವ ಕಥೆಗಳು " ಎಂಬ ಲೇಖನವು  ಕಥಾ ರಾಜಕಾರಣದ (Story Politics) ಕುರಿತು ವಿಶ್ಲೇಷಣೆಯನ್ನು ನೀಡುತ್ತದೆ. ಇದು ಅತ್ಯಂತ ಗಂಭೀರ ವಿಚಾರವಾಗಿದೆ. 

ಕಥೆಗಳನ್ನು ಕಥೆಗಳಾಗಿ ಓದುವ, ಅಥವಾ ಕೇಳುವ, ಪರಿಜ್ಞಾನ ಇದ್ದರೆ,  ಕಲ್ಪಿತ  ಕಥೆಗಳು ಉಪಯುಕ್ತವೇ ಆಗುತ್ತವೆ. ಅದಿಲ್ಲದಿದ್ದಾಗ ಕಥೆಗಳು ದುಷ್ಟರ ರಾಜಕೀಯ ದಾಳಗಳಾಗುತ್ತವೆ. ಇದು  ವಿಷಾದದ ಸಂಗತಿ. ಯಾಕೆಂದರೆ ಕಲ್ಪಿತ ಕಥೆಗಳು, ಅವು ಪುರಾಣವೇ ಆಗಲಿ, ಜಾನಪದವೇ ಆಗಲಿ, ಒಳ್ಳೆಯದನ್ನು ಉದ್ದೀಪನಗೊಳಿಸುವ ಉದ್ದೇಶ ಹೊಂದಿರುತ್ತವೆ. ಅಹಂಕಾರವನ್ನು ತೊಡೆಯುವುದು, ಸಹಾನುಭೂತಿಯನ್ನು ಬೆಳೆಸುವುದು, ನಿರಾಶೆಯ ಸ್ಥಿತಿಯಲ್ಲಿರುವಾಗ ಆಶಾಭಾವನೆಯನ್ನು ಮೂಡಿಸುವುದು, ಇತ್ಯಾದಿ.  ಆದರೆ ಅವನ್ನು ವಾಸ್ತವವೆಂದು ನಂಬುವುದು ಅಪಾಯಕ್ಕೆ ದಾರಿ.

 ಒಂದೆಡೆ ಪುಸ್ತಕ ಓದುವವರು ಕಡಿಮೆಯಾಗುತ್ತಿದ್ದರೆ, ಇನ್ನೊಂದೆಡೆ "ಕಥೆ"ಗಳನ್ನು ನಂಬುವವರು ಹೆಚ್ಚುತ್ತಿದ್ದಾರೆ. ಇದು ಅಮೆರಿಕದಂತಹ ದೇಶಗಳನ್ನೂ ಬಿಟ್ಟಿಲ್ಲ. ಜಾರ್ಜ್ ಆರ್ ಆರ್ ಮಾರ್ಟಿನ್ ಬರೆದ "ಗೇಮ್ ಆಫ್ ಥ್ರೋನ್ಸ್ " ನಲ್ಲಿ ಬರುವ ಈ ಸಾಲುಗಳನ್ನು ನೋಡಿ- There is nothing in the world more powerful than a good story. Nothing can stop it. No enemy can defeat it. (ಕಥೆಗಿಂತ ಶಕ್ತಿಶಾಲಿಯಾಗಿರುವುದು ಈ ಜಗತ್ತಿನಲ್ಲಿ ಬೇರೆ ಏನೂ ಇಲ್ಲ. ಯಾವುದೂ ಇದನ್ನು ತಡೆಯಲಾಗದು. ಯಾವ ಶತ್ರುವೂ ಇದನ್ನು ಸೋಲಿಸಲಾಗದು. ) ಟ್ರಂಪ್ ತರಹದ ಅವಿವೇಕಿಗಳು ರಾಷ್ಟ್ರದ ಗದ್ದುಗೆಗೆ ಬರುವುದು ಸುಳ್ಳು"ಕಥೆ"ಗಳ ಶಕ್ತಿಗೆ ಸಾಕ್ಷಿ.


 

Monday, September 22, 2025

ಚೀನಾ ಎಂಬ ಒಗಟು

ಈ ತಿಂಗಳ ಆರಂಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಾತುಕತೆ ನಡೆಸಿದರು. ಉಭಯ ನಾಯಕರು ದ್ವಿಪಕ್ಷೀಯ ವ್ಯಾಪಾರ ಮತ್ತು ವಾಯು ಸಂಪರ್ಕವನ್ನು ಪುನರಾರಂಭಿಸಲು ನಿರ್ಧರಿಸಿದರು.

ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಎರಡು ನೆರೆಹೊರೆಯವರ ನಡುವಿನ ಮಾರಣಾಂತಿಕ ಗಡಿ ಘರ್ಷಣೆಯ ಐದು ವರ್ಷಗಳ ನಂತರ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ “ಭಾರತವು ಗಡಿ ಸಮಸ್ಯೆಗಳನ್ನು ಕಡೆಗಣಿಸಬೇಕೇ?“ ಎಂಬ ವಿಷಯದ ಕುರಿತು ಹಿಂದು ಪತ್ರಿಕೆಯ ‘ಇನ್ ಫೋಕಸ್’ ಪಾಡ್ಕಾಸ್ಟ್ನಲ್ಲಿ ಒಂದು ಆಸಕ್ತಿಕರ ಸಂವಾದ ಇತ್ತು.

ಕಳೆದ ಎಪ್ಪತ್ತೈದು ವರ್ಷಗಳ ಭಾರತ-ಚೀನಾ ಸಂಬಂಧವನ್ನು ಅವಲೋಕಿಸುವುದಾದರೆ, ಈ ಎರಡು ರಾಷ್ಟ್ರಗಳ ನಡುವಿನ ಸಂಬಂಧ ಹಲವು ಏರಿಳಿತಗಳನ್ನು ಕಂಡಿದೆ. ನಡುನಡುವೆ ಕೆಲವೊಮ್ಮೆ ಉಭಯ ದೇಶಗಳ ನಾಯಕರ ನಡುವೆ ಸಾಮಾನ್ಯ ರೀತಿಯ ಸಂವಾದ ಸಂಪರ್ಕಗಳು ಕಂಡು ಬಂದಿದ್ದರೂ ಒಂದು ಬಗೆಯ ಸುಪ್ತ ಅಪನಂಬಿಕೆ ಅನುಮಾನಗಳು ಎರಡೂ ದೇಶದ ಜನರಲ್ಲೂ ಮುಂದುವರಿದೇ ಇದೆ.

ಚೀನಾ ಕುರಿತು ನನ್ನ ಅಭಿಪ್ರಾಯ ರೂಪಿಸುವಲ್ಲಿ ನಾನು ಓದಿದ ಕೆಲವು ಪುಸ್ತಕಗಳು ಮುಖ್ಯ ಪಾತ್ರ ವಹಿಸಿವೆ ಎನ್ನಬಹುದು.

INDIA AFTER GANDHI (2007)

ಇತಿಹಾಸಕಾರ ರಾಮಚಂದ್ರ ಗುಹಾ ಅವರು ಬರೆದ ಈ ಕೃತಿಯು ಎರಡು ದೇಶಗಳೂ ಆರಂಭದಿಂದಲೂ ಹೊಂದಿದ್ದ ಸಂಬಂಧದ ವಿವರಗಳನ್ನು ಒದಗಿಸುತ್ತದೆ. ಹಾಗೆಯೇ ಮುಂದಿನ ದಶಕಗಳಲ್ಲಿ ಈ ಎರಡೂ ನೆರೆಹೊರೆ ದೇಶಗಳಲ್ಲಿ ಏರ್ಪಟ್ಟ ಗಡಿ ವಿವಾದದ ವಿವರಗಳನ್ನೂ ಒದಗಿಸುತ್ತದೆ.

ಐತಿಹಾಸಿಕವಾಗಿ ಭಾರತ ಮತ್ತು ಚೀನಾ ಸುದೀರ್ಘವಾದ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಹೊಂದಿದ್ದವು. ಭಾರತವು 1947ರಲ್ಲಿ ಬ್ರಿಟಿಷರಿಂದ ಸ್ವತಂತ್ರವಾದ ಬೆನ್ನಲ್ಲೇ ಚೀನಾದಲ್ಲಿ 1949 ರಲ್ಲಿ ಕಮ್ಯುನಿಸ್ಟರು ಅಧಿಕಾರಕ್ಕೆ ಬಂದರು.

ಅಕ್ಟೋಬರ್ 1950 ರಲ್ಲಿ, ಚೀನಾ ಟಿಬೆಟ್ ಅನ್ನು ಆಕ್ರಮಿಸಿ ಸೇರಿಸಿಕೊಂಡಿತು. ಭಾರತವು ಟಿಬೆಟ್‌ನೊಂದಿಗೆ ನಿಕಟ ಸಾಂಸ್ಕೃತಿಕ ಮತ್ತು ಆರ್ಥಿಕ ಸಂಬಂಧಗಳನ್ನು ಹೊಂದಿತ್ತು, ಆದರೆ ಹೊಸದಾಗಿ ಸ್ವತಂತ್ರಗೊಂಡ ಭಾರತವು ಟಿಬೆಟ್ ಪರವಾಗಿ ಯುದ್ಧ ಮಾಡಲು ಸಾಧ್ಯವಿರಲಿಲ್ಲ.

1954 ರಲ್ಲಿ, ಭಾರತವು ಟಿಬೆಟ್ ಅನ್ನು ಚೀನಾದ ಭಾಗವೆಂದು ಅಧಿಕೃತವಾಗಿ ಗುರುತಿಸಿತು ಮತ್ತು ಪರಸ್ಪರ ಆಕ್ರಮಣಶೀಲವಲ್ಲದ ಮತ್ತು ಪ್ರಾದೇಶಿಕ ಸಮಗ್ರತೆಗೆ ಪರಸ್ಪರ ಗೌರವ ಸೇರಿದಂತೆ ಐದು ತತ್ವಗಳ ಶಾಂತಿಯುತ ಸಹಬಾಳ್ವೆಗೆ (ಪಂಚಶೀಲ) ಸಹಿ ಹಾಕಿತು.

ಆದಾಗ್ಯೂ, ಭಾರತೀಯ-ಚೀನೀ ಗಡಿ ವಿವಾದಗಳು ಉದ್ಭವಿಸಿದವು. ಪೂರ್ವದಲ್ಲಿ, ಮ್ಯಾಕ್ಮೋಹನ್ ಲೈನ್ ಗಡಿಯನ್ನು ವ್ಯಾಖ್ಯಾನಿಸಿದರೆ, ಚೀನೀಯರು ಈ ಗೆರೆಯನ್ನು ಸಾಮ್ರಾಜ್ಯಶಾಹಿ ಹೇರಿಕೆ ಎಂದು ಪರಿಗಣಿಸಿದರು.

ಮಾರ್ಚ್ 1959 ರಲ್ಲಿ, ಚೀನೀ ಆಕ್ರಮಣಕಾರರ ವಿರುದ್ಧ ಟಿಬೆಟ್‌ನಲ್ಲಿ ದಂಗೆ ನಡೆದ ನಂತರ, ದಲೈ ಲಾಮ ಅವರು ಭಾರತಕ್ಕೆ ಪಲಾಯನ ಮಾಡಿ ರಾಜಕೀಯ ಆಶ್ರಯ ಪಡೆದರು. ಈ ಘಟನೆಯು ಭಾರತ ಮತ್ತು ಚೀನಾ ನಡುವಿನ ಸಂಬಂಧಗಳನ್ನು ಇನ್ನಷ್ಟು ಹದಗೆಡಿಸಿತು.

1959 ರಲ್ಲಿ ಗಡಿ ಘರ್ಷಣೆಗಳು (ಲಾಂಗ್ಜು ಮತ್ತು ಕೊಂಗ್ಕಾ ಪಾಸ್) ನಡೆದ ನಂತರ, ನೆಹರೂ ಸರ್ಕಾರವು ಚೀನಾದೊಂದಿಗಿನ ಪತ್ರವ್ಯವಹಾರವನ್ನು ಒಳಗೊಂಡ ಶ್ವೇತಪತ್ರವನ್ನು (White Paper) ಬಿಡುಗಡೆ ಮಾಡಿತು, ಇದು ಚೀನಾದ ಪ್ರಾದೇಶಿಕ ಹಕ್ಕುಗಳ ವ್ಯಾಪ್ತಿಯ ಬಗ್ಗೆ ಭಾರತೀಯ ಸಂಸತ್ತಿನಲ್ಲಿ ಆಕ್ರೋಶಕ್ಕೆ ಕಾರಣವಾಯಿತು.

ಏಪ್ರಿಲ್ 1960 ರಲ್ಲಿ, ಚೌ ಎನ್-ಲೈ ದೆಹಲಿಯಲ್ಲಿ ನೆಹರೂ ಅವರನ್ನು ಭೇಟಿಯಾದರು. ಚೌ ಅವರು ಗಡಿ ವಿವಾದವನ್ನು ಕೊನೆಗೊಳಿಸಲು ಒಂದು ರೀತಿಯ “ಸಂಧಾನ ಸೂತ್ರ” (compromise) ವನ್ನು ಪ್ರಸ್ತಾಪಿಸಿದರು, ಇದರ ಅಡಿಯಲ್ಲಿ ಭಾರತವು ಪೂರ್ವದಲ್ಲಿ (ಮ್ಯಾಕ್ಮೋಹನ್ ಲೈನ್ ದಕ್ಷಿಣದಲ್ಲಿ, ಟವಾಂಗ್ ಸೇರಿದಂತೆ) ತನ್ನ ನಿಯಂತ್ರಣವನ್ನು ಉಳಿಸಿಕೊಳ್ಳಬೇಕು ಮತ್ತು ಚೀನಾವು ಪಶ್ಚಿಮದಲ್ಲಿ (ಅಕ್ಸಾಯ್ ಚಿನ್ ಸೇರಿದಂತೆ, ಅಲ್ಲಿ ರಸ್ತೆ ನಿರ್ಮಿಸಲಾಗಿತ್ತು) ತನ್ನ ನಿಯಂತ್ರಣವನ್ನು ಉಳಿಸಿಕೊಳ್ಳಬೇಕು. ಚೌ ಈ ಮಾರ್ಗವನ್ನು ಟಿಬೆಟ್‌ಗೆ ಪ್ರವೇಶಿಸಲು ಅಗತ್ಯವೆಂದು ಪರಿಗಣಿಸಿದರು.

ನೆಹರೂ ಅವರು ಈ ಪ್ರಸ್ತಾಪವನ್ನು ತಿರಸ್ಕರಿಸಿದರು, ಏಕೆಂದರೆ ಈ ಪ್ರಸ್ತುತ ‘ಯಥಾಸ್ಥಿತಿ’ (status quo) ಯು ಚೀನಾ ಅಕ್ರಮವಾಗಿ ಮತ್ತು ಕದ್ದು ಪಡೆದ ಲಾಭಗಳನ್ನು ನ್ಯಾಯಸಮ್ಮತಗೊಳಿಸುತ್ತದೆ ಎಂದು ಅವರು ವಾದಿಸಿದರು. ಮಾತುಕತೆಗಳು ವಿಫಲವಾದವು.

ಭಾರತವು ಬ್ರಿಟಿಷ್ ಸಾಮ್ರಾಜ್ಯದ ಪರಂಪರೆಯನ್ನು ಸಮರ್ಥಿಸಿದರೆ, ಚೀನಾವು 1949 ರ ಮೊದಲು ಟಿಬೆಟ್ ಅಥವಾ ಚೀನಾ ಪರವಾಗಿ ಮಾತುಕತೆ ನಡೆಸಿದ ಯಾವುದೇ ಒಪ್ಪಂದಗಳನ್ನು ಸ್ವೀಕರಿಸಲು ನಿರಾಕರಿಸಿತು.

1962 ರ ಜುಲೈ ಮೂರನೇ ವಾರದಲ್ಲಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನೀ ಪಡೆಗಳ ನಡುವೆ ಘರ್ಷಣೆಗಳು ಸಂಭವಿಸಿದವು. ಭಾರತದ ದೌರ್ಬಲ್ಯಗಳು ಬಹಿರಂಗವಾದ ನಂತರ ಭಾರತವು ಪಾಶ್ಚಿಮಾತ್ಯ ರಾಷ್ಟ್ರಗಳಿಂದ (ಬ್ರಿಟನ್, ಅಮೆರಿಕ, ಫ್ರಾನ್ಸ್ ಮತ್ತು ಕೆನಡಾ) ಶಸ್ತ್ರಾಸ್ತ್ರ ಸಹಾಯವನ್ನು ಕೋರಿತು ಮತ್ತು ಪಡೆಯಿತು. ನವೆಂಬರ್ 22 ರಂದು ಚೀನಿಯರು ಏಕಪಕ್ಷೀಯ ಕದನ ವಿರಾಮವನ್ನು ಘೋಷಿಸಿ, ಈಶಾನ್ಯ ಗಡಿ ಪ್ರದೇಶದಲ್ಲಿ (NEFA) ಮೆಕ್‌ಮೋಹನ್ ಲೈನ್‌ನ ಉತ್ತರಕ್ಕೆ ಹಿಂತೆಗೆದುಕೊಂಡರು. ಈ ಯುದ್ಧವು ಭಾರತಕ್ಕೆ ಭಾರಿ ಸೋಲು ಎನಿಸಿತು.

ಅಲ್ಲಿಂದ ಈಚೆಗೆ ಗಡಿ ವಿವಾದವು ಎರಡೂ ರಾಷ್ಟ್ರಗಳ ಸಂಬಂಧದಲ್ಲಿ ಒಂದು ನಿರಂತರ ಉಪಸ್ಥಿತಿಯಾಗಿ ಉಳಿದಿದೆ.

SMOKE AND MIRRORS (2008)

ಪಲ್ಲವಿ ಅಯ್ಯರ್ ಅವರು ಬರೆದ ಈ ಕೃತಿಯು ಆತ್ಮಕತೆ, ಪ್ರವಾಸಿ ಕಥನ, ರಾಜಕೀಯ ವಿಶ್ಲೇಷಣೆ ಈ ಎಲ್ಲ ಅಂಶಗಳನ್ನೂ ಒಳಗೊಂಡಿದ್ದು ಚೀನಾ ಬಗ್ಗೆ ಹೆಚ್ಚೇನೂ ಗೊತ್ತೇ ಇರದ ಭಾರತೀಯರಿಗೆ ಆ ದೇಶದ ಮತ್ತು ಜನರನ್ನು ಪರಿಚಯಿಸಲು ಸಹಕಾರಿಯಾಗಿದೆ. ಈ ಕೃತಿಯ ಬಗ್ಗೆ ನನ್ನ ಅನಿಸಿಕೆಗಳನ್ನು ಬ್ಲಾಗಿನಲ್ಲಿ ದಾಖಲಿಸಿದ್ದೇನೆ.

INDIA AND ASIAN GEOPOLITICS (2021)

ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ಅವರು ರಚಿಸಿದ ಈ ಕೃತಿಯು ಭಾರತದ ಭೌಗೋಳಿಕ ರಾಜಕೀಯ ಸನ್ನಿವೇಶವನ್ನು ವಿಶ್ಲೇಷಿಸುವ ಕೃತಿಯಾಗಿದ್ದು, ಕೆಲವು ಅಧ್ಯಾಯಗಳು ಚೀನಾದ ವಿಷಯಕ್ಕೇ ಸಂಬಂಧಿಸಿವೆ.

2008 ರ ನಂತರ, ಏಷ್ಯಾದಲ್ಲಿ ಪ್ರಾಬಲ್ಯಕ್ಕಾಗಿ ಪ್ರಯತ್ನಿಸುತ್ತಿರುವ ಚೀನಾ, ತನ್ನ ನೆರೆಹೊರೆಯವರ ಮೇಲೆ (ಜಪಾನ್, ವಿಯೆಟ್ನಾಂ, ಇತ್ಯಾದಿ) ಒತ್ತಡ ಹೇರುವ ಮತ್ತು ಯುಎಸ್‌ನೊಂದಿಗೆ “ಹೊಸ ರೀತಿಯ ಪ್ರಮುಖ ಶಕ್ತಿಯ ಸಂಬಂಧ” ವನ್ನು ಪ್ರಸ್ತಾಪಿಸುವ ದ್ವಿಮುಖ ತಂತ್ರವನ್ನು ಅನುಸರಿಸಿತು. ಇದಕ್ಕೆ ಪ್ರತಿಯಾಗಿ, ಅಮೆರಿಕವು ಏಷ್ಯಾದತ್ತ ಮುಖ ಮಾಡಿತು, ಮತ್ತು ಭಾರತ, ಜಪಾನ್, ವಿಯೆಟ್ನಾಂ ಮುಂತಾದ ರಾಷ್ಟ್ರಗಳು ಪರಸ್ಪರ ಸಹಕಾರವನ್ನು ಹೆಚ್ಚಿಸಿ ಅನೌಪಚಾರಿಕ ಒಕ್ಕೂಟಗಳನ್ನು ರಚಿಸಿದವು. ಈ ಆರಂಭಿಕ ಹಿನ್ನಡೆಗೆ ಪ್ರತಿಕ್ರಿಯೆಯಾಗಿ ಚೀನಾ 2012 ರಲ್ಲಿ ತನ್ನ ತಂತ್ರವನ್ನು ವಿಶಾಲವಾದ ತಂತ್ರಕ್ಕೆ ಮರುಹೊಂದಿಸಿತು. ಇದು 2013 ರ ಬೆಲ್ಟ್ ಆಂಡ್ ರೋಡ್ ಇನಿಶಿಯೇಟಿವ್ (BRI) ನಲ್ಲಿ (ಒಂದು ಪಟ್ಟಿ-ಒಂದು ರಸ್ತೆ) ಪರಿಣಮಿಸಿದೆ ಕಾಣಿಸುತ್ತದೆ.

ಚೀನಾ ತನ್ನ ಆರ್ಥಿಕ ಮತ್ತು ರಾಜಕೀಯ ಪಾತ್ರವನ್ನು ಬಿಟ್ಟು ಕೊಡದೆ ಇರಲು ಮಿಲಿಟರಿ ಶಕ್ತಿಯನ್ನು ಅವಲಂಬಿಸಿದೆ. ಪೀಪಲ್ಸ್ ಲಿಬರೇಶನ್ ಆರ್ಮಿ (PLA) ಮೂರು ದಶಕಗಳ ಬಜೆಟ್ ಬೆಳವಣಿಗೆಯ ನಂತರ ರಾಷ್ಟ್ರೀಯ ಬಲವರ್ಧನೆಯ ಸಾಧನದಿಂದ ಶಕ್ತಿ ಪ್ರದರ್ಶನಾ ಸಾಧನವಾಗಿ ರೂಪಾಂತರಗೊಂಡಿದೆ.

ಆಂತರಿಕವಾಗಿ, ಚೀನಾದ ಆರ್ಥಿಕ ಬೆಳವಣಿಗೆಯು ನಿಧಾನಗೊಂಡಿರುವುದರಿಂದ, ಚೀನಾದ ಕಮ್ಯುನಿಸ್ಟ್ ಪಕ್ಷ (CCP) ದ ಆಡಳಿತದ ಸಿಂಧುತ್ವವು ದೇಶದಲ್ಲಿ ಹೆಚ್ಚುತ್ತಿರುವ ರಾಷ್ಟ್ರೀಯತೆ, ನಾಯಕನ ವ್ಯಕ್ತಿತ್ವ ಪೂಜೆ ಮತ್ತು ಆಂತರಿಕ ಭದ್ರತೆಯ ಮೇಲೆ ತೀವ್ರವಾದ ನಿಯಂತ್ರಣವನ್ನು ಅವಲಂಬಿಸಿದೆ. ಚೀನಾ ಈಗ ಬಾಹ್ಯ ರಕ್ಷಣೆ ಗಿಂತ ಆಂತರಿಕ ಭದ್ರತೆಗಾಗಿ ಹೆಚ್ಚು ಖರ್ಚು ಮಾಡುತ್ತದೆ.

ಚೀನಾವು ಇಂದು ವಿಶ್ವ ಆರ್ಥಿಕತೆಗೆ ಹೆಚ್ಚು ಅವಲಂಬಿತವಾಗಿದೆ. ಅದರ ನಾಯಕತ್ವವು ಚೀನಾದ ಈಗ ಉತ್ತುಂಗದಲ್ಲಿರುವ ಶಕ್ತಿಯು ಭವಿಷ್ಯದಲ್ಲಿ ಕುಸಿಯಬಹುದು ಎಂದು ಅರಿತಿರುವ ಸಾಧ್ಯತೆಯಿದೆ. ಅದರ ಆರ್ಥಿಕತೆ ನಿಧಾನಗೊಳ್ಳುತ್ತಿದೆ ಮತ್ತು ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿದೆ; 2040 ರ ವೇಳೆಗೆ ಚೀನಾದ ಜನಸಂಖ್ಯಾ ಪ್ರೊಫೈಲ್ ಇಂದಿನ ಜಪಾನ್‌ನಂತಿರಲಿದೆ. ಈ ಜನಸಂಖ್ಯಾ ಬದಲಾವಣೆಯು ಚೀನಾಕ್ಕೆ ತುಲನಾತ್ಮಕವಾಗಿ ಕಡಿಮೆ ಸಮಯ ಉಳಿದಿರುವುದನ್ನು ಸೂಚಿಸುತ್ತದೆ.

ಯುಎಸ್-ಚೀನಾ ಸಂಬಂಧಗಳು ಆಳವಾದ ಆರ್ಥಿಕ ಪರಸ್ಪರ ಅವಲಂಬನೆಯ ಹೊರತಾಗಿಯೂ ಸ್ಪರ್ಧೆಯಿಂದ ಕೂಡಿವೆ. ಚೀನಾದ ನಡವಳಿಕೆಯನ್ನು ಬದಲಾಯಿಸಲು ಸುಂಕಗಳು ಮತ್ತು ತಂತ್ರಜ್ಞಾನ ವರ್ಗಾವಣೆ ನಿರ್ಬಂಧಗಳನ್ನು ಯುಎಸ್ ವಿಧಿಸಿದೆ.

ಚೀನಾದ ನೆರೆಹೊರೆಯು ಭಾರತದ ಭದ್ರತೆ ಮತ್ತು ಸಮೃದ್ಧಿಗೆ ನಿರ್ಣಾಯಕವಾಗಿದೆ. ಚೀನಾದ ಬೆಳವಣಿಗೆ ಭಾರತದ ಹಿತಾಸಕ್ತಿಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ, ಏಕೆಂದರೆ ಭಾರತವೂ ಬೆಳೆಯುತ್ತಿರುವ ಶಕ್ತಿಯಾಗಿದೆ. ಹೆಚ್ಚಿದ ಯುಎಸ್-ಚೀನಾ ಪೈಪೋಟಿಯು ಭಾರತ-ಚೀನಾ ಸಂಬಂಧಗಳನ್ನು ಜಟಿಲಗೊಳಿಸುತ್ತದೆ ಮತ್ತು ಯುಎಸ್ ನ ಏಷ್ಯನ್ ತಂತ್ರದಲ್ಲಿ ಅದು ಭಾರತವನ್ನು ಪ್ರಮುಖವಾಗಿಸಬಹುದು.

CHINA - INDIAN PERSPECTIVES from the The Hindu Group (2025)

ಈಚೆಗೆ ‘ದಿ ಹಿಂದೂ’ ಮಾಧ್ಯಮ ಸಮೂಹ ಹೊರತಂದಿರುವ ‘China - Indian Perspectives on China’s Politics, Economy and Foreign Relations’ ಕೃತಿಯು ಚೀನಾ ದೇಶವನ್ನು ಹಲವಾರು ಆಯಾಮಗಳಿಂದ ಅದ್ಭುತವಾಗಿ ಪರಿಚಯಿಸುತ್ತದೆ. ವಿವಿಧ ಕ್ಷೇತ್ರಗಳ ತಜ್ಞರುಗಳು ಬರೆದಿರುವ ಹನ್ನೆರಡು ಪ್ರಬಂಧಗಳ ಸಂಕಲನ ಇದಾಗಿದ್ದು, ಕಳೆದ ಕೆಲವು ದಶಕಗಳಲ್ಲಿ ಹಲವು ಕ್ಷೇತ್ರಗಳಲ್ಲಿ ಚೀನಾವು ಸಾಧಿಸಿರುವ ಅದ್ಭುತ ಪ್ರಗತಿ, ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಆ ದೇಶದ ಪಾತ್ರ, ಭಾರತ-ಚೀನಾ ಸಂಬಂಧ ಇತ್ಯಾದಿಗಳ ವಿಶ್ಲೇಷಣೆ ಈ ಕೃತಿಯಲ್ಲಿದೆ.

ಈ ಸಂಕಲನದಲ್ಲಿ ಅಂತರಾ ಘೋಷಲ್ ಸಿಂಗ್ ಅವರು ಬರೆದಿರುವ ಒಂದು ಪ್ರಬಂಧವನ್ನು ಅವಲೋಕಿಸೋಣ.

ಭಾರತದ ಕುರಿತು ಇಂದಿನ ಚೀನೀ ಜನರ ಭಾವನೆಗಳು, ಅಭಿಪ್ರಾಯಗಳು ಏನಿರಬಹುದು ಎಂಬ ಕುತೂಹಲ ನಮಗಿರುವುದು ಸಹಜ. ಹಾಗೆಯೇ ನೆರೆಯ ದೇಶವಾಗಿರುವ ಕಾರಣಕ್ಕೆ ಉತ್ತಮ ಸಂಬಂಧ ಹೊಂದುವುದೂ ನಮಗಿರುವ ಅನಿವಾರ್ಯತೆ. ಪರಸ್ಪರ ಸಹಕಾರ ಎರಡೂ ದೇಶಗಳ ಹಿತಕ್ಕೆ ಅಗತ್ಯವೇ ಆದರೂ ಅದು ಸುಲಭವಾಗಿ ಸಹಜವಾಗಿ ದೊರೆಯುವಂತದ್ದಲ್ಲ. ಪರಸ್ಪರರ ದೃಷ್ಟಿಕೋನವನ್ನು ಅರಿಯಬೇಕಾಗುತ್ತದೆ. ಈ ಪ್ರಬಂಧದಲ್ಲಿ ಅಂತಹ ಒಂದು ಪ್ರಯತ್ನವಿದೆ.

CHINESE DEBATES ON INDIA’S PLACE IN THE WORLD by Antara Ghosal Singh

2025 ರ ಮಿಲಿಟರಿ ಸಂಘರ್ಷದ ನಂತರ, ಭಾರತದ ವಿಶ್ವಸ್ಥಾನಮಾನ ಮತ್ತು ದ್ವಿಪಕ್ಷೀಯ ಸಂಬಂಧಗಳ ಭವಿಷ್ಯದ ಕುರಿತು ಚೀನಾದ ಕಾರ್ಯತಂತ್ರದ ಸಮುದಾಯದಲ್ಲಿ ಒಂದು ಸಂಕೀರ್ಣವಾದ ಮತ್ತು ಬಹುಮುಖಿ ಚರ್ಚೆ ನಡೆಯುತ್ತಿದೆ. ಚೀನಾದ ಸಾರ್ವಜನಿಕ ಅಭಿಪ್ರಾಯವು ಈ ವಿಷಯದಲ್ಲಿ ತೀವ್ರವಾಗಿ ಧ್ರುವೀಕರಣಗೊಂಡಿದೆ.

1. ತಿರಸ್ಕಾರ ಮತ್ತು ಸಂಶಯ (Contempt and Skepticism):

  • ಚೀನಾದ ಸಾಮಾಜಿಕ ಮಾಧ್ಯಮ ಬಳಕೆದಾರರು ಭಾರತವನ್ನು “ಕಾಗದದ ಹುಲಿ” (paper tiger) ಮತ್ತು “ಒಣಹಮ್ಮಿನ ಮತ್ತು ಬೊಗಳೆ” (unreasonably vain and boastful) ದೇಶ ಎಂದು ಅಪಹಾಸ್ಯ ಮಾಡುತ್ತಾರೆ.

  • ಈ ದೃಷ್ಟಿಕೋನವನ್ನು ಹೊಂದಿರುವವರ ಪ್ರಕಾರ, ಭಾರತವು ನಿಜವಾದ ಮಹಾಶಕ್ತಿಯಾಗಲು ಸಾಧ್ಯವಿಲ್ಲ ಏಕೆಂದರೆ ಅದು ಜಾತಿ ಪದ್ಧತಿ, ಧಾರ್ಮಿಕ ಸಂಘರ್ಷಗಳು, ಆಡಳಿತಾತ್ಮಕ ದಕ್ಷತೆಯ ಕೊರತೆ, ಮತ್ತು ದುರ್ಬಲ ಕೈಗಾರಿಕಾ ಅಡಿಪಾಯದಂತಹ ಆಳವಾದ ಆಂತರಿಕ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ವಾದಿಸುತ್ತಾರೆ. ಭಾರತದ ಸಾಮರ್ಥ್ಯವನ್ನು ಅತಿಯಾಗಿ ಅಂದಾಜು ಮಾಡುವುದು ಚೀನಾದ ಕಾರ್ಯತಂತ್ರದ ತಪ್ಪು ನಿರ್ಧಾರವಾಗಿದೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ.

  • ಇದೇ ರೀತಿ, ಭಾರತವು ಚೀನಾದ ಕೈಗಾರಿಕಾ ಸರಪಳಿಯನ್ನು(supply chain) ಬದಲಾಯಿಸುವ ಸಿದ್ಧಾಂತವು “ಶತಮಾನದ ದೊಡ್ಡ ಹಗರಣ” (scam of this century) ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಇದಕ್ಕೆ ಕಾರಣ, ಭಾರತದ ಆರ್ಥಿಕ ಬೆಳವಣಿಗೆಯು ಮುಖ್ಯವಾಗಿ ಸೇವಾ ವಲಯದಿಂದ ಕೂಡಿದೆ ಮತ್ತು ಅದರ ಉತ್ಪಾದನಾ ಕ್ಷೇತ್ರದ ಕೊಡುಗೆ ಕಡಿಮೆಯಾಗಿದೆ.

2. ಎಚ್ಚರಿಕೆ ಮತ್ತು ಗೌರವ (Caution and Respect):

ಕೆಲವು ಪ್ರಮುಖ ವಿದ್ವಾಂಸರು, ಭಾರತವನ್ನು ಲಘುವಾಗಿ ಪರಿಗಣಿಸುವುದು ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ. ಬೀಜಿಂಗ್ ಡೈಲಿ (Beijing Daily) ಲೇಖನದ ಪ್ರಕಾರ, ಚೀನಾ ಭಾರತವನ್ನು ಈ ಕೆಳಗಿನೆ ಕಾರಣಗಳಿಗಾಗಿ ನಿರ್ಲಕ್ಷಿಸಬಾರದು:

  • ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ ಮತ್ತು ಜಾಗತಿಕ ಬಂಡವಾಳವನ್ನು ಆಕರ್ಷಿಸುತ್ತಿದೆ.

  • ಭಾರತವು ಭೌಗೋಳಿಕವಾಗಿ ಮಹತ್ವದ ಸ್ಥಾನದಲ್ಲಿದೆ (ಪಶ್ಚಿಮ ಏಷ್ಯಾದ ಶಕ್ತಿ ವಲಯ ಮತ್ತು ಪೂರ್ವ ಏಷ್ಯಾದ ಕೈಗಾರಿಕಾ ವಲಯದ ನಡುವೆ) ಮತ್ತು ಅಮೆರಿಕವು ಚೀನಾವನ್ನು ಕಟ್ಟಿಹಾಕಲು ಭಾರತವನ್ನು ಪ್ರೋತ್ಸಾಹಿಸುತ್ತಿದೆ.

  • ಭಾರತವು ಗಡಿ, ವಿಜ್ಞಾನ ಮತ್ತು ತಂತ್ರಜ್ಞಾನ, ಮತ್ತು ಆರ್ಥಿಕತೆಯಲ್ಲಿ ಚೀನಾದೊಂದಿಗೆ ಸ್ಪರ್ಧಿಸುತ್ತಿರುವ ಪ್ರಮುಖ ಶಕ್ತಿಯಾಗಿದೆ.

  • ಚೀನಾ, ಯುಎಸ್ ಮತ್ತು ಭಾರತವು ಜಗತ್ತಿನಲ್ಲಿ ಉಳಿಯುವ ಮೂರು “ಸ್ವತಂತ್ರ ದೊಡ್ಡ ಮಾರುಕಟ್ಟೆಗಳು” ಆಗಿರಲಿವೆ. ಚೀನಾ ಭಾವನಾತ್ಮಕ ದ್ವೇಷದಿಂದ ಸಹಕಾರದ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಎಚ್ಚರಿಸಲಾಗಿದೆ.

ಒಟ್ಟಿನಲ್ಲಿ, ಚೀನಾ ಎಂದರೆ ನಾವು ಭಯಪಡಬೇಕಾದ ನೆರೆರಾಷ್ಟ್ರವೆ? ನಾವು ನಮ್ಮೆಡೆಗೆ ಸೆಳೆಯಬೇಕಾದ ಮಿತ್ರರಾಷ್ಟ್ರವೆ? ಅಥವಾ ನಾವು ದೂರ ಕಾಯ್ದುಕೊಳ್ಳಬೇಕಾದ ಅಪರಿಚಿತ ಘಟಕವೆ?

ಈ ಲೇಖನದಲ್ಲಿ ಉಲ್ಲೇಖಿಸಿರುವ ಪುಸ್ತಕಗಳು ಇಂಥ ಪ್ರಶ್ನೆಗಳಿಗೆ ಉತ್ತರ ಒದಗಿಸುವ ಪ್ರಯತ್ನ ಮಾಡುತ್ತವೆ ಮತ್ತು ಚೀನಾ ದೇಶದ ಕುರಿತಾದ ನಮ್ಮ ಎಷ್ಟೋ ತಪ್ಪು ಕಲ್ಪನೆಗಳನ್ನು ಕಳೆಯುತ್ತವೆ.

Monday, September 15, 2025

ಎಷ್ಟು ಕಷ್ಟವೋ ಹೊಂದಿಕೆ ಎಂಬುದು

ಕಳೆದ ವಾರ ವರದಿಯಾದ ಕೆಲವು ಹಿಂಸಾಚಾರದ ಘಟನೆಗಳು ಜಿ ಎಸ್ ಶಿವರುದ್ರಪ್ಪನವರ 'ಎಲ್ಲೋ ಹುಡುಕಿದೆ..' ಕವಿತೆಯನ್ನು ನೆನಪಿಸಿದವು. ದೂರದ ಅಮೆರಿಕೆಯಲ್ಲಿ ವಿಶ್ವ ವಿದ್ಯಾನಿಲಯದಲ್ಲಿ ಭಾಷಣ ಮಾಡುತ್ತಿದ್ದಾಗ ಹಂತಕನ ಗುಂಡಿಗೆ ಬಲಿಯಾದ ಬಲ-ಪಂಥೀಯ ಇನ್ಫ್ಲ್ಯೂಯೇನ್ಸರ್  ಚಾರ್ಲಿ ಕರ್ಕ್ ಸುದ್ದಿಯಾಗಲಿ, ಇಲ್ಲೇ ನಮ್ಮ ಹಳೇ ಮೈಸೂರು ಪ್ರಾಂತ್ಯದಲ್ಲಿ ಗಣೇಶ ವಿಸರ್ಜನೆಯ ಸಮಯದಲ್ಲಿ ನಡೆದ ಕೋಮು ಗಲಭೆಯ ಸುದ್ದಿಯಾಗಲಿ ಇವೆಲ್ಲ ಸೂಚಿಸುವುದು ಜನರಲ್ಲಿ ಹೆಚ್ಚಾಗುತ್ತಿರುವ ಅಸಾಮರಸ್ಯ, ದ್ವೇಷ, ಇವನ್ನೇ. ಕರ್ಕ್ ಗೆ ಗುಂಡಿಕ್ಕಿದ ರಾಬಿನ್ಸನ್ ಎಂಬಾತ  ಈಗ  ಸೆರೆಸಿಕ್ಕಿದ್ದು ಆತನ  ವಿಪರೀತದ  ಅಂತರ್ಜಾಲದ ಬಳಕೆ ಮತ್ತು ಅದರಿಂದಾಗಿರಬಹುದಾದ  ವೈಚಾರಿಕ ಗೊಂದಲಗಳ ಬಗ್ಗೆ ಅಭಿಪ್ರಾಯಗಳು ಕೇಳಿಬರುತ್ತಿವೆ. 

ಹಾಗೆಯೇ ಮದ್ದೂರಿನಲ್ಲಿ ನಡೆದ ಕಲ್ಲು ತೂರಾಟದ  ಘಟನೆ ಕೋಮು ಸಾಮರಸ್ಯವನ್ನು ಕದಡುವ ದೊಡ್ಡ ವಿಚಾರವಾಗಿ ಬದಲಾಗುತ್ತಿರುವುದು ವಿಷಾದಕರ. ರಾಜಕೀಯಕ್ಕಾಗಿ ಘಟನೆಯನ್ನು ಬಳಸಿಕೊಳ್ಳಲು ಯತ್ನಿಸುತ್ತಿರುವುದು ಒಪ್ಪುವಂಥದ್ದಲ್ಲ.   

ಇವತ್ತಿನ ಪ್ರಜಾವಾಣಿ ದಿನಪತ್ರಿಕೆಯಲ್ಲಿ 'ಪ್ರಜಾಪ್ರಭುತ್ವ ದಿನ' ದ ಹಿನ್ನೆಲೆಯಲ್ಲಿ ಚಿಂತನೆಗೆ ಒಡ್ಡುವ ಕೆಲ ಲೇಖನಗಳಿವೆ. ಚಂದ್ರಕಾಂತ ವಡ್ಡು ಅವರ 'ಧರ್ಮಕಾರಣ: ಅರಾಜಕತೆಗೆ ಆಹ್ವಾನ'  ಎಂಬ ಲೇಖನದಲ್ಲಿ ವ್ಯವಸ್ಥೆಯ ಅವಿಭಾಜ್ಯ ಅಂಗಗಳಾದ ರಾಜಕೀಯ ಪಕ್ಷಗಳು, ಧರ್ಮಕೇಂದ್ರಿತ ಸಂಘಟನೆಗಳು, ಹಾಗೂ ಮಾಧ್ಯಮಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಹಿಸಬೇಕಾದ ಪಾತ್ರದ ಬಗ್ಗೆ ಪ್ರಸ್ತಾಪವಿದೆ.

ಇದೇ ಪತ್ರಿಕೆಯಲ್ಲಿ ಸಚಿವ ಮಹದೇವಪ್ಪ ಅವರು   'ಪ್ರಜಾಪ್ರಭುತ್ವ ಉಳಿಸಿಕೊಳ್ಳದೆ ಹೋದರೆ..' ಎಂಬ ಲೇಖನದಲ್ಲಿ ಭಾರತೀಯ ಜನತಂತ್ರ ವ್ಯವಸ್ಥೆಯ ವೈಶಿಷ್ಟ್ಯಗಳು,  ಈ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಜಾಗೃತರಾಗಿರಬೇಕಾದ ಅಗತ್ಯ, ಮತದಾನದ ಹಕ್ಕು,ಇತ್ಯಾದಿಗಳ ಬಗ್ಗೆ ಬರೆದಿದ್ದಾರೆ.  

'ಪ್ರಜಾಪ್ರಭುತ್ವ ದಿನ' ವಾದ ಇಂದು ನಾವು ಕೆಲವು ಮೂಲಭೂತ ಪ್ರಶ್ನೆಗಳನ್ನು ನಮ್ಮನ್ನೇ ಕೇಳಿಕೊಳ್ಳಬೇಕು. ಪ್ರಜಾಪ್ರಭುತ್ವ ಎಂದೊಡನೆ ಲಿಬರಲ್ ಡೆಮಾಕ್ರಸಿ (ಉದಾರವಾದಿ ಪ್ರಜಾಪ್ರಭುತ್ವ) ಎಂದೇನೂ ಅರ್ಥವಲ್ಲ. ಈ ಕುರಿತು ಕೆಲವರ್ಷಗಳ ಹಿಂದೆ ಓದಿದ ಲೇಖನವೊಂದು ನೆನಪಾಗುತ್ತದೆ. ಆಧುನಿಕ ಸಮಾಜಕ್ಕೆ  ಪ್ರಜಾಪ್ರಭುತ್ವ ಮತ್ತು ಉದಾರವಾದ ಎರಡರಿಂದಲೂ ಉಪಯೋಗ ಇದೆ. ಆದರೆ 'ಎಲ್ಲರನ್ನೂ ಒಳಗೊಳ್ಳುವ' ಜನತಂತ್ರವನ್ನು  ಉಳಿಸಿಕೊಂಡೂ ಉದಾರ ನೀತಿ, ಮತ್ತು ಹಕ್ಕುಗಳನ್ನು ಉಳಿಸಿಕೊಳ್ಳುವುದು ಸವಾಲಾಗಿದೆ. 

'ಉದಾರವಾದ'ವು ವಿಭಿನ್ನ ಕಲ್ಪನೆಗಳ ತಾಕಲಾಟವನ್ನು ಆಹ್ವಾನಿಸಿದರೆ, ನಿರಂಕುಶವಾದವು  ವಿರೋಧ ಪಕ್ಷಗಳನ್ನು ಜನರ ಶತ್ರುಗಳನ್ನಾಗಿ ಬಿಂಬಿಸಿ ಏಕವ್ಯಕ್ತಿ ಕೇಂದ್ರಿತ ಅಧಿಕಾರವನ್ನು ಸ್ಥಾಪಿಸುವುದಾಗಿರುತ್ತದೆ. ಟಿ ಎಸ್ ಎಲಿಯಟ್ ಹೇಳಿದಂತೆ 'ಸಾಂವಿಧಾನಿಕ ವ್ಯವಸ್ಥೆಯ ಉಳಿವು  ನಿಷ್ಟ ವಿರೋಧ ಪಕ್ಷದೊಡನೆ ನಿರಂತರ  ಒಡನಾಟವನ್ನು ಅವಲಂಬಿಸಿರುತ್ತದೆ'.

ನ್ಯೂ ಸ್ಟೇಟ್ಸ್ಮನ್ ಮ್ಯಾಗಝಿನ್ ನಲ್ಲಿ ಪ್ರಕಟವಾಗಿದ್ದ ' ಪ್ರಜಾಪ್ರಭುತ್ವಗಳಿಗೆ ನಿಷ್ಟ ವಿರೋಧ ಪಕ್ಷದ ಅಗತ್ಯ ಏಕಿದೆ?' ಎಂಬ ಲೇಖನದಲ್ಲಿ ಹಲವು ದೇಶಗಳಲ್ಲಿನ ವರ್ತಮಾನದ ರಾಜಕೀಯ ಬೆಳವಣಿಗೆಗಳನ್ನು ಪರಿಣಾಮಕಾರಿಯಾಗಿ ವಿಶ್ಲೇಷಿಸಲಾಗಿದೆ.  'ಸ್ಟ್ರಾಂಗ್ ಮ್ಯಾನ್' ಪ್ರಜಾಪ್ರಭುತ್ವದ ಮಾದರಿ, ವಿರೋಧ ಪಕ್ಷಗಳನ್ನು ಜನರ ಶತ್ರುಗಳಾಗಿ ಬಿಂಬಿಸುವುದು, ಕ್ರಮಬದ್ಧವಲ್ಲದ ಸಾಂವಿಧಾನಿಕ ಪ್ರಕ್ರಿಯೆಗಳನ್ನು ಪ್ರಶ್ನಿಸುವವರನ್ನು 'ಜನರ ಸಂಪರ್ಕವಿಲ್ಲದ ಎಲೈಟ್'ಗಳೆಂದು ಕರೆಯುವುದು ಇತ್ಯಾದಿಯನ್ನು ಚರ್ಚಿಸಲಾಗಿದೆ. ಇದೇ ಲೇಖನದಲ್ಲಿ ಅಂತಹ ತಂತ್ರಗಳ ವಿರುದ್ಧ ಇರುವ  institutional checks and balance (ಸಾಂಸ್ಥಿಕ ಪರಿಶೀಲನೆಗಳು) ಬಗ್ಗೆ ಹೀಗೆ ಬರೆಯಲಾಗಿದೆ  - "ಸಂವಿಧಾನ ವಿಧಿಸುವ  ನಿರ್ಬಂಧಗಳು ಮತ್ತು ಅಧಿಕಾರಗಳ ಪ್ರತ್ಯೇಕತೆ - ಇವುಗಳೆಲ್ಲಾ ಸಾಕಷ್ಟು ಜನರು ಅವುಗಳನ್ನು ನಂಬುವವರೆಗೆ ಮಾತ್ರ ಅಸ್ತಿತ್ವದಲ್ಲಿರುತ್ತವೆ.  ಐತಿಹಾಸಿಕವಾಗಿ ನೋಡುವುದಾದರೆ, ತಮ್ಮ ಅಧಿಕಾರವನ್ನು ನಿರ್ಬಂಧಿಸಲು ವಿನ್ಯಾಸಗೊಳಿಸಲಾದ ಸರಪಳಿಗಳನ್ನು ತೆಗೆದುಹಾಕಲು ಸರಿಯಾದ ನಿರಂಕುಶಾಧಿಕಾರಿಗೆ ಯಾವುದೇ ಸಮಯ ತೆಗೆದುಕೊಳ್ಳುವುದಿಲ್ಲ."

ಕಣ್ಣು ಬಿಟ್ಟು ನೋಡಿದರೆ  ಜನತಂತ್ರ ವ್ಯವಸ್ಥೆಯ ಡೋಲಾಯಮಾನ ಸ್ಥಿತಿ, ಇದನ್ನು ಉಳಿಸಿಕೊಳ್ಳಲು ಇರುವ ಸವಾಲುಗಳು ಇವೆಲ್ಲಾ ನಮಗೆ ಅರಿವಾಗುವ ಸಂಗತಿಗಳೇ. ಇದನ್ನು ನೆನಪು ಮಾಡಿಕೊಳ್ಳಲು ಇಂದಿನ  'ಪ್ರಜಾ ಪ್ರಭುತ್ವ ದಿನ' ಸೂಕ್ತ ದಿನ. 

ಪ್ರಜಾ ಪ್ರಭುತ್ವ ದಿನದ ಶುಭಾಶಯಗಳು! 

Monday, September 08, 2025

ಶೊಶಾನ - ಕಲಹದ ನೆಲದ ಪ್ರೇಮಕತೆ

ಶೊಶಾನ - ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರವಾಗುತ್ತಿರುವ ಈ ಚಲನಚಿತ್ರ ೧೯೩೦-೪೦ ರ ಇಸ್ರೇಲ್ ನಲ್ಲಿ ನಡೆಯುವ ಕತೆ. ಕಳೆದ ಸುಮಾರು ಎರಡು ವರ್ಷಗಳಿಂದ ಪ್ಯಾಲಸ್ಟೈನ್ ನಲ್ಲಿ ನಡೆಯುತ್ತಿರುವ ಕಲಹ ಆರಂಭವಾಗುವುದಕ್ಕಿಂದ ಮೊದಲೇ ನಿರ್ಮಾಣವಾಗಿದ್ದ ಚಿತ್ರ ಇದು. 

ಐತಿಹಾಸಿಕ ಘಟನೆಗಳನ್ನು ಆಧರಿಸಿದ ಪುಸ್ತಕಗಳು, ಚಲನಚಿತ್ರಗಳು ದೀರ್ಘ ಕಾಲದ ಕೆಲ ಸಮಸ್ಯೆಗಳ ಬಗ್ಗೆ ಮಾನವೀಯ ವಿವರಗಳನ್ನು ಒದಗಿಸುವುದರೊಂದಿಗೆ  ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಹಾಗೆಯೇ ಕೆಲವು ಕೃತಿಗಳು ಪ್ರಾಪಗಾಂಡ ಮಾದರಿಯವೂ ಆಗಿರುತ್ತವೆ. ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಅಂತಹ ಚಿತ್ರಗಳನ್ನು ಗಮನಿಸಿದ್ದೇವೆ. 

ಶೊಶಾನ ಚಿತ್ರದ ಬಗ್ಗೆ ಬಂದಿರುವ ವಿಮರ್ಶೆಗಳನ್ನು ಗಮನಿಸಿದರೆ ಇದರಲ್ಲಿ ಬರುವ ಮುಖ್ಯ  ಪಾತ್ರಗಳು ನಿಜ ಜೀವನದಿಂದಲೇ ಬಂದವಾಗಿದ್ದು ಚಲನಚಿತ್ರದ ಕೆಲವು ಘಟನಾವಳಿಗಳು  ಕಾಲ್ಪನಿಕವಾಗಿದ್ದರೂ ಅಂದಿನ ಇಸ್ರೇಲ್ ನಲ್ಲಿ ಜಿಯಾನಿಸ್ಟ್ (ಸ್ವತಂತ್ರ ಯಹೂದಿ ರಾಷ್ಟ್ರ ಸ್ಥಾಪನೆಯ ಹೋರಾಟ)ಗಳಲ್ಲಿ ಸಹ ಬಣಗಳು ಇದ್ದದ್ದು ಮತ್ತು ಅವು ತಮ್ಮ ಗುರಿ ಸಾಧನೆಗೆ ಆಯ್ದುಕೊಂಡ ಮಾರ್ಗಗಳು ಬೇರೆ ಇದ್ದದ್ದು ಇದೆಲ್ಲ ಚಾರಿತ್ರಿಕ ಸತ್ಯಗಳೇ. 

ಬ್ರಿಟಿಷ್ ಆಡಳಿತದಲ್ಲಿದ್ದ ಅಂದಿನ ಪ್ಯಾಲಸ್ಟೈನ್ನಲ್ಲಿ ಆಗ ಮುಖ್ಯವಾಗಿದ್ದ ಹೋರಾಟ ಬ್ರಿಟಿಷರಿಂದ ಸ್ವತಂತ್ರವಾಗುವುದಾಗಿತ್ತು. ಯಹೂದಿ-ಅರಬ್ ಸಂಘರ್ಷ ಈ ಚಿತ್ರದಲ್ಲಿ ಇಲ್ಲ. ಇರುವ ಅರಬ್ ಪಾತ್ರಗಳು ಸಹ ಬ್ರಿಟಿಷರ ದೃಷ್ಟಿಯಲ್ಲಿ ಪ್ಯಾಲಸ್ಟೈನಿನ ಯಹೂದಿ ಮತ್ತು ಅರಬ್ ಜನರನ್ನು  ಬ್ರಿಟಿಷರು ಸಮಾನವಾಗಿ ಕಾಣುತ್ತಿದ್ದರೆಂದು ತೋರಿಸಲಿಕ್ಕಾಗಿ ಇರುವಂತೆ ಇವೆ.  ಇಬ್ಬರು ಬ್ರಿಟಿಷ್ ಪೊಲೀಸ್ ಅಧಿಕಾರಿಗಳಾಗಿ  ಟಾಮ್ ವಿಲ್ಕಿನ್ ಮತ್ತು ಜೆಫ್ರಿ ಮಾರ್ಟಿನ್ ಎಂಬ ಎರಡು ಪಾತ್ರಗಳಿವೆ. 

ಶೊಶಾನಳು ರಷಿಯನ್ ಯಹೂದಿ ಸೋಶಲಿಸ್ಟ್‌ನ ಮಗಳು. ಅವಳ ತಂದೆ ಅರಬ್ ಮತ್ತು ಯಹೂದಿಗಳು ಪ್ಯಾಲೆಸ್ಟೈನಿನಲ್ಲಿ ಹೊಸ ರಾಷ್ಟ್ರವನ್ನು ನಿರ್ಮಿಸಿ ಒಟ್ಟಾಗಿ ಬದುಕಬಹುದು ಎಂದು ನಂಬಿದ್ದವನು. ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದವರಲ್ಲಿ ಮುಖ್ಯವಾಗಿ ಹಗನಾ (ಬ್ರಿಟಿಷರೊಂದಿಗೆ ರಾಜಕೀಯ ಪರಿಹಾರ ಬಯಸುತ್ತಿದ್ದವರು) ಮತ್ತು ಇರ್ಗುನ್ (ಬ್ರಿಟಿಷರನ್ನು ಹಿಂಸಾತ್ಮಕ ಮಾರ್ಗದಿಂದ ಹೊರದೂಡಲು ಬಯಸುತ್ತಿದ್ದವರು) ಇವು ಎರಡು ಗುಂಪುಗಳು. ಶೊಶಾನಳು ಹಗನಾ ಜೊತೆ ಗುರುತಿಸಿಕೊಂಡವಳು. ಬ್ರಿಟಿಷ್ ಪೊಲೀಸ್ ಅಧಿಕಾರಿಯಾದ ಟಾಮ್ ವಿಲ್ಕಿನ್ (ಡಗ್ಲಸ್ ಬುತ್) ಜೊತೆಗೆ ಶೊಶಾನಗೆ ಪ್ರೀತಿಯ ಸಂಬಂಧವಿದೆ. ಟಾಮ್ ಗೆ ಜಿಯೋನಿಸ್ಟ್ ತತ್ವಗಳ ಕಡೆ ಸಹಾನುಭೂತಿ ಇರುವಂತಿದ್ದರೂ, ತಟಸ್ಥವಾಗಿರುವುದು ಮತ್ತು ಯಹೂದಿ ಹಾಗೂ ಅರಬ್ ಜನರಿಗೆ ಶಸ್ತ್ರಾಸ್ತ್ರಗಳನ್ನು ತಡೆಯುವುದು ಅವನ ಕರ್ತವ್ಯ . ಇಂತಹ ಸನ್ನಿವೇಶದಲ್ಲಿ ಶೊಶಾನ ಮತ್ತು ಟಾಮ್ ರ ವೈಯಕ್ತಿಕ ಬದುಕು ಮತ್ತು ಎದುರಾಗುವ ಸಾಂದರ್ಭಿಕ ಸವಾಲುಗಳು ಚಿತ್ರಕಥೆಯ ಕೇಂದ್ರದಲ್ಲಿವೆ.

ಒಂದು ಚಾರಿತ್ರಿಕ ಘಟ್ಟದಲ್ಲಿ ಇಸ್ರೇಲ್ ನಲ್ಲಿ ನಡೆದ ವಿದ್ಯಮಾನಗಳನ್ನು ಪರಿಚಯಿಸುವುದರಲ್ಲಿ ಚಿತ್ರದ ಮಹತ್ವ ಇದೆ. ಅರಬ್ಬರ ದೃಷ್ಟಿಕೋನ ಇಲ್ಲಿ ಕಾಣಬರುವುದಿಲ್ಲವಾದರೂ ಯಹೂದಿ-ಅರಬ್ಬರ ನಡುವಿನ ಕಲಹ ಪ್ಯಾಲಸ್ಟೈನ್ ಬ್ರಿಟಿಷರಿಂದ  ಸ್ವತಂತ್ರವಾಗಿ, ಇಸ್ರೇಲ್ ಸ್ಥಾಪನೆಯಾದ  ಮೇಲಿನ ವಿದ್ಯಮಾನ. 

ಕಳೆದ ಎರಡು ವರ್ಷಗಳಲ್ಲಿ ಮೊದಲು ಇಸ್ರೇಲ್ ನಲ್ಲಿ ಪ್ಯಾಲಸ್ಟೈನ್ ನ ಹಮಾಸ್ ಗುಂಪಿನ ಹಿಂಸಾತ್ಮಕ ದಾಳಿಯಿಂದ ಆರಂಭವಾಗಿ ನಂತರ ಪ್ರತ್ಯುತ್ತರವಾಗಿ ಇಸ್ರೇಲಿ ಸೇನೆ ಗಾಝಾ ಪ್ರಾಂತ್ಯದಲ್ಲಿ ನಡೆಸುತ್ತಿರುವ ದಾಳಿಗಳಲ್ಲಿ ಪ್ಯಾಲಸ್ಟೈನ್ ನಲ್ಲಿ ಹೆಂಗಸರೂ ಮಕ್ಕಳನ್ನೂ ಬಿಡದಂತೆ ಹತ್ಯೆಗೀಡಾಗುತ್ತಿರುವ ಸಾವಿರಾರು ಜನರು  ಹೊರ ಜಗತ್ತಿಗೆ ಅದರಲ್ಲೂ ಅಮೆರಿಕದಂತಹ ಪ್ರಭಾವಶಾಲಿ ರಾಷ್ಟ್ರಗಳಿಗೆ ಕೇವಲ ಸಂಖ್ಯೆಗಳಾಗಿರುವುದು ಅತ್ಯಂತ ದುಃಖಕರವಾಗಿದೆ. 

ಶೊಶಾನ ಚಿತ್ರದಲ್ಲಿ ನಾವು ಕಾಣುವಂತೆ ನೂರು ವರ್ಷಗಳ ಹಿಂದೆ ಯಹೂದಿ-ಅರಬ್ ಎರಡೂ ಜನಾಂಗದವರೂ ಸ್ವಾತಂತ್ರ್ಯಕ್ಕಾಗಿ ಒಟ್ಟಾಗಿ  ಹೋರಾಡಿದವರು. ಸ್ವಾತಂತ್ರ್ಯದ ಹೋರಾಟದಲ್ಲಿ ಕಾಣುವ ಒಗ್ಗಟ್ಟು ನಂತರದಲ್ಲಿ ಕಾಣದಾಗುವುದು ವಿಷಾದಕರ ವಿದ್ಯಮಾನ. ನೆಲಕ್ಕಾಗಿ ೧೯೪೮ರಲ್ಲಿ ಪ್ರಾರಂಭವಾದ ಕಲಹ ಇಂದಿಗೂ ಮುಂದುವರೆದಿದೆ. ಹೊಂದಾಣಿಕೆಯುಳಿದು ಬೇರೆ ಮಾರ್ಗವಿದೆಯೆಂದು ಅನಿಸುವುದಿಲ್ಲ. ಅಸ್ತ್ರಗಳ ಬಲದಿಂದ ಹಲವು ದಶಲಕ್ಷ ಜನರ ಅಸ್ಮಿತೆಯನ್ನೇ ಇಲ್ಲವಾಗಿಸುತ್ತೇವೆಂದು ಹೊರಡುವುದು ಒಪ್ಪುವ ವಿಚಾರವಲ್ಲ. ಎರಡು-ರಾಜ್ಯ ನಿರ್ಮಾಣವೊಂದೇ ಉಳಿದಿರುವ ಪರಿಹಾರ ಎಂದು ಹೆಚ್ಚು ಹೆಚ್ಚಾಗಿ ತೋರುತ್ತಿದೆ. 



Monday, September 01, 2025

ಎಲ್ಲರ ಎದೆ ಬೆಳಗಲಿ ಹಣತೆ

ಈ ಬಾರಿಯ ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ಟಾಕ್ ಅವರನ್ನು ಆಯ್ಕೆ ಮಾಡಿದ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕಟಿಸಿದ ನಂತರ ಕಳೆದ ಹತ್ತು ದಿನಗಳಲ್ಲಿ ಈ ವಿಚಾರದ ಕುರಿತು ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿದೆ. 

ಸಾಹಿತ್ಯಕ್ಕಾಗಿ ನೀಡುವ ಬೂಕರ್ ನಂತಹ ಪ್ರಖ್ಯಾತ ಪ್ರಶಸ್ತಿಯನ್ನು ತಮ್ಮ ಕನ್ನಡದ ಕೃತಿಯ ಅನುವಾದಕ್ಕಾಗಿ ಪಡೆದಿರುವ ಸಾಹಿತಿಗೆ ನಾಡ ಹಬ್ಬ ದಸರಾ ಉದ್ಘಾಟನೆಯ ಗೌರವ ನೀಡುವುದು  ಕನ್ನಡಿಗರಿಗೆ ಸಂತಸದ ವಿಷಯ ಆಗಬೇಕು. ಎಲ್ಲ ಜನಾಂಗದವರನ್ನೂ ಗೌರವದಿಂದ ಕಾಣುವುದು ಕನ್ನಡ ನಾಡಿನ ಸಂಸ್ಕೃತಿಯೂ ಆಗಿದೆ. ಆದರೆ ಈಚಿನ ದಿನಗಳಲ್ಲಿ ಎಲ್ಲ ವಿಚಾರಗಳಲ್ಲೂ ಧರ್ಮವನ್ನು ಎಳೆದುತರುವ ಪ್ರವೃತ್ತಿ ಕಂಡುಬರುತ್ತಿದೆ.  

ಮೊನ್ನೆ ಪ್ರಜಾವಾಣಿಯಲ್ಲಿ ಪ್ರಕಟವಾದ ರವೀಂದ್ರ ಭಟ್ಟ  ಅವರ  "ಎಲ್ಲರ ಎದೆ ಬೆಳಗಲಿ ಹಣತೆ" ಎಂಬ ಲೇಖನದಲ್ಲಿ "ಸೌಹಾರ್ದ ಮನೋಭಾವ ನಮ್ಮ ಮಣ್ಣಿನ ಗುಣ "ಎಂದು ಬರೆಯುತ್ತಾರೆ. 

 ಹಾಗೆಯೇ ಈದಿನ.ಕಾಮ್ ನಲ್ಲಿ ಕಾಲಮಾನ ಎಂಬ ಅಂಕಣದಲ್ಲಿ "ಮುಷ್ತಾಕ್‌ ದಸರಾ ಉದ್ಘಾಟನೆ- ವಿವಾದಗಳ ಸುತ್ತಮುತ್ತ" ಕಣ್ಣು ಹಾಯಿಸಲಾಗಿದೆ. 

“ಸರ್ವ ಜನಾಂಗದ ಶಾಂತಿಯ ತೋಟ” ಎಂಬ ಮಾತುಗಳನ್ನಾಡಿದ ಕುವೆಂಪು ಅವರ ಸದಾಶಯದ ಮಾರ್ಗದಲ್ಲಿ ನಮ್ಮ ನಾಡಹಬ್ಬ-ದಸರಾ ಜರುಗಲಿ ಎಂಬ ಆಶಯದೊಡನೆ ಆ ಲೇಖನ ಮುಕ್ತಾಯವಾಗುತ್ತದೆ.

ಎಂಭತ್ತರ ದಶಕದಲ್ಲಿ ಲಂಕೇಶ್ ಪತ್ರಿಕೆಯಲ್ಲಿ ಬಾನು ಮುಷ್ಟಾಕ್ ರ ಕತೆಗಳು ಮತ್ತು ಲೇಖನಗಳು ಪ್ರಕಟವಾಗುತ್ತಿದ್ದದ್ದು ನನಗೆ ನೆನಪಿದೆ. ತಮ್ಮ ಮುಸ್ಲಿಂ ಸಮುದಾಯದ ದೈನಂದಿನ ಬದುಕಿನ ಅನುಭವದ ಹಿನ್ನೆಲೆಯಲ್ಲಿ ಕೌಟುಂಬಿಕ ಸಂಬಂಧಗಳು, ಆಧುನಿಕತೆಯ ಸವಾಲುಗಳು, ಸಾಮಾಜಿಕ ವ್ಯವಸ್ಥೆಯಲ್ಲಿ ವಿಶೇಷವಾಗಿ ಮಹಿಳೆಯರು ಪಡುವ ಸಂಕಷ್ಟಗಳು, ಮುಂತಾದ ವಿಚಾರಗಳನ್ನು ಸೂಕ್ಷ್ಮ ದೃಷ್ಟಿಯಿಂದ ಗಮನಿಸುತ್ತಾ ಪರಿಣಾಮಕಾರಿಯಾದ ನುಡಿಕಟ್ಟಿನಲ್ಲಿ ದಾಖಲಿಸುವ ಬರವಣಿಗೆ ಅವರದಾಗಿತ್ತು. ದೀಪಾ ಬಸ್ತಿ ಯವರು ಅತ್ಯಂತ ಸಮರ್ಥವಾಗಿ ಅನುವಾದಿಸಿರುವ ಬಾನು ಅವರ ಕತಾ ಸಂಕಲನ 'Heart Lamp' ಈ ವರ್ಷ ಬೂಕರ್ ಪ್ರಶಸ್ತಿ ಪಡೆದಿದೆ.

ತಮ್ಮ ಬೂಕರ್ ಪ್ರಶಸ್ತಿ ಸ್ವೀಕಾರ ಭಾಷಣದಲ್ಲಿ ಅವರು ಹೇಳಿದ ಮಾತುಗಳನ್ನು ಗಮನಿಸಿ-

"ಪ್ರತಿಯೊಂದು ಧ್ವನಿಯನ್ನು ಕೇಳುವ, ಪ್ರತಿಯೊಂದು ಕಥೆಯೂ ಮುಖ್ಯವಾಗುವ ಮತ್ತು ಪ್ರತಿಯೊಬ್ಬ ವ್ಯಕ್ತಿಯೂ ಸೇರಿರುವ ಜಗತ್ತನ್ನು ಒಟ್ಟಾಗಿ ನಾವು ರಚಿಸುತ್ತೇವೆ... ಯಾವುದೇ ಕಥೆಯು ಎಂದಿಗೂ ಚಿಕ್ಕದಲ್ಲ, ಮಾನವ ಅನುಭವವನ್ನೆಲ್ಲ ಒಂದು ವಸ್ತ್ರದಂತೆ ಭಾವಿಸಿದರೆ ಅದರ ಪ್ರತಿಯೊಂದು ದಾರವು ಇಡೀ ತೂಕವನ್ನು ಹಿಡಿದಿಟ್ಟುಕೊಳ್ಳುತ್ತದೆ. ನಮ್ಮನ್ನು ವಿಭಜಿಸಲು ಆಗಿಂದಾಗ ಪ್ರಯತ್ನಿಸುವ ಜಗತ್ತಿನಲ್ಲಿ ಸಾಹಿತ್ಯವು ನಮಗೆ ಉಳಿದಿರುವ ಕೊನೆಯ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ, ಅಲ್ಲಿ ನಾವು ಪರಸ್ಪರರ ಮನಸ್ಸಿನಲ್ಲಿ ಬದುಕಬಹುದು...ಕೆಲವು ಪುಟಗಳವರೆಗಾದರೂ.. "

ತಮ್ಮದೇ ಕನ್ನಡ ನಾಡಿನಲ್ಲಿ ತಮ್ಮದೇ ಕನ್ನಡ ಭಾಷಿಗರಿಂದ ವಿರೋಧ ಅವರಿಗೆ ಎದುರಾಗುತ್ತಿರುವುದು ದುರದೃಷ್ಟಕರ.

Monday, August 25, 2025

ಭಾರತದಲ್ಲಿ ಚುನಾವಣೆಗಳು ನ್ಯಾಯೋಚಿತವಾಗಿವೆಯೇ?

ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ ಮಹದೇವಪುರ ಕ್ಷೇತ್ರದ ಚುನಾವಣಾ ಪ್ರಕ್ರಿಯೆಯು ಪಾರದರ್ಶಕವಾಗಿರಲಿಲ್ಲ ಎನ್ನುವ ವಿಚಾರವನ್ನು ಮುಖ್ಯವಾಗಿ ಮುಂದಿಟ್ಟುಕೊಂಡು ಕೆಲದಿನಗಳ ಹಿಂದೆ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ನಡೆಸಿದ ಪತ್ರಿಕಾಗೋಷ್ಟಿ ಮತ್ತು ನಂತರದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನಡೆಸಿದ ಪತ್ರಿಕಾ ಗೋಷ್ಟಿ ಗಮನಿಸಲೇಬೇಕಾದ ವಿದ್ಯಮಾನಗಳು. 

ಮತದಾರರ ಪಟ್ಟಿಯಲ್ಲಿನ ದೋಷಗಳು ಮತ್ತು ಆ ಮೂಲಕ ಚುನಾವಣೆಯ ಫಲಿತಾಂಶದ ತಿರುಚುವಿಕೆಯ ಸಾಧ್ಯತೆ  ಇವು  ಕೆಲವು ಅಂಕಿ ಸಂಖ್ಯೆ ಮತ್ತು ಪುರಾವೆಗಳೊಂದಿಗೆ ರಾಹುಲ್ ಗಾಂಧಿ ಮಾಡಿದ ಮುಖ್ಯ ಆರೋಪ. ಪ್ರಜಾಪ್ರಭುತ್ವದ ಅಸ್ತಿತ್ವವೇ ಪಾರದರ್ಶಕ ಮತದಾನದ ಬುನಾದಿಯ ಮೇಲೆ ನಿಂತಿರುವುದರಿಂದ ಇದು ಅತ್ಯಂತ ಗಂಭೀರ ವಿಚಾರ. ಚುನಾಣಾ ಪ್ರಕ್ರಿಯೆಯು ನ್ಯಾಯೋಚಿತವಾಗಿರುವನ್ನು ಖಚಿತಪಡಿಸುವುದಕ್ಕಾಗಿಯೇ ನಿಯೋಜನೆಯಾಗಿರುವ ಚುನಾವಣಾ ಆಯೋಗದ ಪ್ರತಿಕ್ರಿಯೆ ಬೇಜವಾಬ್ದಾರಿಯದಾಗಿತ್ತೆಂದೇ ಹೇಳಬಹುದು. ಇದು ಆಯೋಗದ ಪಾರದರ್ಶತೆಯ ಬಗ್ಗೆ ಖಂಡಿತವಾಗಿಯೂ ಅನುಮಾನಗಳನ್ನು ಹುಟ್ಟಿಸುತ್ತದೆ. 

ಈ ಬಗ್ಗೆ ಮಾಧ್ಯಮಗಳಲ್ಲೂ ಲೇಖನಗಳು ಬರುತ್ತಿವೆ. ದಿ ಎಕನಾಮಿಸ್ಟ್ ಪತ್ರಿಕೆಯಲ್ಲಿ 'ಭಾರತದಲ್ಲಿ ಚುನಾವಣೆಗಳು ನ್ಯಾಯೋಚಿತವಾಗಿವೆಯೇ?' ಎಂಬ ಲೇಖನವು ಚುನಾವಣಾ ಆಯುಕ್ತರ ಆಯ್ಕೆಯಲ್ಲಿ ಆಡಳಿತ ಪಕ್ಷಕ್ಕಿರುವ ಹೆಚ್ಚುವರಿ ಅಧಿಕಾರ, ಚುನಾವಣೆಗಳ ಸಂದರ್ಭದಲ್ಲಿ ಮಾದರಿ ಆಚಾರ ಸಂಹಿತೆಯ ವಿಚಾರದಲ್ಲಿ ಆಡಳಿತ ಪಕ್ಷವಾದ ಬಿಜೆಪಿಯ ಬಗ್ಗೆ ಆಯೋಗವು ತಳೆಯುವ ಮೃದು  ಧೋರಣೆ ಇತ್ಯಾದಿಗಳ ಉಲ್ಲೇಖವಿದೆ. ಹಾಗೆಯೇ 'ಕಾಂಗ್ರೆಸ್ ಪಕ್ಷವು ಮತದಾರ ಪಟ್ಟಿಯ ಎತ್ತಿರುವ ಆರೋಪಗಳು ಭಾರತದಲ್ಲಿ ಪ್ರಜಾಪ್ರಭುತ್ವ ರಕ್ಷಣೆಗಾಗಿ  ನಡೆಸುವ ಸಮರವೇ ಆಗಬಹುದು' ಎಂಬ ಲೇಖನ ಸ್ಕ್ರೋಲ್.ಇನ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.