ಈಚೆಗೆ ಭಾರತದಲ್ಲಿ ಫುಟ್ ಬಾಲ್ ತಾರೆ ಲಯೊನೆಲ್ ಮೆಸ್ಸಿ ಕೈಗೊಂಡ ಪ್ರವಾಸ ನಮ್ಮ ದೇಶದಲ್ಲಿ ಕ್ರೀಡೆ ಇರುವ ಸ್ಥಿತಿಯ ಮತ್ತು ಜನಮನದಲ್ಲಿ ಕ್ರೀಡೆಗಿರುವ ಸ್ಥಾನವನ್ನು ತೋರುವಂತಿತ್ತು. ಕ್ರೀಡೆ ಉತ್ಸಾಹ ಮತ್ತು ಏಕತೆಯನ್ನು ಉತ್ತೇಜಿಸುತ್ತದೆ ಮತ್ತು ಪ್ರತಿಯೊಂದು ದೇಶ ಹಾಗೂ ಸಮಾಜವು ಪ್ರೋತ್ಸಾಹಿಸಬೇಕಾದ ಚಟುವಟಿಕೆಯಾಗಿದೆ. ಕ್ರೀಡೆಯಲ್ಲಿ ಅದ್ಭುತ ಸಾಧನೆ ಮಾಡುವ ಕ್ರೀಡಾ ಪಟುಗಳ ಬಗೆಗೆ ಎಲ್ಲ ದೇಶಗಳಲ್ಲೂ ಅಭಿಮಾನಿಗಳು ಇರುವುದು ಸಹಜವೇ ಆದರೂ ಬರಿಯ ಅಭಿಮಾನ ಆರಾಧನೆಯಷ್ಟಕ್ಕೇ ಕ್ರೀಡೆ ಸೀಮಿತವಲ್ಲ. ಭಾರತದಲ್ಲಂತೂ ಕ್ರಿಕೆಟ್ ತಾರೆಯರ ಆರಾಧನೆ ಒಂದು ಮಟ್ಟದ ವ್ಯಾಧಿಯ ಹಂತಕ್ಕೆ ಹೋಗುತ್ತಿದೆ.
ವೈಯಕ್ತಿಕವಾಗಿ ಫುಟ್ ಬಾಲ್ ಅಭಿಮಾನಿಯಾಗಿದ್ದು, ನನಗೆ ಮೆಸ್ಸಿಯ ಅದ್ಭುತ ಪ್ರತಿಭೆ ಮತ್ತು ಸಾಧನೆಗಳ ಅರಿವಿದೆ. ಎಂಬತ್ತರ ದಶಕದಿಂದಲೂ ಫುಟ್ ಬಾಲ್ ವರ್ಲ್ಡ್ ಕಪ್ ನ್ನು ಆಸಕ್ತಿಯಿಂದ ಗಮನಿಸುತ್ತಾ ಬಂದಿದ್ದೇನೆ. 2018ರ ವರ್ಲ್ಡ್ ಕಪ್ ನಲ್ಲಿ ಮೆಸ್ಸಿಯ ಉತ್ತಮ ಪ್ರದರ್ಶನದ ನಂತರವೂ ಅರ್ಜೆಂಟಿನಾ ಅಂತಿಮ ಹಂತದಲ್ಲಿ ಸೋತಿದ್ದು , ಮೆಸ್ಸಿ ಅತ್ತಿದ್ದು, ಮತ್ತೆ 2022ರಲ್ಲಿ ಅಮೋಘ ಪ್ರದರ್ಶನ ನೀಡಿ ಅರ್ಜೆಂಟಿನಾ ಕಪ್ ಗೆಲ್ಲುವಲ್ಲಿ ಪ್ರಮುಖ ರೂವಾರಿಯಾದದ್ದು ಇವೆಲ್ಲವೂ ನನಗೆ ಗೊತ್ತಿರುವ ಸಂಗತಿಗಳೇ. ಆದರೂ . . . ಮೆಸ್ಸಿಯ ಭಾರತ ಪ್ರವಾಸ ಮತ್ತು ಆ ಸಂದರ್ಭದಲ್ಲಿ ಅವನ ಅಭಿಮಾನಿಗಳ ಉನ್ಮಾದ ಅತಿರೇಕಗಳು ಇಷ್ಟವಾಗಲಿಲ್ಲ.
ಈ ಹಿನ್ನೆಲೆಯಲ್ಲಿ ಕ್ರೀಡಾ ಪತ್ರಕರ್ತರೊಬ್ಬರ ಲೇಖನ ಗಮನಿಸಬೇಕಾದದ್ದು. ESPN ನಲ್ಲಿ ಅನಿರುದ್ಧ್ ಮೆನನ್ ಲೇಖನ-
Indian football's great irony: Millions for Messi, none for the beautiful game
ಫುಟ್ ಬಾಲ್ ಅಭಿಮಾನ ಮುಖ್ಯವಾಗಿ ಕೇರಳ ಮತ್ತು ಬಂಗಾಳಗಳಲ್ಲಿ ಅಧಿಕವಾಗಿರುವುದು ನಿಜವಾದರೂ ಈಚಿನ ವರ್ಷಗಳಲ್ಲಿ ಭಾರತದ ಇತರ ರಾಜ್ಯಗಳಲ್ಲೂ ಈ ಕ್ರೀಡೆ ಜನಪ್ರಿಯವಾಗುತ್ತಿದೆ. ಕ್ರೀಡೆ ಕೇವಲ ವೀಕ್ಷಣೆಗೆ ಅಥವಾ ಮನರಂಜನೆಗೆ ಸೀಮಿತವಾಗುವುದು ಸರಿಯಲ್ಲ. ಸರ್ಕಾರಗಳು ಮೂಲಸೌಕರ್ಯವನ್ನು ನಿರ್ಮಿಸುವುದರ ಮೂಲಕ ಹೆಚ್ಚು ಯುವಜನರು ಕ್ರೀಡೆಯಲ್ಲಿ ಪಾಲ್ಗೊಳ್ಳುವುದನ್ನು ಸಾಧ್ಯವಾಗಿಸಿದರೆ ಹೊಸ ಕ್ರೀಡಾ ಸಂಸ್ಕೃತಿಯನ್ನು ಬೆಳೆಸಲು ಸಹಕಾರಿಯಾಗುತ್ತದೆ. ಒಂದೆಡೆ ತಳಮಟ್ಟದ ಸೌಲಭ್ಯಗಳೇ ಇಲ್ಲದೆ ಬಳಲುತ್ತಿರುವ ಕ್ರೀಡೆಗಳು, ಇನ್ನೊಂದೆಡೆ ಅಂತಾರಾಷ್ಟ್ರೀಯ ಕ್ರೀಡಾ ತಾರೆಯ ಸಂಕ್ಷಿಪ್ತ ಪ್ರದರ್ಶನಕ್ಕೆ 120-180 ಕೋಟಿ ರೂಪಾಯಿಗಳ ಪ್ರಾಯೋಜಕತ್ವ. ಇದು ನಿಜಕ್ಕೂ ವ್ಯಂಗ್ಯ. ಫುಟ್ ಬಾಲ್ ನ ISL ಲೀಗ್ ( ವಿವಿಧ ಭಾರತೀಯ ಫುಟ್ ಬಾಲ್ ತಂಡಗಳು ಭಾಗವಹಿಸುವ ಲೀಗ್) ಪ್ರಾಯೋಜಕತ್ವವಿಲ್ಲದೆ ಆರಂಭದ ದಿನಾಂಕವೂ ಪೋಷಣೆಯಾಗದೆ ಸೊರಗುತ್ತಿದ್ದರೆ ಇತ್ತ ಮೆಸ್ಸಿಯ 15 ನಿಮಿಷದ ದರ್ಶನಕ್ಕಾಗಿ ಮುಗಿಬೀಳುವ ಜನ ಮತ್ತು ಅದನ್ನು ಆಯೋಜಿಸಿ ಹಣ ಮಾಡುವ ಸಂಸ್ಥೆಗಳು.
ಕ್ರೀಡಾ ತಾರೆಗಳಲ್ಲೂ ವಿವಿಧ ಮಾದರಿಗಳಿವೆ. ಎಪ್ಪತ್ತು ಎಂಬತ್ತರ ದಶಕಗಳ ಬ್ರೆಜಿಲ್ ನ ಫುಟ್‌ಬಾಲ್ ತಾರೆ ಸಾಕ್ರೆಟೀಸ್ ನಂತೆ ಸಾಮಾಜಿಕ ಕಾಳಜಿಯಿರುವ ಮತ್ತು ಜನಹಿತಕ್ಕಾಗಿ ತಮ್ಮ ಜನಪ್ರಿಯತೆಯನ್ನೂ ಒರೆಗಿಡುವ ಮಾದರಿ ಅವುಗಳಲ್ಲೊಂದು. ವೃತ್ತಿಯಲ್ಲಿ ವೈದ್ಯನಾಗಿದ್ದ ಸಾಕ್ರೆಟೀಸ್ ಸರ್ವಾಧಿಕಾರದ ವಿರುದ್ಧ ಮತ್ತು ಮುಕ್ತ ಚುನಾವಣೆಗಾಗಿ ರಾಜಕೀಯವಾಗಿ ಕೂಡ ತೊಡಗಿಕೊಳ್ಳಲು ಹಿಂಜರಿಯಲಿಲ್ಲ . ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಮುನ್ನಡೆಗಾಗಿ ಫುಟ್‌ಬಾಲ್ ನ ವೇದಿಕೆಯನ್ನು ಬಳಸಿಕೊಂಡ ನಿಜ ಜೀವನದ ಹೀರೋ ಈತ. ತಮ್ಮ ಜನಪ್ರಿಯತೆಯ ಮತ್ತು ಆರ್ಥಿಕ ಅನುಕೂಲತೆಯ ರಕ್ಷಣೆಗಾಗಿ ರಾಜಕೀಯವಾಗಿ ರಿಸ್ಕ್ ತೆಗೆದುಕೊಳ್ಳದೆ ತಟಸ್ಥವಾಗಿರುವ ಅಥವಾ ಜನತಂತ್ರ ವಿರೋಧಿ ಶಕ್ತಿಗಳೊಡನೆಯೂ ಶಾಮೀಲಾಗುವ ಕ್ರೀಡಾ ತಾರೆಯರಿಗೆ ಹೋಲಿಸಿದರೆ ಸಾಕ್ರೆಟೀಸ್ ಹಿರಿಮೆ ಅರ್ಥವಾಗುತ್ತದೆ. ಅಪ್ರತಿಮ ಆಟಗಾರನಾಗಿದ್ದ ಸಾಕ್ರೆಟೀಸ್ ಬ್ರೆಜಿಲ್ ಅನ್ನು ತೊರೆದು ಹೋಗುವ ಬೆದರಿಕೆ ಸಹ ಹಾಕಿದ್ದುಂಟು.
ಸಮಾಜದ ಭಾಗವಾಗಿರುವ ಕ್ರೀಡಾ ಪಟುಗಳು ಅದೇ ಸಮಾಜದ ಸ್ವಾಸ್ಥ್ಯ ಕೆಡುತ್ತಿದ್ದರೆ ಧ್ವನಿ ಎತ್ತಬೇಕು. ಅಂತಹ ಕ್ರೀಡಾ ತಾರೆಗಳು ನಮಗೆ ಬೇಕು. ಅಂತಹವರು ಮೆಸ್ಸಿಯಂತೆ ಹಣಕ್ಕಾಗಿ ಪ್ರದರ್ಶನದ ವಸ್ತುಗಳಾಗಲು ಒಪ್ಪುವುದು ಅನುಮಾನ.
No comments :
Post a Comment