Monday, August 18, 2025

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ನಡುವೆ ವಾಸ್ತವವನ್ನು ನೆನೆಯುತ್ತಾ ...

ಪ್ರಜಾಪ್ರಭುತ್ವವನ್ನು ಸಂರಕ್ಷಿಸಲು ನಾಗರಿಕರಲ್ಲಿನ ಜಾಗರೂಕತೆಯು ಅತ್ಯಂತ ಪ್ರಮುಖವಾಗಿದೆ, ಏಕೆಂದರೆ ನಿರಾಸಕ್ತಿ, ಪ್ರಜಾಪ್ರಭುತ್ವದ ನಿಯಮಗಳ ಸವೆತ, ಮತ್ತು ನಿರಂಕುಶ ಪ್ರವೃತ್ತಿಗಳ ಏರಿಕೆ ಇವೆಲ್ಲಾ ಖಂಡಿತ ಅಪಾಯವನ್ನು ತರುತ್ತವೆ. ಬಲವಾದ, ಸ್ಥಿರವಾದ ಪ್ರಜಾಪ್ರಭುತ್ವಕ್ಕೆ ನಿರಂತರ ನಾಗರಿಕರ ತೊಡಗಿಸಿಕೊಳ್ಳುವಿಕೆ ಮತ್ತು ಅದರ ಆಧಾರವಾಗಿರುವ ತತ್ವಗಳು ಮತ್ತು ಸಂಸ್ಥೆಗಳಿಗೆ ದೃಢವಾದ ಬದ್ಧತೆ ಇವುಗಳ ಅಗತ್ಯವಿದೆ.

ಈ ಹಿನ್ನೆಲೆಯಲ್ಲಿ ಈದಿನ.ಕಾಮ್ ನಲ್ಲಿ ಇವತ್ತು ಪ್ರಕಟವಾಗಿರುವ ಸ್ವಾತಂತ್ರ್ಯ ದಿನಾಚರಣೆ ವಿಶೇಷ ಲೇಖನ "ಕುಗ್ಗುತ್ತಿರುವ ಪ್ರಜಾಪ್ರಭುತ್ವದ ನಡುವೆ ನಾಗರಿಕ ಜಾಗೃತಿಯ ಆಶಾಕಿರಣ" ಅಗತ್ಯವಾಗಿ ಓದಬೇಕಾದದ್ದಾಗಿದೆ.  

ಸ್ವಾತಂತ್ರ್ಯದ ೭೮ ವರ್ಷಗಳ ನಂತರ ಭಾರತದಲ್ಲಿ ಪ್ರಜಾಪ್ರಭುತ್ವದ ಗುಣಮಟ್ಟದ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆಯ ಬಗ್ಗೆ ಲೇಖನ ಗಮನ ಸೆಳೆಯುತ್ತದೆ. 

ಪ್ರತಿಯೊಬ್ಬ ನಾಗರಿಕನೂ ಸರ್ಕಾರಗಳನ್ನು ಪ್ರಶ್ನಿಸುವುದನ್ನು, ಪಾರದರ್ಶಕ ಆಡಳಿತಕ್ಕಾಗಿ ಆಗ್ರಹಿಸುವುದನ್ನು,  ನಾಗರಿಕ ಹಕ್ಕುಗಳು ಮತ್ತು ಮುಕ್ತ ಹಾಗೂ ನ್ಯಾಯಯುತ ಚುನಾವಣೆಗಳಂತಹ ಪ್ರಮುಖ ವಿಚಾರಗಳ ಬಗ್ಗೆ ಎಚ್ಚರದಿಂದ ಇರುವುದನ್ನು ರೂಢಿಸಿಕೊಳ್ಳದೆ ಹೋದರೆ ಒಳಗಿಂದೊಳಗೇ ವ್ಯವಸ್ಥೆ ಸವಕಲಾಗುತ್ತ ಹೋಗುತ್ತದೆ. ಈ ಪ್ರಕ್ರಿಯೆಯನ್ನು ಲೇಖನದಲ್ಲಿ ವಿವರಗಳಿವೆ.


ಕೆಲವು ಆಶಾದಾಯಕ ಬೆಳವಣಿಗೆಗಳ ಜತೆಯೇ ಹಲವಾರು ಮಾನದಂಡಗಳ ಪ್ರಕಾರ ಪರಿಸ್ಥಿತಿ ಹದಗೆಡುತ್ತಿರುವುದನ್ನು ಲೇಖನದಲ್ಲಿ ಪ್ರಸ್ತಾಪಿಸಲಾಗಿದೆ. ವ್ಯವಸ್ಥೆಯ ಮೇಲೆ ಕಡಿಮೆಯಾಗುತ್ತಿರುವ ಜನ ಸಾಮಾನ್ಯರ ವಿಶ್ವಾಸ, ಅಲ್ಪಸಂಖ್ಯಾತರ ಮೇಲಿನ ದಾಳಿಗಳು, ಮಾನವ ಹಕ್ಕುಗಳ ಉಲ್ಲಂಘನೆ, ಕುಸಿಯುತ್ತಿರುವ ಪ್ರೆಸ್ ಫ್ರಿಡಂ ಇಂಡೆಕ್ಸ್ ನ ನಮ್ಮ ಸ್ಥಾನ, ಒಕ್ಕೂಟ ವ್ಯವಸ್ಥೆಯ ಮೇಲಿನ ಹೆಚ್ಚುತ್ತಿರುವ ಒತ್ತಡ, ರಾಜಕೀಯದಲ್ಲಿ ಧರ್ಮದ ಮಿಶ್ರಣ, ಆರ್ಥಿಕ ಅಸಮಾನತೆ ಮತ್ತು ನಿರುದ್ಯೋಗ, ಎಡವುತ್ತಿರುವ ವಿದೇಶಾಂಗ ನೀತಿ, - ಹೀಗೆ ಸುಧಾರಿಸಬೇಕಾದ ಅಂಶಗಳ ದೊಡ್ಡ ಪಟ್ಟಿ ಲೇಖನದಲ್ಲಿದೆ.

ಮುಖ್ಯವಾಹಿನಿಯ ಮಾಧ್ಯಮ ಸಂಸ್ಥೆಗಳು ಮೂಲಭೂತ ವಾಸ್ತವಗಳನ್ನು ತಪ್ಪಾಗಿ ನಿರೂಪಿಸುತ್ತಿರುವುದು ವರ್ತಮಾನದ ದೊಡ್ಡ ಸಮಸ್ಯೆಯಾಗಿದೆ. ವಿಶ್ವಾಸಾರ್ಹ ಮತ್ತು ವಸ್ತುನಿಷ್ಟ ಮಾಹಿತಿಯನ್ನು ಗುರುತಿಸಿ ಜಾಗರೂಕ ನಾಗರೀಕರಾಗಿರುವುದು ಇಂದಿನ ಸತ್ಯೋತ್ತರ ಕಾಲದ ಸವಾಲು ಹಾಗೂ ಅಗತ್ಯತೆ.


No comments :