ಇತ್ತೀಚೆಗೆ ಪ್ರಕಟವಾದ ಕನ್ನಡದ ಲೇಖಕಿ ಸಂಧ್ಯಾರಾಣಿಯವರ ಬಿಡಿಬರಹಗಳ ಸಂಗ್ರಹ "ಕದಡಿದ ಕೊಳವು ತಿಳಿಯಾಗಿರಲು..." ಪುಸ್ತಕವನ್ನು ಓದುತ್ತಿದ್ದೆ. ಅದರಲ್ಲಿನ ಒಂದು ಬರಹ "ಅಮ್ಮ ಕಲಿಸಿದ ಫೆಮಿನಿಸಮ್". ಅದರಲ್ಲಿ ಅವರು ಹೀಗೆ ಬರೆಯುತ್ತಾರೆ- "ಹೆಣ್ಣು ಮಕ್ಕಳು ಮತ್ತು ಅಮ್ಮನ ನಡುವಿನ ಸಂಬಂಧ ವಿಶಿಷ್ಟವಾದದ್ದು. ಅಮ್ಮನ ಅಧಿಕಾರವನ್ನು ಒಮ್ಮೆ ಒಪ್ಪಿಕೊಳ್ಳುತ್ತಾ, ಒಮ್ಮೆ ಎದುರಿಸುತ್ತಾ, ಆಗಾಗ ಸಂಧಾನ ಮಾಡಿಕೊಳ್ಳುತ್ತಾ ಹೆಣ್ಣುಮಕ್ಕಳು ಬೆಳೆಯುತ್ತಾರೆ..." . ತನ್ನ ಸ್ವಂತತೆಯನ್ನು ಬಿಟ್ಟು ಕೊಡದೇ ಬದುಕಿದ ತಮ್ಮ ಅಮ್ಮನ ಕುರಿತು ಬರಹದಲ್ಲಿ ಆರ್ದ್ರವಾಗಿ ಹಂಚಿಕೊಂಡಿರುವ ಲೇಖಕಿ ಕೃತಿಯನ್ನು ಸಹ ಅವರಿಗೇ ಅರ್ಪಿಸಿದ್ದಾರೆ.
ಹಲವಾರು ಕತೆ ಕಾದಂಬರಿಗಳಲ್ಲಿ ಅಮ್ಮ-ಮಗಳ ಸಂಬಂಧದ ಕುರಿತು ಅಭಿವ್ಯಕ್ತಿಯನ್ನು ನೋಡಿದ್ದೇನೆ. ಅದರಲ್ಲೂ ವಿಶೇಷವಾಗಿ ಮಹಿಳೆಯರ ಬರವಣಿಗೆಯಲ್ಲಿ ಇದು ವ್ಯಕ್ತವಾಗಿರುವುದನ್ನು ಹೆಚ್ಚಾಗಿ ಕಂಡಿದ್ದೇನೆ.
"ಅಮ್ಮ ಕಲಿಸಿದ ಫೆಮಿನಿಸಂ" ಬರಹ ಓದುವಾಗ ಈಚೆಗೆ ಓದಿದ ಎರಡು ಕೃತಿಗಳಲ್ಲಿ ತಾಯಿ- ಮಗಳ ಸಂಬಂಧವು ಇನ್ನೊಂದು ಬಗೆಯಲ್ಲಿ ನಿರೂಪಿತವಾಗಿದ್ದುದು ನೆನಪಾಯಿತು. ಅದರ ಬಗ್ಗೆ ಬರೆಯಬೇಕೆನಿಸಿತು.
"ಮದರ್ ಮೇರಿ ಕಮ್ಸ್ ಟು ಮಿ" ಎಂಬುದು ಅರುಂಧತಿ ರಾಯ್ ಅವರ ೨೦೨೫ ರ ಆತ್ಮಚರಿತ್ರೆಯಾಗಿದ್ದು, ಇದು 1997 ರ ಬುಕರ್ ಪ್ರಶಸ್ತಿ ಪಡೆದ ಈ ಲೇಖಕಿ ಮತ್ತು ಅವರ ತಾಯಿ ಮೇರಿ ರಾಯ್ ಅವರಿಬ್ಬರ ಪ್ರಕ್ಷುಬ್ಧ ಬಾಂಧವ್ಯವನ್ನು ವಿವರಿಸುತ್ತದೆ.
"ಮೂನ್ ಟೈಗರ್" ಎಂಬ ಕಾದಂಬರಿಯು ಪೆನೆಲೋಪ್ ಲೈವ್ಲಿ ಅವರ ೧೯೮೭ ರ ಬುಕರ್ ಪ್ರಶಸ್ತಿ ವಿಜೇತ ಕೃತಿ. ಈ ಕಾದಂಬರಿಯಲ್ಲಿ ಇತಿಹಾಸಕಾರಳಾದ ಕ್ಲಾಡಿಯಾ ಹ್ಯಾಂಪ್ಟನ್ ಮತ್ತು ಅವಳ ಮಗಳು ಲಿಸಾ ಎಂಬ ಪಾತ್ರಗಳಿವೆ.
ಎರಡೂ ಕೃತಿಗಳು ತಾಯಿ ಮತ್ತು ಮಗಳ ಸಂಬಂಧದ ಭಾವನಾತ್ಮಕ ತೀವ್ರತೆ, ಪರಸ್ಪರರ ಮುಖಾಮುಖಿಗಳು ಮತ್ತು ಸಂಧಾನಗಳು, ಕಡೆಯಲ್ಲಿನ ವಿಷಾದ ಇವನ್ನೆಲ್ಲ ಮನಮುಟ್ಟುವಂತೆ ನಿರೂಪಿಸುತ್ತವೆ.
ಅರುಂಧತಿ ಅವರು ಮೇರಿಯವರೊಂದಿಗಿನ ತಮ್ಮ ಸಂಬಂಧವನ್ನು "ಎರಡು ಉಗ್ರ ಶಕ್ತಿಗಳ ಘರ್ಷಣೆ" ಯಂತೆ ಚಿತ್ರಿಸುತ್ತಾರೆ. ಬಡತನ ಮತ್ತು ಕೌಟುಂಬಿಕ ಕಲಹಗಳ ಕಾರಣದಿಂದ ಮೇರಿಯವರು ಸ್ವತಃ ಅನುಭವಿಸುವ ಆಘಾತ ಮತ್ತು ಅದರಿಂದ ಅವರು ಮಗಳಾದ ತಮಗೆ ನೀಡುವ ಹಿಂಸೆಯ ಬಗ್ಗೆ ಬರೆದಿದ್ದಾರೆ. ಹೀಗಿದ್ದರೂ ಸಹ "ನೀನು ಏನನ್ನು ಬೇಕಾದರೂ ಸಾಧಿಸಬಹುದು" ಎಂಬಂತಹ ಆತ್ಮವಿಶ್ವಾಸವನ್ನು ತಾಯಿ ತಮಗೆ ನೀಡಿದ್ದನ್ನು ಅರುಂಧತಿಯವರು ನೆನೆಯದೆ ಇರುವುದಿಲ್ಲ.
ಮೂನ್ ಟೈಗರ್ ನಲ್ಲಿ, ಇತಿಹಾಸಕಾರ ವೃತ್ತಿಯ ಕ್ಲಾಡಿಯಾ ತನ್ನದೇ ಮಗಳು ಲೀಸಾಳನ್ನು ತನ್ನ ಬುದ್ಧಿಶಕ್ತಿಗೆ ಸಾಟಿಯೇ ಅಲ್ಲದ "ಮಂದ ಬುದ್ಧಿಯ ಮಗು" ಎಂದು ಕಾಣುತ್ತಾಳೆ. ಮಗುವಿನ ಪಾಲನೆಯನ್ನು ಮಗುವಿನ ಅಜ್ಜಿಯರಿಗೆ ವಹಿಸುತ್ತಾಳೆ. ಆದರೂ ಆ ಮಗಳು ಜಗವನ್ನು ನೋಡುವ ದೃಷ್ಟಿಕೋನ ಮಾತ್ರ ತನ್ನದೇ ಆಗಿರುವಂತೆ ಮಾಡಲು ಮಧ್ಯಪ್ರವೇಶಿಸುತ್ತಾಳೆ. ಹೀಗೆ ಮಾಡುವುದರ ಮೂಲಕ ಲೀಸಾಳಲ್ಲಿ ಆಜೀವ ಪರಕೀಯತೆಯನ್ನು ಬೆಳೆಸುತ್ತಾಳೆ.
ಮೇರಿ ರಾಯ್ ಸಂಪೂರ್ಣ ಸ್ವಾಯತ್ತವಾಗಿ ಬದುಕುವುದನ್ನು ಆಯ್ದುಕೊಳ್ಳುತ್ತಾರೆ. ವಿಚ್ಛೇದನದ ನಂತರ ಶಾಲೆಯನ್ನು ಸ್ಥಾಪಿಸುತ್ತಾರೆ. ಮತ್ತು ಹೆಣ್ಣುಮಕ್ಕಳಿಗೆ ಉತ್ತರಾಧಿಕಾರದ ಹಕ್ಕುಗಳನ್ನು ಪಡೆಯಲು ಸುಪ್ರೀಂ ಕೋರ್ಟ್ ವರೆಗೂ ಕೇಸು ನಡೆಸಿ ಯಶಸ್ವಿಯಾಗುತ್ತಾರೆ. ಆದರೆ ತಾಯಿ ಮತ್ತು ಮಗಳು ಏಳು ವರ್ಷಗಳ ಕಾಲ ದೂರವೇ ಉಳಿಯುತ್ತಾರೆ.
ಕ್ಲಾಡಿಯಾ ಯುದ್ಧ ವರದಿಗಾರ್ತಿಯಾಗಿ ತಾಯ್ತನಕ್ಕಿಂತ ತನ್ನ ಸ್ವಂತದ ವೃತ್ತಿಜೀವನಕ್ಕೆ ಆದ್ಯತೆ ನೀಡುತ್ತಾಳೆ. ಅದು ಲೀಸಾಳ ಚೈತನ್ಯವನ್ನೇ ನಂದಿಸುತ್ತದೆ.
ತಾಯಿಯಿಂದಾದ ಎಲ್ಲ ಗಾಯಗಳ ನೋವುಗಳ ಹೊರತಾಗಿಯೂ ಆರುಂಧತಿಯವರು ತಮ್ಮ ಊರಿಗೆ ಹಿಂದಿರುಗಿ ಮೇರಿಯವರ ಚಿತಾಭಸ್ಮವನ್ನು ಗೌರವಿಸುವಲ್ಲಿ "ಮದರ್ ಮೇರಿ ಕಮ್ಸ್ ಟು ಮಿ " ಕೊನೆಗೊಳ್ಳುತ್ತದೆ.
ಇನ್ನು " ಮೂನ್ ಟೈಗರ್' ನಲ್ಲಿ ತಾನು ಕ್ಯಾನ್ಸರ್ ನಿಂದ ಬಳಲುತ್ತಿದ್ದಾಗ ಕ್ಲಾಡಿಯಾಳು ಲೀಸಾಳಲ್ಲಿ ಕ್ಷಮೆಯಾಚಿಸುವುದರೊಂದಿಗೆ ತನ್ನ ನಿರ್ಲಕ್ಷ್ಯದ ಬಗ್ಗೆ ವಿಷಾದವನ್ನು ವ್ಯಕ್ತ ಪಡಿಸಿದಂತಾಗುತ್ತದೆ. ಎರಡೂ ನಿರೂಪಣೆಗಳು ವಿಷತ್ವದ ನಡುವೆ ಪ್ರೀತಿಯ ಸಹಿಷ್ಣುತೆಯನ್ನು ಬಹಿರಂಗಪಡಿಸುತ್ತವೆ. ಮಗಳು ತನ್ನ ವ್ಯಕ್ತಿತ್ವದ ಗುರುತನ್ನು ರೂಪಿಸಿಕೊಳ್ಳುವ ವಿಷಯದಲ್ಲಿ ಮತ್ತು ಭಾವನಾತ್ಮಕ ಸಮತೋಲನವನ್ನು ಹೊಂದುವಲ್ಲಿ ತಾಯಿ ಎಷ್ಟು ಪ್ರಮುಖ ಪ್ರಭಾವ ಹೊಂದಿರುತ್ತಾಳೆ ಎಂಬುದನ್ನು ಇವೆರಡೂ ಕೃತಿಗಳಲ್ಲಿ ಕಾಣಬಹುದು.
No comments :
Post a Comment